ಕೆಲವು ವಾರಗಳ ಹಿಂದೆ ಶೇಖರ್ ಪೂರ್ಣ ನನ್ನನ್ನು ಸಂಪರ್ಕಿಸಿ ಕೆ.ವಿ.ಸುಬ್ಬಣ್ಣನವರ ಬಗ್ಗೆ ಕನ್ನಡ ಸಾಹಿತ್ಯ.ಕಾಂ ಗಾಗಿಒಂದು ಲೇಖನವನ್ನು ಬರೆದುಕೊಡಲು ಹೇಳಿದರು. ಆದರೆ ಇದ್ದಕ್ಕಿದ್ದ ಹಾಗೆ ಸುಬ್ಬಣ್ಣನವರ ಬಗ್ಗೆ ನನ್ನನ್ನು ಯಾಕೆ ಬರಯಲು ಕೇಳಿದರೆಂದು ಆಗ ನನಗೆ ಅರ್ಥವಾಗಲಿಲ್ಲ. ಅಹಮದಾಬಾದಿನಲ್ಲಿ ಕೂತಿದ್ದ ನನಗೆ ಸುಬ್ಬಣ್ಣನವರು ತೀರಿಕೊಂಡದ್ದು ತಿಳಿದೇ ಇರಲಿಲ್ಲ. ಹಿಂದಿನ ನನ್ನ ಬರಹದಲ್ಲಿ ನಾನು ಹೇಳಿದ್ದಂತೆ, ಕರ್ನಾಟಕದಿಂದ ದೂರವಾಗಿ ಒಂಟಿಯಾಗಿ ಇರುವುದರ ಫಲಿತವೆಂದರ ಇಂಥಹ ಸುದ್ದಿಗಳು ನಮಗೆ ಒಮ್ಮೊಮ್ಮೆ ತಡವಾಗಿ ತಲುಪುತ್ತದೆ. ಯಾಕೆ ಲೇಖನ ಕೇಳಿದರಂದು ಯೋಚಿಸದಯೇ ನಾನು ಸಾಧ್ಯವಾದರೆ ಬರೆದು ಕೊಡುತ್ತೇನೆ ಎಂದಗು ಒಪ್ಪಿಕೊಂಡೆ. ಆದರೆ ಸಮಯಕ್ಕೆ ಬರೆಯಲಾಗಲಿಲ್ಲ. ಆದರೂ ಅಪ್ಪಟ ಬೆಂಗಳೂರಿಗನಾಗಿ ಸುಬ್ಬಣ್ಣನವರೊಡನೆ ಮಾತನಾಡದೆಯೇ, ಹೆಗ್ಗೋಡಿಗೆ ಒಂದು ಬಾರಿ ಕೂಡಾ ಹೋಗದೇ ಇರುವ ನಾನು ಅವರ ಬಗ್ಗೆ ಬರೆಯಲು ಹೇಗೆ ಒಪ್ಪಿಕೊಂಡೆ ಅಂತ ನನಗೇ ಆಶ್ಚರ್ಯವಾಯಿತು. ಆದರೆ ನನಗೆ ತಿಳಿದದ್ದು ಇಷ್ಟು - ನಾನು ಪ್ರತಿಸ್ಪಂದಿಸುತ್ತಿದ್ದದ್ದು ಸುಬ್ಬಣ್ಣ ಎಂಬ ವ್ಯಕ್ತಿಗಲ್ಲ, ಸುಬ್ಬಣ್ಣ ಎಂಬ ವಿಚಾರಧಾರೆಯ ಕ್ರಮಕ್ಕೆ.
ನನಗೆ ಸುಬ್ಬಣ್ಣನವರ ಪರಿಚಯ ಇಲ್ಲದಿರುವುದಕ್ಕೆ, ಹೆಗ್ಗೋಡಿಗೆ ನಾನು ಹೋಗದಿರುವುದಕ್ಕೆ ಯಾರೂ ಕಾರಣರಲ್ಲ. ಎಲ್ಲಕ್ಕೂ ಒಂದು ಪರಿಸ್ಥಿತಿ ಒದಗಿ ಬರಬೇಕು, ಅದರ ಅದೃಷ್ಟ ನನಗಿರಲ್ಲಿಲ್ಲ ಅಷ್ಟೆ. ಆದಮಾತ್ರಕ್ಕೆ ಸುಬ್ಬಣ್ಣ ಎಂಬ ವಿಚಾರದಿಂದ ಕನ್ನಡಿಗರು ಎಂದೂ ದೂರವಾಗುವುದಕ್ಕೆ ಸಾಧ್ಯವಿಲ್ಲ. ಕನ್ನಡ ಓದು/ಬರಹಕ್ಕೆ ಸ್ವಲ್ಪಮಟ್ಟಿಗೆ ಹೊರಗಿನವನಾದ ನನಗೆ - ಸಾಹಿತ್ಯದ ಮೊದಲ ಪಾಠಗಳು ಅಕ್ಷರ ಪ್ರಕಾಶನದಿಂದ ದೊರತವು. ನಾನು ಸ್ಕೂಲಿನಲ್ಲಿ ಕಲಿತದ್ದು ಸಂಸ್ಕೃತ ಮತ್ತು ಇಂಗ್ಲಿಷ್. ಕಾಲೇಜಿಗೆ ಬರುವ ವೇಳೆಗೆ ಕಲಿತಿದ್ದ ಒಂದಿಷ್ಟು ಕನ್ನಡವೂ ಮರೆಯುವ ಸ್ಥಿತಿಯಲ್ಲಿದ್ದಾಗ ನನ್ನನ್ನು ತಿರುಮಲೇಶರ (ಮುಖವಾಡಗಳು, ವಠಾರ, ಮುಖಾಮುಖಿ) ಕಾವ್ಯಕ್ಕೆ ಪರಿಚಿಯಿಸಿದವರು ಕಾಲೇಜಿನ ಕನ್ನಡ ಮೇಷ್ಟ್ರು ರಾಮರಾವ್ ಕುಲಕರ್ಣಿಯವರು. ಕ್ರಮಕ್ರಮವಾಗಿ ಕನ್ನಡ ಪುಸ್ತಕಗಳನ್ನು ಓದುತ್ತಾ ಹೋದಂತೆ ಅಕ್ಷರ ಪ್ರಕಾಶನದ ಹೆಸರು ನನ್ನ ಮನಸ್ಸಿನಲ್ಲಿ ಸ್ಥಾಯಿಯಾಗುತ್ತಾ ಹೋಯಿತು. ಅಕ್ಷರ ಪ್ರಕಾಶನದ ಪುಸ್ತಕಗಳೆಂದರೆ ಮನಸ್ಸಿಗೆ ನಾಲ್ಕಾರು ವಿಚಾರಗಳು ಬರುತ್ತಿದ್ದವು:
- ಬೇರೆ ಯಾರೂ ಪ್ರಕಟಿಸಲು ಸಾಧ್ಯವಾಗದಂತಹ ಪುಸ್ತಕಗಳನ್ನು ಅವರು ಹೊರತರುತ್ತಿದ್ದರು (ಅಂದರೆ, ಯಾವುದು ಒಳ್ಳೆಯ ಸಾಹಿತ್ಯವಾಗಬಹುದೆಂಬ ವಿಚಕ್ಷಣಾ ವಿವೇಕ ಅವರಲ್ಲಿತ್ತು)
- ಬೇರೆ ಯಾರೂ ಪ್ರಕಟಿಸಲು ಒಪ್ಪದಂತಹ ಪುಸ್ತಕಗಳ್ಳನ್ನು ಅವರು ಹೊರತರುತ್ತಿದ್ದರು (ಅಂದರೆ, ಆ ಪುಸ್ತಕದ ಮೇಲೆ ಹಾಕಿದ ಹಣ ವಾಪಸ್ಸು ಬರುತ್ತದೆಯೋ ಇಲ್ಲವೋ ಎಂಬ ಪರಿವೆ ಅಕ್ಷರ ಪ್ರಕಾಶನಕ್ಕಿದ್ದಂತಿರಲಿಲ್ಲ).
- ಪುಸ್ತಕ ಪ್ರಕಟಿಸುವುದು ಮುಖ್ಯವೇ ಹೊರತು ಅದನ್ನು ಮಾರಾಟ ಮಾಡುವ ಪ್ರಕ್ರಿಯೆ ಅಷ್ಟು ಮುಖ್ಯವಾಗಿ ಅವರಿಗೆ ಕಂಡಂತಿರಲಿಲ್ಲ. ಹೀಗಾಗಿ ಪುಸ್ತಕದ ಅಚ್ಚು ಮುಖಪುಟ ಇತ್ಯಾದಿ ಅಷ್ಟಕಷ್ಟೆ ಆಗಿರುತ್ತಿತ್ತು.
- ಅವರ ಪುಸ್ತಕಗಳು ಎಲ್ಲ ಪುಸ್ತಕದಂಗಡಿಗಳಲ್ಲಿ ದೊರಕುತ್ತಿರಲ್ಲಿಲ್ಲ - ಅದನ್ನು ಪಡೆಯಬೇಕೆಂದವರು - ಸ್ವಲ್ಪ ಹೆಚ್ಚಿನ ಪ್ರಯತ್ನ ಮಾಡಬೇಕಿತ್ತು (ದೇವರನ್ನು ಪಡೆಯಲು ಭಕ್ತಾದಿಗಳು ನಾನಾ ತೊಂದರೆ ಪಡುವಂತೆ).
- ಅಕ್ಷರ ಪ್ರಕಾಶನದಲ್ಲಿ ಪ್ರಾರಂಭಿಸಿದ ಅನೇಕ ಲೇಖಕರು ಬೇರೆ ಪ್ರಕಾಶಕರನ್ನು ಹಿಡಿದು ಹೊರಟುಬಿಡುತ್ತಿದ್ದರು, ಆದರೆ ಅಕ್ಷರ ಪ್ರಕಾಶನದ ಪುಸ್ತಕ ಪ್ರಕಾಶನದ ಚಟುವಟಿಕೆ ಎಂದಿಗೂ ಕಡಿಮೆಯಾಗಲಿಲ್ಲ.
- ಹೀಗಾಗಿ ಅಕ್ಷರ ಪ್ರಕಾಶನದವರ ಪುಸ್ತಕಗಳ ಯಾದಿಯಲ್ಲಿ ಹೆಚ್ಚು ಕವಿತೆಗಳ ಸಂಕಲನ, ನಾಟಕ, ಕಥೆ, ವಿಮರ್ಶೆ- ವಿಚಾರಧಾರೆ, ಮತ್ತು ಕಟ್ಟ ಕಡೆಯದಾಗಿ ಕಾದಂಬರಿಗಳನ್ನು ಕಾಣಬಹುದು ಅಂತ ನನಗನ್ನಿಸುತ್ತದೆ.
ಮಾರಾಟ, ಹಣದ ಬಗ್ಗೆ ಅಷ್ಟು ಪರಿವೆಯಿಲ್ಲದ ಹೊಸ ಲೇಖಕರಿಗೆ ಅಕ್ಷರ ಪ್ರಕಾಶನದಿಂದ ಪುಸ್ತಕ ಪ್ರಕಟವಾಯಿತೆಂದರೆ ಅದಕ್ಕೆ "ಸಹಿತ್ಯಿಕ ಗುಣಮಟ್ಟ"ದ ಒಂದು ಛಾಪು ಬಿದ್ದಂತೆಯೇ ಆಗಿತ್ತು. (ಮಾರಾಟ, ಹಣದ ಪರಿವೆಯಿದ್ದ ಕನ್ನಡ ಲೇಖಕರನ್ನು ಹುಡುಕುವ ಪ್ರಯಾಸಕ್ಕೆ ಕೈ ಹಚ್ಚದಿರುವುದೇ ಒಳ್ಳೆಯದೆಂಬುದು ನನ್ನ ಅಭಿಪ್ರಾಯ). ಬರವಣಿಗೆ ಪ್ರಾರಂಭ ಮಾಡಿದ್ದ ನನಗೆ ಇದೊಂದು ಕನಸಾಗಿತ್ತು (ಹಾಗೂ ಕನಸಾಗಿಯೇ ಉಳಿದಿದೆ). ಇದಕ್ಕೆ ಸ್ವಲ್ಪ ಭೂಗೋಳಿಕ ಕಾರಣಗಳೂ ಇರಬಹುದು. ಉತ್ತರ ಕರ್ನಾಟಕದಲ್ಲಿ ಕಣ್ಣು ತೆರೆಯುತ್ತಿದ್ದ ಬರಹಗಾರರಿಗೆ ಮನೋಹರ ಗ್ರಂಥ ಮಾಲಾ ಇತ್ತು. ಬೆಂಗಳೂರಿಗರಿಗೆ ಬಂಧುವಾಗಿ ಕ್ರೈಸ್ಟ್ ಕಾಲೇಜಿನ ಶ್ರೀನಿವಾಸರಾಜು ಇದ್ದರು. ಹೀಗಾಗಿ ನಮ್ಮಲ್ಲಿ ಕೆಲವರು ಅಕ್ಷರ ಪ್ರಕಾಶನದ ಕನಸು ಹೊತ್ತು ಓಡಾಡಿದರೂ ಹೆಚ್ಚು ಪ್ರಯತ್ನ ಮಾಡಲಿಲ್ಲ ಅನ್ನಿಸುತ್ತದೆ.
ಇಲ್ಲಿ ಮತ್ತೊಂದು ಗಮ್ಮತ್ತಿನ ವಿಷಯ ಹೇಳಬೇಕು - ಕಳೆದ ವರ್ಷ ಬೆಂಗಳೂರಿಗೆ ಬಂದಿದ್ದಾಗ ರಾಮ್ ಗುಹಾರನ್ನು ಭೇಟಿಯಾಗಲು ಅವರ ಮನೆಗೆ ಹೋದೆ - ರಾಮ್ ನನಗೆ ತಮ್ಮ ಕನ್ನಡ ಪುಸ್ತಕವೊಂದನ್ನು ಕೊಟ್ಟರು. ನನಗೆ ಈ ಪುಸ್ತಕ ಇಂಗ್ಲೀಷಲ್ಲಿ ನೋಡಿದ ನೆನೆಪಾಗಲಿಲ್ಲ. ರಾಮ್ ಗೆ ಕನ್ನಡ ಬರುವುದಿಲ್ಲ... ಆದರೆ, ರಾಮ್ ಹೆಸರಿನಲ್ಲಿ ಅಕ್ಷರ ಪ್ರಕಾಶನದ ಕನ್ನಡ ಪುಸ್ತಕ ಬಂದದ್ದು ಹೇಗೆ? ಅದಕ್ಕೆ ರಾಮ್ ಉತ್ತರ ಗಮ್ಮತ್ತಿನದಾಗಿತ್ತು... ಕೆಲವು ವರ್ಷಗಳ ಹಿಂದೆ, ಡಿ.ಆರ್.ನಾಗರಾಜರ ಒತ್ತಾಯದ ಮೇರೆಗೆ - ಅಕ್ಷರ ಪ್ರಕಾಶನದಿಂದ ಹೊರಬರುತ್ತಿದ್ದ (ಡಿ.ಆರ್ ಸಂಪಾದಿಸುತ್ತಿದ್ದ) ಪರಿಸರ ಮಾಲೆಗಾಗಿ ಪ್ರತ್ಯೇಕವಾಗಿ ಈ ಪುಸ್ತಕವನ್ನು ಬರೆಯಲಾಯಿತಂತೆ. ಭಾಷೆ ಬರದ, ಕೇವಲ ಬರಹದಿಂದಲೇ ಜೀವನ ನಡೆಸುವ, (ಅದರಲ್ಲೂ ಪತ್ರಕರ್ತರಲ್ಲದ, ಕಾದಂಬರಿಕಾರರಲ್ಲದ, ಕೇವಲ ಚರಿತ್ರೆ, ಪರಿಸರ, ಕ್ರಿಕೆಟ್ ಮೇಲೆ ಮಾತ್ರ ಪರಿಶೋಧನಾತ್ಮಕ ಬರಹ ಬರೆಯುವ ಫುಲ್ ಟೈಂ ರೈಟರ್) ಕೈಯಲ್ಲಿ ಈ ಬರವಣಿಗೆ ಮಾಡಿಸಬೇಕೆಂದರೆ ಇದು ಪ್ರಕಾಶನದ ವಾಣಿಜ್ಯದಿಂದ ಆಗುವ ಮಾತಲ್ಲ; ಬದಲಿಗೆ ಇದು ಸಂಸ್ಕೃತಿಯ ಬಗೆಗಿನ ಅಪಾರ passionನಿಂದ ಆಗುವ ಮಾತು. (ಸ್ವತಂತ್ರವಾಗಿ ಪರಿಶೋಧಕ, ಓದುಗ, ಬೆಂಗಳೂರಿಗ ರಾಮಚಂದ್ರ ಗುಹಾ ಬಗ್ಗೆ ಮತ್ತೊಮ್ಮೆ ಯಾವಾಗಲಾದರೂ ಬರೆಯುವೆ). ಈ ಪ್ರಕರಣದಲ್ಲಿ ಸುಬ್ಬಣ್ಣನವರ ಸ್ವಂತ ಕೈವಾಡ ಇದ್ದಿರಲಿಕ್ಕಿಲ್ಲ. ಇದು ಸುಬ್ಬಣ್ಣನವರ ವಿಚಾರಧಾರೆಯನ್ನು ಅಂತರ್ಗತ ಮಾಡಿಕೊಂಡ ಒಂದು ಸಂಸ್ಥೆಯ ಪ್ರತೀಕ. ವ್ಯಕ್ತಿ ಕೇಂದ್ರಿತ ಪ್ರಯಾಸಗಳಿಗೂ ಸಂಸ್ಥಾ ಕೇಂದ್ರಿತ ಪ್ರಯಾಸಗಳಿಗೂ ಇರುವ ವ್ಯತ್ಯಾಸ ಇದೇಯೆ. ಶ್ರೀನಿವಾಸ ರಾಜು ಪ್ರಕಾಶನರಂಗದಲ್ಲಿ ಮಾಡಿದ ಕಾರ್ಯಕ್ಕೂ ಸುಬ್ಬಣ್ಣನವರ ಕೆಲಸಕ್ಕೂ ಇರುವ ಅಂತರ ಇಲ್ಲಿ ತಿಳಿಯುತ್ತದೆ.
ಆದರೆ ಪುಸ್ತಕ ಪ್ರಕಾಶನಕ್ಕೆ-ಸುಬ್ಬಣ್ಣನವರಿಗೆ ಕೊಂಡಿ ಹಾಕಿ ಅಷ್ಟಕ್ಕೇ ಸೀಮಿತಗೊಳಿಸಿಬಿಟ್ಟರೆ ನಾವು ಸುಬ್ಬಣ್ಣನವರ ನೆನಪಿಗೆ ಘೋರ ಅನ್ಯಾಯ ಮಾಡಿದಂತಾಗುತ್ತದೆ. ಏಕೆಂದರೆ ಸುಬ್ಬಣ್ಣನವರು ಒಟ್ಟಾರೆ ಒಂದು ಕಲ್ಚರಲ್ ಪ್ಯಾಕೇಜ್ ಆಗಿ ನಮ್ಮೆದುರಿಗಿದ್ದರು. ಬಹುಶಃ ಇಂದಿಗೂ ನೀನಾಸಂ ಕರ್ನಾಟಕದ ಏಕಮಾತ್ರ ರೆಪರ್ಟರಿ ಅನ್ನಿಸುತ್ತದೆ. ಸಾಮಾನ್ಯವಾಗಿ ಸರಕಾರಿ ಸಂಸ್ಥೆಗಳು ಮಾಡುವ ಕೆಲಸವನ್ನು ನೀನಾಸಂ ಮಾಡುತ್ತಿತ್ತು. ಉದಾಹರಣೆಗೆ - ನಾಟಕದಲ್ಲಿ ತರಬೇತಿ, ಹಾಗೂ ರಾಜ್ಯಾದ್ಯಂತ ಪ್ರದರ್ಶನ ಮಾಡಲು ಆರ್ಥಿಕ ಬಲ ಸರಕಾರಕ್ಕೆ ಮಾತ್ರ ಇರುತ್ತದೆ. ನಾವು ಯಾವುದೇ ರಂಗದಲ್ಲಿ ನೋಡಿದರೂ ಇದು ನಿಜ. ನಾಟಕಕ್ಕೆ ರಾಷ್ಟ್ರಮಟ್ಟದಲ್ಲಿ ಎನ್.ಎಸ್.ಡಿ, ರಾಜ್ಯಮಟ್ಟದಲ್ಲಿ ರಂಗಾಯಣ ಇರುವಂತೆ, ಸಿನೆಮಾಗೆ FTII ಇರುವಂತೆ, ಕಲೆಗೆ ಅಕಾದಮಿಗಳು ಇದ್ದಂತೆ.
ನೀನಾಸಂ ನಾಟಕಗಳನ್ನು ಆಡಿಸುವ ಉತ್ಸಾಹದಲ್ಲಿ ಎಷ್ಟೊಂದು ಹೊಸ ನಾಟಕಗಳನ್ನು ಕನ್ನಡಕ್ಕೆ ತಂದಿದೆ - (ಅದು ಅನುವಾದವೇ ಇರಬಹುದು, ಹೊಸ ನಾಟಕವೇ ಇರಬಹುದು) - ಎನ್ನುವ ಲೆಕ್ಕ ಯಾರೂ ಇಟ್ಟಿಲ್ಲ. ಭಾಷೆಯ ಆಧಾರದ ಮೇಲೆಯೇ ಒರಗಿರುವ ಬರ್ನಾರ್ಡ್ ಷಾ ಅವರ Pygmallion ನಂತಹ ನಾಟಕವನ್ನು ಕನ್ನಡಕ್ಕೆ ತರಬೇಕು ಎಂಬ ವಿಚಾರ, ಅದನ್ನು ಮಾಡಬಲ್ಲ ವ್ಯಕ್ತಿ ಜಯಂತ ಕಾಯ್ಕಿಣಿ ಎಂದು ಗುರುತಿಸುವ ವಿಚಕ್ಷಣಾ ವಿವೇಕ ಇತರ ಯಾವುದೇ ಸಾಂಸ್ಕೃತಿಕ ಪ್ರಯಾಸದಿಂದ ಬರಲಾರದು. ಈ ವಿಚಾರಧಾರೆಯೇ ಸುಬ್ಬಣ್ಣನವರ ದೇಣಿಗೆ.
ಖಾಸಗೀ ಸಂಸ್ಥೆಗಳು ಇಂಥಹ ಚಟುವಟಿಕೆಗಳನ್ನು ಕೈಗೊಳ್ಳುವುದು ಸಾಮಾನ್ಯವಲ್ಲ. ಎಂಬತ್ತರ ದಶಕದಲ್ಲಿ ಸಿ.ಜಿ.ಕೆ - ಒಂದು ರೆಪರ್ಟರಿ ಮಾಡುವ ತಯಾರಿಯಲ್ಲಿ ರಂಗನಿರಂತರ ಆಯೋಜಿಸಿ ೧೫೦ ದಿನಗಳ ಕಾಲ ನಾಟಕಗಳನ್ನು ಮಾಡಿಸಿದ್ದರು. ಆದರೆ ಅಲ್ಲಿಂದ ಮುಂದಕ್ಕೆ ಅವರಿಗೆ ಅದನ್ನು ಕೊಂಡೊಯ್ಯಲು ಸಾಧ್ಯವಾಗಲೇ ಇಲ್ಲ. ರಂಗನಿರಂತರದ ದಿನಗಳನ್ನು ಈಗ ನೆನಪು ಮಾಡಿಕೊಂಡರೆ, ಸಿ.ಜಿ.ಕೆ ಪಣ ಕಟ್ಟಿ ಹತ್ತು ದಿನ ಎಡೆಬಿಡದೇ ಸೈಕಲ್ ಓಡಿಸಿ ಲಿಮ್ಕಾ ರಿಕಾರ್ಡ್ ಸ್ಥಾಪಿಸಿದ ಒಂಟಿ ಖಿಲಾಡಿಯಂತೆ ಕಾಣುತ್ತಿದ್ದರೆನ್ನಿಸುತ್ತದೆ. ಆದರ ಆ ದಿನಗಳಲ್ಲಿ ಅವರ ಇರ್ದ್ ಗಿರ್ದ್ ಸುತ್ತುತ್ತಿದ್ದ ನಮಗೆ ಇದು ಬಹಳ ದೊಡ್ದ ಸಾಧನೆ ಅನ್ನಿಸಿತ್ತು. ಬಹುಶಃ ಸಿ.ಜಿ.ಕೆ.ಗೆ ಆರ್ಥಿಕ ಸವಲತ್ತುಗಳಿದ್ದಿದ್ದರೆ ಅವರು ಒಂದು ರೆಪರ್ಟರಿಯನ್ನು ಸ್ಥಾಪಿಸುತ್ತಿದ್ದರೋ ಏನೋ.. ಇಲ್ಲಿ ಹೇಳಬೇಕಾದ ಮುಖ್ಯ ವಿಷಯವೆಂದರೆ, ನೀನಾಸಂ ನಂತಹ ಸಂಸ್ಥೆಯನ್ನು ನಡೆಸುವುದು ಕೇವಲ ಒಂದು ಹವ್ಯಾಸವಾಗಿ ಮಾಡಲು ಆಗುವಂತಹದ್ದಲ್ಲ.
ಸುಬ್ಬಣ್ಣ ವಯಕ್ತಿಕವಾಗಿ ಅಥವಾ ಚಿತ್ರಗಳ ಮಾಧ್ಯಮದಲ್ಲಿ ಹೆಚ್ಚು ಕಾಣಿಸುತ್ತಿದ್ದ ವ್ಯಕ್ತಿಯಲ್ಲ. ಸೆಮಿನಾರುಗಳಲ್ಲಿ ಭಾಷಣ ಮಾಡಿದ್ದನ್ನು ಕಂಡದ್ದೂ ಕಡಿಮೆ. ಪ್ರಪಂಚ ಸುತ್ತುವ ಖಯಾಲಿ ಇದ್ದ ವ್ಯಕ್ತಿಯಂತೆ ಎಂದಿಗೂ ಕಂಡುಬಂದಿರಲ್ಲಿಲ್ಲ. ಆದರೆ, ಪ್ರಪಂಚವನ್ನೇ ಹೆಗ್ಗೋಡಿಗೆ ಕರೆಸುವ ರೀತಿ ಸುಬ್ಬಣ್ಣನವರಿಗೆ ಗೊತ್ತಿತ್ತು. ಸಂಸ್ಥೆಯೊಂದನ್ನು ವ್ಯಕ್ತಿಕೇಂದ್ರಿತವಾಗಿ ಕಟ್ಟದೇ ಚಟುವಟಿಕೆಗಳನ್ನು ಕೇಂದ್ರವಾಗಿ ಮಾಡಿಕೊಂಡು ಮುಂದುವರೆದರೆ ಏನೆಲ್ಲಾ ಸಾಧಿಸಬಹುದೆಂಬುದಕ್ಕೆ ಸುಬ್ಬಣ್ಣ ಒಂದು ಉದಾಹರಣೆಯಂತಿದ್ದರು.
ನನಗೆ ತಿಳಿದ ಮಟ್ಟಿಗೆ ಪೂನಾದ FTII ಬಿಟ್ಟರೆ, ಒಳ್ಳೆಯ ಸಿನೆಮಾವನ್ನು ಅರ್ಥಮಾಡಿಕೊಳ್ಳಲು ನಡೆಸುವ ಶಿಬಿರವನ್ನು ಕೈಗೊಳ್ಳುವುದು ಹೆಗ್ಗೋಡಿನಲ್ಲಿ ಮಾತ್ರ. ಈಗ FTII ಎಷ್ಟು ಸಕ್ರಿಯವಾಗಿಯಿದೆಯೋ ನನಗೆ ತಿಳಿಯದು. ಮ್ಯಾಗಸಸೆ ಪ್ರಶಸ್ತಿ ಬಂದಾಗ ಸುಬ್ಬಣ್ಣನವರು, ತಮ್ಮ ವ್ಯಕ್ತಿತ್ವದ ವಿಕಾಸದಲ್ಲಿ ಯು.ಆರ್.ಅನಂತಮೂರ್ತಿಯವರದ್ದು ಬಹಳ ದೊಡ್ದ ಪಾತ್ರ ಎಂದು ಹೇಳಿದ್ದರು. ಈಗ ಅನಂತಮೂರ್ತಿಯವರು FTIIನ ಚೇರ್ಮನ್ ಆಗಿದ್ದಾರೆ. ಸುಬ್ಬಣ್ಣನವರ ಗೆಳೆಯರಾದ ಅನಂತಮೂರ್ತಿಯವರು FTIIಯನ್ನು ಹೆಗ್ಗೋಡು ಮಾಡಬಲ್ಲರೆ? ಸುಬ್ಬಣ್ಣನವರ ನೆನಪಿಗೆ ಇದಕ್ಕಿಂತ ಒಳ್ಳೆಯ ಕಾಣಿಕೆ ಏನಿರಬಹುದು?
No comments:
Post a Comment