Sunday, June 22, 2008

ಚಿತ್ತಾಲರೊಂದಿಗೆ ಮಾತುಕತೆ



ಬಹಳ ದಿನಗಳ ನಂತರ ಮುಂಬೈನಲ್ಲಿ ಯಶವಂತ ಚಿತ್ತಾಲರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಚಿತ್ತಾಲರ ಉತ್ಸಾಹ, ಲವಲವಿಕೆ ಮತ್ತು ಶಿಸ್ತಿನಲ್ಲಿ ಒಂದಿನಿತಾದರೂ ನನ್ನಲ್ಲಿದ್ದಿದ್ದರೆ, ಇನ್ನಷ್ಟು ಹೆಚ್ಚು ಬರೆಯುತ್ತಿದ್ದೆನೋ ಏನೋ. ಪ್ರತಿ ಹೊಸ ಬರವಣಿಗೆಗೆ ಒಂದು ಹೊಸ ನೋಟ್ ಪುಸ್ತಕ, ಮುತ್ತಿನಂತಹ ಕೈಬರಹ, ಚಿತ್ತಿಲ್ಲಿದ ಬರವಣಿಗೆ.. ಜೊತೆಗೆ ಬರಯುತ್ತಿರುವ ಕತೆ, ಪುಸ್ತಕ ಅಲ್ಲದೇ ಬರಯಲಿರುವ ಇನ್ನೂ ನಾಲ್ಕು ಹೊಸ ಪುಸ್ತಕಗಳ ಬಗ್ಗೆ ಉತ್ಸಾಹದ ಮಾತು. ಬಹುಶಃ ತಮ್ಮ ಬರಹವನ್ನು ಇಷ್ಟು ಗಂಭೀರವಾಗಿ, ಇಷ್ಟು passionateಆಗಿ ಕೈಗೊಳ್ಳುವ ಬೇರೊಬ್ಬ ಬರಹಗಾರರು ಸಮಕಾಲೀನರಲ್ಲಿ ಇಲ್ಲ.

ಚಿತ್ತಾಲರು ಯಾವುದನ್ನೂ ಲೈಟಾಗಿ ತೆಗೆದುಕೊಳ್ಳುವುದಿಲ್ಲ; ಎಲ್ಲವನ್ನೂ ಒಂದು ಪದ್ಧತಿಯ ಪ್ರಕಾರ ಮಾಡುತ್ತಾರೆ. ಆದ್ದರಿಂದಲೇ ನಾನು ಹೋಗುವುದಕ್ಕೆ ೩ ದಿನ ಮುನ್ನವೇ ಫೋನ್ ಮಾಡಿ ಮುಂಬೈಗೆ ಬರುತ್ತಿರುವುದಾಗಿ ತಿಳಿಸಿದ್ದೆ. ಆದರೆ ಬಹುಶಃ ತಾರೀಖು ತಿಳಿಸುವಾಗ ತಪ್ಪು ಹೇಳಿದೆನೇನೊ.. ಮುಂಬೈ ತಲುಪಿ ಏರ್ ಪೋರ್ಟ್ ಇಂದ ಪೋನ್ ಮಾಡಿದಾಗ "ಯಾಕೆ ನಿನ್ನೆ ಬರಲಿಲ್ಲ" ಎಂದು ಕೇಳಿದರು. ಕಡೆಗೂ ಅವರ ಮನೆ ತಲುಪಿ ಇಡೀ ಒಂದೂವರೆ ಘಂಟೆ ಹರಟೆ ಹೊಡೆದು, ಅದ್ಬುತವಾದ ಚಕ್ಕುಲಿ, ಚಹ ಚಪ್ಪರಿಸಿ ಬಂದದ್ದಾಯಿತು.

ಅಲ್ಲಿಂದಲೇ ಮುಕುಂದ ಜೊಶಿಯವರಿಗೆ ಫೋನ್ ಮಾಡಿದೆವು. ವರ್ಷಾನುಗಟ್ಟಲೆಯ ನಂತರ ಮುಕುಂದ ಜೋಶಿಯ ಜೊತೆ ಮಾತಾಡುತ್ತಿದ್ದೆ. ಹಲೋ ಎನ್ನುವ ವೇಳೆಗೇ ಮುಕುಂದ ನನ್ನ ಧ್ವನಿ ಕಂಡುಹಿಡಿದ್ದನ್ನು ಕೇಳಿ ನಾನು ಅವಾಕ್ಕಾದೆ. ದೂರದೂರಿನಲ್ಲಿರುವ ನಮಗೆಲ್ಲಿರಿಗೂ ಒಂದೇ ತೊಂದರೆ.. ಅಲ್ಲಿ ಕಾರ್ನಾಟಕದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಅರಿವೇ ಇರುವುದಿಲ್ಲ. ಒಂದಾನೊಂದೊ ಕಾಲದಲ್ಲಿ, ನಾನು ಬೆಂಗಳೂರಿಗನಾಗಿದ್ದಾಗ - ಜಯಂತ ಕಾಯ್ಕಿಣಿಯ ಪುಸ್ತಕ ದಗಡೂ ಪರಬನ ಅಶ್ವಮೇಧ ಪ್ರಕಟಿಸಿ, ಅವನ ೨೫ ಕಾಪಿಗಳನ್ನು ಹೊತ್ತು ಮುಲುಂದಿನ ಅವನ ಮನೆಗೆ ಹೋದದ್ದು, ಅದೇ ಯಾತ್ರೆಯಲ್ಲಿ, ಮುಂಬೈನಲ್ಲಿ ಪರಿಚಯವಾದ ಅನೇಕ ಗೆಳೆಯರ ಬಗ್ಗೆ ನನಗೆ ಇದ್ದಕ್ಕಿದ್ದಂತೆ ನೆನಪಾಯಿತು.... ನಾಗರಾಜ ಹುಯಿಲಗೋಳ, ಉಮಾ ರಾವ್, ಮುಕುಂದ, ಮಾರುತೀ ಶಾನಭಾಗ, ಹಾಗೂ ಜಹಂಗೀರ್ ಆರ್ಟ್ ಗ್ಯಾಲರಿಯ ಹೊರಗೆ ಆರ್ಟ್ ಪ್ಲಾಜಾ ನಡೆಸುತ್ತಿದ್ದ ಕಮಲಾಕ್ಶ ಶೆಣೈ.. ಆಗ ಬೆಂಗಳೂರಿನ ಕೊಂಡಿಯಾಗಿ ನಾನು ಅಲ್ಲಿಗೆ ಹೋಗಿದ್ದೆ. ಆದರೆ ಈಗ ಪರಿಸ್ಥಿತಿಯೇ ಬೇರೆ. ನನಗೆ ಬೆಂಗಳೂರಿನ ಸುದ್ದಿಯನ್ನು ಕೊಡಲು ಜಯಂತನೇ ಬೇಕು.. ಇಲ್ಲಿ ಅಹಮದಾಬಾದಿನ ಪರಿಸ್ಥಿತಿಯೇ ಬೇರೆ. ಮುಂಬೈನಲ್ಲಿ ಕನ್ನಡ ಲೇಖಕರ ಒಂದು ಸಮುದಾಯವಿದೆ. ಇಲ್ಲಿ ಅಂತಹ ಗೆಳೆಯರ ಗುಂಪನ್ನು ಬೆಳೆಸಿಕೊಳ್ಳಲು ನನಗೆ ಸಾಧ್ಯವಾಗಿಯೇ ಇಲ್ಲ. ಹೀಗಾಗಿ ಒಂದು ರೀತಿಯ ಅಸೂಯೆ ನನಗೆ ಮುಂಬಯಿಯ ಲೇಖಕ ಸಮುದಾಯದ ಬಗ್ಗೆ ಇದ್ದೇ ಇದೆ.

ಚಿತ್ತಾಲರ ಜೊತೆ ಮಾತುಕತೆ ಮುಂದುವರೆದಂತೆ ನಾನು ಮಾರುತೀ ಶ್ಯಾನುಭಾಗರ ಬಗ್ಗೆ ಕೇಳಿದೆ...

"ಅರೇ ನಿಮಗೆ ಗೊತ್ತಿಲ್ಲವೇ, ಅವರು ತೀರಿಕೊಂಡರಲ್ಲಾ.." ಎಂದರು. ಮಾರುತೀ ಕ್ಯಾನ್ಸರಿನಿಂದ ನರಳುತ್ತಿದ್ದದ್ದು ನನಗೆ ಗೊತ್ತಿತ್ತು. ಆದರೆ ತೀರಿಕೊಂಡದ್ದು ತಿಳಿದಿರಲ್ಲಿಲ್ಲ... ನನ್ನ ಐದನೆಯ ಆಯಾಮ ಕಥೆ ಓದಿ ಬಹಳ ಉದ್ದ ಪತ್ರ ಬರೆದು ಪ್ರೊತ್ಸಾಹಿಸಿದ್ದ ಮಾರುತೀ ಶ್ಯಾನಭಾಗರು ಇದ್ದಕ್ಕಿದ್ದಂತೆ ಇಲ್ಲವೆಂಬ ಸುದ್ದಿಯಿಂದ ನನಗೆ ಚೇತರಿಸಿಕೊಳ್ಳಲು ಇನ್ನೂ ಸಮಯ ಹಿಡಿಯುತ್ತದೆ. ಅಮೆರಿಕದಿಂದ ಎಲ್ಲರ ಕಣ್ತಪ್ಪಿಸಿ ಬಟ್ಟೆಯ ಮಧ್ಯ ಹುದಿಗಿಸಿ ತಂದಿದ್ದ ಭಾರತದಲ್ಲಿ ಬ್ಯಾನಾಗಿದ್ದ Satanic Verses ನ ಪ್ರತಿಯೊಂದನ್ನು ಯಾರೋ ಮಾರುತೀಗೆ ನೀಡಿದ್ದನ್ನು ಹೆಮ್ಮೆಯಿಂದ ಪ್ರದರ್ಶಿಸಿದ್ದ ಸಂಭ್ರಮವನ್ನು ನಾನು ಇನ್ನೂ ಮರೆತಿಲ್ಲ....

ಮಾರುತಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹಳ್ಳಿಯಿಂದ ಬಂದಿದ್ದ ಪುಟ್ಟ ಹುಡುಗನ ಅಕ್ಕನೋ ತಂಗಿಯೋ ಮುಂಬೈಯಿಯ ಮತ್ತೊಂದು ತುದಿಯಲ್ಲಿರುತ್ತಿದ್ದು, ಅಂದು ನಾವು ಅವರ ಮನೆಗೆ ಹೋದಾಗ ಆ ಸಹೋದರ ಸಹೋದರಿಯರ ಭೇಟಿಗೆ ತಯಾರಿ ನಡಯುತ್ತಿದ್ದದ್ದು ನೆನಪಾಯಿತು.... ಅದೇ ಮುಂದೆ ಜಯಂತನ "ಹಾಲಿನ ಮೀಸೆ" ಕಥೆಗೆ ಪ್ರೇರಕವಾಗಿತ್ತೆಂದು ನನ್ನ ನೆನಪು.....

ಚಿತ್ತಾಲರ ಮನೆಗೆ ಭೇಟಿ ನನ್ನನ್ನು ಮತ್ತೆ ಕಥೆಗಳ ಅದ್ಭುತಲೋಕಕ್ಕೆ ಕರೆದೊಯ್ಯಿತು... ಹಳೆಯ ನನಪುಗಳನ್ನು ತಾಜಾ ಮಾಡಿತು.. ನಮ್ಮ ಜೀವನದಲ್ಲಿ ಓಡಾಡಿಕೊಂಡಿದ್ದ ವ್ಯಕ್ತಿಯೊಬ್ಬರನ್ನು ನೆನಪಾಗಿಸಿಬಿಟ್ಟಿತು..

ಹೈದರಾಬಾದಿನಲ್ಲಿ ಒಮ್ಮೆ ಅನಂತ ರಾವ್ ಹೇಳಿದ್ದರು...." ಲಿಖೋ ಪ್ಯಾರೆ ಲಿಖೋ.. ಕಲ್ ತಕ್ ಕಪಟರಾಳ್ ಸಾಬ್ ಥೆ, ಆಜ್ ನಹೀಂ ಹೈ. ತುಮ್ಹಾರಾ ಭೀ ಕ್ಯಾ ಭರೋಸಾ?.. ಲಿಖೋ." ಬಹುಶಃ ಹೆಚ್ಚು ಬರೆಯಬೇಕೇನೋ...

No comments: