Monday, March 2, 2009

ಕಮಲಾಕ್ಷ ಶಣೈ

ಕೆಲವೇ ದಿನಗಳ ಹಿಂದಿನ ನನ್ನ ಬ್ಲಾಗಿನಲ್ಲಿ ಮುಂಬಯಿನ ನೆನಪುಗಳನ್ನು ತಾಜಾ ಮಾಡಿಕೊಳ್ಳುತ್ತಾ ಆರ್ಟ್ ಪ್ಲಾಜಾದ ಕಮಲಾಕ್ಷ ಶೆಣೈ ಅವರನ್ನು ಭೇಟಿಯಾದ ನೆನಪು ಮಾಡಿಕೊಂಡಿದ್ದೆ. ಮೊನ್ನೆ ಆತ ಪನ್ವೇಲಿನ ಒಂದು ವೃದ್ಧಾಶ್ರಮದಲ್ಲಿ ತೀರಿಕೊಂಡರೆಂಬ ಸುದ್ದಿಯನ್ನು ಜಯಂತ ಕಾಯ್ಕಿಣಿ ಎಸ್ಎಮ್ಎಸ್ ಮಾಡಿದ. ಜಯಂತ ಹಿಂದಿನಬಾರಿ ಮುಂಬೈಗೆ ಹೋಗಿದ್ದಾಗ ಶೆಣೈಕಾಕಾರ ಬಗ್ಗೆ ವಿಚಾರಿಸಲು ಜೆಹಂಗೀರ್ ಆರ್ಟ್ ಗ್ಯಾಲರಿಯ ಬಳಿ ತಪಾಸಣೆ ಮಾಡಿದಾಗ ಆತ ವೃದ್ಧಾಶ್ರಮದಲ್ಲಿ ಇರುವ ಸುದ್ದಿ ತಿಳಿಯಿತಂತೆ. ಅಲ್ಲಿಗೆ ಹೋಗಿ ಭೇಟಿ ಮಾಡೋಣವೆಂದು ಅಲ್ಲಿಯ ವಿಳಾಸ ಕೇಳಿದರೆ, ಏನಿಲ್ಲ ಪನ್ವೇಲಿಗೆ ಹೋಗಿ, ಅಲ್ಲಿ ಇಳಿದು ವೃದ್ಧಾಶ್ರಮ ಇರುವುದು ಈಸ್ಟಾ ವೆಸ್ಟಾ ಅಂತ ಕೇಳಿ, ಯಾರಾದರೂ ಹೇಳುತ್ತಾರೆ. ಆದರೆ ಹೋಗಿಯೂ ಪ್ರಯೋಜನವಿಲ್ಲ ಅವರಿಗೆ ಯಾವುದೂ ನೆನಪಿಲ್ಲ, ನಿಮ್ಮನ್ನು ಗುರ್ತು ಹಿಡಿಯುವುದಿಲ್ಲ ಅಂತ ಹೇಳಿದರಂತೆ.

ಕಮಲಾಕ್ಷ ಶೆಣೈ ದೊಡ್ಡ ಹೆಸರು ಮಾಡಿದ ವ್ಯಕ್ತಿಯಲ್ಲ. ಅದ್ಭುತ ಕಲಾಕಾರರೂ ಅಲ್ಲ. ತರಂಗ ವಾರಪತ್ರಿಕೆ ಪ್ರಾರಂಭವಾದ ಹೊಸತರಲ್ಲಿ (ಬಹುಶಃ ನಾಲ್ವರು ಮಿತ್ರರು ಎಂಬ ಧಾರಾವಾಹಿಗೆ) ಅವರು ಚಿತ್ರಗಳನ್ನು ಬಿಡಿಸಿದ ನೆನಪಿದೆ. ಆಗ ನಾನು ಜಯಂತನಿಗೆ ಹೇಳಿದ್ದೆ - ಅವರ ಚಿತ್ರಗಳಲ್ಲಿ ಮೂರನೆಯ ಆಯಾಮ ಇಲ್ಲವೇ ಇಲ್ಲ ಹಳೆಯ ಗಿರಿಜನರ ಚಿತ್ರಗಳಂತೆ ಎರಡೇ ಆಯಾಮದ ಇಲ್ಲಸ್ಟ್ರೇಷನ್ ಗಳನ್ನು ಅವರು ಬಿಡಿಸುತ್ತಿದ್ದರು. ಬಹುಶಃ ಅವರ ಕಲೆಯ ಶೈಲಿ ಅವರು ಚಿತ್ರಬರೆಯುತ್ತಿದ್ದ ಧಾರಾವಾಹಿಗೆ ಮಾತ್ರವಷ್ಟೇ ಒಗ್ಗುತ್ತಿತ್ತು. ಅದಾದ ನಂತರ ಅವರ ಚಿತ್ರಗಳನ್ನು ಹೆಚ್ಚು ನಾನು ನೋಡಿದ ನೆನಪಿಲ್ಲ. ಹಾಗೆ ನೋಡಿದರೆ ಅವರನ್ನು ನಾನು ಭೇಟಿಯಾಗಿದ್ದು ಒಂದೇ ಒಂದು ಬಾರಿ ಮಾತ್ರ. ಆದರೂ ಕಮಲಾಕ್ಷ ಶೆಣೈ ಭೇಟಿ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಯಾಕೆ ಇದೆ?

"ಉದಯೋನ್ಮುಖ ಕಲಾವಿದ" ಎಂಬ ಪರ್ವವನ್ನು ಹಾಯ್ದುಬಂದ ಯಾವುದೇ ವ್ಯಕ್ತಿ ಇಂಥ ತೆರೆಮರೆಯ ಶಕ್ತಿಯಂತಿರುವ ಕೆಲವರನ್ನು ತಮ್ಮ ಕಲಾ ಜೀವನದಲ್ಲಿ ಒಮ್ಮೆಯಾದರೂ ಭೇಟಿಯಾಗಿರುತ್ತಾರೆಂದು ನನ್ನ ನಂಬಿಕೆ. "ಉದಯೋನ್ಮುಖ" ಘಟ್ಟದಿಂದ ಕಲಾವಿದರಾಗಿ ಬೆಳೆಯುವ ಪ್ರಕ್ರಿಯೆ ಮಹಾಜನತೆಗೆ ಕಾಣಿಸುತ್ತಲೇ ಇರುತ್ತದೆ. ಆದರೆ ಈ ಘಟ್ಟದಲ್ಲಿ ತಮ್ಮನ್ನು ರೂಪಿಸಿದ ವ್ಯಕ್ತಿಗಳನ್ನು ನೆನಪು ಮಾಡಿಕೊಳ್ಳದಿರುವವರು ವ್ಯಕ್ತಿಗಳಾಗಿ ಬೆಳೆಯುವುದಿಲ್ಲವೇನೋ. ಸಚಿನ್ ತೆಂಡೂಲ್ಕರಗೂ, ಅವನ ಮೊದಲ ಗುರುವಾಗಿದ್ದ ಕೋಚ್ ಅಚ್ರೇಕರಗೂ ಇರುವ ಸಂಬಂಧದಂಥದ್ದು ಇದು.

ಹಾಗೆ ನೋಡಿದರೆ ಶೆಣೈ ಮಾಡಿದ ಮುಖ್ಯವಾದ ಕೆಲಸವೇನು ಎಂಬ ಪ್ರಶ್ನೆ ಕೇಳುವವರು ಅದಕ್ಕೂ ಮುಂಚೆ ಕೆಲವು ಇತರ ಪ್ರಶ್ನೆಗಳನ್ನು ಉತ್ತರಿಸಬೇಕಾಗುತ್ತದೆ. ಮುಂಬೈನಲ್ಲಿ ಜೆಹಂಗೀರ್ ಆರ್ಟ್ ಗ್ಯಾಲರಿಯಲ್ಲಿ ತಮ್ಮ ಪೇಂಟಿಂಗನ್ನು ಪ್ರದರ್ಶಿಸಬೇಕೆಂಬ ಕನಸು ಕಾಣುವ ಕಲಾವಿದರೆಷ್ಟು? ಆ ಕನಸನ್ನು ಸಾಕಾರ ಮಾಡಿಕೊಳ್ಳಲು ಸಾಧ್ಯವಾಗುವುದೆಷ್ಟು ಮಂದಿಗೆ? ಜೆಹಂಗೀರ್ ಗ್ಯಾಲರಿಗೆ ಹೋಗಬೇಕೆಂಬ ಕನಸಿಗೆ ಮೆಟ್ಟಿಲಗಳನ್ನು ಹಾಕುವ ಕೆಲಸವನ್ನು ಶೆಣೈ ಮಾಡಿದರು. ಜೆಹಂಗೀರ್ ಗ್ಯಾಲರಿಯ ಹೊರಗಿನ ಪುಟ್ ಪಾತಿನಲ್ಲಿ ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೊರೇಷನ್ ಅವರ ಸಹಕಾರದೊಂದಿಗೆ ಶೆಣೈ ಆರ್ಟ್ ಪ್ಲಾಜಾ ಎಂಬ ಪವಿತ್ರವಾದ ಜಾಗವನ್ನು ಸ್ಥಾಪಿಸದರು. ಪ್ಲಾಜಾದ ರೂಪರೇಶೆ ಈ ರೀತಿಯಾಗಿತ್ತು - ಗ್ಯಾಲರಿಯ ಒಂದು ಬದಿಯ ಫುಟ್ ಪಾತ್ ನಲ್ಲಿ ಪೇಂಟಿಂಗ್ ಗಳನ್ನು ಪ್ರದರ್ಶಿಸಲು ಕಾರ್ಪೊರೇಷನ್ ಪರವಾನಗಿ ನೀಡಿತು. ಜೊತೆಗೆ ರಾತ್ರೆಯವೇಳೆಗೆ ಪೇಂಟಿಂಗುಗಳನ್ನುಜೋಪಾನವಾಗಿಡಲು ಸ್ವಲ್ಪ ದೂರದಲ್ಲಿ ಬೆಸ್ಟ್ ಬಸ್ ಸ್ಟಾಪ್ ಬಳಿ ಒಂದು ಸಣ್ಣ ಖೋಲಿಯನ್ನು ಆರ್ಟ್ ಪ್ಲಾಜಾದವರಿಗೆ ಕೊಡಲಾಗಿತ್ತು. ಪೇಂಟಿಂಗುಗಳನ್ನು ಖೋಲಿಯಿಂದ ಗ್ಯಾಲರಿಯಬಳಿಗೆ ತರಲು ಒಂದು ಪುಟ್ಟ ತಳ್ಳುವ ಗಾಡಿಯನ್ನು ಕೂಡಾ ಬಿಎಂಸಿಯವರು ಪ್ಲಾಜಾದ ಕಾರ್ಯಕರ್ತರಿಗೆ ನೀಡಿದ್ದರು. ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಬಯಸುವ ಉದಯೋನ್ಮುಖರು ತಮ್ಮ ಸರದಿಗಾಗಿ ನೊಂದಣಿ ಮಾಡಿಕೊಳ್ಳಬೇಕಿತ್ತು- ಕಲಾವಿದರಿಗೆ ತಮ್ಮ ಕೃತಿಗಳನ್ನು ಒಂದು ವಾರ ಕಾಲ ಪ್ರದರ್ಶಿಸುವ ಅವಕಾಶ ಸಿಕ್ಕುತ್ತಿತ್ತು (ಬಹುಶಃ ಒಂದು ಬಾರಿಗೆ ಮುವ್ವರು ಕಲಾವಿದರ ಕೃತಿಗಳ ಪ್ರದರ್ಶನ ಬದಿಬದಿಯಲ್ಲಿ ಇರುತ್ತಿತ್ತು ಅಂತ ನನ್ನ ನೆನಪು). ಪ್ರದರ್ಶನವಿದ್ದಷ್ಟು ದಿನ ಕಲಾವಿದರು ಮುಂಜಾನೆ ಬಂದು ಖೋಲಿಯಿಂದ ಪೇಂಟಿಂಗ್ ತಂದು ಪ್ಲಾಜಾದಲ್ಲಿ ತೂಗುಹಾಕುವ ಕೆಲಸ ಮಾಡಬೇಕಿತ್ತು. ಹಾಗೆಯೇ ಸಂಜೆ ಅದನ್ನು ವಾಪಸ್ಸು ತರುವ ಕೆಲಸದಲ್ಲೂ ಅವರು ಹಾಜರಿರಬೇಕಿತ್ತು. ಕೆಲವರು ದಿನವಿಡೀ ಅಲ್ಲೇ ಇರುತ್ತಿದ್ದರಾದರೂ ಎಲ್ಲರಿಗೂ ಇದನ್ನು ಮಾಡಲು ಸಮಯವಿರುತ್ತಿರಲಿಲ್ಲ. ಆದರೆ ಶೆಣೈ ಮಾತ್ರ ಪ್ರತಿದಿನ ಮುಂಜಾನೆ ಅಲ್ಲಿಗೆ ಬಂದು, ದಿನವೆಲ್ಲಾ ಇದ್ದು, ಸಂಜೆಗೆ ಪೇಂಟಿಂಗುಗಳು ಖೋಲಿಗೆ ಸೇರಿದ ನಂತರ ತಮ್ಮ ಚಾಲಿಗೆ ಸೇರುತ್ತಿದ್ದರಂತೆ.

ನಾನು ಶೆಣೈಯವರನ್ನು ಭೇಟಿಯಾದ ದಿನ ಪ್ರದರ್ಶನ ಮಾಡಿದ್ದ ಯಾವ ಕಲಾವಿದರೂ ಅಲ್ಲಿರಲಿಲ್ಲ. ಆದರೆ ಶೆಣೈಯವನ್ನು ಬಿಟ್ಟು ಪ್ರತಿದಿನ ನಿಯಮಿತವಾಗಿ ಒಬ್ಬ ಕಲಾವಿದ ಅಲ್ಲಿ ಹಾಜರಿರುತ್ತಿದ್ದ. ಒಂದು ಮಡಚುವ ಕುರ್ಚಿಯಲ್ಲಿ ಕೂತು ಅಲ್ಲಿ ಓಡಾಡುವ ಜನತೆಯಲ್ಲಿ ವ್ಯಕ್ತಿಗೆ ಹದಿನೈದು ರೂಪಾಯಿಯ ಬೆಲೆಗೆ ಅವರ ಕ್ಯಾರಿಕೇಚರ್ ಬಿಡಿಸುತ್ತಿದ್ದ. ಬಹುಶಃ ಎಲ್ಲರಿಗಿಂತ ಹೆಚ್ಚಿನ ಸಂಪಾದನೆ ಆತನಿಗೇ ಆಗುತ್ತಿತ್ತೇನೋ! ನಾವುಗಳು ಶೆಣೈಯವರನ್ನು ಭೇಟಿಯಾಗಿ ಅಲ್ಲಿನ ಪ್ರದರ್ಶನ ನೋಡಿದೆವು. ಅಲ್ಲಿನ ಪೇಂಟಿಂಗುಗಳೆಲ್ಲ ಮಾರಾಟಕ್ಕೆ ಲಭ್ಯವಿದ್ದವು. ಎಲ್ಲವೂ ನಮ್ಮಂತಹ ಬಡಪಾಯಿಗಳ ಕೈಗೆಟುಕುವ ಬೆಲಗೆ ದೊರೆಯತ್ತಿದ್ದವು. ಹಾಗೆ ಮನಸ್ಸು ಮಾಡಿ ಅವುಗಳನ್ನು ಕೊಂಡರೂ ಕೈಗೆ ಸಿಗುತ್ತಿದ್ದದ್ದು ವಾರದ ಗಡುವಿನ ನಂತರ. ಬೇಕಿದ್ದರೆ ಕೊಂಡ ಪೇಂಟಿಂಗುಗಳಿಗೆ ಕಟ್ಟುನ್ನೂ ಪ್ಲಾಜಾದವರು ಹಾಕಿಸುಕೊಡುತ್ತಿದ್ದರು.

ನಾವು ಅಲ್ಲಿದ್ದಾಗಲೇ ಇಬ್ಬರು ಉದಯೋನ್ಮುಖರು ದೊಡ್ಡ ವಾಗ್ವಾದಕ್ಕೆ ತೊಡಗಿದರು ಮತ್ತು ಎರಡೇ ನಿಮಿಷಗಳಲ್ಲಿ "ಇದು ಪ್ಲಾಜಾದ ಪುಣ್ಯಭೂಮಿ... ಇಲ್ಲಿ ತಲೆಹರಟೆ ಮಾಡಬೇಡ..” ಎಂಬಂತಹ ಮಾತುಗಳೆಲ್ಲ ಕೇಳಿಸಿದವು. ಒಂದು ಬಗೆಯ ಗೌರವ ಆ ಫುಟ್ ಪಾತಿಗೆ ಆಗಲೇ ಬಂದುಬಿಟ್ಟಿತ್ತು! ಅಂದು ನಾನು ಮತ್ತು ಜಯಂತ ಅಲ್ಲಿಂದ ಕೆಲವು ಕೆಸೆಟ್ಟುಗಳನ್ನು ಕೊಂಡುಕೊಳ್ಳಲು ರಿಥಂ ಹೌಸಿಗೆ ಹೋದೆವು. ಕಮಲಾಕ್ಷ ಶೆಣೈ ಒಂಟಿಯಾಗಿ ಯಾವುದೋ ಚಾಳಿನಲ್ಲಿ ಇರುತ್ತಾರೆಂದು ನನಗೆ ಜಯಂತ ಹೇಳಿದ. ಪ್ರತಿದಿನ ಅವರ ಆಹಾರ ರಾತ್ರೆ ಒಂದಿಷ್ಟು ಮಾಡಿ ತಿನ್ನುತ್ತಿದ್ದ ಕಿಚಡಿ ಮಾತ್ರವಂತೆ. ರಿಥಂ ಹೌಸಿನ ವ್ಯಾಪಾರ ಮುಗಿದಮೇಲೆ ನಮ್ಮ ಮನಸ್ಸು ಯಾಕೋ ನಿಲ್ಲಲಿಲ್ಲ. ನಾವಿಬ್ಬರೂ ಮತ್ತೆ ಪ್ಲಾಜಾಕ್ಕೆ ವಾಪಸ್ಸಾದೆವು. ಒಂದು ಕಾಲು ಘಂಟೆ ಹರಟೆ ಕೊಚ್ಚುವಷ್ಟರಲ್ಲಿ, ಪ್ಲಾಜಾ ಮಚ್ಚುವ ಸಮಯವಾಯಿತು. ಸಂಜೆ ಪೇಂಟಿಂಗ್ ಇಳಿಸುವ ಕೆಲಸ, ಗಾಡಿ ತಳ್ಳುವ ಕೆಲಸವನ್ನ ಶೆಣೈ ಉಸ್ತುವಾರಿಯಲ್ಲಿ ನಡೆಯಿತು. ಪೇಂಟಿಂಗುಗಳನ್ನು ಖೋಲಿಗೆ ಸೇರಿಸಿ ಮೂರೂ ಜನ ಸಮೀಪದಲ್ಲಿದ್ದ ಇರಾಣಿ ಹೊಟೇಲಿಗೆ ಹೋಗಿ (ಮೂವರಿಗೆ) ನಾಲ್ಕು ಬಾಟಲ್ ಬಿಯರು ಕುಡಿದು, ಒಂದಿಷ್ಟು ತಿಂದು ಶೆಣೈಗೆ ವಿದಾಯ ಕೋರಿ ಹೊರಟೆವು. ಇದು ಆದದ್ದು ಸುಮಾರು ಹದಿನೈದು ವರ್ಷಗಳಿಗೂ ಹಿಂದೆ...... ಕಮಲಾಕ್ಷ ಶೆಣೈರನ್ನು ನೋಡಿದ್ದು ಅದೇ ಮೊದಲ ಹಾಗೂ ಕೊನೆಯ ಬಾರಿ. ಆದರೆ ಜಯಂತನಿಂದ ಆಗಿಂದಾಗ್ಗೆ ಶೆಣೈ ಬಗ್ಗೆ ಸುದ್ದಿ ತಲುಪುತ್ತಿತ್ತಲೇ ಇತ್ತು.

ಆ ದಿನ ನನ್ನ ನೆನಪಿನಲ್ಲಿ ಮರೆಯಲಾರದ ದಿನವಾಗುವುದಕ್ಕೆ ಮತ್ತೊಂದು ಕಾರಣವೂ ಇದೆ. ಮೊದಲೇ ಹೇಳಿದಂತೆ ನಾವುಗಳು ಒಂದು ಬಾಟಲಿಗಿಂತ ತುಸು ಹೆಚ್ಚು ಬಿಯರು ಸೇವಿಸಿದ್ದೆವಷ್ಟೆ. ಇರಾಣಿ ಹೊಟೇಲಿನ ಬಿಲ್ ಚುಕ್ತಾ ಮಾಡಿದೊಡನೆಯೇ ನಾವುಗಳು ವಿ.ಟಿ. ಸ್ಟೇಷನ್ ಗೆ ಬಂದು ಠಾಣಾಕ್ಕೆ ಹೋಗುವ ಫಾಸ್ಟ್ ಟ್ರೇನು ಹತ್ತಿದೆವು. ಅದೃಷ್ಟವಶಾತ್ ನಮಗೆ ಕೂರಲು ಜಾಗ ಸಿಕ್ಕಿತು. ಆದರೆ ಮಸ್ಜಿದ್ ಸ್ಟೇಶನ್ ಬರುವ ಹೊತ್ತಿಗಾಗಲೇ ನನ್ನ ಹೊಟ್ಟೆಯಲ್ಲಿದ್ದ ಬಿಯರು ಕಿಬ್ಬೊಟ್ಟೆಗೆ ಬಂದು ತೊಂದರೆ ಕೊಡಲು ಪ್ರಾರಂಭ ಮಾಡಿತ್ತು. ಲೋಕಲ್ ರೈಲುಗಳಲ್ಲಿ ಟಾಯ್ಲೆಟ್ ಇರುವುದಿಲ್ಲ ಎಂಬ ಸತ್ಯವನ್ನು ನಾನು ಆ ವರೆಗೂ ಗಮನಿಸಿಯೇ ಇರಲಿಲ್ಲ! ರೈಲು ದಾದರಿಗೆ ತಲುಪುವ ಹೊತ್ತಿಗೆ ನನ್ನ ಮಾತು ನಿಂತುಹೋಗಿತ್ತು. ಮುಂಬಯಿನ ಫಾಸ್ಟ್ ಲೋಕಲ್ - ಅದರಲ್ಲೂ ಪೀಕ್ ಅವರಿನಲ್ಲಿ ಕೂತು ಹೋಗುವ ಭಾಗ್ಯವನ್ನು ನಾನು ಖುಶಿಯಿಂದ ಅನುಭವಿಸಲು ಸಾಧ್ಯವಾಗುತ್ತಿಲ್ಲ.. ಇಳಿದರೆ, ಮತ್ತೆ ಫಾಸ್ಟ್ ರೈಲು, ಜಾಗ (ಹಾಗೂ ಮುಂಬಯಿನ ಲೋಕಲ್ ಹತ್ತುವ ಧೈರ್ಯ) ಇರುತ್ತದೋ ಹೇಗೆ ಎಂಬ ದ್ವಂದ್ವದಲ್ಲಿ ಮೌನವಾಗಿ ಹಲ್ಲು ಕಡಿಯುತ್ತಾ ಒದ್ದಾಡುತ್ತಾ, ಜಯಂತನ ಮಾತಿಗೆ ಪ್ರತಿಸ್ಪಂದಿಸಲಾಗದೇ ಮುಖ ಹಿಂಡಿ ಕೂತುಬಿಟ್ಟಿದ್ದೆ. ಮುಲುಂದಿನ ಸ್ಟೇಷನ್ ಬಂದದ್ದೇ ಧಡಾರನೆ ಇಳಿದು ಕಂಡ ಹತ್ತಿರದ ಮೂಲೆಯ ಬಳಿಗೆ ಹೋಗಿ ಜಿಪ್ಪೆಳೆದು ನಿಂತುಬಿಟ್ಟೆ.. ನಾನಲ್ಲಿ ನಿಂತಿರುವಾಗಲೇ ಮೂರ್ನಾಲ್ಕು ಜನ ಅವರ ಕೆಲಸ ಮುಗಿಸಿ ಹೋದರೆನ್ನಿಸುತ್ತದೆ. ನನಗೆ ಮಾತ್ರ ಸಮಯ ನಿಂತುಬಿಟ್ಟಿತ್ತು. ಆ ಕ್ಷಣದಲ್ಲಿ ಯಾರಾದರೂ ಪೋಲೀಸಿನವ ಬಂದು ರೈಲ್ವೆ ಪ್ಲಾಟ್ ಫಾರ್ಮಿನ ಮೇಲೆ ಜಿಪ್ಪು ಬಿಚ್ಚಿದ್ದಕ್ಕಾಗಿ ನನ್ನನ್ನ ಹಿಡಿದಿದ್ದರೆ, ಅಂದು ನಾನು ಜೈಲಿಗೆ ಹೋಗಲೂ ತಯಾರಿದ್ದೆ ಅನ್ನಿಸುತ್ತದೆ..... ಅಂದ ಹಾಗೆ, ಜಯಂತ ಮತ್ತು ಶೆಣೈ ತಮ್ಮ ಬಿಯರಿನ ಬಾಟಲಿಗಳನ್ನು ಎಲ್ಲಿ, ಯಾವಾಗ ಹೇಗೆ ಖಾಲಿ ಮಾಡಿದರೆಂದು ಕೇಳಲೇ ಇಲ್ಲ... ಕೇಳುವ ಪರಿಸ್ಥಿತಿಯಲ್ಲಿ ಅಂದಂತೂ ನಾನು ಇದ್ದಿರಲಿಲ್ಲ.

ಹೀಗೆ ಒಂದೇ ದಿನ ನನ್ನ ಜೀವನದಲ್ಲಿ ಪ್ರತ್ಯಕ್ಷವಾಗಿ ಇತ್ತೀಚೆಗೆ ಕಣ್ಮರೆಯಾದ ಕಮಲಾಕ್ಷ ಶೆಣೈ ಕಡೆಕಡೆಗೆ ತಮ್ಮ ನೆನಪನ್ನು ಕಳೆದುಕೊಂಡದ್ದು ಎಂಥಹ ವಿರೋಧಾಭಾಸ? ಅಥವಾ ಅಲ್ಲವೋ? ಬರೇ ನೆನಪುಗಳ ಲೋಕದಲ್ಲಿ ಜೀವಿಸುವ ನಮಗೆ ಪ್ರತಿದಿನವೂ ಪ್ರತಿಕ್ಷಣವೂ ಹೊಸ ಜನರ ನಡುವೆ, ಗೊತ್ತಿದ್ದೂ ಗೊತ್ತಿಲ್ಲದವರ ನಡುವೆ ನಡೆಸಬೇಕಾದ ದುರಂತಮಯ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲು ಸಾಧ್ಯ? ಇದೇ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಜಾಹ್ನು ಬರೂವಾ ತೆಗೆದ ಇತ್ತೀಚಿನ "ಮೈನೆ ಗಾಂಧಿಕೊ ನಹೀಂ ಮಾರಾ" ಚಿತ್ರ ನೆನಪಾಯಿತು. ಹೀಗೆ ಒಂದು ಪ್ಯಾಶನ್ ಗಾಗಿ, ಬೇರೆಯವರಿಗಾಗಿ ಕೆಲಸ ಮಾಡುವವರ ಮನೋವ್ಯಾಪಾರಗಳು ಹೇಗಿರಬಹುದು? ಬೇರೆಯವರ ಪುಸ್ತಕಗಳನ್ನು ಪ್ರಕಟಿಸಿ, ಅದನ್ನು ಹೊತ್ತು, ಬರದವರಿಗಿಂತ ಹೆಚ್ಚಿನ ಉತ್ಸಾಹದಿಂದ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿರುವ ಶ್ರೀನಿವಾಸ ರಾಜು, ಉದಯೋನ್ಮುಖರನ್ನು ಪ್ಲಾಜಾಗೆ ಕರೆದು ತಂದ ಶೆಣೈ ಮಾಮಾ.. ತನ್ನ ಬಳಿ ಅಕ್ಷರಾಭ್ಯಾಸ ಮಾಡಿದ ವಿದ್ಯಾರ್ಥಿ ದೊಡ್ಡ ಹುದ್ದೆಯಲ್ಲಿದ್ದಾನೆಂದು ಹೆಮ್ಮೆ ಪಡುವ ಶಾಲಾ ಮಾಸ್ತರರು, ಇವರುಗಳ ಸಂತೋಷದ ಮೂಲವೇನು? ಎಷ್ಟೋ ಜನ ಪ್ಲಾಜಾದಿಂದ ಪ್ರಾರಂಭಿಸಿ ಜೆಹಾಂಗೀರ್ ಆರ್ಟ್ ಗ್ಯಾಲರಿಯ ಒಳಕ್ಕೆ ಹೋಗಿದ್ದಾರೆಂದು, ಶೆಣೈ ಹೆಮ್ಮೆಯಿಂದ ನೆನಪು ಮಾಡಿಕೊಂಡಿದ್ದರು. ಆದರೆ, ಹೀಗೆ, ಅವರನ್ನು ಶೆಣೈ ನೆನಪು ಮಾಡಿಕೊಂಡಂತೆ ಅವರೂ ಶೆಣೈಯವರನ್ನು ನೆನಪಿನಲ್ಲಿಟ್ಟುಕೊಂಡಿದ್ದರೇ? ನೆನಪಿಟ್ಟುಕೊಳ್ಳಬೇಕಾದವರು ಡೆಮೆಂನ್ಷಿಯಾದ ರೋಗಿಗಳಂತೆ ಹತ್ತಿದ ಮೆಟ್ಟಿಲುಗಳನ್ನು ಮರೆತು ಮುಂದುವರೆಯುವಾಗ, ಅಂತಹವರನ್ನು ನೆನಪು ಮಾಡಿಕೊಳ್ಳಲಾರದ ರೋಗ ತಗುಲಿದ ಕಮಲಾಕ್ಷ ಶೆಣೈ ಅವರನ್ನು ಅದೃಷ್ಟವಂತರೆಂದೇ ಪರಿಗಣಿಸಬೇಕೇ?

ಮುಂಬಯಿಯ "ಉದಯೋನ್ಮುಖ" ಕಲಾಪ್ರಪಂಚಕ್ಕೆ ಒಂದು ಅಸ್ತಿತ್ವವನ್ನು ಕೊಟ್ಟ ಶೆಣೈ ಬಗ್ಗೆ ಏನಾದರೂ ಬರವಣಿಗೆ ಇರಬಹುದೆಂದು ಗೂಗಲ್ ಶರಣು ಹೋದಾಗ - ಕಮಲಾಕ್ಷ ಶೆಣೈ ಬಗ್ಗೆ ಸಿಕ್ಕಿದ ಏಕೆಮಾತ್ರ ಲಿಂಕ್ 
ಇಲ್ಲಿದೆ. ಎಷ್ಟೋ ಕಲಾವಿದರನ್ನು ಮೆಟ್ಟಿಲೇರಿಸಿದ ಶೆಣೈ ಎಲ್ಲಿದ್ದರೂ ಸುಖವಾಗಿ ತಮ್ಮ ಸಾಧನೆಯ ನೆನಪಗಳನ್ನು ಚಪ್ಪರಿಸುತ್ತಾ ನಮ್ಮ ಜೊತೆಯೇ ಬಿಯರು ಸೇವಿಸುತ್ತಿರಲಿ ಎಂದು ಹಾರೈಸುತ್ತಾ......

No comments: