Sunday, August 2, 2009

ಮರೆತೇನೆಂದರು ಮರೆಯಲಿ ಹ್ಯಾಂಗ?

ನಮ್ಮ ದೇಶದಲ್ಲಿ ಮೈಕ್ರೋಫೈನಾನ್ಸ್ ಅಂದಕೂಡಲೇ ಕಾರಣವಿರಲೀ ಇಲ್ಲದಿರಲೀ ಮುಂಚೂಣಿಯಲ್ಲಿ ನಿಲ್ಲುವ ಹೆಸರು ಎಸ್.ಕೆ.ಎಸ್ ಎನ್ನುವ ಸಂಸ್ಥೆಯದ್ದು. ಹಾಗೂ ಅದರ ಸಂಸ್ಥಾಪಕ ಅನ್ನಿಸಿಕೊಳ್ಳುವ ವಿಕ್ರಂ ಆಕುಲಾರ ಹೆಸರು. ಎಸ್.ಕೆ.ಎಸ್ [ಸ್ವಯಂ ಕೃಷಿ ಸಂಘಂ] ಬಗ್ಗೆ ಮೊದಲಿಗೆ ಯೋಚಿಸಿದ್ದು ಅದನ್ನು ಕಾರ್ಯರೂಪಕ್ಕೆ ಇಳಿಸಿದ್ದು ವಿಕ್ರಂ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪುಟ್ಟದಾಗಿ ಪ್ರಾರಂಭಿಸಿ ಇಂದು ದೇಶಾದ್ಯಂತ ಹಬ್ಬಿರುವ ಈ ಸಂಸ್ಥೆ ದೇಶದಲ್ಲಿಯೇ ಅತ್ಯಂತ ದೊಡ್ಡ ಮೈಕ್ರೊಫೈನಾನ್ಸ್ ಸಂಸ್ಥೆಯಾಗಿದೆ. ವಿಕ್ರಂಗೂ ಈ ಸಂಸ್ಥೆ ಸಾಕಷ್ಟು ಖ್ಯಾತಿಯನ್ನು ತಂದು ನೀಡಿದೆ. ಅಮೆರಿಕದಿಂದ ಎಲ್ಲವನ್ನೂ ಬಿಟ್ಟು ಭಾರತಕ್ಕೆ ಬಂದು ಬಡವರಿಗೆ ಸೇವೆಯನ್ನೊದಗಿಸುವ ಕೆಲಸ ಮಾಡುತ್ತಿರುವುದಕ್ಕೆ ಟೈಂ ಪತ್ರಿಕೆಯ ನೂರು ಜನರ ಯಾದಿಯಲ್ಲಿ, ವೀಕ್ ಪತ್ರಿಕೆಯ ೨೦ ಮಹತ್ವದ ಭಾರತೀಯರ ಯಾದಿಯಲ್ಲಿ ವಿಕ್ರಂ ಹೆಸರು ದಾಖಲಾದದ್ದಲ್ಲದೇ ದೊಡ್ಡ ವಾರ್ತಾವಾಹಿನಿಗಳಲ್ಲಿ ಆತನ ಸಂದರ್ಶನಗಳೂ ಬಂದಿವೆ. ಆದರೂ ವಿಕ್ರಂ ೧೯೯೭ರಲ್ಲಿ ಪ್ರಾರಂಭಿಸಿ, ಇಷ್ಟೆಲ್ಲಾ ಖ್ಯಾತಿಯನ್ನು ನೀಡಿದ ಸಂಸ್ಥೆಯಲ್ಲಿನ ತಮ್ಮ ಬಹುತೇಕ ಹೂಡಿಕೆಯನ್ನು ಕಳೆದ ವರ್ಷವಷ್ಟೇ ಮಾರಿ ಸಂಸ್ಥೆಯ ದಿನನಿತ್ಯದ ಕಾರ್ಯವನ್ನು ಹೊಸ ಹೂಡಿಕೆದಾರರಿಗೆ ಒಪ್ಪಿಸಿ ಕೈತೊಳೆದುಕೊಂಡರು.

ವಿಕ್ರಂರ ಈ ತ್ವರಿತ ಪ್ರಗತಿಯಾದದ್ದು ಎಸ್.ಕೆ.ಎಸ್ ಸಂಸ್ಥೆಯ ಪ್ರಗತಿಯಿಂದಾಗಿ. ಆದರೆ ನಿಜದ ವಿಷಯವೆಂದರೆ ಎಸ್.ಕೆ.ಎಸ್ ಅತ್ಯಂತ ನಾಜೂಕಾದ ಪರಿಸ್ಥಿತಿಯಲ್ಲಿದ್ದಾಗ ಶೈಶವಾವಸ್ಥೆಯಲ್ಲಿ ಅದನ್ನು ಪೋಷಿಸಿ ಬೆಳೆಸಿದ ವ್ಯಕ್ತಿ ಎಲೆಮರೆಯ ಕಾಯಿಯಂತೆ, ಖ್ಯಾತಿಯನ್ನೂ ಸಂಪಾದಿಸದೇ, ಹೆಚ್ಚು ಹಣವನ್ನೂ ಈ ಸಂಸ್ಥೆಯಿಂದ ಪಡೆಯದೆಯೇ ಮರೆಯಾದರು. ಆ ವ್ಯಕ್ತಿಯ ಹೆಸರು ಸೀತಾರಾಮ್ ರಾವ್.

ಸೀತಾರಾಮ್ ಸದಾ ಹಸನ್ಮುಖಿಯಾಗಿ ಇರುತ್ತಿದ್ದ ವ್ಯಕ್ತಿ. ಅವರಲ್ಲಿ ಎಂದೂ ತುಳುಕುತ್ತಿದ್ದ ಉತ್ಸಾಹ, ಹಾಗೂ ಕುತೂಹಲ. ಮೇಲಾಗಿ ಬಡತನದ ಕ್ಷೇತ್ರದಲ್ಲಿ ಕೆಲಸ ಮಾಡುವವರು ದೊಡ್ಡ ಮಾತುಗಳ ಭಾಷಣವನ್ನು ಕೊಚ್ಚುವ ರೋಗ ಅವರಿಗೆ ಇರಲೇ ಇಲ್ಲ. ಅವರು ಎಷ್ಟರ ಮಟ್ಟಿಗೆ ಬಡವರ ಪರವಾದ - ಮಕ್ರೋಫೈನಾನ್ಸ್ ಕ್ಷೇತ್ರದ ಪರವಾದ ಮಾತುಗಳನ್ನಾಡುತ್ತಿದ್ದರು ಎಂದರೆ ಬಹುಮಟ್ಟಿನ ಜನರು ಅವರನ್ನು ಎಸ್.ಕೆ.ಎಸ್ ಸಂಸ್ಥೆಯ ಜೊತೆಗೆ ಗುರುತಿಸದೇ, ಗ್ರಾಮೀಣ ಅರ್ಥಪದ್ಧತಿಯ ಜೊತೆಗೆ ಆತನನ್ನು ಗುರುತಿಸುತ್ತಿದ್ದರು.

ಎಸ್.ಕೆ.ಎಸ್ ಸ್ಥಾಪಿಸಿದ ವಿಕ್ರಂ ಆಕುಲಾ ಒಂದು ಘಟ್ಟದಲ್ಲಿ ಅದನ್ನು ಹೆಚ್ಚೂ ಕಡಿಮೆ ಬಿಟ್ಟು ತಮ್ಮ ಉನ್ನತ ಪದವಿಗಾಗಿ ಶಿಕಾಗೋಗೆ ವಾಪಸ್ಸಾದಾಗ ನಾವೆಲ್ಲಾ ವಿಕ್ರಂ ಎಸ್.ಕೆ.ಎಸ್.ನಿಂದ ಕೈತೊಳೆದುಕೊಂಡುಬಿಟ್ಟಿದ್ದಾರೆ ಅಂದುಕೊಂಡಿದ್ದೆವು. ಆ ಕಾಲದಲ್ಲಿ ವಿಕ್ರಂ ಎಸ್.ಕೆ.ಎಸ್‌ನ ಉಸ್ತುವಾರಿಯನ್ನು ಸೀತಾರಾಮ್ ಕೈಗೆ ಇಟ್ಟು ಹೋದರು. ವಿಕ್ರಂ ತಮ್ಮ ಮಹಾಪ್ರಬಂಧ ಮುಗಿಸಿಬರುವ ವೇಳೆಗೆ ಆ ಸಂಸ್ಥೆ ಬೆಳೆದು ನಿಂತಿತ್ತು. ವಿಕ್ರಂ ಹಾಗೆ ಬೆಳೆದು ನಿಂತಿದ್ದ ಸಂಸ್ಥೆಯನ್ನು ಇನ್ನೂ ತ್ವರಿತಗತಿಯಲ್ಲಿ ಬೆಳೆಸಿದರೂ ಅದರ ಅಡಿಪಾಯವನ್ನು ಸೀತಾರಾಮ್ ಹಾಕಿದರು ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ವಿಕ್ರಂ ಕೊಟ್ಟಿರುವ ಅಸಂಖ್ಯ ಸಂದರ್ಶನಗಳಲ್ಲಿ ಸೀತಾರಾಮ್ ಹೆಸರನ್ನು ಎತ್ತಿರುವುದನ್ನು ನಾನು ಕಂಡೇ ಇಲ್ಲ. ಆದರೆ ಸೀತಾರಾಂ ಮಾತ್ರ ತಾವು ಆ ಸಂಸ್ಥೆಯಿಂದ ಹೊರಬಿದ್ದಾಗ ಎಲ್ಲರಿಗೂ ಕಳಿಸಿದ ಒಂದು ಪತ್ರದಲ್ಲಿ ತಮ್ಮೊಡನೆ ಇದ್ದ ಪ್ರತೀ ವ್ಯಕ್ತಿಯನ್ನೂ ಅವರ ಪಾತ್ರದ ಮಹತ್ವವನ್ನೂ ವಿವರಿಸಿದ್ದರು.

ಒಂದು ರೀತಿಯ ಸ್ಥಿತಪ್ರಜ್ಞತೆಯನ್ನು ಮೈಗೂಡಿಸಿಕೊಂಡಿದ್ದ ಸೀತಾರಾಮ್ ಹಿಂದೆ ನೋಡಿ ಬೇಸರ ಪಟ್ಟುಕೊಳ್ಳುವ ವ್ಯಕ್ತಿಯಲ್ಲ. ಅವರು ಎಸ್.ಕೆ.ಎಸ್. ಬಿಟ್ಟಾಗ ಹೇಳಿದ್ದ ಮಾತುಗಳಲ್ಲಿ ಮುಖ್ಯವಾದದ್ದು "ಬಡವರ ಆಹಾರ ಸ್ವಾವಲಂಬನೆಯ ಬಗ್ಗೆ ನಾನು ಮುಂದಿನ ಕೆಲಸ ಮಾಡಬೇಕೆಂದಿದ್ದೇನೆ" ಎಂದು ಬರೆದಿದ್ದರು.

ಈಗ ಕೂತು ಸೀತಾರಾಮ್ ಬಗ್ಗೆ ಬರೆಯುತ್ತಿರುವಾಗ ನನಗೆ ಎಷ್ಟೆಲ್ಲಾ ವಿವರಗಳು ನೆನಪಾಗುತ್ತಿವೆ. ಒಂದು ಸೀತಾರಾಮ್ ಅವರ ಒಂದೂ ಫೋಟೋ ನನ್ನ ಬಳಿಯಿಲ್ಲ. ಎರಡು: ಸೀತಾರಾಮ್ ಅವರ ಜೀವನದ ಖಾಸಗೀ ವಿವರಗಳು ಒಂದೂ ನನಗೆ ತಿಳಿದಿಲ್ಲ - ಅವರಿಗೆ ಮದುವೆಯಾಗಿದೆಯೋ, ಸ್ವಂತ ಮನೆಯಿದೆಯೋ, ಈ ಹಿಂದೆ ಏನು ಮಾಡುತ್ತಿದ್ದರು - ಯಾವುದೂ ಗೊತ್ತಿಲ್ಲ.

ಯಾಕೆಂದರೆ ಸೀತಾರಾಮ್ ನಮ್ಮೆದುರಿಗೆ ಒಂದು ಸಂಪೂರ್ಣ ವ್ಯಕ್ತಿಯಾಗಿ ನಿಲ್ಲುತ್ತಿದ್ದರು. ಹೀಗಾಗಿ ಈ ಎಲ್ಲ ವಿವರಗಳ ಆಸರೆ ಅವರ ವ್ಯಕ್ತಿತ್ವಕ್ಕೆ ಬೇಕಿರಲಿಲ್ಲ. ನಾನಿಂಥವನ ಮಗ, ಇಂಥವನ ಗಂಡ, ಇಂಥಿಂಥ ಕಡೆ ಕೆಲಸ ಮಾಡಿದೆ.. ಯಾವುದೂ ಈ ಕ್ಷಣದ ಕೆಲಸಕ್ಕೆ ಮುಖ್ಯವಲ್ಲ. ಈ ಕ್ಷಣದ ಕೆಲಸಕ್ಕೆ ಮುಖ್ಯವಾದದ್ದು - ಕೈಮೇಲಿರುವ ಸಮಸ್ಯೆಯನ್ನು ಸಾಧಿಸುವ ಬಗೆ ಹೇಗೆ ಅನ್ನುವುದರ ಆಲೋಚನೆ ಮಾತ್ರ. ಇದರಿಂದಾಗಿ ನನಗೆ ಖ್ಯಾತಿ ಬರುತ್ತದೋ ಇಲ್ಲವೋ ಅನ್ನುವುದು ಮುಖ್ಯವಲ್ಲ - ಸಮಸ್ಯೆ ಪರಿಹಾರವಾಯಿತೋ ಇಲ್ಲವೋ ಅನ್ನುವುದು ಮುಖ್ಯ...

ಬಹುಶಃ ಸೀತಾರಾಮ್ ಈ ಥರದ ಆಲೋಚನೆಗಳಲ್ಲಿ ತೊಡಗಿದ್ದಿರಬಹುದು. ಮುಂಬೈನಲ್ಲಿ ಆರ್ಟ್ ಪ್ಲಾಜಾ ಮಾಡಿ, ಉದಯೋನ್ಮುಖ ಕಲಾವಿದರಿಗೆ ಜಹಾಂಗೀರ್ ಆರ್ಟ್ ಗ್ಯಾಲರಿಯೆದುರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟ ಕಮಲಾಕ್ಷ ಶಣೈ, ಅನೇಕ ಜನರ ಸಾಹಿತ್ಯ ಕೃತಿಗಳನ್ನು ಬೆಳಕಿಗೆ ತರಲು, ಕವಿಗಳನ್ನು ಕಾಲೇಜಿನ ಹಂತದಲ್ಲಿಯೇ ಗುರುತಿಸಿ ಪ್ರ್ಹೊತ್ಸಾಹಿಸಿದ ಕ್ರೈಸ್ಟ್ ಕಾಲೇಜಿನ ಶ್ರೀನಿವಾಸ ರಾಜು ಈ ಎಲ್ಲರಲ್ಲೂ ಕೆಲವು ಸಮಾನವಾದ ಗುಣಗಳಿದ್ದುವು. ಎಲ್ಲರೂ ಮಿತಭಾಷಿಗಳು. ಎಲ್ಲರೂ ತಮ್ಮ ಖ್ಯಾತಿ ಹೆಸರಿನ ಬಗ್ಗೆ ಯೋಚಿಸಿದವರೇ ಅಲ್ಲ. ತಾವು ನಂಬಿದ್ದನ್ನು ತಮ್ಮ ಕಾಯಕವೆಂದು ಕೈಗೊಂಡು ಸಮಾಜಕ್ಕೆ ಪ್ರಯೋಜನವಾಗುವಂತೆ ಜೀವಿಸಿದವರು. ಈ ಹಲವರ ಜೊತೆಗೆ, ಎಲೆ ಮರೆಯ ಕಾಯಿಯಾಗಿ ಭುಜಕ್ಕೆ ಭುಜ ಸೇರಿಸಿ ಸೀತಾರಾಮ್ ನಿಂತಿದ್ದಾರೆ.

ಒಂದು ತಿಂಗಳ ಕೆಳಗಷ್ಟೇ ಚೆನ್ನೈನಲ್ಲಿ ಸೀತಾರಾಮ್ ಅವರ ಭೇಟಿಯಾಗಿತ್ತು. ನಾಲ್ಕಾರು ತಿಂಗಳುಗಳಿಂದ ನಾಪತ್ತೆಯಾಗಿದ್ದ ಸೀತಾರಾಮ್ ಸಾವಿನ ಅಂಚಿನಲ್ಲಿದ್ದ ತಮ್ಮ ಸಹೋದರನ ಪರಿಚಾರಿಕೆಯಲ್ಲಿದ್ದರಂತೆ. ಎಲ್ಲ ಡಾಕ್ಟರುಗಳೂ ಕೈ ಎತ್ತಿದ್ದ, ಕೋಮಾದಲ್ಲಿದ್ದ ತಮ್ಮ ಸಹೋದರನ ಜೀವವನ್ನು ವಾಪಸ್ಸು ಎಳೆದು ತಂದ ನಂತರವೇ ನಾನು ನನ್ನ ಕೆಲಸಕ್ಕೆ ವಾಪಸ್ಸಾದೆ ಎಂದು ಅವರು ಹೇಳಿದರು. ಹಳೆಯ ಕಥೆಗಳಲ್ಲಿರುವಂತೆ ಬಹುಶಃ ತಮ್ಮು ಆಯಸ್ಸನ್ನು ತಮ್ಮ ಸಹೋದರನಿಗೆ ಎರೆದು ಬಿಟ್ಟರೇನೋ. ಆದರೆ ಆ ಸಂದರ್ಭ ಸೀತಾರಾಮ್‍ಗೆ ತೃಪ್ತಿ ತಂದ ಸಂದರ್ಭವಿದ್ದಿರಬಹುದು. ಯಾಕೆಂದರೆ ಅಮಿತವಾಗಿ ಬದಲಾವಣೆಗಳನ್ನು ಕಾಣುವ ತಪನವಿರುವವರಲ್ಲೆಲ್ಲಾ ಒಂದು ಬದಲಾವಣೆಯ ಚಡಪಡಿಕೆಯನ್ನು ನಾವು ಕಾಣುತ್ತೇವೆ. ಒಂದು ಥರದ ತೀವ್ರತೆಯನ್ನು ಕಾಣುತ್ತೇವೆ. ಆದರೆ ಈ ಕ್ಷೇತ್ರದಲ್ಲಿ ಸ್ಥಿತಪ್ರಜ್ಞರಂತೆ ಕಾಣುವ, ಅತೃಪ್ತರಾಗಿದ್ದೂ ತೃಪ್ತರಂತೆ ಕಾಣುವ ಗಾಂಭೀರ್ಯ ಸೀತಾರಾಮ್‌ಗೆ ಇತ್ತು. ಆ ಥರದ ಗಾಂಭೀರ್ಯ ಇರುವ ಮತ್ತೂಬ್ಬರೆಂದರೆ ಸೇವಾ ಸಂಸ್ಥೆಯ ಇಳಾ ಭಟ್.

ಚೆನ್ನೈನಲ್ಲಿ ನಡೆದ ಅಂದಿನ ಕಾರ್ಯಕ್ರಮ ಆತನಿಗೆ ತೃಪ್ತಿ ನೀಡಿದ್ದಿರಬೇಕು. ಸೀತಾರಾಮ್ ಮಾತನಾಡುತ್ತಿದ್ದ ಆಹಾರ ಸ್ವಾವಲಂಬನೆಯತ್ತ ಒಂದು ಹೆಜ್ಜೆಯನ್ನಿಡುತ್ತಾ ಚೆನ್ನೈನ ಈಕ್ವಿಟಾಸ್ ಮೈಕ್ರೋಫೈನಾನ್ಸ್ ಸಂಸ್ಥೆ ತಮ್ಮ ಬಡ ಗ್ರಾಹಕರಿಗೆ ಲಾಭವಿಲ್ಲದೇ - ಸುಲಭ ಕಂತಿನ ಮೇಲೆ ಆಹಾರ ಪದಾರ್ಥಗಳನ್ನು ಪೂರೈಸುಯ ಯೋಜನೆಯ ಅಡಿಪಾಯವನ್ನು ಹಾಕಿತ್ತು. ಇದು ಸೀತಾರಾಮ್ ಹೇಳಿದ್ದರಿಂದಲೇ ನಾವು ಮಾಡಿದೆವು ಅನ್ನುವ ನಿಜವನ್ನೂ ಈಕ್ವಿಟಾಸ್ ಸಂಸ್ಥೆಯ ವಾಸು ಹೇಳಿದ್ದರು. ಹೀಗಾಗಿ ತಮ್ಮ ಕನಸಿನ ಒಂದು ಭಾಗವಾದರೂ ಸಾಕಾರಗೊಳ್ಳುತ್ತಿರುವುದನ್ನು ಕಂಡು ಸೀತಾರಾಮ್ ಅಸುನೀಗಿದರು ಅನ್ನುವುದೇ ಒಂದು ತೃಪ್ತಿ.

ನಮ್ಮ ಸಂಸ್ಥೆಯಲ್ಲಿ ಒಂದು ಸೆಮಿನಾರಿಗೆ ನಾವು ಸೀತಾರಾಮನ್ನು ಕರೆಸಿದ್ದೆವು. ದಿನವಿಡೀ ಎಲ್ಲರೂ ಮಾತು ಚರ್ಚೆಯಲ್ಲಿ ಪಾಲ್ಗೊಂಡರು. ಸೀತಾರಾಮ್ ಮಾತ್ರ ತಮ್ಮ ಎಡಗೈಯಲ್ಲಿ ಪ್ಯಾಡಿನಲ್ಲಿ ಟಿಪ್ಪಣಿ ಹಾಕಿಕೊಳ್ಳುತ್ತಿದ್ದರು. ಎಲ್ಲ ಆದ ಮೇಲೆ ಸಂಜೆಗೆ ನಾನು ಆತನನ್ನು ಕೇಳಿದೆ: "ನೀವು ಒಂದೂ ಮಾತನ್ನು ಆಡಲಿಲ್ಲವಲ್ಲಾ?" ಅದಕ್ಕೆ ಸೀತಾರಾಮ್ ಎಂದಿನ ನಗೆ ನಕ್ಕು "ಇಷ್ಟೊಂದು ಜನ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು, ಅದನ್ನು ನೋಡಿ ನಾನು ಕಲಿಯುತ್ತಾ, ಏನೆಲ್ಲಾ ಮಾಡಬಹುದೆಂದು ಟಿಪ್ಪಣಿ ಹಾಕಿಕೊಳ್ಳುತ್ತಾ ಇದ್ದೆ, ಈ ಎಲ್ಲರ ನಡುವೆ ನಾನು ಹೇಳಿಕೊಳ್ಳುವುದೇನಿದೆ. ಇನ್ನೂ ಮಾಡಬೇಕಾದ ಕೆಲಸ ಬಹಳವಿದೆ" ಎಂದಿದ್ದರು.

ಪಿಕ್ಚರ್ ಅಭೀ ಬಾಕೀ ಹೈ ಮೇರೇ ದೋಸ್ತ್....
No comments: