Sunday, March 15, 2009

ಕುರಿಯನ್: ಒಂದು ಖಾಸಗೀ ಪ್ರಬಂಧ



[ವಿಜಯಕರ್ನಾಟಕದ ಕೋರಿಕೆಯ ಮೇರೆಗೆ ನಾನು ಈ ಲೇಖನವನ್ನ ಬರೆದೆ. ಆದರೆ, ಎಲ್ಲ ಪತ್ರಿಕೆಗಳಿಗೂ ಇರುವ ಸ್ಥಳ ಪರಿಮಿತಿಗನುಸಾರವಾಗಿ, ಈ ಪ್ರಬಂಧದ ಆಯ್ದ ಭಾಗಗಳನ್ನು ಮಾತ್ರ ಅವರು ೨೧ ಮೇ ೨೦೦೬ರ ಭಾನುವಾರದ ಸಂಚಿಕೆಯಲ್ಲಿ ಪ್ರಕಟಿಸಿದ್ದಾರೆ. ಈ ಲೇಖನವನ್ನು ನಾನು ಕನ್ನಡದಲ್ಲಿ ಬರೆಯಲು ಸ್ವಲ್ಪ ತಿಣುಕಿದೆ - ಕುರಿಯನ್ ಭಾಷಣಗಳನ್ನು ಮಾತುಗಳನ್ನು ಇಂಗ್ಲೀಷಿನಲ್ಲಿ ಕೇಳಿದ್ದ ನನಗೆ ಆತನ ಬಗ್ಗೆ ನನಗೆ ಕನ್ನಡದಲ್ಲಿ ಯಾವಮಾತನ್ನೂ ಬರೆಯುವುದು ಯಾಕೋ ಕಷ್ಟವಾಯಿತು. ಹೀಗಾಗಿ ನಾನು ಈ ಲೇಖನವನ್ನು ಮೊದಲಿಗೆ ಇಂಗ್ಲೀಷಿನಲ್ಲಿ ಬರೆದು ನಂತರ ಕನ್ನಡಕ್ಕೆ ತರ್ಜುಮೆ ಮಾಡಿದೆ. ಈ ಬಿಕ್ಕಟ್ಟನ್ನು ನಾನು ಎದುರಿಸಿದ್ದು ಇದೇ ಮೊದಲು. ಒಂದು ವಿಧದಲ್ಲಿ ಇದೂ ಒಳ್ಳೆಯದೇ ಆಯಿತು. ಕನ್ನಡ ಬರದ ನನ್ನ ಇರ್ಮಾದ ಗೆಳೆಯರೊಂದಿಗೆ ಈ ಲೇಖನವನ್ನು ಹಂಚಿಕೊಳ್ಳಲು ಸಾಧ್ಯವಾಯಿತು] 

ಕಾಲೇಜು ತಪ್ಪಿಸಿ ಮೈಸೂರಿನ ಒಲಿಂಪಿಯಾ ಟಾಕೀಸಿನಲ್ಲಿ 'ಮಂಥನ್' ಚಿತ್ರ ನೋಡಿದಾಗ ನಾನು ಪಿ.ಯು.ಸಿ.ಯಲ್ಲಿದ್ದೆ. ಆಗ್ಗೆ ನನಗೆ ಇದು ನಾನು ನೊಡುತ್ತಿದ್ದ ಚಿತ್ರಗಳಲ್ಲಿ ಮತ್ತೊಂದಾಗಿತ್ತು - ಶ್ಯಾಂ ಬೆನೆಗಲ್ ನಿರ್ದೇಶಿಸಿದ ಒಪ್ಪ ಕಥೆಯ ಒಳ್ಳೆಯ ಸಿನೇಮಾ. ಆಗ್ಗೆ ನಾನು ಶ್ಯಾಂ ಬೆನೆಗಲ್‍ರ ಚಿತ್ರಗಳನ್ನು ಮೆಚ್ಚಲು ಆರಂಭಿಸಿದ್ದೆ. ನಿಶಾಂತ್, ಅಂಕುರ್ ಥರದ ಚಿತ್ರಗಳನ್ನು ಮಾಡಿದ್ದ ಶ್ಯಾಂ ಮಾರುಕಟ್ಟೆಯಲ್ಲಿ ಯಶಸ್ವಿಯಾಗುವಂಥಹ ಚಿತ್ರ ಮಾಡಿದ್ದು ನನಗೆ ತುಸು ಆಶ್ಚರ್ಯವನ್ನೇ ಉಂಟುಮಾಡಿತ್ತು. ಈ ಚಿತ್ರ ನನ್ನ ಜೀವನದಲ್ಲಿ ದೊಡ್ಡ ಪ್ರಭಾವವಾಗಬಹುದು, ನನ್ನ ವೃತ್ತಿ ಜೀವನವನ್ನು ರೂಪಿಸಬಹುದೆಂದು ಆಗ ನಾನು ಊಹಿಸಿರಲಿಲ್ಲ.

ಮೂರ್ನಾಲ್ಕು ವರ್ಷಗಳನಂತರ [ಬಹುಶಃ ೩೧ ಜನವರೆ ೧೯೮೨ ರಂದು] ನನಗೆ ಒಂದು ಕಷ್ಟದ ಆಯ್ಕೆ ಎದುರಾಯಿತು. ಅಂದು ನಾನು ಇನ್ಸ್‌ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‍ಮೆಂಟಿನ [ಇರ್ಮಾ] ಪ್ರವೇಶ ಪರೀಕ್ಷೆ ಮತ್ತು ಕಾಲೇಜಿನಿಂದ ನಾವು ಹೋಗಬೇಕಾದ ಪ್ರವಾಸದ ನಡುವೆ ಆಯ್ಕೆ ಮಾಡಬೇಕಾಗಿತ್ತು. ಡಿಗ್ರಿಯ ಅಂತಿಮ ವರ್ಷದಲ್ಲಿದ್ದದ್ದರಿಂದ ನಾವುಗಳು [ಸಂತೋಷವಾಗಿ] ಜೊತೆಯಾಗಿರುವ ಕಡೆಯ ದಿನ ಅದೇ ಆಗುವುದಿತ್ತು. ಆಗಷ್ಟೇ ಬರವಣಿಗಯನ್ನು ಪ್ರಾರಂಭಿಸಿದ್ದ ನಾನು ಆ ಸಂಸ್ಥೆಯ ಹೆಸರನಿಲ್ಲಿದ್ದ ರೂರಲ್ ಎಂಬ ಪದಕ್ಕೆ ಮಾರುಹೋದೆನೆನ್ನಿಸುತ್ತದೆ. ಹಳ್ಳಿಗಳ ಕಡೆ ಓಡಾಡಿದರೆ ಕಥೆಗಾರನಿಗೆ ಬೇಕಾದ ಅನುಭವಗಳು ಸಿಕ್ಕು ನನ್ನ ಬರವಣಿಗೆ ಶ್ರೀಮಂತವಾಗುವುದು ಎಂಬ ಭಾವನೆ ನನ್ನಲ್ಲಿತ್ತು. ಆಗ ಮ್ಯಾನೇಜ್‍ಮೆಂಟ್ ಓದಿಗೆ ಈಗಿನಷ್ಟು ಪ್ರಾಮುಖ್ಯತೆಯಿರಲಿಲ್ಲ ಆದರೂ ಆಕರ್ಷಕವಾಗಿತ್ತು. ಹೀಗಾಗಿ ವೃತ್ತಿಯ ದೃಷ್ಟಿಯಿಂದ ರೂರಲ್ ಅಷ್ಟು ಆಕರ್ಷಕವಲ್ಲದಿದ್ದರೂ ಮ್ಯಾನೇಜ್‍ಮೆಂಟ್ ಎಂಬ ಕವಚ ಇತ್ತು. ಇರ್ಮಾದ ಜಾಹೀರಾತಿನ ಪ್ರಕಾರ ಕೋರ್ಸ್ ಮುಗಿದ ನಂತರ ತಿಂಗಳಿಗೆ ೧೨೦೦ ರೂಪಾಯಿಯ ಸಂಬಳದ ಕೆಲಸದ ಭರವಸೆ ಮತ್ತು ಓದುವಾಗ ತಿಂಗಳಿಗೆ ೬೦೦ ರೂಪಾಯಿಯ ಭತ್ತೆ ಕೊಡುವ ಮಾತಿತ್ತು. ನಾನು ಇರ್ಮಾ ಸೇರುವ ಬಗ್ಗೆ ಗಂಭೀರವಾಗಿ ಯೋಚಿಸಲು ಇಷ್ಟು ಸಾಕಾಗಿತ್ತು.

ಇರ್ಮಾ ಸೇರುವ ಪ್ರಕ್ರಿಯೆ ನಡೆಯುತ್ತಿರುವಾಗಲೇ ಪ್ರಧಾನ ಮಂತ್ರಿ ಶ್ರೀಮತಿ ಗಾಂಧಿ ಅಲ್ಲಿನ ಪ್ರಥಮ ಘಟಿಕೋತ್ಸವನ್ನ ಉದ್ದೇಶಿಸಿ ಮಾತನಾಡಿದ್ದನ್ನು ದೂರದರ್ಶನದಲ್ಲಿ ನೋಡಿದ್ದೆ. ಘಟಿಕೋತ್ಸವಕ್ಕೆ ಆನಂದ್‍ನಲ್ಲಿ ನಡೆಯುತ್ತಿದ್ದ ಯಾವುದೇ ಕಾರ್ಯಕ್ರಮದ ಶೈಲಿಯಲ್ಲಿ ಸಾವಿರಾರು ರೈತರು ಬಂದಿದ್ದದ್ದನ್ನು ವರದಿ ಮಾಡಲಾಗಿತ್ತು. ಇದೆಲ್ಲದರ ಅರ್ಥ ಇರ್ಮಾ ಇಂದು ತೆರೆದು ನಾಳೆ ಮುಚ್ಚುವಂತಹ ಜಾಗವಲ್ಲವೆಂದಾಗಿತ್ತು. ನನ್ನ ಆನಂದದ ಪ್ರಯಾಣ ಈ ಹಿನ್ನೆಲೆಯಲ್ಲಿ ನಾನು ಕೈಗೊಂಡಿದ್ದೆ.

ಆನಂದ್ ಸೇರಿದಾಗ ಮತ್ತೆ ಮಂಥನ್ ನೋಡುವ ಅವಕಾಶ ದೊರೆಯಿತು. ಹಾಗೂ ಆ ಚಿತ್ರ ನನಗೆ ಹೊಸ ಅರ್ಥಗಳನ್ನು ಒದಗಿಸಿತು. ನಾವು ಎನ್‍ಡಿಡಿಬಿ ಕ್ಯಾಂಪಸ್ಸಿನ 'ರೈತರ ಹಾಸ್ಟೆಲ್ನಲ್ಲಿ' ವಾಸ್ತವ್ಯ ಹೂಡಬೇಕೆಂದು ಕೇಳಿದಾಗ ಅಲ್ಲಿನ ವಸತಿ ಸಾಮಾನ್ಯದ್ದಿರಬಹುದೆಂದು ನಿರೀಕ್ಷಿಸಿದ್ದೆವು. ಆದರೆ ಆ ವಸತಿಗಳಲ್ಲಿ ಎಲ್ಲ ಆಧುನಿಕ ಸವಲತ್ತುಗಳಿದ್ದದ್ದು ಕಂಡು ಸಂತೋಷವಾಗಿತ್ತು. ಅಷ್ಟೇ ಅಲ್ಲ ಆಗ ಇರ್ಮಾದ ಅಧ್ಯಕ್ಷರಾದ ಕುರಿಯನ್ ಹೇಳಿದ್ದು ಈ ಮಾತುಗಳು: "ಮಹಾರಾಜರು ಲಾಯಗಳಲ್ಲಿ ಬದುಕುವುದಿಲ್ಲ. ನೀವುಗಳೆಲ್ಲ ನನ್ನ ಯುವರಾಜರು. ನನ್ನಂತಹ ಸಾವಿರಾರು ಕುರಿಯನ್‍ಗಳನ್ನು ಜಗತ್ತಿಗೆ ದೇಣಿಗೆಯಾಗಿ ನೀಡಲೆಂದೇ ನಾನು ಈ ಜಾಗ ಕಟ್ಟಿಸಿದ್ದೇನೆ. ನಿಮ್ಮಿಂದ ಆಗಬಹುದಾದ ಬದಲಾವಣೆಗಳನ್ನು ಊಹಿಸಿ ನೋಡಿ.....

ಕುರಿಯನ್ ಮಾತು ಮಾತ್ರವಲ್ಲ, ನಮ್ಮ ಮೇಷ್ಟರುಗಳ, ಎನ್‍ಡಿಡಿಬಿಯ ಅಧಿಕಾರಿಗಳ ವರ್ತನೆಯೂ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿತ್ತು. ಆ ಎರಡು ವರ್ಷಗಳಲ್ಲಿ ಕುರಿಯನ್ ನಮಗೆ ನೀಡಿದ ಕನಸನ್ನು ತಮ್ಮದೇ ರೀತಿಯಲ್ಲಿ ನನಸಾಗಿಸಲು ಪ್ರಯತ್ನಿಸಿದ [ಕಡೆಗೆ ಉಲ್ಫಾದವರ ಹಿಂಸೆಗೆ ಬಲಿಯಾದ] ಸಂಜಯ್ ಘೋಷ್, ಈ-ಚೌಪಾಲ್ ಬಗ್ಗೆ ಆಲೋಚಿಸಿದ ಶಿವಕುಮಾರ್ ಜೊತೆಯ ಒಡನಾಟದ ಅವಕಾಶಗಳನ್ನು ಆ ಜಾಗ ನನಗೆ ನೀಡಿತ್ತು. ಆ ದಿನಗಳಲ್ಲಿ ಸೋವಿಯತ್ ರಾಷ್ಟ್ರ ಇನ್ನೂ ಜೀವಂತವಾಗಿತ್ತು, ಎಡಪಂಥೀಯರಾಗಿರುವುದು, ಸಿಗರೇಟ್ ಸೇದುವುದು, ಜೋಳಿಗೆ ನೇತಾಡಿಸಿಕೊಂಡು ಓಡಾಡುವುದು ಸಹಜವೂ, ವೈಶಿಷ್ಟ್ಯಪೂರ್ಣವೂ ಆಗಿತ್ತು. ಜೋಳಿಗೆಯ ಮೇನೇಜ್‍ಮೆಂಟ್ ಆವೃತ್ತಿ ಅಂದರೆ ಜವಾಜಾದ ತೊಗಲಿನ ಜೋಳಿಗೆ.. ಅದರಲ್ಲಿ ಮ್ಯಾನೇಜ್‍ಮೆಂಟ್ ಓದಿನ, ಸಾಮಾಜಿಕ ಕಳಕಳಿಯ ಒಂದು ಅದ್ಭುತ ಮಿಶ್ರಣವನ್ನು ನಾವು ಕಾಣಬಹುದಿತ್ತು.

ನಮಗೆಲ್ಲಾ ಕುರಿಯನ್ ಅನಂತ ಸಾಧ್ಯತೆಗಳ ಪ್ರತೀಕವಾಗಿದ್ದರು. ಅತಿ ಕಷ್ಟಕರವಾದ ಪರಿಸ್ಥಿತಿಗಳಲ್ಲಿ ಆನಂದದಲ್ಲಿ ಉಳಿದು ಅಲ್ಲಿನ ಸಂಸ್ಥೆಯನ್ನು ಬೆಳೆಸಿದ, ಅವಶ್ಯಕತೆಯನ್ನು ಒಂದು ಅವಕಾಶದಂತೆ ಗ್ರಹಿಸಿ ಅದರಲ್ಲಿ ಉತ್ತೀರ್ಣರಾದ ವ್ಯಕ್ತಿಯಾಗಿ ನಮಗೆ ಕಂಡಿದ್ದರು. ಅವರ ನಡಾವಳಿಯಲ್ಲಿ ಅತಿರೇಕವಿತ್ತು, ಆತ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದರು ಮತ್ತು ಆತನ ಮಾತಿನ ತೀಕ್ಷ್ಣತೆಯನ್ನು ಕಂಡು ನಾವು ನಡುಗುತ್ತಿದ್ದೆವು. ಉಚ್ಚ ಜಾತಿಯಲ್ಲಿ ಹುಟ್ಟಿದ ಬ್ರಾಹ್ಮಣ ಹಾಲಿನ ಸರಬರಾಜಿಗೆ ದಲಿತ-ಹರಿಜನನ ಹಿಂದೆ ಕ್ಯೂನಲ್ಲಿ ನಿಂತರೆ ಅದರ ಪ್ರತೀಕವೇನು? ಎಂದು ಗುಡುಗಿ "ಇದು ಜಾತಿವ್ಯವಸ್ಥೆಯ ಕೆನ್ನೆಗೆ ತೀಡಿದಂತಲ್ಲವೇ?" ಎಂದು ಕೇಳಿದಾಗ ನಮ್ಮ ಕಣ್ಣುಗಳಲ್ಲಿ ನೀರು ಬಂದಿತ್ತು.

ಈ ಕೆಳಗಿನ ಘಟನೆಯ ಬಗ್ಗೆ ನಾನು ಕೇಳಿದ್ದೆ. ಕೇರಳದ ಅರ್ಥಶಾಸ್ತ್ರದ ಪ್ರೊಫೆಸರ್ ಒಬ್ಬರು [ಹೆಸರು ಸಿ.ಟಿ. ಕುರಿಯನ್] ತಮ್ಮನ್ನು ಡಾ. ಕುರಿಯನ್‍ಗೆ ಪರಿಚಯ ಮಾಡಿಕೊಂಡರಂತೆ: “ಹಲೋ ನಾನು ಸಿ.ಟಿ.ಕುರಿಯನ್" ಅದಕ್ಕೆ ಈತನ ಉತ್ತರ "ನಾನು ವಿ.ಕುರಿಯನ್.. ವಿಲೇಜ್ ಕುರಿಯನ್" ಅಂತ ಸಿಟಿಯ ಮೇಲೆ ಶ್ಲೇಶೆ ಒಗೆದರಂತೆ.

ಇರ್ಮಾದಲ್ಲಿ ವಿದ್ಯಾಭ್ಯಾಸ ಮಾಡಿ, ನಂತರ ಗ್ರಾಮೀಣ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸ ಮಾಡಲು ನಿರ್ಧರಿಸಿದ ನನಗೆ ಕುರಿಯನ್ ಅವರ ಛತ್ರಛಾಯೆ ಎರಡು ವರ್ಷಗಳಿಗೆ ಸೀಮಿತವಾಗಲಿಲ್ಲ. ನಾವು ಅಲ್ಲಿ ಸೇರಿದಾಗ ಕುರಿಯನ್ ಹೇಳಿದ್ದು ನೆನಪಿದೆ: "ಇಲ್ಲಿಂದ ಪಾಸಾದವರಲ್ಲಿ ಕೇವಲ ೫% ವಿದ್ಯಾರ್ಥಿಗಳು ಗ್ರಾಮೀಣ ಕ್ಷೇತ್ರದಲ್ಲಿ ಕೆಲಸ ಮಾಡಲು ಮುಂದುವರೆದರೆ ಸಾಕು ನಾನು ಈ ಸಂಸ್ಥೆಯನ್ನು ಸ್ಥಾಪಿಸಿದ್ದರ ಉದ್ದೇಶ ಸಫಲಗೊಂಡಂತೆಯೇ." ನಾನು ಆ ೫% ವ್ಯಕ್ತಿಗಳಲ್ಲಿ ಒಬ್ಬ ಎಂದು ಅಂದೂ ಇಂದೂ ನಾನು ನಂಬಿದ್ದೇನೆ. ನಾನಷ್ಟೇ ಅಲ್ಲ, ನನ್ನ ಸಮಯದಲ್ಲಿ ಓದಿದ ೫೦%ದಷ್ಟು ಮಂದಿ ಇನ್ನೂ ಗ್ರಾಮೀಣ/ವಿಕಾಸ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆಂದು ತಿಳಿದು ಕುರಿಯನ್‍ಗೆ ಖುಷಿಯಾದೀತು. ೯೦ರ ದಶಕದಲ್ಲಿ ನಾನು ಮತ್ತೆ ಇರ್ಮಾಗೆ ಹೋಗಿ ಮುಂದಿನ ಪೀಳಿಗೆಯ ಹುಡುಗರಿಗೆ ಆರು ವರ್ಷಗಳ ಕಾಲ ಪಾಠ ಮಾಡುತ್ತಾ ನನ್ನ ಇರ್ಮಾದ ಜೊತೆಗಿನ ಸಂಬಂಧವನ್ನು ತಾಜಾ ಆಗಿ ಇಟ್ಟುಕೊಂಡಿದ್ದೆ.

ಹೀಗಾಗಿ ಇತ್ತೀಚೆಗೆ ಪ್ರಕಟಗೊಂಡ ಕುರಿಯನ್ ಆತ್ಮಕಥನ ಓದಿದ್ದರಿಂದ ನನಗೆ ನನ್ನ ನೆನಪುಗಳನ್ನು ಮರುಜೀವಿಸುವ ಅವಕಾಶವಾಯಿತು. ಆತನ ಜೀವನದ ಅನೇಕ ಘಟನೆಗಳೂ, ವ್ಯಕ್ತಿತ್ವದಲ್ಲಿನ ವಿರೋಧಾಭಾಸಗಳೂ ನನಗೆ ಕಂಡವು. ಕುರಿಯನ್ ತಮ್ಮ ಜೀವನದಲ್ಲಿ ಎಷ್ಟು ನೇರವಾಗಿ ಮಾತಾಡುತ್ತಿದ್ದರೋ ಅಷ್ಟೇ ನೇರವಾಗಿ ಈ ಪುಸ್ತಕವನ್ನು ಬರೆದಿದ್ದಾರೆನ್ನಿಸಿತು. ಬಹಳ ಮಟ್ಟಿಗೆ ಈ ಪುಸ್ತಕ ಅವರ ವೃತ್ತಿಜೀವನಕ್ಕೆ ಸಂಬಂಧಿಸಿದ್ದು. ಅವರ ಖಾಸಗೀ ಜೀವನದ ವಿವರಗಳು ಇದರಲ್ಲಿ ವಿರಳ. ಬಹುಶಃ ಅವರ ಉದ್ದೇಶವೂ ಅದೇ ಆಗಿತ್ತೇನೋ. ಒಂದು ಅತ್ಮೀಯ ಟಿಪ್ಪಣಿಯೊಂದಿಗೆ ಈ ಪುಸ್ತಕವನ್ನು ಆತ ತಮ್ಮ ಮೊಮ್ಮಗನಿಗೆ ಅರ್ಪಿಸಿದ್ದಾರೆ. ಆದರೆ ಆ ಟಿಪ್ಪಣಿಯಲ್ಲೂ ಕುರಿಯನ್ ತಮ್ಮ ದೃಷ್ಟಿಯನ್ನು ತಮ್ಮ ಮೇಲೆಯೇ ಕೇಂದ್ರೀಕರಿಸುವುದನ್ನು ಮರೆಯುವುದಿಲ್ಲ. ಕುರಿಯನ್ ಅಂದರೆ ಅದೇಯೇ -- ಯಾವಾಗಲೂ ಸಹಜಕ್ಕಿಂತ ದೊಡ್ಡದಾಗಿ, ತಮಗಿಷ್ಟಬಂದಂತೆ ತಮ್ಮ ಶರತ್ತಿನ ಮೇಲೆ ಜೀವನವನ್ನು ಕಂಡ, ಜೀವಿಸಿದ ವ್ಯಕ್ತಿ. ಪುಸ್ತಕ ಪ್ರಾರಂಭವಾಗುವುದೇ ಪತ್ರಕರ್ತರೊಬ್ಬರು ಕೇಳುವ ಕುರಿಯನ್ ಅವರೇ ನಿಮ್ಮ ಮುಂದಿನ ಯೋಜನೆಯೇನು ಎಂಬ ಪ್ರಶ್ನೆಯಿಂದ. ಅದಕ್ಕೆ ಕುರಿಯನ್ ಕೊಡುವ ಉತ್ತರ: ನನ್ನ ವಯಸ್ಸಿನವರಿಗೆ ಹೆಚ್ಚು ಭವಿಷ್ಯವಿಲ್ಲ. ಬರೀ ಚರಿತ್ರೆ ಮಾತ್ರ. ಹೀಗೆ ಹೇಳಿದ ವ್ಯಕ್ತಿ ಅದನ್ನು ನಿಜಕ್ಕೂ ನಂಬಿ ಹೇಳಿದರೇ, ಅಥವಾ ಪತ್ರಕರ್ತರಿಗೆ ಇಷ್ಟವಾಗುವ ತಲೆಬರಹವಾಗುವಂತಹ ಅರ್ಥವಿಲ್ಲದ ಒಣ ಮಾತು ಮಾತ್ರ ಅದಾಗಿತ್ತೇ?

ನಮ್ಮ ದೇಶಕ್ಕೆ ಆ ಕಾಲಕ್ಕೆ ಕುರಿಯನ್ ಅವರ ಅವಶ್ಯಕತೆಯಿತ್ತು. ಹಾಗೂ ಆತ ತಮ್ಮ ಪಾತ್ರವನ್ನು ಸೂಕ್ತವಾಗಿಯೇ ನಿಭಾಯಿಸಿದರು. ಆತನ ಜೀವನ ಚದುರಂಗದಲ್ಲಿ ನಿರಂತರವಾಗಿ ನಡೆಸಿದ ಒಂದೊಂದು ಚಲನೆಯೂ ದೇಶದ ಹಾಲು ಉತ್ಪಾದಕರ ಹಿತವನ್ನಿಟ್ಟುಕೊಂಡೇ ನಡೆಸಿದ್ದಾಗಿತ್ತು. ಈ ಚದುರಂಗದ ಚಲನಗಳು ಮಾರುಕಟ್ಟೆಯಲ್ಲಿ ಇತರ ಖಾಸಗೀ ಉತ್ಪಾದಕರೊಂದಿಗೆ ಪೈಪೋಟಿ ನಡೆಸಲು ಆತ ಮಾಡಿರಬಹುದು, ಇಲ್ಲವೇ ಅವರು ಹೆಚ್ಚು ಪ್ರಾಮುಖ್ಯತೆ ಗಳಿಸದಂತೆ ತಮಗೆ ಮಾತ್ರ ಲಭ್ಯವಿದ್ದ ಸರಕಾರದ ಬಲದಿಂದ ಅವರಿಗೆ ಅಡಚಣೆಗಳನ್ನು ಉಂಟುಮಾಡುವುದರಲ್ಲಿ ಆ ಚಲನೆಗಳನ್ನು ಬಳಸಿರಬಹುದು. ಆತ ಜೀವನದುದ್ದಕ್ಕೂ ಸರಕಾರವನ್ನು ವಿಮರ್ಶಿಸುತ್ತಾ, ಸರಕಾರಿ ನೌಕರರನ್ನು ಗೇಲಿ ಮಾಡುತ್ತಾ, ಸ್ವಾಯತ್ತತೆಯ ಸೋಗು ಹಾಕುತ್ತಾ ಸರಕಾರದೊಂದಿಗೆ ಇಲಿಬೆಕ್ಕಿನಾಟ ಆಡಿದರು. ಅದೇ ಸಮಯಕ್ಕೆ ಸರಕಾರದ ಸವಲತ್ತುಗಳನ್ನು ಉಪಯೋಗಿಸಿ ಪೈಪೋಟಿಯನ್ನು ನಪುಂಸಕರನ್ನಾಗಿಸಲು ಪ್ರಯತ್ನವನ್ನೂ ಮಾಡಿದ್ದರು. ಇಡೀ ದೇಶ ಲೈಸೆನ್ಸ್-ಪರ್ಮಿಟ್ ಗಳಿಂದ ಮುಕ್ತಿಪಡದ ಕಾಲದಲ್ಲೂ ಸಕ್ಕರೆ ಮತ್ತು ಹಾಲು [ಮಿಲ್ಕ್ ಅಂಡ್ ಮಿಲ್ಕ್ ಪ್ರಾಡಕ್ಟ್ಸ್ ಆರ್ಡರ್ ಮೂಲಕ] ಉತ್ಪನ್ನದ ವ್ಯವಸ್ಥೆಯ ಎರಡು ಲಾಬಿಗಳು ಸರಕಾರದ ರಕ್ಷಾಕವಚವನ್ನು ಧರಿಸಿನಿಂತಿದ್ದವು. ಈ ಎರಡೂ ಲಾಬಿಗಳು ಸಹಕಾರೀ ರಂಗಕ್ಕೆ ಸೇರಿದ್ದವೆಂಬುದರಲ್ಲಿ ಆಶ್ಚರ್ಯವಿಲ್ಲ.

ಕುರಿಯನ್ ಉದಾತ್ತ ಮನೋಭಾವದ ನಾಯಕರಾದ ವಲ್ಲಭಭಾಯಿ ಪಟೇಲ್, ಮೊರಾರ್ಜಿ ದೇಸಾಯಿ ಮತ್ತು ತ್ರಿಭುವನದಾಸ್ ಪಟೇಲರ ಛತ್ರಛಾಯೆಯಲ್ಲಿ ಕೆಲಸ ಮಾಡಲು ಆರಂಭಿಸಿದ್ದವರು. ಇವರುಗಳಲ್ಲಿ ಮೊದಲಿಬ್ಬರು ರಾಷ್ಟ್ರಮಟ್ಟದ ರಾಜಕೀಯದಲ್ಲಿ ಇದ್ದರಾದ್ದರಿಂದ ಅವರುಗಳ ದೃಷ್ಟಿ ಸಹಜವಾಗಿಯೇ ಗುಜರಾತಿಗಿಂತ ಹಿರಿದಾಗಿತ್ತು.
 ತ್ರಿಭುವನದಾಸ್ ಪಟೇಲರ ಮಹತ್ವ ತಮ್ಮ ಮೇಲೆ ನಂಬಿಕೆಯಿಟ್ಟ ರೈತರ ಹಿತ ಕಾಪಾಡುವುದಲ್ಲದೇ, ಅದನ್ನು ಸಮಂಜಸವಾಗಿ ನಿರ್ವಹಿಸಲು ತಮಗಿರುವ ಮಿತಿಯನ್ನೂ ಕುರಿಯನ್‍ರಲ್ಲಿರುವ ಗುಣವನ್ನು ಗುರುತಿಸುವುದರಲ್ಲಿತ್ತು. ಆತನ ಕೆಳಗೆ ಬೆಳೆದ ಕುರಿಯನ್ ಈ ಗುಣವನ್ನು ಮಿತವಾಗಿ ತಮ್ಮದಾಗಿಸಿಕೊಂಡಿದ್ದರು. ಉದಾಹರಣೆಗೆ ಹಾಲು-ಉತ್ಪನ್ನಗಳ ತಾಂತ್ರಿಕ ಅಂಶಕ್ಕೆ ಅನ್ವಯಿಸುವಂತೆ ಅವರು ತಮ್ಮ ಎಲ್ಲ ನಂಬುಗೆಯನ್ನು ಅವರ ಸಹಚರರಾದ ದಲಾಯಾರಲ್ಲಿ ಹೂಡಿದ್ದರು. ಆದರೆ ದಲಾಯಾರನ್ನು ಬಿಟ್ಟರೆ ತಮ್ಮೊಂದಿಗೆ ಕೆಲಸ ಮಾಡಿದ ಬೇರಾರ ಹೆಸರನ್ನೂ ಕುರಿಯನ್ ತಮ್ಮ ಪುಸ್ತಕದಲ್ಲಿ ಎತ್ತುವುದಿಲ್ಲ. ಒಂದು ಉದ್ದನೆಯ ಮ್ಯಾರಥಾನ್ ರೇಸನ್ನು ಒಂಟಿಯಾಗಿ ಓಡಿದ ಖಿಲಾಡಿಯಂತೆ ಕುರಿಯನ್ ಕಾಣುತ್ತಾರೆ. ರೇಸಿನಂತ್ಯದಲ್ಲಿ ಅಮೃತಾ ಪಟೇಲ್‍ಗೆ ಅವರು ಖೊ ಕೊಟ್ಟಂತೆ ಕಾಣುತ್ತದೆ. ಆದರೆ ಖೊ ಕೊಟ್ಟಕೂಡಲೇ ಕುರಿಯನ್ ಪಕ್ಕದಲ್ಲಿ ನಿಂತು ಆಕೆಯ ಓಟದಬಗ್ಗೆ ಕಾಮೆಂಟರಿ ಕೊಡುತ್ತಾ ನಿಂತುಬಿಡುತ್ತಾರೆ. ಸ್ವಲ್ಪ ಮಟ್ಟಿಗೆ ರೇಡಿಯೋದಲ್ಲಿ ಲಾಲಾ ಅಮರ್ನಾಥ್ ವಿಶೇಷ ಕಾಮೆಂಟರಿ ಕೊಟ್ಟು ಚರಿತ್ರೆಯಲ್ಲಿ ಶರಣು ಪಡೆದಂತೆ ಆತನೂ ಚರಿತ್ರೆಯ ಮೊರೆ ಹೋಗುತ್ತಾರೆ.

ತ್ರಿಭುವನದಾಸ್ ಪಟೇಲ್ ಅಮುಲ್‍ನ ಅಧ್ಯಕ್ಷರಾದದ್ದು ಹೇಗೆಂಬುದರ ಬಗ್ಗೆ ಒಂದು ಆಸಕ್ತಿಕರ ಘಟನೆ ಪುಸ್ತಕದಲ್ಲಿದೆ. ಹಾಲು ಉತ್ಪಾದಕರ ಒಂದು ಸಭೆಯಲ್ಲಿ ಮೊರಾರ್ಜಿಭಾಯಿ ಈ ಸಂಸ್ಥೆಯ ಅಧ್ಯಕ್ಷರಾಗಲು ಯಾರು ತಯಾರಿದ್ದೀರಿ ಅಂತ ಕೇಳಿದರಂತೆ. ಕೆಲ ಜನ ಕೈಯೆತ್ತಿದಾಗ್ಯೂ ತ್ರಿಭುವನದಾಸ್ ಮಾತ್ರ ಸುಮ್ಮನೆ ಮೂಲೆಯಲ್ಲಿ ಕೂತಿದ್ದರಂತೆ. ಮೊರರ್ಜಿಭಾಯಿ ಆತನನ್ನು ಕೇಳಿದಾಗ ತ್ರಿಭುವನದಾಸ್ ಇಲ್ಲ ನನಗೆ ಆಸಕ್ತಿಯಿಲ್ಲ ಅಂತ ಹೇಳಿದರಂತೆ. ತಕ್ಷಣ ಮೊರಾರ್ಜಿಭಾಯಿ ನೀನೇ ಅಧ್ಯಕ್ಷನಾಗು ಅಂತ ಫರ್ಮಾನು ಕೊಟ್ಟರಂತೆ. ಕುರಿಯನ್ ಇದನ್ನು ವಿವರಿಸುತ್ತಾ "ಅಧ್ಯಕ್ಷರಾಗಲೇಬೇಕೆಂದು ತಪನವಿದ್ದ ಮನುಷ್ಯನಿಗೆ ಯಾವುದೋ ಒಂದು ಪೂರ್ವನಿರ್ಧಾರಿತ ಆಸಕ್ತಿಯಿರಬಹುದು ಅನ್ನಿಸಿರಬಹುದು" ಎನ್ನುತ್ತಾರೆ. ಕುರಿಯನ್ ತಮ್ಮ ಜೀನನವನ್ನು ಈ ವಿರೋಧಾಭಾಸದೊಂದಿಗೇ ಜೀವಿಸಿದ್ದಾರೆ. ಒಂದು ಬದಿಯಲ್ಲಿ ರೈತರ ಜೀವನದ ವಿಧಿಯನ್ನು ಅವರುಗಳೇ ನಿರ್ಧರಿಸಿಕೊಳ್ಳಲು ಅನುವು ಮಾಡಿ ಪ್ರಜಾಸತ್ತಾತ್ಮಕ ಸಹಕಾರ ಸಂಘಗಳನ್ನು ಅವರಿಗೆ ಒದಗಿಸಿಕೊಡಬೇಕೆಂಬ ನಂಬುಗೆಯಾದರೆ, ಮತ್ತೊಂದೆಡೆ ಅವರನ್ನು ಇತರ ಸ್ವಹಿತಾಸಕ್ತಿಯಿದ್ದ ದುಷ್ಟರಿಂದ ರಕ್ಷಿಸಬೇಕೆಂಬ ತಹತಹ. ಗುಜರಾತ್ ಹಾಲು ಮಹಾಮಂಡಲದ ಅಧ್ಯಕ್ಷ ಸ್ಥಾನವನ್ನು ಕುರಿಯನ್ ಆಕ್ರಮಿಸಿದ್ದದ್ದು‌ಒಂದು ವಿಚಿತ್ರ ವಿರೋಧಾಭಾಸದ ಸಂತುಲನವಾಗಿತ್ತು. ಕಾರಣ ಆತನಿಗೆ ಹಾಲು ಉತ್ಪಾದಕರ ವಿಷಯದಲ್ಲಿ ಯಾವ ಸ್ವಾರ್ಥಪೂರ್ಣ ಆಸಕ್ತಿ ಇರಲಿಲ್ಲ, ಅದೇ ಸಮಯಕ್ಕೆ ಸಹಕಾರಿ ಸೂತ್ರಗಳ ಪ್ರಕಾರ ಪ್ರಜಾಸತ್ತಾತ್ಮಕವಾಗಿ ಆ ಸ್ಥಾನವನ್ನು ಒಬ್ಬ ಹಾಲು ಉತ್ಪಾದಕ ರೈತ ಆಕ್ರಮಿಸಬೇಕಿತ್ತು ಅನ್ನುವುದೂ ನಿಜ. ರೈತನಿಗೆ 'ಒಳ್ಳೆಯದು ಯಾವುದು' ಮತ್ತು 'ಆ ಬಾಧ್ಯತೆಯನ್ನು ನಿರ್ವಹಿಸಲು ಆತನ ತಯಾರಿ' ಯ ನಡುವಿನ ದ್ವಂದ್ವವೇ ಕುರಿಯನ್‍ರ ವತ್ತಿ ಜೀವನವನ್ನು ನಿರ್ದೇಶಿಸಿದೆ. ಇದು ಪ್ರತಿ ಸರಕಾರಿ ಅಧಿಕಾರಿಯೂ ಬಲಹೀನವರ್ಗದವರಿಗೆ ಹಕ್ಕುಗಳನ್ನು ಒದಗಿಸಲು ಬಯಸಿದಾಗ ಎದುರಿಸುವ ದ್ವಂದ್ವವೇ ಹೌದು. ಈ ನಿಟ್ಟಿನಲ್ಲಿ ಕುರಿಯನ್‍ರ ಪ್ರತಿಕ್ರಿಯೆ [ಅವರು ಸರಕಾರದಾಚೆ ಸರಕಾರದಿಂದ ದೂರ ಎನ್ನುತ್ತಾ ಇದ್ದರೂ] ಇತರ ಒಳ್ಳೆಯ ಸರಕಾರಿ ಅಧಿಕಾರಿಯ ಪ್ರತಿಕ್ರಿಯಗಿಂತ ಭಿನ್ನವಾಗಿರಲಿಲ್ಲ ಎಂಬುದು ಮುಖ್ಯ.

ಕುರಿಯನ್ ಜೀವನ ಸುಖಸಮೃದ್ಧಿಗಳನ್ನು ಎಂದೂ ಕೈ ಬಿಟ್ಟವರಲ್ಲ. ಅದಕ್ಕೆ ಅವರು ಅರ್ಹರಾಗಿದ್ದರು ಅನ್ನುವುದರಲ್ಲೂ ಅನುಮಾನವಿಲ್ಲ. ನಾವು ಅಲ್ಲಿ ವಿದ್ಯಾರ್ಥಿಗಳಾಗಿದ್ದಗ ಆಗಾಗ ಹೋಗಿ ಆತನ ಕಾರಿನ ದರ್ಶನ ಮಾಡಿಕೊಂಡು ಬರುತ್ತಿದ್ದೆವು. ಆಗಿನ ದಿನಗಳಲ್ಲಿ ಆತನ ಬಳಿ ಪೂಜೋ ಕಾರಿತ್ತು. [ಕನ್ನಡದ ಸಂದರ್ಭದಲ್ಲಿ ಇಂಥದೇ ಕಾರನ್ನ ಇಟ್ಟಿದ್ದವರು ಕವಿ ರಾಮಚಂದ್ರ ಶರ್ಮ. ಪೂಜೋ ಅನ್ನುವುದನ್ನ ಹೇಗೆ ಉಚ್ಚಾರ ಮಾಡಬೇಕೆನ್ನವುದನ್ನ ಅವರು ತುಟಿ ಮುಂದೆ ಮಾಡಿ ಗ್ರಾಫಿಕ್‍ ಆಗಿ ವಿವರಿಸುತ್ತಿದ್ದರು.] ಅದರ ಹೆಡ್‍ಲೈಟಿಗೂ ವೈಪರ್ ಇತ್ತು ಅನ್ನುವುದನ್ನ ನಾವು ಬೆರೆಗುಗಣ್ಣುಗಳಿಂದ ನೋಡುತ್ತಿದ್ದೆವು.

ಕುರಿಯನ್‍ ಪುಸ್ತಕದಲ್ಲಿ ವಿವರಿಸಿರುವ ಮೂರು ಘಟನಗಳು ಅವರ ಜೀವನ ಶೈಲಿಗೆ ಕನ್ನಡಿಹಿಡಿದಂತಿದೆ. ಮೊದಲಿಗೆ ಆತ ಆನಂದದಲ್ಲಿ ತಮ್ಮ ಆರಂಭದ ದಿನಗಳ ಬಗ್ಗೆ ಮಾತಾಡುತ್ತಾರೆ [ಪುಟ.೨೧] ಅಲ್ಲಿ ಆತನಿದ್ದ ಒಂದು ಪುಟ್ಟ ಗ್ಯಾರೇಜಿನಲ್ಲಿ ಅವರ ಅಡುಗೆಯವ ಮತ್ತೆ ಬಟ್ಲರ್ ಆದ ಆಂಥೊನಿ ಮಲಿನವಾಗದ ಬಿಳಿ ಬಟ್ಟೆ ತೊಟ್ಟು ದಿನವೂ ಊಟವನ್ನು ಉಣಬಡಿಸುತ್ತಾನೆ. ಗ್ಯಾರೇಜಿನಲ್ಲಿ ಕಾಣಬಹುದಾದ ದೃಶ್ಯ ಇದಂತೂ ಅಲ್ಲವೇ ಅಲ್ಲ. ಆದರೆ ಕುರಿಯನ್ ಇರುವುದೇ ಹಾಗೆ. ಎರಡನೆಯದು ಅದೇ ಪುಟದಲ್ಲಿ "ಆಗಿನ ದಿನಗಳಲ್ಲಿ ನಾನು [ಇದೆಲ್ಲದರಿಂದ ದೂರವಾಗಿ] ಆಗಾಗ ಮುಂಬೈಗೆ ಹೋಗಿ ತಾಜ್ ಹೋಟೇಲಿನಲ್ಲಿ ನಾಲ್ಕಾರು ದಿನ ಆರಾಮವಾಗಿದ್ದು ಬರುತ್ತಿದ್ದೆ" ಅನ್ನುತ್ತಾರೆ. ಮೂರನೆಯ ಘಟನೆಯೆಂದರೆ ಆತ ಎನ್‍ಡಿಡಿಬಿಯ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಾಗ ಅಮೃತಾ ಪಟೇಲ್ ಅಧ್ಯಕ್ಷರ ಕಾರನ್ನು ಗೌರವದ ದ್ಯೋತಕವಾಗಿ ಸ್ವೀಕರಿಸಬೇಕೆಂದು ಹೇಳುವುದು. ಇದಕ್ಕೆ ಕಾರಣ ಒಂದು ಸಣ್ಣ ಘಟನೆ - ಕುರಿಯನ್ ಬೇರೂಂದು ಕಾರಿನಲ್ಲಿ ಆಫೀಸಗೆ ಹೋದಾಗ ಸೆಕ್ಯೂರಿಟಿಯವರು ತಮ್ಮನ್ನು ಹೇಗೆ ಗುರುತಿಸಲಿಲ್ಲ ಎಂಬುದನ್ನು ಮೆಲುಕು ಹಾಕುತ್ತಾರೆ.

ಇದಲ್ಲದೇ ನನಗೆ ಮತ್ತೊಂದು ಘಟನೆಯೂ ನೆನಪಾಗುತ್ತದೆ. ಒಮ್ಮೆ ಕುರಿಯನ್ ನಮ್ಮನ್ನು ಉದ್ದೇಶಿಸಿ ಮಾತಾಡಲು ಇರ್ಮಾಕ್ಕೆ ಬಂದರು. ಅವರು ಬರುವುದಕ್ಕೆ ಮುಂಚೆ ಆ ಕೋಣೆಯನ್ನು ಮಲ್ಲಿಗೆಯ ಸುವಾಸನೆಯ ಪನ್ನೀರಿನಿಂದ ಸಿಂಪಡಿಸಲಾಯಿತು. ಆತ ಒಳಬಂದಕೂಡಲೇ ಮೂಗಿನ ಹೊಳ್ಳೆಗಳನ್ನು ಅಗಲ ಮಾಡಿ ಸುತ್ತಲೂ ನೋಡಿ ಈ ಜಾಗ ಸೂಳೆಯರ ಕೋಠಿಯಂತಿದೆ" ಅಂತಂದು ಅದರ ಪರಿಣಾಮ ಏನಿರಬಹುದೆಂದು ಒಮ್ಮೆ ಇಡೀ ಕೋಣೆಯನ್ನು ಅವಲೋಕಿಸಿ ನಂತರ "ಕೋಠಿಗಳ ವಾಸನೆಯ ಬಗ್ಗೆ ನಿಮಗೇನು ಗೊತ್ತು ಬಡಪಾಯಿ ಮೇಷ್ಟರುಗಳು, ನನ್ನನ್ನು ಕೇಳಿ ಹೇಳುತ್ತೇನೆ".. ಅಂದರು. ಇದು ಕುರಿಯನ್ ಶೈಲಿ. ಎಲ್ಲವನ್ನೂ ಒಂದು ನಾಟಕೀಯ ಸ್ವರೂಪಕ್ಕಾಗಿ ಮಾಡುತ್ತಿದ್ದರು. ತಮ್ಮ ಶ್ರೋತೃಗಳು ಬುದ್ಧಿಜೀವಿಗಳಾಗಲಿ, ಸಾಮಾನ್ಯರಾಗಲೀ, ದೇಶಿಯಾಗಲೀ, ವಿದೇಶಿಯಾಗಲೀ, ರಾಜಕಾರಣಿಗಳಾಗಲೀ, ಅಧಿಕಾರಿಗಳಾಗಲೀ ಶೈಲಯೊಂದೇ.. ಪುಸ್ತಕದಲ್ಲಿರುವ ಕೆಲ ಭಾಗಗಳು ಈ ಕೆಳಕಂಡಂತಿವೆ:

  • ನಾನು ಆತನಿಗೆ ಮಂತ್ರಿಗಳ ಕೋಣೆಯಲ್ಲಿಯೇ ಹೇಳಿದೆ: ಸೂಳೆಮಗನೇ ಇಲ್ಲಿ ಬಂದು ಮಂತ್ರಿಗಳ ಮುಂದೆ ಸುಳ್ಳು ಹೇಳುತ್ತೀಯಾ.. ನಾನು ನಿನ್ನ ಬೀಜ ಕತ್ತರಿಸಿಬಿಡುತ್ತೇನೆ.[ಪುಟ.೭೫]
  • [ಐ‌ಐ‌ಎಂ ಅಹಮಾದಾಬಾದ್‍ನ ಬೋರ್ಡ್ ಮೀಟಿಂಗಿನಲ್ಲಿ ಅಲ್ಲಿನ ವಿದ್ಯಾರ್ಥಿಗಳು ಗ್ರಾಮೀಣ ಕ್ಷೇತ್ರದಲ್ಲಿ ಯಾಕೆ ಕೆಲಸ ಮಾಡುವುದಿಲ್ಲ ಎಂಬ ಅಂಶ ಚರ್ಚೆಯಾಗುತ್ತಿರುವಾಗ] ಒಬ್ಬ ಮಹಾನುಭಾವರು ತನ್ನ ಬಾಯಿಂದ ಸಿಗಾರ್ ತೆಗೆದು ನನ್ನತ್ತ ದುರುಗುಟ್ಟಿ ವ್ಯಂಗ್ಯದಿಂದ 'ಹಾಗಾದರೆ ಡಾ.ಕುರಿಯನ್ ನಮ್ಮ ಹುಡುಗರು ಹೋಗೆ ಹಸುವಿನ ಹಾಲು ಹಿಂಡಬೇಕೆನ್ನುವುದು ನಿಮ್ಮ ಉದ್ದೇಶವೇ?' ಅಂತ ಕೇಳಿದ. ನಾನು ಆತನ ದೃಷ್ಟಿಯನ್ನು ಆತನಿಗೇ ಮರುಳಿಸಿ 'ಇಲ್ಲ ಅವರಿಗೆ ಸಿಗಾರ್ ಚೀಪುವುದು ಹೇಗಂತ ಕಲಿಸುವುದನ್ನೇ ಮುಂದುವರೆಸಿ' ಅಂದೆ. [ಪುಟ ೨೧೨]

ನಮ್ಮ ಘಟಿಕೋತ್ಸವ ಸಂದರ್ಭದಲ್ಲಿ, ಸಾವಿರಾರು ರೈತರ ಎದುರು ನಮ್ಮನ್ನುದ್ದೇಶಿಸಿ ಸ್ವಲ್ಪ ಇಂಗ್ಲಿಷ್ ಸ್ವಲ್ಪ ಹಿಂದಿಯಲ್ಲಿ ಮಾತಾಡಿದ್ದು ಮುಖ್ಯ ಅತಿಥಿ ಉಪ ರಾಷ್ಟ್ರಪತಿ ಶ್ರೀ ಹಿದಾಯತುಲ್ಲಾ. ಆದರ ಕುರಿಯನ್‍ಗೆ ಮಾತ್ರ ತಮ್ಮ ಭಾಷಣದ ಗುಜರಾತಿ ಅನುವಾದ ಯಾರಿಂದಲೋ ಓದಿಸುವ ಭಾಗ್ಯ!

ಕುರಿಯನ್ ಮತ್ತವರ ಶೈಲಿಯೆಂದರೆ ಇದೇನೆ. ಆತನ ದೃಷ್ಟಿಯಲ್ಲಿ ಆತನೆಂದೂ ಸೋಲಲು ಸಾಧ್ಯವೇ ಇರಲಿಲ್ಲ. ಆತನ ಪ್ರಕಾರ ಎಣ್ಣೆ ಬೀಜದ ಕ್ಷೇತ್ರದಲ್ಲಿ ಮಾಡಿದ ಕೆಲಸವೂ ಫಲಕಾರಿಯೇ, ಹಣ್ಣು ತರಕಾರಿ ಮಾರುಕಟ್ಟೆಯಲ್ಲಿ ಮಾಡಿದ ಕೆಲಸವೂ ಫಲಕಾರಿಯೇ, ಅರಣ್ಯದಕ್ಷೇತ್ರದಲ್ಲಿ ಮಾಡಿದ ಕೆಲಸವೂ ಫಲಕಾರಿಯೇ..ಆತ ಸೋಲೊಪ್ಪುವುದು ಒಂದೇ ಕ್ಷೇತ್ರದಲ್ಲಿ - ಅದು ಉಪ್ಪು ತಯಾರಿಸುವವರನ್ನು ಸಂಘಟಿಸುವ ಕ್ಷೇತ್ರದಲ್ಲಿ ಮಾತ್ರ. ಮಾತಿನ ಸಂಭ್ರಮದಲ್ಲಿ ಯುದ್ಧಗಳನ್ನು ಗೆಲ್ಲುವ ಕುರಿಯನ್ ಎಷ್ಟೋಬಾರಿ ತಮ್ಮದೇ ವಿರೋಧಾಭಾಸವನ್ನು ಗುರುತಿಸುವದರಲ್ಲಿ ವಿಫಲರಾಗುತ್ತಾರೆ. ಪುಸ್ತಕದ ಕೆಲ ಭಿನ್ನ ಭಾಗಗಳನ್ನು ನೋಡಿ:

  • ದೆಹಲಿಯಲ್ಲಿ ಫ್ಲೈಯೋವರ್ ಕಟ್ಟುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಹಳ್ಳಿಗಳನ್ನು ತಲುಪುವುದಕ್ಕೆ ರಸ್ತೆಗಳಿಲ್ಲದಿದ್ದಾಗ ಫ್ಲೈ‌ಒವರ್ ಕಟ್ಟುವುದು ಸಮರ್ಪಕವಲ್ಲ. ದೆಹಲಿಯಲ್ಲಿ ಅಂದವಾದ ಫೌಂಟನ್ಗಳನ್ನು ಕಟ್ಟುವುದೂ, ಬಣ್ಣದ ದೀಪ ಹಾಕುವುದರಲ್ಲೇನೂ ತಪ್ಪಿಲ್ಲ. ಎಷ್ಟಾದರೂ ದೆಹಲಿ ಸುಂದರವಾಗಿರಬೇಕು. ಆದರ ನಮ್ಮ ಹಳ್ಳಿಗಳಲ್ಲಿ ಕುಡಿಯಲು ನೀರಿಲ್ಲದಿದ್ದಾಗ ಇದು ನ್ಯಾಯವಲ್ಲ... [ಟ ೮೩]
  • ಬಡರೈತ ತಾನು ಉತ್ಪಾದಿಸಿದ ಹಾಲೆಲ್ಲವನ್ನೂ ಮನೆಯಲ್ಲಿಟ್ಟುಕೊಳ್ಳದೆ ಮಾರಾಟಮಾಡುವುದು, ಅದರಿಂದಾದ ಸಂಪಾದನೆಯಿಂದ ಇತರ ಅವಶ್ಯ ವಸ್ತುಗಳನ್ನು ಕೊಳ್ಳುವುದು ನಿಜ. [ಅವನು ಹಾಲು ಮಾರಾಟಮಾಡಬಾರದೆಂಬ] ವಾದಗಳೆಲ್ಲಾ ಹಸಿವೆಯಿಂದ ಬಳಲುತ್ತಿರುವ ಮನುಷ್ಯನಿಗೆ ಅರ್ಥಹೀನವೆನ್ನಿಸುತ್ತದೆ. ಅತಿಬಡವರು ತುಟ್ಟಿ ಖಾದ್ಯ ತಿನ್ನಬೇಕೆನ್ನುವುದು ಅರ್ಥಹೀನ ವಾದವಾಗುತ್ತದೆ.. [ಪುಟ ೧೪೭]
ಕುರಿಯನ್ ಅವರ ವಾಕ್ಚಾತುರ್ಯದಿಲ್ಲಿ ಇರುವ ಗೊಂದಲವೇ ಇದು. ಮೊದಲಬಾರಿಗೆ ನಾನು ಬ್ರಾಹ್ಮಣನೊಬ್ಬ ಹರಿಜನನ ಹಿಂದೆ ಲೈನಿನಲ್ಲಿ ನಿಂತದ್ದರಿಂದ ಜಾತಿವ್ಯವಸ್ಥೆಗೆ ಪೆಟ್ಟು ಕೊಟ್ಟಂತೆ ಎಂಬ ಗುಡುಗಿನ ಮಾತು ಕೇಳಿದಾಗ ನನ್ನ ಕಣ್ಣಲ್ಲಿ ನೀರು ಬಂದಿತ್ತು. ಆದರೆ ಆ ನಂತರ ನಾನು ಹಳ್ಳಿಗಾಡನ್ನು ಸುತ್ತಿಹಾಕಿದಾಗ ಈ ಪ್ರಕ್ರಿಯೆಯಿಂದ ಅಲ್ಲಿನ ಜಾತಿವ್ಯವಸ್ಥೆಗೆ ದೊಡ್ಡ ಬದಲಾವಣೆಯುಂಟಾಗಿಲ್ಲ ಎನ್ನುವುದು ಮನದಟ್ಟಾಯಿತು. ಈಚೆಗೆ ಆ ಬಗ್ಗೆ ಗಹನವಾಗಿ ಆಲೋಚಿಸಿದಾಗ ಅನ್ನಿಸಿದ್ದು - ಅರೇ, ಸಿನೇಮಾ ಲೈನಿನಲ್ಲೂ ಇದೇ ನಿಯಮವನ್ನು ಪಾಲಿಸುತ್ತೇವಲ್ಲ, ಏನಾದರೂ ಬದಲಾವಣೆಯಾಗಿದೆಯೇ? ಹಾಗಾದರೆ ಕುರಿಯನ್ ಹೇಳಿದ್ದು ಹಾಲಿನ ಸಪ್ಲೈಗೆ ಮಾತ್ರ ವರ್ತಿಸಿತ್ತು, ಮಿಕ್ಕ ವಿಷಯಗಳಿಗಲ್ಲ!! ಮಾತಿನ ಚಮತ್ಕಾರ ಒಳ್ಳೆಯ ವಿಚಾರದ ವಾದದ ಮುಂದೆ ಹೆಚ್ಚುಕಾಲ ಕೆಲ್ಲಲು ಸಾಧ್ಯವಿರಲ್ಲ. ದೀರ್ಘ ಕಾಲದಲ್ಲಂತೂ ಈ ಗೆಲುವು ಸಾಧ್ಯವೇ ಇರಲಿಲ್ಲ.

ಎನ್‍ಡಿ‍ಡಿಬಿಯ ಪಾತ್ರದ ಬಗ್ಗೆ ಕ್ಲಾಡ್ ಆಲ್ವರಿಸ್ ಬರೆದ ಲೇಖನದಿಂದಾಗಿ ಒಮ್ಮೆ ಬಿಕ್ಕಟ್ಟಿನ ಪರಿಸ್ಥಿಯಲ್ಲಿದ್ದಾಗ ತಮ್ಮ ಅಧ್ಯಕ್ಷರಿಗೆ ಬೆಂಬಲ ಸೂಚಿಸಲು ೮೦೦ಕ್ಕೂ ಹೆಚ್ಚು ಉದ್ಯೋಗಿಗಳು ರಾಜೀನಾಮೆ ಸಲ್ಲಿಸಿದ್ದರು. ಆಗಿನ ಕಾಲಿಕ್ಕೂ ಇತ್ತೀಚೆಗೆ ಅಮುಲ್‍ನ ಅಧ್ಯಕ್ಷ ಪದವಿಯಿಂದ ಹೊರಬಿದ್ದು ಒಂಟಿಯಾಗಿ ನಡೆದ ಕುರಿಯನ್‍ಗೂ ಸಂಬಂಧವಿದೆಯೇ ಎಂದು ಒಮ್ಮೊಮ್ಮೆ ಯೋಚಿಸುವಂತಾಗುತ್ತದೆ. ಎದುರಿಲ್ಲದ ಮಹಾರಾಜನಂತೆ ಆಳಿದ ಆ ಕುರಿಯನ್ ಎಲ್ಲಿ, ಜೊತೆಯಿಲ್ಲದ ಜೀವಿಯಾಗಿ ಅಡಿಯಿಟ್ಟ ಈ ಕುರಿಯನ್ ಎಲ್ಲಿ? ಎಲ್ಲೋ ತಮ್ಮ ನಂಬಿಕೆಗಳ ಭಾರಕ್ಕೆ ಆತ ಬಲಿಯಾಗಿಬಿಟ್ಟರೆನ್ನಿಸುತ್ತದೆ. ಸಿನೇಮಾದ ಆಕ್ಷನ್ ಹೀರೋ ಪಾತ್ರದಿಂದ ಕ್ಯಾರೆಕ್ಟರ್ ರೋಲ್ ಮಾಡಬೇಕಾದ ಅವಶ್ಯಕತೆಯನ್ನು ಅವರು ಗುರುತಿಸಲೇ ಇಲ್ಲವೇನೋ. ಆತ ದೇವ್ ಆನಂದ್ ದಾರಿಯಲ್ಲಿ ಮುಂದುವರೆದರೇ ಹೊರತು, ಅಮಿತಾಭ್ ಬಚ್ಚನ್ ತುಳಿದ ದಾರಿಯತ್ತ ಒಮ್ಮೆಯೂ ಗಮನ ಹರಿಸಲೇ ಇಲ್ಲ. ಒಂದು ರೀತಿಯಲ್ಲಿ ಕುರಿಯನ್ ತಮ್ಮ ಗುರುಗಳಾದ ತ್ರಿಭುವನದಾಸ್ ಪಟೇಲರಿಂದಾಗಲೀ ರವಿ ಮತ್ಥಾಯ್ ರಿಂದಾಗಲೀ ಕುರ್ಚಿಯ ಮೇಲೆ ಕೂರದೆಯೇ ಆಳುವ ಕಲೆಯನ್ನು ಕೆಲಿಯಲೇ ಇಲ್ಲವೆನ್ನಿಸುತ್ತದೆ. ಇದು ಬಹುಶಃ ಹೋರಾಟಗಾರನ ಲಕ್ಷಣವಿರಬಹುದು. ಎಡಬಿಡದೆ ಸೋಲೊಪ್ಪದೇ ಹೋರಾಡುತ್ತಲೇ ಮುಂದುವರೆಯುವದು.. ತಮ್ಮ ಯೌವನದಲ್ಲಿ ಕೆಲಿತ ಬಾಕ್ಸಿಂಗ್ ಕಲೆ ಅವರನ್ನು ಆವರಿಸಿಬಿಟ್ಟಿತ್ತೇನೋ.

ಕುರಿಯನ್ ಮಹಾಮಾನವನಿಂದ ಮಾನವನ ಸ್ಥರಕ್ಕೆ ಇಳಿಯುತ್ತಿರುವ ಪ್ರಕ್ರಿಯ ನನ್ನ ದೃಷ್ಟಿಗೆ ಬಂದದ್ದು ಕೆಲ ವರ್ಷಗಳ ಕೆಳಗೆ. ಅಷ್ಟು ಹೊತ್ತಿಗೆ ನಾನು ಇರ್ಮಾ ಬಿಟ್ಟು ಐ‌ಐ‌ಎಂ ಸೇರಿದ್ದೆ. ಆಗ ಒಂದು ದಿನ ಆತನದೇ ಹಸ್ತಾಕ್ಷರ ಹೊತ್ತ ಒಂದು ಪತ್ರ ನನ್ನನ್ನು ತಲುಪಿತು. ಅಮೃತಾ ಪಟೇಲ್ ನೆತೃತ್ವದಲ್ಲಿ ಎನ್‍ಡಿಡಿಬಿ ಕೈಗೊಂಡಿದ್ದ ಕೆಲ ಹೊಸ ಯೋಜನೆಗಳನ್ನು - ಅದರಲ್ಲೂ ಸಹಕಾರಿ ಡೈರಿಗಳ ಉತ್ಪನ್ನಗಳನ್ನು ಎನ್‍ಡಿ‍ಡಿಬಿ ಹುಟ್ಟುಹಾಕಿದ ಜೋಡಿಮಾಲೀಕತ್ವದ ಕಂಪನಿಗಳ ಮೂಲಕ ಮಾರಾಟ ಮಾಡುವ ಯೋಜನೆಯನ್ನು ಚರ್ಚಿಸಲು ಒಂದು ವರ್ಕ್‌ಶಾಪ್ ಇರ್ಮಾದಲ್ಲಿ ಏರ್ಪಡಿಸಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆ ಪತ್ರದ ಮೂಲಕ ನನ್ನನ್ನು ಆತ ಆಹ್ವಾನಿಸಿದ್ದರು. ಎರಡು ದಿನಗಳ ನಿರಂತರ ಚರ್ಚೆಯಲ್ಲಿ ನಾವು ಆ ಯೋಜನೆಯ ಒಪ್ಪುತಪ್ಪುಗಳನ್ನು ಅದರ ಪರಿಣಾಮವನ್ನೂ ಚರ್ಚಿಸಿದೆವು. ಅದರಲ್ಲಿ ಭಾಗವಹಿಸಿದ ಎನ್‍ಡಿಡಿಬಿಯ ಪ್ರತಿನಿಧಿ ಕುರಿಯನ್ ಅವರ ಮಾರ್ಗದರ್ಶನದಲ್ಲೇ ತಾವು ನಡೆಯಲು ಸಿದ್ಧರಿರುವುದಾಗಿ, ಅವರ ವಿಚಾರಧಾರೆಗೆ ಧಕ್ಕೆ ಬರುವಂತಹ ಕೆಲಸವನ್ನು ತಾವೇನೂ ಮಾಡುತ್ತಿಲ್ಲವೆಂದೂ ಇಷ್ಟಿಲ್ಲದೇ ಕೇಳಿಕೊಂಡರು. ಎಲ್ಲ ಮುಗಿದ ನಂತರ ಅಲ್ಲಿಗೆ ಕರೆದಿದ್ದಪತ್ರಕರ್ತರನ್ನು ಉದ್ದೇಶಿಸಿ ತಮ್ಮ ಖಾಸಗೀ ವಿಚಾರಗಳನ್ನು ಅದು ಎರಡುದಿನಗಳ ಚರ್ಚೆಯ ಸಾರಾಂಶ ಎನ್ನುವ ಅಭಿಪ್ರಾಯ ಬರುವಂತೆ ಮಂಡಿಸಿದರು. ಆತ ಪತ್ರಕರ್ತರಿಗೆ ಹೇಳಿದ್ದಕ್ಕೂ ಅಲ್ಲಿ ನಡೆದ ಪ್ರಕ್ರಿಯೆಗೂ ಸಂಬಂಧವೇ ಇರಲಿಲ್ಲ. ಅಂದು ನನ್ನ ಹೀರೋ ನನಗೆ ಕೈಕೊಟ್ಟ ಅನುಭವ ನನಗಾಯಿತು. ಆತ ನನ್ನನ್ನು [ಹಾಗೂ ನನ್ನಂತೆಯೇ ಆತನ ಆಹ್ವಾನದ ಮೇರೆಗೆ ಈ ವಿಚಾರವನ್ನು ಚರ್ಚಿಸಲು ಅಲ್ಲಿ ನೆರೆದಿದ್ದ ಎಲ್ಲರನ್ನೂ] ಉಪಯೋಗಿಸಿ ಕೈಬಿಟ್ಟರೆಂದು ನನಗೆ ಅನ್ನಿಸಿತು. ನನ್ನ ಹೆಸರಾಗಲೀ ಅಭಿಪ್ರಾಯವಾಗಲೀ ನಾನು ಮಹತ್ವದ್ದೆಂದು ಭಾವಿಸದಿದ್ದರೂ ಇದು ಮೋಸದ ವರ್ತನೆಯಾಗಿತ್ತು. ನನ್ನ ಕಣ್ಣಲ್ಲಿ ನೀರು ಬಂತು - ಕಾರಣ ಸೂಪರ್‍ಹೀರೋದಂತೆ ಕಾಣುತ್ತಿದ್ದ ಆತ ಕೇವಲ ಸ್ವಹಿತಕ್ಕಾಗಿ ಎರಡು ಮೆಟ್ಟಲಿಳಿಯಲು ಹೇಸದ ಸಾಮಾನ್ಯ ವ್ಯಕ್ತಿ ಮಾತ್ರ ಅಂತ ನನಗನ್ನಿಸಿತು. ಆತ ತಮ್ಮ ಯುದ್ಧವನ್ನು ಕಳಕೊಳ್ಳುತ್ತಿದ್ದರು. ಅದನ್ನು ಸ್ವೀಕರಿಸಲು ಆತ ಸಿದ್ಧರಿರಲಿಲ್ಲ.


ಆದರೆ ಅದಕ್ಕಿಂತ ದುಃಖದ ದಿನ ಮುಂದೆ ಬರಲಿತ್ತು. ಅಮುಲ್‍ನ ಅಧ್ಯಕ್ಷ ಸ್ಥಾನದಲ್ಲಿ ಮೂವತ್ತಕ್ಕೂ ಹೆಚ್ಚು ವರ್ಷಕಾಲ ವಿಜೃಂಭಿಸಿದ ಆತ ಅಲ್ಲಿನ ಹುದ್ದೆಯನ್ನು ತ್ಯಜಿಸಿದ ದಿನವದು. ಆತ ಆ ಪಟ್ಟದಿಂದ ಇಳಿದ ದಿನ ಗುಜರಾತ್ ಒಕ್ಕೂಟದವರು ಕುರಿಯನ್‍ಗೆ ಇದ್ದ ಸವಲತ್ತುಗಳನ್ನು ಹಾಗೇ ಉಳಿಸುವುದಾಗಿ ಹೇಳಿದರು. ಅದರಲ್ಲಿ ಕುರಿಯನ್ ಉಪಯೋಗಕ್ಕೆ, ಅವರ ಶ್ರೀಮತಿಯವರ ಉಪಯೋಗಕ್ಕೆ ತಲಾ ಒಂದರಂತೆ ಕಾರು, ಮನೆಯ ಅಡುಗೆಯವನು -- ಈ ಎರಡು ಅಂಶಗಳು ಸೇರಿದ್ದವು. ಆದರ ಆತನ ಸಹಾಯಕ ಜೊಸೆಫ್ [ಆತ ಒಕ್ಕೂಟದ ಉದ್ಯೋಗಿ] ಗೆ ಕಲಕತ್ತಾಗೆ ವರ್ಗ ಮಾಡುತ್ತಾ ನಿರ್ದೇಶನ ಪತ್ರವನ್ನಿತ್ತರು. ಜೀವನಪರ್ಯಂತ ಸೇವೆ ಮಾಡಿದವರಿಗೆ ಕೊಡಬಲ್ಲ ಗೌರವಪೂರ್ಣ ವಿದಾಯ ಇದೇನೂ ಅಲ್ಲ. ಆದರೆ ಕುರಿಯನ್ ಅದಕ್ಕೆ ಪ್ರತಿಕ್ರಿಯಿಸಿದ್ದು ಹೇಗೆ? ಇದ್ದ ಇತರ ಸವಲತ್ತುಗಳನ್ನೂ ವಾಪಸ್ಸು ಮಾಡಿ "ಸಾಕಾಯಿತು ಬಿಡಿ, ನಿಮ್ಮ ಯಾವ ಸವಲತ್ತುಗಳೂ ನನಗೆ ಬೇಡ " ಎಂದು ಹೇಳುವುದರ ಮೂಲಕ ತಮ್ಮ ಸಿಟ್ಟನ್ನು ವ್ಯಕ್ತಪಡಿಸಲಿಲ್ಲ. ಬದಲಿಗೆ ಪುಟ್ಟ ಹುಡುಗನೊಬ್ಬ ಚಾಕಲೇಟಿಗೆ ಗೋಗರೆಯುವಂತೆ 'ನನಗೆ ನೀವು ಎಲ್ಲ ಸವಲತ್ತುಗಳನ್ನೂ ಕೊಡುವುದಾಗಿ ಹೇಳಿದ್ದಿರಿ, ಜೋಸೆಫ್ ಆ ಸವಲತ್ತುಗಳ ಭಾಗ ಎಂಬುದನ್ನು ಗಮನಿಸಿ..' ಎಂದು ಪತ್ರ ಬರೆದರು.

ಖಂಡಿತವಾಗಿಯೂ ಯುವರಾಜರು ತಮ್ಮ ಚಕ್ರವರ್ತಿಗಳನ್ನು ಈ ರೀತಿ ನೋಡಲು ಇಷ್ಟಪಡುವ ದೃಶ್ಯವಲ್ಲ. ಚರಿತ್ರೆ ಬರೆಯಲ್ಪಡುವಾಗ ತಮ್ಮ ಕಡೆಯ ವರ್ಷಗಳ ಬೀಳು ಅವರ ಮೊದಲ ಐವತ್ತು ವರ್ಷಗಳ ಅದ್ಭುತ ದೇಣಿಗೆಯನ್ನು ಮರೆಮಾಡದಿರಲಿ. ಯಾರೋ ನನಗೆ ಹೇಳಿದ ನೆನಪು - ಕುರಿಯನ್ ಜೊತೆಗೆ ಬಹಳ ವರ್ಷಗಳ ಕಾಲ ಕೆಲಸ ಮಾಡಿದ ಡಾ.ಚೋಟಾಣಿ ತಮ್ಮ ವಿಳಾಸದಲ್ಲಿ ಕುರಿಯನ್ ಹೆಸರಿರಬೇಕೆಂಬ ಏಕೈಕ ಕಾರಣಕ್ಕಾಗಿ ತಾವು ನಿವಸಿಸುತ್ತಿದ್ದ ತಮ್ಮ ಕಟ್ಟಡವೂ ಆಗ ನಾಮಕರಣಗೊಳ್ಳಲಿದ್ದ ಕುರಿಯನ್ ಎನ್‍ಕ್ಲೇವ್‍ನಲ್ಲಿ ಸೇರಬೇಕೆಂದು ಪೈರವಿ ನಡೆಸಿ ಸಾಧಿಸಿದರಂತೆ. ಇಂಥ ಸಹಚರರಿದ್ದ ಕುರಿಯನ್ ಬೀಳು ಎಷ್ಟು ಕೆಟ್ಟದ್ದಾಗಿದೆ. ಈ ಬೀಳು ಅವರಗೆ ಹೆಚ್ಚು ನೋವನ್ನುಂಟುಮಾಡದಿರಲೆಂದು ಮಾತ್ರ ಆಶಿಸ ಬಹುದೇನೋ
ಇದರ ಇಂಗ್ಲೇಷ್ ಆವೃತ್ತಿಯನ್ನು Writer's BlogK ನಲ್ಲಿ ಕಾಣಬಹುದು


No comments: