Thursday, March 5, 2009

ಜಂಗಮನಾಗಬಯಸಿದ ರಂಗಸ್ಥಾವರ - ಸಿಜಿಕೆಇತ್ತೀಚೆಗೆ ಸುಬ್ಬಣ್ಣನವರ ಬಗ್ಗೆ ಬರೆಯುತ್ತಾ ನಾನು ಈ ಮತುಗಳನ್ನು ಹೇಳಿದ್ದೆ:


ತೊಂಬತ್ತರ ದಶಕದಲ್ಲಿ ಸಿ.ಜಿ.ಕೆ - ಒಂದು ರೆಪರ್ಟರಿ ಮಾಡುವ ತಯಾರಿಯಲ್ಲಿ ರಂಗನಿರಂತರ ಆಯೋಜಿಸಿ ೧೫೦ ದಿನಗಳ ಕಾಲ ನಾಟಕಗಳನ್ನು ಮಾಡಿಸಿದ್ದರು. ಆದರೆ ಅಲ್ಲಿಂದ ಮುಂದಕ್ಕೆ ಅವರಿಗೆ ಅದನ್ನು ಕೊಂಡೊಯ್ಯಲು ಸಾಧ್ಯವಾಗಲೇ ಇಲ್ಲ. ರಂಗನಿರಂತರದ ದಿನಗಳನ್ನು ಈಗ ನೆನಪು ಮಾಡಿಕೊಂಡರೆ, ಸಿ.ಜಿ.ಕೆ ಪಣ ಕಟ್ಟಿ ಹತ್ತು ದಿನ ಎಡೆಬಿಡದೇ ಸೈಕಲ್ ಓಡಿಸಿ ಲಿಮ್ಕಾ ರಿಕಾರ್ಡ್ ಸ್ಥಾಪಿಸಿದ ಒಂಟಿ ಖಿಲಾಡಿಯಂತೆ ಕಾಣುತ್ತಿದ್ದರೆನ್ನಿಸುತ್ತದೆ. ಆದರ ಆ ದಿನಗಳಲ್ಲಿ ಅವರ ಇರ್ದ್ ಗಿರ್ದ್ ಸುತ್ತುತ್ತಿದ್ದ ನಮಗೆ ಇದು ಬಹಳ ದೊಡ್ದ ಸಾಧನೆ ಅನ್ನಿಸಿತ್ತು. ಬಹುಶಃ ಸಿ.ಜಿ.ಕೆ.ಗೆ ಆರ್ಥಿಕ ಸವಲತ್ತುಗಳಿದ್ದಿದ್ದರೆ ಅವರು ಒಂದು ರೆಪರ್ಟರಿಯನ್ನು ಸ್ಥಾಪಿಸುತ್ತಿದ್ದರೋ ಏನೋ.. ಇಲ್ಲಿ ಹೇಳಬೇಕಾದ ಮುಖ್ಯ ವಿಷಯವೆಂದರೆ, ನೀನಾಸಂ ನಂತಹ ಸಂಸ್ಥೆಯನ್ನು ನಡೆಸುವುದು ಕೇವಲ ಒಂದು ಹವ್ಯಾಸವಾಗಿ ಮಾಡಲು ಆಗುವಂತಹದ್ದಲ್ಲ.ಸಿಜಿಕೆಯವರ ಸಂಪರ್ಕ ಕಡಿದು ವರ್ಷಗಳೇ ಆದ ನಂತರ ಅವರ ನೆನಪು ಇದ್ದಕ್ಕಿದ್ದ ಹಾಗೆ ಯಾಕೆ ಬಂತು ಅನ್ನುವುದು ನನಗೆ ಗೊತ್ತಿಲ್ಲ, ಆದರೆ ನಾಟಕದ ಸಂಧರ್ಭದಲ್ಲಿ ಸಿಜಿಕೆಯವರನ್ನು ನೆನಪು ಮಾಡಿಕೊಳ್ಳದೇ ಇರುವುದು ಸಾಧ್ಯವೇ ಇಲ್ಲವೇನೋ. ಹಾಗೆ ನೋಡಿದರೆ ನನಗೆ ಸಿಜಿಕೆ ಬಗ್ಗೆ ಹೆಚ್ಚು ಗೊತ್ತಿಲ್ಲ. ಅವರೊಡನೆಯ ಒಡನಾಟ ಕೇವಲ ಒಂದು ವರ್ಷದ ಅವಧಿಗೆ ಸೀಮಿತವಾಗಿತ್ತು. ಪಾಲ್ ಸುದರ್ಶನನ ಒಡನಾಟದಲ್ಲಿ ರವೀಂದ್ರ ಕಲಾಕ್ಷೇತ್ರದ ಕಟ್ಟೆಯಲ್ಲಿ ಅನೇಕ ಸಂಜೆಗಳನ್ನು ನಾವುಗಳು ಕಳೆದದ್ದುಂಟು. ಎಪ್ಪತ್ತು-ಎಂಬತ್ತರ ದಶಕದ ರಂಗಭೂಮಿಯ ಉತ್ತುಂಗದ ನಂತರ ಕಲಾಕ್ಷೇತ್ರದ ಕಟ್ಟೆ ಹೆಚ್ಚು ಕಮ್ಮಿ ಖಾಲಿಯಾಗಿತ್ತು. ಕಾರ್ನಾಡರು ಸಿನೆಮಾದತ್ತ ಒಲವು ತೋರಿ ಆ ಕ್ಷೇತ್ರದಲ್ಲಿ ಕೆಲವು ಪ್ರಯೋಗಗಳನ್ನು ನಡೆಸುತ್ತಿದ್ದರು. ಬಿ.ವಿ.ಕಾರಂತರು ಸ್ವಲ್ಪದಿನ ಕಾರ್ನಾಡರ ಜೊತೆ ಸಿನೇಮಾ ಮಾಡಿ ರಾಷ್ಟ್ರೀಯ ಮಟ್ಟದಲ್ಲಿ ರಂಗಭೂಮಿಯ ಕೆಲಸದಲ್ಲಿ ನಿರತರಾಗಿ ಭೋಪಾಲದ ಭಾರತ ಭವನ, ಎನ್.ಎಸ್.ಡಿಗಳತ್ತ ಒಲವು ತೋರಿದ್ದರು. ನಾಗಾಭರಣ ಕೂಡಾ ಸಿನೇಮಾದ ಕಡೆಗೆ ವಾಲಿಬಿಟ್ಟಿದ್ದರು. ಮಿಕ್ಕ ಬೆಂಗಳೂರಿನ ರಂಗಕರ್ಮಿಗಳೆಲ್ಲ (ನಾಟಕಕಾರ/ನಿರ್ದೇಶಕರಾದ ನಾಗೇಶ್, ಸೀತಾರಾಂ, ನಟ ಪ್ರಕಾಶ್ ರೈ) ಆಗಷ್ಟೇ ಹೊಸದಾಗಿ ತೆರೆದುಕೊಳ್ಳುತ್ತಿದ್ದ ಟಿ.ವಿ ಸೀರಿಯಲ್ ಗಳ ಹೊಸ ಮಾಧ್ಯಮದಲ್ಲಿ ತಮ್ಮ ಪ್ರಯೋಗಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು. ಹೀಗೆ ಎಲ್ಲರೂ ಬೆಂಗಳೂರಿನ ನಾಟಕರಂಗವನ್ನು ತ್ಯಜಿಸಿ ಹೋಗುತ್ತಿದ್ದ ಕಾಲದಲ್ಲಿ, ನಾಟಕಗಳನ್ನು ಆಡಲು ಕಲಾಕ್ಷೇತ್ರದ ಬಾಡಿಗೆ ದುಸ್ತರವಾಗುತ್ತಿದ್ದ ಸಮಯದಲ್ಲಿ. ಪ್ರತಿ ಭಾನುವಾರ ಇಡೀ ಭಾರತ ದೇಶವನ್ನೇ ಅರ್ಧ ಘಂಟೆಯ ಕಾಲ ಸ್ಥಬ್ಧಗೊಳಿಸುತ್ತಿದ್ದ ರಾಮಾಯಣ ಮಹಾಭಾರತ ಸೀರಿಯಲ್ ಗಳು ಬರುತ್ತಿದ್ದ ಕಾಲದಲ್ಲಿ, ಶಂಕರ್ ನಾಗ್ ಮಾಲ್ಗುಡಿಯತ್ತ ಹೋಗಿದ್ದ ಕಾಲದಲ್ಲಿ ಸಿಜಿಕೆ ಬೆಂಗಳೂರಿನ ರಂಗಭೂಮಿಯನ್ನು ಮತ್ತೆ ಜೀವಂತ ಮಾಡಲು ಭಗೀರಥ ಯತ್ನ ಮಾಡಿದ್ದರು.


ರಂಗನಿರಂತರ ಸತತವಾಗಿ ನೂರೈವತ್ತು ದಿನಗಳ ಕಾಲ ಸಿಜಿಕೆಯವರಿಗೆಂದೇ ಬೇರೆಯಾಗಿ ನಿರ್ಮಿಸಿದ್ದ ಕಲಾಕ್ಷೇತ್ರದ ಹಿಂಭಾಗದ ಪುಟ್ಟ ಟೆಂಪರರಿ ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು. ಆ ಆರು ತಿಂಗಳಲ್ಲಿ ಹದಿನೈದು ನಾಟಕಗಳ ಪ್ರಯೋಗಕ್ಕೆ ಸಿಜಿಕೆ ಕಾರಣರಾದರು. ಹಾಗೆ ನೋಡಿದರೆ ಆ ಆಯೋಜನೆಯಲ್ಲಿ ಸಿಜಿಕೆ ನಿರ್ದೇಶಿಸಿದ ನಾಟಕವಿತ್ತೇ ಎಂಬುದು ನನಗೆ ನೆನಪಾಗುತ್ತಿಲ್ಲ. ಪಾಲ್ ಸುದರ್ಶನನ ಕಥೆಯಾಧರಿಸಿ ತಯಾರಿಸಿದ ಸುಣ್ಣ ಹಚ್ಚಿದ ಸಮಾಧಿಗಳು ನಾಟಕವನ್ನ ಸಿಜಿಕೆ ನಿರ್ದೇಶಿಸಿದರೆಂದು ನನಗೆ ನೆನಪು.

ಎಷ್ಟೋ ನಟರು, ನಿರ್ದೇಶಕರು, ಬೆಳಕಿನ ರಂಗಕರ್ಮಿಗಳು ಬಂದು ತಮ್ಮ ತಮ್ಮ ನಾಟಕಗಳನ್ನು ಆಡಿ ನಾಪತ್ತೆಯಾದರೂ ಅಲ್ಲಿ ಸ್ಥಾವರವಾಗಿ ನಿಂತಿದ್ದವರು ಸಿಜಿಕೆ. ಬಹುಶಃ ಸಿಜಿಕೆಯ ಜೊತೆ ಇಡೀ ನೊರೈವತ್ತು ದಿನ ನಿಂತು "ಕಟ್ಟೆ" ಎನ್ನುವ ಒಂದು ಪುಟದ ಟೈಪ್ ಮಾಡಿದ ಸೈಕ್ಲೊಸ್ಟೈಲ್ ಪತ್ರಿಕೆಯನ್ನು ಎಡಬಿಡದೇ ತಂದವರು ಪಾಲ್. ಆಗ ಐ‌ಐ‌ಎಂನಲ್ಲಿ ಡಾಕ್ಟರೇಟ್ ಮಾಡುತ್ತಿದ್ದ ನಾನು, ಸುದ್ದಿ ಸಂಗಾತಿಯಲ್ಲಿದ್ದ ಕೇಶವ ಮಳಗಿ ಸುಮಾರಷ್ಟು ಸಂಜೆಗಳನ್ನು ಸಿಜಿಕೆ ಜೊತೆ ಕಳೆದದ್ದುಂಟು..


ಸಿಜಿಕೆ ಬೆಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರೆನ್ನುವುದು ಬರೇ ಔಪಚಾರಿಕವಾದ ಮಾತು. ಅವರು ತೀರಿಕೊಂಡಾಗ ಪತ್ರಿಕೆಗಳಲ್ಲಿ "ಗಾಂಧಿಯನ್ ಸ್ಟಡೀಸ್" ವಿಭಾಗದ ನಿರ್ದೇಶಕರಾಗಿದ್ದರೆಂಬುದು ತಿಳಿದು ನಾನು ಆಶ್ಚರ್ಯಗೊಂಡೆ. ಅದು ಇತ್ತೀಚಿನ ಮಾತು. ಸಿಜಿಕೆ ನಾಟಕ ಅಕಾದಮಿಯ ಚೇರ್ಮನ್ ಆದದ್ದೂ ನನಗೆ ಸೋಜಿಗವುಂಟುಮಾಡಿತ್ತು. ಸಿಜಿಕೆ ಏನೇ ಕೆಲಸ ಮಾಡಿದರೂ ಅದರಲ್ಲಿ ಒಂದು ರೀತಿಯ ಅಚ್ಚುಕಟ್ಟು ಇರುತ್ತಿತ್ತು. ಅವರು ತಮ್ಮ ರಂಗನಿರಂತರದಂತಹ ಕನಸುಗಳಿಗಾಗಿ ಹಣವನ್ನು ಎಲ್ಲಿಂದ ಪೂರೈಸುತ್ತಿದ್ದರೊ, ಹೇಗೆ ಅದನ್ನು ಒಟ್ಟುಗೂಡಿಸುತ್ತಿದ್ದರೋ ತಿಳಿಯದು. ಆದರೆ ಹಣದ ಬಗ್ಗೆ ಅವರು ಎಂದೂ ಚಿಂತಿಸಿದ್ದನ್ನು ನಾನು ನೋಡಿದ್ದಿಲ್ಲ. ಹಾಗೆ ನೋಡಿದರೆ ಸಿಜಿಕೆಯವರು ಕಾರ್ನಾಡರಂತೆ ಫ್ಲಾಂಬೊಯಂಟ್ ಆಗಿರಲ್ಲ, ಅವರೊಡನೆ ಮಾತನಾಡಿದರೆ ವಿಶ್ವ ನಾಟಕ ರಂಗದ ಬಗ್ಗೆ ನಾಟಕಕಾರರ ಬಗ್ಗೆ ದೊಡ್ಡ ದೊಡ್ಡ ವಿಚಾರಗಳಾಗಲೀ, ಸ್ಟೇಜ್ ಕ್ರಾಫ್ಟ್ ಬಗ್ಗೆ ಶೈಲಿಗಳಬಗ್ಗೆ ಎಂದೂ ಅವರು ಮಾತನಾಡಿದ್ದು ನೆನಪಿಲ್ಲ. ಅವರ ಜೊತೆ ಹರಟೆಯೆಂದರೆ ಯಾವ ನಾಟಕ ಎಲ್ಲಿ ಆಡುವಾಗ ಏನು ಗಮ್ಮತ್ತಿನ ಘಟನಾವಳಿ ನಡೆಯಿತೆಂದು ವಿವರಿಸುವುದರಲ್ಲೇ ಮುಗಿದುಹೋಗುತ್ತಿತ್ತು. ರಂಗಮಂಚದ ಮೇಲೆ ಅವರು ಹೆಚ್ಚು ಕಾಣಿಸಿಕೊಂಡದ್ದೂ ನನಗೆ ನೆನಪಿಲ್ಲ. ರಂಗನಿರಂತರ ಮುಗಿದ ದಿನ ಅವರು ಮಂಚದ ಮೇಲೆ ಬಂದು ಆಡಿದ ಮಾತುಗಳು "ನಾನು ಒಂದು ರೆಪರ್ಟರಿ ಮಾಡುವ ನಿಟ್ಟಿನಲ್ಲಿ ನೂರೈವತ್ತು ದಿನ ನಿರಂತರ ನಾಟಕದ ಪ್ರಯೋಗ ಮಾಡಿದೆ.. ಮುಂದೆ ರೆಪರ್ಟರಿ ಮಾಡುವುದೇ ನನ್ನ ಉದ್ದೇಶ. ಅದು ಆಗದಿದ್ದರೆ ನಾನು ನಾಟಕ ಮಾಡುವುದನ್ನೇ ಬಿಟ್ಟುಬಿಡುತ್ತೇನೆ" ಎಂದಷ್ಟೇ ಹೇಳಿ ರಂಗದಿಂದ ಇಳಿದುಬಿಟ್ಟರು.


ಸಿಜಿಕೆ ಒಂದು ಥರದಲ್ಲಿ ಜನ, ಗಣ, ಮನದ ವ್ಯಕ್ತಿಯಾಗಿದ್ದರು. ಅವರು ಆಯೋಜಿಸಿದ ಯಾವುದೇ ಕಾರ್ಯಕ್ರಮದಲ್ಲಿ ಅವರು ಹಾರ ಹಾಕಿ ಸನ್ಮಾನಿಸುತ್ತಿದ್ದದ್ದು ತೆರೆಯ ಮರೆಯಲ್ಲಿ ಕೆಲಸ ಮಾಡಿದ ಕಾರ್ಮಿಕರನ್ನು. ಒಂದು ರೀತಿಯಲ್ಲಿ ಇದು ಅವರ ಕನ್ವಿಕ್ಷನ್ ನ ದ್ಯೊತಕವಾಗಿತ್ತು. ಹೀಗಾಗಿಯೇ ಸಿಜಿಕೆ ಜನಬೆಂಬಲದಿಂದಲೇ ಕಷ್ಟಸಾಧ್ಯವಾದ ಕೆಲಸಗಳನ್ನು ಸರಳವಾಗಿ ಎಂಬಂತೆ ಮಾಡಿತೋರಿಸುತ್ತದ್ದರು. ಶಿವಪ್ರಕಾಶರ ನಾಟಕಗಳಾದ "ಶೇಕ್ಸ್ ಪಿಯರನ ಸ್ವಪ್ನ ನೌಕೆ" ಸುಲ್ತಾನ್ ಟಿಪ್ಪು" ಅಥವಾ ದೇವನೂರ ಮಹಾದೇವರೆ "ಒಡಲಾಳ" ವನ್ನು ನಾಟಕ ಮಾಡಿಸುವುದು ಸುಲಭದ ಮಾತೇನೂ ಆಗಿರಲಿಲ್ಲ.
 ಅದಕ್ಕಿಂತ ಮುಖ್ಯವಾಗಿ ಕಿ.ರಂ.ನಾಗರಾಜರ ಕೈಯಲ್ಲಿ ಪೆನ್ನು ಹಿಡಿಸುವ ಕೆಲಸ ವನ್ನೂ ಸಿಜಿಕೆ ಸಮರ್ಥವಾಗಿ ಮಾಡಿದರು. ಕಿ.ರಂ ಎಷ್ಟು ಹೊತ್ತು ಬೇಕಾದರೂ ಮಾತಾಡುತ್ತಾರಾಗಲಿ ಅವರ ಕೈಯಲ್ಲಿ "ಕಾಲಜ್ಜಾನಿ ಕನಕ" ದಂತಹ ನಾಟಕ ಅವರ ಕೈಯಲ್ಲಿ ಬರೆಸಬೇಕೆಂದರೆ ಅದು ಕಷ್ಟಸಾಧ್ಯದ (ಅಥವಾ ಅಸಾಧ್ಯದ) ಮಾತೇ. ಈ ಪುಸ್ತಕದ ಪ್ರತಿ ನನ್ನ ಇತರ ಪುಸ್ತಕಗಳ ನಡುವೆ ರಾರಾಜಿಸಿತ್ತಿದ್ದುದನ್ನ ನಾನು ಕಂಡೆ. ಬಹುಶಃ ರಂಗನಿರಂತರ ಪ್ರಕಾಶನದ ಏಕೈಕ ಪ್ರಕಟಣೆ ಈ ಪುಸ್ತಕ ಮಾತ್ರವಾಗಿದ್ದರೆ ಆಶ್ಚರ್ಯವೇನೂ ಇಲ್ಲ. ಇಂಥದನ್ನು ಸಿಜಿಕೆ ಸರಳವಾಗಿ ಮಾಡಿಬಿಡುತ್ತಿದ್ದರು.


ದೇವನೂರ ಮಹಾದೇವರ ಕುಸುಮಬಾಲೆ ಆಗಷ್ಟೇ ಬಿಡುಗಡೆಯಾಗಿತ್ತು. ಸಿಜಿಕೆ ಆ ಬಗ್ಗೆ ತುಂಬಾ ಉತ್ಸುಕರಾಗಿದ್ದರು. ಆದರೆ ಅವರ ಅಭಿಪ್ರಾಯದಲ್ಲಿ ಅದನ್ನು ನಾಟಕಕ್ಕೆ ಇಳಿಸುವುದು ಸುಲಭಸಾಧ್ಯದ ಮಾತಾಗಿರಲಿಲ್ಲ. ಕುಸುಮಬಾಲೆಯಲ್ಲಿ ಸಿಜಿಕೆ ಕಂಡದ್ದು ಭಾಷೆಯ ಹಾಗೂ ಕಥನದ ಸಂಭ್ರಮವನ್ನ. ನಾಟಕದ ಮಾಧ್ಯಮಕ್ಕೆ ಒಗ್ಗದಿದ್ದರೂ ಕುಸುಮಬಾಲೆಯ ಬಗ್ಗೆ ರಂಗಮಂಚದ ಮೇಲೆ ಏನಾದರೂ ಮಾಡಬೇಕೆಂಬ ತುಡಿತವಿದ್ದದ್ದರಿಂದ ಅದು ಅವರನ್ನು ಕುಟುಕುತ್ತಿದ್ದುದರಿಂದ ಆ ಕಾದಂಬರಿಯನ್ನು ಕೈಬಿಡದೇ ಅದಕ್ಕೆ ಒಂದು ಕಥಾಕಥನದ ಫಾರ್ಮಾಟ್ ಕೊಟ್ಟು ಅದನ್ನು ರಂಗದ ಮೇಲೆ ನಿರೂಪಿಸಿಯೇಬಿಟ್ಟರು.


ರಂಗನಿರಂತರದ ತಕ್ಷಣ ಸಿಜಿಕೆ ನಾವುಗಳು ಊಹಿಸಲಾರದ್ದನ್ನು ಮಾಡಿದರು. ಈ ವಿವರ ಬಹುಶಃ ಬಹಳಷ್ಟು ಜನರಿಗೆ ಗೊತ್ತಿಲ್ಲ ಎನ್ನಿಸುತ್ತದೆ. ಚಿತ್ರನಟ ಲೋಕೇಶ್ ನಿರ್ಮಿಸಿ ನಿರ್ದೇಶಿಸಬೇಕೆಂದುಕೊಂಡ "ಭುಜಂಗಯ್ಯನ ದಶಾವತಾರಗಳು" ಚಿತ್ರಕ್ಕೆ ಚಿತ್ರಕಥೆ ಬರೆಯಲು ಸಿಜಿಕೆ ಹೊರಟು ನಿಂತರು. ಎಲ್ಲರೂ ಟಿ.ವಿ. ಚಿತ್ರರಂಗ ಎಂದು ಓಡಾಡುತ್ತಿದ್ದ ಆಗಿನ ದಿನಗಳಲ್ಲಿ ನಾಟಕವೆಂದು ಕಲ್ಲುಬಂಡೆಯಂತೆ ನಿಂತಿದ್ದ ಸಿಜಿಕೆ ಯಾಕೆ ಸಿನೆಮಾಕ್ಕೆ ಹೋದರು ಎನ್ನುವುದು ನನಗೆ ಸೋಜಿಗದ ಸಂಗತಿಯಾಗಿತ್ತು. ಸಿಜಿಕೆ, ಲೋಕೇಶ್, ಕೇಶವ ಮಳಗಿ ಮತ್ತು ನಾನು - ನಾಲ್ಕೂ ಮಂದಿ ಲೋಕೇಶರ ಈಗಲೋ ಆಗಲೋ ಎನ್ನುವರೀತಿಯಲ್ಲಿದ್ದ ಅಂಬಾಸಿಡರ್ ಕಾರಿನಲ್ಲಿ ಬೆಂಗಳೂರಿನಿಂದಾಚೆ ಒಂದು ಪುಟ್ಟ ಅಣೆಕಟ್ಟಿನ ಪಕ್ಕದಲ್ಲಿದ್ದ ಹಳ್ಳಿಯೊಂದರ ಐಬಿಯಲ್ಲಿ ಮೂರು ದಿನ ಬಿಡಾರ ಹೂಡಿ ಶ್ರೀಕೃಷ್ಣ ಆಲನಹಳ್ಳಿಯ ಕಾದಂಬರಿಯನ್ನ ದೃಶ್ಯ ಮಾಧ್ಯಮಕ್ಕೆ ಇಳಿಸುವ ಕಾರ್ಯವನ್ನು ಪ್ರಾರಂಭಿಸಿದೆವು. ಊರು ಯಾವುದೆಂಬುದು ನನಗೆ ನೆನಪಾಗುತ್ತಿಲ್ಲ, ಆದರ ಆ ಮೂರುದಿನಗಳು ಮಾತ್ರ ಅದ್ಭುತವಾಗಿದ್ದವು. 
ಲೋಕೇಶ್ ಗಾಡಿಯಲ್ಲಿ ಒಂದು ಕ್ರೇಟ್ ರಮ್ ತುಂಬಿಸಿಕೊಂಡು ತಂದಿದ್ದರು. ಸಿಜಿಕೆ ಆಗಷ್ಟೇ "ಗುಂಡು ಬಿಟ್ಟಿದ್ದೇನೆ" ಎಂಬ ಹೊಸ ಖಯಾಲಿಯನ್ನ ಪ್ರದರ್ಶನ ಮಾಡುತ್ತಿದ್ದರು. ಬೆಳಿಗ್ಗೆ ನಿಧಾನವಾಗಿ ಎದ್ದರೂ ರಾತ್ರೆ ತಡವಾಗುವವರೆಗೆ ಭುಜಂಗಯ್ಯನ ಚಿತ್ರಕಥೆಯನ್ನು ಪರಿಕಲ್ಪಿಸಿ ಬರೆಯುವುದು -- ಬೇಸರವಾದಾಗ ನಾನು ಒಯ್ದಿದ್ದ ತಿರುಮಲೇಶರ ಅವಧ ದ ಕವಿತೆಗಳನ್ನು ಓದುತ್ತಿದ್ದೆವು. ಸಂಜೆಯಾಗುತ್ತಿದ್ದಂತೆ, ಸಿಜಿಕೆ ತಮ್ಮ "ಗುಂಡು ಹಾಕುವುದಿಲ್ಲ" ಎಂಬ ಶಪಥವನ್ನು ನೆನಪು ಮಾಡಿಕೊಳ್ಳುತ್ತಲೇ -- ಒಂದು ಮುಚ್ಚಳಿಕೆ" ಅನ್ನುತ್ತಾ ರಂ ಬಾಟಲಿನ ಮುಚ್ಚಳಕ್ಕೆ ನಾಲ್ಕಾರು ಹನಿ ರಮ್ ಸುರಿದು ನೀಟಾಗಿ ಗಂಟಲಿಗೆ ಸೇರಿಸುತ್ತದ್ದರು. ಗುಂಡೇರುತ್ತಿದ್ದಂತೆ ಲೋಕೇಶ್ ಸುಶ್ರಾವ್ಯವಾಗಿ ರತ್ನನ ಪದಗಳನ್ನು ಹಾಡುತ್ತಿದ್ದರು...


ಶ್ರೀಕೃಷ್ಣನ ಎಲ್ಲ ಕಾದಂಬರಿಗಳ ಸಿನೆಮಾ ಆವೃತ್ತಿಯಲ್ಲಿ ನಟಿಸಿದ್ದರಿಂದ, ಲೋಕೇಶ್ ಗೆ ಈ ಚಿತ್ರ ಮಾಡಬೇಕೆಂಬ ತುಡಿತ. ಆದರೆ ಶ್ರೀಕೃಷ್ಣ ತೀರಿಕೊಳ್ಳುವುದಕ್ಕೆ ಮುಂಚೆ ಆ ಕಾದಂಬರಿಯ ಟಿ.ವಿ ಹಕ್ಕುಗಳನ್ನು ನಾಗೇಶ್ ಗೆ ಮಾರಿ ಚಲನಚಿತ್ರದ ಹಕ್ಕುಗಳನ್ನು ಲೋಕೇಶ್ ಗೆ ಮಾರಿದ್ದರು. ಆಗಲೇ ದೂರದರ್ಶನಕ್ಕಾಗಿ ನಾಗೇಶ್ ಅದನ್ನು ಚಿತ್ರೀಕರಿಸುವ ತಯಾರಿ ನಡೆಸಿದ್ದರು.. ಆದರೂ ಲೋಕೇಶ್ ಗೆ ಮಾತ್ರ ಇದನ್ನು ಮಾಡಲೇಬೇಕೆಂಬ ಹಠ. ಒಟ್ಟಾರೆ, ಸಿಜಿಕೆ ಆ ಚಿತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಚಿತ್ರಕಥೆ ಬರೆದದ್ದಲ್ಲದೇ ಅದರ ನಿರ್ದೇಶನದ ಸಮಯದಲ್ಲೂ ಲೋಕೇಶ್ ಜೊತೆ ಸಿಜಿಕೆ ಇದ್ದರೆಂದು ನನಗೆ ನೆನಪು.


ಆಗ ಸಿಜಿಕೆ ಸಿನೆಮಾ ಲೋಕಕ್ಕೆ ಹೋಗಬಹುದೆಂದು ನನಗನ್ನಿಸಿದ್ದರೂ ಅದು ನಿಜವಾಗಲಿಲ್ಲ. ಬಹುಶಃ ರಂಗನಿರಂತರದ ಮನಾಟನಿಯನ್ನು ಮುರಿಯಲು ಸಿಜಿಕೆ ಲೋಕೇಶ್ ಅವರ ಕರೆಗೆ ಓ ಗೊಟ್ಟಿರಬಹುದು. ಅಥವಾ ಅಸಲೀ ರಂಗಕರ್ಮಿ ಲೋಕೇಶರ ಜೊತೆ ಕೆಲಸ ಮಾಡಲು ಸಹಜವಾಗಿಯೇ ಇಷ್ಟಪಟ್ಟಿರಬಹುದು.


ಆ ನಂತರ ನನಗೆ ಸಿಜಿಕೆಯ ಸಂಪರ್ಕ ತಪ್ಪಿಹೋಯಿತು. ನಾನು ಬೆಂಗಳೂರಿನಿಂದ ಹೊರನಾಡಿಗನಾದೆ. ಆತ ನಾಟಕ ಅಕಾದಮಿಯ ಅಧ್ಯಕ್ಷರಾಗಲು ಒಪ್ಪಿದ್ದೇ ನನಗೆ ಆಶ್ಚರ್ಯ ಉಂಟುಮಾಡಿತ್ತು. ಆದರೆ ಶುದ್ಧ ರಂಗಕರ್ಮಿ ಸಿನೇಮಾದಲ್ಲಿ ಕೈಯಾಡಿಸಿದಂತೆ ಅವರು ಸಂಸ್ಥೆ ನಡೆಸುವುದರಲ್ಲೂ ಕೈಯಾಡಿಸಿನೋಡಬೇಕೆಂದು ಆ ಕೆಲಸವನ್ನ ಒಪ್ಪಿಕೊಂಡರೇ? ಇಲ್ಲ ತಮ್ಮ ಕನಸಿನ ರೆಪರ್ಟರಿಯನ್ನೆ ಸ್ಥಾಪಿಸುವ ಸಲುವಾಗಿ ಅದನ್ನ ಒಪ್ಪಿಕೊಂಡರೇ? ನನಗೆ ತಿಳಿಯದು. ಅವರು ಆ ಪಾತ್ರದಲ್ಲಿ ಎಷ್ಟು ಸಫಲರಾಗಿದ್ದರೆಂಬುದೂ ಗೊತ್ತಿಲ್ಲ.


ನನಗನ್ನಿಸುವಂತೆ ಸಿಜಿಕೆ ರಂಗನಿರಂತರದಂತಹ "ಘಟನೆ"ಗಳನ್ನು ಚೆನ್ನಾಗಿ ಸಂಯೋಜಿಸುತ್ತಿದ್ದರು. ಆದರ ಅದನ್ನು ಒಂದು ಚಳುವಳಿಯಾಗಿ ಪರಿವರ್ತಿಸುವ ಕ್ಷಮತೆ ಅವರಲ್ಲಿಲ್ಲ. ಇದಕ್ಕೆ ಕಾರಣ ಅವರು ಸಂಸ್ಥಾಗತವಾದದ್ದನ್ನು ಪ್ರಶ್ನಿಸುತ್ತ, ಅವುಗಳಿಗೆ ಸವಾಲಾಗುತ್ತ ಸಿಡಿದು ನಿಂತವರು. ಸಿಜಿಕೆ ಸಂಸ್ಥೆಯ ಚೌಕಟ್ಟಿನೊಳಗೆ ಕೆಲಸ ಮಾಡುವವರಾಗಿದ್ದರೆ ಇಲ್ಲ ಆತ ಒಳ್ಳೆಯ ಅರ್ಥಶಾಸ್ತ್ರದ ಉಪನ್ಯಾಸಕರಾಗಿರುತ್ತಿದ್ದರು ಇಲ್ಲವೇ ವಿಶ್ವವಿದ್ಯಾಲಯವನ್ನು ಪೂರ್ಣವಾಗಿ ತ್ಯಜಿಸಿ ತಮ್ಮ ಚಳವಳಿಯನ್ನು ಮುಂದುವರೆಸುತ್ತಿದ್ದರು. ಅವರು ಈ ಎರಡನ್ನೂ ಮಾಡಲಿಲ್ಲ. ಅಧ್ಯಾಪಕರ ಕೆಲಸದಲ್ಲಿದ್ದುಕೊಂಡು ಅದನ್ನು ಒಂದು ಹವ್ಯಾಸದಂತೆ ಸ್ವೀಕರಿಸಿ, ನಾಟಕಗಳನ್ನು ಮಾಡಿಸುತ್ತಾ ಆ ಹವ್ಯಾಸವನ್ನು ಒಂದು ವೃತ್ತಿಯಂತೆ ಪರಿಗಣಿಸಿ ಮುಂದುವರೆದರು. ಹೀಗಾಗಿ ಅವರ ರೆಪರ್ಟರಿಯ ಕನಸು ಕನಸಾಗಿಯೇ ಉಳಿದದ್ದರಲ್ಲಿ ಆಶ್ಚರ್ಯವೇನೂ ಇಲ್ಲ.


ತಮ್ಮ ಕೊನೆಯ ಎರಡು ಬೆರಳುಗಳ ನಡುವೆ ಸಿಗರೇಟನ್ನು ಸಿಕ್ಕಿಸಿ ದಮ್ಮೆಳೆಯುತ್ತಿದ್ದ ಚಿಟಿಕೆ ಬಾರಿಸಿ ಬೂದಿ ಉದುರಿಸುತ್ತಿದ್ದ ಸಿಜಿಕೆಯವರ ಚಿತ್ರ ನನ್ನ ಮನಸ್ಸಿನಲ್ಲಿ ಈಗಲೂ ಇದೆ. ಅವರು ತೀರಿಕೊಂಡಾಗ ನೀಟಾಗಿ ತಲೆ ಬಚಿದ್ದ ಸಿಜಿಕೆಯವರ ಚಿತ್ರವನ್ನು ನಾನು ಪತ್ರಿಕೆಗಳಲ್ಲಿ ನೋಡಿದೆ.... ಆದರೆ ನಾನು ನೋಡಿದ್ದ ಸಿಜಿಕೆ ಎಂದೂ ತಲೆ ಬಾಚಿದ್ದಿಲ್ಲ, ಇಸ್ತ್ರಿಯಾದ ಅಂಗಿ ತೊಟ್ಟಿದ್ದಿಲ್ಲ, ನಾಟಕ ಬಿಟ್ಟರೆ ಬೇರೇನನ್ನೂ ಯೋಚಿಸಿದ್ದಿಲ್ಲ.. ಈಗ ಲೋಕೇಶ್ ಇಲ್ಲ, ಸಿಜಿಕೆ ಇಲ್ಲ... ಅವರ ನೆನಪಿಗೆ ನಾನು ಕೇಶವ ಮಳಗಿ ಕೂತು ಒಂದು ಮುಚ್ಚಳಿಕೆ ರಂ ಹಾಕಬೇಕು.

No comments: