ಅನಂತಮೂರ್ತಿಯವರಿಗೆ ಅಂತರರಾಷ್ಟ್ರೀಯ ಮ್ಯಾನ್ ಬುಕರ್ ಬಹುಮಾನ ಬರುವುದೋ ಇಲ್ಲವೋ ಎನ್ನುವ ಸಸ್ಪೆನ್ಸ್ ಈಗ ಮುಗಿದಿದೆ. ಮತ್ತೊಮ್ಮೆ ಅದು ಇಂಗ್ಲೀಷ್
ಮಹಾಮಾತೆಯ ಪಾಲಾಗಿದೆ. ಇದರ ಬಗ್ಗೆ ಅಲ್ಲಲ್ಲಿ
ಚರ್ಚೆ ನಡೆದಿದೆ.
ಅಂತರರಾಷ್ಟ್ರೀಯ ಮ್ಯಾನ್ ಬುಕರನ್ನು ಎರಡು ವರ್ಷಕ್ಕೊಮ್ಮೆ ಕೊಡಲಾಗುತ್ತದೆ. ಇದು ಅರವಿಂದ ಅಡಿಗರಿಗೆ
ಬಂದ ಮ್ಯಾನ್ ಬುಕರ್ ಗಿಂತ ಭಿನ್ನವಾದ ಬಹುಮಾನ. ಮ್ಯಾನ್ ಬುಕರ್ ಬಹುಮಾನವನ್ನು ಪ್ರತೀ ವರ್ಷ
ಕಾಮನ್ವೆಲ್ತ್ ಪ್ರಾಂತದಿಂದ ಇಂಗ್ಲೀಷಿನಲ್ಲಿ ಪ್ರಕಟಗೊಂಡ ಕೃತಿಗೆ ನೀಡಲಾಗುತ್ತದೆ. ಇಂಗ್ಲೀಷಿನಲ್ಲಿ
ಅಥವಾ ಇಂಗ್ಲೀಷ್ ಅನುವಾದದಲ್ಲಿ ಲಭ್ಯವಿರುವ ಯಾವುದೇ ರಾಷ್ಟ್ರದ ಲೇಖಕರ ಜೀವನಕಾಲದ
ಸಾಹಿತ್ಯಕೃಷಿಯನ್ನು ಗುರುತಿಸುತ್ತಾ ಈ ಬಹುಮಾನವನ್ನು ನೀಡಲಾಗುತ್ತದೆ.
ಈ ಹಿಂದೆ ಈ ಪ್ರಶಸ್ತಿ ಇಸ್ಮೇಲ್ ಕಾಡ್ರೆ (ಅಲ್ಬೇನಿಯಾ) ಚಿನುಆ ಅಚಿಬೆ (ನೈಜೀರಿಯಾ), ಆಲಿಸ್
ಮುನ್ರೋ (ಕೆನಡಾ) ಮತ್ತು ಫಿಲಿಪ್ ರಾಥ್
(ಅಮೇರಿಕಾ) ಇವರುಗಳಿಗೆ ನೀಡಲಾಗಿದೆ. ಈ
ವರ್ಷ ಅದು ಲಿಡಿಯಾ ಡೇವಿಸ್ ಪಾಲಾಗಿದೆ. ಐದು ಬಹುಮಾನಿತರಲ್ಲಿ ನಾಲ್ಕು ಜನ ಮೂಲತಃ ಇಂಗ್ಲೀಷಿನಲ್ಲಿ ತಮ್ಮ ಸಾಹಿತ್ಯ ಕೃಷಿಯನ್ನು
ನಡೆಸಿದ್ದಾರೆ. ಭಾರತದ ಮಹಾಶ್ವೇತಾದೇವಿ ಹಿಂದೆ ಈ ಬಹುಮಾನಕ್ಕೆ ಹೆಸರಿಸಲ್ಪಟ್ಟಿದ್ದರು.
ಆದರೆ ಆ ವರ್ಷ ಪ್ರಶಸ್ತಿಯನ್ನು ಆಲಿಸ್
ಮನ್ರೋಗೆ ಕೊಡಲಾಯಿತು. ಭಾರತೀಯ
ಸಂಜಾತರಾದ, ಆದರೆ ಇಂಗ್ಲೀಷಿನಲ್ಲಿ ಬರೆಯುವ ಸಲ್ಮಾನ್ ರಶ್ದೀ, ನೈಪಾಲ್, ರೋಹಿನ್ತನ್ ಮಿಸ್ತ್ರಿ
ಕೂಡಾ ಹಿಂದೆ ಈ ಪ್ರಶಸ್ತಿಗೆ ಹೆಸರಿಸಲ್ಪಟ್ಟಿದ್ದರು.
ಮೊದಲ ಬಾರಿ ಈ
ಪ್ರಶಸ್ತಿಯನ್ನು ಇಸ್ಮೇಲ್ ಕಾಡ್ರೆಗೆ ನೀಡಿದಾಗ ಹದಿನೆಂಟು ಜನರ ಪಟ್ಟಿಯಿತ್ತು.
ಆ ಪಟ್ಟಿಯಲ್ಲಿ ಐದು ಜನ ನೊಬೆಲ್ ವಿಜೇತರಿದ್ದರು, ಅದರ ಜೊತೆಗೆ ನಂತರದ
ವರ್ಷಗಳಲ್ಲಿ ನೊಬೆಲ್ ಬಹುಮಾನ ಪಡೆದ ಡಾರಿಸ್ ಲೆಸ್ಸಿಂಗ್ ಸಹ ಇದ್ದರು. ಇದೂ ಸಾಲದೆಂಬಂತೆ ಆಗಲೇ
ಬುಕರ್ ಪಡೆದಿದ್ದ ಇಬ್ಬರಿದ್ದರು. ಅಷ್ಟೂ ಜನ ಉತ್ತರ-ದಕ್ಷಿಣ ಅಮೇರಿಕ, ಯೂರೋಪ್, ಜಪಾನ್,
ಈಜಿಪ್ಟ್ ಮತ್ತು ಇಸ್ರೇಲ್ ದೇಶಗಳಿಗೆ ಸಂದವರಾಗಿದ್ದರು. ಒಂದು ರೀತಿಯಿಂದ ನೋಡಿದರೆ ಈ
ಪ್ರಶಸ್ತಿಯನ್ನು ನೊಬೆಲ್ ಪುರಸ್ಕಾರದಷ್ಟೇ ಘನತೆಯುಳ್ಳ ಪುರಸ್ಕಾರವನ್ನು ಮಾಡುವುದೇ ಆಯೋಜಕರ
ಇರಾದೆಯಾಗಿತ್ತೆನ್ನಿಸುತ್ತದೆ. ಆದರೆ ನೊಬೆಲ್ ಗೂ ಈ ಪುರಸ್ಕಾರಕ್ಕೂ ವ್ಯತ್ಯಾಸವೇ ಇಲ್ಲವಾದರೆ
ಹೇಗೆ?
ಎರಡನೆಯ ಬಾರಿಯ ವೇಳೆಗೆ ಹದಿನೆಂಟರ ಪಟ್ಟಿ ಹದಿನೈದಕ್ಕೆ ಇಳಿದಿತ್ತು. ಅದೇ ವರ್ಷ ನೊಬೆಲ್ ಪುರಸ್ಕಾರ ಪಡೆದ
ಡೋರಿಸ್ ಲೆಸ್ಸಿಂಗ್ ಹೆಸರು ಬಿಟ್ಟರೆ, ಬೇರಾವ ನೊಬೆಲ್ ಪುರಸ್ಕೃತರೂ ಇರಲಿಲ್ಲ. ಬಹುಶಃ ಐವರು
ನೊಬೆಲ್ ಪುರಸ್ಕೃತರನ್ನು ನೇಮಿಸಿ ಯಾರಿಗೂ ಬಹುಮಾನ ನೀಡದೇ ಬೇರೊಬ್ಬರಿಗೆ ನೀಡಿದ್ದರಿಂದ ಈ
ಪುರಸ್ಕಾರದ ಘನತೆಗೆ ಧಕ್ಕೆ ಬರಬಹುದೆಂದು ಆಯೋಜಕರು ಯೋಚಿಸಿದ್ದರೇ? ಆದರೆ ಎರಡನೆಯ
ಬಾರಿಗೆ ನಮಗೆ ಕಲವು ಸೂಕ್ಷ್ಮ ಬದಲಾವಣೆಗಳು ಕಾಣುತ್ತವೆ. ಈ ಬಾರಿ ಹದಿನೈದರ ಪಟ್ಟಿಯಲ್ಲಿ ಐದು ಜನ ಬುಕರ್ ಪುರಸ್ಕೃತರಿದ್ದರು. ಒಟ್ಟಾರೆ ಹತ್ತು ಜನ ಉತ್ತರ-ದಕ್ಷಿಣ ಅಮೆರಿಕ, ಯೂರೋಪಿಗೆ ಸಂದವರಾಗಿದ್ದರೆ ಇನ್ನೈದು ಜನ ಭಿನ್ನ
ಜಾಗಗಳಿಂದ ಬಂದ ಲೇಖಕರಾಗಿದ್ದರು – ಆಸ್ಟ್ರೇಲಿಯಾ, ಶ್ರೀಲಂಕಾ, ಭಾರತ (ರಶ್ದೀ), ಇಸ್ರೇಲ್ ಮತ್ತು
ನೈಜೀರಿಯಾ. ಈ ಬಾರಿ ಬಹುಮಾನ ನೈಜೀರಿಯಾದ ಚಿನುಆ ಅಚಿಬೆಗೆ ನೀಡಲಾಯಿತು. ಇಲ್ಲಿಯೂ ಬುಕರ್ ಮತ್ತು
ಬುಕರ್ ಆಫ್ ಬುಕರ್ಸ್ ಪ್ರಶಸ್ತಿ ಪಡೆದ ರಶ್ದೀಯನ್ನ, ಮಿಕ್ಕ ಬುಕರ್
ವಿಜೇತರನ್ನು ಬಿಟ್ಟು ಅಚಿಬೆಗೆ ಬಹುಮಾನ ಕೊಡುವುದರ ಮೂಲಕ ಬಹುಶಃ ಈ ಪ್ರಶಸ್ತಿ ತನ್ನ ವಿಭಿನ್ನ
ಛಾಪನ್ನು ಏರ್ಪಡಿಸಿಕೊಳ್ಳುವತ್ತ ಸಾಗಿತ್ತೇನೋ.
ಮೂರನೆಯ ಬಾರಿಗೆ ಹೆಸರಿಸಿದವರ ಪಟ್ಟಿ ಹದಿನಾಲ್ಕಕ್ಕೆ ಇಳಿಯಿತು.
ಪಟ್ಟಿಯಲ್ಲಿ ಆಗ್ಗೆ ನೊಬೆಲ್ ವಿಜೇತರಾಗಿದ್ದ ನೈಪಾಲ್ ಹೆಸರಿತ್ತು. ಎರಡು ಬಾರಿ ಬುಕರ್ ಪಡೆದಿದ್ದ
ಆಸ್ಟ್ರೇಲಿಯಾದ ಪಿಟರ್ ಕ್ಯಾರೀ ಇದ್ದರು. ಮತ್ತು ಮುಂದೆ ನೊಬೆಲ್ ಪಡೆಯಲಿದ್ದ ಮಾರಿಯಾ ವಾರ್ಗಾಸ್
ಯೋಸಾ ಇದ್ದರು. ಅದೇ ವರ್ಷದಲ್ಲಿ ಅಪ್ಪಟ ಭಾರತೀಯರಾದ ಮಹಾಶ್ವೇತಾ ದೇವಿಯವರೂ ಇದ್ದರು. ಮೂರನೆಯ
ಬಾರಿಗೆ ಭಾಷಾ ವೈವಿಧ್ಯವೂ, ದೇಶ ವೈವಿಧ್ಯವೂ ಈ ಪಟ್ಟಿಯಲ್ಲಿ ಕಾಣಿಸಲಾರಂಭಿಸಿತು. ಯೂರೋಪಿನಿಂದ
ಅನೇಕರು ಹೆಸರಿಸಲ್ಪಟ್ಟಿದ್ದರಾದರೂ ಹಿಂದೆ ಕಾಣಿಸಿರದ ಚೆಕ್, ಕ್ರೊಏಶಿಯಾದಂತಹ ದೇಶಗಳು ಕಾಣಿಸಿಕೊಂಡವು. ಕಡೆಗೂ ಪ್ರಶಸ್ತಿ ಲಭಿಸಿದ್ದು
ಕೆನಡಾದ ಆಲಿಸ್ ಮನ್ರೋಗೆ. ಈಕೆಗೂ ಹಿಂದೆ ಬುಕರ್/ನೊಬೆಲ್ ಬಂದಿರಲಿಲ್ಲ.
ಒಂದು ರೀತಿಯಲ್ಲಿ ನೊಬೆಲ್ ಅಥವಾ ಬುಕರ್ ಪುರಸ್ಕೃತರನ್ನು ನೇಮಿಸಿ
ತಿರಸ್ಕರಿಸುವ ಚಾಳಿಯಿಂದ ಹೊರಬಂದು ತನ್ನದೇ ವಿಶಿಷ್ಟ ವ್ಯಕ್ತಿತ್ವವನ್ನು ಈ ಪುರಸ್ಕಾರ
ಬಹುಮಾನಗಳಲ್ಲದೆಯೇ – ನೇಮಿಸುವ ಪ್ರಕ್ರಿಯೆಯಲ್ಲೂ ಕಂಡುಕೊಂಡಿತೇನೋ.
ನಾಲ್ಕನೆಯ ಆವೃತ್ತಿ ಬರುವ ವೇಳೆಗೆ ಈ ಪಟ್ಟಿ ಹದಿಮೂರಕ್ಕಿಳಿಯಿತು. ಪುರಸ್ಕಾರದಲ್ಲಿ ಯಾವುದೇ
ನೊಬೆಲ್ ಪುರಸ್ಕೃತರಾಗಲೀ ಬುಕರ ಪುರಸ್ಕೃತರಾಗಲೀ ಇರಲಿಲ್ಲ. ಇಬ್ಬರು ಲೇಖಕರ ಹೆಸರು ಹಿಂದೆ ಬುಕರ್
ಗೆ ಹೆಸರಿಸಲಾಗಿತ್ತಾದರೂ ಅವರಿಗೆ ಪುರಸ್ಕಾರ ಬಂದಿರಲಿಲ್ಲ. ಆದರೆ
ಜೀವಮಾನಕಾಲದ ಸಾಹಿತ್ಯ ಕೃಷಿಯನ್ನು ಪರಿಗಣಿಸುವಾಗ – ಒಂದೇ ವರ್ಷದ ಒಂದು ಕೃತಿಗೆ ಬಹುಮಾನ ನೀಡುವ
ಬುಕರ್ ಗಿಂತ ಭಿನ್ನ ಮಾಪನವಿರಬೇಕಾಗುತ್ತದೆ ಎಂಬುದನ್ನು ಆಯೋಜಕರು ಮನಗಂಡರೇನೋ. ಚೀನಾ ಮತ್ತು
ಲೇಬನನ್ ಗೆ ಸಂದ ಲೇಖಕರು ಇದ್ದರಾದರೂ ಹಚ್ಚಿನಂಶ ಮತ್ತೆ ಇಂಗ್ಲೀಷ್ ಕೇಂದ್ರಿತ
ಅಮೆರಿಕಾ-ಯೂರೋಪಿಗೆ ಸಂದವರೇ ಆಗಿದ್ದರು. ಮೊದಲಬಾರಿಗೆ ದಕ್ಷಿಣ ಅಮೇರಿಕದಿಂದ ಯಾರೂ ಹೆಸರಿಸಲ್ಪಟ್ಟಿರಲಿಲ್ಲ. ಆ ಬಾರಿಗೆ ಕಡೆಗೂ ಬಹುಮಾನ ಪಡೆದವರು ಅಮೆರಿಕದ ಫಿಲಿಪ್ ರಾಥ್.
ಈಗ ಐದನೆಯ ಆವೃತ್ತಿಯ ಪಟ್ಟಿಯಲ್ಲಿ ಹತ್ತು
ಜನರ ಹೆಸರಿದೆ. ಯಾರೂ ನೊಬೆಲ್-ಬುಕರ್ ಗಳನ್ನು ಪಡೆದವರೂ, ಹೆಸರಿಸಲ್ಪಟ್ಟವರೂ ಅಲ್ಲ. ಅಮೇರಿಕದಿಂದ ಮಾತ್ರ ಇಬ್ಬರು ಲೇಖಕರು ಹೆಸರಿಸಲ್ಪಟ್ಟಿದ್ದರೆ ಮಿಕ್ಕವರು, ಭಾರತ, ಪಾಕಿಸ್ತಾನ, ರಷ್ಯಾ, ಚೀನಾ, ಇಸ್ರೇಲ್, ಫ್ರಾನ್ಸ್,
ಸ್ವಿಟ್ಜರ್ಲೆಂಡ್, ರಷ್ಯಾ ದೇಶಗಳಿಗೆ ಸಂದವರು. ಹೀಗಾಗಿ ತೀರ್ಪುಗಾರರಿಗೆ ಇದು ಸ್ವಲ್ಪ
ಕಷ್ಟದ ಕೆಲಸವೇ ಆಗಿರಬೇಕು. ಒಂದೇ ರೀತಿಯ ಅನೇಕರು ಬಂದಾಗ ಅವರಲ್ಲಿ ಭಿನ್ನರನ್ನು
ಹೆಕ್ಕುವುದು ಸುಲಭ, ಆದರೆ ಈ ಪಟ್ಟಿಯಲ್ಲಿ ಎಲ್ಲರೂ ತಮ್ಮ ತಮ್ಮ ವಿಶಿಷ್ಟ ಬರಹದ ಶೈಲಿಯನ್ನು
ಹೊಂದಿರುವುದಲ್ಲದೇ, ವಿಶಿಷ್ಟ ಸಂಸ್ಕೃತಿಗಳನ್ನೂ ಬಿಂಬಿಸುತ್ತಿದ್ದಾರೆ.
ಈ ಎಲ್ಲದರ ನಡುವೆ ಮೊದಲ ಬಾರಿಗೆ ಕನ್ನಡ ಮತ್ತು ನಮ್ಮ ಸಾಕ್ಷಿಪ್ರಜ್ಞೆಯಾಗಿರುವ ಅನಂತಮೂರ್ತಿಯವರೂ ಇದ್ದರು.
ಈ ಬಾರಿ ಹೆಸರಿಸಲ್ಪಟ್ಟಿರುವ ಮತ್ತೊಬ್ಬ ಲೇಖಕ ಪಾಕಿಸ್ತಾನದ ಇಂತಿಜಾರ್ ಹುಸೇನ್. ಅವರಿಗೂ ಒಂದು ಭಾರತದ ನಂಟಿದೆ –
ಅದೇನೆಂದರೆ, ಅವರನ್ನು ಉರ್ದುವಿನಿಂದ ಅನುವಾದಿಸಿರುವವರು ಭಾರತೀಯರೇ ಆದ ಅಲೋಕ ಭಲ್ಲಾ. ಇಂತಿಜಾರ್
ಹುಸೇನರ ಪ್ರಿಯ ಸಾಹಿತ್ಯದಲ್ಲಿ ಬುದ್ಧ ಮತ್ತು ಜಾತಕ ಕತೆಗಳು ಸೇರಿವೆ! (ಈ
ಪ್ರಶಸ್ತಿಯನ್ನ ಗೆದ್ದ ಲೇಖಕರು ತಮ್ಮ ಕೃತಿಗಳನ್ನು ಅನುವಾದಿಸಿದ ತಮ್ಮ ಪ್ರಿಯ ಅನುವಾದಕರನ್ನು
ಹೆಸರಿಸಬಹುದು. ಲೇಖಕರು ಹೆಸರಿಸಿದ ಅನುವಾದಕರಿಗೂ ಒಂದು ಬಹುಮಾನವಿದೆ!)
ಹತ್ತು ಲೇಖಕರಲ್ಲಿ
ಅನಂತಮೂರ್ತಿಯವರನ್ನೊಳಗೊಂಡು ಏಳು ಜನ ಲಂಡನ್ನಿಗೆ ಪ್ರಯಾಣ ಬೆಳೆಸಿದ್ದರು.
ಮೊನ್ನೆ ಸಂಜೆಯ ಕಾರ್ಯಕ್ರಮದಲ್ಲಿ ತಮ್ಮ ಕೃತಿಗಳ ಆಯ್ದ ಭಾಗಗಳನ್ನು
ಓದುವ ಕಾರ್ಯಕ್ರಮವೂ ಇತ್ತು. ಮೊದಲಿಗೆ ಕನ್ನಡವನ್ನು ಓದಿ ಆನಂತರ ಅದರ ಇಂಗ್ಲೀಷ್
ಅನುವಾದವನ್ನು ಓದಲಾಯಿತೆಂದು ಅನಂತಮೂರ್ತಿಯವರು ಹೇಳಿದ್ದಾರೆ. ಬಹುಮಾನ ಬರಲೆಂದು ಹಾರೈಸಿ ಬರೆದ
ಈಮೈಲಿಗೆ ಅನಂತಮೂರ್ತಿಯವರು ಹೀಗೆ ಪ್ರತಿಕ್ರಿಯಿಸಿದರು: “ಬಹುಮಾನ ಬಂದರೆ ಸಂತೋಷವೇ, ಆದರೆ ಕನ್ನಡ ವಿಶ್ವದ ಎಣಿಕೆಯಲ್ಲಿ
ಬಂದಿತಲ್ಲವೇ? ಅದೊಂದು ನನ್ನ ಕೊನೆಗಾಲದ ಸಾಧನೆ...”
ಈ ಬಹುಮಾನ ಬಂದಿದ್ದರೆ ಅನಂತಮೂರ್ತಿಯವರ ಕೀರ್ತಿಯೇನೂ ಹೆಚ್ಚಾಗುತ್ತಿರಲಿಲ್ಲ, ಅವರಿಗಿರುವ ಹೆಸರೂ,
ಗೌರವವೂ, ಮಾನ್ಯತೆಯೂ ಈ ಒಂದು ಬಹುಮಾನದಿಂದ ವೃದ್ಧಿಯಾಗುವುದಿಲ್ಲ. ಆದರೆ ಅವರನ್ನು ಹೆಸರಿಸಿದ್ದರಿಂದ ಕನ್ನಡ ಭಾಷೆ, ಸಾಹಿತ್ಯ ಚರ್ಚೆಗೆ ಒಳಗಾಗುತ್ತದೆ. ಅದೇ ನಮಗೆ
ಸಿಗುವ ಲಾಭ. ಇದೇ ಅನಂತಮೂರ್ತಿಯವರ ಆಲೋಚನೆಯೂ ಸಹ.
ಮೊನ್ನೆ ಕನ್ನಡದ ಓದು ಆಯಿತು. ಅದರ ಜೊತೆಗೆ ಕನ್ನಡದ ಮಾತು ಹೇಗೆ
ಚರ್ಚೆಯಾಗುತ್ತಿದೆ ಎನ್ನುವ ಹೊಳಹು ಇಲ್ಲಿದೆ. ಈ ಬಾರಿ ಹೆಸರಿಸಲ್ಪಟ್ಟವರನ್ನೆಲ್ಲಾ ಆಯೋಜಕರು ಕೇಳಿದ ಐದು ಪ್ರಶ್ನೆಗಳಲ್ಲಿ ನಿಮ್ಮ ಸಾಹಿತ್ಯಿಕ ಹೀರೋಗಳು ಯಾರು
ಎನ್ನುವ ಪ್ರಶ್ನೆಗೆ ಅನಂತಮೂರ್ತಿಯವರು ಪಂಪ, ಕುಮಾರವ್ಯಾಸ, ಬಸವ, ಅಲ್ಲಮ, ಬೇಂದ್ರೆ, ಅಡಿಗ,
ಶಿವರಾಮ ಕಾರಂತರನ್ನು ಹೆಸರಿಸಿದ್ದರು. ಹೀಗೆ ಅನಂತಮೂರ್ತಿಯವರ ಮೂಲಕ ನಮ್ಮ ಮಿಕ್ಕ ಕನ್ನಡ ದಿಗ್ಗಜರ
ಬಗ್ಗೆ ಕುತೂಹಲ ಇನಿತಾದರೂ ಬೆಳೆದು ಕನ್ನಡೇತರರೂ ಕನ್ನಡ ಸಾಹಿತ್ಯವನ್ನು ಓದುವಂತಾದರೆ ಅದೇ
ಇದರಿಂದ ಕನ್ನಡಕ್ಕಾಗುವ ಲಾಭ. ಈ ಕಾರಣದಿಂದ ನಮಗೆ, ಕನ್ನಡಿಗರಿಗೆ ಈ ಪ್ರಶಸ್ತಿಯ ಪ್ರಕ್ರಿಯೆ ಮುಖ್ಯವಾಗುತ್ತದೆ.
ತಮ್ಮ ಅನಾರೋಗ್ಯದ ನಡುವೆಯೂ
ಅನಂತಮೂರ್ತಿಯವರು ಈ ಸಮಾರಂಭಕ್ಕೆ ಹಾಜರಾಗಲು ಲಂಡನ್ನಿಗೆ ಹೋಗಿದ್ದರು.
ಪ್ರಶಸ್ತಿಯು ಬೇರೊಬ್ಬರ ಪಾಲಿಗೆ ಸಂದಿದೆ. ಅದರಿಂದ ದುಃಖವೇನೂ ಇಲ್ಲ!
ಫಿಲಿಪ್ ರಾಥ್ ಬಹುಮಾನ ಪಡೆಯುವ ಮುನ್ನ ಮೂರು ಬಾರಿ ನಿಯಾಮಕಗೊಂಡಿದ್ದರು. ಒಂದೇ ವರ್ಷದಲ್ಲಿ (2005) ಈಗ ನೊಬೆಲ್ ಪಡೆದಿರುವ ಆರು ಮಂದಿ ಪಟ್ಟಿಯಲ್ಲಿದ್ದರೂ
ಯಾರಿಗೂ ಈ ಬಹುಮಾನ ಗಿಟ್ಟಲಿಲ್ಲ. ಹೀಗಾಗಿ, ಬಹುಮಾನ ಬರದಿರುವುದು ಒಂದು ದೊಡ್ಡ ವಿಷಯವೇನೂ
ಅಲ್ಲ. ಬಹುಮಾನಕ್ಕೆ ನಿಯಾಮಕ ಗೊಂಡಿರುವುದೇ ಕನ್ನಡಕ್ಕೆ, ಕನ್ನಡದ ಅಗ್ರ ಬರಹಗಾರರಿಗೆ ಸಿಕ್ಕಿರುವ
ಮಾನ್ಯತೆ.
ಈ ಬೆಟ್ಟಿಂಗ್, ಐಪಿಎಲ್,
ಸಚಿನ್ ನಿವೃತ್ತಿ, ಸಿದ್ದರಾಮಯ್ಯನವರ ಸಂಪುಟದ ದುಃಖ ದುಮ್ಮಾನಗಳ ನಡುವೆ ಅನಂತಮೂರ್ತಿಯವರ ಈ ಸುದ್ದಿ ಭಿನ್ನ ಚರ್ಚೆಯನ್ನೇ ಹುಟ್ಟುಹಾಕಿದೆ.
No comments:
Post a Comment