Friday, March 13, 2009

ರಾಮ್ ಗುಹಾಗೆ ಪದ್ಮಭೂಷಣ

ಬರಹಗಾರ ರಾಮಚಂದ್ರ ಗುಹಾಗೆ ಪದ್ಮಭೂಷಣ ಪ್ರಶಸ್ತಿಯನ್ನು ಇಂದು ಘೋಷಿಸಲಾಗಿದೆ. ಪದ್ಮ ಅವಾರ್ಡುಗಳ ಪಟ್ಟಿ ಸಾಮಾನ್ಯವಾಗಿ ನೂರಕ್ಕೂ ಹೆಚ್ಚಿನ ಸಂಖ್ಯೆಯದ್ದಾಗಿರುತ್ತದಾದ್ದರಿಂದ ಪತ್ರಿಕೆಗಳು ವಿಭೂಷಣ/ಭೂಷಣ ಪ್ರಸಸ್ತಿಗಳ ಪಟ್ಟಿಯನ್ನು ಕೊಟ್ಟು, ಪದ್ಮಶ್ರೀ ಪ್ರಸಸ್ತಿಗಳನ್ನು ಪಡೆದವರ ಪ್ರಮಖರ ಹೆಸರನ್ನು ಮಾತ್ರ ಹಾಕಿಡುತ್ತವೆ. ಹೀಗಾಗಿ ಗುಜರಾತಿನಲ್ಲಿರುವ ನನ್ನಂತಹವರು ಕರ್ನಾಟಕದ ಮತ್ತೂರು ಕೃಷ್ಣಮೂರ್ತಿಯವರಿಗೆ ಪ್ರಶಸ್ತಿ ಬಂದಿದೆಯೆನ್ನುವುದನ್ನು ತಿಳಿಯಲು ಅಂತರ್ಜಾಲಕ್ಕೆ ಹೋಗಿ ಸರಕಾರದ ಪಟ್ಟಿಯನ್ನು ಪರಿಶೀಲಿಸಬೇಕಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ಇಂತಿಥಹ ಸೇವೆ, ಇಂತಿಥಹ ರಾಜ್ಯಕ್ಕೆ ಸೇರಿದವರಿಗೆ ಕೊಡುತ್ತಾರೆನ್ನುವುದು ಪಟ್ಟಿಯನ್ನು ನೋಡಿದಾಗ ವೇದ್ಯವಾಗುತ್ತದೆ. ಉದಾಹರಣೆಗೆ ಈ ಬಾರಿಯ ಪದ್ಮ ಪ್ರಶಸ್ತಿ ಪಡೆದಿರುವ ಮ್ಯಾನೇಜ್‌ಮೆಂಟ್ ಚಿಂತಕ ಸಿ.ಕೆ.ಪ್ರಹ್ಲಾದ್‌ಅವರ ಹೆಸರಿನ ಮುಂದೆ ಸೇವೆ: ವಿದ್ಯಾರಂಗವೆಂದೂ ರಾಜ್ಯ: "ಎನ್.ಆರ್.ಐ/ಪಿ.ಐ.ಓ" ಎಂದೂ ಬರೆಯಲಾಗಿದೆ. ರಾಮ್ ಗುಹಾರ ಹೆಸರಿನ ಮುಂದೆ ಸಾಹಿತ್ಯ ಎಂದು ಬರೆಯಲಾಗಿದೆ. ಚರಿತ್ರೆಗಾಗಿ ಇತರರಿಗೆ ಪ್ರಶಸ್ತಿ ಬಂದಿದ್ದರೂ ಚರಿತ್ರಕಾರ ರಾಮ್‌ಗೆ ಸಾಹಿತ್ಯಕ್ಕೆ ಬಂದಿದೆ. ಇದರಿಂದ ದುಃಖವೇನೂ ಇಲ್ಲ, ಬಹುಶಃ ಅವರ ಒಟ್ಟಾರೆ ಬರವಣಿಗೆಯ ಸೃಜನಶೀಲತೆಯನ್ನು ನೋಡಿ ಅವರಿಗೆ "ಸಾಹಿತ್ಯ"ದ ಪದ್ಮಭೂಷಣ ಕೊಟ್ಟಿರಬಹುದು.

ನಮ್ಮ ನಡುವೆಯಿರುವ ಅದ್ಭುತ ಚಿಂತಕರಲ್ಲಿ ರಾಮ್ ಗುಹಾ ಒಬ್ಬರು. ಅವರು ಮೊದಲಿಗೆ ಓದಿದ್ದು ಅರ್ಥಶಾಸ್ತ್ರ [ಜೊತೆಗೆ ಕ್ರಿಕೆಟ್ ಕೂಡಾ ಆಡಿದರು] ಆದರೆ ಅವರೇ ಹೇಳುವಂತೆ ಅವರೊಬ್ಬ "ವಿಫಲ ಅರ್ಥಶಾಸ್ತ್ರಜ್ಞ" [ಮತ್ತು ವಿಫಲ ಕ್ರಿಕೆಟಿಗ] ಅಲ್ಲಿಂದ ಮುಂದಕ್ಕೆ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು - ಕಲಕತ್ತಾದ ಐಐಎಂನಲ್ಲಿ ಡಾಕ್ಟರೇಟ್ ಪಡೆದರು. ಒಂದು ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಭಾರತದ ಪರಿಸರದ ಸಾಮಾಜಿಕ-ಚರಿತ್ರಿಕ ಮೂಲಸೆಲೆಗಳನ್ನು ಗ್ರಹಿಸುವ ಮಹಾಪ್ರಬಂಧ ಬರೆದರು. ಆ ಸಮಯದಲ್ಲಿ ಅವರು ಬಹಳವಾಗಿ ಸಮೀಪದಿಂದ ನೋಡಿದ ಗೌರವದಿಂದ ಬರೆದ ’ಚಿಪ್ಕೋ ಚಳವಳಿ’ಯ ಸುಂದರಲಾಲ್ ಬಹುಗುಣಾರಿಗೂ ಈ ದಿನವೇ ಪದ್ಮವಿಭೂಷನ ಘೋಷಣೆಯಾಗಿರುವುದು ರಾಮ್‍ಗೆ ಅತ್ಯಂತ ಖುಷಿಯನ್ನೂ ನೀಡಿರಬಹುದು. ಪರಿಸರವಾದಿ, ಕ್ರಿಕೆಟ್ ಬರಹಗಾರ, ಚರಿತ್ರಕಾರ - ಹೀಗಲ್ಲಾ ಹಣೆಪಟ್ಟಿಯನ್ನು ಪಡೆದಿರುವ ರಾಮ್ ಚರಿತ್ರೆಯನ್ನು ಶಾಸ್ತ್ರೊಕ್ತವಾಗಿ ಓದಿದವರೇ ಅಲ್ಲ. ಬಹುಶಃ ಇದೇ ಕಾರಣದಿಂದ ಅವರಿಗಿರುವ ಅನೇಕ ಪಟ್ಟಿಗಳಿಗೆ ’ಸಾಹಿತ್ಯ’ದ ಮತ್ತೊಂದು ಪಟ್ಟಿಯನ್ನೂ ಸೇರಿಸಬೇಕೆಂದು ಸರಕಾರ ನಿರ್ಧರಿಸಿರಬಹುದು.

ರಾಮ್ ಗುಹಾರಿಗೆ ಪದ್ಮಭೂಷಣ ಬಂದದ್ದಕ್ಕೆ ನಾವು ಖುಷಿಪಡಬೇಕೇ? ಇನ್ನೂ ಅನೇಕರಿಗೆ ಬಂದಿರುವಾಗ ರಾಮ್ ಪ್ರತ್ಯೇಕತೆ ಏನು ಎನ್ನುವುದು ಸಹಜವಾದ ಪ್ರಶ್ನೆಯೇ. ಗುಹಾ ಎನ್ನುವ ಹೆಸರನ್ನು ಹೊತ್ತ ರಾಮ್ ಬಂಗಾಳದವರಲ್ಲ. ಅವರು ಹೇಳುವಂತೆ, "ಮೂಲತಃ ನಾವು ತಮಿಳು ಮಾತನಾಡುವವರು. ಇಲ್ಲೇ ಬೆಳೆದಿದ್ದರೆ ನನ್ನ ಹೆಸರು ಜಿ.ರಾಮಚಂದ್ರ ಆಗುತ್ತಿತು. ಆದರೆ ಉತ್ತರ ಭಾರತದಲ್ಲಿ ಬೆಳೆದದ್ದರಿಂದ ಜಿ ಅಂತ್ಯಕ್ಕೆ ಬಂದದ್ದಲ್ಲದೇ ವಿಸ್ತಾರವೂಗೊಂಡಿತು". ಹೀಗಾಗಿ ಪ್ರಶಸ್ತಿಯ ಯಾದಿಯಲ್ಲಿ ರಾಮ್ ಹೆಸರಿನ ಬದಿಯಲ್ಲಿ ರಾಜ್ಯದ ಹೆಸರು "ಕರ್ನಾಟಕ" ಎಂದು ಕಾಣಿಸಿದಾಗ ಭಾಷಾಪ್ರೇಮಿಗಳು ಖುಷಿಪಡುವರೇ? ಅಥವಾ ಇದನ್ನೂ ಭಾಷಾವಿವಾದವನ್ನಾಗಿ ಮಾಡಬಹುದೇ? ಎನ್ನುವ ಪ್ರಶ್ನೆ ಕ್ಷಣದ ಮಟ್ಟಿಗೆ ನನ್ನನ್ನು ಕಾಡಿತು. ನನಗೆ ತಿಳಿದ ಮಟ್ಟಿಗೆ ರಾಮ್ ಕನ್ನಡ ಮಾತನಾಡುವುದಿಲ್ಲ. ಕನ್ನಡ ಕಲಿಯುವ ಪ್ರಯತ್ನವನ್ನು ಅವರು ಮಾಡಿದಂತೆಯೂ ಇಲ್ಲ. ಆದರೆ ರಾಮ್ ಅವರನ್ನು ಗೌರವ ಕನ್ನಡಿಗನಾಗಿಸಲು ನನಗೆ ಯಾವ ಅಭ್ಯಂತರವೂ ಇಲ್ಲ. ಬೆಂಗಳೂರಿನಲ್ಲಿರುತ್ತಲೇ ಚರಿತ್ರೆಯಬಗ್ಗೆ, ಕ್ರಿಕೆಟ್ಟಿನ ಬಗ್ಗೆ ಮಾತನಾಡುತ್ತಲೇ ರಾಮ್ ಕರ್ನಾಟಕದವರಾಗಲು ಹಲವಾರು ಕಾರಣಗಳಿವೆ.

ಅವರ ಪುಸ್ತಕ "ಸ್ಟೇಟ್ಸ್ ಆಫ್ ಇಂಡಿಯನ್ ಕ್ರಿಕೆಟ್" ಪುಸ್ತಕದಲ್ಲಿ ಅವರು ಮೈಸೂರು ರಾಜ್ಯದ/ಕರ್ನಾಟಕದ ರಣಜಿ ಟೀಮಿನ ಬಗೆಗಿನ ಅಧ್ಯಾಯದಲ್ಲಿ ಹೀಗೆ ಬರೆಯುತ್ತಾರೆ: "೧೯೬೬ರಲ್ಲಿ ಎಂಟುವರ್ಷದ ಬಾಲಕನಾಗಿದ್ದ ನಾನು ಅತ್ಯಂತ ಬುದ್ಧಿವಂತಿಕೆಯ ನಿರ್ಧಾರವನ್ನು ಮಾಡಿದೆ......ಆಗ ನಾನು ರಣಜಿ ಪಂದ್ಯಗಳಲ್ಲಿ ಯಾವ ರಾಜ್ಯವನ್ನು ಬೆಂಬಲಿಸಬೇಕು ಅನ್ನುವ ಪ್ರಶ್ನೆ ನನ್ನ ಮುಂದಿತ್ತು. ಈ ಬಗೆಗಿನ ನಿರ್ಧಾರ ಜೀವನಾದ್ಯಂತ ನನ್ನ ಜೊತೆಗೇ ಇರುತ್ತಿತ್ತಾದ್ದರಿಂದ ಇದನ್ನು ಜಾಗರೂಕವಾಗಿ ಮಾಡಬೇಕಿತ್ತು. ನಿಜಕ್ಕೂ ನನಗಿದ್ದದ್ದು ಮೂರು ಆಯ್ಕೆಗಳು: ನಾನು ಬೆಳೆದ ರಾಜ್ಯವಾದ ಉತ್ತರಪ್ರದೇಶ, ನನ್ನ ಹಿರಿಯರು ಬಂದಿದ್ದ ತಮಿಳುನಾಡು, ಹಾಗೂ ನನ್ನ ಅಜ್ಜ-ಅಜ್ಜಿ ಈಚೆಗೆ ಬಂದು ವಸತಿ ಹೂಡಿದ್ದ ಕರ್ನಾಟಕ [ಆಗ ಮೈಸೂರು]. ನನ್ನ ಅಂತಿಮ ನಿರ್ಧಾರ ಕರ್ನಾಟಕವಾಗಿತ್ತು..... "

ಹೀಗೆ ಕರ್ನಾಟಕವನ್ನು ಕ್ರಿಕೆಟ್ಟಿನ ಕಾರಣಕ್ಕೆ ತಬ್ಬಿದ ರಾಮ್ ಎಂದೂ ಹೊರಗಿನವರಂತೆ ಪ್ರವರ್ತಿಸಿಲ್ಲ. ಕನ್ನಡ ಮಾತಾಡದ ಅಪ್ಪಟ ಕನ್ನಡಿಗರಾಗಲು ಅವರು ಅರ್ಹರು! ದೆಹಲಿಯಲ್ಲಿದ್ದ ಕೆಲಸದಲ್ಲಿದ್ದ ರಾಮ್ ಒಂದು ದಿನ ಮರಳಿ ಮಣ್ಣಿಗೆ ಎಂದು ಬೆಂಗಳೂರಿಗೆ ಬರಬೇಕೆಂದು ನಿರ್ಧರಿಸಿ ಬಂದೇಬಿಟ್ಟರು. ರಾಮ್ ಜೊತೆ ಮಾತಾಡುತ್ತಾ ನಾನು ಅವರನ್ನು ಹಿಂದೆ "ಬರೇ ಲೇಖನದಿಂದಲೇ ಬರುವ ಸಂಪಾದನೆಯಿಂದ ಜೀವನ ನಡೆಸುವ ಗಟ್ಟಿ ನಿರ್ಧಾರವನ್ನು ನೀವು ಧೈರ್ಯವಾಗಿ ಕೈಗೊಂಡದ್ದು ಗಮ್ಮತ್ತಿನದ್ದಾಗಿದೆ. ಇದು ಸುಲಭವಾದ ನಿರ್ಧಾರವಾಗಿರಲಾರದು" ಎಂದು ಕೇಳಿದ್ದೆ. ಅದಕ್ಕೆ ರಾಮ್ ಕೊಟ್ಟ ಉತ್ತರ ನನಗೆ ಆಶ್ಚರ್ಯ ಉಂಟುಮಾಡಿದರೂ ಅವರು ಅದನ್ನು ಬಹಳ ಸಹಜವಾಗಿ ಹೇಳಿದ್ದರು. "ನಿಜಕ್ಕೂ ಬೆಂಗಳೂರಿಗೆ ಬರಬೇಕು ಅನ್ನುವುದನ್ನು ನಾನು ನಿರ್ಧರಿಸಿಬಿಟ್ಟಿದ್ದೆ. ಕೆಲಸ ಸಿಕ್ಕರೆ ಒಳ್ಳೆಯದು, ಇಲ್ಲದಿದ್ದರೆ ಏನಾದರೂ ಹುಡುಕಿಕೊಳ್ಳಬಹುದು ಅನ್ನುವುದು ನನ್ನ ಭಾವನೆಯಾಗಿತ್ತು. ಇಲ್ಲಿನ ಸೆಲೆಕ್ಟ್ ಬುಕ್ ಷಾಪ್, ಪ್ರೀಮಿಯರ್‌ನಂತಹ ಪುಸ್ತಕದಂಗಡಿಗಳು ನನ್ನಂಥವನಿಗೆ ಮುಖ್ಯ. ಹೀಗಾಗಿ ಇಲ್ಲಿಗೆ ಬರುವುದೆಂದು ನಾನು ಮನಸ್ಸಿನಲ್ಲಿ ನಿರ್ಧರಿಸಿಬಿಟ್ಟಿದ್ದೆ.  ನನ್ನ ಹೆಂಡತಿಯೂ ಬೆಂಗಳೂರಿನವಳಾದ್ದರಿಂದ ಈ ನಿರ್ಧಾರ ನನಗೆ ಸುಲಭದ್ದಾಗಿತ್ತು. 

ಸೆಲೆಕ್ಟ್ ಮತ್ತು ಪ್ರೀಮಿಯರ್ ಬಗ್ಗೆ [ಚರ್ಚ್ ಸ್ಟ್ರೀಟಿನಲ್ಲಿರುವ ಬ್ಲಾಸಮ್ಸ್ ಬಗ್ಗೆ ಈಗೀಗ] ರಾಮ್ ಮಾತನಾಡುವುದಲ್ಲದೇ ಇಲ್ಲಿಗೆ ಅವರು ವಾಪಸ್ಸಾಗಲು ಈ ಪುಸ್ತಕದಂಗಡಿಗಳು ಕಾರಣ ಎಂದು ಹಲವು ಕಡೆ ಬರೆದೂ ಇದ್ದಾರೆ. ಹೀಗಾಗಿ ಬೆಂಗಳೂರಿನ ಸೆಳೆತ ಬರೇ ಪಬ್ಬಿನದೇ ಆಗಬೇಕಿಲ್ಲ ಎಂದು ರಾಮ್ ನಿರೂಪಿಸುತ್ತಾರೆ [ರಾಮ್ ಧೂಮಪಾನ ಮದ್ಯಪಾನ ಮಾಡುವುದಿಲ್ಲ]

ಪದ್ಮ ಪ್ರಶಸ್ತಿಯನ್ನು ಪಡೆದಿರುವ ರಾಮ್ ಈ ಪ್ರಶಸ್ತಿಗಳ ಉತ್ತುಂಗವಾದ ಭಾರತ ರತ್ನ ಪ್ರಶಸ್ತಿಯಬಗ್ಗೆ ಹಲವು ಬಾರಿ ಬರೆದಿದ್ದಾರೆ. ಎಂ.ಎಸ್. ಸುಬ್ಬುಲಕ್ಷ್ಮಿಗೆ ೧೯೯೮ರಲ್ಲಿ ಭಾರತ ರತ್ನ ಬಂದಾಗ "Redeeming the Bharat Ratna" ಎನ್ನುವ ಲೇಖನವನ್ನು ಬರೆದಿದ್ದರು. ಹೇಗೆ ಭಾರತ ರತ್ನ ತನ್ನ ಗೌರವವನ್ನು ಕಳೆದುಕೊಳ್ಳುತ್ತಿದೆ ಹಾಗೂ ಅದು ಗೌರವದ ಸಂಕೇತವಾಗಿ ಉಳಿಯಬೇಕಾದರೆ ಹೇಗೆ ಕೆಲವು ಪ್ರತಿಭಾನ್ವಿತರಿಗೆ ಅದನ್ನು ದಯಪಾಲಿಸಿ ಅದರ ಗೌರವವನ್ನು ಕಾಪಾಡಿಕೊಳ್ಳಬೇಕು ಎಂದು ೧೯೯೬ರಲ್ಲಿ ಇಂಡಿಯಾ ಟುಡೆಯ ಒಂದು ಪ್ರಬಂಧದಲ್ಲಿ ರಾಮ್ ಬರೆದಿದ್ದರು. ಆಗ ಅವರು ಸೂಚಿಸಿದ್ದದ್ದು ಎಂ.ಎಸ್. ಸುಬ್ಬುಲಕ್ಷ್ನೀ ಮತ್ತು ಲತಾ ಮಂಗೇಶ್ಕರ್ ಅವರ ಹೆಸರುಗಳು. ಆ ನಂತರ ಅವರು ಈ ವಿಷಯದ ಬಗ್ಗೆ ಬರೆಯುತ್ತಾ ತಮ್ಮ ಯಾದಿಗೆ ರವಿಶಂಕರ್ [ಸಿತಾರ್, ಶ್ರೀ ಶ್ರೀ ಅಲ್ಲ!] ಬಿಸ್ಮಿಲ್ಲಾ ಖಾನ್, ಅಬ್ದುಲ್ ಕಲಾಂ, ಅಮಾರ್ತ್ಯ ಸೇನ್ ಮತ್ತು ಶಿವರಾಮ ಕಾರಂತರ ಹೆಸರನ್ನು ಸೇರಿಸಿದ್ದರು. ಮತ್ತೊಂದು ಕಡೆ ಅವರು ಬಾಬಾ ಆಮ್ಟೆಯ ಹೆಸರನ್ನೂ ಸೂಚಿಸಿದ್ದರು. ಗಮ್ಮತ್ತಿನ ವಿಷಯವೆಂದರೆ ರಾಮ್ ಮಾತನ್ನೇ ಕೇಳುತ್ತಿದೆಯೇನೋ ಅನ್ನುವಂತೆ ಸರಕಾರ ಅವರು ಸೊಚಿಸಿದ ಎಲ್ಲರಿಗೂ [ಕಾರಂತ ಮತ್ತು ಬಾಬಾರನ್ನು ಹೊರತುಪಡಿಸಿ] ಭಾರತರತ್ನ ವಿವಿಧ ವರ್ಷಗಳಲ್ಲಿ ಘೋಷಿಸಿದೆ. ಹೀಗೆ ಭಾರತ ರತ್ನದ ಗೌರವವನ್ನು ಮರಳಿ ದಕ್ಕಿಸಲು ಬರೆದ ರಾಮ್‌ಗೆ ಅದೇ ಸರಣಿಯ ಭೂಷಣ ಬಂದಿರುವುದು ಒಳ್ಳೆಯದೇ ಹಾಗೂ ಆ ಪ್ರಶಸ್ತಿಯ ಗೌರವವನ್ನು ಉಳಿಸುವ ನಿಟ್ಟಿನದ್ದಾಗಿದೆ. 

ರಾಮ್ ಕನ್ನಡ ಕಲಿಯದೆಯೇ ಎಷ್ಟು ಚೆನ್ನಾಗಿ ಕನ್ನಡಿಗರ ಲೋಕದಲ್ಲಿ ಸೇರಿದ್ದಾರೆ ಅನ್ನುವುದು ನಮಗೆ ಖುಷಿಯ ವಿಷಯವಾಗಬೇಕು. ಅವರನ್ನು ಲಂಕೇಶ್ ಪತ್ರಿಕೆಯ ಕಛೇರಿಯಲ್ಲಿ ಲಂಕೇಶ್/ಆಶೀಶ್ ನಂದಿಯ ಜೊತೆ ಸಂವಾದ ನಡೆಸುವುದನ್ನು ಕಂಡಿದ್ದೆ. ಬೆಂಗಳೂರಿನ ವಿಷಯದಲ್ಲಿ ರಾಮ್ ಯಾವಾಗಲೂ ತಮ್ಮ ಧ್ವನಿಯನ್ನು ಕೇಳುವಂತೆ ಮಾಡುತ್ತಾರೆ. ಅಲ್ಲದೇ ಕನ್ನಡಿಗರ ಬಗ್ಗೆ ಆತ್ಮೀಯವಾಗಿ ಬರೆಯುತ್ತಾರೆ. ಅವರು ಎಷ್ಟೋ ಬಾರಿ ನನ್ನ ಬಳಿ ಶಿವರಾಮ ಕಾರಂತರ ಜೀವನ ಚರಿತ್ರೆಯನ್ನು ಉತ್ತಮವಾಗಿ ಯಾರಾದರೂ ಇಂಗ್ಲೀಷಿನಲ್ಲಿ ಬರೆದು ಪ್ರಕಟಿಸಬೇಕೆಂದು ಹೇಳಿರುವುದುಂಟು. ಅವರೇ ಸ್ವತಃ ಕಾರಂತರ ಬಗ್ಗೆ ಹಲವು ಕಡೆ ಬರೆದಿದ್ದಾರೆ. ಜೊತೆಗೆ ಡಿ.ಆರ್. ನಾಗರಾಜ್ ಬಗ್ಗೆ ಬರೆದಿರುವ "Rooted Cosmopolitan" ಅನ್ನುವ ಆತ್ಮೀಯ ಲೇಖನವೂ ಇದೆ. ಬಹುಶಃ ಕಾರಂತರಿಗೆ ಭಾರತ ರತ್ನ ಬರಬೇಕು ಎಂದು ಯಾವೊಬ್ಬ ಕನ್ನಡಿಗನೂ ಜೋರಾಗಿ ಕೇಳಿಲ್ಲವೇನೋ. ಆದರೆ ಗುಹಾ ಈ ಮಾತನ್ನು ಒಮ್ಮೆಯಲ್ಲದೇ ಹಲವು ಬಾರಿ ಹೇಳಿದ್ದಾರೆ. 

ಒಬ್ಬ ಪೂರ್ಣಾವಧಿ ಲೇಖಕನ ಜೀವನ ಹೇಗಿರಬಹುದು? ಈ ನಿರ್ಣಯವನ್ನು ರಾಮ್ ಅಂಥಹ ಮಧ್ಯಮವರ್ಗದ ವ್ಯಕ್ತಿ ಹೇಗೆ ಕೈಗೊಳ್ಳಬಹುದು ಅನ್ನುವುದರ ಬಗ್ಗೆ ನನಗೆ ತಿಳಿಯುವ ಆಸಕ್ತಿಯಿದ್ದದ್ದರಿಂದ ಈ ಬಗ್ಗೆ ಅವರನ್ನು ಹಿಂದೆ ನಾನು ಪ್ರಶ್ನಿಸಿದ್ದೆ. "ಇಲ್ಲಿಗೆ ಬಂದ ನಂತರ ಅನೇಕ ಕಡೆ ಕೆಲಸಕ್ಕೆ ಪ್ರಯತ್ನಿಸಿದ್ದೆ. ನನಗೆ ಸ್ವಲ್ಪ ನನ್ನದೇ ಸಮಯವೂ ಬೇಕಿತ್ತಾದ್ದರಿಂದ ಯೂನಿವರ್ಸಿಟಿ, ಐಐಎಸ್ಸಿ, ಐ-ಸೆಕ್ ಯಾವುದೇ ಸಂಸ್ಥೆಯಲ್ಲಿನ ನಿಯಮಗಳು ನನಗೆ ಹೊಂದಲಿಲ್ಲ.. ಹಾಗೇ ಸಮಯ ಕಳೆಯುತ್ತಾ, ಕೆಲಸವಿಲ್ಲದೆಯೂ ಬದುಕಬಹುದು ಅನ್ನುವುದು ನನಗೆ ಮನವರಿಕೆಯಾಯಿತು. ಮೊದಲಿಗೆ ಕೆಲವು ವಿದೇಶೀ ಯೂನಿವರ್ಸಿಟಿಗಳಲ್ಲಿ ಆಗಾಗ ಹೋಗಿ ಪಾಠಮಾಡುತ್ತಿದ್ದೆ. ಈಗ ಅದೂ ಕಡಿಮೆ ಮಾಡಿ ಹೆಚ್ಚು ಬರವಣಿಗೆಯನ್ನೇ ಮಾಡುತ್ತಿದ್ದೇನೆ" ಅಂದರು. ಹೀಗೆ ಕಾದಂಬರಿ ಬರೆಯದೇ, ಚರಿತ್ರೆಯಂತಹ ’ಒಣ’ ವಿಷಯವನ್ನಾಧಾರ ಮಾಡಿಕೊಂಡೇ ಆತ ಜೀವನವನ್ನು ಚನ್ನಾಗಿ ಮುಂದುವರೆಸುತ್ತಿರುವುದು ಅವರ ಬರವಣಿಗೆಯ ಅದ್ಭುತ ಶಕ್ತಿಯ ಕುರುಹಾಗಿದೆ. 

ಈಚೆಗೆ ಸಿಕ್ಕಾಗ ಕ್ರಿಕೆಟ್ ಬಗೆಗಿನ ಲೇಖನಗಳು ಈ ಮಧ್ಯೆ ಕಾಣುತ್ತಿಲ್ಲ ಎಂದು ನಾನು ಎತ್ತಿದ ತಕರಾರಿಗೆ "ಟೆಂಡೂಲ್ಕರ್ ರಿಟೈರಾಗುವುದಕ್ಕೆ ಮೊದಲು ನಾನು ಕ್ರಿಕೆಟ್ಟಿನ ಬಗ್ಗೆ ಬರೆಯುವುದನ್ನ ನಿಲ್ಲಿಸಬೇಕೆಂದು ನಿರ್ಧರಿಸಿದ್ದೆ, ಅದೂ ಆಯಿತು, ಅದರ ಬರವಣಿಗೆಯಲ್ಲಿ ಬರುತ್ತಿದ್ದ ಖುಷಿ ನನಗೆ ಈಗೀಗ ದಕ್ಕುತ್ತಿಲ್ಲ" ಎಂದು ರಾಮ್ ಹೇಳಿದರು.

ಕೆ.ವಿ.ಸುಬ್ಬಣ್ಣ, ಅಕ್ಷರ, ಡಿ.ಆರ್, ಲಂಕೇಶ್, ಅನಂತಮೂರ್ತಿ, ವಿವೇಕ, ಹೀಗೆ ಹಲವು ಬರಹಗಾರರೊಡನೆ ಸಂಪರ್ಕವಿರುವ, ಕನ್ನಡಿಗರ ತುಡಿತದ ಬಗ್ಗೆ ಅರಿವಿರುವ ಅಪರೂಪದ ಬೆಂಗಳೂರಿಗ ರಾಮ್. ಅವರ ರಚಿಸಿರುವ ಪುಸ್ತಕಗಳ ಯಾದಿ ಸಣ್ಣದೇನೂ ಅಲ್ಲ. ಕ್ರಿಕೆಟ್ಟಿನ ಬಗ್ಗೆ ಮೂರೂ ಮತ್ತೊಂದು ಪುಸ್ತಕ, ವೆರಿಯರ್ ಎಲ್ವಿನ್ ಬಗ್ಗೆ ಬರೆದ ಅದ್ಭುತ ಜೀವನಚರಿತ್ರೆ, ಭಾರತೀಯ ಇತಿಹಾಸದ ಬಗ್ಗೆ, ಹಾಗೂ ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಅವರ ರಚನೆಗಳನ್ನು ಕಾಣಬಹುದು. ಎಲ್ಲಕ್ಕಿಂತ ಮಿಗಿಲಾಗಿ ಅವರು ಬೇರೆಯವರ ಬಗ್ಗೆ ಬರೆದಿರುವ ಆತ್ಮೀಯ ಪ್ರಬಂಧಗಳು. ಎಲ್ಲವೂ ಸರಳ ಆಕರ್ಷಕ ಭಾಷೆಯಲ್ಲಿ, ಸಣ್ಣಪುಟ್ಟ ವಿವರಗಳೊಂದಿಗೆ ಆತ್ಮೀಯವಾಗಿ ಬರೆಯುತ್ತಾರೆ. ಡಿ.ಆರ್, ಸಿ.ಎಸ್.ವೆಂಕಟಾಚಾರ್, ಬೆಂಗಳೂರಿಗ ಪಿ.ಕೆ ಶ್ರೀನಿವಾಸನ್, ಬೆಂಗಳೂರಿನ ವಾದ್ಯಾರ್ - ಟಿ.ಜಿ.ವಿ, ಶಿವರಾಮ ಕಾರಂತ - ಹೀಗೆ ಅವರ ಲೇಖನಿಯ ಪ್ರೀತಿಗೆ ಪಾತ್ರರಾದವರು ಅನೇಕ. ಕಡೆಗೂ ಅವರು ಬೇಸರದಿಂದ "ದಕ್ಷಿಣ ಏಷಿಯಾದ ಜನ ಜೀವನಚರಿತ್ರೆಗಳನ್ನು ಯಾಕೆ ಬರೆಯುವುದಿಲ್ಲ, ಮತ್ತು ಯಾಕೆ ಬರೆಯಬೇಕು" ಅನ್ನುವ  ಲೇಖನವನ್ನು ಬರಿದಿದ್ದಾರೆ. 

ರಾಮ್ ಪರಿಸರದ ಬಗ್ಗೆ ಬರೆಯುವ ವ್ಯಕ್ತಿಯಾಗಿ ಹಿಂದೊಮ್ಮೆ ಅರುಂಧತಿ ರಾಯ್ ಬಗ್ಗೆ ಕೆಂಡ ಕಾರುತ್ತಾ ಒಂದು ಲೇಖನವನ್ನು ಬರೆದಿದ್ದರು. ಚಿಪ್ಕೋ ಆಂದೋಲನದಬಗ್ಗೆ ಮಹಾಪ್ರಬಂಧ ಬರೆದ ರಾಮ್ ಹೀಗೆ ಕೆಂಡಕಾರುವುದು ಎಲ್ಲರಿಗೂ ಆಶ್ಚರ್ಯವುಂಟುಮಾಡಿತ್ತು. ಹಾಗೆಯೇ ಚಾರಿತ್ರಿಕ ಕಾದಂಬರಿಗಳನ್ನು ಬರೆಯುವ ವಿಲಿಯಂ ಡಾಲ್ರಿಂಪಲ್‍ಗೆ ಕೂಡಾ ರಾಮ್ ಕಂಡರೆ ಅಷ್ಟಕ್ಕಷ್ಟೇ. ರಾಮ್ ಅವರುಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ ಅರುಂಧತಿಯ ಬಗ್ಗೆ ಅವರು ಅನಿತಾ ನಾಯರ್ ಜೊತೆ ಮಾತನಾಡುತ್ತಾ ಹೇಳುತ್ತಾರೆ: "ಆಕೆಯ ಬಗ್ಗೆ ನನ್ನ ವಿರೋಧ ಮೂರು ನೆಲೆಗಳಲ್ಲಿತ್ತು - ಆಕೆಯ ವೃತ್ತಾಕಾರದ/ಸುತ್ತಿಗೆಯಿಂದ ಬಡೆಯುವಂತಹ ಶೈಲಿ ನನಗೆ ಇಷ್ಟವಾಗಲಿಲ್ಲ, ಬದಲಿಗೆ ಅತಿಯಲ್ಲದ ಭಾಷ್ಯವಲ್ಲದ ವ್ಯಂಗ್ಯದ ಶೈಲಿ ನನಗೆ ಇಷ್ಟವಾಗುತ್ತದೆ. ಎರಡು - ಆಕೆ ಎಲ್ಲವನ್ನೂ ಸರಳೀಕರಿಸಿ ಸರಿ-ತಪ್ಪುಗಳ ನಡುವೆ ಇರುಕಿಸುವುದು ನನಗೆ ಹಿಡಿಸಲಿಲ್ಲ - ನಾವು ಚರ್ಚಿಸಬೇಕಿದ್ದ ವಿಷಯದ ಮಜಲುಗಳನ್ನು ಆಕೆ ಸರಳೀಕರಿಸಿಬಿಟ್ಟಿದ್ದಳು. ಮೂರು ಚರಿತ್ರೆಯನ್ನು ಓದಿದವನಾಗಿ, ಶಿವರಾಮ ಕಾರಂತ, ಮಹಾಶ್ವೇತಾದೇವಿ, ವೆರಿಯರ್ ಎಲ್ವಿನ್ ರಂತಹ ಜನರ ಕೆಲಸವನ್ನು ನೋಡಿದ್ದ ನನಗೆ ಈಕೆಯ ಅತೀ ಸರಳೀಕೃತ ಸಿದ್ಧಾಂತ ನನಗೆ ಒಪ್ಪಲು ಕಷ್ಟದ್ದಾಗಿತ್ತು". ಒಂದು ರೀತಿಯಲ್ಲಿ ರಾಮ್ ಸಾಹಿತ್ಯದ ಮೂಲಸೆಲೆಯಾದ ಸೃಜನಶೀಲತೆ, ವ್ಯಂಗ್ಯ, ಹಾಗೂ ಚರ್ಚೆಗೆ ಆಹ್ವಾನಿಸುವ, ವಿಮರ್ಶಕರಿಗೆ ಗ್ರಾಸ ಒದಗಿಸುವ ರೀತಿಯಲ್ಲಿ ಬರವಣಿಗೆ ಇರಬೇಕು ಎಂದು ನಂಬುವವರು. ಹೀಗಾಗಿಯೇ ಅವರ ಚರಿತ್ರೆಯ ಪುಸ್ತಕವೂ ಕಾದಂಬರಿಯ ಶೈಲಿಯಲ್ಲಿ ಓದಿಸಿಕೊಳ್ಳುತ್ತಲೇ ವಿಚಾರಗಳ ಅನೇಕ ಮಜಲುಗಳನ್ನು ತೆರೆದಿಡುತ್ತಲೇ ಹೋಗುತ್ತದೆ.

ಒಮ್ಮೆ ನಾನು ರಾಮ್‍ ಅವರನ್ನು ಕೇಳಿದ್ದೆ "ಇಂಥ ಅದ್ಭುತ ಭಾಷೆಯಿರುವ ನೀವು ಫಿಕ್ಶನ್ [ಕಥೆ ಕಾದಂಬರಿ] ಯಾಕೆ ಬರೆದಿಲ್ಲ?" ರಾಮ್ ನಕ್ಕು, ಅದು ನನಗೆ ಹೇಳಿ ಮಾಡಿಸಿದ್ದಲ್ಲ ಎಂದಷ್ಟೇ ಹೇಳಿದ್ದರು. ಅವರ ಬರವಣಿಗೆಯಿಂದ ಗಾಂಭೀರ್ಯ ತುಂಬಿದ ಪಂಡಿತರಂತೆ ರಾಮ್ ಕಂಡರೂ, ಅವರೊಂದಿಗೆ ಮಾತುಕತೆ ಬಹಳವೇ ಸರಳ. ಜೊತೆಗೆ ಅವರು ನೀವು ಹೇಳಿದ್ದನ್ನು ಕುತೂಹಲದಿಂದ ಕೇಳುವ [ಬಹುಶಃ ಅವರ ಬರವಣಿಗೆಗಾಗಿ ಸಣ್ಣ ಪುಟ್ಟ ವಿವರಗಳನ್ನು ಸಂಗ್ರಹಿಸುವ] ಪುಟ್ಟ ಬಾಲಕನಂತೆ ಕಾಣುತ್ತಾರೆ. ಯಾರೊಂದಿಗೂ ಆತ ಸಹಜ ಸಂಭಾಷಣೆಯನ್ನು ಕೈಗೊಳ್ಳಬಲ್ಲರು. 

ಹೀಗಿರುವ, ಬೆಂಗಳೂರಿಗೆ ಬಂದಾಗಲೆಲ್ಲಾ ಸಿಗುವ, ಒಂದು ಹರಟೆಗೆ ಸದಾ ಸಿದ್ಧರಿರುವ ಗೆಳೆಯ ರಾಮ್‌ಗೆ ಪದ್ಮಭೂಷಣ ದೊರೆತಿರುವುದು ನನಗೆ ಅತ್ಯಂತ ಖುಷಿಯ ವಿಷಯ. ಈ ಬೆಳಿಗ್ಗೆ ಅವರಿಗೆ ಫೋನ್ ಮಾಡಿದಾಗ ಅಭಿನಂದನೆಯ ನಂತರದ ಮಾತುಕತೆ ಎಂದಿನಂತೆಯೇ ಇತ್ತು.. ಈ ಬಾರಿ ಬೆಂಗಳೂರಿಗೆ ಬಂದಾಗ ಅವರ ಪ್ರಿಯವಾದ ಕೋಶೀಶ್ ಹೊಟೇಲಿನಲ್ಲಿ ಒಂದು ಚಹಾ, ಪ್ರೀಮಿಯರ್/ಸೆಲೆಕ್ಟ್ ಬುಕ್ ಷಾಪಿನಲ್ಲಿ ಒಂದು ಸುತ್ತು. ಹಾಗೂ ವಿಚಾರವಿನಿಮಯ. ವ್ಯತ್ಯಾಸವೆಂದರೆ ಬ್ರಂಟನ್ ರಸ್ತೆಯ ಅವರ ಮನೆಯ ಮೂಲೆಯೊಂದರಲ್ಲಿ ಪದ್ಮಭೂಷಣ ಪ್ರಶಸ್ತಿ ತೂಗುಬಿದ್ದಿರಬಹುದು. ಅಷ್ಟೇ.




1 comment:

Keshav.Kulkarni said...

ಸೊಗಸಾದ ಬರಹ, ಆಪ್ತತೆ ಇಷ್ಟವಾಯಿತು. ಗುಹಾ ಅವರನ್ನು ಓದುವಂತೆ ಪ್ರೇರೇಪಿಸಿದ್ದೀರಿ.
- ಕೇಶವ