Sunday, March 31, 2013

ಮ್ಯಾಗ್ಸಸೇ ಪ್ರಶಸ್ತಿ ಪಡೆದ ದೀಪ್ ಜೋಶಿ ಮತ್ತು ಅವರು ಬೆಳೆಸಿದ ಪ್ರದಾನ್ ಸಂಸ್ಥೆ




ಏಶಿಯಾದ ನೊಬೆಲ್ ಎಂದೇ ಪ್ರಖ್ಯಾತವಾಗಿರುವ ರ್‍ಯಾಮನ್ ಮ್ಯಾಗಸಸೇ ಪುರಸ್ಕಾರವನ್ನು ಈ ಬಾರಿ ಪಡೆದವರಲ್ಲಿ ಭಾರತೀಯ ದೀಪ್ ಜೋಶಿ ಸಹ ಸೇರಿದ್ದಾರೆ. ಎಂದೂ ತಮ್ಮ ಧ್ವನಿಯನ್ನು ಏರಿಸದ, ಬೆಳ್ಳಿಗಡ್ಡಧಾರಿ, ಒಂದು ಥರದಲ್ಲಿ ಋಷಿಯ ಅವತಾರದಂತಿರುವ ಹಿರಿಯ ದೀಪ್‍ಗೆ ಈ ಪುರಸ್ಕಾರ ಬಂದದ್ದು ಸಹಜವೂ ಸಮರ್ಪಕವೂ ಆಗಿದೆ. ಯಾವ ಆರ್ಭಟವೂ ಇಲ್ಲದೇ, ಎಲ್ಲವನ್ನೂ ಒಂದು ಸ್ಪಷ್ಟ ಆಲೋಚನೆ, ದೂರದರ್ಶಿತ್ವದಿಂದ ಯೋಜನಾಬದ್ಧವಾಗಿ ಕಾರ್ಯರೂಪಕ್ಕಿಳಿಸಿರುವ ದೀಪ್‍ ಒಂದು ರೀತಿಯಿಂದ ಅಜಾತ ಶತ್ರು. ಅವರ ಬಗ್ಗೆ ಕುಹಕದ ಧ್ವನಿಯಾಗಲೀ, ಬೇಸರದ ಧ್ವನಿಯಾಗಲೀ ನಾನು ಈ ವರೆಗೆ ಕೇಳಿಯೇ ಇಲ್ಲ. ಆದರೆ ದೀಪ್ ಜೋಶಿಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ನಾವು ಆತನ ಜೀವನದಲ್ಲಿ ಹಣಕಿಹಾಕದೇ ಆತನ ಕೆಲಸ ಮತ್ತು ಆತ ನಡೆಸಿದ ಸಂಸ್ಥೆಯ ನಿಲುವನ್ನು ಅರ್ಥಮಾಡಿಕೊಳ್ಳುವುದರಲ್ಲಿಯೇ ಮ್ಯಾಗಸಸೆಯ ಮಹತ್ವವೂ ಇದೆ.

ಮೂಲತಃ ದೀಪ್ ನಡೆಸಿದ್ದ ಪ್ರದಾನ್ [Professional Assistance for Development Action] ಅನ್ನುವ ಸಂಸ್ಥೆಯ ಮೂಲಸೆಲೆ ಹುಟ್ಟಿದ್ದು ವಿಜಯ್ ಮಹಾಜನ್ ಅವರ ಮನಮಸ್ತಕದಲ್ಲಿ. ವಿಜಯ್ ಐಐಎಂ, ಅಹಮದಾಬಾದಿನಲ್ಲಿ ಓದುತ್ತಿದ್ದ ಕಾಲದಲ್ಲಿ ಅಲ್ಲಿನ ಮೊದಲ ನಿರ್ದೇಶಕರಾಗಿದ್ದ ರವಿ ಮಥಾಯಿಯಿಂದ ಬಹಳವೇ ಪ್ರಭಾವಿತರಗಿದ್ದರು. ರವಿ ತಮ್ಮ ೩೮ನೇ ವಯಸ್ಸಿನಲ್ಲಿ ಐಐಎಂನ ಪ್ರಥಮ ಪೂರ್ಣಾವಧಿ ನಿರ್ದೇಶಕರಾಗಿ ನಿಯಮಿತಗೊಂಡರು. ೪೫ನೇ ವಯಸ್ಸಿಗೆ ಆತ ಆ ಪದವಿಯನ್ನು ತ್ಯಜಿಸಿ ಸಾಧಾರಣ ಪ್ರೊಫೆಸರ್ ಆಗಿ ಅಲ್ಲಿ ಮುಂದುವರೆದರು. ಆಗ ಅವರು ರಾಜಾಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ತೊಗಲು ಕಾರ್ಮಿಕರನ್ನು ಒಟ್ಟುಗೂಡಿಸಿ ಅವರ ಉತ್ಪತ್ತಿಗೆ ಮಾರುಕಟ್ಟೆಯನ್ನು ಹುಡುಕಿಕೊಡುವ - ಆಕ್ಷಣ್ ರಿಸರ್ಚ್ ಮಾಡುತ್ತಿದ್ದರು. ವಿಜಯ್ ರವಿಯ ವಿಕಾಸದ ಕೆಲಸದಿಂದಲೂ, ಹಾಗೂ ಅವರು ತಮ್ಮ ಪದವಿಯನ್ನು ಕಿರಿವಯಸ್ಸಿನಲ್ಲಿಯೇ ಕೈಬಿಟ್ಟು ಬೇರೆ ಅರ್ಥಗಭಿತ ಕೆಲಸವನ್ನು ಹುಡುಕಿ ಹೊರಟಿದ್ದನ್ನೂ ಕಂಡು ಪ್ರಭಾವಿತರಾದರು. ಹೀಗಾಗಿ ಐಐಎಂನಿಂದ ಪಾಸಾದ ಕೂಡಲೇ ವಿಜಯ್ ಯಾವುದೇ ಕಾರ್ಪೊರೇಟ್ ಕೆಲಸವನ್ನು ಹುಡುಕದೇ ಸೀದಾ ಬಿಹಾರಕ್ಕೆ ಒಂದು ಸ್ವಯಂ ಸೇವಾಸಂಸ್ಥೆಯ ಜೊತೆ ಕೆಲಸ ಮಾಡಲು ಹೊರಟರು.

ಸ್ವಯಂ ಸೇವಾ ಸಂಸ್ಥೆಗಳ ಜೊತೆಗೆ ಕೆಲಸ ಮಾಡಿದ ವಿಜಯ್‌ಗೆ ತಿಳಿದ ಮೊದಲ ವಿಚಾರವೆಂದರೆ, ಈ ಥರದ ಸಂಸ್ಥೆಗಳಲ್ಲಿ ಒಳಿತು ಮಾಡಬೇಕೆಂಬ ತೀವ್ರ ಬಯಕೆಯಿರುವ ಹೃದಯವಂತರಿರುತ್ತಾರೆ. ಆದರೆ ಅವರುಗಳಿದೆ ಆಧುನಿಕ ನಿರ್ವಹಣಾ ತಂತ್ರಗಳ ಪರಿಚಯವಿರುವುದಿಲ್ಲವಾದ್ದರಿಂದ, ಅವರುಗಳ ಕೆಲಸ ಒಂದು ಸೀಮಿತ ಪರಧಿಯಲ್ಲಿದ್ದುಬಿಡುತ್ತದೆ. ಒಂದು ರೀತಿಯಲ್ಲಿ ಒಳಿತುಮಾಡುವ ಸ್ವಯಂಸೇವಾ ಸಂಸ್ಥೆಗಳ ಹೃದಯವಂತಿಕೆಗೂ, ನಿರ್ವಹಣಾತಂತ್ರಗಳನ್ನು ತಿಳಿದ ಐಐಎಂನಂತಹ ’ಬುದ್ಧಿವಂತ’ರ ಪರಿಣಿತಿಗೂ ಬೆಸುಗೆ ಹಾಕಿದರೆ ವಿಕಾಸದ ಪರಿಭಾಷೆಯನ್ನೇ ಬದಲಾಯಿಸಬಹುದೆಂದು ವಿಜಯ್ ನಂಬಿದ್ದರು.

ಹೀಗೆ, ೧೯೮೩ರಲ್ಲಿ ಪ್ರದಾನ್ ವಿಜಯ್ ಮಹಾಜನ್ ಅವರ ನೇತೃತ್ವದಲ್ಲಿ ಜನ್ಮ ತಾಳಿತು. ಆಗಿನ ದಿನಗಳಲ್ಲಿ ವಿಜಯ್ ತಮ್ಮಂತೆಯೇ ಇದ್ದ ಇತರರನ್ನೂ ತಮ್ಮ ಜೊತೆಗೂಡಿಸಿಕೊಂಡರು - ಈಗ ಧಾನ್ ಫೌಂಡೇಷನ್ ನಡೆಸುವ ವಾಸಿಮಲೈ, ಬೆಂಗಳೂರಿನ ವಿದ್ಯಾಪೋಷಕ/ಪ್ರೇರಣಾ ಸಂಸ್ಥೆಯ ಪ್ರಮೋದ್ ಕುಲಕರ್ಣಿ, ಐಐಟಿಯಿಂದ ಆಗಷ್ಟೇ ಹೊರಬಿದ್ದಿದ್ದ ಅಚಿಂತ್ಯ ಘೋಷ್, ಐಐಎಂ ಸಹಪಾಠಿ ವೇದ್ ಆರ್ಯ - ಹೀಗೆ ಈ ಆಲೋಚನಾಲಹರಿಯನ್ನು ಹೊತ್ತ ಜನರ ಒಂದು ಗುಂಪು ಒಂದಾಗಿದ್ದರು. ಈ ಸಂಸ್ಥೆಯ ಮೂಲ ಪ್ರವರ್ತಕರಲ್ಲಿ ಎಲ್ಲರೂ ಸಮಾನರು. ಎರಡೆರಡು ವರ್ಷಗಳ ನಾಯಕತ್ವವನ್ನು ಅವರುಗಳು ನಿರ್ವಹಿಸಿ ಮತ್ತೆ ವಿಕಾಸದ ಕೆಲಸದಲ್ಲಿ ತೊಡಗುವುದು ಎನ್ನುವಂತಹ ಪ್ರಕ್ರಿಯೆಯನ್ನು ಅವರ ನಾಯಕತ್ವದ ಸೂತ್ರದಲ್ಲಿ ಅಳವಡಿಸಲಾಯಿತು. ಆಗ ದೀಪ್ ಜೋಶಿ ಫೋರ್‍ಡ್ ಫೌಂಡೇಷನ್ ಅನ್ನುವ ಅನುದಾನಗಳನ್ನು ನೀಡುವ ಸಂಸ್ಥೆಯಲ್ಲಿ ಪ್ರೋಗ್ರಾಮ್ ಆಫೀಸರ್ ಆಗಿದ್ದರು. ಪ್ರದಾನ್ ತಮ್ಮ ಕೆಲಸಕ್ಕೆ ಅನುದಾನವನ್ನು ಪಡೆಯಲು ಹೋದಾಗ ಈ ವಿಚಾರವನ್ನು ಪ್ರೋತ್ಸಾಹಿಸಿ, ಮೊದಲ ಅನುದಾನ ಬರುವಂತೆ ನೋಡಿದ ಜವಾಬ್ದಾರಿ ದೀಪ್ ಜೋಶಿಯದ್ದಾಗಿತ್ತು. ಆಗಲೇ ದೀಪ್‍ಗೆ ಈ ಕೆಲಸದ ಬಗ್ಗೆ ಎಷ್ಟು ಅದಮ್ಯ ನಂಬಿಕೆ ಉಂಟಾಗಿತ್ತೆಂದರೆ, ಆತ ತನ್ನ ಡಾಲರ್ ಸಂಬಳದ ಕೆಲಸವನ್ನು ಬಿಟ್ಟು ಈ ಗೆಳೆಯರೊಂದಿಗೆ ಸೇರಿಬಿಟ್ಟರು.

ಪ್ರದಾನ್ ಸಂಸ್ಥೆಯ ರಚನಾ ಸೂತ್ರ ಸರಳವಾಗಿತ್ತು. ಐಐಟಿ, ಐಐಎಂ, ಇರ್ಮಾ, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್, ಫಾರೆಸ್ಟ್ ಮ್ಯಾನೇಜ್‍ಮೆಂಟ್ ಇತ್ಯಾದಿ ಸಂಸ್ಥೆಗಳಿಂದ ನಿರ್ವಹಣಾಸೂತ್ರಗಳನ್ನು ಕಲಿತ, ತಂತ್ರಜ್ಞಾನದಲ್ಲಿ ತರಬೇತಿಯಿದ್ದ ಯುವಕರನ್ನು ಆಯ್ದು ಒಂದೆಡೆಗೆ ಹಾಕುವುದು. ಈ ಪ್ರದಾನ್ ಗುಂಪು ದೇಶದ ಯಾವುದೇ ಭಾಗದಲ್ಲಿ ಹಂಚಿಹೋಗಿರುವ ವಿಕಾಸದ ಕೆಲಸದಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಉದ್ಯೋಗಿಗಳನ್ನು ಒದಗಿಸುವ ಪ್ರಯತ್ನ ಮಾಡುತ್ತದೆ. ಹೀಗೆ ತಮಗೆ ಆಸಕ್ತಿಯಿರುವ ಸಂಸ್ಥೆಯಲ್ಲಿ ಉನ್ನತ ವ್ಯಾಸಂಗ ಮಾಡಿದ ಈ ಜನ ಎರವಲಿನ ಮೇಲೆ ಹೋಗಿ ಕೆಲಸ ಮಾಡಬಹುದು. ಹಾಗೆ ಕೆಲಸ ಮಾಡಿದ ಸಂಸ್ಥೆ ಅವರಿಗೆ ಒಗ್ಗಿ ಬಂದರೆ, ಅಲ್ಲಿಯೇ ಕೆಲಸಕ್ಕೆ ಖಾಯಂ ಆಗಿ ಸೇರಿಬಿಡಲೂ ಬಹುದು. ಅಕಸ್ಮಾತ್ ಅವರಿಗೆ ಆ ಸಂಸ್ಥೆಗಳು ಒಗ್ಗಲಿಲ್ಲವೆಂದರೆ ಅವರು ಪ್ರದಾನ್‍ಗೆ ವಾಪಸ್ಸಾಗಿ ಮಿಕ್ಕ ಯಾವುದೇ ಸಂಸ್ಥೆಗಳಲ್ಲಿ ಸೇರುವ ಪ್ರಯತ್ನ ಮಾಡಬಹುದು. ಹೀಗೆ ಮಾಡಿದಾಗ ಹೃದಯದಿಂದಲೇ ಕೆಲಸ ಸಾಗಿಸುವ ಏಕ್ಟಿವಿಸ್ಟ್ ಸಂಸ್ಥೆಗಳಿಗೂ, ಮಸ್ತಕದಿಂದ ಎಲ್ಲವನ್ನೂ ವಿಶ್ಲೇಷಿಸಿ ಮುಂದುವರೆವ ತಂತ್ರಿಕರಿಗೂ ಒಂದು ಅದ್ಭುತ ಬೆಸುಗೆಯನ್ನು ಹಾಕಿದ ಹಾಗಾಗುತ್ತದೆ. ಅಕಸ್ಮಾತ್ ಈ ಬೆಸುಗೆ ಕುಸಿದರೆ ಆ ವ್ಯಕ್ತಿ ವಿಕಾಸದ ಕ್ಷೇತ್ರವನ್ನು ಬಿಟ್ಟು ಹೊರಹೋಗುವುದಕ್ಕೆ ಬದಲು, ಬೇರೊಂದು ಸಂಸ್ಥೆಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಹಾಗೂ
ಅಲ್ಲಿ ಇಲ್ಲಿ ಚದುರಿ ಹೋಗಿರುವ ಈ ’ಬುದ್ಧಿವಂತ’ರಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ಹಾಗೂ ವರುಷಕ್ಕೊಮ್ಮೆ ತಮ್ಮ ಹಿಂದಿನ ವರ್ಷದ ಪುನರಾವಲೋಕನ ಮಾಡಿಕೊಳ್ಳಲೂ ಈ ಸಂಸ್ಥೆ ಅನುವು ಮಾಡಿಕೊಟ್ಟಿತ್ತು. ಈ ದಿನ ನಾವುಗಳು ಹಿಂದಿರುಗಿ ನೋಡಿದಾಗ - ಉತ್ತಮ ವಿಕಾಸ ಶೀಲ ಸ್ವಯಂಸೇವಾ ಸಂಸ್ಥೆಗಳನ್ನು ನಡೆಸುತ್ತಿರುವ ಅನೇಕರು ಪ್ರದಾನ್‍ನಲ್ಲಿ ತಮ್ಮ ಆರಂಭದ ಜೀವನವನ್ನು ಕಳೆದು ಕಡಿದಾದ ಈ ಕೆಲಸದ ಸೂತ್ರಗಳನ್ನು ಕಂಡುಕೊಂಡವರೇ.

ಈ ಆರಂಭದ ಘಟ್ಟದಲ್ಲಿ ವಿಜಯ್ ಪ್ರದಾನ್ ಸಂಸ್ಥೆಯ ನಾಯಕತ್ವವನ್ನು ನಿರ್ವಹಿಸುತ್ತಿದ್ದರು. ಆದರೆ ವಿಜಯ್ ಮೊದಲೇ ತಮ್ಮ ಎರಡು ವರ್ಷಗಳ ಅವಧಿಯ ನಂತರ ದೀಪ್ ಜೋಶಿಗೆ ನಾಯಕತ್ವವನ್ನು ಹಸ್ತಾಂತರ ಮಾಡುವುದಾಗಿ ಘೋಷಿಸಿದ್ದರು. ವಿಜಯ್ ನಾಯಕತ್ವದಲ್ಲಿ ಪ್ರದಾನ್ ಸಂಸ್ಥೆ ತನ್ನ ಮೂಲ ಸೂತ್ರಗಳಿಗೆ ಬದ್ಧವಾಗಿ ಒಳ್ಳೆಯ ವಿದ್ಯೆ-ಹೃದಯವಂತಿಕೆ ಇದ್ದ ಜನರನ್ನು ಹುಡುಕುವ ಅವರುಗಳನ್ನು ಸ್ವಯಂಸೇವಾ ಸಂಸ್ಥೆಗಳಲ್ಲಿ ಸೇರಿಸುವ ಕೆಲಸವನ್ನು ಮಾಡುತ್ತಿತ್ತು. ದೀಪ್ ಈ ಸಂಸ್ಥೆಯ ನಾಯಕತ್ವವನ್ನು ವಹಿಸಿಕೊಳ್ಳುವ ವೇಳೆಗೆ ಈ ಸೂತ್ರಗಳನ್ನು ಪ್ರಶ್ನಿಸುವ ಸಮಯ ಬಂದಿತ್ತು. ಹೊರಗಿನ ಜಗತ್ತು ಬದಲಾಗಿದ್ದು - ಐಐಂ-ಐಐಟಿಯಂತಹ ಸಂಸ್ಥೆಗಳಿಂದ ಉತ್ತೀರ್ಣರಾಗುವ ತಂತ್ರಜ್ಞರಿಗೆ ಸಿಗುವ ಸಂಬಳಗಳು ತಾರಕಕ್ಕೇರಿ ಅವರುಗಳು ಇಂಥಹ ಒಂದು ಉದ್ಯೋಗಾವಕಾಶವನ್ನು ಸ್ವೀಕರಿಸುವುದು ಕಡಿಮೆಯಾಗುತ್ತಾ ಹೋಯಿತು. ಪ್ರದಾನ್ ಸಂಸ್ಥೆಗೂ ತನ್ನದೇ ಚಟುವಟಿಕೆಗಳನ್ನು ಮಾಡಬೇಕೆನ್ನುವ - ಒಂದು ಮೂಲ ಸೂತ್ರವನ್ನು ಹಿಡಿದು ಹೊರಡಬೇಕೆನ್ನುವ ತುರ್ತೂ ಉಂಟಾಯಿತು. ಹೀಗಾಗಿ ಪ್ರದಾನ್ ತಾನೇ ಒಂದು ಸ್ವಯಂಸೇವಾ ಸಂಸ್ಥೆಯ - ನೇರವಾಗಿ ಕಾರ್ಯಮಾಡುವ ಸಂಸ್ಥೆಯಾಗಿ ರೂಪುಗೊಂಡಿತು. ಹೀಗೆ ರೂಪುಗೊಂಡ ಮೇಲಿನ ನಂತರದ ನಾಯಕತ್ವವನ್ನು ದೀಪ್, ನೇರವಾಗಿ ಹಾಗೂ ಪರೋಕ್ಷವಾಗಿ ನಿರ್ವಹಿಸಿ ಬಂದರು.

ಪ್ರದಾನ್ ಸಂಸ್ಥೆ ನೇರವಾಗಿ ವಿಕಾಸದ ಕೆಲಸವನ್ನು ಕೈಗೊಂಡಾಗ ಅಳವಡಿಸಿಕೊಂಡ ಕೆಲವು ಸೂತ್ರಗಳನ್ನು ಇಂದಿಗೂ ಪಾಲಿಸುತ್ತಿದೆ. ಮೊದಲನೆಯ ಸೂತ್ರವೆಂದರೆ ಆ ಸಂಸ್ಥೆ ನಡೆಸುವ ಕೆಲಸಗಳಲ್ಲಿ ಸಮೂಹದ ಪಾತ್ರ ಹಿರಿಯದ್ದಾಗಿರುತ್ತದೆ. ಹೀಗಾಗಿಯೇ ಅವರು ಮೈಕ್ರೊಫೈನಾನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಸ್ವ-ಸಹಾಯ ಗುಂಪುಗಳ ಸೂತ್ರವನ್ನು ಹಿಡಿದು ಹೊರಡುತ್ತಾರೆಯೇ ಹೊರತು - ಅತೀ ಶೀಘ್ರವಾಗಿ ಬೆಳೆಯುವ ಗ್ರಾಮೀಣ್ ಮಾದರಿಯನ್ನು ಹಿಡಿದು ಹೊರಡುವುದಿಲ್ಲ. ದೇಶದ ದೊಡ್ಡ ರಾಜ್ಯಗಳಾದ - ಮಧ್ಯಪ್ರದೇಶ ಝಾರ್‌ಖಂಡ್, ಛತ್ತೀಸ್‌ಘಡ, ಬಿಹಾರ್, ರಾಜಾಸ್ಥಾನ ದಂತಹ ಕಠಿಣ ಪ್ರದೇಶಗಳಲ್ಲಿ ಅತೀ ಹಿಂದುಳಿದ ಜಿಲ್ಲೆಗಳಲ್ಲಿ ಪ್ರದಾನ್ ತನ್ನ ಕೆಲಸದ ವ್ಯಾಪ್ತಿಯನ್ನು ಹೊತ್ತು ನಡೆದಿದೆ. ಲಘುವಿತ್ತ ಅಲ್ಲದೇ, ಜಲಸಂಪನ್ಮೂಲ, ಸ್ಥಳೀಯ ಜೀವನೋಪಾಧಿಗಳನ್ನು ಪೋಷಿಸುವ ಕೆಲಸವನ್ನು ಪ್ರದಾನ್ ನಡೆಸುತ್ತಾ ಬಂದಿದೆ. ಪ್ರತೀ ಕ್ಷೇತ್ರಕ್ಕೂ ಭಿನ್ನವಾದ ಉಪಾಯ, ಪ್ರತೀ ಸಮಸ್ಯೆಗೂ ಭಿನ್ನವಾದ ಸಮಾಧಾನವಿರುತ್ತದೆನ್ನುವುದನ್ನು ಆ ಸಂಸ್ಥೆ ಗುರುತಿಸಿದೆ. ಹೀಗಾಗಿಯೇ ಬಿಹಾರದ ಗೊಡ್ಡಾದಲ್ಲಿ ಅವರ ಕೆಲಸ ಟಸರ್ ರೇಷ್ಮೆಗೆ ಸಂಬಂಧಿಸಿದ್ದೂ, ಮಧ್ಯಪ್ರದೇಶದ ಸುಖತವಾದಲ್ಲಿ ಕೋಳಿಸಾಕಣೆಯನ್ನು ಹೆಚ್ಚಾಗಿ ಪ್ರೋತ್ಸಾಹಿಸಿದ್ದನ್ನು ನಾವು ಕಾಣಬಹುದು.

ಉನ್ನತ ವಿದ್ಯಾಸಂಸ್ಥೆಗಳಿಂದ ಉತ್ತೀರ್ಣರಾದ ಯುವಕರನ್ನು ನಿಯಮಿಸುವುದನ್ನು ನಿಲ್ಲಿಸಿದ ಪ್ರದಾನ್ ತನ್ನ ಹೆಸರಿನಲ್ಲಿನ ’ಪ್ರೊಫೆಷನಲ್’ ಅನ್ನುವ ಪದಕ್ಕೆ ಇನ್ನೂ ನ್ಯಾಯ ಒದಗಿಸುತ್ತಿದೆಯೇ? ದೀಪ್ ಜೋಶಿ ನಾಯಕತ್ವದಲ್ಲಿ ನಡೆದ ರೂಪಾಂತರದಲ್ಲಿ ಆತ ಕಂಡುಕೊಂಡದ್ದು ಒಂದು ನಿಜ - ಪ್ರೊಫೆಷನಲ್ ಅಂದ ಕೂಡಲೇ ಅದು ಐಐಟಿ, ಐಐಎಂ ಆಗಿರಬೇಕಿಲ್ಲ. ಅಲ್ಲಿಂದ ಪ್ರಾರಂಭ ಮಾಡಿದರೂ ದೇಶದಲ್ಲಿ ಅನೇಕ ಭಾಗಗಳಲ್ಲಿರುವ ಉತ್ತಮ ಇಂಜಿನಿಯರಿಂಗ್ ಹಾಗೂ ಇತರ ತಂತ್ರಿಕ, ನಿರ್ವಹಣಾ ಸಂಸ್ಥೆಗಳಿವೆ. ಅಲ್ಲಿಂದಲೂ ಜನರನ್ನು ನಿಯಮಿಸಬಹುದು ಅನ್ನುವುದನ್ನು ಆತ ತೋರಿಸಿಕೊಟ್ಟರು. ಪ್ರತೀ ವರ್ಷ ಸುಮಾರು ನೂರಕ್ಕೂ ಹೆಚ್ಚು ಜನರನ್ನು ದೇಶಾದಾದ್ಯಂತ ಹಂಚಿಹೋಗಿರುವ ಕಾಲೇಜುಗಳಿಂದ ಹೆಕ್ಕಿ ಅವರಿಗೆ ಒಂದು ವರುಷದ ’ಅಪ್ರೆಂಟಿಸ್ ಶಿಪ್’ ತರಬೇತಿ ನೀಡಿ ವಿಕಾಸದ ಕೆಲಸಕ್ಕೆ, ಕಡಿದಾದ, ಕಠಿಣವಾದ ಜಾಗದಲ್ಲಿ ಜೀವನ ನಡೆಸಲು - ಹೃದಯವಂತಿಕೆಯನ್ನು ಬೆಳೆಸಿಕೊಳ್ಳಲು ತಯಾರು ಮಾಡುವ ಕೆಲಸವನ್ನು ಪ್ರದಾನ್ ಮಾಡುತ್ತಿದೆ.

ಈ ಅಪ್ರೆಂಟಿಸಿಶಿಪ್ ಕೂಡ ಎಷ್ಟು ಯೋಜನಾಬದ್ಧವಾಗಿದೆಯೆಂದರೆ ತರಬೇತಿಗೇ ಒಂದು ಭಿನ್ನ ಕ್ಯಾಂಪಸ್ಸನ್ನು ಮಧ್ಯಪ್ರದೇಶದ ಗ್ರಾಮಾಂತರ ಇಲಾಖೆಯಲ್ಲಿ ಇಟಾರ್ಸಿ ಬಳಿಯಿರುವ ಕೇಸ್ಲಾ ಗ್ರಾಮದಲ್ಲಿ ಕಟ್ಟಿಸಿದ್ದಾರೆ. ಅಲ್ಲಿನ ತರಬೇತಿಗೆ ಬೇಕಾದ ಓದಿನ ಪರಿಕರಗಳನ್ನು ಪರಿಣಿತರಿಂದ ತಯಾರು ಮಾಡಿಸಿದ್ದಾರೆ. ಒಂದು ರೀತಿಯಲ್ಲಿ ಐ.ಎ.ಎಸ್ ಅಧಿಕಾರಿಗಳಿಗೆ ಮಸೂರಿಯಲ್ಲಿ ನಡೆಯುವ ತರಬೇತಿಯ ರೀತಿಯಲ್ಲಿ ಒಂದು ವರ್ಷದ ತರಬೇತಿಯನ್ನು ಪ್ರದಾನ್ ನೀಡುತ್ತದೆ. ಈ ನೂರೂ ಜನ ಪ್ರದಾನ್ ನಲ್ಲಿ ಕೆಲಸ ಮುಂದುವರೆಸದಿರಬಹುದು. ಇತರ ಸ್ವಯಂ ಸೇವಾ ಸಂಸ್ಥೆಗಳನ್ನು ಸೇರಬಹುದು ಅಥವಾ ಎಲ್ಲವನ್ನೂ ಬಿಟ್ಟು ಕಾರ್ಪರೇಟ್ ಜಗತ್ತಿಗೂ ಹೋಗಬಹುದು. ಆದರೆ ಈ ಒಂದು ವರ್ಷದ ಅನುಭವದ ಫಲವಾಗಿ ಅವರ ಮೂಲ ವಿಚಾರಗಳು ವಿಕಾಸರ ಹೃದಯವಂತಿಯತ್ತ ತಿರುಗುವುದರಲ್ಲೆಯೇ ಈ ಕಾರ್ಯಕ್ರಮದ ಸಾಫಲ್ಯತೆಯಿದೆ!

ಹೀಗೆ ಪ್ರದಾನ್‍ಗೆ ಬಂದ ಯುವಕರನ್ನು ಯೋಚಿಸಲು, ಹೊಸ ಯೋಜನೆಗಳನ್ನು, ಸಮಸ್ಯೆಗಳಿಗೆ ಹೊಸ ಸೃಜನಶೀಲ ಸಮಾಧಾನಗಳನ್ನು ಕಂಡುಕೊಳ್ಳಲು ಅದನ್ನು ಕಾರ್ಯರೂಪಕ್ಕಿಳಿಸಲು ಪ್ರದಾನ್ ಪ್ರೋತ್ಸಾಹಿಸಿದೆ. ಈ ಎಲ್ಲದರ ಹಿಂದಿನ ಹಾಗೂ ಈ ಎಲ್ಲ ಭಿನ್ನ ಸೂತ್ರಗಳನ್ನು ಒಂದೆಡೆಗೆ ಜೋಡಿಸುವ ಶಕ್ತಿ ದೀಪ್ ಜೋಶಿ.

ದೀಪ್ ಜೋಶಿಗೆ ಈ ಪ್ರಶಸ್ತಿ ಬಂದದ್ದು ಅವರನ್ನು ಬಲ್ಲವರಿಗೆಲ್ಲ ಸಮಾನ ಖುಷಿಯನ್ನು ನೀಡಿದೆ. ಆ ಸಾಫಲ್ಯತೆ ಅವರಿಗೆ ಸಹಜವಾಗಿಯೇ ಸಲ್ಲಬೇಕಾಗಿದೆ. ಅಭಿನಂದನೆಗಳು.



No comments: