Saturday, July 28, 2012

ಚಿತ್ತಾಲರ ಕಥಾಪಾತ್ರವನ್ನಾಗಿಸುವ ಭೇಟಿಯ ಕಥೆಗಳು



ಯಶವಂತ ಚಿತ್ತಾಲರ ಕಥೆ ಕಾದಂಬರಿಗಳಲ್ಲಿ ಭೇಟಿಯ ನಿಗೂಢತೆಯ ಒಂದು ಅಂಶ ಯಾವಾಗಲೂ ಇರುತ್ತದೆ. ಯಾರೋ ಭೇಟಿಯಾಗಲು ಬರುತ್ತೇವೆ ಎಂದು ಹೇಳುವುದು ಅದಕ್ಕಾಗಿ ಕಾಯುವ ಕಥಾಪಾತ್ರಗಳು, ಭೇಟಿಯ ನಿಗೂಢತೆ, ಭೇಟಿಯಿಂದ ಉದ್ಭವವಾಗುವ ಪಿತೂರಿಗಳು ಹೀಗೆ. ಇದರ ಜೊತೆಗೆ ಆಗುವ-ಆಗದ-ಆಗಬಹುದಾಗಿದ್ದ ಅನೇಕ ಭೇಟಿಯ ಪ್ರಸಂಗಗಳೂ ಬರುತ್ತವೆ. ಒಂದು ಕಥೆಯಲ್ಲಿ ಕ್ಷಣಮಾತ್ರಕ್ಕೆ ಬರುವ ಪಾತ್ರಗಳು ಮತ್ತೊಂದು ಕಥೆಯಲ್ಲಿ ಪ್ರಮುಖಪಾತ್ರವನ್ನು ವಹಿಸಿಬಿಡುತ್ತವೆ. ಹೀಗೆ ಅವರ ಸಾಹಿತ್ಯದಲ್ಲಿ ಒಂದಕ್ಕೊಂದು ಕೊಂಡಿಹಾಕಿಕೊಂಡ ಕಥೆಗಳು ಅನೇಕ ನಮಗೆ ದೊರೆಯುತ್ತವೆ. 

ಹೀಗೆ ನಡೆಯುವ ಭೇಟಿಗಳಲ್ಲಿ ನಾನೂ ಚಿತ್ತಾಲರ ಕಥೆಯ ಒಂದು ಪಾತ್ರವಾಗಿಬಿಟ್ಟಿದ್ದೇನೇನೋ ಎಂದು ಒಮ್ಮೊಮ್ಮೆ ಅನುಮಾನ ಬರುವುದುಂಟು. ಎ.ಕೆ.ರಾಮಾನುಜಂ ಅವರ ಕವಿತೆಯೊಂದರಲ್ಲಿ ಬರುವ ಜಿಜ್ಞಾಸೆಯಂತೆ ನಾನು ಬೇರೊಬ್ಬರ ಕನಸಿನ ಭಾಗವೋ, ಪಾತ್ರಧಾರಿಯೋ ಆಗಿರುವೆ ಎಂದು ಅನ್ನಿಸುವುದುಂಟು. ಚಿತ್ತಾಲರ ಸಾಹಿತ್ಯ ಅವರ ಜೀವನದ ಕೇಂದ್ರವೇ ಆಗಿದ್ದು, ಮಿಕ್ಕೆಲ್ಲ ವಿಚಾರಗಳು ಅದರ ಸುತ್ತ ಗಿರಕಿ ಹೊಡೆಯುವುದರಿಂದ ನನಗೆ ಈ ಸಾಹಿತ್ಯವಿಸ್ತಾರದ ಪಾತ್ರ ಇರಬಹುದೇನೋ ಅನ್ನಿಸುವುದರಲ್ಲಿ ಯಾವ ಆಶ್ಚರ್ಯವೂ ಕಾಣುವುದಿಲ್ಲವೇನೋ.

ಮೇಜಿನಮೇಲೆ ಒಂದು ಕಾಗದ ಹರಡಿ, ಒಂದು ವೃತ್ತ ಸುತ್ತಿ ಅದರ ಮಧ್ಯದಲ್ಲಿ ಒಂದು ಚುಕ್ಕೆಯಿರಿಸಿ – ಚುಕ್ಕೆಯನ್ನು ತೋರಿಸುತ್ತಾ "ಇದು ಕೇಂದ್ರ. ಇಲ್ಲಿ ನಡೆಯುತ್ತಿರುವ ಕಥೆಯನ್ನು ಈ ವೃತ್ತದ ಮೇಲೆ ನಿಂತಿರುವವರು ನೋಡುತ್ತಿದ್ದಾರೆ.." ಎನ್ನುತ್ತಾ ತಮ್ಮ ಕಾದಂಬರಿ ಕೇಂದ್ರ ವೃತ್ತಾಂತದ ಆಶಯವನ್ನು ಚಿತ್ತಾಲರು ವಿವರಿಸುತ್ತಾರೆ. ಇದಕ್ಕೆ ಇಷ್ಟು ಚಿತ್ರ ಬರೆಯವ ಅವಶ್ಯಕತೆಯಿತ್ತೇ ಅಂದುಕೊಳ್ಳುವಷ್ಟರಲ್ಲಿಯೇ ಅವರು ವೃತ್ತದ ಮೇಲೊಂದು ಚುಕ್ಕೆಯನ್ನಿಕ್ಕುತ್ತಾರೆ. "ಈ ವೃತ್ತದ ಮೇಲೆ ಕೂತು ಆ ಕಥೆಯನ್ನು ನೋಡುತ್ತಿರುವ ವ್ಯಕ್ತಿ ಬೇರೊಂದೇ ಕಥೆಯ ಕೇಂದ್ರವಾಗಿರುವುದುನ್ನು ಗಮನಿಸಬೇಕು." ಎನ್ನುತ್ತಾ ಆ ಚುಕ್ಕೆಯ ಸುತ್ತ ಮತ್ತೊಂದು ಗುಂಡಗಿನ ವೃತ್ತವನ್ನು ಬಿಡಿಸುತ್ತಾರೆ.

ಕಾದಂಬರಿ ಬರೆಯುವುದಕ್ಕೆ ಮುನ್ನವೇ ಚಿತ್ತಾಲರು ಕಾದಂಬರಿಯನ್ನು ಮನಸ್ಸಿನಲ್ಲಿ ರೂಪಿಸಿಕೊಂಡ ಬಗೆಗಿನ ಚಿತ್ರ. ಆ ಚಿತ್ರವನ್ನಷ್ಟೇ ತೋರಿ, ನಿಮ್ಮಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದ್ದೇನೆಂದು ಮನವರಿಕೆಯಾದ ಕೂಡಲೇ ತುಂಟತನದಿಂದ ತಿಂಡಿಯ ತಟ್ಟೆಯತ್ತ ಕೈಮಾಡಿ "ಉಂಡೆ ತೆಗೂಳ್ಳಿ. ಸಂಕ್ರಾಂತಿಗೆ ಮಾಲತಿ ಮತ್ತು ವಿದ್ಯಾ ಮಾಡಿದ್ದು. ಇಂಥ ಒಳ್ಳೆಯ ಉಂಡೆ ನಿಮಗೆ ಎಲ್ಲೂ ಸಿಗುವುದಿಲ್ಲ." ಎನ್ನುತ್ತಾರೆ.

ಹೀಗೆ ತಮ್ಮ ಕಥೆಗಳನ್ನು, ಕಥೆಯ ಹಿಂದಿನ ವಾತಾವರಣವನ್ನು ಅವರು ವಿವರಿಸುತ್ತಿರುವಾಗ ಅವರೆದುರು ಕುಳಿತಿರುವ ನಾವು ವೃತ್ತದ ಅಂಚಿನಲ್ಲಿದ್ದೇವೋ, ಮಧ್ಯದಲ್ಲಿದ್ದೇವೋ, ನಾವೇ ಅವರ ಕಥೆಯ ಪಾತ್ರವೋ.. ಚಿತ್ತಾಲರೊಂದಿಗೆ ಅವರ ಪಾತ್ರವನ್ನು ಹೊರಗಿನಿಂದ ನೋಡುತ್ತಿರುವ ಪ್ರೇಕ್ಷಕರೋ..... ಈ ರೀತಿಯ ಅನುಮಾನಗಳು ಬಂದಾಕ್ಷಣಕ್ಕೇ ನಾವು ಚಿತ್ತಾಲರ ಸಾಹಿತ್ಯದಲ್ಲಿ ಮುಳುಗಿದ್ದೇವೆ ಎನ್ನುವುದು ಖಾತ್ರಿಯಾಗುತ್ತದೆ.

ಮುಂಬಯಿಯೇತರನಾಗಿ ಅತ್ಯಧಿಕವಾಗಿ ಅವರ ಬ್ಯಾಂಡ್ ಸ್ಟಾಂಡ್ ಮನೆಯಲ್ಲಿ ಭೇಟಿಯಾದ ಕೀರ್ತಿ ನನಗೆ ಸಲ್ಲಬಹುದೇನೋ. ಅದಕ್ಕೆ ಕಾರಣವಿಷ್ಟೇ: ನಾನು ನನ್ನ ಜೀವನದ ಹೆಚ್ಚಿನ ಭಾಗವನ್ನು ಗುಜರಾತಿನ ಆಣಂದ-ಅಹಮದಾಬಾದಿನಲ್ಲಿ ಕಳೆದಿದ್ದೇನೆ. ಆ ಎರಡೂ ಸ್ಥಳಗಳಿಗೆ ಮುಂಬಯಿ ಮಾರ್ಗವಾಗಿಯೇ ಹೋಗಬೇಕು. ಚಿತ್ತಾಲರ ಮನೆ ಏರ್ ಪೋರ್ಟಿನಿಂದ ದೂರವೇನೂ ಅಲ್ಲ. ಹೀಗಾಗಿ ಸಮಯವಿದ್ದಾಗ, ಸಮಯ ಸೂಕ್ತವಾಗಿದ್ದಾಗ ಅವರನ್ನು ಖುದ್ದು ಭೇಟಿಯಾಗುವುದು, ಸಮಯವಿಲ್ಲದಾಗ ರೂಪಾಯಿಯ ನಾಣ್ಯಗಳನ್ನು ಇಳಿಬಿಡುತ್ತಾ ಏರ್ ಪೋರ್ಟಿನ ಕಾಯಿನ್ ಬಾಕ್ಸಿನಿಂದ ಫೋನು ಸುತ್ತಿಸಿ ಮಾತನಾಡುವುದು. ಇದು ಪ್ರತಿಬಾರಿಯೂ ಮುಂಬಯಿ ಹಾಯ್ದುಹೋಗುವಾಗಿನ ಪರಿಪಾಠವಾಗಿತ್ತು. ಮೊದಮೊದಲಿಗೆ ಮುಕುಂದ ಜೋಶಿ, ಜಯಂತ ಕಾಯ್ಕಿಣಿ ಮತ್ತು ಉಮಾರಾವ್ ಕೂಡಾ ಇದ್ದರು. ಆದರೆ ದೂರವಿದ್ದ ಅವರಿಗೆ ಬರೇ ದೂರವಾಣಿ. ಬ್ಯಾಂಡ್ ಸ್ಟಾಂಡಿಗೆ ಮಾತ್ರ ನಾನು ಸಾಕ್ಷಾತ್ತು ಪ್ರತ್ಯಕ್ಷ!

ಚಿತ್ತಾಲರನ್ನು ಭೇಟಿಯಾಗುವಾಗಲೆಲ್ಲ ಒಂದಿಷ್ಟು ಮಾನಸಿಕ ತಯಾರಿ ಮಾಡಬೇಕು. ಶಿಸ್ತಿನ ಚಿತ್ತಾಲರಿಗೆ ಮೊದಲೇ ಫೋನ್ ಮಾಡಿ ನಾನು ಬರುತ್ತಿರುವ ವಿಷಯ ತಿಳಿಸಬೇಕು. ಅವರು ತಮ್ಮ ಇನ್ಸುಲಿನ್, ಊಟ, ಮಧ್ಯಾಹ್ನದ ಆರಾಮದ ಸಮಯವನ್ನು ಲೆಕ್ಕ ಕಟ್ಟಿ – ಇಂಥ ಸಮಯವಾದರೆ ಸಮರ್ಪಕ ಎನ್ನುವರು. ಒಂದೆರಡು ಬಾರಿಯ ಅನುಭವದ ನಂತರ ಚಿತ್ತಾಲರನ್ನು ಕಾಣಲು ಪ್ರಶಸ್ತವಾದ ಸಮಯ ಯಾವುದು, ಎನ್ನುವುದು ತಿಳಿಯುತ್ತಾ ಬರುತ್ತದೆ.

ಕೊಂಕಣಿ ಮಾತೃಭಾಷೆಯಾದ ಚಿತ್ತಾಲರ ಮನೆಯಲ್ಲಿ ಫೋನಿನಲ್ಲಿ ಮಾತಾಡಬೇಕೆಂದರೆ ಇಂಗ್ಲೀಷಿನಲ್ಲಿ ಪ್ರಾರಂಭಿಸಬೇಕು. ಅವರ ಮಗ ರವೀ ಹೆಸರುವಾಸಿಯಾದ ವೈದ್ಯರು. ಹೀಗಾಗಿ "May I speak to Chittal?" ಎನ್ನುವ ಪ್ರಶ್ನೆ ರವೀ ಚಿತ್ತಾಲರಿಗೂ ವರ್ತಿಸುತ್ತದೆ. ಮೊದಮೊದಲಿಗೆ ಅವರ ಎರಡನೆಯ ಮಗ ಮಿಲಿಂದನೂ ಇಲ್ಲಿಯೇ ಇದ್ದಾಗ ಆ ಮನೆಯಲ್ಲಿ ಮೂರು ಚಿತ್ತಾಲರು. ಚಿತ್ತಾಲರ ಅಪಘಾತ ಕಥೆಯಲ್ಲಿ ಬರುವ ಮೂರು ಕುಲಕರ್ಣಿಗಳ ಹಾಗೆ ರವೀ, ಮಿಲಿಂದ ಮತ್ತು ನಮ್ಮ ಯಶವಂತಣ್ಣನ ನಡುವೆ ಚಿತ್ತಾಲ ಎಂಬ ಹೆಸರು ಹಂಚಿಹೋಗಿತ್ತು. ಚಿತ್ತಾಲರು ರಿಟೈರಾಗಿ ಅವರ ಆಫೀಸಿನ ಕರೆಗಳು ನಿಂತು ಒಟ್ಟಾರೆ ಕರೆಗಳು ಕಡಿಮೆಯಾಗುತ್ತಾ ಹೋದಂತೆ ರವೀ ಚಿತ್ತಾಲರ ವೈದ್ಯಕೀಯ ವೃತ್ತಿ-ಖ್ಯಾತಿ ಎರಡೂ ಬೆಳೆದು ಚಿತ್ತಾಲ ಹೆಸರು ರವೀಗೇ ಸಂದುವ ಪರಿಸ್ಥಿತಿ ಉಂಟಾದಾಗಿನಿಂದಲೂ ನನ್ನ ಪ್ರಶ್ನೆ ಸುಲಭದ್ದಾಗಿದೆ - "May I speak to Yashwant?" ಹೀಗೆ ಹಿರಿಯ ಲೇಖಕರೊಬ್ಬರನ್ನು ಹೆಸರು ಹಿಡಿದು ಸಖನಂತೆ ಕರೆವ ಪುಳಕ. ಆದರೆ ಆ "ಸಖ"ತ್ತು ಪುಳಕ ಆತ ಲೈನಿಗೆ ಬರುವವರೆಗೆ ಮಾತ್ರ!

ಕಥೆಯಲ್ಲಿ ಬಂದಾತ ಮನೆಗೂ ಬಂದು ಕದ ತಟ್ಟಿದ ಎಂಬಂತಹ ನಿಜಜೀವನದ ಕಥೆಗಳನ್ನು ಚಿತ್ತಾಲರು ಇಂದಿಗೂ ನಮಗೆ ಕೇಳಿಸುತ್ತಾರೆ. ಹನೇಹಳ್ಳಿಯಿಂದ ಬಂದ ಜನ ತಮ್ಮನ್ನು ಚಿತ್ತಾಲರ ಕಥಾಪಾತ್ರಗಳಾಗಿ ಚಿತ್ತಾಲರಿಗೆ ಪರಿಚಯಿಸಿಕೊಂಡದ್ದನ್ನು ಅವರು ಹೆಮ್ಮೆಯಿಂದ, ತುಸು ತುಂಟತನದಿಂದ ಹೇಳಿಕೊಳ್ಳುತ್ತಾರೆ. ಹಕೀಕತ್ತು ಮುಗಿದು ಚಿತ್ತಾಲರ ಕಥಾಪ್ರಪಂಚ ಪ್ರಾರಂಭವಾಗುವುದು ಎಲ್ಲಿ ಎಂದು ಹೇಳುವುದು ಕಷ್ಟ. ಅಂಚಿಲ್ಲದ ವಸ್ತ್ರದಂತೆ ಚಿತ್ತಾಲರ ಕಥಾಜಗತ್ತು ಮುಂದುವರೆಯುತ್ತದೆ.

"ಅಹಮದಾಬಾದಿನಿಂದ ಮೊನ್ನೆ ಫೋನ್ ಮಾಡಿದ್ದಾಗ ನೀವು ನಿನ್ನೆ ಬರುವುದಾಗಿ ಹೇಳಿದ್ದಂತೆ ನೆನಪು. ಹೀಗಾಗಿ ನಿನ್ನೆಯೇ ಗಡ್ಡ ಮಾಡಿಕೊಂಡು ನಿಮಗಾಗಿ ಕಾಯುತ್ತಿದ್ದೆ. ನೋಡಿದರೆ ಈ ಹೊತ್ತು ಏರ್ ಪೋರ್ಟಿನಿಂದ ಫೋನ್ ಮಾಡಿದಿರೀ..." ಎಂದು ಆಕ್ಷೇಪವೆತ್ತುತ್ತಲೇ ಬೆಚ್ಚಗೆ ಮನೆಯೊಳಕ್ಕೆ ಬರಮಾಡಿಕೊಳ್ಳುತ್ತಾರೆ. ಶಿಸ್ತು, ಸಮಯಪಾಲನೆ, ಒಪ್ಪ ಓರಣದ ಶುದ್ಧಿ – ಇವುಗಳಿಲ್ಲದಿದ್ದರೆ ಜೀವನವೇ ಇಲ್ಲ. ಹೀಗಾಗಿ ಹೇಳದೇ ಕೇಳದೇ, ಅವರು ಗಡ್ಡ ಹೆರೆಯದ ದಿನ ಅವರನ್ನು ಭೇಟಿಮಾಡುವ ಸಾಹಸ ಮಾಡಲೇಬಾರದು.

ಮೊದಮೊದಲ ಒಂದು ಭೇಟಿಯಲ್ಲಿ ದಾರಿತಪ್ಪಿ ಇಳಿಯಬಾರದ ಜಾಗದಲ್ಲಿ ಆಟೋ ಇಳಿದು, ಮಳೆಯಲ್ಲಿ ನೆನೆದು ತೊಪ್ಪೆಯಾಗಿ ಚಿತ್ತಾಲರ ಮನೆ ಸೇರಿದ್ದೆ. ಮಿಲಿಂದನ ಪೈಜಾಮ-ಅಂಗಿ ತೊಡಿಸಿ ತಲೆ ಒರೆಸಿ ನನ್ನ ಬಟ್ಟೆಯನ್ನು ಹರವಲು ಹೇಳಿದರು. ಪರವಾಗಿಲ್ಲವೆಂದರೂ ಬಟ್ಟೆ ಬದಲಾಯಿಸುವವರೆಗೂ ಸುಮ್ಮಗಿದ್ದರೆ ಕೇಳಿ....

ಅವರು ಸಾಮಾನ್ಯವಾಗಿ ಕುಳಿತುಕೊಳ್ಳುವ ದೊಡ್ಡ ಸೋಫಾದ ಒಂದು ಮೂಲೆಯ ಆಸನ ಸಂಪೂರ್ಣ ಜೀರ್ಣವಾಗಿತ್ತು. ಮಿಕ್ಕೆರಡು ಜಾಗಗಳು ಹೊಸದಾಗಿಯೇ ಇದ್ದುವು. ಪ್ರತೀ ದಿನ – ತಪ್ಪದಂತೆ ಮುಂಜಾನೆ ಅಷ್ಟೊತ್ತಿಗೇ ಎದ್ದು ಅದೇ ಜಾಗದಲ್ಲಿ ಕುಳಿತು ಬೃಹತ್ ಕಾದಂಬರಿ ಪುರುಷೋತ್ತಮವನ್ನು ರಚಿಸಿದ ಕಥೆಯನ್ನು ಜೀರ್ಣವಾದ ಆ ಸೋಫಾದ ಭಾಗವೇ ಹೇಳುತ್ತಿತ್ತು. ಕಾದಂಬರಿ ಬರೆಯುವಾಗಲೂ ಆ ಜಾಗ, ಅಲ್ಲಿಂದ ಕಾಣುವ ಸಮುದ್ರದ ನೋಟ, ಹಾಗೂ ದಿನವೂ ಬರೆಯವ ಶಿಸ್ತು.. ಎಲ್ಲ ಕಥೆಗಳನ್ನೂ ನಾವು ಅಲ್ಲಿ ಕಾಣಬಹುದಿತ್ತು.





ಚಿತ್ತಾಲ. ಚಿತ್ತಾಲರ ಕನ್ನಡದ ಒದುಗನಾದ ಅತಿಥಿ. ಮಿಕ್ಕ ಪ್ರಪಂಚ ಮಾಯವಾಗಿಬಿಡುತ್ತದೆ. ಅವರು ತಮ್ಮ ಬರಹದ ತುಣುಕನ್ನು ತೋರಿಸುತ್ತಾರೆ, ಲಬಸಾ ಓದುತ್ತಾರೆ. ಯಾವುದೋ ಹಳೆಯ ಕಥೆಯನ್ನು, ಘಟನೆಯನ್ನು ಮೆಲುಕು ಹಾಕುತ್ತಾರೆ. ಎಲ್ಲವೂ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದವೇ. ಆದರೆ ಒಂದೇ ಒಂದು ವಿಷಯ ಇದಕ್ಕೆ ಅಪವಾದ. ಯಾವುದಾದರೂ ಕ್ರಿಕೆಟ್ಟು ಅಥವಾ ಟೆನಿಸ್ಸಿನ ಪಂದ್ಯವಿದ್ದಲ್ಲಿ ಚಿತ್ತಾಲರು ಸಾಹಿತಿಯಿಂದ ಭಾರತೀಯರಾಗಿಬಿಡುತ್ತಾರೆ. ಗಮನ ಆಟದಿಂದ ಹೊರಬರುವುದೇ ಇಲ್ಲ.

ಚಿತ್ತಾಲರ ಮನೆಯಿರುವುದು ಬಾಂದ್ರಾದ ಬ್ಯಾಂಡ್ ಸ್ಟಾಂಡಿನಲ್ಲಿ. ಷಾರುಖ್ ಖಾನನ ಮನೆಯ ಮುಂದಿನ ತಿರುವಿನಲ್ಲಿ ಬಲಕ್ಕೆ ಹೋಗಬೇಕು. ತಿರುಗಿದ ನಂತರ ತುಸು ಮುಂದೆ ಚಿತ್ತಾಲರ ಮನೆ, ಅದನ್ನು ದಾಟಿ ಹೋದರೆ ಸಲ್ಮಾನ್ ಖಾನನ ಮನೆ. ಬಾಲಿವುಡ್ಡಿನ ನಕ್ಷತ್ರಗಳ ನಡುವೆ ಮಿಂಚುತ್ತಿರುವ ಬ್ಯಾಂಡ್ ಸ್ಟಾಂಡಿನ ಕನ್ನಡ ಸಾಹಿತ್ಯದ ಸರದಾರ. ಚಿತ್ತಾಲರ ಮನೆಗೆ ಹೋಗುವಾಗ ಒಮ್ಮೆ ಡ್ರೈವರನಿಗೆ ಹೇಳಿದ್ದೆ. "ಷಾರುಖ್ ಖಾನ್ ಮನೆಯ ಬಳಿಗೆ ಒಯ್ಯಿ" ಅವನು ಆಶ್ಚರ್ಯದಿಂದ ನನ್ನ ಮುಖ ನೋಡಿದ. "ಏನು ನನ್ನ ಮುಖ ಕಂಡರೆ ನಾನು ಷಾರುಖ್ ಮನೆಗೆ ಹೋಗಲಾರದವನು ಎಂದೇನಾದರೂ ಬರೆದಿದೆಯಾ... ಯಾಕೆ ಆಶ್ಚರ್ಯ ಪಡುತ್ತೀಯ?" ಎಂದು ಉಡಾಫೆಯಿಂದ ಕೇಳಿದೆ. "ಇಲ್ಲ ಸಾರ್ ಹಾಗೇನೂ ಇಲ್ಲ" ಎಂದು ಅವನು ಗಾಡಿ ಚಲಾಯಿಸಿದ. ನನಗೆ ನಿದ್ದೆ ಹತ್ತಿತು. ಎಚ್ಚರವಾದಾಗ ಆ ಡ್ರೈವರ್ ಷಾರೂಖನ ಮನೆ ಮುಂದೆ ಗಾಡಿ ನಿಲ್ಲಿಸಿ, ಸೆಕ್ಯೂರಿಟಿಯವರ ಜೊತೆಗೆ ವಾದಿಸುತ್ತಿದ್ದ. ದೊಡ್ಡ ಗೊಂದಲವಾಗುವ ಮೊದಲೇ ಅಲ್ಲಿಂದ ಬಜಾವಾಗಿ ಚಿತ್ತಾಲರ ಮನೆ ಸೇರಿದ್ದಾಯಿತು.

ಈಚೆಗೆ ಹೋದಾಗ ಒಂದು ಪುಟ್ಟ ನೋಟ್ ಪುಸ್ತಕ ತೋರಿಸಿ "ನೋಡಿ"ಎಂದು ಚಿತ್ತಾಲರು ನನ್ನ ಮುಂದೆ ಹಿಡಿದರು. ಸಾಮಾನ್ಯವಾಗಿ ಬರೆಯುತ್ತಿರುವ ಕೃತಿಗಳನ್ನು ಸುಲಭವಾಗಿ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಹೆಚ್ಚೆಂದರೆ ಒಂದೆರಡು ಸಾಲುಗಳನ್ನು ಅವರೇ ಓದುತ್ತಾರೆ. ಹೀಗಾಗಿ ನನಗೆ ತೋರಿದ್ದೇ ಭಾಗ್ಯವೆಂದು ಅದನ್ನು ಓದಲು ಸುರುಮಾಡಿದೆ. "ನನ್ನ ಕೈಬರಹ ಹಾಗೆಯೇ ಇದೆಯೇ ನೋಡಿ ಹೇಳಲು ಕೊಟ್ಟದ್ದು... ಓದುವುದಕ್ಕಲ್ಲ" ಎಂದು ವಾಪಸ್ಸು ಕಸಿದುಕೊಂಡರು. ಅಕ್ಷರಗಳಿಗೆ ಚಿತ್ತಾಲರ ಚಿರಯೌವನವಿತ್ತು.

ಚಿತ್ತಾಲರ ಅನೇಕ ಭೇಟಿಗಳ ನಡುವೆ ನಾನು ಅವರ ಕಥೆಯ ಪಾತ್ರವಾಗಿಬಿಟ್ಟಿದ್ದೇನೆ ಎಂದು ನನಗೆ ಆಗಾಗ ಅನ್ನಿಸುತ್ತದೆ. ಒಬ್ಬ ಲೇಖಕನ ಸಾಹಿತ್ಯಕ್ಕೆ ಈ ರೀತಿಯ ಪ್ರವೇಶ ಪಡೆಯುವುದು ಒಂದು ಬೇರೆಯೇ ಅನುಭವ. ಹೀಗೇ ವರ್ಷಾನುಗಟ್ಟಲೆ ಅವರ ಭೇಟಿ, ವರ್ಷಾನುಗಟ್ಟಲೆ ಚರ್ಚೆ, ವರ್ಷಾನುಗಟ್ಟಲೆ ಕೀಟಲೆ ಮಾಡುತ್ತ ಇದ್ದರೆ ಅವರ ಆಯುಷ್ಯದ ಜೊತೆಗೇ ನನ್ನದೂ ಬೆಳೆಯುತ್ತದೆಂಬ ಸ್ವಾರ್ಥಪೂರಿತ ಹಾರೈಕೆ ನನ್ನದು.




No comments: