ಮೇ ೨೭ ರಾತ್ರೆ ಹನ್ನೊಂದಕ್ಕೆ ಸೀಮಂತಿನಿ ನಿರಂಜನ ತೀರಿಕೊಂಡರೆಂಬ ಸುದ್ದಿ ಎಸ್.ಎಮ್.ಎಸ್ ಮೂಲಕ ಬಂತು. ಮುಂಜಾನೆ ದಸ್ತಕಾರ್ ಆಂಧ್ರಾದಿಂದ ಫೋನು. ಈ ಸುದ್ದಿಯು ದುಃಖ ಒಂದು ವಿಚಿತ್ರರೀತಿಯದ್ದು. ಎರಡು ವರುಷಗಳ ಕೆಳಗೆ ನನಗೆ ಸೀಮಂತಿನಿ ಒಂದು ಹೆಸರು ಮಾತ್ರ. ಅನುಪಮಾ-ನಿರಂಜನರ ಮಗಳೆಂದೂ, ನಿರಂಜನರ ಸಮಗ್ರ ಕೃತಿಗಳನ್ನು ಐಬಿಎಚ್‍ನವರು ತರುತ್ತಿದ್ದಾಗ ಅವರ ಕೃತಿಗಳ ಹಕ್ಕುಗಳು ಆಕೆಯ ಬಳಿಯಿದೆ ಎಂದೂ ನಾನು ಕಂಡಿದ್ದೆ. ಆಕೆ ಸಮಾಜಶಾಸ್ತ್ರದಲ್ಲಿ ಉನ್ನತ ಪದವಿ ಪಡೆದಿದ್ದರರು. ಇ.ಪಿ.ಡಬ್ಲುವಿನಲ್ಲಿ ಯಾವಾಗಲಾದರೂ ಬರೆಯುತ್ತಿದ್ದ ಆಕೆಯ ಉತ್ತಮ ಲೇಖನಗಳನ್ನು ನಾನು ನೋಡಿದ್ದೆ. ಆಕೆಯ ಸಹೋದರಿ ತೇಜಸ್ವಿನಿಯ ಜೊತೆಗೂಡಿ "ಸ್ತ್ರೀವಾದಿ ಸಹಿತ್ಯ ವಿಮರ್ಶೆ" ಅನ್ನುವ ಪುಸ್ತಕವನ್ನೂ ಆಕೆ ಸಂಪಾದಿಸಿದ್ದರು. ಎಂದಿನಂತೆ ಅದನ್ನು ರಾಜು ಮೇಷ್ಟರು ಪ್ರಕಟಿಸಿದ್ದರು.
ಸೀಮಂತಿನಿಯ ಪರಿಚಯ ಆದದ್ದು ಆಕೆಯದೇ ಒಂದು ಪತ್ರದಿಂದ. ಹೈದರಾಬಾದಿನಲ್ಲಿ ಆಕೆ ಕೆಲಸ ಮಾಡುತ್ತಿದ್ದ ದಸ್ತಕಾರ್ ಆಂಧ್ರಾದ ಒಂದು ಸೆಮಿನಾರಿಗೆ ನನ್ನನ್ನು ಆಹ್ವಾನಿಸಿದ್ದರು. ಸಹಕಾರಿಕ್ಷೇತ್ರದಲ್ಲಿಯ ನನ್ನ ಕೆಲ ಲೇಖನಗಳನ್ನು ಆಕೆ ನೋಡಿದ್ದರಂತೆ. ಭೇಟಿಯಾದಾಗ ಕನ್ನಡದಲ್ಲಿ ಕಥೆ ಬರೆಯುವ ಶ್ರೀರಾಮ್ ನೀವೇನಾ ಅಂತ ಕೇಳಿದ್ದರು. ಹೀಗೆ ಕನ್ನಡದವರೇ ಆದ, ಸಾಹಿತ್ಯದ ಕೊಂಡಿಗಳಿದ್ದ ನಾವುಗಳು ಬೇರೆಯದೇ ನಮ್ಮ ನಮ್ಮ ವೃತ್ತಿಯ ಸಂದರ್ಭದಲ್ಲಿ ಭೇಟಿಯಾಗಿದ್ದೆವು.
ನಂತರ ದಸ್ತಕಾರ್ ಸಂಸ್ಥೆಗೆ ನಾನು ಅನೇಕ ಬಾರಿ ಭೇಟಿನೀಡಿದೆ. ಮೊದಲಬಾರಿಗೆ ಅಲ್ಲಿಗೆ ಕರೆಸಿಕೊಂಡಾಗ ಹೈದರಾಬಾದಿನಲ್ಲಿ ಯಾವ ಹೊಟೇಲಿನಲ್ಲೂ ರೂಮಿಲ್ಲ. ಮನೆಗೇ ಬನ್ನಿ ಅಂದಿದ್ದರು. ಸಂಜೆ ಊಟ ಮಾಡಿ ಆಕೆಯ ಗಂಡ ಶಶೀಜ್ ಹೆಗಡೆಯ ಜೊತೆ ಸುಮಾರಷ್ಟು ಕಾಲ ಹರಟೆ ಕೊಚ್ಚಿದ್ದು ನೆನಪಿದೆ. ಸೀಮಂತಿನಿಗೆ ಕ್ಯಾನ್ಸರ್ ಇತ್ತೆಂದು ನನಗೆ ಬಹಳ ಕಾಲ ಗೊತ್ತೇ ಇರಲಿಲ್ಲ. ಒಮ್ಮೆ ನನ್ನನ್ನು ಹೋಟೇಲಿನ ಬಳಿ ಬಿಡುತ್ತಾ ಪಕ್ಕದಲ್ಲಿದ್ದ ಯಶೋಧಾ ಆಸ್ಪತ್ರೆಯನ್ನು ತೋರಿಸಿ "ಇಲ್ಲೇ ನನ್ನ ಟ್ರೀಟ್‍ಮೆಂಟ್ ಆಗಿತ್ತು" ಅಂದಿದ್ದರು. ಆ ನಂತರ ಇತರರನ್ನು ಕೇಳಿದಾಗ ನನಗೆ ತಿಳಿದದ್ದು ಆಕೆಗೆ ಕ್ಯಾನ್ಸರ್ ಇತ್ತಲ್ಲದೇ ಒಂದು ಬಾರಿ ಟ್ರೀಟ್‍ಮೆಂಟಾಗಿ, ಎರಡನೆಯ ಬಾರಿ ರಿಲ್ಯಾಪ್ಸ್ ಆಗಿತ್ತು ಎನ್ನುವುದು.
ಗುಂಗುರು ಕೂದಲಿನ ಸೀಮಂತಿನಿ ಎಂದೂ ಬೇಸರದಿಂದ ಇದ್ದದ್ದು ನಾನು ಕಂಡಿಲ್ಲ. ಆಗಾಗ ಫೋನ್ ಮಾಡಿ "ಹೇಗಿದ್ದೀರಿ?" ಎಂದು ಕೇಳಿದರೆ "ನೋವು, ಆದರೂ ಕೆಲಸಕ್ಕೆ ಹೋಗಿ ಬರುತ್ತಿದ್ದೀನಿ.. ಪರವಾಗಿಲ್ಲ.." ಎಂದೇ ಹೇಳುತ್ತಿದ್ದರು. ಹೊಸ ಓದಿನ ಬಗ್ಗೆ ಯಾವಾಗಲೂ ಆಸಕ್ತರಾಗಿರುತ್ತಿದ್ದರು. ರಾಣಿ ಶಿವಶಂಕರ ಶರ್ಮಾರ "ದ ಲಾಸ್ಟ್ ಬ್ರಾಹ್ಮಿನ್" ಓದಲು ನನಗೆ ಆಕೆಯೇ ಸಲಹೆ ನೀಡಿದ್ದರು. ದೇಶಕಾಲದ ಬಗ್ಗೆ ಮಾತನಾಡಿದಾಗ ಅದಕ್ಕೆ ಚಂದಾ ಕಟ್ಟಲು ಆಸಕ್ತಿ ತೋರಿ ಪತ್ರಿಕೆಯನ್ನು ತರಿಸಿಕೊಂಡಿದ್ದರು. ಒಂದು ರೀತಿಯಲ್ಲಿ ಆರಕ್ಕೇಳದೇ ಮೂರಕ್ಕಿಳಿಯದೇ ಮೌನವಾಗಿ ಇದ್ದುಬಿಡುತ್ತಿದ್ದರು. ದಸ್ತಕಾರ್ ಸಂಸ್ಥೆಯ ಆಫೀಸಿನಲ್ಲಿ ನೆಲದ ಮೇಲೆ ನ್ಯೂಸ್ ಪೇಪರ್ ಹಾಸಿ ಅವರುಗಳೆಲ್ಲಾ ತಂದ ಡಬ್ಬಿಯಿಂದ ಊಟ ಹಂಚಿ ಸಹನಾಭುನಕ್ತು ಮಾಡುತ್ತಿದ್ದದ್ದು ಮರೆಯಲಾಗದ ಮಾತು.
ಇಂದು ಆಕೆ ಇಲ್ಲವೆಂದರೆ ಯಾಕೋ ಹೈದರಾಬಾದಿನ ಒಂದು ಭಾಗ ಇಲ್ಲವಾದಂತಿದೆ. ಸೀಮಂತಿನಿ ಹೆಚ್ಚು ಬರೆಯಲಿಲ್ಲ. ಆದರೆ ಅರ್ಥಪೂರ್ಣವಾದದ್ದನ್ನು ಬರೆದಿದ್ದರು. ಎಂದೂ ನಗುನಗುತ್ತಿದ್ದ ಆಕೆ ನೋವಿನ ನಡುವೆಯೇ ಇಲ್ಲವಾದರು. ನನಗಿಂತ ಕಿರಿಯರಾದ ಆಕೆ ಪುಟ್ಟ ಇಳಾಳನ್ನೂ, ಯೂನಿವರ್ಸಿಟಿಯ ಮೇಷ್ಟರು ಶಶೀಜರನ್ನು ಬಿಟ್ಟು ಹೋಗಿದ್ದಾರೆ. ಆದರೆ ಆಕೆ ನಮ್ಮ ನಡುವೆ ಇದ್ದಾರೆ ಅಂತಲೇ ನನಗನ್ನಿಸುತ್ತದೆ. ಹೆಚ್ಚು ಮಾತಾಡದೇ, ಧ್ವನಿಯೇರಿಸದೇ ಇಲ್ಲೇ ಎಲ್ಲೋ ಅಡಗಿದ್ದಾರೆ... ನೋವಿನಿಂದ ಮುಕ್ತರಾಗಿದ್ದಾರೆ...

Labels: ಶ್ರೀರಾಮ್, ಸೀಮಂತಿನಿ ನಿರಂಜನ, ಹೈದರಾಬಾರು
No comments:
Post a Comment