Sunday, March 8, 2009

ಚಿಂತಾಮಣಿಯಲ್ಲಿ ಕಂಡ ಮುಖಕನ್ನಡ ಲೇಖಕರ ಬಳಗದಲ್ಲಿ ಕೆಲ ಚಿರಯುವಕರಿದ್ದಾರೆ. ಆ ಯೌವ್ವನ ವಯಸ್ಸಿನದ್ದಾಗಲೇಬೇಕೆಂದಿಲ್ಲ. ಅದು ಹೆಚ್ಚು ಮನಸ್ಥಿತಿಗೆ ಸಂಬಂಧಿಸಿದ್ದು. ಅದರ ಲಕ್ಷಣಗಳಲ್ಲಿ ಮುಖ್ಯವಾದವು - ನಿಮ್ಮ ಗೆಳೆಯರ ಗುಂಪಿನ ಹೆಚ್ಚಿನಂಶ ಯುವಕರಿಂದ ಕೂಡಿದೆಯೇ? ನಿಮ್ಮ ವಯಸ್ಸಿಗಿಂತ ಕಿರಿಯರು ನಿಮ್ಮನ್ನು ಏಕವಚನದಲ್ಲಿ ಸಂಬೋಧಿಸುತ್ತಾರೆಯೇ? ನಿಮಗೆ ಹೊಸ ಜಾಗ/ವಿಷಯಗಳಲ್ಲಿ ಟೇನೇಜ್ ಹುಡುಗರಿಗಿರುವಷ್ಟೇ ಕುತೂಹಲ, ಅಷ್ಟೇ ಎದೆಗಾರಿಕೆ ಇದೆಯೇ? ಹೊಸಜಾಗಗಳಿಗೆ ಯಾರಾದರೂ ಕರೆದಾಗ ಗೊಣಗದೇ ಉತ್ಸಾಹದಿಂದ ಹೋಗುತ್ತೀರಾ? ಹಾಗೂ ನಿಮ್ಮ ಬರಹದ ಕಾಳಜಿಗಳಲ್ಲಿ ಎಷ್ಟರ ಮಟ್ಟಿಗೆ ಪ್ರೀತಿ-ಪ್ರೇಮ-ಪ್ರಣಯ ಪ್ರಾಮುಖ್ಯತೆಯನ್ನು ಪಡೆದಿದೆ?

ಹೀಗೆ ನಾವು ಕೇಳಿಕೊಳ್ಳುವ ಪ್ರಶ್ನೆಗಳಿಗೆ ಉತ್ತರ ಕೊಡಲು ಹೊರಟಾಗ, ನಮಗೆ ಕನ್ನಡ ಸಾಹಿತ್ಯಸಂದರ್ಭದಲ್ಲಿ ಕಾಣುವುದು ಮುಖ್ಯವಾಗಿ 
ಲಕ್ಷ್ಮಣನ [ಬಿ ಆರ್ ಲಕ್ಷ್ಮಣರಾವ್] ಮುಖ. ಅವನ ಜೊತೆಜೊತೆಯಾಗಿ ನಿಲ್ಲಬಲ್ಲಂತಹವರು ಜಯಂತ ಕಾಯ್ಕಿಣಿ, ನಾಗತಿಹಳ್ಳಿ ಮತ್ತು ಡುಂಡಿರಾಜ. ಜಯಂತ ಮತ್ತು ಡುಂಡಿಗೆ ಈ ವರ್ಷ ೫೦ ತುಂಬುವುದು. ಲಕ್ಷ್ಮಣನಿಗೆ ೬೦ ತುಂಬುತ್ತಿದೆ ಅಂದರೆ ನಂಬುವುದಕ್ಕೆ ಕಷ್ಟವಾಗುತ್ತದೆ. ಆದರೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನಡೆದಿರುವ ಅನೇಕ ಅದ್ಭುತಗಳ ಹಾಗೆಯೇ ಲಕ್ಷ್ಮಣನಿಗೂ ೬೦ ವರುಷವಾಗಿರುವುದನ್ನೂ ಒಂದು ಅದ್ಭುತವೆಂದು ಪರಿಗಣಿಸಬಹುದು. ಹುಮ್ಮಸ್ಸಿನ ಯುವಕ ಲಕ್ಷ್ಮಣನ ವ್ಯಕ್ತಿತ್ವದ ಯಾವ ಆಯಾಮದ ಬಗ್ಗೆ ಬರೆಯಬೇಕೆನ್ನುವುದೂ ಒಂದು ಕುತೂಹಲದ ವಿಷಯವೇ.

ಚಿಂತಾಮಣಿಯಲ್ಲಿ ತಳವೂರಿರುವ ಲಕ್ಷ್ಮಣ ಅಲ್ಲಿದ್ದಾನೋ, ಬೆಂಗಳೂರಿಗನೋ ಅನುಮಾನ ಬರುವಂತೆ ಎರಡೂ ಜಾಗಗಳಲ್ಲಿ ಒಂದೇಬಾರಿಗೆ ಕಾಣಿಸಿಕೊಳ್ಳುವ ಸರ್ವಾಂತರ್ಯಾಮಿ ಶ್ರೀಕೃಷ್ಣ ಪರಮಾತ್ಮ. ಅಲ್ಲಿನ ತನ್ನ ಬೋಧನೆಯ ಕಾಯಕವನ್ನು ಚಾಚೂ ತಪ್ಪದೇ ನಿಯಮಿತವಾಗಿ ನಡೆಸಿಕೊಂಡು ಬರುತ್ತಲೇ ವಾರಾಂತ್ಯದ ಕವಿಗೋಷ್ಠಿಗಳಲ್ಲಿ ಬೆಂಗಳೂರಿನಲ್ಲಿ ಕಾಣಿಸಿಕೊಳ್ಳುವ ಜಾಣ. ಆದರೆ ಲಕ್ಷ್ನಣನದ್ದು ಚಿಂತಾಮಣಿಯಲ್ಲಿ ರಚಿಸಿದ ಕವಿತೆಗಳನ್ನು ಬೆಂಗಳೂರಿಗೆ ರವಾನಿಸುವ ಬರೇ ರಫ್ತಿನ ವ್ಯವಹಾರವಲ್ಲ. ಎಷ್ಟುಜನ ಲೇಖಕರಿಗೆ ಅವನು ಚಿಂತಾಮಣಿಯಲ್ಲಿ ಅತಿಥೇಯನಾಗಿ, ಗೆಳೆಯನಾಗಿ, ತೆಲುಗುನಾಡಿಗೆ ಸೇರಿದ್ದೋ ಕನ್ನಡನಾಡಿಗೆ ಸೇರಿದ್ದೋ ಅನ್ನುವ ಅನುಮಾನ ಬರುವಂತಹ ಆ ಸಣ್ಣ ಊರಿನಲ್ಲಿ ಕನ್ನಡ ಸಾಹಿತ್ಯದ ಅನೇಕ ಚಟುವಟಿಕೆಗಳನ್ನು ನಡೆಸಿ ಬಂದಿದ್ದಾನೆ! ಅವನ ಆತಿಥ್ಯ ಸ್ವೀಕರಿಸದ ಕನ್ನಡ ಲೇಖಕರು ವಿರಳ. ಹಾಗೂ ಅಲ್ಲಿಗೆ ಹೋದವರಿಗೆಲ್ಲಾ ಗ್ಯಾರೆಂಟಿಯಾದದ್ದೆಂದರೆ ಚಿಂತಾಮಣಿಯ ಮಾರುತೀ ಸ್ಟುಡಿಯೋದಲ್ಲಿ ಅವನೊಂದಿಗೆ ಒಂದು ಚಿತ್ರ!!

ಸಾಮಾನ್ಯವಾಗಿ ಲಕ್ಷ್ಮಣನನ್ನು ನೆನೆಯುವಾಗ ಅವನ ಮಿತ್ರರನ್ನು ನೆನೆಯದೇ ಮುಂದುವರೆಯುವುದು ಸಾಧ್ಯವಿಲ್ಲ. ಲಕ್ಷ್ಮಣ, ಎಚ್.ಎಸ್.ವೆಂಕಟೇಶಮೂರ್ತಿ, ನರಹಳ್ಳಿ ಬಾಲಸುಬ್ರಹ್ಮಣ್ಯ ಮತ್ತು ಎಂ.ಎನ್.ವ್ಯಾಸರಾವ್ ನಾಲ್ವರೂ ಪಂಚತಂತ್ರದ ನಾಲ್ವರು ಮಿತ್ರರಂತೆ ಆರಕ್ಕೇಳದೇ ಮೂರಕ್ಕಿಳಿಯದೇ ತಮ್ಮ ಸ್ನೇಹವನ್ನು ಅನೇಕ ವರ್ಷಗಳಿಂದ ಪೋಷಿಸಿಕೊಂಡು ಬಂದಿದ್ದಾರೆ. ಯೌವ್ವನದಲ್ಲಿ ಗೆಳೆಯರಾಗಿದ್ದು ಬೆಳೆಯುತ್ತಾ ಬಂದಂತೆ ವಿಚಾರಧಾರೆಯ ಭಿನ್ನತೆಯಿಂದಲೋ, ಅಥವಾ ಅಸೂಯೆಯಿಂದಲೋ ಸಹಿತ್ಯಿಕ ಗೆಳೆತನಗಳು ಮುರಿದು ಬೀಳುವುದಲ್ಲದೇ ಅನೇಕ ಬಾರಿ ಅದು ವೈರಕ್ಕೆ ತಿರುಗುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಈ ನಾಲ್ವರದ್ದು ಹಾಗಲ್ಲ. ನಾಲ್ವರೂ ಒಂದು ಥರದಲ್ಲಿ ಒಬ್ಬರಿಗೊಬ್ಬರು ಪೂರಕವಾಗಿ, ತಮ್ಮದೇ ವಿಶಿಷ್ಟ ಕ್ಷೇತ್ರದಲ್ಲಿ ಕೆಲಸ ಮಾಡಿಕೊಳ್ಳುತ್ತಾ, ಮತ್ತೊಬ್ಬರ ಸಾಧನೆಯನ್ನು ತಮ್ಮದೇ ಎಂಬಷ್ಟು ಖುಷಿಯಿಂದ ಸ್ವೀಕರಿಸುತ್ತಾ ಬಂದಿದ್ದಾರೆ.

ಒಂದು ಕಾಲದಲ್ಲಿ ಈ ಗುಂಪಿನ ಕವಿಗಳನ್ನೂ - ಅವರ ಜೊತೆಗೆ ಲಕ್ಷ್ಮೀನಾರಾಯಣ ಭಟ್ಟರನ್ನು 'ಕ್ಯಾಸೆಟ್' ಕವಿಗಳೆಂದು ಲೇವಡಿಮಾಡುವ ಮಾತುಗಳು ಬಂದಿದ್ದವು. ಆದರೆ ಯಾರೂ ಆ ಮಾತುಗಳಿಂದ ಎದೆಗುಂದಲಿಲ್ಲ. ತಮ್ಮ ಸಾಹಿತ್ಯ ರಚನೆಯನ್ನು ಕಡಿಮೆ ಮಾಡಲೂ ಇಲ್ಲ ಅದಕ್ಕೆ ಜವಾಬು ನೀಡಲೂ ಹೋಗಲಿಲ್ಲ. ತಮ್ಮ ಪಾಡಿಗೆ ತಾವು ಸಾಹಿತ್ಯ ರಚನೆಯನ್ನು ಮಾಡುತ್ತಾ ಮುಂದುವರೆದರು. ಕಡೆಗೆ ಕ್ಯಾಸೆಟ್ ಕವಿಗಳು ಅನ್ನುವ ಹಣೆ ಪಟ್ಟಿ ಹಚ್ಚಲು ಹೋದವರೇ ಸುಸ್ತಾಗಿ ಸುಮ್ಮನಾಗಿಬಿಟ್ಟರು. ಒಟ್ಟಾರೆ ಸಾಹಿತ್ಯ ಕೃಷಿ ಜನರನ್ನು ತಲುಪುವ ಸಲುವಾಗಿಯೇ ಇರುವಾಗ, ಅದು ಯಾವ ಮಾಧ್ಯಮದಲ್ಲಿ ತಲುಪಿದರೆ ಏನು ಎಂಬಂತೆ ಅವರುಗಳ ನಿಲುವು ಇತ್ತು ಅನ್ನಿಸುತ್ತದೆ. ಆದರೆ ಈ ನಾಲ್ವರು ಮಿತ್ರರು ಜೊತೆಜೊತೆಯಲಿ ಇದ್ದರೂ ನಾಲ್ವರೂ ತಮ್ಮದೇ ರೀತಿಯಿಂದ ಭಿನ್ನರು.

ಎಚ್.ಎಸ್.ವಿ ಬಹುಶಃ ಎಲ್ಲರಿಗಿಂತ ಹಿರಿಯರು, ಗಂಭೀರ ವ್ಯಕ್ತಿ, ಸಾಹಿತ್ಯದ ಮಟ್ಟಿಗೆ ಮಹತ್ವಾಕಾಂಕ್ಷಿ, ಮತ್ತು ಬರಹದ ಬಗ್ಗೆ ಅತ್ಯಂತ ಶಿಸ್ತು ಮತ್ತು ಕಾಳಜಿಯನ್ನು ವಹಿಸುವವರು. ಹೀಗಾಗಿಯೇ ಅವರು ಎಲ್ಲರಿಗಿಂತ ಹೆಚ್ಚು ಪ್ರಯೋಗಗಳನ್ನು ಮಾಡಿದ್ದಾರೆ - ಕವಿತೆಯ ಬಂಧದಲ್ಲಿ, ಕಥನ ಕವಿತೆಗಳನ್ನು ರಚಿಸುವಲ್ಲಿ, ಅವುಗಳನ್ನು ತಮ್ಮ ಥೀಸಿಸ್ ಮೂಲಕ ಅರ್ಥೈಸುವಲ್ಲಿ, ಕಾಳಿದಾಸನನ್ನ ಅನುವಾದಿಸುವಲ್ಲಿ ಮತ್ತು ಶಿಶು ಕಾವ್ಯ ರಚನೆಯಲ್ಲಿ.

ನರಹಳ್ಳಿ ವಿಮರ್ಶಕರಾದ್ದರಿಂದ ಅವರು ಮೂಲ ವ್ಯಕ್ತಿತ್ವವನ್ನೂ ಮೀರಿ ಗಂಭೀರವಾಗಿ ಕಾಣುವ ವ್ಯಕ್ತಿ. ಕಾಲೇಜು ದಿನಗಳಲ್ಲಿ ಕವಿತೆಗಳನ್ನು ಬರೆದು ಬಹುಮಾನ ಗಿಟ್ಟಿಸಿದ ನರಹಳ್ಳಿ ಅದನ್ನು ಬಿಟ್ಟು ವಿಮರ್ಶೆಯತ್ತಲೇ ತಮ್ಮ ಒಲವನ್ನು ತೋರಿದರು. ಆದರೂ ಒಂದೆರಡು ಕೆಸೆಟ್ಟುಗಳಲ್ಲಿ ನರಹಳ್ಳಿಯವರ ಹಾಡುಗಳೂ ಸೇರಿಕೊಂಡಿರುವುದು ಬಹಳಷ್ಟು ಜನರ ಗಮನಕ್ಕೆ ಬರದೇ ಹೋದ ಮಾತು. ಲಕ್ಷ್ಮಣ ಒಳ್ಳೆ ಕವಿತೆಗಳನ್ನು ಬರೆಯುವುದಲ್ಲದೇ ಅವನ್ನು ಹಾಡಲೂ ಬಲ್ಲ. ಒಮ್ಮೆ ರೆಕಾರ್ಡಿಂಗಿಗೆ ಮೊದಲು ನರಹಳ್ಳಿ ತಮ್ಮ ಹಾಡಿನ ಚೀಟಿಯನ್ನು ಅಲ್ಲಿ ನೆರೆದಿದ್ದ ನಮಗೆಲ್ಲ ತೋರಿಸಿದಾಗ, ಲಕ್ಷ್ಮಣ.. "ಅರೇ ಇದಕ್ಕೆ ರಾಗ ಸಂಯೋಜಿಸಲು ಅಶ್ವಥ್ ಯಾಕೆ ಬೇಕೋ, ನಾನೇ ಕಂಪೋಸ್ ಮಾಡುತ್ತೇನೆ" ಅಂತಂದು ಆ ಇಡೀ ಕವಿತೆಯನ್ನು "ದೋಣಿ ಸಾಗಲಿ ಮುಂದೆ ಹೋಗಲಿ ದೂರತೀರವ ಸೇರಲಿ" ಹಾಡಿನ ನುಡಿಗಟ್ಟಿನಲ್ಲಿ ಹಾಡಿಬಿಟ್ಟ.. ಒಂದು ಕ್ಷಣಕ್ಕೆ ನರಹಳ್ಳಿ ಆ ಹಾಡಿನ ಅಣಕವಾಡು ಬರೆದಿದ್ದಾರೋ ಹೇಗೆ ಅನ್ನಿಸಿದರೂ ಅದರಲ್ಲಿನ ಸಾಹಿತ್ಯ ಅಣಕವಾಡಿನ ದರ್ಜೆಯದ್ದಾಗಿರಲಿಲ್ಲ!

ವ್ಯಾಸ ಮತ್ತು ಲಕ್ಷ್ಮಣರಿಬ್ಬರೂ ರೊಮ್ಯಾಂಟಿಕ್ ಮತ್ತು ತುಂಟತನದಿಂದ ಕೂಡಿದವರು. ಆದರೆ ವ್ಯಾಸ ಸಿನೇಮಾ ಹಾಡುಗಳನ್ನು ರಚಿಸುವುದರತ್ತ ಒಲವು ತೋರಿರುವುದರಿಂದ ಅವನ ಬರವಣಿಗೆ ತುಸು ಆ ಚೌಕಟ್ಟಿಗೆ ಸೇರಿಹೋಗಿ ಬಂಧ, ಪ್ರಾಸ, ಲಯಗಳ ಬಂಧಿಯಾಗಿ "ಚಂದ್ರಿ ಮಾರ್ಕೆಟ್ನಿಂದ ತಂದಳು ಹೊಚ್ಚ ಹೊಸಾ ಸೋಪು, ಸ್ನಾನ ಆದಮೇಲೆ ನೋಡ್ತಾಳೆ ಮೊದಲಿದ್ದ ಬಣ್ಣವೇ ತೋಪು" ಅನ್ನುವಂತಹ ತುಂಟ ಪದ್ಯಗಳನ್ನು ಹೆಚ್ಚು ಬರೆಯದೇ, ತನ್ನ ಕಥಾ ಸಾಮರ್ಥ್ಯವನ್ನೂ ಲಗಾಮಿನಲ್ಲಿಟ್ಟುಕೊಂಡೇ ಇದ್ದುಬಿಟ್ಟ.

ಲಕ್ಷ್ಮಣನ ತುಂಟತನ ಮಾತ್ರ ಅವನನ್ನು ಕೆಲ ಗಮ್ಮತ್ತಿನ ಪುಟ್ಟ ಪದ್ಯಗಳನ್ನು ಬರೆಯಲೂ ಪ್ರೇರೆಪಿಸಿತು. ಅವನ ಕವಿತೆಗಳಲ್ಲಿನ ಲಯ ಆಕರ್ಷಕವಾದದ್ದು. ಒಮ್ಮೆ ಅವನ ಕೆಸೆಟ್ಟನ್ನು ನಿಯಮಿತವಾಗಿ ಕೇಳುತ್ತಿದ್ದ ಡುಂಡಿರಾಜನ ಮಗಳು ಸಹಜಾ "ಜಾಲಿ ಬಾರಿನಲ್ಲಿ.." ಕವಿತೆಯನ್ನು ಹಾಡುವುದನ್ನು ಅವನು ವಿವರಿಸಿದ್ದ. ತುಸು ಪೋಲಿತನವಿದ್ದಾಗ್ಯೂ ಆ ಕವಿತೆಯ ಲಯ ಎಷ್ಟು ಆಕರ್ಷಕವಾಗಿತ್ತೆಂದರೆ ಅದು ಪುಟ್ಟ ಮಗುವಿನ ಬಾಯಿಯಲ್ಲೂ ವಿಚಿತ್ರವಾಗಿ ಕಂಡಿರಲಿಲ್ಲ. ಚಿಂತಾಮಣಿಯಲ್ಲಿ ನಾನು ಎರಡು ಬಾರಿ ಲಕ್ಷ್ಮಣನ ಅತಿಥಿಯಾಗಿದ್ದೆ. ಮೊದಲ ಬಾರಿ ಹೋದದ್ದು ಡುಂಡಿರಾಜನ ಜೊತೆ. ಆಗ ಅಲ್ಲಿನ ಕೆಲವು ಗೆಳೆಯರ ಜೊತೆ [ವಿಜಯರಾಘವನ್ ಇದ್ದರೆಂದು ನೆನಪು] ಭೇಟಿ, ಗುಂಡು, ಮತ್ತು ಕವಿತಾವಾಚನದ ಕಾರ್ಯಕ್ರಮವಿತ್ತು. ಮುಂಜಾನೆ ನಾವೆಲ್ಲಾ ತಡವಾಗಿ ಎದ್ದು ನೋಡಿದರೆ ಲಕ್ಷ್ಮಣ ಆಗಲೇ ಎದ್ದು ಶುದ್ಧನಾಗಿ ಸ್ನಾನ ಮಾಡಿ ಪಾಠ ಮುಗಿಸಿ ನಮಗಾಗಿ ಕಾಯುತ್ತಿದ್ದ. ಹಿಂದಿನ ದಿನ ರಾತ್ರೆ ತಾನು ಎದ್ದೇ ಇರಲಿಲ್ಲ ಎಂಬಂತೆ ಫ್ರೆಶ್ ಆಗಿ, ಎಂದಿನಂತೆ ಯುವಕನಾಗಿ ಅವನಿದ್ದ! ಎರಡೆನೆಯ ಬಾರಿ ನಾನು ಹೋದದ್ದು ಬೇರೆಯದೇ ಕಾರಣಕ್ಕೆ. ನಾನು ಕೆಲಸ ಮಾಡುತ್ತಿದ್ದೆ ಇರ್ಮಾದ ಕೆಲ ವಿದ್ಯಾರ್ಥಿಗಳು ಆ ಪ್ರಾಂತದಲ್ಲಿ ಫೀಲ್ಡ್ ವರ್ಕ್ ಮಾಡುತ್ತಿದ್ದರು. ಅವರನ್ನು ನೋಡಲು ಹೋಗಿದ್ದ ನಾನು ಲಕ್ಷ್ಮಣನ ಒತ್ತಾಯದ ಮೇರೆಗೆ ಸಂಜೆ ಅಲ್ಲಿಯೇ ಉಳಿದೆ. ಸಂಜೆಗೆ ಕೋಲಾರ ಮೆಡಿಕಲ್ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಲಕ್ಷ್ಮಣ ಮುಖ್ಯ ಅತಿಥಿ. ನನ್ನನ್ನೂ ಬ್ಯಾಗೇಜಿನಂತೆ ಕರೆದೊಯ್ದ. ಆರ್ ಎಲ್ ಜಾಲಪ್ಪ ಆ ಸಂಸ್ಥೆಯ ಮುಖ್ಯಸ್ಥರು. ಅವರನ್ನು ಸಭೆಗೆ ಮುಂಚೆ ಭೇಟಿಯಾದೆವು. ನನಗೆ ರಾಜಕಾರಣಿ, ಅದರಲ್ಲೂ ಅವರ ಬಗ್ಗೆ ವಿಚಿತ್ರ ಆರೋಪಗಳಿದ್ದ ಕಾಲದಲ್ಲಿ, ಅಲ್ಲಿ ಅವರನ್ನು ಭೇಟಿ ಮಾಡುವುದು ಮುಜುಗರದ ಮಾತು. ಆದರೆ ಲಕ್ಷ್ಮಣ ಈ ಯಾವುದನ್ನೂ ಮನಸ್ಸಿಗೆ ಹಚ್ಚಿಕೊಂಡವನಲ್ಲ. ತನ್ನ ಕೆಲಸ ಅಂದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವುದು. ಅದಕ್ಕೆ ಪೂರಕವಾಗಿ ಆತನನ್ನು ಭೇಟಿ ಮಾಡಬೇಕು. ಸರಿ. ಆಗಬಹುದು....

ಸಭೆ ಪ್ರಾರಂಭವಾಯಿತು. ಕಾಲೇಜಿನಲ್ಲಿ ದೇಶದ ವಿವಿಧ ಪ್ರಾಂತಗಳಿಂದ ಬಂದಿರುವ ವಿದ್ಯಾರ್ಥಿಗಳು. ಎಲ್ಲರೂ ತಮ್ಮ ವಾರಿಗೆಯವರ ನಾಟಕ ನೃತ್ಯ ನೋಡಲು ಕಾತರರಾಗಿದ್ದಾರೆ. ಲಕ್ಷ್ಮಣ ತನ್ನ ಮಾತು ಕವಿತೆ ಶುರು ಮಾಡಿದ. ಹಿಂದಿನಿಂದ ಅಸಮಾಧಾನದ ದ್ವನಿಗಳು ಬಂದವು. ಆ ಸಮಯದಲ್ಲಿ ನಾನಾಗಿದ್ದರೆ ಅಲ್ಲಿಂದ ಕಂಬಿಕೀಳುತ್ತಿದ್ದೆ. ಆದರೆ ಲಕ್ಷ್ಮಣ ಅಚಲನಾಗಿ ಒಂದು ಕ್ಷಣ ನಿಂತ. ನೇರವಾಗಿ ಪ್ರೇಕ್ಷಕರನ್ನು ದಿಟ್ಟಿಸಿ "ಕ್ಯಾಟ್ ಕಾಲ್ಸ್ ಕೊಡುವ ಅವಶ್ಯಕತೆ ಇಲ್ಲ. ನಾನೂ ಒಂದು ಕಾಲದಲ್ಲಿ ನಿಮ್ಮ ಹಾಗೇ ವಿದ್ಯಾರ್ಥಿಯಾಗಿದ್ದವನು. ಸ್ವಲ್ಪ ಕೇಳಿ" ಅಂತಂದು ಎರಡು ಚುಟಕಗಳನ್ನು ಬಿಟ್ಟ. ಇಡೀ ಸಭಾಂಗಣ ನಗೆಯಲ್ಲಿ ತೇಲಾಡಿತು. ನಂತರ ಜಾನ್ ಲೆನ್ನನ್ ಬಗ್ಗೆ ಒಂದು ಕವಿತೆಯನ್ನು ಸುಶ್ರಾವ್ಯವಾಗಿ ಹಾಡಿ, ಆ ನಂತರ ತನ್ನ ಮಾತುಗಳನ್ನು ಮುಗಿಸಿದ. ಯುವಕರ ನಾಡಿಯನ್ನು ಹೇಗೆ ಹಿಡಿಯಬಹುದು ಅನ್ನುವುದಕ್ಕೆ ಸ್ವತಃ ಯುವಕನಾದ ಲಕ್ಷ್ಮಣ ತೋರಿಸಿಕೊಟ್ಟಿದ್ದ.

ಅಪರಾಧಂಗಳ ಮನ್ನಿಸೋ ಎನ್ನುವ ಹೆಸರನ್ನು ಪುಸ್ತಕಕ್ಕೆ ಇಡಬಹುದಾದ ಲಕ್ಷ್ಮಣ ದಿಲ್ ದಾರ್ ವ್ಯಕ್ತಿ. ಲಿಲ್ಲಿಪುಟ್ಟಿ, ಕೊಲಂಬಸ್, ಗಾಂಡಲೀನ, ಈ ರೀತಿಯ ಕನ್ನಡಕ್ಕೆ ಸಹಜವಲ್ಲದ ಹೆಸರುಗಳನ್ನು ಕವಿತೆಗಳೊಳಗೆ ತರುವುದಲ್ಲದೇ, ಅದನ್ನು ಸಹಜವೆನ್ನಿಸುವಷ್ಟು ಒಳ್ಳೆಯ ರೀತಿಯಲ್ಲಿ ಬರೆಯಬಲ್ಲ ಲಕ್ಷ್ಮಣ ಹಿಂದಿ ಭಾಷೆಯಲ್ಲಿ ಬರೆದಿದ್ದರೆ ಕವಿತೆಯ ಕಾರಣವಾಗಿಯೇ ಧನವಂತನಾಗಿಬಿಡುತ್ತಿದ್ದ. ಹಿಂದಿ-ಉರ್ದುವಿನ ಶೇರ್ ಶಾಯರಿಗಳಿಗೆ ಅತ್ಯಂತ ಸಮೀಪವಾಗಿ ಕನ್ನಡದಿಂದ ನಿಲ್ಲಬಲ್ಲವನು ಲಕ್ಷ್ಮಣನೇ. ಮಂಚೀಯ ಕವಿಗಳ ಎಲ್ಲ ಲಕ್ಷಣಗಳೂ ಲಕ್ಷ್ಮಣನಲ್ಲಿವೆ. ಅದೆಂದರೆ - ನಾಲ್ಕು ಸಾಲಿನ ಚುಟಕ ಹಾರಿಸುವುದು, ಪ್ರೀತಿ-ಪ್ರೇಮದ ವಿರಹದ ಗಜಲ್ ಗಳನ್ನು ಬರೆಯುವುದಲ್ಲದೇ ಅದನ್ನು ಹಾಡಬಲ್ಲದ್ದು ಹಾಗೂ ಬರಹದಲ್ಲಲ್ಲದೇ ವೇದಿಕೆಯ ಮೇಲೂ ಕವಿತೆಗಳನ್ನು ಪ್ರಸ್ತುತ ಪಡಿಸಬಲ್ಲ ಚಾತುರ್ಯ ಅವನಿಗಿದೆ. ಇಲ್ಲಿ ಕೆಲವರು ಕೆಸೆಟ್ ಕವಿಗಳೆಂದು ಮೂಗು ಮುರಿದಂತೆ ಹಿಂದಿಯ ಸಂದರ್ಭದಲ್ಲೂ ಮಂಚೀಯ ಕವಿಗಳೆಂದು ಕೆಟಗರೈಸ್ ಮಾಡಿ ಮೂಗು ಮುರಿಯುವವರಿದ್ದಾರೆ. ಆದರೆ ಮೂಗು ಮುರಿದರೂ ಮತ್ತೆ ಸಹಜವಾಗಿ ಬೆಳೆಯುವ ಪಿನೋಕಿಯೊ ನಮ್ಮ ಲಕ್ಷ್ಮಣ.

ಅವನಿಗೆ ಗೆಳೆಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅವನು ಈ ಮೂಲಕ ಇನ್ನೂ ಒಂದೆರಡು ವರ್ಷಗಳನ್ನು ಕಳೆದುಕೊಂಡು, ತನ್ನ ಕಾಂತಿಯನ್ನು ಹಿಗ್ಗಿಸಿ ನಗುನಗುತ್ತಾ ನಗಿಸಿನಗಿಸುತ್ತಾ ಯಾರೊಂದಿಗೂ ಜಗಳ ಕಾಯದೇ ಅಜಾತಶತ್ರುವಾಗಿದ್ದಾನೆ. ಅವನು ಹಾಗೇ ಇರಲಿ. ಡೆನಿಸ್ ದ ಮೆನೇಸ್ ನಿಗೆ ಪ್ರತಿಬಾರಿಯೂ ಐದನೆಯ ಬರ್ತಡೆ ಆಗಿ ಅವನು ನಾಲ್ಕು ವರ್ಷದ ತುಂಟ ಹುಡುಗನಾಗುವಂತೆ ಲಕ್ಷ್ಮಣನೂ ಇಪ್ಪತ್ತು ದಾಟದೇಯೇ ಅರವತ್ತು ದಾಟಲಿ ಎಂದು ಹಾರೈಸುವೆ.

No comments: