Thursday, May 23, 2013

ಅಂತರರಾಷ್ಟ್ರೀಯ ಬುಕರ್ ಗೆ ಅನಂತಮೂರ್ತಿಯವರ ಓಟ!

ಅನಂತಮೂರ್ತಿಯವರಿಗೆ ಅಂತರರಾಷ್ಟ್ರೀಯ ಮ್ಯಾನ್ ಬುಕರ್ ಬಹುಮಾನ ಬರುವುದೋ ಇಲ್ಲವೋ ಎನ್ನುವ ಸಸ್ಪೆನ್ಸ್ ಈಗ ಮುಗಿದಿದೆ. ಮತ್ತೊಮ್ಮೆ ಅದು ಇಂಗ್ಲೀಷ್ ಮಹಾಮಾತೆಯ ಪಾಲಾಗಿದೆ. ಇದರ ಬಗ್ಗೆ ಅಲ್ಲಲ್ಲಿ ಚರ್ಚೆ ನಡೆದಿದೆ.

ಅಂತರರಾಷ್ಟ್ರೀಯ ಮ್ಯಾನ್ ಬುಕರನ್ನು ಎರಡು ವರ್ಷಕ್ಕೊಮ್ಮೆ ಕೊಡಲಾಗುತ್ತದೆ. ಇದು ಅರವಿಂದ ಅಡಿಗರಿಗೆ ಬಂದ ಮ್ಯಾನ್ ಬುಕರ್ ಗಿಂತ ಭಿನ್ನವಾದ ಬಹುಮಾನ. ಮ್ಯಾನ್ ಬುಕರ್ ಬಹುಮಾನವನ್ನು ಪ್ರತೀ ವರ್ಷ ಕಾಮನ್ವೆಲ್ತ್ ಪ್ರಾಂತದಿಂದ ಇಂಗ್ಲೀಷಿನಲ್ಲಿ ಪ್ರಕಟಗೊಂಡ ಕೃತಿಗೆ ನೀಡಲಾಗುತ್ತದೆ. ಇಂಗ್ಲೀಷಿನಲ್ಲಿ ಅಥವಾ ಇಂಗ್ಲೀಷ್ ಅನುವಾದದಲ್ಲಿ ಲಭ್ಯವಿರುವ ಯಾವುದೇ ರಾಷ್ಟ್ರದ ಲೇಖಕರ ಜೀವನಕಾಲದ ಸಾಹಿತ್ಯಕೃಷಿಯನ್ನು ಗುರುತಿಸುತ್ತಾ ಈ ಬಹುಮಾನವನ್ನು ನೀಡಲಾಗುತ್ತದೆ.

ಈ ಹಿಂದೆ ಈ ಪ್ರಶಸ್ತಿ ಇಸ್ಮೇಲ್ ಕಾಡ್ರೆ (ಅಲ್ಬೇನಿಯಾ) ಚಿನುಆ ಅಚಿಬೆ (ನೈಜೀರಿಯಾ), ಆಲಿಸ್ ಮುನ್ರೋ (ಕೆನಡಾ)  ಮತ್ತು ಫಿಲಿಪ್ ರಾಥ್ (ಅಮೇರಿಕಾ) ಇವರುಗಳಿಗೆ ನೀಡಲಾಗಿದೆ. ಈ ವರ್ಷ ಅದು ಲಿಡಿಯಾ ಡೇವಿಸ್ ಪಾಲಾಗಿದೆ. ಐದು ಬಹುಮಾನಿತರಲ್ಲಿ ನಾಲ್ಕು ಜನ ಮೂಲತಃ ಇಂಗ್ಲೀಷಿನಲ್ಲಿ ತಮ್ಮ ಸಾಹಿತ್ಯ ಕೃಷಿಯನ್ನು ನಡೆಸಿದ್ದಾರೆ. ಭಾರತದ ಮಹಾಶ್ವೇತಾದೇವಿ ಹಿಂದೆ ಈ ಬಹುಮಾನಕ್ಕೆ ಹೆಸರಿಸಲ್ಪಟ್ಟಿದ್ದರು. ಆದರೆ ಆ ವರ್ಷ ಪ್ರಶಸ್ತಿಯನ್ನು ಆಲಿಸ್ ಮನ್ರೋಗೆ ಕೊಡಲಾಯಿತು. ಭಾರತೀಯ ಸಂಜಾತರಾದ, ಆದರೆ ಇಂಗ್ಲೀಷಿನಲ್ಲಿ ಬರೆಯುವ ಸಲ್ಮಾನ್ ರಶ್ದೀ, ನೈಪಾಲ್, ರೋಹಿನ್ತನ್ ಮಿಸ್ತ್ರಿ ಕೂಡಾ ಹಿಂದೆ ಈ ಪ್ರಶಸ್ತಿಗೆ ಹೆಸರಿಸಲ್ಪಟ್ಟಿದ್ದರು.

ಈ ಪ್ರಶಸ್ತಿ ಐದು ಬಾರಿ ನೀಡಲ್ಪಟ್ಟಿದೆ, ಐದನೆಯ ಆವೃತ್ತಿಯಲ್ಲಿ ನಮ್ಮ ಅನಂತಮೂರ್ತಿ ಹತ್ತು ಜನರ ಪಟ್ಟಿಯಲ್ಲಿದ್ದಾರೆ.

ಮೊದಲ ಬಾರಿ ಈ ಪ್ರಶಸ್ತಿಯನ್ನು ಇಸ್ಮೇಲ್ ಕಾಡ್ರೆಗೆ ನೀಡಿದಾಗ ಹದಿನೆಂಟು ಜನರ ಪಟ್ಟಿಯಿತ್ತು. ಆ ಪಟ್ಟಿಯಲ್ಲಿ ಐದು ಜನ ನೊಬೆಲ್ ವಿಜೇತರಿದ್ದರು, ಅದರ ಜೊತೆಗೆ ನಂತರದ ವರ್ಷಗಳಲ್ಲಿ ನೊಬೆಲ್ ಬಹುಮಾನ ಪಡೆದ ಡಾರಿಸ್ ಲೆಸ್ಸಿಂಗ್ ಸಹ ಇದ್ದರು. ಇದೂ ಸಾಲದೆಂಬಂತೆ ಆಗಲೇ ಬುಕರ್ ಪಡೆದಿದ್ದ ಇಬ್ಬರಿದ್ದರು. ಅಷ್ಟೂ ಜನ ಉತ್ತರ-ದಕ್ಷಿಣ ಅಮೇರಿಕ, ಯೂರೋಪ್, ಜಪಾನ್, ಈಜಿಪ್ಟ್ ಮತ್ತು ಇಸ್ರೇಲ್ ದೇಶಗಳಿಗೆ ಸಂದವರಾಗಿದ್ದರು. ಒಂದು ರೀತಿಯಿಂದ ನೋಡಿದರೆ ಈ ಪ್ರಶಸ್ತಿಯನ್ನು ನೊಬೆಲ್ ಪುರಸ್ಕಾರದಷ್ಟೇ ಘನತೆಯುಳ್ಳ ಪುರಸ್ಕಾರವನ್ನು ಮಾಡುವುದೇ ಆಯೋಜಕರ ಇರಾದೆಯಾಗಿತ್ತೆನ್ನಿಸುತ್ತದೆ. ಆದರೆ ನೊಬೆಲ್ ಗೂ ಈ ಪುರಸ್ಕಾರಕ್ಕೂ ವ್ಯತ್ಯಾಸವೇ ಇಲ್ಲವಾದರೆ ಹೇಗೆ? 

ಎರಡನೆಯ ಬಾರಿಯ ವೇಳೆಗೆ ಹದಿನೆಂಟರ ಪಟ್ಟಿ ಹದಿನೈದಕ್ಕೆ ಇಳಿದಿತ್ತು. ಅದೇ ವರ್ಷ ನೊಬೆಲ್ ಪುರಸ್ಕಾರ ಪಡೆದ ಡೋರಿಸ್ ಲೆಸ್ಸಿಂಗ್ ಹೆಸರು ಬಿಟ್ಟರೆ, ಬೇರಾವ ನೊಬೆಲ್ ಪುರಸ್ಕೃತರೂ ಇರಲಿಲ್ಲ. ಬಹುಶಃ ಐವರು ನೊಬೆಲ್ ಪುರಸ್ಕೃತರನ್ನು ನೇಮಿಸಿ ಯಾರಿಗೂ ಬಹುಮಾನ ನೀಡದೇ ಬೇರೊಬ್ಬರಿಗೆ ನೀಡಿದ್ದರಿಂದ ಈ ಪುರಸ್ಕಾರದ ಘನತೆಗೆ ಧಕ್ಕೆ ಬರಬಹುದೆಂದು ಆಯೋಜಕರು ಯೋಚಿಸಿದ್ದರೇ? ಆದರೆ ಎರಡನೆಯ ಬಾರಿಗೆ ನಮಗೆ ಕಲವು ಸೂಕ್ಷ್ಮ ಬದಲಾವಣೆಗಳು ಕಾಣುತ್ತವೆ. ಈ ಬಾರಿ ಹದಿನೈದರ ಪಟ್ಟಿಯಲ್ಲಿ ಐದು ಜನ ಬುಕರ್ ಪುರಸ್ಕೃತರಿದ್ದರು. ಒಟ್ಟಾರೆ ಹತ್ತು ಜನ ಉತ್ತರ-ದಕ್ಷಿಣ ಅಮೆರಿಕ, ಯೂರೋಪಿಗೆ ಸಂದವರಾಗಿದ್ದರೆ ಇನ್ನೈದು ಜನ ಭಿನ್ನ ಜಾಗಗಳಿಂದ ಬಂದ ಲೇಖಕರಾಗಿದ್ದರು – ಆಸ್ಟ್ರೇಲಿಯಾ, ಶ್ರೀಲಂಕಾ, ಭಾರತ (ರಶ್ದೀ), ಇಸ್ರೇಲ್ ಮತ್ತು ನೈಜೀರಿಯಾ. ಈ ಬಾರಿ ಬಹುಮಾನ ನೈಜೀರಿಯಾದ ಚಿನುಆ ಅಚಿಬೆಗೆ ನೀಡಲಾಯಿತು. ಇಲ್ಲಿಯೂ ಬುಕರ್ ಮತ್ತು ಬುಕರ್ ಆಫ್ ಬುಕರ್ಸ್ ಪ್ರಶಸ್ತಿ ಪಡೆದ ರಶ್ದೀಯನ್ನ, ಮಿಕ್ಕ ಬುಕರ್ ವಿಜೇತರನ್ನು ಬಿಟ್ಟು ಅಚಿಬೆಗೆ ಬಹುಮಾನ ಕೊಡುವುದರ ಮೂಲಕ ಬಹುಶಃ ಈ ಪ್ರಶಸ್ತಿ ತನ್ನ ವಿಭಿನ್ನ ಛಾಪನ್ನು ಏರ್ಪಡಿಸಿಕೊಳ್ಳುವತ್ತ ಸಾಗಿತ್ತೇನೋ.

ಮೂರನೆಯ ಬಾರಿಗೆ ಹೆಸರಿಸಿದವರ ಪಟ್ಟಿ ಹದಿನಾಲ್ಕಕ್ಕೆ ಇಳಿಯಿತು. ಪಟ್ಟಿಯಲ್ಲಿ ಆಗ್ಗೆ ನೊಬೆಲ್ ವಿಜೇತರಾಗಿದ್ದ ನೈಪಾಲ್ ಹೆಸರಿತ್ತು. ಎರಡು ಬಾರಿ ಬುಕರ್ ಪಡೆದಿದ್ದ ಆಸ್ಟ್ರೇಲಿಯಾದ ಪಿಟರ್ ಕ್ಯಾರೀ ಇದ್ದರು. ಮತ್ತು ಮುಂದೆ ನೊಬೆಲ್ ಪಡೆಯಲಿದ್ದ ಮಾರಿಯಾ ವಾರ್ಗಾಸ್ ಯೋಸಾ ಇದ್ದರು. ಅದೇ ವರ್ಷದಲ್ಲಿ ಅಪ್ಪಟ ಭಾರತೀಯರಾದ ಮಹಾಶ್ವೇತಾ ದೇವಿಯವರೂ ಇದ್ದರು. ಮೂರನೆಯ ಬಾರಿಗೆ ಭಾಷಾ ವೈವಿಧ್ಯವೂ, ದೇಶ ವೈವಿಧ್ಯವೂ ಈ ಪಟ್ಟಿಯಲ್ಲಿ ಕಾಣಿಸಲಾರಂಭಿಸಿತು. ಯೂರೋಪಿನಿಂದ ಅನೇಕರು ಹೆಸರಿಸಲ್ಪಟ್ಟಿದ್ದರಾದರೂ ಹಿಂದೆ ಕಾಣಿಸಿರದ ಚೆಕ್, ಕ್ರೊಏಶಿಯಾದಂತಹ ದೇಶಗಳು ಕಾಣಿಸಿಕೊಂಡವು. ಕಡೆಗೂ ಪ್ರಶಸ್ತಿ ಲಭಿಸಿದ್ದು ಕೆನಡಾದ ಆಲಿಸ್ ಮನ್ರೋಗೆ. ಈಕೆಗೂ ಹಿಂದೆ ಬುಕರ್/ನೊಬೆಲ್ ಬಂದಿರಲಿಲ್ಲ. ಒಂದು ರೀತಿಯಲ್ಲಿ ನೊಬೆಲ್ ಅಥವಾ ಬುಕರ್ ಪುರಸ್ಕೃತರನ್ನು ನೇಮಿಸಿ ತಿರಸ್ಕರಿಸುವ ಚಾಳಿಯಿಂದ ಹೊರಬಂದು ತನ್ನದೇ ವಿಶಿಷ್ಟ ವ್ಯಕ್ತಿತ್ವವನ್ನು ಈ ಪುರಸ್ಕಾರ ಬಹುಮಾನಗಳಲ್ಲದೆಯೇ – ನೇಮಿಸುವ ಪ್ರಕ್ರಿಯೆಯಲ್ಲೂ ಕಂಡುಕೊಂಡಿತೇನೋ.

ನಾಲ್ಕನೆಯ ಆವೃತ್ತಿ ಬರುವ ವೇಳೆಗೆ ಈ ಪಟ್ಟಿ ಹದಿಮೂರಕ್ಕಿಳಿಯಿತು. ಪುರಸ್ಕಾರದಲ್ಲಿ ಯಾವುದೇ ನೊಬೆಲ್ ಪುರಸ್ಕೃತರಾಗಲೀ ಬುಕರ ಪುರಸ್ಕೃತರಾಗಲೀ ಇರಲಿಲ್ಲ. ಇಬ್ಬರು ಲೇಖಕರ ಹೆಸರು ಹಿಂದೆ ಬುಕರ್ ಗೆ ಹೆಸರಿಸಲಾಗಿತ್ತಾದರೂ ಅವರಿಗೆ ಪುರಸ್ಕಾರ ಬಂದಿರಲಿಲ್ಲ. ಆದರೆ ಜೀವಮಾನಕಾಲದ ಸಾಹಿತ್ಯ ಕೃಷಿಯನ್ನು ಪರಿಗಣಿಸುವಾಗ – ಒಂದೇ ವರ್ಷದ ಒಂದು ಕೃತಿಗೆ ಬಹುಮಾನ ನೀಡುವ ಬುಕರ್ ಗಿಂತ ಭಿನ್ನ ಮಾಪನವಿರಬೇಕಾಗುತ್ತದೆ ಎಂಬುದನ್ನು ಆಯೋಜಕರು ಮನಗಂಡರೇನೋ. ಚೀನಾ ಮತ್ತು ಲೇಬನನ್ ಗೆ ಸಂದ ಲೇಖಕರು ಇದ್ದರಾದರೂ ಹಚ್ಚಿನಂಶ ಮತ್ತೆ ಇಂಗ್ಲೀಷ್ ಕೇಂದ್ರಿತ ಅಮೆರಿಕಾ-ಯೂರೋಪಿಗೆ ಸಂದವರೇ ಆಗಿದ್ದರು. ಮೊದಲಬಾರಿಗೆ ದಕ್ಷಿಣ ಅಮೇರಿಕದಿಂದ ಯಾರೂ ಹೆಸರಿಸಲ್ಪಟ್ಟಿರಲಿಲ್ಲ. ಆ ಬಾರಿಗೆ ಕಡೆಗೂ ಬಹುಮಾನ ಪಡೆದವರು ಅಮೆರಿಕದ ಫಿಲಿಪ್ ರಾಥ್.

ಈಗ ಐದನೆಯ ಆವೃತ್ತಿಯ ಪಟ್ಟಿಯಲ್ಲಿ ಹತ್ತು ಜನರ ಹೆಸರಿದೆ. ಯಾರೂ ನೊಬೆಲ್-ಬುಕರ್ ಗಳನ್ನು ಪಡೆದವರೂ, ಹೆಸರಿಸಲ್ಪಟ್ಟವರೂ ಅಲ್ಲ. ಅಮೇರಿಕದಿಂದ ಮಾತ್ರ ಇಬ್ಬರು ಲೇಖಕರು ಹೆಸರಿಸಲ್ಪಟ್ಟಿದ್ದರೆ ಮಿಕ್ಕವರು, ಭಾರತ, ಪಾಕಿಸ್ತಾನ, ರಷ್ಯಾ, ಚೀನಾ, ಇಸ್ರೇಲ್, ಫ್ರಾನ್ಸ್, ಸ್ವಿಟ್ಜರ್ಲೆಂಡ್, ರಷ್ಯಾ ದೇಶಗಳಿಗೆ ಸಂದವರು. ಹೀಗಾಗಿ ತೀರ್ಪುಗಾರರಿಗೆ ಇದು ಸ್ವಲ್ಪ ಕಷ್ಟದ ಕೆಲಸವೇ ಆಗಿರಬೇಕು. ಒಂದೇ ರೀತಿಯ ಅನೇಕರು ಬಂದಾಗ ಅವರಲ್ಲಿ ಭಿನ್ನರನ್ನು ಹೆಕ್ಕುವುದು ಸುಲಭ, ಆದರೆ ಈ ಪಟ್ಟಿಯಲ್ಲಿ ಎಲ್ಲರೂ ತಮ್ಮ ತಮ್ಮ ವಿಶಿಷ್ಟ ಬರಹದ ಶೈಲಿಯನ್ನು ಹೊಂದಿರುವುದಲ್ಲದೇ, ವಿಶಿಷ್ಟ ಸಂಸ್ಕೃತಿಗಳನ್ನೂ ಬಿಂಬಿಸುತ್ತಿದ್ದಾರೆ. ಈ ಎಲ್ಲದರ ನಡುವೆ ಮೊದಲ ಬಾರಿಗೆ ಕನ್ನಡ ಮತ್ತು ನಮ್ಮ ಸಾಕ್ಷಿಪ್ರಜ್ಞೆಯಾಗಿರುವ ಅನಂತಮೂರ್ತಿಯವರೂ ಇದ್ದರು.

ಈ ಬಾರಿ ಹೆಸರಿಸಲ್ಪಟ್ಟಿರುವ ಮತ್ತೊಬ್ಬ ಲೇಖಕ ಪಾಕಿಸ್ತಾನದ ಇಂತಿಜಾರ್ ಹುಸೇನ್. ಅವರಿಗೂ ಒಂದು ಭಾರತದ ನಂಟಿದೆ – ಅದೇನೆಂದರೆ, ಅವರನ್ನು ಉರ್ದುವಿನಿಂದ ಅನುವಾದಿಸಿರುವವರು ಭಾರತೀಯರೇ ಆದ ಅಲೋಕ ಭಲ್ಲಾ. ಇಂತಿಜಾರ್ ಹುಸೇನರ ಪ್ರಿಯ ಸಾಹಿತ್ಯದಲ್ಲಿ ಬುದ್ಧ ಮತ್ತು ಜಾತಕ ಕತೆಗಳು ಸೇರಿವೆ! (ಈ ಪ್ರಶಸ್ತಿಯನ್ನ ಗೆದ್ದ ಲೇಖಕರು ತಮ್ಮ ಕೃತಿಗಳನ್ನು ಅನುವಾದಿಸಿದ ತಮ್ಮ ಪ್ರಿಯ ಅನುವಾದಕರನ್ನು ಹೆಸರಿಸಬಹುದು. ಲೇಖಕರು ಹೆಸರಿಸಿದ ಅನುವಾದಕರಿಗೂ ಒಂದು ಬಹುಮಾನವಿದೆ!)

ಹತ್ತು ಲೇಖಕರಲ್ಲಿ ಅನಂತಮೂರ್ತಿಯವರನ್ನೊಳಗೊಂಡು ಏಳು ಜನ ಲಂಡನ್ನಿಗೆ ಪ್ರಯಾಣ ಬೆಳೆಸಿದ್ದರು. ಮೊನ್ನೆ ಸಂಜೆಯ ಕಾರ್ಯಕ್ರಮದಲ್ಲಿ ತಮ್ಮ ಕೃತಿಗಳ ಆಯ್ದ ಭಾಗಗಳನ್ನು ಓದುವ ಕಾರ್ಯಕ್ರಮವೂ ಇತ್ತು. ಮೊದಲಿಗೆ ಕನ್ನಡವನ್ನು ಓದಿ ಆನಂತರ ಅದರ ಇಂಗ್ಲೀಷ್ ಅನುವಾದವನ್ನು ಓದಲಾಯಿತೆಂದು ಅನಂತಮೂರ್ತಿಯವರು ಹೇಳಿದ್ದಾರೆ. ಬಹುಮಾನ ಬರಲೆಂದು ಹಾರೈಸಿ ಬರೆದ ಈಮೈಲಿಗೆ ಅನಂತಮೂರ್ತಿಯವರು ಹೀಗೆ ಪ್ರತಿಕ್ರಿಯಿಸಿದರು: ಬಹುಮಾನ ಬಂದರೆ ಸಂತೋಷವೇ, ಆದರೆ ಕನ್ನಡ ವಿಶ್ವದ ಎಣಿಕೆಯಲ್ಲಿ ಬಂದಿತಲ್ಲವೇ? ಅದೊಂದು ನನ್ನ ಕೊನೆಗಾಲದ ಸಾಧನೆ...

ಈ ಬಹುಮಾನ ಬಂದಿದ್ದರೆ ಅನಂತಮೂರ್ತಿಯವರ ಕೀರ್ತಿಯೇನೂ ಹೆಚ್ಚಾಗುತ್ತಿರಲಿಲ್ಲ, ಅವರಿಗಿರುವ ಹೆಸರೂ, ಗೌರವವೂ, ಮಾನ್ಯತೆಯೂ ಈ ಒಂದು ಬಹುಮಾನದಿಂದ ವೃದ್ಧಿಯಾಗುವುದಿಲ್ಲ. ಆದರೆ ಅವರನ್ನು ಹೆಸರಿಸಿದ್ದರಿಂದ ಕನ್ನಡ ಭಾಷೆ, ಸಾಹಿತ್ಯ ಚರ್ಚೆಗೆ ಒಳಗಾಗುತ್ತದೆ. ಅದೇ ನಮಗೆ ಸಿಗುವ ಲಾಭ. ಇದೇ ಅನಂತಮೂರ್ತಿಯವರ ಆಲೋಚನೆಯೂ ಸಹ.

ಮೊನ್ನೆ ಕನ್ನಡದ ಓದು ಆಯಿತು. ಅದರ ಜೊತೆಗೆ ಕನ್ನಡದ ಮಾತು ಹೇಗೆ ಚರ್ಚೆಯಾಗುತ್ತಿದೆ ಎನ್ನುವ ಹೊಳಹು ಇಲ್ಲಿದೆ. ಈ ಬಾರಿ ಹೆಸರಿಸಲ್ಪಟ್ಟವರನ್ನೆಲ್ಲಾ ಆಯೋಜಕರು ಕೇಳಿ ಐದು ಪ್ರಶ್ನೆಗಳಲ್ಲಿ ನಿಮ್ಮ ಸಾಹಿತ್ಯಿಕ ಹೀರೋಗಳು ಯಾರು ಎನ್ನುವ ಪ್ರಶ್ನೆಗೆ ಅನಂತಮೂರ್ತಿಯವರು ಪಂಪ, ಕುಮಾರವ್ಯಾಸ, ಬಸವ, ಅಲ್ಲಮ, ಬೇಂದ್ರೆ, ಅಡಿಗ, ಶಿವರಾಮ ಕಾರಂತರನ್ನು ಹೆಸರಿಸಿದ್ದರು. ಹೀಗೆ ಅನಂತಮೂರ್ತಿಯವರ ಮೂಲಕ ನಮ್ಮ ಮಿಕ್ಕ ಕನ್ನಡ ದಿಗ್ಗಜರ ಬಗ್ಗೆ ಕುತೂಹಲ ಇನಿತಾದರೂ ಬೆಳೆದು ಕನ್ನಡೇತರರೂ ಕನ್ನಡ ಸಾಹಿತ್ಯವನ್ನು ಓದುವಂತಾದರೆ ಅದೇ ಇದರಿಂದ ಕನ್ನಡಕ್ಕಾಗುವ ಲಾಭ. ಈ ಕಾರಣದಿಂದ ನಮಗೆ, ಕನ್ನಡಿಗರಿಗೆ ಈ ಪ್ರಶಸ್ತಿಯ ಪ್ರಕ್ರಿಯೆ ಮುಖ್ಯವಾಗುತ್ತದೆ.

ತಮ್ಮ ಅನಾರೋಗ್ಯದ ನಡುವೆಯೂ ಅನಂತಮೂರ್ತಿಯವರು ಈ ಸಮಾರಂಭಕ್ಕೆ ಹಾಜರಾಗಲು ಲಂಡನ್ನಿಗೆ ಹೋಗಿದ್ದರು. ಪ್ರಶಸ್ತಿಯು ಬೇರೊಬ್ಬರ ಪಾಲಿಗೆ ಸಂದಿದೆ. ಅದರಿಂದ ದುಃಖವೇನೂ ಇಲ್ಲ! ಫಿಲಿಪ್ ರಾಥ್ ಬಹುಮಾನ ಪಡೆಯುವ ಮುನ್ನ ಮೂರು ಬಾರಿ ನಿಯಾಮಕಗೊಂಡಿದ್ದರು. ಒಂದೇ ವರ್ಷದಲ್ಲಿ (2005) ಈಗ ನೊಬೆಲ್ ಪಡೆದಿರುವ ಆರು ಮಂದಿ ಪಟ್ಟಿಯಲ್ಲಿದ್ದರೂ ಯಾರಿಗೂ ಈ ಬಹುಮಾನ ಗಿಟ್ಟಲಿಲ್ಲ. ಹೀಗಾಗಿ, ಬಹುಮಾನ ಬರದಿರುವುದು ಒಂದು ದೊಡ್ಡ ವಿಷಯವೇನೂ ಅಲ್ಲ. ಬಹುಮಾನಕ್ಕೆ ನಿಯಾಮಕ ಗೊಂಡಿರುವುದೇ ಕನ್ನಡಕ್ಕೆ, ಕನ್ನಡದ ಅಗ್ರ ಬರಹಗಾರರಿಗೆ ಸಿಕ್ಕಿರುವ ಮಾನ್ಯತೆ.

ಈ ಬೆಟ್ಟಿಂಗ್, ಐಪಿಎಲ್, ಸಚಿನ್ ನಿವೃತ್ತಿ, ಸಿದ್ದರಾಮಯ್ಯನವರ ಸಂಪುಟದ ದುಃಖ ದುಮ್ಮಾನಗಳ ನಡುವೆ ಅನಂತಮೂರ್ತಿಯವರ ಈ ಸುದ್ದಿ ಭಿನ್ನ ಚರ್ಚೆಯನ್ನೇ ಹುಟ್ಟುಹಾಕಿದೆ.


Sunday, March 31, 2013

ಮ್ಯಾಗ್ಸಸೇ ಪ್ರಶಸ್ತಿ ಪಡೆದ ದೀಪ್ ಜೋಶಿ ಮತ್ತು ಅವರು ಬೆಳೆಸಿದ ಪ್ರದಾನ್ ಸಂಸ್ಥೆ
ಏಶಿಯಾದ ನೊಬೆಲ್ ಎಂದೇ ಪ್ರಖ್ಯಾತವಾಗಿರುವ ರ್‍ಯಾಮನ್ ಮ್ಯಾಗಸಸೇ ಪುರಸ್ಕಾರವನ್ನು ಈ ಬಾರಿ ಪಡೆದವರಲ್ಲಿ ಭಾರತೀಯ ದೀಪ್ ಜೋಶಿ ಸಹ ಸೇರಿದ್ದಾರೆ. ಎಂದೂ ತಮ್ಮ ಧ್ವನಿಯನ್ನು ಏರಿಸದ, ಬೆಳ್ಳಿಗಡ್ಡಧಾರಿ, ಒಂದು ಥರದಲ್ಲಿ ಋಷಿಯ ಅವತಾರದಂತಿರುವ ಹಿರಿಯ ದೀಪ್‍ಗೆ ಈ ಪುರಸ್ಕಾರ ಬಂದದ್ದು ಸಹಜವೂ ಸಮರ್ಪಕವೂ ಆಗಿದೆ. ಯಾವ ಆರ್ಭಟವೂ ಇಲ್ಲದೇ, ಎಲ್ಲವನ್ನೂ ಒಂದು ಸ್ಪಷ್ಟ ಆಲೋಚನೆ, ದೂರದರ್ಶಿತ್ವದಿಂದ ಯೋಜನಾಬದ್ಧವಾಗಿ ಕಾರ್ಯರೂಪಕ್ಕಿಳಿಸಿರುವ ದೀಪ್‍ ಒಂದು ರೀತಿಯಿಂದ ಅಜಾತ ಶತ್ರು. ಅವರ ಬಗ್ಗೆ ಕುಹಕದ ಧ್ವನಿಯಾಗಲೀ, ಬೇಸರದ ಧ್ವನಿಯಾಗಲೀ ನಾನು ಈ ವರೆಗೆ ಕೇಳಿಯೇ ಇಲ್ಲ. ಆದರೆ ದೀಪ್ ಜೋಶಿಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ನಾವು ಆತನ ಜೀವನದಲ್ಲಿ ಹಣಕಿಹಾಕದೇ ಆತನ ಕೆಲಸ ಮತ್ತು ಆತ ನಡೆಸಿದ ಸಂಸ್ಥೆಯ ನಿಲುವನ್ನು ಅರ್ಥಮಾಡಿಕೊಳ್ಳುವುದರಲ್ಲಿಯೇ ಮ್ಯಾಗಸಸೆಯ ಮಹತ್ವವೂ ಇದೆ.

ಮೂಲತಃ ದೀಪ್ ನಡೆಸಿದ್ದ ಪ್ರದಾನ್ [Professional Assistance for Development Action] ಅನ್ನುವ ಸಂಸ್ಥೆಯ ಮೂಲಸೆಲೆ ಹುಟ್ಟಿದ್ದು ವಿಜಯ್ ಮಹಾಜನ್ ಅವರ ಮನಮಸ್ತಕದಲ್ಲಿ. ವಿಜಯ್ ಐಐಎಂ, ಅಹಮದಾಬಾದಿನಲ್ಲಿ ಓದುತ್ತಿದ್ದ ಕಾಲದಲ್ಲಿ ಅಲ್ಲಿನ ಮೊದಲ ನಿರ್ದೇಶಕರಾಗಿದ್ದ ರವಿ ಮಥಾಯಿಯಿಂದ ಬಹಳವೇ ಪ್ರಭಾವಿತರಗಿದ್ದರು. ರವಿ ತಮ್ಮ ೩೮ನೇ ವಯಸ್ಸಿನಲ್ಲಿ ಐಐಎಂನ ಪ್ರಥಮ ಪೂರ್ಣಾವಧಿ ನಿರ್ದೇಶಕರಾಗಿ ನಿಯಮಿತಗೊಂಡರು. ೪೫ನೇ ವಯಸ್ಸಿಗೆ ಆತ ಆ ಪದವಿಯನ್ನು ತ್ಯಜಿಸಿ ಸಾಧಾರಣ ಪ್ರೊಫೆಸರ್ ಆಗಿ ಅಲ್ಲಿ ಮುಂದುವರೆದರು. ಆಗ ಅವರು ರಾಜಾಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ತೊಗಲು ಕಾರ್ಮಿಕರನ್ನು ಒಟ್ಟುಗೂಡಿಸಿ ಅವರ ಉತ್ಪತ್ತಿಗೆ ಮಾರುಕಟ್ಟೆಯನ್ನು ಹುಡುಕಿಕೊಡುವ - ಆಕ್ಷಣ್ ರಿಸರ್ಚ್ ಮಾಡುತ್ತಿದ್ದರು. ವಿಜಯ್ ರವಿಯ ವಿಕಾಸದ ಕೆಲಸದಿಂದಲೂ, ಹಾಗೂ ಅವರು ತಮ್ಮ ಪದವಿಯನ್ನು ಕಿರಿವಯಸ್ಸಿನಲ್ಲಿಯೇ ಕೈಬಿಟ್ಟು ಬೇರೆ ಅರ್ಥಗಭಿತ ಕೆಲಸವನ್ನು ಹುಡುಕಿ ಹೊರಟಿದ್ದನ್ನೂ ಕಂಡು ಪ್ರಭಾವಿತರಾದರು. ಹೀಗಾಗಿ ಐಐಎಂನಿಂದ ಪಾಸಾದ ಕೂಡಲೇ ವಿಜಯ್ ಯಾವುದೇ ಕಾರ್ಪೊರೇಟ್ ಕೆಲಸವನ್ನು ಹುಡುಕದೇ ಸೀದಾ ಬಿಹಾರಕ್ಕೆ ಒಂದು ಸ್ವಯಂ ಸೇವಾಸಂಸ್ಥೆಯ ಜೊತೆ ಕೆಲಸ ಮಾಡಲು ಹೊರಟರು.

ಸ್ವಯಂ ಸೇವಾ ಸಂಸ್ಥೆಗಳ ಜೊತೆಗೆ ಕೆಲಸ ಮಾಡಿದ ವಿಜಯ್‌ಗೆ ತಿಳಿದ ಮೊದಲ ವಿಚಾರವೆಂದರೆ, ಈ ಥರದ ಸಂಸ್ಥೆಗಳಲ್ಲಿ ಒಳಿತು ಮಾಡಬೇಕೆಂಬ ತೀವ್ರ ಬಯಕೆಯಿರುವ ಹೃದಯವಂತರಿರುತ್ತಾರೆ. ಆದರೆ ಅವರುಗಳಿದೆ ಆಧುನಿಕ ನಿರ್ವಹಣಾ ತಂತ್ರಗಳ ಪರಿಚಯವಿರುವುದಿಲ್ಲವಾದ್ದರಿಂದ, ಅವರುಗಳ ಕೆಲಸ ಒಂದು ಸೀಮಿತ ಪರಧಿಯಲ್ಲಿದ್ದುಬಿಡುತ್ತದೆ. ಒಂದು ರೀತಿಯಲ್ಲಿ ಒಳಿತುಮಾಡುವ ಸ್ವಯಂಸೇವಾ ಸಂಸ್ಥೆಗಳ ಹೃದಯವಂತಿಕೆಗೂ, ನಿರ್ವಹಣಾತಂತ್ರಗಳನ್ನು ತಿಳಿದ ಐಐಎಂನಂತಹ ’ಬುದ್ಧಿವಂತ’ರ ಪರಿಣಿತಿಗೂ ಬೆಸುಗೆ ಹಾಕಿದರೆ ವಿಕಾಸದ ಪರಿಭಾಷೆಯನ್ನೇ ಬದಲಾಯಿಸಬಹುದೆಂದು ವಿಜಯ್ ನಂಬಿದ್ದರು.

ಹೀಗೆ, ೧೯೮೩ರಲ್ಲಿ ಪ್ರದಾನ್ ವಿಜಯ್ ಮಹಾಜನ್ ಅವರ ನೇತೃತ್ವದಲ್ಲಿ ಜನ್ಮ ತಾಳಿತು. ಆಗಿನ ದಿನಗಳಲ್ಲಿ ವಿಜಯ್ ತಮ್ಮಂತೆಯೇ ಇದ್ದ ಇತರರನ್ನೂ ತಮ್ಮ ಜೊತೆಗೂಡಿಸಿಕೊಂಡರು - ಈಗ ಧಾನ್ ಫೌಂಡೇಷನ್ ನಡೆಸುವ ವಾಸಿಮಲೈ, ಬೆಂಗಳೂರಿನ ವಿದ್ಯಾಪೋಷಕ/ಪ್ರೇರಣಾ ಸಂಸ್ಥೆಯ ಪ್ರಮೋದ್ ಕುಲಕರ್ಣಿ, ಐಐಟಿಯಿಂದ ಆಗಷ್ಟೇ ಹೊರಬಿದ್ದಿದ್ದ ಅಚಿಂತ್ಯ ಘೋಷ್, ಐಐಎಂ ಸಹಪಾಠಿ ವೇದ್ ಆರ್ಯ - ಹೀಗೆ ಈ ಆಲೋಚನಾಲಹರಿಯನ್ನು ಹೊತ್ತ ಜನರ ಒಂದು ಗುಂಪು ಒಂದಾಗಿದ್ದರು. ಈ ಸಂಸ್ಥೆಯ ಮೂಲ ಪ್ರವರ್ತಕರಲ್ಲಿ ಎಲ್ಲರೂ ಸಮಾನರು. ಎರಡೆರಡು ವರ್ಷಗಳ ನಾಯಕತ್ವವನ್ನು ಅವರುಗಳು ನಿರ್ವಹಿಸಿ ಮತ್ತೆ ವಿಕಾಸದ ಕೆಲಸದಲ್ಲಿ ತೊಡಗುವುದು ಎನ್ನುವಂತಹ ಪ್ರಕ್ರಿಯೆಯನ್ನು ಅವರ ನಾಯಕತ್ವದ ಸೂತ್ರದಲ್ಲಿ ಅಳವಡಿಸಲಾಯಿತು. ಆಗ ದೀಪ್ ಜೋಶಿ ಫೋರ್‍ಡ್ ಫೌಂಡೇಷನ್ ಅನ್ನುವ ಅನುದಾನಗಳನ್ನು ನೀಡುವ ಸಂಸ್ಥೆಯಲ್ಲಿ ಪ್ರೋಗ್ರಾಮ್ ಆಫೀಸರ್ ಆಗಿದ್ದರು. ಪ್ರದಾನ್ ತಮ್ಮ ಕೆಲಸಕ್ಕೆ ಅನುದಾನವನ್ನು ಪಡೆಯಲು ಹೋದಾಗ ಈ ವಿಚಾರವನ್ನು ಪ್ರೋತ್ಸಾಹಿಸಿ, ಮೊದಲ ಅನುದಾನ ಬರುವಂತೆ ನೋಡಿದ ಜವಾಬ್ದಾರಿ ದೀಪ್ ಜೋಶಿಯದ್ದಾಗಿತ್ತು. ಆಗಲೇ ದೀಪ್‍ಗೆ ಈ ಕೆಲಸದ ಬಗ್ಗೆ ಎಷ್ಟು ಅದಮ್ಯ ನಂಬಿಕೆ ಉಂಟಾಗಿತ್ತೆಂದರೆ, ಆತ ತನ್ನ ಡಾಲರ್ ಸಂಬಳದ ಕೆಲಸವನ್ನು ಬಿಟ್ಟು ಈ ಗೆಳೆಯರೊಂದಿಗೆ ಸೇರಿಬಿಟ್ಟರು.

ಪ್ರದಾನ್ ಸಂಸ್ಥೆಯ ರಚನಾ ಸೂತ್ರ ಸರಳವಾಗಿತ್ತು. ಐಐಟಿ, ಐಐಎಂ, ಇರ್ಮಾ, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್, ಫಾರೆಸ್ಟ್ ಮ್ಯಾನೇಜ್‍ಮೆಂಟ್ ಇತ್ಯಾದಿ ಸಂಸ್ಥೆಗಳಿಂದ ನಿರ್ವಹಣಾಸೂತ್ರಗಳನ್ನು ಕಲಿತ, ತಂತ್ರಜ್ಞಾನದಲ್ಲಿ ತರಬೇತಿಯಿದ್ದ ಯುವಕರನ್ನು ಆಯ್ದು ಒಂದೆಡೆಗೆ ಹಾಕುವುದು. ಈ ಪ್ರದಾನ್ ಗುಂಪು ದೇಶದ ಯಾವುದೇ ಭಾಗದಲ್ಲಿ ಹಂಚಿಹೋಗಿರುವ ವಿಕಾಸದ ಕೆಲಸದಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಉದ್ಯೋಗಿಗಳನ್ನು ಒದಗಿಸುವ ಪ್ರಯತ್ನ ಮಾಡುತ್ತದೆ. ಹೀಗೆ ತಮಗೆ ಆಸಕ್ತಿಯಿರುವ ಸಂಸ್ಥೆಯಲ್ಲಿ ಉನ್ನತ ವ್ಯಾಸಂಗ ಮಾಡಿದ ಈ ಜನ ಎರವಲಿನ ಮೇಲೆ ಹೋಗಿ ಕೆಲಸ ಮಾಡಬಹುದು. ಹಾಗೆ ಕೆಲಸ ಮಾಡಿದ ಸಂಸ್ಥೆ ಅವರಿಗೆ ಒಗ್ಗಿ ಬಂದರೆ, ಅಲ್ಲಿಯೇ ಕೆಲಸಕ್ಕೆ ಖಾಯಂ ಆಗಿ ಸೇರಿಬಿಡಲೂ ಬಹುದು. ಅಕಸ್ಮಾತ್ ಅವರಿಗೆ ಆ ಸಂಸ್ಥೆಗಳು ಒಗ್ಗಲಿಲ್ಲವೆಂದರೆ ಅವರು ಪ್ರದಾನ್‍ಗೆ ವಾಪಸ್ಸಾಗಿ ಮಿಕ್ಕ ಯಾವುದೇ ಸಂಸ್ಥೆಗಳಲ್ಲಿ ಸೇರುವ ಪ್ರಯತ್ನ ಮಾಡಬಹುದು. ಹೀಗೆ ಮಾಡಿದಾಗ ಹೃದಯದಿಂದಲೇ ಕೆಲಸ ಸಾಗಿಸುವ ಏಕ್ಟಿವಿಸ್ಟ್ ಸಂಸ್ಥೆಗಳಿಗೂ, ಮಸ್ತಕದಿಂದ ಎಲ್ಲವನ್ನೂ ವಿಶ್ಲೇಷಿಸಿ ಮುಂದುವರೆವ ತಂತ್ರಿಕರಿಗೂ ಒಂದು ಅದ್ಭುತ ಬೆಸುಗೆಯನ್ನು ಹಾಕಿದ ಹಾಗಾಗುತ್ತದೆ. ಅಕಸ್ಮಾತ್ ಈ ಬೆಸುಗೆ ಕುಸಿದರೆ ಆ ವ್ಯಕ್ತಿ ವಿಕಾಸದ ಕ್ಷೇತ್ರವನ್ನು ಬಿಟ್ಟು ಹೊರಹೋಗುವುದಕ್ಕೆ ಬದಲು, ಬೇರೊಂದು ಸಂಸ್ಥೆಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಹಾಗೂ
ಅಲ್ಲಿ ಇಲ್ಲಿ ಚದುರಿ ಹೋಗಿರುವ ಈ ’ಬುದ್ಧಿವಂತ’ರಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ಹಾಗೂ ವರುಷಕ್ಕೊಮ್ಮೆ ತಮ್ಮ ಹಿಂದಿನ ವರ್ಷದ ಪುನರಾವಲೋಕನ ಮಾಡಿಕೊಳ್ಳಲೂ ಈ ಸಂಸ್ಥೆ ಅನುವು ಮಾಡಿಕೊಟ್ಟಿತ್ತು. ಈ ದಿನ ನಾವುಗಳು ಹಿಂದಿರುಗಿ ನೋಡಿದಾಗ - ಉತ್ತಮ ವಿಕಾಸ ಶೀಲ ಸ್ವಯಂಸೇವಾ ಸಂಸ್ಥೆಗಳನ್ನು ನಡೆಸುತ್ತಿರುವ ಅನೇಕರು ಪ್ರದಾನ್‍ನಲ್ಲಿ ತಮ್ಮ ಆರಂಭದ ಜೀವನವನ್ನು ಕಳೆದು ಕಡಿದಾದ ಈ ಕೆಲಸದ ಸೂತ್ರಗಳನ್ನು ಕಂಡುಕೊಂಡವರೇ.

ಈ ಆರಂಭದ ಘಟ್ಟದಲ್ಲಿ ವಿಜಯ್ ಪ್ರದಾನ್ ಸಂಸ್ಥೆಯ ನಾಯಕತ್ವವನ್ನು ನಿರ್ವಹಿಸುತ್ತಿದ್ದರು. ಆದರೆ ವಿಜಯ್ ಮೊದಲೇ ತಮ್ಮ ಎರಡು ವರ್ಷಗಳ ಅವಧಿಯ ನಂತರ ದೀಪ್ ಜೋಶಿಗೆ ನಾಯಕತ್ವವನ್ನು ಹಸ್ತಾಂತರ ಮಾಡುವುದಾಗಿ ಘೋಷಿಸಿದ್ದರು. ವಿಜಯ್ ನಾಯಕತ್ವದಲ್ಲಿ ಪ್ರದಾನ್ ಸಂಸ್ಥೆ ತನ್ನ ಮೂಲ ಸೂತ್ರಗಳಿಗೆ ಬದ್ಧವಾಗಿ ಒಳ್ಳೆಯ ವಿದ್ಯೆ-ಹೃದಯವಂತಿಕೆ ಇದ್ದ ಜನರನ್ನು ಹುಡುಕುವ ಅವರುಗಳನ್ನು ಸ್ವಯಂಸೇವಾ ಸಂಸ್ಥೆಗಳಲ್ಲಿ ಸೇರಿಸುವ ಕೆಲಸವನ್ನು ಮಾಡುತ್ತಿತ್ತು. ದೀಪ್ ಈ ಸಂಸ್ಥೆಯ ನಾಯಕತ್ವವನ್ನು ವಹಿಸಿಕೊಳ್ಳುವ ವೇಳೆಗೆ ಈ ಸೂತ್ರಗಳನ್ನು ಪ್ರಶ್ನಿಸುವ ಸಮಯ ಬಂದಿತ್ತು. ಹೊರಗಿನ ಜಗತ್ತು ಬದಲಾಗಿದ್ದು - ಐಐಂ-ಐಐಟಿಯಂತಹ ಸಂಸ್ಥೆಗಳಿಂದ ಉತ್ತೀರ್ಣರಾಗುವ ತಂತ್ರಜ್ಞರಿಗೆ ಸಿಗುವ ಸಂಬಳಗಳು ತಾರಕಕ್ಕೇರಿ ಅವರುಗಳು ಇಂಥಹ ಒಂದು ಉದ್ಯೋಗಾವಕಾಶವನ್ನು ಸ್ವೀಕರಿಸುವುದು ಕಡಿಮೆಯಾಗುತ್ತಾ ಹೋಯಿತು. ಪ್ರದಾನ್ ಸಂಸ್ಥೆಗೂ ತನ್ನದೇ ಚಟುವಟಿಕೆಗಳನ್ನು ಮಾಡಬೇಕೆನ್ನುವ - ಒಂದು ಮೂಲ ಸೂತ್ರವನ್ನು ಹಿಡಿದು ಹೊರಡಬೇಕೆನ್ನುವ ತುರ್ತೂ ಉಂಟಾಯಿತು. ಹೀಗಾಗಿ ಪ್ರದಾನ್ ತಾನೇ ಒಂದು ಸ್ವಯಂಸೇವಾ ಸಂಸ್ಥೆಯ - ನೇರವಾಗಿ ಕಾರ್ಯಮಾಡುವ ಸಂಸ್ಥೆಯಾಗಿ ರೂಪುಗೊಂಡಿತು. ಹೀಗೆ ರೂಪುಗೊಂಡ ಮೇಲಿನ ನಂತರದ ನಾಯಕತ್ವವನ್ನು ದೀಪ್, ನೇರವಾಗಿ ಹಾಗೂ ಪರೋಕ್ಷವಾಗಿ ನಿರ್ವಹಿಸಿ ಬಂದರು.

ಪ್ರದಾನ್ ಸಂಸ್ಥೆ ನೇರವಾಗಿ ವಿಕಾಸದ ಕೆಲಸವನ್ನು ಕೈಗೊಂಡಾಗ ಅಳವಡಿಸಿಕೊಂಡ ಕೆಲವು ಸೂತ್ರಗಳನ್ನು ಇಂದಿಗೂ ಪಾಲಿಸುತ್ತಿದೆ. ಮೊದಲನೆಯ ಸೂತ್ರವೆಂದರೆ ಆ ಸಂಸ್ಥೆ ನಡೆಸುವ ಕೆಲಸಗಳಲ್ಲಿ ಸಮೂಹದ ಪಾತ್ರ ಹಿರಿಯದ್ದಾಗಿರುತ್ತದೆ. ಹೀಗಾಗಿಯೇ ಅವರು ಮೈಕ್ರೊಫೈನಾನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಸ್ವ-ಸಹಾಯ ಗುಂಪುಗಳ ಸೂತ್ರವನ್ನು ಹಿಡಿದು ಹೊರಡುತ್ತಾರೆಯೇ ಹೊರತು - ಅತೀ ಶೀಘ್ರವಾಗಿ ಬೆಳೆಯುವ ಗ್ರಾಮೀಣ್ ಮಾದರಿಯನ್ನು ಹಿಡಿದು ಹೊರಡುವುದಿಲ್ಲ. ದೇಶದ ದೊಡ್ಡ ರಾಜ್ಯಗಳಾದ - ಮಧ್ಯಪ್ರದೇಶ ಝಾರ್‌ಖಂಡ್, ಛತ್ತೀಸ್‌ಘಡ, ಬಿಹಾರ್, ರಾಜಾಸ್ಥಾನ ದಂತಹ ಕಠಿಣ ಪ್ರದೇಶಗಳಲ್ಲಿ ಅತೀ ಹಿಂದುಳಿದ ಜಿಲ್ಲೆಗಳಲ್ಲಿ ಪ್ರದಾನ್ ತನ್ನ ಕೆಲಸದ ವ್ಯಾಪ್ತಿಯನ್ನು ಹೊತ್ತು ನಡೆದಿದೆ. ಲಘುವಿತ್ತ ಅಲ್ಲದೇ, ಜಲಸಂಪನ್ಮೂಲ, ಸ್ಥಳೀಯ ಜೀವನೋಪಾಧಿಗಳನ್ನು ಪೋಷಿಸುವ ಕೆಲಸವನ್ನು ಪ್ರದಾನ್ ನಡೆಸುತ್ತಾ ಬಂದಿದೆ. ಪ್ರತೀ ಕ್ಷೇತ್ರಕ್ಕೂ ಭಿನ್ನವಾದ ಉಪಾಯ, ಪ್ರತೀ ಸಮಸ್ಯೆಗೂ ಭಿನ್ನವಾದ ಸಮಾಧಾನವಿರುತ್ತದೆನ್ನುವುದನ್ನು ಆ ಸಂಸ್ಥೆ ಗುರುತಿಸಿದೆ. ಹೀಗಾಗಿಯೇ ಬಿಹಾರದ ಗೊಡ್ಡಾದಲ್ಲಿ ಅವರ ಕೆಲಸ ಟಸರ್ ರೇಷ್ಮೆಗೆ ಸಂಬಂಧಿಸಿದ್ದೂ, ಮಧ್ಯಪ್ರದೇಶದ ಸುಖತವಾದಲ್ಲಿ ಕೋಳಿಸಾಕಣೆಯನ್ನು ಹೆಚ್ಚಾಗಿ ಪ್ರೋತ್ಸಾಹಿಸಿದ್ದನ್ನು ನಾವು ಕಾಣಬಹುದು.

ಉನ್ನತ ವಿದ್ಯಾಸಂಸ್ಥೆಗಳಿಂದ ಉತ್ತೀರ್ಣರಾದ ಯುವಕರನ್ನು ನಿಯಮಿಸುವುದನ್ನು ನಿಲ್ಲಿಸಿದ ಪ್ರದಾನ್ ತನ್ನ ಹೆಸರಿನಲ್ಲಿನ ’ಪ್ರೊಫೆಷನಲ್’ ಅನ್ನುವ ಪದಕ್ಕೆ ಇನ್ನೂ ನ್ಯಾಯ ಒದಗಿಸುತ್ತಿದೆಯೇ? ದೀಪ್ ಜೋಶಿ ನಾಯಕತ್ವದಲ್ಲಿ ನಡೆದ ರೂಪಾಂತರದಲ್ಲಿ ಆತ ಕಂಡುಕೊಂಡದ್ದು ಒಂದು ನಿಜ - ಪ್ರೊಫೆಷನಲ್ ಅಂದ ಕೂಡಲೇ ಅದು ಐಐಟಿ, ಐಐಎಂ ಆಗಿರಬೇಕಿಲ್ಲ. ಅಲ್ಲಿಂದ ಪ್ರಾರಂಭ ಮಾಡಿದರೂ ದೇಶದಲ್ಲಿ ಅನೇಕ ಭಾಗಗಳಲ್ಲಿರುವ ಉತ್ತಮ ಇಂಜಿನಿಯರಿಂಗ್ ಹಾಗೂ ಇತರ ತಂತ್ರಿಕ, ನಿರ್ವಹಣಾ ಸಂಸ್ಥೆಗಳಿವೆ. ಅಲ್ಲಿಂದಲೂ ಜನರನ್ನು ನಿಯಮಿಸಬಹುದು ಅನ್ನುವುದನ್ನು ಆತ ತೋರಿಸಿಕೊಟ್ಟರು. ಪ್ರತೀ ವರ್ಷ ಸುಮಾರು ನೂರಕ್ಕೂ ಹೆಚ್ಚು ಜನರನ್ನು ದೇಶಾದಾದ್ಯಂತ ಹಂಚಿಹೋಗಿರುವ ಕಾಲೇಜುಗಳಿಂದ ಹೆಕ್ಕಿ ಅವರಿಗೆ ಒಂದು ವರುಷದ ’ಅಪ್ರೆಂಟಿಸ್ ಶಿಪ್’ ತರಬೇತಿ ನೀಡಿ ವಿಕಾಸದ ಕೆಲಸಕ್ಕೆ, ಕಡಿದಾದ, ಕಠಿಣವಾದ ಜಾಗದಲ್ಲಿ ಜೀವನ ನಡೆಸಲು - ಹೃದಯವಂತಿಕೆಯನ್ನು ಬೆಳೆಸಿಕೊಳ್ಳಲು ತಯಾರು ಮಾಡುವ ಕೆಲಸವನ್ನು ಪ್ರದಾನ್ ಮಾಡುತ್ತಿದೆ.

ಈ ಅಪ್ರೆಂಟಿಸಿಶಿಪ್ ಕೂಡ ಎಷ್ಟು ಯೋಜನಾಬದ್ಧವಾಗಿದೆಯೆಂದರೆ ತರಬೇತಿಗೇ ಒಂದು ಭಿನ್ನ ಕ್ಯಾಂಪಸ್ಸನ್ನು ಮಧ್ಯಪ್ರದೇಶದ ಗ್ರಾಮಾಂತರ ಇಲಾಖೆಯಲ್ಲಿ ಇಟಾರ್ಸಿ ಬಳಿಯಿರುವ ಕೇಸ್ಲಾ ಗ್ರಾಮದಲ್ಲಿ ಕಟ್ಟಿಸಿದ್ದಾರೆ. ಅಲ್ಲಿನ ತರಬೇತಿಗೆ ಬೇಕಾದ ಓದಿನ ಪರಿಕರಗಳನ್ನು ಪರಿಣಿತರಿಂದ ತಯಾರು ಮಾಡಿಸಿದ್ದಾರೆ. ಒಂದು ರೀತಿಯಲ್ಲಿ ಐ.ಎ.ಎಸ್ ಅಧಿಕಾರಿಗಳಿಗೆ ಮಸೂರಿಯಲ್ಲಿ ನಡೆಯುವ ತರಬೇತಿಯ ರೀತಿಯಲ್ಲಿ ಒಂದು ವರ್ಷದ ತರಬೇತಿಯನ್ನು ಪ್ರದಾನ್ ನೀಡುತ್ತದೆ. ಈ ನೂರೂ ಜನ ಪ್ರದಾನ್ ನಲ್ಲಿ ಕೆಲಸ ಮುಂದುವರೆಸದಿರಬಹುದು. ಇತರ ಸ್ವಯಂ ಸೇವಾ ಸಂಸ್ಥೆಗಳನ್ನು ಸೇರಬಹುದು ಅಥವಾ ಎಲ್ಲವನ್ನೂ ಬಿಟ್ಟು ಕಾರ್ಪರೇಟ್ ಜಗತ್ತಿಗೂ ಹೋಗಬಹುದು. ಆದರೆ ಈ ಒಂದು ವರ್ಷದ ಅನುಭವದ ಫಲವಾಗಿ ಅವರ ಮೂಲ ವಿಚಾರಗಳು ವಿಕಾಸರ ಹೃದಯವಂತಿಯತ್ತ ತಿರುಗುವುದರಲ್ಲೆಯೇ ಈ ಕಾರ್ಯಕ್ರಮದ ಸಾಫಲ್ಯತೆಯಿದೆ!

ಹೀಗೆ ಪ್ರದಾನ್‍ಗೆ ಬಂದ ಯುವಕರನ್ನು ಯೋಚಿಸಲು, ಹೊಸ ಯೋಜನೆಗಳನ್ನು, ಸಮಸ್ಯೆಗಳಿಗೆ ಹೊಸ ಸೃಜನಶೀಲ ಸಮಾಧಾನಗಳನ್ನು ಕಂಡುಕೊಳ್ಳಲು ಅದನ್ನು ಕಾರ್ಯರೂಪಕ್ಕಿಳಿಸಲು ಪ್ರದಾನ್ ಪ್ರೋತ್ಸಾಹಿಸಿದೆ. ಈ ಎಲ್ಲದರ ಹಿಂದಿನ ಹಾಗೂ ಈ ಎಲ್ಲ ಭಿನ್ನ ಸೂತ್ರಗಳನ್ನು ಒಂದೆಡೆಗೆ ಜೋಡಿಸುವ ಶಕ್ತಿ ದೀಪ್ ಜೋಶಿ.

ದೀಪ್ ಜೋಶಿಗೆ ಈ ಪ್ರಶಸ್ತಿ ಬಂದದ್ದು ಅವರನ್ನು ಬಲ್ಲವರಿಗೆಲ್ಲ ಸಮಾನ ಖುಷಿಯನ್ನು ನೀಡಿದೆ. ಆ ಸಾಫಲ್ಯತೆ ಅವರಿಗೆ ಸಹಜವಾಗಿಯೇ ಸಲ್ಲಬೇಕಾಗಿದೆ. ಅಭಿನಂದನೆಗಳು.Saturday, July 28, 2012

ಚಿತ್ತಾಲರ ಕಥಾಪಾತ್ರವನ್ನಾಗಿಸುವ ಭೇಟಿಯ ಕಥೆಗಳುಯಶವಂತ ಚಿತ್ತಾಲರ ಕಥೆ ಕಾದಂಬರಿಗಳಲ್ಲಿ ಭೇಟಿಯ ನಿಗೂಢತೆಯ ಒಂದು ಅಂಶ ಯಾವಾಗಲೂ ಇರುತ್ತದೆ. ಯಾರೋ ಭೇಟಿಯಾಗಲು ಬರುತ್ತೇವೆ ಎಂದು ಹೇಳುವುದು ಅದಕ್ಕಾಗಿ ಕಾಯುವ ಕಥಾಪಾತ್ರಗಳು, ಭೇಟಿಯ ನಿಗೂಢತೆ, ಭೇಟಿಯಿಂದ ಉದ್ಭವವಾಗುವ ಪಿತೂರಿಗಳು ಹೀಗೆ. ಇದರ ಜೊತೆಗೆ ಆಗುವ-ಆಗದ-ಆಗಬಹುದಾಗಿದ್ದ ಅನೇಕ ಭೇಟಿಯ ಪ್ರಸಂಗಗಳೂ ಬರುತ್ತವೆ. ಒಂದು ಕಥೆಯಲ್ಲಿ ಕ್ಷಣಮಾತ್ರಕ್ಕೆ ಬರುವ ಪಾತ್ರಗಳು ಮತ್ತೊಂದು ಕಥೆಯಲ್ಲಿ ಪ್ರಮುಖಪಾತ್ರವನ್ನು ವಹಿಸಿಬಿಡುತ್ತವೆ. ಹೀಗೆ ಅವರ ಸಾಹಿತ್ಯದಲ್ಲಿ ಒಂದಕ್ಕೊಂದು ಕೊಂಡಿಹಾಕಿಕೊಂಡ ಕಥೆಗಳು ಅನೇಕ ನಮಗೆ ದೊರೆಯುತ್ತವೆ. 

ಹೀಗೆ ನಡೆಯುವ ಭೇಟಿಗಳಲ್ಲಿ ನಾನೂ ಚಿತ್ತಾಲರ ಕಥೆಯ ಒಂದು ಪಾತ್ರವಾಗಿಬಿಟ್ಟಿದ್ದೇನೇನೋ ಎಂದು ಒಮ್ಮೊಮ್ಮೆ ಅನುಮಾನ ಬರುವುದುಂಟು. ಎ.ಕೆ.ರಾಮಾನುಜಂ ಅವರ ಕವಿತೆಯೊಂದರಲ್ಲಿ ಬರುವ ಜಿಜ್ಞಾಸೆಯಂತೆ ನಾನು ಬೇರೊಬ್ಬರ ಕನಸಿನ ಭಾಗವೋ, ಪಾತ್ರಧಾರಿಯೋ ಆಗಿರುವೆ ಎಂದು ಅನ್ನಿಸುವುದುಂಟು. ಚಿತ್ತಾಲರ ಸಾಹಿತ್ಯ ಅವರ ಜೀವನದ ಕೇಂದ್ರವೇ ಆಗಿದ್ದು, ಮಿಕ್ಕೆಲ್ಲ ವಿಚಾರಗಳು ಅದರ ಸುತ್ತ ಗಿರಕಿ ಹೊಡೆಯುವುದರಿಂದ ನನಗೆ ಈ ಸಾಹಿತ್ಯವಿಸ್ತಾರದ ಪಾತ್ರ ಇರಬಹುದೇನೋ ಅನ್ನಿಸುವುದರಲ್ಲಿ ಯಾವ ಆಶ್ಚರ್ಯವೂ ಕಾಣುವುದಿಲ್ಲವೇನೋ.

ಮೇಜಿನಮೇಲೆ ಒಂದು ಕಾಗದ ಹರಡಿ, ಒಂದು ವೃತ್ತ ಸುತ್ತಿ ಅದರ ಮಧ್ಯದಲ್ಲಿ ಒಂದು ಚುಕ್ಕೆಯಿರಿಸಿ – ಚುಕ್ಕೆಯನ್ನು ತೋರಿಸುತ್ತಾ "ಇದು ಕೇಂದ್ರ. ಇಲ್ಲಿ ನಡೆಯುತ್ತಿರುವ ಕಥೆಯನ್ನು ಈ ವೃತ್ತದ ಮೇಲೆ ನಿಂತಿರುವವರು ನೋಡುತ್ತಿದ್ದಾರೆ.." ಎನ್ನುತ್ತಾ ತಮ್ಮ ಕಾದಂಬರಿ ಕೇಂದ್ರ ವೃತ್ತಾಂತದ ಆಶಯವನ್ನು ಚಿತ್ತಾಲರು ವಿವರಿಸುತ್ತಾರೆ. ಇದಕ್ಕೆ ಇಷ್ಟು ಚಿತ್ರ ಬರೆಯವ ಅವಶ್ಯಕತೆಯಿತ್ತೇ ಅಂದುಕೊಳ್ಳುವಷ್ಟರಲ್ಲಿಯೇ ಅವರು ವೃತ್ತದ ಮೇಲೊಂದು ಚುಕ್ಕೆಯನ್ನಿಕ್ಕುತ್ತಾರೆ. "ಈ ವೃತ್ತದ ಮೇಲೆ ಕೂತು ಆ ಕಥೆಯನ್ನು ನೋಡುತ್ತಿರುವ ವ್ಯಕ್ತಿ ಬೇರೊಂದೇ ಕಥೆಯ ಕೇಂದ್ರವಾಗಿರುವುದುನ್ನು ಗಮನಿಸಬೇಕು." ಎನ್ನುತ್ತಾ ಆ ಚುಕ್ಕೆಯ ಸುತ್ತ ಮತ್ತೊಂದು ಗುಂಡಗಿನ ವೃತ್ತವನ್ನು ಬಿಡಿಸುತ್ತಾರೆ.

ಕಾದಂಬರಿ ಬರೆಯುವುದಕ್ಕೆ ಮುನ್ನವೇ ಚಿತ್ತಾಲರು ಕಾದಂಬರಿಯನ್ನು ಮನಸ್ಸಿನಲ್ಲಿ ರೂಪಿಸಿಕೊಂಡ ಬಗೆಗಿನ ಚಿತ್ರ. ಆ ಚಿತ್ರವನ್ನಷ್ಟೇ ತೋರಿ, ನಿಮ್ಮಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದ್ದೇನೆಂದು ಮನವರಿಕೆಯಾದ ಕೂಡಲೇ ತುಂಟತನದಿಂದ ತಿಂಡಿಯ ತಟ್ಟೆಯತ್ತ ಕೈಮಾಡಿ "ಉಂಡೆ ತೆಗೂಳ್ಳಿ. ಸಂಕ್ರಾಂತಿಗೆ ಮಾಲತಿ ಮತ್ತು ವಿದ್ಯಾ ಮಾಡಿದ್ದು. ಇಂಥ ಒಳ್ಳೆಯ ಉಂಡೆ ನಿಮಗೆ ಎಲ್ಲೂ ಸಿಗುವುದಿಲ್ಲ." ಎನ್ನುತ್ತಾರೆ.

ಹೀಗೆ ತಮ್ಮ ಕಥೆಗಳನ್ನು, ಕಥೆಯ ಹಿಂದಿನ ವಾತಾವರಣವನ್ನು ಅವರು ವಿವರಿಸುತ್ತಿರುವಾಗ ಅವರೆದುರು ಕುಳಿತಿರುವ ನಾವು ವೃತ್ತದ ಅಂಚಿನಲ್ಲಿದ್ದೇವೋ, ಮಧ್ಯದಲ್ಲಿದ್ದೇವೋ, ನಾವೇ ಅವರ ಕಥೆಯ ಪಾತ್ರವೋ.. ಚಿತ್ತಾಲರೊಂದಿಗೆ ಅವರ ಪಾತ್ರವನ್ನು ಹೊರಗಿನಿಂದ ನೋಡುತ್ತಿರುವ ಪ್ರೇಕ್ಷಕರೋ..... ಈ ರೀತಿಯ ಅನುಮಾನಗಳು ಬಂದಾಕ್ಷಣಕ್ಕೇ ನಾವು ಚಿತ್ತಾಲರ ಸಾಹಿತ್ಯದಲ್ಲಿ ಮುಳುಗಿದ್ದೇವೆ ಎನ್ನುವುದು ಖಾತ್ರಿಯಾಗುತ್ತದೆ.

ಮುಂಬಯಿಯೇತರನಾಗಿ ಅತ್ಯಧಿಕವಾಗಿ ಅವರ ಬ್ಯಾಂಡ್ ಸ್ಟಾಂಡ್ ಮನೆಯಲ್ಲಿ ಭೇಟಿಯಾದ ಕೀರ್ತಿ ನನಗೆ ಸಲ್ಲಬಹುದೇನೋ. ಅದಕ್ಕೆ ಕಾರಣವಿಷ್ಟೇ: ನಾನು ನನ್ನ ಜೀವನದ ಹೆಚ್ಚಿನ ಭಾಗವನ್ನು ಗುಜರಾತಿನ ಆಣಂದ-ಅಹಮದಾಬಾದಿನಲ್ಲಿ ಕಳೆದಿದ್ದೇನೆ. ಆ ಎರಡೂ ಸ್ಥಳಗಳಿಗೆ ಮುಂಬಯಿ ಮಾರ್ಗವಾಗಿಯೇ ಹೋಗಬೇಕು. ಚಿತ್ತಾಲರ ಮನೆ ಏರ್ ಪೋರ್ಟಿನಿಂದ ದೂರವೇನೂ ಅಲ್ಲ. ಹೀಗಾಗಿ ಸಮಯವಿದ್ದಾಗ, ಸಮಯ ಸೂಕ್ತವಾಗಿದ್ದಾಗ ಅವರನ್ನು ಖುದ್ದು ಭೇಟಿಯಾಗುವುದು, ಸಮಯವಿಲ್ಲದಾಗ ರೂಪಾಯಿಯ ನಾಣ್ಯಗಳನ್ನು ಇಳಿಬಿಡುತ್ತಾ ಏರ್ ಪೋರ್ಟಿನ ಕಾಯಿನ್ ಬಾಕ್ಸಿನಿಂದ ಫೋನು ಸುತ್ತಿಸಿ ಮಾತನಾಡುವುದು. ಇದು ಪ್ರತಿಬಾರಿಯೂ ಮುಂಬಯಿ ಹಾಯ್ದುಹೋಗುವಾಗಿನ ಪರಿಪಾಠವಾಗಿತ್ತು. ಮೊದಮೊದಲಿಗೆ ಮುಕುಂದ ಜೋಶಿ, ಜಯಂತ ಕಾಯ್ಕಿಣಿ ಮತ್ತು ಉಮಾರಾವ್ ಕೂಡಾ ಇದ್ದರು. ಆದರೆ ದೂರವಿದ್ದ ಅವರಿಗೆ ಬರೇ ದೂರವಾಣಿ. ಬ್ಯಾಂಡ್ ಸ್ಟಾಂಡಿಗೆ ಮಾತ್ರ ನಾನು ಸಾಕ್ಷಾತ್ತು ಪ್ರತ್ಯಕ್ಷ!

ಚಿತ್ತಾಲರನ್ನು ಭೇಟಿಯಾಗುವಾಗಲೆಲ್ಲ ಒಂದಿಷ್ಟು ಮಾನಸಿಕ ತಯಾರಿ ಮಾಡಬೇಕು. ಶಿಸ್ತಿನ ಚಿತ್ತಾಲರಿಗೆ ಮೊದಲೇ ಫೋನ್ ಮಾಡಿ ನಾನು ಬರುತ್ತಿರುವ ವಿಷಯ ತಿಳಿಸಬೇಕು. ಅವರು ತಮ್ಮ ಇನ್ಸುಲಿನ್, ಊಟ, ಮಧ್ಯಾಹ್ನದ ಆರಾಮದ ಸಮಯವನ್ನು ಲೆಕ್ಕ ಕಟ್ಟಿ – ಇಂಥ ಸಮಯವಾದರೆ ಸಮರ್ಪಕ ಎನ್ನುವರು. ಒಂದೆರಡು ಬಾರಿಯ ಅನುಭವದ ನಂತರ ಚಿತ್ತಾಲರನ್ನು ಕಾಣಲು ಪ್ರಶಸ್ತವಾದ ಸಮಯ ಯಾವುದು, ಎನ್ನುವುದು ತಿಳಿಯುತ್ತಾ ಬರುತ್ತದೆ.

ಕೊಂಕಣಿ ಮಾತೃಭಾಷೆಯಾದ ಚಿತ್ತಾಲರ ಮನೆಯಲ್ಲಿ ಫೋನಿನಲ್ಲಿ ಮಾತಾಡಬೇಕೆಂದರೆ ಇಂಗ್ಲೀಷಿನಲ್ಲಿ ಪ್ರಾರಂಭಿಸಬೇಕು. ಅವರ ಮಗ ರವೀ ಹೆಸರುವಾಸಿಯಾದ ವೈದ್ಯರು. ಹೀಗಾಗಿ "May I speak to Chittal?" ಎನ್ನುವ ಪ್ರಶ್ನೆ ರವೀ ಚಿತ್ತಾಲರಿಗೂ ವರ್ತಿಸುತ್ತದೆ. ಮೊದಮೊದಲಿಗೆ ಅವರ ಎರಡನೆಯ ಮಗ ಮಿಲಿಂದನೂ ಇಲ್ಲಿಯೇ ಇದ್ದಾಗ ಆ ಮನೆಯಲ್ಲಿ ಮೂರು ಚಿತ್ತಾಲರು. ಚಿತ್ತಾಲರ ಅಪಘಾತ ಕಥೆಯಲ್ಲಿ ಬರುವ ಮೂರು ಕುಲಕರ್ಣಿಗಳ ಹಾಗೆ ರವೀ, ಮಿಲಿಂದ ಮತ್ತು ನಮ್ಮ ಯಶವಂತಣ್ಣನ ನಡುವೆ ಚಿತ್ತಾಲ ಎಂಬ ಹೆಸರು ಹಂಚಿಹೋಗಿತ್ತು. ಚಿತ್ತಾಲರು ರಿಟೈರಾಗಿ ಅವರ ಆಫೀಸಿನ ಕರೆಗಳು ನಿಂತು ಒಟ್ಟಾರೆ ಕರೆಗಳು ಕಡಿಮೆಯಾಗುತ್ತಾ ಹೋದಂತೆ ರವೀ ಚಿತ್ತಾಲರ ವೈದ್ಯಕೀಯ ವೃತ್ತಿ-ಖ್ಯಾತಿ ಎರಡೂ ಬೆಳೆದು ಚಿತ್ತಾಲ ಹೆಸರು ರವೀಗೇ ಸಂದುವ ಪರಿಸ್ಥಿತಿ ಉಂಟಾದಾಗಿನಿಂದಲೂ ನನ್ನ ಪ್ರಶ್ನೆ ಸುಲಭದ್ದಾಗಿದೆ - "May I speak to Yashwant?" ಹೀಗೆ ಹಿರಿಯ ಲೇಖಕರೊಬ್ಬರನ್ನು ಹೆಸರು ಹಿಡಿದು ಸಖನಂತೆ ಕರೆವ ಪುಳಕ. ಆದರೆ ಆ "ಸಖ"ತ್ತು ಪುಳಕ ಆತ ಲೈನಿಗೆ ಬರುವವರೆಗೆ ಮಾತ್ರ!

ಕಥೆಯಲ್ಲಿ ಬಂದಾತ ಮನೆಗೂ ಬಂದು ಕದ ತಟ್ಟಿದ ಎಂಬಂತಹ ನಿಜಜೀವನದ ಕಥೆಗಳನ್ನು ಚಿತ್ತಾಲರು ಇಂದಿಗೂ ನಮಗೆ ಕೇಳಿಸುತ್ತಾರೆ. ಹನೇಹಳ್ಳಿಯಿಂದ ಬಂದ ಜನ ತಮ್ಮನ್ನು ಚಿತ್ತಾಲರ ಕಥಾಪಾತ್ರಗಳಾಗಿ ಚಿತ್ತಾಲರಿಗೆ ಪರಿಚಯಿಸಿಕೊಂಡದ್ದನ್ನು ಅವರು ಹೆಮ್ಮೆಯಿಂದ, ತುಸು ತುಂಟತನದಿಂದ ಹೇಳಿಕೊಳ್ಳುತ್ತಾರೆ. ಹಕೀಕತ್ತು ಮುಗಿದು ಚಿತ್ತಾಲರ ಕಥಾಪ್ರಪಂಚ ಪ್ರಾರಂಭವಾಗುವುದು ಎಲ್ಲಿ ಎಂದು ಹೇಳುವುದು ಕಷ್ಟ. ಅಂಚಿಲ್ಲದ ವಸ್ತ್ರದಂತೆ ಚಿತ್ತಾಲರ ಕಥಾಜಗತ್ತು ಮುಂದುವರೆಯುತ್ತದೆ.

"ಅಹಮದಾಬಾದಿನಿಂದ ಮೊನ್ನೆ ಫೋನ್ ಮಾಡಿದ್ದಾಗ ನೀವು ನಿನ್ನೆ ಬರುವುದಾಗಿ ಹೇಳಿದ್ದಂತೆ ನೆನಪು. ಹೀಗಾಗಿ ನಿನ್ನೆಯೇ ಗಡ್ಡ ಮಾಡಿಕೊಂಡು ನಿಮಗಾಗಿ ಕಾಯುತ್ತಿದ್ದೆ. ನೋಡಿದರೆ ಈ ಹೊತ್ತು ಏರ್ ಪೋರ್ಟಿನಿಂದ ಫೋನ್ ಮಾಡಿದಿರೀ..." ಎಂದು ಆಕ್ಷೇಪವೆತ್ತುತ್ತಲೇ ಬೆಚ್ಚಗೆ ಮನೆಯೊಳಕ್ಕೆ ಬರಮಾಡಿಕೊಳ್ಳುತ್ತಾರೆ. ಶಿಸ್ತು, ಸಮಯಪಾಲನೆ, ಒಪ್ಪ ಓರಣದ ಶುದ್ಧಿ – ಇವುಗಳಿಲ್ಲದಿದ್ದರೆ ಜೀವನವೇ ಇಲ್ಲ. ಹೀಗಾಗಿ ಹೇಳದೇ ಕೇಳದೇ, ಅವರು ಗಡ್ಡ ಹೆರೆಯದ ದಿನ ಅವರನ್ನು ಭೇಟಿಮಾಡುವ ಸಾಹಸ ಮಾಡಲೇಬಾರದು.

ಮೊದಮೊದಲ ಒಂದು ಭೇಟಿಯಲ್ಲಿ ದಾರಿತಪ್ಪಿ ಇಳಿಯಬಾರದ ಜಾಗದಲ್ಲಿ ಆಟೋ ಇಳಿದು, ಮಳೆಯಲ್ಲಿ ನೆನೆದು ತೊಪ್ಪೆಯಾಗಿ ಚಿತ್ತಾಲರ ಮನೆ ಸೇರಿದ್ದೆ. ಮಿಲಿಂದನ ಪೈಜಾಮ-ಅಂಗಿ ತೊಡಿಸಿ ತಲೆ ಒರೆಸಿ ನನ್ನ ಬಟ್ಟೆಯನ್ನು ಹರವಲು ಹೇಳಿದರು. ಪರವಾಗಿಲ್ಲವೆಂದರೂ ಬಟ್ಟೆ ಬದಲಾಯಿಸುವವರೆಗೂ ಸುಮ್ಮಗಿದ್ದರೆ ಕೇಳಿ....

ಅವರು ಸಾಮಾನ್ಯವಾಗಿ ಕುಳಿತುಕೊಳ್ಳುವ ದೊಡ್ಡ ಸೋಫಾದ ಒಂದು ಮೂಲೆಯ ಆಸನ ಸಂಪೂರ್ಣ ಜೀರ್ಣವಾಗಿತ್ತು. ಮಿಕ್ಕೆರಡು ಜಾಗಗಳು ಹೊಸದಾಗಿಯೇ ಇದ್ದುವು. ಪ್ರತೀ ದಿನ – ತಪ್ಪದಂತೆ ಮುಂಜಾನೆ ಅಷ್ಟೊತ್ತಿಗೇ ಎದ್ದು ಅದೇ ಜಾಗದಲ್ಲಿ ಕುಳಿತು ಬೃಹತ್ ಕಾದಂಬರಿ ಪುರುಷೋತ್ತಮವನ್ನು ರಚಿಸಿದ ಕಥೆಯನ್ನು ಜೀರ್ಣವಾದ ಆ ಸೋಫಾದ ಭಾಗವೇ ಹೇಳುತ್ತಿತ್ತು. ಕಾದಂಬರಿ ಬರೆಯುವಾಗಲೂ ಆ ಜಾಗ, ಅಲ್ಲಿಂದ ಕಾಣುವ ಸಮುದ್ರದ ನೋಟ, ಹಾಗೂ ದಿನವೂ ಬರೆಯವ ಶಿಸ್ತು.. ಎಲ್ಲ ಕಥೆಗಳನ್ನೂ ನಾವು ಅಲ್ಲಿ ಕಾಣಬಹುದಿತ್ತು.

ಚಿತ್ತಾಲ. ಚಿತ್ತಾಲರ ಕನ್ನಡದ ಒದುಗನಾದ ಅತಿಥಿ. ಮಿಕ್ಕ ಪ್ರಪಂಚ ಮಾಯವಾಗಿಬಿಡುತ್ತದೆ. ಅವರು ತಮ್ಮ ಬರಹದ ತುಣುಕನ್ನು ತೋರಿಸುತ್ತಾರೆ, ಲಬಸಾ ಓದುತ್ತಾರೆ. ಯಾವುದೋ ಹಳೆಯ ಕಥೆಯನ್ನು, ಘಟನೆಯನ್ನು ಮೆಲುಕು ಹಾಕುತ್ತಾರೆ. ಎಲ್ಲವೂ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದವೇ. ಆದರೆ ಒಂದೇ ಒಂದು ವಿಷಯ ಇದಕ್ಕೆ ಅಪವಾದ. ಯಾವುದಾದರೂ ಕ್ರಿಕೆಟ್ಟು ಅಥವಾ ಟೆನಿಸ್ಸಿನ ಪಂದ್ಯವಿದ್ದಲ್ಲಿ ಚಿತ್ತಾಲರು ಸಾಹಿತಿಯಿಂದ ಭಾರತೀಯರಾಗಿಬಿಡುತ್ತಾರೆ. ಗಮನ ಆಟದಿಂದ ಹೊರಬರುವುದೇ ಇಲ್ಲ.

ಚಿತ್ತಾಲರ ಮನೆಯಿರುವುದು ಬಾಂದ್ರಾದ ಬ್ಯಾಂಡ್ ಸ್ಟಾಂಡಿನಲ್ಲಿ. ಷಾರುಖ್ ಖಾನನ ಮನೆಯ ಮುಂದಿನ ತಿರುವಿನಲ್ಲಿ ಬಲಕ್ಕೆ ಹೋಗಬೇಕು. ತಿರುಗಿದ ನಂತರ ತುಸು ಮುಂದೆ ಚಿತ್ತಾಲರ ಮನೆ, ಅದನ್ನು ದಾಟಿ ಹೋದರೆ ಸಲ್ಮಾನ್ ಖಾನನ ಮನೆ. ಬಾಲಿವುಡ್ಡಿನ ನಕ್ಷತ್ರಗಳ ನಡುವೆ ಮಿಂಚುತ್ತಿರುವ ಬ್ಯಾಂಡ್ ಸ್ಟಾಂಡಿನ ಕನ್ನಡ ಸಾಹಿತ್ಯದ ಸರದಾರ. ಚಿತ್ತಾಲರ ಮನೆಗೆ ಹೋಗುವಾಗ ಒಮ್ಮೆ ಡ್ರೈವರನಿಗೆ ಹೇಳಿದ್ದೆ. "ಷಾರುಖ್ ಖಾನ್ ಮನೆಯ ಬಳಿಗೆ ಒಯ್ಯಿ" ಅವನು ಆಶ್ಚರ್ಯದಿಂದ ನನ್ನ ಮುಖ ನೋಡಿದ. "ಏನು ನನ್ನ ಮುಖ ಕಂಡರೆ ನಾನು ಷಾರುಖ್ ಮನೆಗೆ ಹೋಗಲಾರದವನು ಎಂದೇನಾದರೂ ಬರೆದಿದೆಯಾ... ಯಾಕೆ ಆಶ್ಚರ್ಯ ಪಡುತ್ತೀಯ?" ಎಂದು ಉಡಾಫೆಯಿಂದ ಕೇಳಿದೆ. "ಇಲ್ಲ ಸಾರ್ ಹಾಗೇನೂ ಇಲ್ಲ" ಎಂದು ಅವನು ಗಾಡಿ ಚಲಾಯಿಸಿದ. ನನಗೆ ನಿದ್ದೆ ಹತ್ತಿತು. ಎಚ್ಚರವಾದಾಗ ಆ ಡ್ರೈವರ್ ಷಾರೂಖನ ಮನೆ ಮುಂದೆ ಗಾಡಿ ನಿಲ್ಲಿಸಿ, ಸೆಕ್ಯೂರಿಟಿಯವರ ಜೊತೆಗೆ ವಾದಿಸುತ್ತಿದ್ದ. ದೊಡ್ಡ ಗೊಂದಲವಾಗುವ ಮೊದಲೇ ಅಲ್ಲಿಂದ ಬಜಾವಾಗಿ ಚಿತ್ತಾಲರ ಮನೆ ಸೇರಿದ್ದಾಯಿತು.

ಈಚೆಗೆ ಹೋದಾಗ ಒಂದು ಪುಟ್ಟ ನೋಟ್ ಪುಸ್ತಕ ತೋರಿಸಿ "ನೋಡಿ"ಎಂದು ಚಿತ್ತಾಲರು ನನ್ನ ಮುಂದೆ ಹಿಡಿದರು. ಸಾಮಾನ್ಯವಾಗಿ ಬರೆಯುತ್ತಿರುವ ಕೃತಿಗಳನ್ನು ಸುಲಭವಾಗಿ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಹೆಚ್ಚೆಂದರೆ ಒಂದೆರಡು ಸಾಲುಗಳನ್ನು ಅವರೇ ಓದುತ್ತಾರೆ. ಹೀಗಾಗಿ ನನಗೆ ತೋರಿದ್ದೇ ಭಾಗ್ಯವೆಂದು ಅದನ್ನು ಓದಲು ಸುರುಮಾಡಿದೆ. "ನನ್ನ ಕೈಬರಹ ಹಾಗೆಯೇ ಇದೆಯೇ ನೋಡಿ ಹೇಳಲು ಕೊಟ್ಟದ್ದು... ಓದುವುದಕ್ಕಲ್ಲ" ಎಂದು ವಾಪಸ್ಸು ಕಸಿದುಕೊಂಡರು. ಅಕ್ಷರಗಳಿಗೆ ಚಿತ್ತಾಲರ ಚಿರಯೌವನವಿತ್ತು.

ಚಿತ್ತಾಲರ ಅನೇಕ ಭೇಟಿಗಳ ನಡುವೆ ನಾನು ಅವರ ಕಥೆಯ ಪಾತ್ರವಾಗಿಬಿಟ್ಟಿದ್ದೇನೆ ಎಂದು ನನಗೆ ಆಗಾಗ ಅನ್ನಿಸುತ್ತದೆ. ಒಬ್ಬ ಲೇಖಕನ ಸಾಹಿತ್ಯಕ್ಕೆ ಈ ರೀತಿಯ ಪ್ರವೇಶ ಪಡೆಯುವುದು ಒಂದು ಬೇರೆಯೇ ಅನುಭವ. ಹೀಗೇ ವರ್ಷಾನುಗಟ್ಟಲೆ ಅವರ ಭೇಟಿ, ವರ್ಷಾನುಗಟ್ಟಲೆ ಚರ್ಚೆ, ವರ್ಷಾನುಗಟ್ಟಲೆ ಕೀಟಲೆ ಮಾಡುತ್ತ ಇದ್ದರೆ ಅವರ ಆಯುಷ್ಯದ ಜೊತೆಗೇ ನನ್ನದೂ ಬೆಳೆಯುತ್ತದೆಂಬ ಸ್ವಾರ್ಥಪೂರಿತ ಹಾರೈಕೆ ನನ್ನದು.
Sunday, August 2, 2009

ಮರೆತೇನೆಂದರು ಮರೆಯಲಿ ಹ್ಯಾಂಗ?

ನಮ್ಮ ದೇಶದಲ್ಲಿ ಮೈಕ್ರೋಫೈನಾನ್ಸ್ ಅಂದಕೂಡಲೇ ಕಾರಣವಿರಲೀ ಇಲ್ಲದಿರಲೀ ಮುಂಚೂಣಿಯಲ್ಲಿ ನಿಲ್ಲುವ ಹೆಸರು ಎಸ್.ಕೆ.ಎಸ್ ಎನ್ನುವ ಸಂಸ್ಥೆಯದ್ದು. ಹಾಗೂ ಅದರ ಸಂಸ್ಥಾಪಕ ಅನ್ನಿಸಿಕೊಳ್ಳುವ ವಿಕ್ರಂ ಆಕುಲಾರ ಹೆಸರು. ಎಸ್.ಕೆ.ಎಸ್ [ಸ್ವಯಂ ಕೃಷಿ ಸಂಘಂ] ಬಗ್ಗೆ ಮೊದಲಿಗೆ ಯೋಚಿಸಿದ್ದು ಅದನ್ನು ಕಾರ್ಯರೂಪಕ್ಕೆ ಇಳಿಸಿದ್ದು ವಿಕ್ರಂ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪುಟ್ಟದಾಗಿ ಪ್ರಾರಂಭಿಸಿ ಇಂದು ದೇಶಾದ್ಯಂತ ಹಬ್ಬಿರುವ ಈ ಸಂಸ್ಥೆ ದೇಶದಲ್ಲಿಯೇ ಅತ್ಯಂತ ದೊಡ್ಡ ಮೈಕ್ರೊಫೈನಾನ್ಸ್ ಸಂಸ್ಥೆಯಾಗಿದೆ. ವಿಕ್ರಂಗೂ ಈ ಸಂಸ್ಥೆ ಸಾಕಷ್ಟು ಖ್ಯಾತಿಯನ್ನು ತಂದು ನೀಡಿದೆ. ಅಮೆರಿಕದಿಂದ ಎಲ್ಲವನ್ನೂ ಬಿಟ್ಟು ಭಾರತಕ್ಕೆ ಬಂದು ಬಡವರಿಗೆ ಸೇವೆಯನ್ನೊದಗಿಸುವ ಕೆಲಸ ಮಾಡುತ್ತಿರುವುದಕ್ಕೆ ಟೈಂ ಪತ್ರಿಕೆಯ ನೂರು ಜನರ ಯಾದಿಯಲ್ಲಿ, ವೀಕ್ ಪತ್ರಿಕೆಯ ೨೦ ಮಹತ್ವದ ಭಾರತೀಯರ ಯಾದಿಯಲ್ಲಿ ವಿಕ್ರಂ ಹೆಸರು ದಾಖಲಾದದ್ದಲ್ಲದೇ ದೊಡ್ಡ ವಾರ್ತಾವಾಹಿನಿಗಳಲ್ಲಿ ಆತನ ಸಂದರ್ಶನಗಳೂ ಬಂದಿವೆ. ಆದರೂ ವಿಕ್ರಂ ೧೯೯೭ರಲ್ಲಿ ಪ್ರಾರಂಭಿಸಿ, ಇಷ್ಟೆಲ್ಲಾ ಖ್ಯಾತಿಯನ್ನು ನೀಡಿದ ಸಂಸ್ಥೆಯಲ್ಲಿನ ತಮ್ಮ ಬಹುತೇಕ ಹೂಡಿಕೆಯನ್ನು ಕಳೆದ ವರ್ಷವಷ್ಟೇ ಮಾರಿ ಸಂಸ್ಥೆಯ ದಿನನಿತ್ಯದ ಕಾರ್ಯವನ್ನು ಹೊಸ ಹೂಡಿಕೆದಾರರಿಗೆ ಒಪ್ಪಿಸಿ ಕೈತೊಳೆದುಕೊಂಡರು.

ವಿಕ್ರಂರ ಈ ತ್ವರಿತ ಪ್ರಗತಿಯಾದದ್ದು ಎಸ್.ಕೆ.ಎಸ್ ಸಂಸ್ಥೆಯ ಪ್ರಗತಿಯಿಂದಾಗಿ. ಆದರೆ ನಿಜದ ವಿಷಯವೆಂದರೆ ಎಸ್.ಕೆ.ಎಸ್ ಅತ್ಯಂತ ನಾಜೂಕಾದ ಪರಿಸ್ಥಿತಿಯಲ್ಲಿದ್ದಾಗ ಶೈಶವಾವಸ್ಥೆಯಲ್ಲಿ ಅದನ್ನು ಪೋಷಿಸಿ ಬೆಳೆಸಿದ ವ್ಯಕ್ತಿ ಎಲೆಮರೆಯ ಕಾಯಿಯಂತೆ, ಖ್ಯಾತಿಯನ್ನೂ ಸಂಪಾದಿಸದೇ, ಹೆಚ್ಚು ಹಣವನ್ನೂ ಈ ಸಂಸ್ಥೆಯಿಂದ ಪಡೆಯದೆಯೇ ಮರೆಯಾದರು. ಆ ವ್ಯಕ್ತಿಯ ಹೆಸರು ಸೀತಾರಾಮ್ ರಾವ್.

ಸೀತಾರಾಮ್ ಸದಾ ಹಸನ್ಮುಖಿಯಾಗಿ ಇರುತ್ತಿದ್ದ ವ್ಯಕ್ತಿ. ಅವರಲ್ಲಿ ಎಂದೂ ತುಳುಕುತ್ತಿದ್ದ ಉತ್ಸಾಹ, ಹಾಗೂ ಕುತೂಹಲ. ಮೇಲಾಗಿ ಬಡತನದ ಕ್ಷೇತ್ರದಲ್ಲಿ ಕೆಲಸ ಮಾಡುವವರು ದೊಡ್ಡ ಮಾತುಗಳ ಭಾಷಣವನ್ನು ಕೊಚ್ಚುವ ರೋಗ ಅವರಿಗೆ ಇರಲೇ ಇಲ್ಲ. ಅವರು ಎಷ್ಟರ ಮಟ್ಟಿಗೆ ಬಡವರ ಪರವಾದ - ಮಕ್ರೋಫೈನಾನ್ಸ್ ಕ್ಷೇತ್ರದ ಪರವಾದ ಮಾತುಗಳನ್ನಾಡುತ್ತಿದ್ದರು ಎಂದರೆ ಬಹುಮಟ್ಟಿನ ಜನರು ಅವರನ್ನು ಎಸ್.ಕೆ.ಎಸ್ ಸಂಸ್ಥೆಯ ಜೊತೆಗೆ ಗುರುತಿಸದೇ, ಗ್ರಾಮೀಣ ಅರ್ಥಪದ್ಧತಿಯ ಜೊತೆಗೆ ಆತನನ್ನು ಗುರುತಿಸುತ್ತಿದ್ದರು.

ಎಸ್.ಕೆ.ಎಸ್ ಸ್ಥಾಪಿಸಿದ ವಿಕ್ರಂ ಆಕುಲಾ ಒಂದು ಘಟ್ಟದಲ್ಲಿ ಅದನ್ನು ಹೆಚ್ಚೂ ಕಡಿಮೆ ಬಿಟ್ಟು ತಮ್ಮ ಉನ್ನತ ಪದವಿಗಾಗಿ ಶಿಕಾಗೋಗೆ ವಾಪಸ್ಸಾದಾಗ ನಾವೆಲ್ಲಾ ವಿಕ್ರಂ ಎಸ್.ಕೆ.ಎಸ್.ನಿಂದ ಕೈತೊಳೆದುಕೊಂಡುಬಿಟ್ಟಿದ್ದಾರೆ ಅಂದುಕೊಂಡಿದ್ದೆವು. ಆ ಕಾಲದಲ್ಲಿ ವಿಕ್ರಂ ಎಸ್.ಕೆ.ಎಸ್‌ನ ಉಸ್ತುವಾರಿಯನ್ನು ಸೀತಾರಾಮ್ ಕೈಗೆ ಇಟ್ಟು ಹೋದರು. ವಿಕ್ರಂ ತಮ್ಮ ಮಹಾಪ್ರಬಂಧ ಮುಗಿಸಿಬರುವ ವೇಳೆಗೆ ಆ ಸಂಸ್ಥೆ ಬೆಳೆದು ನಿಂತಿತ್ತು. ವಿಕ್ರಂ ಹಾಗೆ ಬೆಳೆದು ನಿಂತಿದ್ದ ಸಂಸ್ಥೆಯನ್ನು ಇನ್ನೂ ತ್ವರಿತಗತಿಯಲ್ಲಿ ಬೆಳೆಸಿದರೂ ಅದರ ಅಡಿಪಾಯವನ್ನು ಸೀತಾರಾಮ್ ಹಾಕಿದರು ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ವಿಕ್ರಂ ಕೊಟ್ಟಿರುವ ಅಸಂಖ್ಯ ಸಂದರ್ಶನಗಳಲ್ಲಿ ಸೀತಾರಾಮ್ ಹೆಸರನ್ನು ಎತ್ತಿರುವುದನ್ನು ನಾನು ಕಂಡೇ ಇಲ್ಲ. ಆದರೆ ಸೀತಾರಾಂ ಮಾತ್ರ ತಾವು ಆ ಸಂಸ್ಥೆಯಿಂದ ಹೊರಬಿದ್ದಾಗ ಎಲ್ಲರಿಗೂ ಕಳಿಸಿದ ಒಂದು ಪತ್ರದಲ್ಲಿ ತಮ್ಮೊಡನೆ ಇದ್ದ ಪ್ರತೀ ವ್ಯಕ್ತಿಯನ್ನೂ ಅವರ ಪಾತ್ರದ ಮಹತ್ವವನ್ನೂ ವಿವರಿಸಿದ್ದರು.

ಒಂದು ರೀತಿಯ ಸ್ಥಿತಪ್ರಜ್ಞತೆಯನ್ನು ಮೈಗೂಡಿಸಿಕೊಂಡಿದ್ದ ಸೀತಾರಾಮ್ ಹಿಂದೆ ನೋಡಿ ಬೇಸರ ಪಟ್ಟುಕೊಳ್ಳುವ ವ್ಯಕ್ತಿಯಲ್ಲ. ಅವರು ಎಸ್.ಕೆ.ಎಸ್. ಬಿಟ್ಟಾಗ ಹೇಳಿದ್ದ ಮಾತುಗಳಲ್ಲಿ ಮುಖ್ಯವಾದದ್ದು "ಬಡವರ ಆಹಾರ ಸ್ವಾವಲಂಬನೆಯ ಬಗ್ಗೆ ನಾನು ಮುಂದಿನ ಕೆಲಸ ಮಾಡಬೇಕೆಂದಿದ್ದೇನೆ" ಎಂದು ಬರೆದಿದ್ದರು.

ಈಗ ಕೂತು ಸೀತಾರಾಮ್ ಬಗ್ಗೆ ಬರೆಯುತ್ತಿರುವಾಗ ನನಗೆ ಎಷ್ಟೆಲ್ಲಾ ವಿವರಗಳು ನೆನಪಾಗುತ್ತಿವೆ. ಒಂದು ಸೀತಾರಾಮ್ ಅವರ ಒಂದೂ ಫೋಟೋ ನನ್ನ ಬಳಿಯಿಲ್ಲ. ಎರಡು: ಸೀತಾರಾಮ್ ಅವರ ಜೀವನದ ಖಾಸಗೀ ವಿವರಗಳು ಒಂದೂ ನನಗೆ ತಿಳಿದಿಲ್ಲ - ಅವರಿಗೆ ಮದುವೆಯಾಗಿದೆಯೋ, ಸ್ವಂತ ಮನೆಯಿದೆಯೋ, ಈ ಹಿಂದೆ ಏನು ಮಾಡುತ್ತಿದ್ದರು - ಯಾವುದೂ ಗೊತ್ತಿಲ್ಲ.

ಯಾಕೆಂದರೆ ಸೀತಾರಾಮ್ ನಮ್ಮೆದುರಿಗೆ ಒಂದು ಸಂಪೂರ್ಣ ವ್ಯಕ್ತಿಯಾಗಿ ನಿಲ್ಲುತ್ತಿದ್ದರು. ಹೀಗಾಗಿ ಈ ಎಲ್ಲ ವಿವರಗಳ ಆಸರೆ ಅವರ ವ್ಯಕ್ತಿತ್ವಕ್ಕೆ ಬೇಕಿರಲಿಲ್ಲ. ನಾನಿಂಥವನ ಮಗ, ಇಂಥವನ ಗಂಡ, ಇಂಥಿಂಥ ಕಡೆ ಕೆಲಸ ಮಾಡಿದೆ.. ಯಾವುದೂ ಈ ಕ್ಷಣದ ಕೆಲಸಕ್ಕೆ ಮುಖ್ಯವಲ್ಲ. ಈ ಕ್ಷಣದ ಕೆಲಸಕ್ಕೆ ಮುಖ್ಯವಾದದ್ದು - ಕೈಮೇಲಿರುವ ಸಮಸ್ಯೆಯನ್ನು ಸಾಧಿಸುವ ಬಗೆ ಹೇಗೆ ಅನ್ನುವುದರ ಆಲೋಚನೆ ಮಾತ್ರ. ಇದರಿಂದಾಗಿ ನನಗೆ ಖ್ಯಾತಿ ಬರುತ್ತದೋ ಇಲ್ಲವೋ ಅನ್ನುವುದು ಮುಖ್ಯವಲ್ಲ - ಸಮಸ್ಯೆ ಪರಿಹಾರವಾಯಿತೋ ಇಲ್ಲವೋ ಅನ್ನುವುದು ಮುಖ್ಯ...

ಬಹುಶಃ ಸೀತಾರಾಮ್ ಈ ಥರದ ಆಲೋಚನೆಗಳಲ್ಲಿ ತೊಡಗಿದ್ದಿರಬಹುದು. ಮುಂಬೈನಲ್ಲಿ ಆರ್ಟ್ ಪ್ಲಾಜಾ ಮಾಡಿ, ಉದಯೋನ್ಮುಖ ಕಲಾವಿದರಿಗೆ ಜಹಾಂಗೀರ್ ಆರ್ಟ್ ಗ್ಯಾಲರಿಯೆದುರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟ ಕಮಲಾಕ್ಷ ಶಣೈ, ಅನೇಕ ಜನರ ಸಾಹಿತ್ಯ ಕೃತಿಗಳನ್ನು ಬೆಳಕಿಗೆ ತರಲು, ಕವಿಗಳನ್ನು ಕಾಲೇಜಿನ ಹಂತದಲ್ಲಿಯೇ ಗುರುತಿಸಿ ಪ್ರ್ಹೊತ್ಸಾಹಿಸಿದ ಕ್ರೈಸ್ಟ್ ಕಾಲೇಜಿನ ಶ್ರೀನಿವಾಸ ರಾಜು ಈ ಎಲ್ಲರಲ್ಲೂ ಕೆಲವು ಸಮಾನವಾದ ಗುಣಗಳಿದ್ದುವು. ಎಲ್ಲರೂ ಮಿತಭಾಷಿಗಳು. ಎಲ್ಲರೂ ತಮ್ಮ ಖ್ಯಾತಿ ಹೆಸರಿನ ಬಗ್ಗೆ ಯೋಚಿಸಿದವರೇ ಅಲ್ಲ. ತಾವು ನಂಬಿದ್ದನ್ನು ತಮ್ಮ ಕಾಯಕವೆಂದು ಕೈಗೊಂಡು ಸಮಾಜಕ್ಕೆ ಪ್ರಯೋಜನವಾಗುವಂತೆ ಜೀವಿಸಿದವರು. ಈ ಹಲವರ ಜೊತೆಗೆ, ಎಲೆ ಮರೆಯ ಕಾಯಿಯಾಗಿ ಭುಜಕ್ಕೆ ಭುಜ ಸೇರಿಸಿ ಸೀತಾರಾಮ್ ನಿಂತಿದ್ದಾರೆ.

ಒಂದು ತಿಂಗಳ ಕೆಳಗಷ್ಟೇ ಚೆನ್ನೈನಲ್ಲಿ ಸೀತಾರಾಮ್ ಅವರ ಭೇಟಿಯಾಗಿತ್ತು. ನಾಲ್ಕಾರು ತಿಂಗಳುಗಳಿಂದ ನಾಪತ್ತೆಯಾಗಿದ್ದ ಸೀತಾರಾಮ್ ಸಾವಿನ ಅಂಚಿನಲ್ಲಿದ್ದ ತಮ್ಮ ಸಹೋದರನ ಪರಿಚಾರಿಕೆಯಲ್ಲಿದ್ದರಂತೆ. ಎಲ್ಲ ಡಾಕ್ಟರುಗಳೂ ಕೈ ಎತ್ತಿದ್ದ, ಕೋಮಾದಲ್ಲಿದ್ದ ತಮ್ಮ ಸಹೋದರನ ಜೀವವನ್ನು ವಾಪಸ್ಸು ಎಳೆದು ತಂದ ನಂತರವೇ ನಾನು ನನ್ನ ಕೆಲಸಕ್ಕೆ ವಾಪಸ್ಸಾದೆ ಎಂದು ಅವರು ಹೇಳಿದರು. ಹಳೆಯ ಕಥೆಗಳಲ್ಲಿರುವಂತೆ ಬಹುಶಃ ತಮ್ಮು ಆಯಸ್ಸನ್ನು ತಮ್ಮ ಸಹೋದರನಿಗೆ ಎರೆದು ಬಿಟ್ಟರೇನೋ. ಆದರೆ ಆ ಸಂದರ್ಭ ಸೀತಾರಾಮ್‍ಗೆ ತೃಪ್ತಿ ತಂದ ಸಂದರ್ಭವಿದ್ದಿರಬಹುದು. ಯಾಕೆಂದರೆ ಅಮಿತವಾಗಿ ಬದಲಾವಣೆಗಳನ್ನು ಕಾಣುವ ತಪನವಿರುವವರಲ್ಲೆಲ್ಲಾ ಒಂದು ಬದಲಾವಣೆಯ ಚಡಪಡಿಕೆಯನ್ನು ನಾವು ಕಾಣುತ್ತೇವೆ. ಒಂದು ಥರದ ತೀವ್ರತೆಯನ್ನು ಕಾಣುತ್ತೇವೆ. ಆದರೆ ಈ ಕ್ಷೇತ್ರದಲ್ಲಿ ಸ್ಥಿತಪ್ರಜ್ಞರಂತೆ ಕಾಣುವ, ಅತೃಪ್ತರಾಗಿದ್ದೂ ತೃಪ್ತರಂತೆ ಕಾಣುವ ಗಾಂಭೀರ್ಯ ಸೀತಾರಾಮ್‌ಗೆ ಇತ್ತು. ಆ ಥರದ ಗಾಂಭೀರ್ಯ ಇರುವ ಮತ್ತೂಬ್ಬರೆಂದರೆ ಸೇವಾ ಸಂಸ್ಥೆಯ ಇಳಾ ಭಟ್.

ಚೆನ್ನೈನಲ್ಲಿ ನಡೆದ ಅಂದಿನ ಕಾರ್ಯಕ್ರಮ ಆತನಿಗೆ ತೃಪ್ತಿ ನೀಡಿದ್ದಿರಬೇಕು. ಸೀತಾರಾಮ್ ಮಾತನಾಡುತ್ತಿದ್ದ ಆಹಾರ ಸ್ವಾವಲಂಬನೆಯತ್ತ ಒಂದು ಹೆಜ್ಜೆಯನ್ನಿಡುತ್ತಾ ಚೆನ್ನೈನ ಈಕ್ವಿಟಾಸ್ ಮೈಕ್ರೋಫೈನಾನ್ಸ್ ಸಂಸ್ಥೆ ತಮ್ಮ ಬಡ ಗ್ರಾಹಕರಿಗೆ ಲಾಭವಿಲ್ಲದೇ - ಸುಲಭ ಕಂತಿನ ಮೇಲೆ ಆಹಾರ ಪದಾರ್ಥಗಳನ್ನು ಪೂರೈಸುಯ ಯೋಜನೆಯ ಅಡಿಪಾಯವನ್ನು ಹಾಕಿತ್ತು. ಇದು ಸೀತಾರಾಮ್ ಹೇಳಿದ್ದರಿಂದಲೇ ನಾವು ಮಾಡಿದೆವು ಅನ್ನುವ ನಿಜವನ್ನೂ ಈಕ್ವಿಟಾಸ್ ಸಂಸ್ಥೆಯ ವಾಸು ಹೇಳಿದ್ದರು. ಹೀಗಾಗಿ ತಮ್ಮ ಕನಸಿನ ಒಂದು ಭಾಗವಾದರೂ ಸಾಕಾರಗೊಳ್ಳುತ್ತಿರುವುದನ್ನು ಕಂಡು ಸೀತಾರಾಮ್ ಅಸುನೀಗಿದರು ಅನ್ನುವುದೇ ಒಂದು ತೃಪ್ತಿ.

ನಮ್ಮ ಸಂಸ್ಥೆಯಲ್ಲಿ ಒಂದು ಸೆಮಿನಾರಿಗೆ ನಾವು ಸೀತಾರಾಮನ್ನು ಕರೆಸಿದ್ದೆವು. ದಿನವಿಡೀ ಎಲ್ಲರೂ ಮಾತು ಚರ್ಚೆಯಲ್ಲಿ ಪಾಲ್ಗೊಂಡರು. ಸೀತಾರಾಮ್ ಮಾತ್ರ ತಮ್ಮ ಎಡಗೈಯಲ್ಲಿ ಪ್ಯಾಡಿನಲ್ಲಿ ಟಿಪ್ಪಣಿ ಹಾಕಿಕೊಳ್ಳುತ್ತಿದ್ದರು. ಎಲ್ಲ ಆದ ಮೇಲೆ ಸಂಜೆಗೆ ನಾನು ಆತನನ್ನು ಕೇಳಿದೆ: "ನೀವು ಒಂದೂ ಮಾತನ್ನು ಆಡಲಿಲ್ಲವಲ್ಲಾ?" ಅದಕ್ಕೆ ಸೀತಾರಾಮ್ ಎಂದಿನ ನಗೆ ನಕ್ಕು "ಇಷ್ಟೊಂದು ಜನ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು, ಅದನ್ನು ನೋಡಿ ನಾನು ಕಲಿಯುತ್ತಾ, ಏನೆಲ್ಲಾ ಮಾಡಬಹುದೆಂದು ಟಿಪ್ಪಣಿ ಹಾಕಿಕೊಳ್ಳುತ್ತಾ ಇದ್ದೆ, ಈ ಎಲ್ಲರ ನಡುವೆ ನಾನು ಹೇಳಿಕೊಳ್ಳುವುದೇನಿದೆ. ಇನ್ನೂ ಮಾಡಬೇಕಾದ ಕೆಲಸ ಬಹಳವಿದೆ" ಎಂದಿದ್ದರು.

ಪಿಕ್ಚರ್ ಅಭೀ ಬಾಕೀ ಹೈ ಮೇರೇ ದೋಸ್ತ್....
Monday, March 16, 2009

ಮೇಧಾ- ಮುಂದೇನು?

[ಈ ಲೇಖನವನ್ನ ನಾನು ಆರು ವರ್ಷಗಳ ಹಿಂದೆ ಬರೆದದ್ದು. ಆವಾಗ ಕನ್ನಡಪ್ರಭದ ಭಾನುವಾರದ ಸಂಚಿಕೆಯಲ್ಲಿ ಇದು ಪ್ರಕಟವಾಗಿತ್ತು. ಇದನ್ನು ಓದಿದ ಕೆಲ ಮಿತ್ರರು ನಾನು ಮೇಧಾ ವಿರೋಧಿ ಅಂತ ನನ್ನನ್ನ ಬಣ್ಣಿಸಿದ್ದರು. ಅದು ನಿಜವಲ್ಲ. ಈ ಲೇಖನದಲ್ಲಿ ನಾನು ನರ್ಮದಾ ಆಂದೋಲನದ ಪರ ಅಥವಾ ವಿರೋಧಿ ನಿಲುವನ್ನು ತೆಗೆದುಕೊಳ್ಳುತ್ತಿಲ್ಲ. ಒಂದು ವಿಷಯವನ್ನು ಹಿಡಿದು ಹೊರಟ ಆಂದೋಲನಕಾರರ ದ್ವಂದ್ವಗಳೇನಿರಬಹುದು ಎಂಬುದನ್ನು ಮಾತ್ರ ನಾನು ಚರ್ಚಿಸಲು ಪ್ರಯತ್ನಿಸಿದ್ದೇನೆ. ತಮ್ಮ ನಿಲುವಿಗಾಗಿ ಉಪವಾಸ ಕೂತ, ಆರೋಗ್ಯ ಕ್ಷೀಣಿಸುತ್ತ ಜೀವನ್ಮರಣದ ನಡುವೆ ಹೋರಾಡುತ್ತಿರುವ ಮೇಧಾರ ಕನ್ವಿಕ್ಷನ್ ಬಗೆಗೆ, ಅವರು ತೆಗೆದುಕೊಂಡ ನಿಲುವು ಮತ್ತು ಅದಕ್ಕಾಗಿ ಎದ್ದು ನಿಲ್ಲುವ ಛಾತಿಯ ಬಗ್ಗೆ ನನಗೆ ತುಂಬಾ ಗೌರವವಿದೆ ಎಂದಷ್ಟೇ ಹೇಳಬಯಸುತ್ತೇನೆ]ನರ್ಮದಾ ಬಚಾವ್ ಆಂದೋಳನದ ಮೇಧಾ ಪಾಟ್ಕರ್ ಈಗೇನು ಮಾಡುತ್ತಾರೆ? ತಮ್ಮ ಹೋರಾಟವನ್ನ ಯಾವ ದಿಕ್ಕಿನಲ್ಲಿ ತಿರುಗಿಸುತ್ತಾರೆ? ಅಣೆಕಟ್ಟಿನ ಕಲಸ ಮುಂದುವರಸಬಹುದೆಂಬ ಸುಪ್ರೀಂ ಕೋರ್ಟಿನ ತೀರ್ಪು ಬಂದಕೂಡಲೇ ಗುಜರಾತ್ ರಾಜ್ಯದಲ್ಲಿ ಅನೇಕ ಕಡೆ ಪಟಾಕಿ ಹಚ್ಚಿ ಸಿಹಿ ಹಂಚಿ ಜನ ತಮ್ಮ ಖುಷಿಯನ್ನ ವ್ಯಕ್ತಪಡಿಸಿದರೆ, ಅತ್ತ ಮೇಧಾ ಪಾಟ್ಕರ್ ಮತ್ತು ಅರುಂಧತಿ ರಾಯ್ ದುಃಖದಿಂದ, ಕೋಪದಿಂದ ಪ್ರತಿಕ್ರಿಯಿಸಿದ್ದಾರೆ. ಮೇಧಾಗಂತೂ ಇಂದು ತಮ್ಮ ಜೀವನದ ಗುರಿಯೇ ಕಳಚಿಬಿದ್ದಂತಾಗಿದೆ. ಅರುಂಧತಿ ರಾಯ್ ಬಗ್ಗೆ ಕಡಿಮೆ ಮಾತಾಡಿದಷ್ಟೂ ಒಳ್ಳೆಯದು - ಆಕೆ ಈ ಆಂದೊಳನಕ್ಕೆ ತನ್ನ ಬುಕರ್ ಬಹುಮಾನದ ಖ್ಯಾತಿಯ ನೆರಳನ್ನ ಹಿಂಬಾಲಿಸುತ್ತಾ ನಂತರ ಬಂದಾಕೆ.

ಮೇಧಾ ಹಿಡಿದ ದಾರಿ ಮೊದಲಿನಿಂದಲೂ ಕಠಿಣವಾದದ್ದು. ಇದು ಅಂತಿಮವಾಗಿ ದುಃಖ, ದುಗುಡ, ನಿರಾಶೆ ಕೊಡುವ ದಾರಿಯೇ ಆಗಿತ್ತು. ಯಾವುದೇ ಒಂದು ದೊಡ್ಡ ವಿಷಯಕ್ಕೆ ವಿರುದ್ಧವಾದ ನಿಲುವು ತೆಗದುಕೊಂಡು ಹಠಹಿಡಿದಂತೆ, ಚಂಡಿ ಹಿಡಿದಂತೆ ಮಾಡಿದರೆ - ಅದನ್ನೇ ಜೀವನದ ಧ್ಯೇಯ ಮಾಡಿಕೊಂಡರೆ, ಚಡಪಡಿಕೆ ತಪ್ಪಿದ್ದಲ್ಲ. ಜೊತೆಗೆ ಒಂದು ನಿಲುವು ತೆಗೆದುಕೊಂಡು ನಿಲುವಿನ ಪರ ಅತಿರೇಕಕ್ಕೆ ಹೋದಾಗ ಸಿಗುವ ಫಲ - ಅದೂ ಅಕಸ್ಮಾತ್ ಸಿಕ್ಕರೆ - ತಾತ್ಕಾಲಿಕವಾದದ್ದಾಗಿರುತ್ತದೆಂದು ನಮಗೆ ಚರಿತ್ರೆ ತೋರಿಸಿಕೊಟ್ಟಿದೆ. ಈಗ ಉಚ್ಚ ನ್ಯಾಯಾಲಯ ಅಣೆಕಟ್ಟು ಕಟ್ಟಲು ಪರವಾನಗಿ ನೀಡಿರುವುದರಿಂದ ಮೇಧಾರಿಗೆ ಸಕಾರಣವಾಗಿ ತಮ್ಮ ಹೋರಾಟ ಮುಂದುವರೆಸಲು ಅನುಕೂಲವಾಗಿದೆ. ಅಕಸ್ಮಾತ್ ನ್ಯಾಯಾಲಯ ನರ್ಮದಾ ಆಂದೋಳನದ ಪರವಾಗಿ ತೀರ್ಪಿತ್ತಿದ್ದರೆ ಆಗ ಏನಾಗಬಹುದಿತ್ತು ಉಹಿಸಿಕೊಳ್ಳಿ... ನರ್ಮದಾ ಬಚಾವಾಯಿತು! ಇನ್ನು ಆಂದೋಳನ ಯಾವುದರ ಬಗ್ಗೆ? ಇಂಥ ಪರಿಸ್ಥಿತಿಯಲ್ಲಿ ಅರುಂಧತಿ ರಾಯ್ ಅಂತಹ ಜನ ತಮ್ಮ ಹಳೇ ಕೆಲಸಕ್ಕೆ ವಾಪಸ್ಸಾಗಿ ಮತ್ತೊಂದು ಕಾದಂಬರಿ ಬರೆಯಬಹುದು - ಆದರೆ ನರ್ಮದಾ ಆಂದೋಳನ ಈಕ್ವಲ್ಸ್ ಮೇಧಾ, ಮೇಧಾ ಈಕ್ವಲ್ಸ್ ನರ್ಮದಾ ಎಂಬಂತಹ ಇಮೇಜಿರುವ ಈಕೆ ಏನು ಮಾಡುತ್ತಾರೆ?

ಹಾಗೆ ನೋಡಿದರೆ ಮೇಧಾರ ಹೋರಾಟದ ಜೀವನದ ದೃಷ್ಟಿಯಿಂದ ಈ ತೀರ್ಪು ಆಕೆಗೆ ಜೀವನದಾನವನ್ನ ಮಾಡಿ ಆಕೆ ಹೋರಾಡುತ್ತಿರುವ ಮೂಲಭೂತ ವಿಷಯವನ್ನ ಜೀವಂತವಾಗಿಟ್ಟಿದೆ ಎನ್ನಬಹುದು. ಈಗ ಗುಜರಾತ್ ಸರಕಾರ ಅಣೆಕಟ್ಟು ಕಟ್ಟಿ ಮುಗಿಸುವವರೆಗೂ ಆಕೆಗೆ ಒಂದು ಎಜೆಂಡಾ ಇದೆ. ಆ ನಂತರವೂ ಪುನರ್ವಸತಿಯ ಮಾತು ಮುಂದುವರೆಸಬಹುದು. ಆದರೆ ಅಣೆಕಟ್ಟಿನ ಎತ್ತರ ಜಾಸ್ತಿ ಮಾಡಲು ಪರವಾನಗಿ ಕೊಡದೇ ಇದ್ದಿದ್ದರೆ ಈ ಹೆಚ್ಚಿನ ಉದ್ದೇಶ ನಾಪತ್ತೆಯಾಗಿಬಿಡುತ್ತಿತ್ತು.

ಒಂದು ರೀತಿಯ ವಿಪರೀತ ನಿಲುವು ತೆಗೆದುಕೊಳ್ಳುವುದು ಮೇಧಾರಿಗೆ ಹೊಸದೇನೂ ಅಲ್ಲ. ಬಹುಶಃ ಆಕೆ ಹೋರಾಡುತ್ತಿರುವ ವಿಷಯಕ್ಕೆ ಇಂಥ ನಿಲುವಿನ ಅವಶ್ಯಕತೆಯಿದ್ದೀತು. ಯಾವುದೇ ವಿಷಯದ ಚರ್ಚೆ ಇಂಥ ವಿಪರೀತ ನಿಲುವಿನಿಂದಲೇ ಪ್ರಾರಂಭವಾಗಿ ಹಂತಹಂತವಾಗಿ ಒಂದೊಂದೇ ಉಪವಿಷಯಗಳಲ್ಲಿ ರಾಜಿ ಅಥವಾ ಒಪ್ಪಂದ ತಲುಪುವ ಪ್ರಾಸೆಸ್ ಆಗಿರುತ್ತದೆ. ಆದರೆ ಮೇಧಾ ಮೊದಲಿನಿಂದಲೂ ಏನನ್ನೂ ಬಿಟ್ಟುಕೊಡಲು ತಯಾರಿರಲೇ ಇಲ್ಲ ಎಂಬಂಥ ಇಮೇಜನ್ನ (ಇದು ನಿಜವೂ ಇರಬಹುದು) ಜನರ ಮುಂದಿಟ್ಟಿದ್ದಾರೆ. ಹಾಗೆ ನೋಡಿದರೆ ನರ್ಮದಾ ಆಂದೋಳನ ಪ್ರಾರಂಭವಾದಾಗ ಚರ್ಚೆಗೊಳಗಾಗುತ್ತಿದ್ದ ಮುಖ್ಯ ವಿಷಯ ಪರಿಸರದ ಸಮತೋಲನದಲ್ಲಿ ಆಗಬಹುದಾದ ಏರುಪೇರಿನ ಬಗ್ಗೆಯಿತ್ತು. ಟೆಹರಿ ಅಣಕಟ್ಟಿನ ವಿಷಯವೂ ಇದೇ ಕಾರಣಕ್ಕಾಗಿ ಸುಂದರಲಾಲ್ ಬಹುಗುಣರಂತಹ ಪರಿಸರವಾದಿಗಳನ್ನು ಆಕರ್ಷಿಸಿತ್ತು.

ಆದರೆ ಜನಸಮೂಹವನ್ನು ಆಕರ್ಷಿಸಿ ಯಾವುದೇ ಆಂದೋಳನವನ್ನ ಜನಪ್ರಿಯ ಮಾಡಬೇಕಾದರೆ ತಕ್ಷಣದ ವಿಷಯವನ್ನ ದೂರದೃಷ್ಟಿಯ ಜೊತೆಗೆ ಸೇರಿಸದಿದ್ದರೆ ಕೈಯೆಣಿಕೆಯ ಕೆಲ ಬುದ್ಧಿಜೀವಿಗಳಷ್ಟೇ ಆ ಆಂದೋಳನದಲ್ಲಿ ಉಳಿದು ಬಿಡುತ್ತಾರೆ. ಇದನ್ನು ಮೇಧಾ ಬಹುಶಃ ಬಹುಬೇಗ ಕಂಡುಕೊಂಡರು ಅನ್ನಿಸುತ್ತದೆ. ಜೊತೆಗೆ ಕೋರ್ಟು ಕಛೇರಿಗಳಲ್ಲಿ ವಾದವಿವಾದ ಮಾಡುವಾಗಲೂ - ಮೂವತ್ತು ವರ್ಷಗಳ ನಂತರ ಆಗಬಹುದಾದ ಪರಿಸರದ ಏರುಪೇರಿನ ಬಗ್ಗೆ ಮಾತ್ರ ಚರ್ಚೆ ನಡೆಸುವುದಕ್ಕಿಂತ ನಾಳೆಯೇ ಆಗಬಹುದಾದ ಅನಾಹುತದ ಬಗ್ಗೆಯೂ ಮಾತನಾಡಿದರೆ ತಕ್ಷಣದ ಸಮಾಧಾನವೂ ಸಿಗಬಹುದು. ಸಮಯಕಳೆದಂತೆ ಆದಿವಾಸಿಗಳ ಪುನರ್ವಸತಿ ಚರ್ಚೆಯ ಮುಖ್ಯವಿಷಯವಾಗುತ್ತಾ ಹೋದದ್ದನ್ನ ನಾವು ಈ ಆಂದೋಳನದಲ್ಲಿ ಕಾಣಬಹುದು.

ಮೇಧಾರಂತಹ ಜನ ಕೈಹಿಡಿದಿರುವ ವಿಷಯ ಸರಳವಾದದ್ದೇನೂ ಅಲ್ಲ. ಹೀಗಾಗಿ ಸಣ್ಣ ಮಕ್ಕಳಂತೆ, ಒಂದು ವಿಚಾರದ ಬಗ್ಗೆ ಸಂಪೂರ್ಣ ಚರ್ಚೆಯಾಗುವುದಕ್ಕೆ ಮೊದಲೇ ಮತ್ತೊಂದು ವಿಷಯ ಎತ್ತಿ ಚಂಡಿ ಹಿಡಿಯುವ ಪ್ರಾಸೆಸ್ ನಮಗೆ ಕಾಣುತ್ತದೆ. ಒಂದು ಕಡೆ ಕೋರ್ಟು, ಕೇಂದ್ರ ಸರಕಾರ, ಮಧ್ಯಪ್ರದೇಶ ಸರಕಾರ ಮತ್ತು ಗುಜರಾತ್ ಸರಕಾರ ಈ ಅಣೆಕಟ್ಟಿನ ಬಗ್ಗೆ ತಲೆಕೆಡಿಸಿಕೊಳ್ಳಬೇಕು. ಈಗ ಅಣೆಕಟ್ಟಿನ ಎತ್ತರ ಬೆಳೆಸಿದರೆ - (ಅದಕ್ಕಾಗಿ ಅಕ್ಟೋಬರ್ ೩೧, ಸರದಾರ್ ಪಟೇಲರ ಹುಟ್ಟುಹಬ್ಬದಂದು ಪೂಜೆ ನಡೆದು ಕಲಸ ಪ್ರಾರಂಭಮಾಡಿದ್ದಾಗಿದೆ) ಅದರ ಹೆಚ್ಚಿನ ಪ್ರಯೊಜನ ಗುಜರಾತಿನ ಜನಕ್ಕೆ - ಮುಖ್ಯವಾಗಿ ಬರಪೀಡಿತವಾಗಿರುವ ಸೌರಾಷ್ಟ್ರ ಪ್ರದೇಶಕ್ಕೆ ಆಗುವುದೂಂತ ಹೇಳಲಾಗಿದೆ. ಆದರೆ ಪುನರ್ವಸತಿಯ ಕಾರ್ಯದಲ್ಲಿ ಮಧ್ಯಪ್ರದೇಶ (ಅಲ್ಲಿಯ ಹಳ್ಳಿಗಳೂ ಮುಳುಗುವುದರಿಂದ) ಹಾಗೂ ಗುಜರಾತ್ ಸಹಭಾಗಿಗಳಾಗಿರಬೇಕು. ಪುನರ್ವಸತಿಗೆ ತಮ್ಮಲ್ಲಿ ಜಮೀನಿಲ್ಲವೆದು ಮಧ್ಯಪ್ರದೇಶದ ಮುಖ್ಯಮಂತ್ರಿ ಕೆಲದಿನಗಳ ಹಿಂದೆ ಒಂದು ಹೇಳಿಕೆ ಕೊಟ್ಟು ದೊಡ್ಡ ಬಾಂಬನ್ನೇ ಹಾಕಿದ್ದಾರೆ. ಹೀಗಾಗಿ ಈ ಅಣೆಕಟ್ಟಿನ ಎತ್ತರ ಬೆಳೆಸುವ ಬಗ್ಗೆ ಮಧ್ಯಪ್ರದೇಶ ಸರಕಾರದ ಉತ್ಸಾಹ ಗುಜರಾತ್ ಸರಕಾರದಷ್ಟು ಇಲ್ಲ. ಆದರೆ ಮೇಧಾರ ಕರ್ಮಭೂಮಿ, ಉಪವಾಸ ಸತ್ಯಾಗ್ರಹಗಳು ಮಧ್ಯಪ್ರದೇಶದಲ್ಲಿ ನಡೆಯುತ್ತವೆಯೇ ಹೊರತು ಗುಜರಾತಿನಲ್ಲಿ ಅಲ್ಲ. ಯಾಕೆ?

ಹಲವು ವರ್ಷಗಳ ಹಿಂದೆ ಶೂಲಪಾಣೇಶ್ವರ ದೇವಾಲಯ ಮುಳುಗಡೆಯಾಗುವಾಗ ತಾವು ಅಲ್ಲಿ ಆತ್ಮಸಮರ್ಪಣೆ ಅಥವಾ, ಆಕೆಯ ಭಾಷೆಯಲ್ಲಿ ಜಲಸಮಾಧಿ - ಮಾಡಿಕೊಳ್ಳುವೆನೆಂದು ಹೇಳಿದ ಮೇಧಾ, ಅಂಥ ದುಸ್ಸಾಹಸಕ್ಕೆ ಕೈ ಹಾಕದೇ ಚರ್ಚ್‌ಗೇಟ್ ಮುಂಬಯಿಯಲ್ಲಿ ಉಪವಾಸ ಕೂತರು. ಈಗ ಭೋಪಾಲದಲ್ಲಿ ೫ ದಿನದ ಉಪವಾಸ ಮಾಡಿದರು. ಮೇಧಾ ಯಾಕೆ ಅಣೆಕಟ್ಟಿನ ಕಲಸ ಆಗತ್ತಿರುವ (ಕೇವಡಿಯಾ ಕಾಲೋನಿ) ಸ್ಥಳದ ಹತ್ತಿರ ಉಪವಾಸ ಕೂಡುವುದಿಲ್ಲ, ಕಡೆಗೂ ಆತ್ಮಾಹುತಿಯ ಸಾಹಸಕ್ಕೆ ಯಾಕೆ ಕೈ ಹಾಕಲಿಲ್ಲ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಕಷ್ಟದ ಕೆಲಸವೇನೂ ಅಲ್ಲ. ಕೇವಡೀಯಾ ಕಾಲೋನಿಯಲ್ಲಿ ಉಪವಾಸ ಕೂತರೆ ಪತ್ರಕರ್ತರು ಅಷ್ಟುದೂರ ಹೋಗಿ ಈ ಬಗ್ಗೆ ವರದಿ ಮಾಡಲಾರರು, ಇವರ ಚಿತ್ರ ಛಾಪಿಸಲಾರರು. ಉಪವಾಸದ ಮುಖ್ಯ ಉದ್ದೇಶ ಜನರಿಗೆ ನಾಯಕರಿಗೆ ಈ ಸಂದೇಶ ಮುಟ್ಟಿಸುವುದೇ ಆಗಿರುವುದರಿಂದ ಇವುಗಳು ಜನರಿರುವ ಜಾಗದಲ್ಲಿ, ಸರಕಾರದ ಗಮನ ಸೆಳೆವ ಜಾಗದಲ್ಲಿ ಆಗುತ್ತದೆ. ಇಂಥ ಆಂದೊಳನಗಳಿಗೆ ಆತ್ಮಾಹುತಿ ಒಂದು ಪರಿಹಾರವೂ ಅಲ್ಲ. ಮೇಧಾರ ಆತ್ಮಾಹುತಿಯಾದರೆ ಅದು ಹೋರಾಟದ ಅಂತ್ಯವೂ ಆಗಿಬಿಡುತ್ತದೆ. ಈಗಲೂ ಆತ್ಮಾಹುತಿಯ ಮಾತುಗಳು ಕೇಳಿಬರುತ್ತಿವೆ - ಆದರೂ ಆತ್ಮಾಹುತಿ ಹೆಚ್ಚೂ ಕಡಿಮೆ ಸೋಲನ್ನೊಪ್ಪಿದಂತೆಯೆ ಎಂದು ನಾವುಗಳು ನೆನಪಿಡಬೇಕು. ಯಾವುದೇ ಮಾತುಕತೆಯ, ಲೇನ್‌ದೇನ್ ಕಾರ್ಯಕ್ರಮದಲ್ಲಿ ಮೊದಲಿಗೇ ವಿಪರೀತ ನಿಲವು ತಗೆದುಕೊಳ್ಳಬಾರದೆಂಬ ಪಾಠವನ್ನು ಮಾತ್ರ ಮೇಧಾ ಕಲಿತಿಲ್ಲವೆಂದೇ ಹೇಳಬೇಕು.

ಆದರೆ ಈಗ ಆಂದೋಳನ ಒಂದು ವಿಚಿತ್ರ ಹಂತ ತಲುಪಿಬಿಟ್ಟಿದೆ. ಈಗ ಮೇಧಾ ಮತ್ತು ಆಂದೋಳನಕಾರರು ಬಹಳ ಜಾಗರೂಕತೆಯಿಂದ ಮುಂದಿನ ಹೆಜ್ಜೆಯಿಡಬೇಕಾಗುತ್ತದೆ. ಪರಿಸರ, ಪುನರ್ವಸತಿ - ಎರಡರ ಬಗೆಗೂ ಒಂದೇ ಧ್ವನಿಯಲ್ಲಿ ಮಾತನಾಡದೇ ಪುನರ್ವಸತಿಯ ವಿಷಯವನ್ನ ಪಟ್ಟಾಗಿ ಹಿಡಿದು, ಸರಕಾರದಿಂದ ಕೆಲಸ ತೆಗೆಯುವ ಅಜೆಂಡಾ ಯಾರಾದರೂ ಕೈ ಹಿಡಿಯಲೇ ಬೇಕಾಗಿದೆ. ಸುಪ್ರೀಂ ಕೋರ್ಟಿನ ಆದೇಶದಂತೆ ಕೆಲಸ ತಕ್ಷಣ ಪ್ರಾರಂಭಮಾಡಿ ಗುಜರಾತಿನ ಬಿಜೆಪಿ ಸರಕಾರ ತನ್ನ ಆಂತರಿಕ ಸಮಸ್ಯೆಗಳನ್ನ, ಈಚೆಕೆ ಪಂಚಾಯತಿ, ಮುನಿಸಿಪಲ್ ಚುನಾವಣೆಗಳಲ್ಲಿ ಮಣ್ಣು ಮುಕ್ಕಿದ ವಿಷಯವನ್ನ ಮರೆತು ಹೊಸ ಚೈತನ್ಯದಿಂದ ಮುಂದುವರೆಯುತ್ತಿದೆ. ಎನ್‌ಬಿ‌ಎ ಆಂದೋಳನಕಾರರು ಸ್ವಲ್ಪ ದಿಕ್ಕೆಟ್ಟವರಂತೆ ಕಾಣುತ್ತಿದ್ದಾರೆ....

ಉಚ್ಚ ನ್ಯಾಯಾಲಯದ ತೀರ್ಪಿನಿಂದ ಕೋಪಗೊಂಡಿರುವ ಆಂದೋಳನದವರು ಇದು ತಮಗೆ ಒಪ್ಪಿಗೆಯಿಲ್ಲವೆಂದು ಪಟ್ಟುಹಿಡಿದು ಕೂತಿದ್ದಾರೆ. ಕೋರ್ಟಿನಿಂದ ತೀರ್ಪು ಬಂದ ಮೇಲೆ - ಇದು ಒಪ್ಪಿಗೆಯಿಲ್ಲವೆಂದು ಹೇಳುವುದು ಎಷ್ಟು ಸಮಂಜಸ? ತಮಗೆ ವ್ಯತಿರೇಕವಾಗಿ ಬಂದಿದ್ದು ಗುಜರಾತ್ ಸರಕಾರವೂ ಇದೇ ನಿಲುವನ್ನ ತೆಗೆದುಕೊಂಡಿದ್ದರೆ ಏನಾಗುತ್ತಿತ್ತು? ನ್ಯಾಯಪಾಲಿಕೆಯಂಥಹ ಸಂಸ್ಥೆಯ ತೀರ್ಪನ್ನ 
"not acceptable to the affected people" ಎಂಬಂತ ನಿಲುವನ್ನ ಬುದ್ಧಿಜೀವಿಗಳಾದ ಮೇಧಾರಂತಹವರು ತೆಗೆದುಕೊಂಡಾಗ ನಿಜಕ್ಕೂ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆಯಿರುವವರೆಲ್ಲ ಎದ್ದು ಕೂತುಕೊಳ್ಳುವ ಸಮಯ ಬರುತ್ತದೆ. ಆದರೆ ತೀರ್ಪು ಬಂದಕೂಡಲೇ ಮೇಧಾ ಹಾಗೆ ಪ್ರತಿಕ್ರಯಿಸಿದರೂ, ಈಚೆಗೆ ಕೊಟ್ಟ ಸಂದರ್ಶನವೊಂದರಲ್ಲಿ ತಮ್ಮ ಮುಂದಿರುವ ಸಂವಿಧಾನಬದ್ಧ ದಾರಿಗಳನ್ನ ಚರ್ಚಿಸಿರುವುದು ಒಳ್ಳಯದೇ ಆಗಿದೆ. ಇಲ್ಲವಾದಲ್ಲಿ ಮೇಧಾ ಮತ್ತು ಆಂದೊಳನದವರು ತಮಗೆ ಭಾರತ ಸಂವಿಧಾನದ ವ್ಯವಸ್ಥೆಯ ಬಗ್ಗೆಯೇ ನಂಬಿಕೆಯಿಲ್ಲವೆಂದು ಹೇಳಿದಂತಾಗುತ್ತಿತ್ತು.

ಅಕಸ್ಮಾತ್ ಆಂದೋಳನ ಈ ದಾರಿ ಹಿಡಿದರೆ, ಮೂಲಭೂತವಾಗಿ ಸಂವಿಧಾನವನ್ನ ಪ್ರಶ್ನಿಸುವ ಹಂತ ತಲುಪಿದರೆ ಬಹುಶಃ ಮೇಧಾರಿಗೆ ಈಗಿರುವ ಸಪೂರ್ಟ್ ಕೂಡಾ ಕಡಿಮೆಯಾಗುವ ಅಪಾಯವಿದೆ.

ಮೇಧಾ ಕೋರ್ಟಿನ ಬಗ್ಗೆ ತಮಗೆ ನಂಬಿಕೆಯಿಲ್ಲವೆಂದಮಾತ್ರಕ್ಕೆ ಆಕೆ ಚರ್ಚಿಸುತ್ತಿರುವ ಮೂಲಭೂತ ವಿಷಯಗಳ ಮಹತ್ವ ಕಡಿಮೆಯಾಯಿತೆಂದು ಯಾರೂ ನಂಬಬಾರದು. ಆದರೆ ನಾವುಗಳು ನಮ್ಮಲ್ಲರ ಜೀವನವನ್ನ ಒಂದು ಪ್ರಜಾತಾಂತ್ರಿಕ ಚೌಕಟ್ಟಿನೊಳಗೆ ಬದುಕಲು ನಮ್ಮ ಸಂವಿಧಾನವನ್ನ ರೂಪಿಸಿರುವುದರಿಂದ, ಈ ಸಂಸ್ಥೆಗಳ ಉದ್ದೇಶವನ್ನ ಪ್ರಶ್ನಿಸುವುದು - ಅದರಲ್ಲೂ ಮೇಧಾ, ಅರುಂಧತಿಯಂತಹ ಬುದ್ಧಿಜೀವಿಗಳು ಇದನ್ನ ಪ್ರಶ್ನಿಸುವುದು ಬಹಳ ಭಯಾನಕವಾದ ಪರಿಸ್ಥಿತಿಯನ್ನುಂಟುಮಾಡುತ್ತದೆ. ತಮಾಷೆಯೆಂದರೆ ಇಂಥಹ ಒಂದು ತೀರ್ಪು - ಕಾನೂನಿನ ತಕ್ಕೆಗೇ ಸಿಗಲಾರರು ಎಂದು ಭಾವಿಸಿದ್ದ ಮಾಜಿ ಪ್ರಧಾನಿ ನರಸಿಂಹರಾವ್, ಜಯಲಲಿತಾರು ಜೈಲಿನ ಬಾಗಿಲು ತಟ್ಟುತ್ತಿರುವ ಸಂದರ್ಭದಲ್ಲಿ - ನ್ಯಾಯಪಾಲಿಕೆಯ ವ್ಯವಸ್ಥೆಯಲ್ಲಿ ನಂಬಿಕೆ ಮರುಕಳಿಸುತ್ತಿರುವ ಸಂದರ್ಭದಲ್ಲಿ, ಬಂದಿದೆ. ದೊಡ್ಡ ನೀರಾವರಿ ಯೋಜನೆಗಳು, ಅಣೆಕಟ್ಟುಗಳು ಎಷ್ಟು ಜಟಿಲವಾದ ವಿಷಯವೆಂದು ನಿರೂಪಿಸಲೋ ಎಂಬಂತೆ ಉಚ್ಚನ್ಯಾಯಾಲಯದ ತೀರ್ಪೂ ಸರ್ವಾನುಮತದಿಂದ ಕೂಡಿಲ್ಲ. ಮೇಧಾ ಈ ಭಿನ್ನಾಭಿಪ್ರಾಯವನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಚೆನ್ನಾಗಿಯೇ ಉಪಯೋಗಿಸಿಕೊಳ್ಳುತ್ತಿದ್ದಾರೆ!

ಈ ಎಲ್ಲ ಜನಾಂದೋಳನಗಳೂ ಎರಡು ಧಾರೆಗಳನ್ನ ನಮ್ಮ ಮುಂದಿಡುತ್ತದೆ. ಜನಾಂದೊಳನಗಳಲ್ಲಿ ಬರಬಹುದಾದ ಸಣ್ಣಪುಟ್ಟ ಆಂದೊಳನಗಳನ್ನ ಸದ್ಯಕ್ಕೆ ಬಿಟ್ಟು ಬಿಡೋಣ. ದೊಡ್ಡ (ನರ್ಮದಾದಂತಹ) ಆಂದೋಳನಗಳಲ್ಲಿ ನಾವು ಯಾವುದಾದರೂ ಒಂದು ವಿಚಾರದ "ಪರ" ವಾಗಿ ಹೋರಾಡುವಾಗ, ಸೋಲೆಂಬುದು ಇಲ್ಲವೇ ಇಲ್ಲ. ಉತ್ತರಾಖಂಡ್, ಜಾರ್‌ಖಂಡ್, ಗೊರ್ಖಾಲ್ಯಾಂಡ್... ಇತ್ಯಾದಿ ಆಂದೋಳನಗಳನ್ನ ತೆಗೆದುಕೊಂಡರೆ ಬೇರೆ ಬೇರೆ ಹಂತದಲ್ಲಿ (ಸಂವಿಧಾನಾವನ್ನ ಒಪ್ಪಿ, ಅದರ ಚೌಕಟ್ಟಿನೊಳಗೆ ಕೆಲಸ ಮಾಡಲು ತಯಾರಾದಾಗ) ಅದರ ನಾಯಕರು - ಆ ವಿಚಾರಧಾರೆ - ಸಫಲತೆ ಪಡೆದದ್ದನ್ನ ನೋಡಬಹುದು. ಸಫಲತೆ ಪಡೆಯದ ವಿದರ್ಭ, ತೆಲಂಗಾಣಾ, ಕೊಡಗು ಇತ್ಯಾದಿಗಳು ಎಂದಿಗೂ 
"lost cause" ಆಗುವುದೇ ಇಲ್ಲ.. ಎಲ್ಲಿಯವರೆಗೆ ಅದು ಸಫಲವಾಗುವುದಿಲ್ಲವೋ ಅಲ್ಲಿಯವರೆಗೆ ಅದರ ನಾಯಕರ ಕೆಲಸ ಮುಂದುವರೆಯುತ್ತಲೇ ಇರುತ್ತದೆ. ಅದು ಸಫಲವಾದಾಗ ಅದನ್ನ ಕಟ್ಟುವ ಕಾಪಾಡುವ ಕೆಲಸ ಮಾಡಬಹುದು (ದುರಾದೃಷ್ಟದಿಂದ ಅದರ ನಾಯಕತ್ವ ಆಂದೋಳನಕಾರರಿಗೆ ಸಿಗದಿರಲೂಬಹುದು - ಜಾರ್‌ಖಂಡ್‌ನಲ್ಲಿ ಶಿಬೂ ಸೋರೆನ್‌ಗೆ ಆದ ಹಾಗೆ..)

ಅದೇ ಯಾವುದೇ ವಿಷಯಕ್ಕೆ ವಿರುಧ್ಧವಾಗಿ ಕೆಲಸ ಮಾಡಿದಾಗ - ಸಫಲತೆ ಪ್ರಾಪ್ತವಾದರೂ ಅದು ಒಂದು 
"dead end"ಆಗಿಬಿಡುತ್ತದೆ. ನರ್ಮದಾ ಅಣೆಕಟ್ಟು ನಿಲ್ಲಿಸಿಬಿಟ್ಟರೆ ಇಂಥದೇ ಕೆಲಸದ ಮೇಲೆ ತಮ್ಮಿಡೀ ಜೀವನವನ್ನ ಕಳೆದಿರುವ ಮೇಧಾ ಏನು ಮಾಡುತ್ತಾರೆ... ಬೇರೊಂದು ಅಣೆಕಟ್ಟನ್ನ ವಿರೋಧಿಸುತ್ತಾರೆಯೇ, ಅಥವಾ ವ್ಯವಸ್ಥೆಯ ಮುಖ್ಯಧಾರೆಯಲ್ಲಿ ಬೆರೆತು ಹೋಗುತ್ತಾರೆಯೇ...

ಸ್ವಾತಂತ್ರ ಸಂಗ್ರಾಮದಂತಹ ಹೋರಾಟಗಳು ಬೇರೆಯೇ ಸ್ಥರದವು - ಅಲ್ಲಿ ಹೋರಾಟಗಾರರು ಕೈಗತ್ತಿಕೊಂಡಿರುವ ವಿಷಯ ಮೂಲಭೂತವಾಗಿ ಸಂವಿಧಾನವನ್ನ ಪ್ರಶ್ನಿಸಿ, ಅದರೊಂದಿಗಿನ ಕೊಂಡಿಗಳನ್ನು ಮುರಿಯುವುದೇ ಆಗಿದೆ. ಆ ಸಂದರ್ಭದಲ್ಲಿ ಮೂಲಭೂತ ಉದ್ದೇಶವೇ ಇರುವ ವ್ಯವಸ್ಥೆಯನ್ನ ಪ್ರಶ್ನಿಸುವುದಾಗಿರುತ್ತದೆ. ಇಂಥ ಸಂಗ್ರಾಮಗಳಲ್ಲಿ - ಒಂದು ಭೂಪ್ರದೇಶ ಹಂಚಿಹೋಗಬಹುದು (ರಷ್ಯಾ, ಯುಗೋಸ್ಲಾವಿಯಾ...) ಅಥವಾ ಸಂವಿಧಾನವೇ ಬದಲಾಗಬಹುದು (ದಕ್ಷಿಣ ಆಫ್ರಿಕಾ). ಆದರೆ ಮೇಧಾ ಎತ್ತಿರುವ ವಿಷಯ ಆ ದೃಷ್ಟಿಯಿಂದ ಪರಿಸರ ಮತ್ತು ದೊಡ್ಡ ಅಣಕಟ್ಟುಗಳಿಂದ ಆಗಬಹುದಾದ ಕಷ್ಟನಷ್ಟಗಳಿಗೆ ಸೀಮಿತವಾಗಿದೆ.

ಇಲ್ಲಿ ಗುಜರಾತಿನಲ್ಲಿ ಎಲ್ಲರೂ ಕೋರ್ಟಿನ ತೀರ್ಪಿನಿಂದ ಖುಷಿಗೊಂಡಿದ್ದಾರೆ. ಇದೊಂದು ಮರೀಚಿಕೆಯಂತೆ ಎಲ್ಲರಿಗೂ ಕಾಣುತ್ತಾ ಇದೆ. ಆದರೆ ಮೇಧಾರನ್ನ ಟೀಕಿಸುವವರೆಲ್ಲ ಮುಳುಗಲಿರುವ ಆದಿವಾಸಿ ಗ್ರಾಮಗಳ ಜನರಬಗ್ಗೆ ಯೋಚನೆ ಮಾಡಬೇಕಾಗಿದೆ. ಅವರಿಗೆ ಸರಿಯಾದ ಪುನರ್ವಸತಿ ಕಲ್ಪಿಸಿಲ್ಲವೆಂಬ ಆರೋಪವನ್ನ ಸರಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಯಾವುದೇ ಪ್ರಗತಿಯ ಕಾರ್ಯಕ್ರಮದಲ್ಲಿ ಹೆಚ್ಚಿನ ಮಂದಿಯ ಲಾಭಕ್ಕಾಗಿ ಕೆಲವರು ನಷ್ಟಹೋಗುತ್ತಾರೆ. ಮೇಧಾ ಈ ಮಂದಿಯ ನಷ್ಟವನ್ನಲ್ಲದೇ, ಆಗಬಹುದಾದ ಲಾಭದ ಲೆಕ್ಕಾಚಾರವನ್ನೂ ಪ್ರಶ್ನಿಸುತ್ತಿದ್ದಾರೆ. ಕೋರ್ಟು ಲಾಭದ ಬಗ್ಗೆ ತೀರ್ಪನ್ನ ಕೊಟ್ಟುಬಿಟ್ಟಿದಯಾದ್ದರಿಂದ - ನಮಗೆ ಇಷ್ಟವಿಲ್ಲದಿದ್ದರೂ ಅದನ್ನ ಒಪ್ಪಲೇ ಬೇಕಾಗಿದೆ. ಈಗ ಮೇಧಾರ ಕೆಲಸ ಆದಿವಾಸಿಗಳ ನಷ್ಟವನ್ನ ಕಡಿಮೆ ಮಾಡುವುದು ಹೇಗೆಂದು ಆಲೋಚಿಸುವುದಾಗಬೇಕಾಗಿದೆ. ಜೊತೆಗೆ ಆಂದೋಳನಕ್ಕಾಗಿರುವ ಧಕ್ಕೆಯಿಂದಲೂ ಚೇತರಿಸಿಕೊಂಡು ಮುಂದುವರೆಯಬೇಕಾಗಿದೆ. ಆದರೆ ಕುತೂಹಲದ ವಿಷಯವೆಂದರೆ - ತೀರ್ಪು ಮೇಧಾರ ಪರವಾಗಿದ್ದಿದ್ದರೆ ಮೇಧಾ ಮುಂದಿನ ಹತ್ತು ವರ್ಷಗಳಲ್ಲಿ ಏನು ಮಾಡುತ್ತಿದ್ದರು ಎಂಬುದು.

ಉಚ್ಚನ್ಯಾಯಾಲಯ ಈ ಕುತೂಹಲವನ್ನ ನೀಗಿಸುವಂತಹ ತೀರ್ಪನ್ನ ಕೊಟ್ಟಿಲ್ಲವಂದಷ್ಟೇ ಹೇಳಬೇಕು. ಹೀಗಾಗಿ ಮೇಧಾ ತಮ್ಮ ಕೆಲಸವನ್ನ (ಬಹುಶಃ ಸಂವಿಧಾನದ ಚೌಕಟ್ಟಿನೊಳಗೆ - ಅಥವಾ ಹಾಗೆಂದು ಆಶಿಸೋಣ) ಯಾವ ಚಿಂತೆಯೂ ಇಲ್ಲದೇ ಮುಂದುವರೆಸಬಹುದು.


Sunday, March 15, 2009

ಕುರಿಯನ್: ಒಂದು ಖಾಸಗೀ ಪ್ರಬಂಧ[ವಿಜಯಕರ್ನಾಟಕದ ಕೋರಿಕೆಯ ಮೇರೆಗೆ ನಾನು ಈ ಲೇಖನವನ್ನ ಬರೆದೆ. ಆದರೆ, ಎಲ್ಲ ಪತ್ರಿಕೆಗಳಿಗೂ ಇರುವ ಸ್ಥಳ ಪರಿಮಿತಿಗನುಸಾರವಾಗಿ, ಈ ಪ್ರಬಂಧದ ಆಯ್ದ ಭಾಗಗಳನ್ನು ಮಾತ್ರ ಅವರು ೨೧ ಮೇ ೨೦೦೬ರ ಭಾನುವಾರದ ಸಂಚಿಕೆಯಲ್ಲಿ ಪ್ರಕಟಿಸಿದ್ದಾರೆ. ಈ ಲೇಖನವನ್ನು ನಾನು ಕನ್ನಡದಲ್ಲಿ ಬರೆಯಲು ಸ್ವಲ್ಪ ತಿಣುಕಿದೆ - ಕುರಿಯನ್ ಭಾಷಣಗಳನ್ನು ಮಾತುಗಳನ್ನು ಇಂಗ್ಲೀಷಿನಲ್ಲಿ ಕೇಳಿದ್ದ ನನಗೆ ಆತನ ಬಗ್ಗೆ ನನಗೆ ಕನ್ನಡದಲ್ಲಿ ಯಾವಮಾತನ್ನೂ ಬರೆಯುವುದು ಯಾಕೋ ಕಷ್ಟವಾಯಿತು. ಹೀಗಾಗಿ ನಾನು ಈ ಲೇಖನವನ್ನು ಮೊದಲಿಗೆ ಇಂಗ್ಲೀಷಿನಲ್ಲಿ ಬರೆದು ನಂತರ ಕನ್ನಡಕ್ಕೆ ತರ್ಜುಮೆ ಮಾಡಿದೆ. ಈ ಬಿಕ್ಕಟ್ಟನ್ನು ನಾನು ಎದುರಿಸಿದ್ದು ಇದೇ ಮೊದಲು. ಒಂದು ವಿಧದಲ್ಲಿ ಇದೂ ಒಳ್ಳೆಯದೇ ಆಯಿತು. ಕನ್ನಡ ಬರದ ನನ್ನ ಇರ್ಮಾದ ಗೆಳೆಯರೊಂದಿಗೆ ಈ ಲೇಖನವನ್ನು ಹಂಚಿಕೊಳ್ಳಲು ಸಾಧ್ಯವಾಯಿತು] 

ಕಾಲೇಜು ತಪ್ಪಿಸಿ ಮೈಸೂರಿನ ಒಲಿಂಪಿಯಾ ಟಾಕೀಸಿನಲ್ಲಿ 'ಮಂಥನ್' ಚಿತ್ರ ನೋಡಿದಾಗ ನಾನು ಪಿ.ಯು.ಸಿ.ಯಲ್ಲಿದ್ದೆ. ಆಗ್ಗೆ ನನಗೆ ಇದು ನಾನು ನೊಡುತ್ತಿದ್ದ ಚಿತ್ರಗಳಲ್ಲಿ ಮತ್ತೊಂದಾಗಿತ್ತು - ಶ್ಯಾಂ ಬೆನೆಗಲ್ ನಿರ್ದೇಶಿಸಿದ ಒಪ್ಪ ಕಥೆಯ ಒಳ್ಳೆಯ ಸಿನೇಮಾ. ಆಗ್ಗೆ ನಾನು ಶ್ಯಾಂ ಬೆನೆಗಲ್‍ರ ಚಿತ್ರಗಳನ್ನು ಮೆಚ್ಚಲು ಆರಂಭಿಸಿದ್ದೆ. ನಿಶಾಂತ್, ಅಂಕುರ್ ಥರದ ಚಿತ್ರಗಳನ್ನು ಮಾಡಿದ್ದ ಶ್ಯಾಂ ಮಾರುಕಟ್ಟೆಯಲ್ಲಿ ಯಶಸ್ವಿಯಾಗುವಂಥಹ ಚಿತ್ರ ಮಾಡಿದ್ದು ನನಗೆ ತುಸು ಆಶ್ಚರ್ಯವನ್ನೇ ಉಂಟುಮಾಡಿತ್ತು. ಈ ಚಿತ್ರ ನನ್ನ ಜೀವನದಲ್ಲಿ ದೊಡ್ಡ ಪ್ರಭಾವವಾಗಬಹುದು, ನನ್ನ ವೃತ್ತಿ ಜೀವನವನ್ನು ರೂಪಿಸಬಹುದೆಂದು ಆಗ ನಾನು ಊಹಿಸಿರಲಿಲ್ಲ.

ಮೂರ್ನಾಲ್ಕು ವರ್ಷಗಳನಂತರ [ಬಹುಶಃ ೩೧ ಜನವರೆ ೧೯೮೨ ರಂದು] ನನಗೆ ಒಂದು ಕಷ್ಟದ ಆಯ್ಕೆ ಎದುರಾಯಿತು. ಅಂದು ನಾನು ಇನ್ಸ್‌ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‍ಮೆಂಟಿನ [ಇರ್ಮಾ] ಪ್ರವೇಶ ಪರೀಕ್ಷೆ ಮತ್ತು ಕಾಲೇಜಿನಿಂದ ನಾವು ಹೋಗಬೇಕಾದ ಪ್ರವಾಸದ ನಡುವೆ ಆಯ್ಕೆ ಮಾಡಬೇಕಾಗಿತ್ತು. ಡಿಗ್ರಿಯ ಅಂತಿಮ ವರ್ಷದಲ್ಲಿದ್ದದ್ದರಿಂದ ನಾವುಗಳು [ಸಂತೋಷವಾಗಿ] ಜೊತೆಯಾಗಿರುವ ಕಡೆಯ ದಿನ ಅದೇ ಆಗುವುದಿತ್ತು. ಆಗಷ್ಟೇ ಬರವಣಿಗಯನ್ನು ಪ್ರಾರಂಭಿಸಿದ್ದ ನಾನು ಆ ಸಂಸ್ಥೆಯ ಹೆಸರನಿಲ್ಲಿದ್ದ ರೂರಲ್ ಎಂಬ ಪದಕ್ಕೆ ಮಾರುಹೋದೆನೆನ್ನಿಸುತ್ತದೆ. ಹಳ್ಳಿಗಳ ಕಡೆ ಓಡಾಡಿದರೆ ಕಥೆಗಾರನಿಗೆ ಬೇಕಾದ ಅನುಭವಗಳು ಸಿಕ್ಕು ನನ್ನ ಬರವಣಿಗೆ ಶ್ರೀಮಂತವಾಗುವುದು ಎಂಬ ಭಾವನೆ ನನ್ನಲ್ಲಿತ್ತು. ಆಗ ಮ್ಯಾನೇಜ್‍ಮೆಂಟ್ ಓದಿಗೆ ಈಗಿನಷ್ಟು ಪ್ರಾಮುಖ್ಯತೆಯಿರಲಿಲ್ಲ ಆದರೂ ಆಕರ್ಷಕವಾಗಿತ್ತು. ಹೀಗಾಗಿ ವೃತ್ತಿಯ ದೃಷ್ಟಿಯಿಂದ ರೂರಲ್ ಅಷ್ಟು ಆಕರ್ಷಕವಲ್ಲದಿದ್ದರೂ ಮ್ಯಾನೇಜ್‍ಮೆಂಟ್ ಎಂಬ ಕವಚ ಇತ್ತು. ಇರ್ಮಾದ ಜಾಹೀರಾತಿನ ಪ್ರಕಾರ ಕೋರ್ಸ್ ಮುಗಿದ ನಂತರ ತಿಂಗಳಿಗೆ ೧೨೦೦ ರೂಪಾಯಿಯ ಸಂಬಳದ ಕೆಲಸದ ಭರವಸೆ ಮತ್ತು ಓದುವಾಗ ತಿಂಗಳಿಗೆ ೬೦೦ ರೂಪಾಯಿಯ ಭತ್ತೆ ಕೊಡುವ ಮಾತಿತ್ತು. ನಾನು ಇರ್ಮಾ ಸೇರುವ ಬಗ್ಗೆ ಗಂಭೀರವಾಗಿ ಯೋಚಿಸಲು ಇಷ್ಟು ಸಾಕಾಗಿತ್ತು.

ಇರ್ಮಾ ಸೇರುವ ಪ್ರಕ್ರಿಯೆ ನಡೆಯುತ್ತಿರುವಾಗಲೇ ಪ್ರಧಾನ ಮಂತ್ರಿ ಶ್ರೀಮತಿ ಗಾಂಧಿ ಅಲ್ಲಿನ ಪ್ರಥಮ ಘಟಿಕೋತ್ಸವನ್ನ ಉದ್ದೇಶಿಸಿ ಮಾತನಾಡಿದ್ದನ್ನು ದೂರದರ್ಶನದಲ್ಲಿ ನೋಡಿದ್ದೆ. ಘಟಿಕೋತ್ಸವಕ್ಕೆ ಆನಂದ್‍ನಲ್ಲಿ ನಡೆಯುತ್ತಿದ್ದ ಯಾವುದೇ ಕಾರ್ಯಕ್ರಮದ ಶೈಲಿಯಲ್ಲಿ ಸಾವಿರಾರು ರೈತರು ಬಂದಿದ್ದದ್ದನ್ನು ವರದಿ ಮಾಡಲಾಗಿತ್ತು. ಇದೆಲ್ಲದರ ಅರ್ಥ ಇರ್ಮಾ ಇಂದು ತೆರೆದು ನಾಳೆ ಮುಚ್ಚುವಂತಹ ಜಾಗವಲ್ಲವೆಂದಾಗಿತ್ತು. ನನ್ನ ಆನಂದದ ಪ್ರಯಾಣ ಈ ಹಿನ್ನೆಲೆಯಲ್ಲಿ ನಾನು ಕೈಗೊಂಡಿದ್ದೆ.

ಆನಂದ್ ಸೇರಿದಾಗ ಮತ್ತೆ ಮಂಥನ್ ನೋಡುವ ಅವಕಾಶ ದೊರೆಯಿತು. ಹಾಗೂ ಆ ಚಿತ್ರ ನನಗೆ ಹೊಸ ಅರ್ಥಗಳನ್ನು ಒದಗಿಸಿತು. ನಾವು ಎನ್‍ಡಿಡಿಬಿ ಕ್ಯಾಂಪಸ್ಸಿನ 'ರೈತರ ಹಾಸ್ಟೆಲ್ನಲ್ಲಿ' ವಾಸ್ತವ್ಯ ಹೂಡಬೇಕೆಂದು ಕೇಳಿದಾಗ ಅಲ್ಲಿನ ವಸತಿ ಸಾಮಾನ್ಯದ್ದಿರಬಹುದೆಂದು ನಿರೀಕ್ಷಿಸಿದ್ದೆವು. ಆದರೆ ಆ ವಸತಿಗಳಲ್ಲಿ ಎಲ್ಲ ಆಧುನಿಕ ಸವಲತ್ತುಗಳಿದ್ದದ್ದು ಕಂಡು ಸಂತೋಷವಾಗಿತ್ತು. ಅಷ್ಟೇ ಅಲ್ಲ ಆಗ ಇರ್ಮಾದ ಅಧ್ಯಕ್ಷರಾದ ಕುರಿಯನ್ ಹೇಳಿದ್ದು ಈ ಮಾತುಗಳು: "ಮಹಾರಾಜರು ಲಾಯಗಳಲ್ಲಿ ಬದುಕುವುದಿಲ್ಲ. ನೀವುಗಳೆಲ್ಲ ನನ್ನ ಯುವರಾಜರು. ನನ್ನಂತಹ ಸಾವಿರಾರು ಕುರಿಯನ್‍ಗಳನ್ನು ಜಗತ್ತಿಗೆ ದೇಣಿಗೆಯಾಗಿ ನೀಡಲೆಂದೇ ನಾನು ಈ ಜಾಗ ಕಟ್ಟಿಸಿದ್ದೇನೆ. ನಿಮ್ಮಿಂದ ಆಗಬಹುದಾದ ಬದಲಾವಣೆಗಳನ್ನು ಊಹಿಸಿ ನೋಡಿ.....

ಕುರಿಯನ್ ಮಾತು ಮಾತ್ರವಲ್ಲ, ನಮ್ಮ ಮೇಷ್ಟರುಗಳ, ಎನ್‍ಡಿಡಿಬಿಯ ಅಧಿಕಾರಿಗಳ ವರ್ತನೆಯೂ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿತ್ತು. ಆ ಎರಡು ವರ್ಷಗಳಲ್ಲಿ ಕುರಿಯನ್ ನಮಗೆ ನೀಡಿದ ಕನಸನ್ನು ತಮ್ಮದೇ ರೀತಿಯಲ್ಲಿ ನನಸಾಗಿಸಲು ಪ್ರಯತ್ನಿಸಿದ [ಕಡೆಗೆ ಉಲ್ಫಾದವರ ಹಿಂಸೆಗೆ ಬಲಿಯಾದ] ಸಂಜಯ್ ಘೋಷ್, ಈ-ಚೌಪಾಲ್ ಬಗ್ಗೆ ಆಲೋಚಿಸಿದ ಶಿವಕುಮಾರ್ ಜೊತೆಯ ಒಡನಾಟದ ಅವಕಾಶಗಳನ್ನು ಆ ಜಾಗ ನನಗೆ ನೀಡಿತ್ತು. ಆ ದಿನಗಳಲ್ಲಿ ಸೋವಿಯತ್ ರಾಷ್ಟ್ರ ಇನ್ನೂ ಜೀವಂತವಾಗಿತ್ತು, ಎಡಪಂಥೀಯರಾಗಿರುವುದು, ಸಿಗರೇಟ್ ಸೇದುವುದು, ಜೋಳಿಗೆ ನೇತಾಡಿಸಿಕೊಂಡು ಓಡಾಡುವುದು ಸಹಜವೂ, ವೈಶಿಷ್ಟ್ಯಪೂರ್ಣವೂ ಆಗಿತ್ತು. ಜೋಳಿಗೆಯ ಮೇನೇಜ್‍ಮೆಂಟ್ ಆವೃತ್ತಿ ಅಂದರೆ ಜವಾಜಾದ ತೊಗಲಿನ ಜೋಳಿಗೆ.. ಅದರಲ್ಲಿ ಮ್ಯಾನೇಜ್‍ಮೆಂಟ್ ಓದಿನ, ಸಾಮಾಜಿಕ ಕಳಕಳಿಯ ಒಂದು ಅದ್ಭುತ ಮಿಶ್ರಣವನ್ನು ನಾವು ಕಾಣಬಹುದಿತ್ತು.

ನಮಗೆಲ್ಲಾ ಕುರಿಯನ್ ಅನಂತ ಸಾಧ್ಯತೆಗಳ ಪ್ರತೀಕವಾಗಿದ್ದರು. ಅತಿ ಕಷ್ಟಕರವಾದ ಪರಿಸ್ಥಿತಿಗಳಲ್ಲಿ ಆನಂದದಲ್ಲಿ ಉಳಿದು ಅಲ್ಲಿನ ಸಂಸ್ಥೆಯನ್ನು ಬೆಳೆಸಿದ, ಅವಶ್ಯಕತೆಯನ್ನು ಒಂದು ಅವಕಾಶದಂತೆ ಗ್ರಹಿಸಿ ಅದರಲ್ಲಿ ಉತ್ತೀರ್ಣರಾದ ವ್ಯಕ್ತಿಯಾಗಿ ನಮಗೆ ಕಂಡಿದ್ದರು. ಅವರ ನಡಾವಳಿಯಲ್ಲಿ ಅತಿರೇಕವಿತ್ತು, ಆತ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದರು ಮತ್ತು ಆತನ ಮಾತಿನ ತೀಕ್ಷ್ಣತೆಯನ್ನು ಕಂಡು ನಾವು ನಡುಗುತ್ತಿದ್ದೆವು. ಉಚ್ಚ ಜಾತಿಯಲ್ಲಿ ಹುಟ್ಟಿದ ಬ್ರಾಹ್ಮಣ ಹಾಲಿನ ಸರಬರಾಜಿಗೆ ದಲಿತ-ಹರಿಜನನ ಹಿಂದೆ ಕ್ಯೂನಲ್ಲಿ ನಿಂತರೆ ಅದರ ಪ್ರತೀಕವೇನು? ಎಂದು ಗುಡುಗಿ "ಇದು ಜಾತಿವ್ಯವಸ್ಥೆಯ ಕೆನ್ನೆಗೆ ತೀಡಿದಂತಲ್ಲವೇ?" ಎಂದು ಕೇಳಿದಾಗ ನಮ್ಮ ಕಣ್ಣುಗಳಲ್ಲಿ ನೀರು ಬಂದಿತ್ತು.

ಈ ಕೆಳಗಿನ ಘಟನೆಯ ಬಗ್ಗೆ ನಾನು ಕೇಳಿದ್ದೆ. ಕೇರಳದ ಅರ್ಥಶಾಸ್ತ್ರದ ಪ್ರೊಫೆಸರ್ ಒಬ್ಬರು [ಹೆಸರು ಸಿ.ಟಿ. ಕುರಿಯನ್] ತಮ್ಮನ್ನು ಡಾ. ಕುರಿಯನ್‍ಗೆ ಪರಿಚಯ ಮಾಡಿಕೊಂಡರಂತೆ: “ಹಲೋ ನಾನು ಸಿ.ಟಿ.ಕುರಿಯನ್" ಅದಕ್ಕೆ ಈತನ ಉತ್ತರ "ನಾನು ವಿ.ಕುರಿಯನ್.. ವಿಲೇಜ್ ಕುರಿಯನ್" ಅಂತ ಸಿಟಿಯ ಮೇಲೆ ಶ್ಲೇಶೆ ಒಗೆದರಂತೆ.

ಇರ್ಮಾದಲ್ಲಿ ವಿದ್ಯಾಭ್ಯಾಸ ಮಾಡಿ, ನಂತರ ಗ್ರಾಮೀಣ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸ ಮಾಡಲು ನಿರ್ಧರಿಸಿದ ನನಗೆ ಕುರಿಯನ್ ಅವರ ಛತ್ರಛಾಯೆ ಎರಡು ವರ್ಷಗಳಿಗೆ ಸೀಮಿತವಾಗಲಿಲ್ಲ. ನಾವು ಅಲ್ಲಿ ಸೇರಿದಾಗ ಕುರಿಯನ್ ಹೇಳಿದ್ದು ನೆನಪಿದೆ: "ಇಲ್ಲಿಂದ ಪಾಸಾದವರಲ್ಲಿ ಕೇವಲ ೫% ವಿದ್ಯಾರ್ಥಿಗಳು ಗ್ರಾಮೀಣ ಕ್ಷೇತ್ರದಲ್ಲಿ ಕೆಲಸ ಮಾಡಲು ಮುಂದುವರೆದರೆ ಸಾಕು ನಾನು ಈ ಸಂಸ್ಥೆಯನ್ನು ಸ್ಥಾಪಿಸಿದ್ದರ ಉದ್ದೇಶ ಸಫಲಗೊಂಡಂತೆಯೇ." ನಾನು ಆ ೫% ವ್ಯಕ್ತಿಗಳಲ್ಲಿ ಒಬ್ಬ ಎಂದು ಅಂದೂ ಇಂದೂ ನಾನು ನಂಬಿದ್ದೇನೆ. ನಾನಷ್ಟೇ ಅಲ್ಲ, ನನ್ನ ಸಮಯದಲ್ಲಿ ಓದಿದ ೫೦%ದಷ್ಟು ಮಂದಿ ಇನ್ನೂ ಗ್ರಾಮೀಣ/ವಿಕಾಸ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆಂದು ತಿಳಿದು ಕುರಿಯನ್‍ಗೆ ಖುಷಿಯಾದೀತು. ೯೦ರ ದಶಕದಲ್ಲಿ ನಾನು ಮತ್ತೆ ಇರ್ಮಾಗೆ ಹೋಗಿ ಮುಂದಿನ ಪೀಳಿಗೆಯ ಹುಡುಗರಿಗೆ ಆರು ವರ್ಷಗಳ ಕಾಲ ಪಾಠ ಮಾಡುತ್ತಾ ನನ್ನ ಇರ್ಮಾದ ಜೊತೆಗಿನ ಸಂಬಂಧವನ್ನು ತಾಜಾ ಆಗಿ ಇಟ್ಟುಕೊಂಡಿದ್ದೆ.

ಹೀಗಾಗಿ ಇತ್ತೀಚೆಗೆ ಪ್ರಕಟಗೊಂಡ ಕುರಿಯನ್ ಆತ್ಮಕಥನ ಓದಿದ್ದರಿಂದ ನನಗೆ ನನ್ನ ನೆನಪುಗಳನ್ನು ಮರುಜೀವಿಸುವ ಅವಕಾಶವಾಯಿತು. ಆತನ ಜೀವನದ ಅನೇಕ ಘಟನೆಗಳೂ, ವ್ಯಕ್ತಿತ್ವದಲ್ಲಿನ ವಿರೋಧಾಭಾಸಗಳೂ ನನಗೆ ಕಂಡವು. ಕುರಿಯನ್ ತಮ್ಮ ಜೀವನದಲ್ಲಿ ಎಷ್ಟು ನೇರವಾಗಿ ಮಾತಾಡುತ್ತಿದ್ದರೋ ಅಷ್ಟೇ ನೇರವಾಗಿ ಈ ಪುಸ್ತಕವನ್ನು ಬರೆದಿದ್ದಾರೆನ್ನಿಸಿತು. ಬಹಳ ಮಟ್ಟಿಗೆ ಈ ಪುಸ್ತಕ ಅವರ ವೃತ್ತಿಜೀವನಕ್ಕೆ ಸಂಬಂಧಿಸಿದ್ದು. ಅವರ ಖಾಸಗೀ ಜೀವನದ ವಿವರಗಳು ಇದರಲ್ಲಿ ವಿರಳ. ಬಹುಶಃ ಅವರ ಉದ್ದೇಶವೂ ಅದೇ ಆಗಿತ್ತೇನೋ. ಒಂದು ಅತ್ಮೀಯ ಟಿಪ್ಪಣಿಯೊಂದಿಗೆ ಈ ಪುಸ್ತಕವನ್ನು ಆತ ತಮ್ಮ ಮೊಮ್ಮಗನಿಗೆ ಅರ್ಪಿಸಿದ್ದಾರೆ. ಆದರೆ ಆ ಟಿಪ್ಪಣಿಯಲ್ಲೂ ಕುರಿಯನ್ ತಮ್ಮ ದೃಷ್ಟಿಯನ್ನು ತಮ್ಮ ಮೇಲೆಯೇ ಕೇಂದ್ರೀಕರಿಸುವುದನ್ನು ಮರೆಯುವುದಿಲ್ಲ. ಕುರಿಯನ್ ಅಂದರೆ ಅದೇಯೇ -- ಯಾವಾಗಲೂ ಸಹಜಕ್ಕಿಂತ ದೊಡ್ಡದಾಗಿ, ತಮಗಿಷ್ಟಬಂದಂತೆ ತಮ್ಮ ಶರತ್ತಿನ ಮೇಲೆ ಜೀವನವನ್ನು ಕಂಡ, ಜೀವಿಸಿದ ವ್ಯಕ್ತಿ. ಪುಸ್ತಕ ಪ್ರಾರಂಭವಾಗುವುದೇ ಪತ್ರಕರ್ತರೊಬ್ಬರು ಕೇಳುವ ಕುರಿಯನ್ ಅವರೇ ನಿಮ್ಮ ಮುಂದಿನ ಯೋಜನೆಯೇನು ಎಂಬ ಪ್ರಶ್ನೆಯಿಂದ. ಅದಕ್ಕೆ ಕುರಿಯನ್ ಕೊಡುವ ಉತ್ತರ: ನನ್ನ ವಯಸ್ಸಿನವರಿಗೆ ಹೆಚ್ಚು ಭವಿಷ್ಯವಿಲ್ಲ. ಬರೀ ಚರಿತ್ರೆ ಮಾತ್ರ. ಹೀಗೆ ಹೇಳಿದ ವ್ಯಕ್ತಿ ಅದನ್ನು ನಿಜಕ್ಕೂ ನಂಬಿ ಹೇಳಿದರೇ, ಅಥವಾ ಪತ್ರಕರ್ತರಿಗೆ ಇಷ್ಟವಾಗುವ ತಲೆಬರಹವಾಗುವಂತಹ ಅರ್ಥವಿಲ್ಲದ ಒಣ ಮಾತು ಮಾತ್ರ ಅದಾಗಿತ್ತೇ?

ನಮ್ಮ ದೇಶಕ್ಕೆ ಆ ಕಾಲಕ್ಕೆ ಕುರಿಯನ್ ಅವರ ಅವಶ್ಯಕತೆಯಿತ್ತು. ಹಾಗೂ ಆತ ತಮ್ಮ ಪಾತ್ರವನ್ನು ಸೂಕ್ತವಾಗಿಯೇ ನಿಭಾಯಿಸಿದರು. ಆತನ ಜೀವನ ಚದುರಂಗದಲ್ಲಿ ನಿರಂತರವಾಗಿ ನಡೆಸಿದ ಒಂದೊಂದು ಚಲನೆಯೂ ದೇಶದ ಹಾಲು ಉತ್ಪಾದಕರ ಹಿತವನ್ನಿಟ್ಟುಕೊಂಡೇ ನಡೆಸಿದ್ದಾಗಿತ್ತು. ಈ ಚದುರಂಗದ ಚಲನಗಳು ಮಾರುಕಟ್ಟೆಯಲ್ಲಿ ಇತರ ಖಾಸಗೀ ಉತ್ಪಾದಕರೊಂದಿಗೆ ಪೈಪೋಟಿ ನಡೆಸಲು ಆತ ಮಾಡಿರಬಹುದು, ಇಲ್ಲವೇ ಅವರು ಹೆಚ್ಚು ಪ್ರಾಮುಖ್ಯತೆ ಗಳಿಸದಂತೆ ತಮಗೆ ಮಾತ್ರ ಲಭ್ಯವಿದ್ದ ಸರಕಾರದ ಬಲದಿಂದ ಅವರಿಗೆ ಅಡಚಣೆಗಳನ್ನು ಉಂಟುಮಾಡುವುದರಲ್ಲಿ ಆ ಚಲನೆಗಳನ್ನು ಬಳಸಿರಬಹುದು. ಆತ ಜೀವನದುದ್ದಕ್ಕೂ ಸರಕಾರವನ್ನು ವಿಮರ್ಶಿಸುತ್ತಾ, ಸರಕಾರಿ ನೌಕರರನ್ನು ಗೇಲಿ ಮಾಡುತ್ತಾ, ಸ್ವಾಯತ್ತತೆಯ ಸೋಗು ಹಾಕುತ್ತಾ ಸರಕಾರದೊಂದಿಗೆ ಇಲಿಬೆಕ್ಕಿನಾಟ ಆಡಿದರು. ಅದೇ ಸಮಯಕ್ಕೆ ಸರಕಾರದ ಸವಲತ್ತುಗಳನ್ನು ಉಪಯೋಗಿಸಿ ಪೈಪೋಟಿಯನ್ನು ನಪುಂಸಕರನ್ನಾಗಿಸಲು ಪ್ರಯತ್ನವನ್ನೂ ಮಾಡಿದ್ದರು. ಇಡೀ ದೇಶ ಲೈಸೆನ್ಸ್-ಪರ್ಮಿಟ್ ಗಳಿಂದ ಮುಕ್ತಿಪಡದ ಕಾಲದಲ್ಲೂ ಸಕ್ಕರೆ ಮತ್ತು ಹಾಲು [ಮಿಲ್ಕ್ ಅಂಡ್ ಮಿಲ್ಕ್ ಪ್ರಾಡಕ್ಟ್ಸ್ ಆರ್ಡರ್ ಮೂಲಕ] ಉತ್ಪನ್ನದ ವ್ಯವಸ್ಥೆಯ ಎರಡು ಲಾಬಿಗಳು ಸರಕಾರದ ರಕ್ಷಾಕವಚವನ್ನು ಧರಿಸಿನಿಂತಿದ್ದವು. ಈ ಎರಡೂ ಲಾಬಿಗಳು ಸಹಕಾರೀ ರಂಗಕ್ಕೆ ಸೇರಿದ್ದವೆಂಬುದರಲ್ಲಿ ಆಶ್ಚರ್ಯವಿಲ್ಲ.

ಕುರಿಯನ್ ಉದಾತ್ತ ಮನೋಭಾವದ ನಾಯಕರಾದ ವಲ್ಲಭಭಾಯಿ ಪಟೇಲ್, ಮೊರಾರ್ಜಿ ದೇಸಾಯಿ ಮತ್ತು ತ್ರಿಭುವನದಾಸ್ ಪಟೇಲರ ಛತ್ರಛಾಯೆಯಲ್ಲಿ ಕೆಲಸ ಮಾಡಲು ಆರಂಭಿಸಿದ್ದವರು. ಇವರುಗಳಲ್ಲಿ ಮೊದಲಿಬ್ಬರು ರಾಷ್ಟ್ರಮಟ್ಟದ ರಾಜಕೀಯದಲ್ಲಿ ಇದ್ದರಾದ್ದರಿಂದ ಅವರುಗಳ ದೃಷ್ಟಿ ಸಹಜವಾಗಿಯೇ ಗುಜರಾತಿಗಿಂತ ಹಿರಿದಾಗಿತ್ತು.
 ತ್ರಿಭುವನದಾಸ್ ಪಟೇಲರ ಮಹತ್ವ ತಮ್ಮ ಮೇಲೆ ನಂಬಿಕೆಯಿಟ್ಟ ರೈತರ ಹಿತ ಕಾಪಾಡುವುದಲ್ಲದೇ, ಅದನ್ನು ಸಮಂಜಸವಾಗಿ ನಿರ್ವಹಿಸಲು ತಮಗಿರುವ ಮಿತಿಯನ್ನೂ ಕುರಿಯನ್‍ರಲ್ಲಿರುವ ಗುಣವನ್ನು ಗುರುತಿಸುವುದರಲ್ಲಿತ್ತು. ಆತನ ಕೆಳಗೆ ಬೆಳೆದ ಕುರಿಯನ್ ಈ ಗುಣವನ್ನು ಮಿತವಾಗಿ ತಮ್ಮದಾಗಿಸಿಕೊಂಡಿದ್ದರು. ಉದಾಹರಣೆಗೆ ಹಾಲು-ಉತ್ಪನ್ನಗಳ ತಾಂತ್ರಿಕ ಅಂಶಕ್ಕೆ ಅನ್ವಯಿಸುವಂತೆ ಅವರು ತಮ್ಮ ಎಲ್ಲ ನಂಬುಗೆಯನ್ನು ಅವರ ಸಹಚರರಾದ ದಲಾಯಾರಲ್ಲಿ ಹೂಡಿದ್ದರು. ಆದರೆ ದಲಾಯಾರನ್ನು ಬಿಟ್ಟರೆ ತಮ್ಮೊಂದಿಗೆ ಕೆಲಸ ಮಾಡಿದ ಬೇರಾರ ಹೆಸರನ್ನೂ ಕುರಿಯನ್ ತಮ್ಮ ಪುಸ್ತಕದಲ್ಲಿ ಎತ್ತುವುದಿಲ್ಲ. ಒಂದು ಉದ್ದನೆಯ ಮ್ಯಾರಥಾನ್ ರೇಸನ್ನು ಒಂಟಿಯಾಗಿ ಓಡಿದ ಖಿಲಾಡಿಯಂತೆ ಕುರಿಯನ್ ಕಾಣುತ್ತಾರೆ. ರೇಸಿನಂತ್ಯದಲ್ಲಿ ಅಮೃತಾ ಪಟೇಲ್‍ಗೆ ಅವರು ಖೊ ಕೊಟ್ಟಂತೆ ಕಾಣುತ್ತದೆ. ಆದರೆ ಖೊ ಕೊಟ್ಟಕೂಡಲೇ ಕುರಿಯನ್ ಪಕ್ಕದಲ್ಲಿ ನಿಂತು ಆಕೆಯ ಓಟದಬಗ್ಗೆ ಕಾಮೆಂಟರಿ ಕೊಡುತ್ತಾ ನಿಂತುಬಿಡುತ್ತಾರೆ. ಸ್ವಲ್ಪ ಮಟ್ಟಿಗೆ ರೇಡಿಯೋದಲ್ಲಿ ಲಾಲಾ ಅಮರ್ನಾಥ್ ವಿಶೇಷ ಕಾಮೆಂಟರಿ ಕೊಟ್ಟು ಚರಿತ್ರೆಯಲ್ಲಿ ಶರಣು ಪಡೆದಂತೆ ಆತನೂ ಚರಿತ್ರೆಯ ಮೊರೆ ಹೋಗುತ್ತಾರೆ.

ತ್ರಿಭುವನದಾಸ್ ಪಟೇಲ್ ಅಮುಲ್‍ನ ಅಧ್ಯಕ್ಷರಾದದ್ದು ಹೇಗೆಂಬುದರ ಬಗ್ಗೆ ಒಂದು ಆಸಕ್ತಿಕರ ಘಟನೆ ಪುಸ್ತಕದಲ್ಲಿದೆ. ಹಾಲು ಉತ್ಪಾದಕರ ಒಂದು ಸಭೆಯಲ್ಲಿ ಮೊರಾರ್ಜಿಭಾಯಿ ಈ ಸಂಸ್ಥೆಯ ಅಧ್ಯಕ್ಷರಾಗಲು ಯಾರು ತಯಾರಿದ್ದೀರಿ ಅಂತ ಕೇಳಿದರಂತೆ. ಕೆಲ ಜನ ಕೈಯೆತ್ತಿದಾಗ್ಯೂ ತ್ರಿಭುವನದಾಸ್ ಮಾತ್ರ ಸುಮ್ಮನೆ ಮೂಲೆಯಲ್ಲಿ ಕೂತಿದ್ದರಂತೆ. ಮೊರರ್ಜಿಭಾಯಿ ಆತನನ್ನು ಕೇಳಿದಾಗ ತ್ರಿಭುವನದಾಸ್ ಇಲ್ಲ ನನಗೆ ಆಸಕ್ತಿಯಿಲ್ಲ ಅಂತ ಹೇಳಿದರಂತೆ. ತಕ್ಷಣ ಮೊರಾರ್ಜಿಭಾಯಿ ನೀನೇ ಅಧ್ಯಕ್ಷನಾಗು ಅಂತ ಫರ್ಮಾನು ಕೊಟ್ಟರಂತೆ. ಕುರಿಯನ್ ಇದನ್ನು ವಿವರಿಸುತ್ತಾ "ಅಧ್ಯಕ್ಷರಾಗಲೇಬೇಕೆಂದು ತಪನವಿದ್ದ ಮನುಷ್ಯನಿಗೆ ಯಾವುದೋ ಒಂದು ಪೂರ್ವನಿರ್ಧಾರಿತ ಆಸಕ್ತಿಯಿರಬಹುದು ಅನ್ನಿಸಿರಬಹುದು" ಎನ್ನುತ್ತಾರೆ. ಕುರಿಯನ್ ತಮ್ಮ ಜೀನನವನ್ನು ಈ ವಿರೋಧಾಭಾಸದೊಂದಿಗೇ ಜೀವಿಸಿದ್ದಾರೆ. ಒಂದು ಬದಿಯಲ್ಲಿ ರೈತರ ಜೀವನದ ವಿಧಿಯನ್ನು ಅವರುಗಳೇ ನಿರ್ಧರಿಸಿಕೊಳ್ಳಲು ಅನುವು ಮಾಡಿ ಪ್ರಜಾಸತ್ತಾತ್ಮಕ ಸಹಕಾರ ಸಂಘಗಳನ್ನು ಅವರಿಗೆ ಒದಗಿಸಿಕೊಡಬೇಕೆಂಬ ನಂಬುಗೆಯಾದರೆ, ಮತ್ತೊಂದೆಡೆ ಅವರನ್ನು ಇತರ ಸ್ವಹಿತಾಸಕ್ತಿಯಿದ್ದ ದುಷ್ಟರಿಂದ ರಕ್ಷಿಸಬೇಕೆಂಬ ತಹತಹ. ಗುಜರಾತ್ ಹಾಲು ಮಹಾಮಂಡಲದ ಅಧ್ಯಕ್ಷ ಸ್ಥಾನವನ್ನು ಕುರಿಯನ್ ಆಕ್ರಮಿಸಿದ್ದದ್ದು‌ಒಂದು ವಿಚಿತ್ರ ವಿರೋಧಾಭಾಸದ ಸಂತುಲನವಾಗಿತ್ತು. ಕಾರಣ ಆತನಿಗೆ ಹಾಲು ಉತ್ಪಾದಕರ ವಿಷಯದಲ್ಲಿ ಯಾವ ಸ್ವಾರ್ಥಪೂರ್ಣ ಆಸಕ್ತಿ ಇರಲಿಲ್ಲ, ಅದೇ ಸಮಯಕ್ಕೆ ಸಹಕಾರಿ ಸೂತ್ರಗಳ ಪ್ರಕಾರ ಪ್ರಜಾಸತ್ತಾತ್ಮಕವಾಗಿ ಆ ಸ್ಥಾನವನ್ನು ಒಬ್ಬ ಹಾಲು ಉತ್ಪಾದಕ ರೈತ ಆಕ್ರಮಿಸಬೇಕಿತ್ತು ಅನ್ನುವುದೂ ನಿಜ. ರೈತನಿಗೆ 'ಒಳ್ಳೆಯದು ಯಾವುದು' ಮತ್ತು 'ಆ ಬಾಧ್ಯತೆಯನ್ನು ನಿರ್ವಹಿಸಲು ಆತನ ತಯಾರಿ' ಯ ನಡುವಿನ ದ್ವಂದ್ವವೇ ಕುರಿಯನ್‍ರ ವತ್ತಿ ಜೀವನವನ್ನು ನಿರ್ದೇಶಿಸಿದೆ. ಇದು ಪ್ರತಿ ಸರಕಾರಿ ಅಧಿಕಾರಿಯೂ ಬಲಹೀನವರ್ಗದವರಿಗೆ ಹಕ್ಕುಗಳನ್ನು ಒದಗಿಸಲು ಬಯಸಿದಾಗ ಎದುರಿಸುವ ದ್ವಂದ್ವವೇ ಹೌದು. ಈ ನಿಟ್ಟಿನಲ್ಲಿ ಕುರಿಯನ್‍ರ ಪ್ರತಿಕ್ರಿಯೆ [ಅವರು ಸರಕಾರದಾಚೆ ಸರಕಾರದಿಂದ ದೂರ ಎನ್ನುತ್ತಾ ಇದ್ದರೂ] ಇತರ ಒಳ್ಳೆಯ ಸರಕಾರಿ ಅಧಿಕಾರಿಯ ಪ್ರತಿಕ್ರಿಯಗಿಂತ ಭಿನ್ನವಾಗಿರಲಿಲ್ಲ ಎಂಬುದು ಮುಖ್ಯ.

ಕುರಿಯನ್ ಜೀವನ ಸುಖಸಮೃದ್ಧಿಗಳನ್ನು ಎಂದೂ ಕೈ ಬಿಟ್ಟವರಲ್ಲ. ಅದಕ್ಕೆ ಅವರು ಅರ್ಹರಾಗಿದ್ದರು ಅನ್ನುವುದರಲ್ಲೂ ಅನುಮಾನವಿಲ್ಲ. ನಾವು ಅಲ್ಲಿ ವಿದ್ಯಾರ್ಥಿಗಳಾಗಿದ್ದಗ ಆಗಾಗ ಹೋಗಿ ಆತನ ಕಾರಿನ ದರ್ಶನ ಮಾಡಿಕೊಂಡು ಬರುತ್ತಿದ್ದೆವು. ಆಗಿನ ದಿನಗಳಲ್ಲಿ ಆತನ ಬಳಿ ಪೂಜೋ ಕಾರಿತ್ತು. [ಕನ್ನಡದ ಸಂದರ್ಭದಲ್ಲಿ ಇಂಥದೇ ಕಾರನ್ನ ಇಟ್ಟಿದ್ದವರು ಕವಿ ರಾಮಚಂದ್ರ ಶರ್ಮ. ಪೂಜೋ ಅನ್ನುವುದನ್ನ ಹೇಗೆ ಉಚ್ಚಾರ ಮಾಡಬೇಕೆನ್ನವುದನ್ನ ಅವರು ತುಟಿ ಮುಂದೆ ಮಾಡಿ ಗ್ರಾಫಿಕ್‍ ಆಗಿ ವಿವರಿಸುತ್ತಿದ್ದರು.] ಅದರ ಹೆಡ್‍ಲೈಟಿಗೂ ವೈಪರ್ ಇತ್ತು ಅನ್ನುವುದನ್ನ ನಾವು ಬೆರೆಗುಗಣ್ಣುಗಳಿಂದ ನೋಡುತ್ತಿದ್ದೆವು.

ಕುರಿಯನ್‍ ಪುಸ್ತಕದಲ್ಲಿ ವಿವರಿಸಿರುವ ಮೂರು ಘಟನಗಳು ಅವರ ಜೀವನ ಶೈಲಿಗೆ ಕನ್ನಡಿಹಿಡಿದಂತಿದೆ. ಮೊದಲಿಗೆ ಆತ ಆನಂದದಲ್ಲಿ ತಮ್ಮ ಆರಂಭದ ದಿನಗಳ ಬಗ್ಗೆ ಮಾತಾಡುತ್ತಾರೆ [ಪುಟ.೨೧] ಅಲ್ಲಿ ಆತನಿದ್ದ ಒಂದು ಪುಟ್ಟ ಗ್ಯಾರೇಜಿನಲ್ಲಿ ಅವರ ಅಡುಗೆಯವ ಮತ್ತೆ ಬಟ್ಲರ್ ಆದ ಆಂಥೊನಿ ಮಲಿನವಾಗದ ಬಿಳಿ ಬಟ್ಟೆ ತೊಟ್ಟು ದಿನವೂ ಊಟವನ್ನು ಉಣಬಡಿಸುತ್ತಾನೆ. ಗ್ಯಾರೇಜಿನಲ್ಲಿ ಕಾಣಬಹುದಾದ ದೃಶ್ಯ ಇದಂತೂ ಅಲ್ಲವೇ ಅಲ್ಲ. ಆದರೆ ಕುರಿಯನ್ ಇರುವುದೇ ಹಾಗೆ. ಎರಡನೆಯದು ಅದೇ ಪುಟದಲ್ಲಿ "ಆಗಿನ ದಿನಗಳಲ್ಲಿ ನಾನು [ಇದೆಲ್ಲದರಿಂದ ದೂರವಾಗಿ] ಆಗಾಗ ಮುಂಬೈಗೆ ಹೋಗಿ ತಾಜ್ ಹೋಟೇಲಿನಲ್ಲಿ ನಾಲ್ಕಾರು ದಿನ ಆರಾಮವಾಗಿದ್ದು ಬರುತ್ತಿದ್ದೆ" ಅನ್ನುತ್ತಾರೆ. ಮೂರನೆಯ ಘಟನೆಯೆಂದರೆ ಆತ ಎನ್‍ಡಿಡಿಬಿಯ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಾಗ ಅಮೃತಾ ಪಟೇಲ್ ಅಧ್ಯಕ್ಷರ ಕಾರನ್ನು ಗೌರವದ ದ್ಯೋತಕವಾಗಿ ಸ್ವೀಕರಿಸಬೇಕೆಂದು ಹೇಳುವುದು. ಇದಕ್ಕೆ ಕಾರಣ ಒಂದು ಸಣ್ಣ ಘಟನೆ - ಕುರಿಯನ್ ಬೇರೂಂದು ಕಾರಿನಲ್ಲಿ ಆಫೀಸಗೆ ಹೋದಾಗ ಸೆಕ್ಯೂರಿಟಿಯವರು ತಮ್ಮನ್ನು ಹೇಗೆ ಗುರುತಿಸಲಿಲ್ಲ ಎಂಬುದನ್ನು ಮೆಲುಕು ಹಾಕುತ್ತಾರೆ.

ಇದಲ್ಲದೇ ನನಗೆ ಮತ್ತೊಂದು ಘಟನೆಯೂ ನೆನಪಾಗುತ್ತದೆ. ಒಮ್ಮೆ ಕುರಿಯನ್ ನಮ್ಮನ್ನು ಉದ್ದೇಶಿಸಿ ಮಾತಾಡಲು ಇರ್ಮಾಕ್ಕೆ ಬಂದರು. ಅವರು ಬರುವುದಕ್ಕೆ ಮುಂಚೆ ಆ ಕೋಣೆಯನ್ನು ಮಲ್ಲಿಗೆಯ ಸುವಾಸನೆಯ ಪನ್ನೀರಿನಿಂದ ಸಿಂಪಡಿಸಲಾಯಿತು. ಆತ ಒಳಬಂದಕೂಡಲೇ ಮೂಗಿನ ಹೊಳ್ಳೆಗಳನ್ನು ಅಗಲ ಮಾಡಿ ಸುತ್ತಲೂ ನೋಡಿ ಈ ಜಾಗ ಸೂಳೆಯರ ಕೋಠಿಯಂತಿದೆ" ಅಂತಂದು ಅದರ ಪರಿಣಾಮ ಏನಿರಬಹುದೆಂದು ಒಮ್ಮೆ ಇಡೀ ಕೋಣೆಯನ್ನು ಅವಲೋಕಿಸಿ ನಂತರ "ಕೋಠಿಗಳ ವಾಸನೆಯ ಬಗ್ಗೆ ನಿಮಗೇನು ಗೊತ್ತು ಬಡಪಾಯಿ ಮೇಷ್ಟರುಗಳು, ನನ್ನನ್ನು ಕೇಳಿ ಹೇಳುತ್ತೇನೆ".. ಅಂದರು. ಇದು ಕುರಿಯನ್ ಶೈಲಿ. ಎಲ್ಲವನ್ನೂ ಒಂದು ನಾಟಕೀಯ ಸ್ವರೂಪಕ್ಕಾಗಿ ಮಾಡುತ್ತಿದ್ದರು. ತಮ್ಮ ಶ್ರೋತೃಗಳು ಬುದ್ಧಿಜೀವಿಗಳಾಗಲಿ, ಸಾಮಾನ್ಯರಾಗಲೀ, ದೇಶಿಯಾಗಲೀ, ವಿದೇಶಿಯಾಗಲೀ, ರಾಜಕಾರಣಿಗಳಾಗಲೀ, ಅಧಿಕಾರಿಗಳಾಗಲೀ ಶೈಲಯೊಂದೇ.. ಪುಸ್ತಕದಲ್ಲಿರುವ ಕೆಲ ಭಾಗಗಳು ಈ ಕೆಳಕಂಡಂತಿವೆ:

  • ನಾನು ಆತನಿಗೆ ಮಂತ್ರಿಗಳ ಕೋಣೆಯಲ್ಲಿಯೇ ಹೇಳಿದೆ: ಸೂಳೆಮಗನೇ ಇಲ್ಲಿ ಬಂದು ಮಂತ್ರಿಗಳ ಮುಂದೆ ಸುಳ್ಳು ಹೇಳುತ್ತೀಯಾ.. ನಾನು ನಿನ್ನ ಬೀಜ ಕತ್ತರಿಸಿಬಿಡುತ್ತೇನೆ.[ಪುಟ.೭೫]
  • [ಐ‌ಐ‌ಎಂ ಅಹಮಾದಾಬಾದ್‍ನ ಬೋರ್ಡ್ ಮೀಟಿಂಗಿನಲ್ಲಿ ಅಲ್ಲಿನ ವಿದ್ಯಾರ್ಥಿಗಳು ಗ್ರಾಮೀಣ ಕ್ಷೇತ್ರದಲ್ಲಿ ಯಾಕೆ ಕೆಲಸ ಮಾಡುವುದಿಲ್ಲ ಎಂಬ ಅಂಶ ಚರ್ಚೆಯಾಗುತ್ತಿರುವಾಗ] ಒಬ್ಬ ಮಹಾನುಭಾವರು ತನ್ನ ಬಾಯಿಂದ ಸಿಗಾರ್ ತೆಗೆದು ನನ್ನತ್ತ ದುರುಗುಟ್ಟಿ ವ್ಯಂಗ್ಯದಿಂದ 'ಹಾಗಾದರೆ ಡಾ.ಕುರಿಯನ್ ನಮ್ಮ ಹುಡುಗರು ಹೋಗೆ ಹಸುವಿನ ಹಾಲು ಹಿಂಡಬೇಕೆನ್ನುವುದು ನಿಮ್ಮ ಉದ್ದೇಶವೇ?' ಅಂತ ಕೇಳಿದ. ನಾನು ಆತನ ದೃಷ್ಟಿಯನ್ನು ಆತನಿಗೇ ಮರುಳಿಸಿ 'ಇಲ್ಲ ಅವರಿಗೆ ಸಿಗಾರ್ ಚೀಪುವುದು ಹೇಗಂತ ಕಲಿಸುವುದನ್ನೇ ಮುಂದುವರೆಸಿ' ಅಂದೆ. [ಪುಟ ೨೧೨]

ನಮ್ಮ ಘಟಿಕೋತ್ಸವ ಸಂದರ್ಭದಲ್ಲಿ, ಸಾವಿರಾರು ರೈತರ ಎದುರು ನಮ್ಮನ್ನುದ್ದೇಶಿಸಿ ಸ್ವಲ್ಪ ಇಂಗ್ಲಿಷ್ ಸ್ವಲ್ಪ ಹಿಂದಿಯಲ್ಲಿ ಮಾತಾಡಿದ್ದು ಮುಖ್ಯ ಅತಿಥಿ ಉಪ ರಾಷ್ಟ್ರಪತಿ ಶ್ರೀ ಹಿದಾಯತುಲ್ಲಾ. ಆದರ ಕುರಿಯನ್‍ಗೆ ಮಾತ್ರ ತಮ್ಮ ಭಾಷಣದ ಗುಜರಾತಿ ಅನುವಾದ ಯಾರಿಂದಲೋ ಓದಿಸುವ ಭಾಗ್ಯ!

ಕುರಿಯನ್ ಮತ್ತವರ ಶೈಲಿಯೆಂದರೆ ಇದೇನೆ. ಆತನ ದೃಷ್ಟಿಯಲ್ಲಿ ಆತನೆಂದೂ ಸೋಲಲು ಸಾಧ್ಯವೇ ಇರಲಿಲ್ಲ. ಆತನ ಪ್ರಕಾರ ಎಣ್ಣೆ ಬೀಜದ ಕ್ಷೇತ್ರದಲ್ಲಿ ಮಾಡಿದ ಕೆಲಸವೂ ಫಲಕಾರಿಯೇ, ಹಣ್ಣು ತರಕಾರಿ ಮಾರುಕಟ್ಟೆಯಲ್ಲಿ ಮಾಡಿದ ಕೆಲಸವೂ ಫಲಕಾರಿಯೇ, ಅರಣ್ಯದಕ್ಷೇತ್ರದಲ್ಲಿ ಮಾಡಿದ ಕೆಲಸವೂ ಫಲಕಾರಿಯೇ..ಆತ ಸೋಲೊಪ್ಪುವುದು ಒಂದೇ ಕ್ಷೇತ್ರದಲ್ಲಿ - ಅದು ಉಪ್ಪು ತಯಾರಿಸುವವರನ್ನು ಸಂಘಟಿಸುವ ಕ್ಷೇತ್ರದಲ್ಲಿ ಮಾತ್ರ. ಮಾತಿನ ಸಂಭ್ರಮದಲ್ಲಿ ಯುದ್ಧಗಳನ್ನು ಗೆಲ್ಲುವ ಕುರಿಯನ್ ಎಷ್ಟೋಬಾರಿ ತಮ್ಮದೇ ವಿರೋಧಾಭಾಸವನ್ನು ಗುರುತಿಸುವದರಲ್ಲಿ ವಿಫಲರಾಗುತ್ತಾರೆ. ಪುಸ್ತಕದ ಕೆಲ ಭಿನ್ನ ಭಾಗಗಳನ್ನು ನೋಡಿ:

  • ದೆಹಲಿಯಲ್ಲಿ ಫ್ಲೈಯೋವರ್ ಕಟ್ಟುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಹಳ್ಳಿಗಳನ್ನು ತಲುಪುವುದಕ್ಕೆ ರಸ್ತೆಗಳಿಲ್ಲದಿದ್ದಾಗ ಫ್ಲೈ‌ಒವರ್ ಕಟ್ಟುವುದು ಸಮರ್ಪಕವಲ್ಲ. ದೆಹಲಿಯಲ್ಲಿ ಅಂದವಾದ ಫೌಂಟನ್ಗಳನ್ನು ಕಟ್ಟುವುದೂ, ಬಣ್ಣದ ದೀಪ ಹಾಕುವುದರಲ್ಲೇನೂ ತಪ್ಪಿಲ್ಲ. ಎಷ್ಟಾದರೂ ದೆಹಲಿ ಸುಂದರವಾಗಿರಬೇಕು. ಆದರ ನಮ್ಮ ಹಳ್ಳಿಗಳಲ್ಲಿ ಕುಡಿಯಲು ನೀರಿಲ್ಲದಿದ್ದಾಗ ಇದು ನ್ಯಾಯವಲ್ಲ... [ಟ ೮೩]
  • ಬಡರೈತ ತಾನು ಉತ್ಪಾದಿಸಿದ ಹಾಲೆಲ್ಲವನ್ನೂ ಮನೆಯಲ್ಲಿಟ್ಟುಕೊಳ್ಳದೆ ಮಾರಾಟಮಾಡುವುದು, ಅದರಿಂದಾದ ಸಂಪಾದನೆಯಿಂದ ಇತರ ಅವಶ್ಯ ವಸ್ತುಗಳನ್ನು ಕೊಳ್ಳುವುದು ನಿಜ. [ಅವನು ಹಾಲು ಮಾರಾಟಮಾಡಬಾರದೆಂಬ] ವಾದಗಳೆಲ್ಲಾ ಹಸಿವೆಯಿಂದ ಬಳಲುತ್ತಿರುವ ಮನುಷ್ಯನಿಗೆ ಅರ್ಥಹೀನವೆನ್ನಿಸುತ್ತದೆ. ಅತಿಬಡವರು ತುಟ್ಟಿ ಖಾದ್ಯ ತಿನ್ನಬೇಕೆನ್ನುವುದು ಅರ್ಥಹೀನ ವಾದವಾಗುತ್ತದೆ.. [ಪುಟ ೧೪೭]
ಕುರಿಯನ್ ಅವರ ವಾಕ್ಚಾತುರ್ಯದಿಲ್ಲಿ ಇರುವ ಗೊಂದಲವೇ ಇದು. ಮೊದಲಬಾರಿಗೆ ನಾನು ಬ್ರಾಹ್ಮಣನೊಬ್ಬ ಹರಿಜನನ ಹಿಂದೆ ಲೈನಿನಲ್ಲಿ ನಿಂತದ್ದರಿಂದ ಜಾತಿವ್ಯವಸ್ಥೆಗೆ ಪೆಟ್ಟು ಕೊಟ್ಟಂತೆ ಎಂಬ ಗುಡುಗಿನ ಮಾತು ಕೇಳಿದಾಗ ನನ್ನ ಕಣ್ಣಲ್ಲಿ ನೀರು ಬಂದಿತ್ತು. ಆದರೆ ಆ ನಂತರ ನಾನು ಹಳ್ಳಿಗಾಡನ್ನು ಸುತ್ತಿಹಾಕಿದಾಗ ಈ ಪ್ರಕ್ರಿಯೆಯಿಂದ ಅಲ್ಲಿನ ಜಾತಿವ್ಯವಸ್ಥೆಗೆ ದೊಡ್ಡ ಬದಲಾವಣೆಯುಂಟಾಗಿಲ್ಲ ಎನ್ನುವುದು ಮನದಟ್ಟಾಯಿತು. ಈಚೆಗೆ ಆ ಬಗ್ಗೆ ಗಹನವಾಗಿ ಆಲೋಚಿಸಿದಾಗ ಅನ್ನಿಸಿದ್ದು - ಅರೇ, ಸಿನೇಮಾ ಲೈನಿನಲ್ಲೂ ಇದೇ ನಿಯಮವನ್ನು ಪಾಲಿಸುತ್ತೇವಲ್ಲ, ಏನಾದರೂ ಬದಲಾವಣೆಯಾಗಿದೆಯೇ? ಹಾಗಾದರೆ ಕುರಿಯನ್ ಹೇಳಿದ್ದು ಹಾಲಿನ ಸಪ್ಲೈಗೆ ಮಾತ್ರ ವರ್ತಿಸಿತ್ತು, ಮಿಕ್ಕ ವಿಷಯಗಳಿಗಲ್ಲ!! ಮಾತಿನ ಚಮತ್ಕಾರ ಒಳ್ಳೆಯ ವಿಚಾರದ ವಾದದ ಮುಂದೆ ಹೆಚ್ಚುಕಾಲ ಕೆಲ್ಲಲು ಸಾಧ್ಯವಿರಲ್ಲ. ದೀರ್ಘ ಕಾಲದಲ್ಲಂತೂ ಈ ಗೆಲುವು ಸಾಧ್ಯವೇ ಇರಲಿಲ್ಲ.

ಎನ್‍ಡಿ‍ಡಿಬಿಯ ಪಾತ್ರದ ಬಗ್ಗೆ ಕ್ಲಾಡ್ ಆಲ್ವರಿಸ್ ಬರೆದ ಲೇಖನದಿಂದಾಗಿ ಒಮ್ಮೆ ಬಿಕ್ಕಟ್ಟಿನ ಪರಿಸ್ಥಿಯಲ್ಲಿದ್ದಾಗ ತಮ್ಮ ಅಧ್ಯಕ್ಷರಿಗೆ ಬೆಂಬಲ ಸೂಚಿಸಲು ೮೦೦ಕ್ಕೂ ಹೆಚ್ಚು ಉದ್ಯೋಗಿಗಳು ರಾಜೀನಾಮೆ ಸಲ್ಲಿಸಿದ್ದರು. ಆಗಿನ ಕಾಲಿಕ್ಕೂ ಇತ್ತೀಚೆಗೆ ಅಮುಲ್‍ನ ಅಧ್ಯಕ್ಷ ಪದವಿಯಿಂದ ಹೊರಬಿದ್ದು ಒಂಟಿಯಾಗಿ ನಡೆದ ಕುರಿಯನ್‍ಗೂ ಸಂಬಂಧವಿದೆಯೇ ಎಂದು ಒಮ್ಮೊಮ್ಮೆ ಯೋಚಿಸುವಂತಾಗುತ್ತದೆ. ಎದುರಿಲ್ಲದ ಮಹಾರಾಜನಂತೆ ಆಳಿದ ಆ ಕುರಿಯನ್ ಎಲ್ಲಿ, ಜೊತೆಯಿಲ್ಲದ ಜೀವಿಯಾಗಿ ಅಡಿಯಿಟ್ಟ ಈ ಕುರಿಯನ್ ಎಲ್ಲಿ? ಎಲ್ಲೋ ತಮ್ಮ ನಂಬಿಕೆಗಳ ಭಾರಕ್ಕೆ ಆತ ಬಲಿಯಾಗಿಬಿಟ್ಟರೆನ್ನಿಸುತ್ತದೆ. ಸಿನೇಮಾದ ಆಕ್ಷನ್ ಹೀರೋ ಪಾತ್ರದಿಂದ ಕ್ಯಾರೆಕ್ಟರ್ ರೋಲ್ ಮಾಡಬೇಕಾದ ಅವಶ್ಯಕತೆಯನ್ನು ಅವರು ಗುರುತಿಸಲೇ ಇಲ್ಲವೇನೋ. ಆತ ದೇವ್ ಆನಂದ್ ದಾರಿಯಲ್ಲಿ ಮುಂದುವರೆದರೇ ಹೊರತು, ಅಮಿತಾಭ್ ಬಚ್ಚನ್ ತುಳಿದ ದಾರಿಯತ್ತ ಒಮ್ಮೆಯೂ ಗಮನ ಹರಿಸಲೇ ಇಲ್ಲ. ಒಂದು ರೀತಿಯಲ್ಲಿ ಕುರಿಯನ್ ತಮ್ಮ ಗುರುಗಳಾದ ತ್ರಿಭುವನದಾಸ್ ಪಟೇಲರಿಂದಾಗಲೀ ರವಿ ಮತ್ಥಾಯ್ ರಿಂದಾಗಲೀ ಕುರ್ಚಿಯ ಮೇಲೆ ಕೂರದೆಯೇ ಆಳುವ ಕಲೆಯನ್ನು ಕೆಲಿಯಲೇ ಇಲ್ಲವೆನ್ನಿಸುತ್ತದೆ. ಇದು ಬಹುಶಃ ಹೋರಾಟಗಾರನ ಲಕ್ಷಣವಿರಬಹುದು. ಎಡಬಿಡದೆ ಸೋಲೊಪ್ಪದೇ ಹೋರಾಡುತ್ತಲೇ ಮುಂದುವರೆಯುವದು.. ತಮ್ಮ ಯೌವನದಲ್ಲಿ ಕೆಲಿತ ಬಾಕ್ಸಿಂಗ್ ಕಲೆ ಅವರನ್ನು ಆವರಿಸಿಬಿಟ್ಟಿತ್ತೇನೋ.

ಕುರಿಯನ್ ಮಹಾಮಾನವನಿಂದ ಮಾನವನ ಸ್ಥರಕ್ಕೆ ಇಳಿಯುತ್ತಿರುವ ಪ್ರಕ್ರಿಯ ನನ್ನ ದೃಷ್ಟಿಗೆ ಬಂದದ್ದು ಕೆಲ ವರ್ಷಗಳ ಕೆಳಗೆ. ಅಷ್ಟು ಹೊತ್ತಿಗೆ ನಾನು ಇರ್ಮಾ ಬಿಟ್ಟು ಐ‌ಐ‌ಎಂ ಸೇರಿದ್ದೆ. ಆಗ ಒಂದು ದಿನ ಆತನದೇ ಹಸ್ತಾಕ್ಷರ ಹೊತ್ತ ಒಂದು ಪತ್ರ ನನ್ನನ್ನು ತಲುಪಿತು. ಅಮೃತಾ ಪಟೇಲ್ ನೆತೃತ್ವದಲ್ಲಿ ಎನ್‍ಡಿಡಿಬಿ ಕೈಗೊಂಡಿದ್ದ ಕೆಲ ಹೊಸ ಯೋಜನೆಗಳನ್ನು - ಅದರಲ್ಲೂ ಸಹಕಾರಿ ಡೈರಿಗಳ ಉತ್ಪನ್ನಗಳನ್ನು ಎನ್‍ಡಿ‍ಡಿಬಿ ಹುಟ್ಟುಹಾಕಿದ ಜೋಡಿಮಾಲೀಕತ್ವದ ಕಂಪನಿಗಳ ಮೂಲಕ ಮಾರಾಟ ಮಾಡುವ ಯೋಜನೆಯನ್ನು ಚರ್ಚಿಸಲು ಒಂದು ವರ್ಕ್‌ಶಾಪ್ ಇರ್ಮಾದಲ್ಲಿ ಏರ್ಪಡಿಸಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆ ಪತ್ರದ ಮೂಲಕ ನನ್ನನ್ನು ಆತ ಆಹ್ವಾನಿಸಿದ್ದರು. ಎರಡು ದಿನಗಳ ನಿರಂತರ ಚರ್ಚೆಯಲ್ಲಿ ನಾವು ಆ ಯೋಜನೆಯ ಒಪ್ಪುತಪ್ಪುಗಳನ್ನು ಅದರ ಪರಿಣಾಮವನ್ನೂ ಚರ್ಚಿಸಿದೆವು. ಅದರಲ್ಲಿ ಭಾಗವಹಿಸಿದ ಎನ್‍ಡಿಡಿಬಿಯ ಪ್ರತಿನಿಧಿ ಕುರಿಯನ್ ಅವರ ಮಾರ್ಗದರ್ಶನದಲ್ಲೇ ತಾವು ನಡೆಯಲು ಸಿದ್ಧರಿರುವುದಾಗಿ, ಅವರ ವಿಚಾರಧಾರೆಗೆ ಧಕ್ಕೆ ಬರುವಂತಹ ಕೆಲಸವನ್ನು ತಾವೇನೂ ಮಾಡುತ್ತಿಲ್ಲವೆಂದೂ ಇಷ್ಟಿಲ್ಲದೇ ಕೇಳಿಕೊಂಡರು. ಎಲ್ಲ ಮುಗಿದ ನಂತರ ಅಲ್ಲಿಗೆ ಕರೆದಿದ್ದಪತ್ರಕರ್ತರನ್ನು ಉದ್ದೇಶಿಸಿ ತಮ್ಮ ಖಾಸಗೀ ವಿಚಾರಗಳನ್ನು ಅದು ಎರಡುದಿನಗಳ ಚರ್ಚೆಯ ಸಾರಾಂಶ ಎನ್ನುವ ಅಭಿಪ್ರಾಯ ಬರುವಂತೆ ಮಂಡಿಸಿದರು. ಆತ ಪತ್ರಕರ್ತರಿಗೆ ಹೇಳಿದ್ದಕ್ಕೂ ಅಲ್ಲಿ ನಡೆದ ಪ್ರಕ್ರಿಯೆಗೂ ಸಂಬಂಧವೇ ಇರಲಿಲ್ಲ. ಅಂದು ನನ್ನ ಹೀರೋ ನನಗೆ ಕೈಕೊಟ್ಟ ಅನುಭವ ನನಗಾಯಿತು. ಆತ ನನ್ನನ್ನು [ಹಾಗೂ ನನ್ನಂತೆಯೇ ಆತನ ಆಹ್ವಾನದ ಮೇರೆಗೆ ಈ ವಿಚಾರವನ್ನು ಚರ್ಚಿಸಲು ಅಲ್ಲಿ ನೆರೆದಿದ್ದ ಎಲ್ಲರನ್ನೂ] ಉಪಯೋಗಿಸಿ ಕೈಬಿಟ್ಟರೆಂದು ನನಗೆ ಅನ್ನಿಸಿತು. ನನ್ನ ಹೆಸರಾಗಲೀ ಅಭಿಪ್ರಾಯವಾಗಲೀ ನಾನು ಮಹತ್ವದ್ದೆಂದು ಭಾವಿಸದಿದ್ದರೂ ಇದು ಮೋಸದ ವರ್ತನೆಯಾಗಿತ್ತು. ನನ್ನ ಕಣ್ಣಲ್ಲಿ ನೀರು ಬಂತು - ಕಾರಣ ಸೂಪರ್‍ಹೀರೋದಂತೆ ಕಾಣುತ್ತಿದ್ದ ಆತ ಕೇವಲ ಸ್ವಹಿತಕ್ಕಾಗಿ ಎರಡು ಮೆಟ್ಟಲಿಳಿಯಲು ಹೇಸದ ಸಾಮಾನ್ಯ ವ್ಯಕ್ತಿ ಮಾತ್ರ ಅಂತ ನನಗನ್ನಿಸಿತು. ಆತ ತಮ್ಮ ಯುದ್ಧವನ್ನು ಕಳಕೊಳ್ಳುತ್ತಿದ್ದರು. ಅದನ್ನು ಸ್ವೀಕರಿಸಲು ಆತ ಸಿದ್ಧರಿರಲಿಲ್ಲ.


ಆದರೆ ಅದಕ್ಕಿಂತ ದುಃಖದ ದಿನ ಮುಂದೆ ಬರಲಿತ್ತು. ಅಮುಲ್‍ನ ಅಧ್ಯಕ್ಷ ಸ್ಥಾನದಲ್ಲಿ ಮೂವತ್ತಕ್ಕೂ ಹೆಚ್ಚು ವರ್ಷಕಾಲ ವಿಜೃಂಭಿಸಿದ ಆತ ಅಲ್ಲಿನ ಹುದ್ದೆಯನ್ನು ತ್ಯಜಿಸಿದ ದಿನವದು. ಆತ ಆ ಪಟ್ಟದಿಂದ ಇಳಿದ ದಿನ ಗುಜರಾತ್ ಒಕ್ಕೂಟದವರು ಕುರಿಯನ್‍ಗೆ ಇದ್ದ ಸವಲತ್ತುಗಳನ್ನು ಹಾಗೇ ಉಳಿಸುವುದಾಗಿ ಹೇಳಿದರು. ಅದರಲ್ಲಿ ಕುರಿಯನ್ ಉಪಯೋಗಕ್ಕೆ, ಅವರ ಶ್ರೀಮತಿಯವರ ಉಪಯೋಗಕ್ಕೆ ತಲಾ ಒಂದರಂತೆ ಕಾರು, ಮನೆಯ ಅಡುಗೆಯವನು -- ಈ ಎರಡು ಅಂಶಗಳು ಸೇರಿದ್ದವು. ಆದರ ಆತನ ಸಹಾಯಕ ಜೊಸೆಫ್ [ಆತ ಒಕ್ಕೂಟದ ಉದ್ಯೋಗಿ] ಗೆ ಕಲಕತ್ತಾಗೆ ವರ್ಗ ಮಾಡುತ್ತಾ ನಿರ್ದೇಶನ ಪತ್ರವನ್ನಿತ್ತರು. ಜೀವನಪರ್ಯಂತ ಸೇವೆ ಮಾಡಿದವರಿಗೆ ಕೊಡಬಲ್ಲ ಗೌರವಪೂರ್ಣ ವಿದಾಯ ಇದೇನೂ ಅಲ್ಲ. ಆದರೆ ಕುರಿಯನ್ ಅದಕ್ಕೆ ಪ್ರತಿಕ್ರಿಯಿಸಿದ್ದು ಹೇಗೆ? ಇದ್ದ ಇತರ ಸವಲತ್ತುಗಳನ್ನೂ ವಾಪಸ್ಸು ಮಾಡಿ "ಸಾಕಾಯಿತು ಬಿಡಿ, ನಿಮ್ಮ ಯಾವ ಸವಲತ್ತುಗಳೂ ನನಗೆ ಬೇಡ " ಎಂದು ಹೇಳುವುದರ ಮೂಲಕ ತಮ್ಮ ಸಿಟ್ಟನ್ನು ವ್ಯಕ್ತಪಡಿಸಲಿಲ್ಲ. ಬದಲಿಗೆ ಪುಟ್ಟ ಹುಡುಗನೊಬ್ಬ ಚಾಕಲೇಟಿಗೆ ಗೋಗರೆಯುವಂತೆ 'ನನಗೆ ನೀವು ಎಲ್ಲ ಸವಲತ್ತುಗಳನ್ನೂ ಕೊಡುವುದಾಗಿ ಹೇಳಿದ್ದಿರಿ, ಜೋಸೆಫ್ ಆ ಸವಲತ್ತುಗಳ ಭಾಗ ಎಂಬುದನ್ನು ಗಮನಿಸಿ..' ಎಂದು ಪತ್ರ ಬರೆದರು.

ಖಂಡಿತವಾಗಿಯೂ ಯುವರಾಜರು ತಮ್ಮ ಚಕ್ರವರ್ತಿಗಳನ್ನು ಈ ರೀತಿ ನೋಡಲು ಇಷ್ಟಪಡುವ ದೃಶ್ಯವಲ್ಲ. ಚರಿತ್ರೆ ಬರೆಯಲ್ಪಡುವಾಗ ತಮ್ಮ ಕಡೆಯ ವರ್ಷಗಳ ಬೀಳು ಅವರ ಮೊದಲ ಐವತ್ತು ವರ್ಷಗಳ ಅದ್ಭುತ ದೇಣಿಗೆಯನ್ನು ಮರೆಮಾಡದಿರಲಿ. ಯಾರೋ ನನಗೆ ಹೇಳಿದ ನೆನಪು - ಕುರಿಯನ್ ಜೊತೆಗೆ ಬಹಳ ವರ್ಷಗಳ ಕಾಲ ಕೆಲಸ ಮಾಡಿದ ಡಾ.ಚೋಟಾಣಿ ತಮ್ಮ ವಿಳಾಸದಲ್ಲಿ ಕುರಿಯನ್ ಹೆಸರಿರಬೇಕೆಂಬ ಏಕೈಕ ಕಾರಣಕ್ಕಾಗಿ ತಾವು ನಿವಸಿಸುತ್ತಿದ್ದ ತಮ್ಮ ಕಟ್ಟಡವೂ ಆಗ ನಾಮಕರಣಗೊಳ್ಳಲಿದ್ದ ಕುರಿಯನ್ ಎನ್‍ಕ್ಲೇವ್‍ನಲ್ಲಿ ಸೇರಬೇಕೆಂದು ಪೈರವಿ ನಡೆಸಿ ಸಾಧಿಸಿದರಂತೆ. ಇಂಥ ಸಹಚರರಿದ್ದ ಕುರಿಯನ್ ಬೀಳು ಎಷ್ಟು ಕೆಟ್ಟದ್ದಾಗಿದೆ. ಈ ಬೀಳು ಅವರಗೆ ಹೆಚ್ಚು ನೋವನ್ನುಂಟುಮಾಡದಿರಲೆಂದು ಮಾತ್ರ ಆಶಿಸ ಬಹುದೇನೋ
ಇದರ ಇಂಗ್ಲೇಷ್ ಆವೃತ್ತಿಯನ್ನು Writer's BlogK ನಲ್ಲಿ ಕಾಣಬಹುದು