ಯಶವಂತ ಚಿತ್ತಾಲರಿಗೆ ಪಂಪ ಪ್ರಶಸ್ತಿ ಬಂದಿದೆ ಅನ್ನುವುದು ಖುಶಿಯ ವಿಷಯ. ದೂರದೂರಿನಲ್ಲಿ ಕೂತು ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತಿರುವ ಚಿತ್ತಾಲರು ಯಾವ ಪ್ರಶಸ್ತಿಯನ್ನೂ ಅಟ್ಟಿಸಿಕೊಂಡು ಹೋದವರಲ್ಲ. ಅಥವಾ ಅಲ್ಲಿ ಇಲ್ಲಿ ಸೆಮಿನಾರುಗಳಲ್ಲಿ ಕಾಣಿಸಿಕೊಂಡವರಲ್ಲ. ತಮ್ಮಷ್ಟಕ್ಕೆ ತಾವು ಬ್ಯಾಂಡ್ಸ್ಟಾಂಡಿನಲ್ಲಿ ಕೂತು ಸಾಹಿತ್ಯದ ಬಗ್ಗೆ ಸದಾ ಚಿಂತಿಸುತ್ತ, ಹೊಸ ಸಾಹಿತ್ಯವನ್ನು ಬೆರಗಿನಿಂದ ನೋಡುತ್ತಾ, ಕ್ರಿಕೆಟ್ ಮ್ಯಾಚುಗಳನ್ನು ಚಾಚೂ ಬಿಡದೇ ನೋಡುತ್ತಾ ಶಿಸ್ತಿನ ಜೀವನವನ್ನು ಜೀವಿಸುತ್ತಿರುವವರು. ಕಣ್ಣಿಗೆ ಬೀಳದಿರುವ ವ್ಯಕ್ತಿಗಳನ್ನು ನಾವು ಬಹುತೇಕ ಮರೆತುಬಿಡುತ್ತೇವೆ. ಹಾಗೆ ಮರೆಯದಿರುವಂತೆ ಸದಾ ನೆನಪಿನಲ್ಲಿ ಉಳಿಯಬೇಕಾದರೆ ಎರಡು ಮಾರ್ಗಗಳು ಮಾತ್ರ ಇವೆ. ಒಂದು: ಚಿತ್ತಾಲ, ರಾಘವೇಂದ್ರ ಖಾಸನೀಸ, ದೇವನೂರ ಮಹಾದೇವ -- ಇಂಥವರ ಥರ ಅದ್ಭುತ ಪ್ರತಿಭೆ ಇರಬೇಕು, ಇಲ್ಲವೇ ಆಗಾಗ ಏನಾದರೊಂದು ಬರೆದು ಜನರ ಗಮನವನ್ನು ಸೆಳೆಯುತ್ತಿರಬೇಕು. ಚಿತ್ತಾಲರಿಗೆ ಅದ್ಭುತ ಪ್ರತಿಭೆಯೂ ಇದೆ, ಜೊತೆಗೆ ನಿರಂತರ ಒಳ್ಳೆಯ ಕೃತಿಗಳನ್ನು ಸಾಹಿತ್ಯಕ್ಕರ್ಪಿಸುವ ಶಿಸ್ತೂ ಇದೆ. ಹೀಗಾಗಿಯೇ ಅವರು ಒಂದಕ್ಕಿಂದ ಒಂದು ಉತ್ತಮ ಕೃತಿಗಳನ್ನು ನಮಗೆ ನೀಡುತ್ತಾ, ನಮ್ಮನ್ನೆಲ್ಲ ಪ್ರೋತ್ಸಾಹಿಸುತ್ತಾ, ಹುರುದುಂಬಿಸುತ್ತಾ ಬೆಳೆದು ನಿಂತಿದ್ದಾರೆ.
ಚಿತ್ತಾಲರು ಬಹಳ ಶಿಸ್ತಿನ ವ್ಯಕ್ತಿ. ಅವರ ನಡೆಯಲ್ಲೂ ನುಡಿಯಲ್ಲೂ ಬರವಣಿಗಯಲ್ಲೂ ಈ ಶಿಸ್ತು ಕಾಣಿಸುತ್ತದೆ, ಎಲ್ಲವೂ ನಿಯೋಜಿತವಾಗಿ ನಡೆಯಬೇಕು. ಎಲ್ಲಕ್ಕೂ ಒಂದು ಪದ್ಧತಿಯಿರಬೇಕು, ಒಂದು ಕ್ರಮವಿರಬೇಕು. ಇಲ್ಲವಾದಲ್ಲಿ ಚಿತ್ತಾಲರು ಅಸಹನೆಗೊಳ್ಳುತ್ತಾರೆ. ಅವರು ಬರೆಯುವ ಕಥೆಯ ಹಸ್ತಪ್ರತಿಯೂ ಅಷ್ಟೇ - ಅದನ್ನೇ ತೆಗೆದು ಮುದ್ರಿಸಬಹುದು - ಅಷ್ಟು ಸ್ಫುಟವಾಗಿರುತ್ತದೆ. ಅನೇಕ ವರ್ಷಗಳಿಂದಲೂ ಗಮನಿಸುತ್ತ ಬಂದಿದ್ದೇನೆ - ಅವರ ಕೈ ಬರಹ ಒಂದಿಷ್ಟೂ ಬದಲಾಗಿಲ್ಲ. ಅವರ ಹಸ್ತಪ್ರತಿಯನ್ನು, ಅಥವಾ ಅವರು ಬರೆದ ಕಥೆಯನ್ನು ಮುದ್ರಣಕ್ಕೆ ಮುನ್ನ ನೋಡುವ ಸವಲತ್ತನ್ನು ಅವರು ಕೆಲವೇ ಗೆಳೆಯರಿಗೆ ನೀಡಿದ್ದಾರೆ. ಆ ಸವಲತ್ತು ಸುಲಭವಾಗಿ ದಕ್ಕುವ ಸವಲತ್ತಲ್ಲ. ಅದನ್ನು ಗೆಳೆತನ ನಿಭಾಯಿಸಿ ಪಡೆಯಬೇಕು. ಚಿತ್ತಾಲರ ಗೆಳೆತನ ನಿಭಾಯಿಸುವುದು ಸರಳವಾದ ಮಾತೇನೂ ಅಲ್ಲ. ಅವರು ಗೆಳೆತನಕ್ಕೆ ಎಷ್ಟು ಆದ್ಯತೆ ನೀಡುತ್ತಾರೋ ಅಷ್ಟೇ ನಿಮ್ಮಿಂದ ಬಯಸುತ್ತಾರೆ ಸಹ. ಹೀಗಾಗಿ ನೀವು ಮುಂಬಯಿಗೆ ಹೋಗಿ ಬರೇ ಪೋನ್ ಮಾಡಿ ಅದರ ಮೂಲಕ ನಿಮ್ಮ ಸ್ನೇಹವನ್ನು ನಿಭಾಯಿಸುವ ಹುನ್ನಾರ ಹಾಕಿದ್ದರೆ ಮರೆತುಬಿಡಿ. ಅವರು ಪ್ರೀತಿಯ ನಿಷ್ಟೂರದಿಂದಲೇ ನಿಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಯಾವುದೇ ವಿಚಾರವನ್ನಾಗಲೀ ಅವರು ಎಷ್ಟು ಕ್ರಮಬದ್ಧವಾಗಿ ನೋಡುತ್ತಾರೆಂದರೆ, ಎಲ್ಲಕ್ಕೂ ಒಂದು ಫೈಲು ಮತ್ತು ಅದಕ್ಕೆ ಒಂದು ಕ್ರಮಸಂಖ್ಯೆ ಬಹುಶಃ ಅವರು ಹಾಕಿಟ್ಟುಬಿಟ್ಟಿರುತ್ತಾರೆ.
"ಬಿಯರು ಕುಡಿಯಲು ತಕ್ಕ ಸಮಯ ಸಂಜೆ ಏಳು" ಅನ್ನುವ ಅವರ ಮಾತನ್ನು ಜಯಂತ ತನ್ನ ಬರವಣಿಗೆಯಲ್ಲಿ ಬರೆದಿದ್ದಾನೆ. ಆದರೆ ಅದು ಬಿಯರು ಕುಡಿಯುವ ಸಮಯಕ್ಕೆ ಮಾತ್ರ ಸೀಮಿತವಾದದ್ದಲ್ಲ. ಬಿಯರಿನ ಬಾಟಲಿ ಹಿಡಿಯುವ ರೀತಿ, ಅದರ ಮುಚ್ಚಳವನ್ನು ತೆಗೆಯುವ ರೀತಿ ಅದನ್ನು ಗ್ಲಾಸಿಗೆ ನೊರೆಬರದಂತೆ ಹಾಕುವ ರೀತಿಯೂ ಅವರಿಗೆ ಮುಖ್ಯವಾಗುತ್ತದೆ. ಲಾವಾಸ್ ಎಂಬ ಗಾಂಧಿಬಜಾರಿನ ಬಾರಿನಲ್ಲಿ ಕೂತು ಜೋರಿನ ಚರ್ಚೆ ಮಾಡುತ್ತಿದ್ದ ಡಿ.ಆರ್. ಶೂದ್ರ, ಕೀ.ರಂ. ತಿರುಮಲೇಶರ ನಡುವೆ ಚಿತ್ತಾಲರನ್ನು ಊಹಿಸಲೂ ಸಾಧ್ಯವಿಲ್ಲ. ಅವರಿಗೆ ಎಲ್ಲವೂ ಥಾಟಾಗಿ ನೀಟಾಗಿ ಇರಬೇಕು. ಬಿಯರಿನ ಸಮಯ ಏಳು, ಅದರ ಜೊತೆಗೆ ತೆಗೆದುಕೊಳ್ಳಬೇಕಾದ ತಿಂಡಿ ಏನು, ಬಿಯರು ಕುಡಿದ ಎಷ್ಟು ಹೊತ್ತಿನ ನಂತರ ಊಟ ಮಾಡಬೇಕು.. ಎಲ್ಲವೂ ನಿಯೋಜಿತವಾಗಿರಬೇಕು.
ಚಿತ್ತಾಲರಿಗೆ ಮಧುಮೇಹವಿದೆ. ಇಷ್ಟು ಶಿಸ್ತನ್ನು ಪಾಲಿಸುವ, ಈಗಲೂ ದಿನಾ ವಾಕಿಂಗ್ ಹೋಗುವ ಅವರಿಗೆ ಯಾವ ರೋಗವೂ ಬರಲಿಕ್ಕೆ ಸಾಧ್ಯವಿಲ್ಲ. ಆದರೆ ಅವರಿಗೆ ಮಧುಮೇಹ ಎನ್ನುವುದು ತಿಳಿದಾಗ ಒಂದು ಗಮ್ಮತ್ತಿನ ವಿಚಾರ ಆಯಿತೆಂದು ಕೇಳಿದ್ದೇನೆ. ಮಧುಮೇಹದಿಂದಾಗಿ ದಿನವೂ ಊಟಕ್ಕೆ ಮೊದಲು ಅವರು ಇನ್ಸುಲಿನ್ ಇಂಜೆಕ್ಷಣ್ ತೆಗೆದುಕೊಳ್ಳಬೇಕು. ಅದನ್ನು ದಿನವೂ ತೆಗೆದುಕೊಳ್ಳಬೇಕಾದ್ದರಿಂದ ತಮಗೆ ತಾವೇ ಚುಚ್ಚಿಕೊಳ್ಳುವ ಅಭ್ಯಾಸ ನಡೆಸಬೇಕಿತ್ತು. ಶಿಸ್ತಿನ ಚಿತ್ತಾಲರು ಅಭ್ಯಾಸ ಮಾಡುವುದು ಹೇಗೆ? ಒಂದು ಸೌತೇಕಾಯನ್ನು ಹಿಡಿದು ಅದಕ್ಕೆ ಸೂಜಿ ಚುಚ್ಚಿ ಅಭ್ಯಾಸ ಮಾಡಿ ಕೈಯನ್ನು ಪಳಗಿಸುವ ಪ್ರಯತ್ನ ಮಾಡಿದ್ದರೆಂದು ಪ್ರತೀತಿ. ಅದನ್ನು ನೋಡಿ ಡಾಕ್ಟರನಾದ ಅವರ ಮಗ ರವಿ ಹೇಳಿದ್ದನಂತೆ: "ಸೌತೇಕಾಯಿಗೆ ಚುಚ್ಚಿ ಪ್ರಯೋಜನವಿಲ್ಲ. ದಿನವೂ ಕೈಗೇ ಚುಚ್ಚಿಕೊಂಡು ಅಭ್ಯಾಸ ಮಾಡಿಕೊಳ್ಳಿ" ಎಂದು. ಊಟದ ವಿಚಾರದಲ್ಲೂ ಈ ಶಿಸ್ತನ್ನು ಅವರು ತೋರಿಸುತ್ತಾರೆ. ಅವರ ತಟ್ಟೆಯಲ್ಲಿ ಅನೇಕ ಕಟೋರಿಗಳು. ಎಲ್ಲವೂ ಕಟೋರಿಯನುಸಾರವಾಗಿ, ಒಂದು ವಾಟಿಕೆ ಅನ್ನ ತುಸುವಷ್ಟೇ ತರಕಾರಿ, ಲೆಕ್ಕ ಹಾಕಿದಂತೆ ರೊಟ್ಟಿ ಎಲ್ಲವೂ ಇಂತಿಷ್ಟು... ಹೆಚ್ಚೂ ಇಲ್ಲ ಕಡಿಮೆಯೂ ಇಲ್ಲ. ಹೀಗಾಗಿಯೇ ಅವರು ಜಾಗೃತ ಸಾಹಿತ್ಯ ಸಮ್ಮೇಳನಕ್ಕೆ ಬಂದಾಗ ಅವರು ಕೋರಿದ್ದ ಆಂಧ್ರಾ ಊಟಕ್ಕೆ ಕರೆದೊಯ್ಯಲು ನಾವುಗಳು ತಯಾರಿದ್ದೆವು. ಎಂದಿನಂತೆ ಶಿಸ್ತೇ ಇಲ್ಲದ ಜಯಂತ ಮಾಯವಾಗಿದ್ದ. ಚಿತ್ತಾಲರು ಸಿಟ್ಟಾಗಿ ತುಸುವೇ ಏರಿದ ದನಿಯಲ್ಲಿ ಹೇಳಿದ್ದರು - "ನಾನು ಡಯಾಬಿಟಿಕ್.. ತುಸುವೇ ಸಮಯದಲ್ಲಿ ಊಟ ಸಿಗದಿದ್ದರೆ ನನ್ನ ಜ್ಞಾನ ತಪ್ಪಬಹುದು." ಹೆದರಿದ ನಾವೆಲ್ಲ ತಕ್ಷಣ ಚಿತ್ತಾಲರನ್ನು ಆಟೋದಲ್ಲಿ ಏರಿಸಿ ತಕ್ಷಣವೇ ಕಲಾಕ್ಷೇತ್ರದಿಂದ ನಾಗಾರ್ಜುನಾಕ್ಕೆ ಕರೆದೊಯ್ದೆವು. ಅಲ್ಲಿಗೆ ಸೇರಿದ ನಂತರ ಚಿತ್ತಾಲರು ತುಂಟತನದಿಂದ ಹೇಳುತ್ತಾರೆ "ನನ್ನ ಬಳಿ ಚಾಕೊಲೇಟ್ ಇತ್ತು, ಅಂಥಾ ಕಷ್ಟದ ಪರಿಸ್ಥಿತಿಯೇನೂ ಅಲ್ಲ.. ಈಗ ನಾನು ಇನ್ಸುಲಿನ್ ತೆಗೆದುಕೊಳ್ಳುತ್ತೇನೆ!!"
ನಾಗಾರ್ಜುನಾ ಅಂದಾಗ ನನಗೆ ಮತ್ತೊಂದು ವಿಚಾರವೂ ನೆನಪಾಗುತ್ತದೆ. ರೆಸಿಡೆಂಸಿ ರಸ್ತೆಯಲ್ಲಿ ದಿವಾಕರ್ ಜೊತೆ ನಾನು ನಡೆಯುತ್ತಿದ್ದೆ. ನಾಗಾರ್ಜುನಾದ ಬಳಿ ಬರುವ ವೇಳೆಗೆ ನಾಗಾರ್ಜುನಾದಿಂದ, ಕೆಳಗಿದ್ದ ಚೈನೀಸ್ ರೆಸ್ಟುರಾದಿಂದ ಆಹಾರದ ವಾಸನೆ ಬರುತ್ತಿತ್ತು. ಆಂಧ್ರಮಸಾಲೆಗೆ ಘಮ್ಮೆಂದು ಫ್ರೈಡ್ ರೈಸಿನ ಆಸ್ವಾದವನ್ನು ಬೆರೆಸಿ - ತುಸುವೇ ಈರುಳ್ಳಿಯನ್ನು ವಗ್ಗರಣೆ ಹಾಕಿದಾಗ ಬರುವ ಸಮ್ಮಿಶ್ರ ಪರಿಮಳವದು. "ಈ ವಾಸನೆ ಹೇಗಿದೆ?" ದಿವಾಕರ್ ಕೇಳಿದರು. "ಯಾಕೆ?, ಹಸಿವಾಗಿರುವುದರಿಂದ ಅದ್ಭುತ ಅಂತಲೇ ಅನ್ನಿಸುತ್ತಿದೆ. ಆದರೆ ಸಸ್ಯಾಹಾರಿಯಾದ ನನಗೆ ಇದು ಉಪಯೋಗದ್ದಲ್ಲ" ಎಂದೆ. ಅದಕ್ಕೆ ದಿವಾಕರ್ ಹೇಳಿದ ಮಾತು ಕೇಳಿ ನಾನು ಅವಾಕ್ಕಾದೆ "ಊಟ ಮಾಡುವುದಕ್ಕಲ್ಲ ಕೇಳಿದ್ದು. ಈ ವಾಸನೆಯನ್ನು ನೀವು ಬರಹದಲ್ಲಿ ಗ್ರಹಿಸಲು ಸಾಧ್ಯವೇ?".. ನನ್ನ ಕನ್ನಡ ಎಷ್ಟಾದರೂ ಅಷ್ಟಕ್ಕಷ್ಟೇ. "ಇಲ್ಲ, ಅದು ನನ್ನ ಕೈಲಾಗುವ ಕೆಲಸವಲ್ಲ" ಅಂದೆ. ಈ ವಾಸನೆಯನ್ನು, ಇಲ್ಲಿನ ಈಗಿನ ಭಾವನೆಯನ್ನು ಅದ್ಭುತವಾಗೆ ಬರವಣಿಗೆಯಲ್ಲಿ ಸೆರೆಹಿಡಿಯಬಲ್ಲವರು ಚಿತ್ತಾಲರು ಮಾತ್ರ ಅಂತ ದಿವಾಕರ್ ಹೇಳಿದರು. ಚಿತ್ತಾಲರ ಬರವಣಿಗೆಯನ್ನು ಕಂಡಾಗ ದಿವಾಕರ್ ಹೇಳಿದ್ದು ಸರಿ ಅನ್ನಿಸುತ್ತದೆ. ಇಂತಹ ಸೂಕ್ಷ್ಮಗಳನ್ನು ಸೆರೆಹಿಡಿಯಬಲವರು ಚಿತ್ತಾಲರು ಮಾತ್ರ!
ಶಿಕಾರಿ ಬರೆಯುವಾಗ ಅವರು ತಮ್ಮ ವೃತ್ತಿಯ ಉತ್ತುಂಗದಲ್ಲಿದ್ದರು. ಅಂದರೆ ಆಗ ಅವರು ಬೇಕ್ಲೈಟ್ ಹೈಲಾಮ್ನ ಕೆಲಸ ಮಾಡುತ್ತಲೇ ಮುಂಬಯಿ, ಹೈದರಬಾದು ಮತ್ತು ಇತರ ಜಾಗಗಳಿಗೆ ಪ್ರಯಾಣಿಸುತ್ತಲೇ ಏರ್ಪೋರ್ಟ್ ಲೌಂಜುಗಳಲ್ಲಿ ಕಾದಂಬರಿಯನ್ನು ಬರೆಯುತ್ತಿದ್ದರಂತೆ. ಪುರುಷೋತ್ತಮ ಬರೆಯುವಾಗ ಅವರು ಪ್ರತಿದಿನ ಮುಂಜಾನೆ ಐದು ಘಂಟೆಗೇ ಎದ್ದು ಇಂತಿಷ್ಟು ಪುಟಗಳು ಅಂತ ಬರೆಯುತ್ತಿದ್ದರಂತೆ. ಪುರುಷೋತ್ತಮ ಬರೆದು ಮುಗಿಸಿದ ಕೆಲ ದಿನಗಳಲ್ಲಿ ಅವರ ಮನೆಗೆ ಹೋಗಿದ್ದಾಗ ಸೋಫಾದ ಒಂದು ಭಾಗ ಮಾತ್ರ ಜೀರ್ಣವಾಗಿತ್ತು. ನಾನು ಉಡಾಫೆಯಿಂದ "ಅದು ಪುರುಷೋತ್ತಮ ಸೃಷ್ಟಿಯಾದ ಜಾಗವೇ?" ಅಂತ ಕೇಳಿದೆ. ನಿಜಕ್ಕೂ ಅದು ಅವರು ಕೂತು ಕಾದಂಬರಿಯನ್ನು ಬರೆಯುತ್ತಿದ್ದ ಜಾಗವೇ ಆಗಿತ್ತು! ಅಲ್ಲಿಂದ ಮುಂಜಾನೆಯ ಸಮುದ್ರದ ದೃಶ್ಯ ಕಿಟಕಿ ತೆರೆದು ಕತ್ತಲ ಸಮುದ್ರವನ್ನು ನೋಡುತ್ತಾ ಕಾದಂಬರಿಯ ರಚನೆ ಮಾಡುತ್ತಿದ್ದರು! ಪುರುಷೋತ್ತಮದ ಹಸ್ತಪ್ರತಿಯ ತಯಾರಾದಾಗಲೇ ನನಗೆ ಚಿತ್ತಾಲರ ಪರಿಚಯವಾದದ್ದು. ಅವರು ಅದನ್ನು ಮುಗಿಸಿ ತುಂಬಾ ಹುರುಪಿನಿಂದ ಅದನ್ನು ಆಯ್ದ ಗೆಳೆಯರಿಗೆ ತೋರಿಸಲು ಅದೇ ಕೆಲಸವಾಗೆ ಬೆಂಗಳೂರಿಗೆ ಬಂದಿದ್ದರು. ವಿವೇಕನ ಜೊತೆ ಅಬ್ಬೇಪಾರಿಯಾಗಿ ಓಡಾಡುತ್ತಿದ್ದ ನನಗೂ ಆ ಹಸ್ತಪ್ರತಿ ಓದುವ ಭಾಗ್ಯ ಒದಗಿತು. ಆದರೆ ನನ್ನ ಕೈಗೆ ಹಸ್ತಪ್ರತಿ ಕೊಡುವ ಮುನ್ನ ನಾನು ಆ ಸವಲತ್ತಿಗೆ ಪಾತ್ರ ಅನ್ನುವುದನ್ನು ಚಿತ್ತಾಲರಿಗೆ ನಿರೊಪಿಸಿದ ನಂತರವೇ ನನಗೆ ಅದರ ಮೇಲೆ ಕೈಯಿಡಲು ಪರವಾನಗಿ ಸಿಕಿದ್ದು. ಅದರ ಅಂತ್ಯದ ಬಗ್ಗೆ ನಾನು ಏನೋ ಟಿಪ್ಪಣಿ ಮಾಡಿದ್ದೆ. ಮೊದಲಿಗೆ ಚಿತ್ತಾಲರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಅನ್ನಿಸುತ್ತದೆ. ಆದರೆ ಮುಂಬಯಿಗೆ ಹೋದ ನಂತರ ಸ್ವಲ್ಪ ಬದಲಾವಣೆಗಳನ್ನು ಮಾಡಿ ಆ ಬಗ್ಗೆ ನನಗೆ ಹೇಳಿದರು ಸಹ!
ಪುರುಷೋತ್ತಮದ ನಂತರ ಬರೆದ ಕೇಂದ್ರ ವೃತ್ತಾಂತದ ರೂಪರೇಶೆಗಳನ್ನು ಅವರು ವಿವರಿಸಿದ ರೀತಿಯೇ ಗಮ್ಮತ್ತಿನದು. ಒಂದು ಕಾಗದ ತೆಗೆದುಕೊಂಡು ಅದರಲ್ಲಿ ಒಂದು ಚುಕ್ಕೆ ಇಟ್ಟು - "ಇದು ಕೇಂದ್ರ" ಎಂದರು. ನಂತರ ಅದರ ಸುತ್ತಲೂ ಒಂದು ವೃತ್ತಾಕಾರವನ್ನು ಮಾಡಿದರು. ವೃತ್ತದ ಮೇಲೆ ಮತ್ತೊಂದು ಚುಕ್ಕೆಯನ್ನು ಇಟ್ಟರು. ಈ ವ್ಯಕ್ತಿ ವೃತ್ತದ ಮೇಲಿದ್ದಾನೆ, ದೂರದಿಂದ ಕಥೆಯ ಆಗುಹೋಗನ್ನು ನೋಡುತ್ತಿದ್ದೇನೆ ಅನ್ನುವ ಭ್ರಮೆಯಲ್ಲಿದ್ದಾನೆ. ಆದರೆ ಅವನು ನಿಂತಿರುವ ಪೆರಿಫರಿ ಮತ್ತೊಂದು ವೃತ್ತದ ಬಿಂದು ಅನ್ನುವುದೂ, ಅವನು ಇನ್ನೂಂದು ಕಥೆಯ ಕೇಂದ್ರ ಅನ್ನುವುದೂ ಅವನಿಗೆ ತಿಳಿದಿಲ್ಲ, ನನ್ನ ಕಾದಂಬರಿಯ ಪರಿಕಲ್ಪನೆ ಇದು" ಎಂದರು. ಕಥೆಯಲ್ಲಿ ಬಂದಾತ ಮನೆಗೂ ಬಂದು ಕದ ತಟ್ಟುವುದು ಅಂದರೆ ಇದೇಯೇ!
ಒಮ್ಮೆ ನಾನು ಮುಂಬಯಿಗೆ ಬರುತ್ತಿರುವುದಾಗ ಅಹಮದಾಬಾದಿನಿಂದ ಫೋನ್ ಮಾಡಿದೆ. ಯಾವುದೋ ಕಾರಣಕ್ಕಾಗಿ ತಾರೀಖುಗಳ ಬಗ್ಗೆ ಸ್ವಲ್ಪ ಗೊಂದಲವಾಗಿತ್ತೆನ್ನಿಸುತ್ತದೆ. ಅವರು ನಿರೀಕ್ಷಿಸಿದ್ದು ನಾನು ಭಾನುವಾರ ಮುಂಬಯಿಗೆ ಬರುತ್ತೇನೆ ಎಂದು. ಆದರೆ ನಾನು ಹೋದದ್ದು ಸೋಮವಾರದಂದು. ಏರ್ಪೋರ್ಟಿನಿಂದ ಫೋನ್ ಮಾಡಿದಾಗ ಅವರು "ನಿನ್ನೆಯೆಲ್ಲಾ ನಿರೀಕ್ಷೆ ಮಾಡಿದೆ, ಫೋನೂ ಎತ್ತಲಿಲ್ಲ" ಎಂದು ಹೇಳಿದರು. "ಈಗ ಬರಬಹುದೇ?" ಎಂದು ಕೇಳಿದೆ.. "ಬನ್ನಿ, ಬನ್ನಿ" ಅಂದರು. ಮನೆಗೆ ಹೋದಾಗ ಚಿತ್ತಾಲರಿಗಿದ್ದ ಚಿಂತೆ ಏನು ಗೊತ್ತೇ? "ನಿನ್ನೆ ಬರುತ್ತೀರೆಂದು ಎಣಿಸಿ ಗಡ್ಡ ಮಾಡಿಕೊಂಡಿದ್ದೆ. ಈಗ ದಿಢೀರೆಂದು ಬಂದಿದ್ದೀರ. ಗಡ್ಡ ಮಾಡಿಕೊಳ್ಳಲೂ ಸಮಯವಾಗಿಲ್ಲ" ಎನ್ನುವುದೇ ಅವರ ಗೊಂದಲವಾಗಿತ್ತು.
ಚಿತ್ತಾಲರ eye for detail ಈ ಎಲ್ಲ ವೃತ್ತಾಂತಗಳಲ್ಲಿ ಕಾಣಿಸುತ್ತದೆ. ಮತ್ತೆರಡು ಗಮ್ಮತ್ತಿನ ವಿಷಯಗಳನ್ನು ಹೇಳಿ ನನ್ನ ಈ ಚಿತ್ರಣವನ್ನು ನಿಲ್ಲಿಸುತ್ತೇನೆ. ಜಾಗೃತ ಸಾಹಿತ್ಯ ಸಮ್ಮೇಳನದ ಸಮಯಕ್ಕಿ ದೂರದರ್ಶನದವರು ಚಿತ್ತಾಲರು ಒಂದು ಪುಟ್ಟ ಸಂದರ್ಶನವನ್ನು ಕಲಾಕ್ಷೇತ್ರದ ಪ್ರಾಂಗಣದಲ್ಲಿ ಮಾಡಿದರು. ಚಿತ್ತಾಲರು ಹಾಗೆ ತಮ್ಮನ್ನು ಯಾರಾದರೂ ಕ್ಯಾಮರಾದ ಮುಂದೆ ನಿಲ್ಲಿಸಬಹುದೆಂದು ಊಹಿಸಿರಲಿಲ್ಲ ಅನ್ನಿಸುತ್ತದೆ. ತಕ್ಷಣಕ್ಕೆ ತಾವು ಹೇಳಬೇಕಾದ್ದು ಹೇಳಿಬಂದರಾದರೂ, ರಾತ್ರೆ ಊಟದ ಸಮಯದಿಂದಲೇ ತಮ್ಮ ಅಸಹನೆಯನ್ನು ವ್ಯಕ್ತ ಪಡಿಸಿದರು. ನೋಡಿ ಆ ಸಂದರ್ಶನದಲ್ಲಿ ನಾನು ಟೀಶರ್ಟ್ ಹಾಕಿದ್ದೇನೆ. ಇದು ಸೀರಿಯಸ್ಸಾದ ವಿಷಯ. ಟಿಷರ್ಟ್ ಸರಿಹೋಗುವುದಿಲ್ಲ" ಹೀಗೆ ತಮ್ಮ ಅಭ್ಯಂತರವನ್ನು ವ್ಯಕ್ತ ಪಡಿಸಿ, ಕಡೆಗೆ ದೂರದರ್ಶನದವರು ಬುಷ್ ಷರ್ಟಿನಲ್ಲಿ ಮತ್ತೊಂದು ಸಂದರ್ಶನವನ್ನು ನೀಡಿದರು. ತಮ್ಮ ಮಾತಿಗಾಗಿ ಅಲ್ಲದೇ ಪೋಷಾಕಿಗಾಗಿ ತಮ್ಮ ಸಂದರ್ಶನವನ್ನು ವಾಪಸ್ಸು ಪಡೆದ ಏಕೈಕ ಲೇಖಕರು ಚಿತ್ತಲರಾಗಿರಬಹುದು.
ಉತ್ತಮ ಕೃತಿಗಳನ್ನು ಬರೆಯಲು ಇರಬೇಕಾದ ಒಳನೋಟ, ಮತ್ತು ಅದನ್ನು ಹೊರತರಲು ಇರಬೇಕಾದ ಸಹಜ ಶಿಸ್ತು ಇರುವ ಮತ್ತೊಬ್ಬ ಪ್ರತಿಭಾವಂತ ಲೇಖಕರನ್ನು ನಾನು ಈ ವರೆಗೂ ಕಂಡಿಲ್ಲ. ಯಾರಾದರೂ ಕನ್ನಡ ಸಾಹಿತ್ಯದ ಯಾವುದಾದರೂ ಲೇಖಕರ ಬಗ್ಗೆ ಸಂಶೂಧನಾತ್ಮಕ ಪ್ರಬಂಧ ಬರೆಯಬೇಕಾದರೆ ಸುಲಭವಾಗೆ ಮಾಹಿತಿ ಸಿಗುವುದು ಚಿತ್ತಾಲರ ಕಡತಗಳಲ್ಲೇ. ಅವರ ಯಾವ ಪುಸ್ತಕಗಳು ಯಾರಿಗೆ ಕಳಿಸಿದ್ದಾರೆ, ಅದನ್ನು ಓದಿ ಯಾರು ಏನು ಪ್ರತಿಕ್ರಿಯೆ ನೀಡಿದ್ದಾರೆ [ಲಿಖಿತವೋ, ಮೌಖಿಕವೋ, ಫೊನಿನ ಮೂಲಕವೋ ಅಥವಾ ಮೌನವೋ] ಅನ್ನುವ ವಿವರವೂ ನಿಮಗೆ ಸಿಕ್ಕಿದರೆ ಅವಾಕ್ಕಗಬೇಡಿ. ಹಾಗೆಯೇ ಯಾವ ರೀತಿಯ ಪೆನ್ನು ಹಿಡಿದರೆ ಸರಳವಾಗಿ ಐದು ಪುಟಗಳನ್ನು ಬರೆಯುಬಹುದು ಅನ್ನುವ ಬಗ್ಗೆಯೂ ನಿಮಗೆ ತಿಳಿದೀತು. ಒಂದಷ್ತು ದಿನ ಚಿತ್ತಾಲರು ಒಂದು ಮಾದರಿಯ ಪೆನ್ಸಿಲ್ಲಿನಲ್ಲಿ ಮಾತ್ರೆ ತಮ್ಮ ಕರಡು ಪ್ರತಿಯನ್ನು ತಯಾರಿಸುತ್ತಿದ್ದರು. ಕರಡಿನಲ್ಲಿ ಒಂದು ತಪ್ಪಾದರೂ ಅದಕ್ಕೆ ಬಿಳಿಯ ಬಣ್ಣದ ಕರೆಕ್ಷನ್ ಫ್ಲೊಯಿಡ್ ಹಾಕಿ ತಿದ್ದುವ ಏಕಮೇವ ಲೇಖಕರು ಚಿತ್ತಾಲರು! ಹಿಂದೆ ನಾನು ಬೇನ್ಯಾದ ಬಗ್ಗೆ ಬರೆದ ಲೇಖನದಲ್ಲಿ ಈ ಕೆಳಗಿನ ಸಾಲುಗಳನ್ನು ಬರೆದಿದ್ದೆ:
"ನನ್ನ ನಿಲ್ದಾಣ ಅನ್ನುವ ಕಥೆಯನ್ನು ಓದಿ ಚಿತ್ತಾಲರು "ಈ ಕಥೆಯೇಕೋ ಇದ್ದಕ್ಕಿದ್ದಂತೆ ನಿಂತು ಹೋಯಿತು" ಅಂತ ಎದುರಿಗಿದ್ದ ಜಯಂತ ಕಾಯ್ಕಿಣಿಗೆ ಹೇಳಿದರಂತೆ. ಅದಕ್ಕೆ ಜವಾಬಾಗಿ ಜಯಂತ "ಇಲ್ಲ ಶ್ರೀರಾಮ ಇನ್ನೂ ಬರೆದಿದ್ದ, ಆದರೆ ಅದರ ಉತ್ತಮ ಪ್ರತಿ ನಡೆಸುತ್ತಿದ್ದಾಗ ಲೈಟ್ ಹೋಗಿಬಿಟ್ಟಿತಂತೆ, ಪತ್ರಿಕೆಗೆ ಕಳಿಸುವ ತುರ್ತು ಇದ್ದದ್ದರಿಂದ ಹಾಗೇ ಕಳಿಸಿಬಿಟ್ಟ" ಅಂತ ಹೇಳಿದನಂತೆ. [ಬಹುಶಃ ಜಯಂತನ ಇಂಥ ಮಾತುಗಳನ್ನು ಗಂಭೀರವಾಗಿ ಸ್ವೀಕರಿಸುವ ಕೆಲವೇ ಜನರಲ್ಲಿ ಬರಹದ ಕಲೆಯನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುವ ಚಿತ್ತಾಲರು ಒಬ್ಬರೇನೋ]. ಈ ಫಲವಾಗಿ ನಾನು ಅವರನ್ನು ಒಮ್ಮೆ ಮುಂಬಯಿಯಲ್ಲಿ ಭೇಟಿಯಾದಾಗ ಕಥೆಗಳನ್ನು ಹೀಗೂ ನಿಲ್ಲಿಸುವುದುಂಟಾ ಅಂತ ನನ್ನನ್ನು ಕೇಳಿದ್ದರು."
ಹೀಗೆ ಎಲ್ಲವನ್ನೂ ಒಪ್ಪವಾಗಿ ಓರಣವಾಗಿ ಶಿಸ್ತಿನಿಂದ ಮಾಡುವ ಚಿತ್ತಾಲರಿಗೆ ಪಂಪ ಪ್ರಷಸ್ತಿ ಬಂದಿದೆ. ಅವರ ಶಿಸ್ತಿನನುಸಾರ ಅವರು ಯಾವ ವಶೀಲಿಯನ್ನೂ ಮಾಡಿರುವುದಿಲ್ಲ. ಒಂಟಿಯಾಗಿ ಸಮುದ್ರವನ್ನು ನೋಡುತ್ತಾ, ಮನೆಯಲ್ಲಿ ಬೇರೆ ಯಾರೂ ಓದದ ಕನ್ನಡದಲ್ಲಿ ಮಹತ್ತರ ಕೃತಿಗಳನ್ನು ರಚಿಸಿ ನಮ್ಮನ್ನೆಲ್ಲ ಶ್ರೀಮಂತರಾಗಿರುವ ಚಿತ್ತಾಲರು ಬರೆಯುತ್ತಲೇ ಇರಲಿ. ಕಥಾಖಜನೆಯನ್ನು ತುಂಬುತ್ತಲೇ ಇರಲಿ ಎಂದು ಹಾರೈಸುತ್ತೇನೆ. ರಶೀದ ಹೇಳಿದಂತೆ ಚಿತ್ತಾಲರಿಗೆ ಜಯವಾಗಲಿ..
ಚಿತ್ತಾಲರ ಬಗ್ಗೆ ಇನ್ನಷ್ಟು:
ಚಿತ್ತಾಲರೊಂದಿಗೆ ಮಾತುಕತೆ
ಚಿತ್ತಾಲರ ಬೇನ್ಯಾ: ಕೆಲವು ಟಿಪ್ಪಣಿಗಳು
ಬ್ಯಾಂಡ್ಸ್ಟ್ಯಾಂಡಿನ ಬಂಡೆಗಳು
ಎಂ.ಎಸ್. ಶ್ರೀರಾಮ್
1 comment:
very nice. it was a pleasant experience reading it
jayadev
Post a Comment