Monday, March 9, 2009

ವೈನ್‍ಕೆ-ರಾಜುಮೇಷ್ಟ್ರು: ತಲೆಮಾರುಗಳಿಗಿಬ್ಬರು

ಇಬ್ಬರು ಭಿನ್ನ ವ್ಯಕ್ತಿಗಳನ್ನು ಒಂದೇ ಲೇಖನದಡಿ ಯಾಕೆ ತರುತ್ತಿರುವೆ ಅನ್ನುವುದು ನನಗೇ ತಿಳಿಯುತ್ತಿಲ್ಲ. ವೈ‌ಎನ್‍ಕೆ ತೀರಿಕೊಂಡರು ಅನ್ನುವ ಸುದ್ದಿ ಬಂದ ದಿನ ಮನಕ್ಕೆ ಆದಷ್ಟೇ ನೋವು ರಾಜು ತೀರಿಕೊಂಡ ದಿನವೂ ಆಯಿತು. ಏನೂ ಮಾತಾಡಲು ತೋಚಲಿಲ್ಲ, ಇದ್ದಕ್ಕಿದ್ದಂತೆ ಮಾಯವಾದ ಈ ಇಬ್ಬರೂ ನನ್ನ ವಾರಗೆಯವರು, ತಕ್ಷಣದ ಹಿರಿಯರು, ಅವರಿಗಿಂತ ಹಿರಿಯರು ನನಗಿಂತ ಕಿರಿಯರು, ಅವರಿಗಿಂತ ಕಿರಿಯರು.. ಹೀಗೆ ವಯಸ್ಸಿನ ಭೇದವಿಲ್ಲದೇ ಎಷ್ಟೋ ಜನರನ್ನು ಪ್ರೋತ್ಸಾಹಿಸಿ, ಅವರ ಬರಹಗಳನ್ನು ಪ್ರಕಟಿಸಿ, ಕನ್ನಡವನ್ನು ಶ್ರೀಮಂತಗೊಳಿಸಿದವರು. ಇಬ್ಬರೂ ಹೇಳದೇ ಕೇಳದೇ ಇದ್ದಕ್ಕಿದ್ದಂತೆ ಮಾಯವಾಗಿಬಿಟ್ಟರು. 

ವೈ‌ಎನ್‍ಕೆ ತಮ್ಮ ಮಾತನಾಡುವ ಶೈಲಿಯಲ್ಲಿ, ಖಂಡತುಂಡವಾಗಿ, ಮುಲಾಜಿಲ್ಲದೇ ಮಾತಾದ ತಕ್ಷಣ ಯಾವುದೇ ಬೈಬೈ ಮಾತುಗಳಿಲ್ಲದೆಯೇ ಟೆಲಿಫೋನನ್ನು ಕುಕ್ಕಿದಂತೆ ಪ್ಲೇನಿನಲ್ಲಿ ಪ್ರಾಣ ಬಿಟ್ಟರು. ವಿದೇಶಕ್ಕೆ ಹೋಗುವ ಮುನ್ನ ಹೈದರಾಬಾದಿಗೆ ಬಂದಿದ್ದಾಗ ನನ್ನನ್ನೂ ಜಯಂತನನ್ನೂ ಕಂಡು ವೈಸ್‌ರಾಯ್ ಹೋಟೇಲಿನಲ್ಲಿ ಮಧ್ಯಾಹ್ನದ ಬಿಯರು ಹೀರುತ್ತಾ ಕೂತಿದ್ದ ವೈ‌ಎನ್‍ಕೆ, ತಾವು ಯೂರೋಪಿನ ಪ್ರಯಾಣ ಮಾಡುವುದಾಗಿ ನಮಗೆ ಹೇಳಿದ್ದರು. ಆಗ ಅವರ ಮಾತಿನ ಮೊನಚು ತುಸುವೇ ಕಡಿಮೆಯಾಗಿದೆಯೋ ಏನೋ ಅನ್ನುವ ನನ್ನ ಅನುಮಾನವನ್ನು ನಾನು ಜಯಂತನೊಂದಿಗೆ ಹಂಚಿಕೊಂಡಿದ್ದೆ. ಕ್ರಿಕೆಟ್ ದಿಗ್ಗಜರು ಒಳ್ಳೆಯ ಫಾರ್ಮಿನಲ್ಲಿರುವಾಗಲೇ ರಿಟೈರಾಗಬೇಕು ಅನ್ನುವ ಮಾತನ್ನು ವೈ‌ಎನ್‍ಕೆ ತಮ್ಮ ಜೀವನಕ್ಕೇ ಅನ್ವಯಿಸಿಕೊಂಡಿದ್ದರು ಅನ್ನುಸುತ್ತದೆ. ಅವರ ಮೊನಚುತನದ ಬಗ್ಗೆ ನಮ್ಮಿಬ್ಬರಲ್ಲಿ ತುಸು ಅನುಮಾನ ಹುಟ್ಟಿಸಿದ್ದೇ ವೈ‌ಎನ್‍ಕೆ ನಮಗೆ ಬೈ ಬೈ ಹೇಳಿಬಿಟ್ಟರು. 

ಮಾತಿನ ವಿಷಯದಲ್ಲಿ ರಾಜು ವೈ‌ಎನ್‍ಕೆಗಿಂತ ತುಂಬಾ ಭಿನ್ನ. ಅವರ ಧ್ವನಿ ಹೇಗಿರುತ್ತದೆಂದು ನನಗೆ ನೆನಪೇ ಆಗುತ್ತಿಲ್ಲ. ಮಾತಿಗಿಂತ ಕೃತಿ ದೊಡ್ಡದು ಅನ್ನುವ ಜಾಯಮಾನದವರು ಅವರು. 
ಬಹುಶಃ ಮಾತಾಡುವ ಜವಾಬ್ದಾರಿಯನ್ನು ಅವರು ಎಚ್.ಎಸ್.ಆರ್.ಗೆ ಬಿಟ್ಟುಕೊಟ್ಟಿದ್ದರೋ, ಈ ರೀತಿಯಾದಂಹ ಒಪ್ಪಂದ ಅವರಿಬ್ಬರ ನಡುವೆ ಇತ್ತೋ ಅನ್ನುವ ಅನುಮಾನ ನನಗಿದೆ. ಜಗತ್ತಿನ ಜೊತೆ ಮೌನವಾಗಿರುತ್ತಿದ್ದ ರಾಜು, ಬರಹ ಮತ್ತು ಮಾತುಕತೆಯ ಕೊಂಡಿಯ ಮೂಲಕ ಜಗತ್ತಿಗೆ ಪ್ರಕಟವಾಗುತ್ತಿದ್ದ ಎಚ್.ಎಸ್.ಆರ್ ನಡುವೆ ಇದ್ದ ಸ್ನೇಹ ಅಪರೂಪದ್ದು, ವರ್ಣಿಸಲು ಸಾಧ್ಯವಾಗದ್ದು. ಹಾಗೆ ನೋಡಿದರೆ ಪುಟ್ಟ ಸಂಸಾರದಂತಿರುವ ಕನ್ನಡ ಸಾಹಿತ್ಯ ಲೋಕದಲ್ಲಿ ಲೇಖಕರು ತಮ್ಮ ಗೆಳೆಯರ ಬಗ್ಗೆ ಬರೆಯುವುದು ಅಪರೂಪದ ಮಾತೇನೂ ಅಲ್ಲ. ಎಚ್.ಎಸ್.ವಿ- ನರಹಳ್ಳಿ, ಲಕ್ಷ್ಮಣರಾವ್-ಎ಼ಚ್.ಎ಼ಸ್.ವಿ, ಡುಂಡಿರಾಜ-ಲಕ್ಷ್ಮಣರಾವ್, ವಿವೇಕ-ಜಯಂತ, ವೈ‌ಎನ್‍ಕೆ-ಗಿರೀಶ್ ಕಾರ್ನಾಡ್, ಹೀಗೆ ಸಾಹಿತ್ಯಸ್ನೇಹಿಗಳು ಒಬ್ಬರ ಬಗ್ಗೆ ಒಬ್ಬರು ಮೆಚ್ಚುಗೆಯಿಂದ, ಬೆರಗಿನಿಂದ, ಅಸಮಾಧಾನದಿಂದ ಬರೆವ ವಾಡಿಕೆ ಇದ್ದೇ ಇದೆ. ಆದರೆ ರಾಜು ಕೆಲಸದ ಬಗ್ಗೆ ರಾಘು ಅಥವಾ ರಾಘು ಬಗ್ಗೆ ರಾಜು ಬರೆದದ್ದನ್ನು ನಾನು ಕಂಡಿಲ್ಲ. ರಾಜು ಎಷ್ಟರ ಮಟ್ಟಿಗಿನ ಮೂಕ ಕಾರ್ಯಕರ್ತರೆಂದರೆ, ಅವರ ಕೃತಿಗಳ ಯಾದಿಯಲ್ಲಿ ಮೊದಲಿಗೆ ಬರುವುದು "ಮೂರು ಮೂಕ ನಾಟಕಗಳು" ಅನ್ನುವ ಪುಸ್ತಕ. ಹೀಗೆ ಮಾತಾಡದೆಯೇ ಸಾಹಿತ್ಯಸೇವೆಯಲ್ಲಿ ನಿರತರಾಗಿದ್ದಾಗಲೇ ಥಟ್ಟೆಂದು ಇಲ್ಲವಾದವರು ರಾಜು. "ನೆಲದಿಂದ ಧಗೆ, ಚಿಮನಿಯಿಂದ ಹೊಗೆ, ಎದ್ದು ಹೋಗುವ ಹಾಗೆ" ಎಂದು ತಿರುಮಲೇಶ ಬರೆದಂತೆ, ಇಲ್ಲಿದ್ದವರು ಇಲ್ಲವಾದರು.

ಒಂಟಿ ಜೀವಿಯಾದ ವೈ‌ಎನ್‍ಕೆಯವರ ವೇಗಕ್ಕೆ ತಕ್ಕಂತೆ ಅವರೊಡನೆ ಹೆಜ್ಜೆ ಹಾಕುವುದು ಸುಲಭದ ಮಾತೇನೂ ಆಗಿರಲಿಲ್ಲ. ಆ ವೇಗ ನಡೆ-ನುಡಿ ಎರಡರಲ್ಲೂ ಇತ್ತು. [ನಿಜಕ್ಕೂ walk the talk, ಅಥವಾ jog the talk ಅಂದರೆ ಇದೇ ಏನೋ]. ಗುಂಡಿನ ಬಗ್ಗೆ ಅವಿರತ ಮಾತನಾಡಿದರೂ, ಪುಂಖಾನುಪುಂಖವಾಗಿ ಬರೆದರೂ ವೈ‌ಎನ್‍ಕೆ ಯಾವತ್ತೂ ಟೈಟಾದದ್ದನ್ನು ನಾನು ನೋಡಿಯೇ ಇಲ್ಲ. ಒಂದು ಅಥವಾ ಎರಡನೆಯ ಪೆಗ್ಗಿಗೇ ಸಾಕೆಂದು - ಸಾಧ್ಯವಾದರೆ ಗಾಲ್ಪ್ ಕ್ಲಬ್ಬಿನಿಂದ ಗವಿಪುರಂನ ರಾಧಿಕಾಗೆ ಸರಳವಾಗಿ ನಡೆದುಬಿಡುತ್ತಿದ್ದ ವೈ‌ಎನ್‍ಕೆ ಎಂದೂ ಟೈಟಾಗದೇ ಫಿಟ್ಟಾಗಿ ಇದ್ದ ವ್ಯಕ್ತಿ. ಹೀಗಾಗಿ ಅವರ ಮಾತು ಬರಹ ಎಂದೂ ತನ್ನ ಮೊನಚನ್ನು ಕಳೆದುಕೊಳ್ಳಲೇ ಇಲ್ಲ. ಅನೇಕಬಾರಿ ನನಗೆ ವೈ‌ಎನ್‍ಕೆ ನೆನಪಿನ ಜೊತೆ ಖುಶ್ವಂತ್ ಸಿಂಗ್ ಸಹ ನೆನಪಾಗುತ್ತಾರೆ. ಬಹುಶಃ ಅವರು ಬರೆಯುತ್ತಿದ್ದ ಶೈಲಿ [ವಿಥ್ ಮಾಲಿಸ್ ಮತ್ತು ವಂಡರ್ ಎರಡೂ ಫಾರ್ಮಾಟಿನಲ್ಲಿ ಹೋಲಿತ್ತಿದ್ದವೇ?], ಕಡೆಗೆ ಅಂಟಿಸುತ್ತಿದ್ದ ಜೋಕಿನ ಸಿಡಿ, ಅವರಿಬ್ಬರಿಗೂ ಇದ್ದ ಆಸಕ್ತಿಯ ವೈವಿಧ್ಯತೆ, ಮತ್ತು ಗುಂಡಿನ ಪ್ರೀತಿಯೇ ಅದಕ್ಕೆ ಕಾರಣವಿರಬಹುದು. ಖುಷ್ವಂತ್‍ಗೆ ಇಲ್ಲದ ಒಂದು ಅದ್ಭುತ ಮೊನಚು ವೈ‌ಎನ್‍ಕೆ ಗೆ ಇತ್ತು. ಪದಗಳೊಂದಿಗೆ ಅವರು ಮಾಡುತ್ತಿದ್ದ ಮೋಡಿ ಪನ್-ಭಕ್ತನಾದ ನನ್ನನ್ನು ವಿಸ್ಮಯಗೊಳಿಸಿಬಿಟ್ಟಿತ್ತು. "ಸುಮ್ಮನೆ ಇರಾಣ್ ಅಂದರೆ ಇರಾಕ್ ಬಿಡಾಕಿಲ್ಲ" ಅನ್ನುವ ಮಾತನ್ನು ಕೊಲ್ಲಿಯುದ್ಧದ ಸಮಯದಲ್ಲಿ ಡುಂಡಿರಾಜನೂ ಹೇಳಿರಲಿಕ್ಕೆ ಸಾಧ್ಯವಿದ್ದಿಲ್ಲ. ಒಮ್ಮೆ ಹೈದರಾಬಾದಿನ ಗೆಳೆಯ ಎಚ್.ಕೆ.ಅನಂತರಾವ್ [ಅಥವಾ ಅಂತ ಅನಂತರಾವ್] ವೈನ್‍ಕೆಯನ್ನು ನೋಡಬೇಕೆಂದು ಬಯಸಿದರು. ಇಬ್ಬರೂ ಕನ್ನಡಪ್ರಭದ ಕಾರ್ಯಾಲಯಕ್ಕೆ ಹೋದೆವು. ವೈ‌ಎನ್‍ಕೆಯ ಮಾತಿನ ವೇಗಕ್ಕೆ ಸರಿಯಾಗಿ ಎಡಬಿಡದೆ ಮಾತನಾಡಿದ ಎಚ್.ಕೆ.ಯನ್ನು ನೋಡಿ ಸುಸ್ತಾದ ವೈ‌ಎನ್‍ಕೆ ಹೇಳಿದ್ದು: "ಎಚ್.ಕೆ. ಅನಂತರಾವ್, ಎಚ್ಕೆ ಮಾತಾಡಬೇಡಿ!!" ಒಂಟಿಜೀವಿ ವೈ‌ಎನ್‍ಕೆ ಹೆಚ್ಚಾಗಿ ಸೊಷಿಯಲೈಸ್ ಮಾಡುತ್ತಿದ್ದದ್ದು ಮನೆಯಾಚೆ - ಹೊಟೇಲು ಕ್ಲಬ್ಬುಗಳಲ್ಲಿ. ಅವರನ್ನು ಯಾರದೇ ಮನೆಯಲ್ಲಿ ನೋಡಿದ್ದು ಬಹಳ ವಿರಳವಾಗಿ. 

ರಾಜು ತಮ್ಮ ಎಲ್ಲ ಆಸಕ್ತಿಗಳಿಗೂ ಒಂದು ರೀತಿಯಿಂದ ಸಂಸಾರವನ್ನು ಒಳಪಡಿಸಿದವರು. ಅವರು ತರುತ್ತಿದ್ದ ಪತ್ರಿಕೆಯನ್ನು ಅಂಚೆ ವೆಚ್ಚ ಕಡಿಮೆ ಮಾಡಲು ಅವರ ಹೆಂಡತಿ ಸರಸ್ವತಿ ಮೈಸೂರಿಗೆ ಹೋಗುವಾಗ ಕೈಗೆ ಕೊಟ್ಟು ಊರಲ್ಲಿ ಹಂಚಲು ಹೇಳುತ್ತಿದ್ದರು ಎಂದು ಆಕೆ ಹೇಳಿದ್ದರು. ನನಗೇ ನೆನಪಿರುವಂತೆ ರಾಜು ಮನೆಯಲ್ಲಿ [ಬಹುಶಃ ಮೊದಲ ಬಾರಿಗೆ] ಬಣ್ಣದ ಟೀವಿ ಕೊಂಡಾಗ, ಅದನ್ನು ಸ್ವಿಚಾನ್ ಮಾಡಲು ಅವರು ಯಶವಂತ ಚಿತ್ತಾಲರನ್ನು ಮನೆಗೆ ಕರೆದಿದ್ದರು. ಆಗಷ್ಟೇ ಪುರುಷೋತ್ತಮದ ಹಸ್ತಪ್ರತಿಯನ್ನು ಮುಂಬಯಿಯಿಂದ ಬೆಂಗಳೂರಿಗೆ, ಆಯ್ದ ಮಿತ್ರರಿಗೆ ತೋರಿಸಲೆಂದು ತಂದಿದ್ದ ಚಿತ್ತಾಲರನ್ನು ಮನೆಗೆ ಕರೆದು ಔತಣ ಹಾಕಿಸಿ, ಅವರ ಕೈಯಲ್ಲೇ ಟೀವಿಯ ಉದ್ಘಾಟನೆಯನ್ನು ಮಾಡಿಸಿದ್ದರು. ಈ ಎಲ್ಲದರಲ್ಲೂ ಸರಸ್ವತಿ, ಸುಗತ ಮತ್ತು ಋತರು ಭಾಗವಹಿಸುವುದು ಕಡ್ಡಾಯವಾಗಿತ್ತೇನೋ. ಒಂದು ರೀತಿಯಲ್ಲಿ ತಮ್ಮ ಜೀವನದ ತೀವ್ರತೆ ಮತ್ತು ಪ್ಯಾಷನ್ ಅನ್ನು ಅವರು ಮನೆಯವರೊಂದಿಗೆ ಹಂಚಿಕೊಳ್ಳುತ್ತಿದ್ದ ರೀತಿ ಇದಾಗಿದ್ದಿರಬಹುದು. ಅವರ ಮನೆಯಲ್ಲಿ ಸಾಹಿತ್ಯಾಸಕ್ತರಿಗಿದ್ದ ಮಾನ್ಯತೆ ಕೇವಲ ಚಿತ್ತಾಲರಂಥಹ ಹಿರಿಯ ಲೇಖಕರಿಗಲ್ಲದೇ, ಕನ್ನಡದ ಬಗ್ಗೆ ಕಾಳಜಿಯಿದ್ದ ತಮ್ಮ ವಿದ್ಯಾರ್ಥಿಗಳ ಕಡೆಗೂ ಇರುತ್ತಿತ್ತು ಎಂದು ಕೇಳಿದ್ದೇನೆ. ತಮ್ಮ ವಿದ್ಯಾರ್ಥಿಗಳನ್ನು ಪ್ರತಿವರ್ಷ ಔತಣಕ್ಕೆ ಕರೆಯುವುದು ರಾಜು ವಾಡಿಕೆಯಾಗಿತ್ತು. ವಿಲ್ಸನ್ ಗಾರ್ಡನ್‍ನಲ್ಲಿ
 ಅವರು ಮನೆ ಮಾಡಿದ್ದಾಗ ನಾನು ಅನೇಕ ಬಾರಿ ಅವರ ಮನೆಗೆ ಹೋದ ನೆನಪಿದೆ. ಐ‌ಐ‌ಎಂನಲ್ಲಿ ಓದುತ್ತಿದ್ದ ನನಗೆ ಡೈರಿ ಸರ್ಕಲ್ಲಿನ ಮೂಲಕ ಹೋದರೆ ದಾರಿಯಲ್ಲಿ ರಾಜು ಮನೆ, ಜೆಪಿ ನಗರದ ಮೂಲಕ ಹೋದರೆ ರಾಘು ಮನೆ ಇದ್ದದ್ದರಿಂದ ಇಬ್ಬರೂ ಪೂರ್ವಯೋಜಿತವಲ್ಲದೆಯೇ ನಿಕಟ ಸ್ನೇಹಿತರಾಗಿಬಿಟ್ಟರು. ಸಾಹಿತ್ಯಪ್ರೇಮಿ ರಾಜು ಸಾಹಿತಿಗಳನ್ನು ಭೇಟಿಯಾಗಲು, ಪುಸ್ತಕ ಮಾರಲು, ಪುಸ್ತಕ ಬರೆಸಲು ಎಲ್ಲಿಗಾದರೂ ಹೋಗುತ್ತಿದ್ದರು. ಹಾಗೆ ನೋಡಿದರೆ ನನ್ನ ಮೊದಲ ಪುಸ್ತಕ ಮಾಯಾದರ್ಪಣ ಪ್ರಕಟಣೆಯಲ್ಲಿದ್ದಾಗ ನನಗಿಂತ ಹೆಚ್ಚು ಸಂಭ್ರಮದಿಂದ ಓಡಾಡಿದವರು ರಾಜು. ಅದರ ಕವಚಕ್ಕೆ ಕೊಟ್ಟಿದ್ದ ಆರ್ಟ್‍ವರ್ಕ್‍ಗೆ ಯೆಲ್ಲೋ ಆಕರ್ ಬಣ್ಣದ ಕವಚವನ್ನು ಬಳಸಬೇಕೆಂದು ಕಲಾವಿದ ಸನತ್ ಅಪ್ಪಣೆ ಕೊಡಿಸಿದ್ದ. ಆ ಬಣ್ಣವನ್ನು ಹುಡುಕಿತೆಗೆಯಲು ರಾಜು ಮಗ ಸುಗತನ ಜೊತೆ ಚಿಕ್ಕಪೇಟೆಯ ಅನೇಕ ಅಂಗಡಿಗಳನ್ನು ಹತ್ತಿ ಇಳಿದಿದ್ದರು ಎಂದು ಮೊನ್ನೆಯಷ್ಟೇ ಸುಗತ ಹೇಳಿದ್ದ. ಬಹುಶಃ ಆ ಬಣ್ಣದ ಕವಚ ಸಿಗದಿದ್ದರೆ ನಾನು ಆ ಬಗ್ಗೆ ಹೆಚ್ಚು ಯೋಚಿಸುತ್ತಿರಲಿಲ್ಲವೇನೋ ಆದರೆ ರಾಜುವಿಗೆ ಸರಿಯಾದ ಬಣ್ಣದ ಕಾಗದ ಹುಡುಕುವುದೂ ಮುಖ್ಯವಾಗಿತ್ತು. ಪುಸ್ತಕಗಳಿಗಾಗಿಯೇ ಜೀವನವನ್ನು ಮುಡಿಪಾಗಿಟ್ಟಿದ್ದ ರಾಜುವಿಗೆ ವಸುಧೈವ ಕುಟುಂಬಕಂ.

ವೈ‌ಎನ್‍ಕೆ ಮಾತಿಲ್ಲದೇ ಜನರನ್ನು ಪ್ರೋತ್ಸಾಹಿಸುತ್ತಿದ್ದರು. ಅವರ ಪ್ರೋತ್ಸಾಹದ ರೀತಿಯೇ ಬೇರೆಯದ್ದು. ವೈ‌ಎನ್‍ಕೆ ಕನ್ನಡಪ್ರಭದಲ್ಲಿ ಸಂಪಾದಕರಾಗಿದ್ದಾಗ ವಾರಕ್ಕೊಂದು ದಿನ [ಬಹುಶಃ ಪ್ರತಿ ಮಂಗಳವಾರ] ಪತ್ರಿಕೆಯ ಆಪ್-ಎಡ್ ಕಾಲಂ ಸಾಹಿತ್ಯಕ್ಕಾಗೇ ಮೀಸಲಾಗಿಟ್ಟಿರುತ್ತಿದ್ದರು. ಪುಸ್ತಕಗಳನ್ನು ಓದುತ್ತಿದ್ದ ನನಗೆ ಈ ಕಾಲಂಗೆ ನಾನೂ ಬರೆಯಬಹುದೆನ್ನಿಸಿದಾಗ ಆಗ್ಡೆನ್ ನ್ಯಾಶ್ ಬಗ್ಗೆ ಒಂದು ಬರಹವನ್ನು ಬರೆದು ಕಳಿಸಿದೆ. ವೈ‌ಎನ್‍ಕೆ ಏನೂ ಹೇಳಲಿಲ್ಲ. ಅದನ್ನು ನೋಡಿದರು. ಆಗ್ಡೆನ್ ನ್ಯಾಶ್‍ನ ಪುಸ್ತಕದ ಪ್ರತಿ ಇದ್ದರೆ ಬೇಕೆಂದರು. ಮುಂದಿನ ವಾರ ಆ ಲೇಖನ ಭಾನುವಾರದ ಸಾಪ್ತಾಹಿಕದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿತು. ಈ ಬಗ್ಗೆ ಯಾವ ಮಾತೂ ಇಲ್ಲ. ಕೇಳಿದ್ದು ಆಪ್‍ಎಡ್ ಪುಟ-ದಕ್ಕಿದ್ದು ಪುರವಣಿ!! ಹಾಗೆಯೇ ಅವರು ಯಾವುದೇ ಒಂದು ಕಥೆಯನ್ನು ಅಥವಾ ಕವಿತೆಯನ್ನು ಮೆಚ್ಚಿ ಲೇಖಕರೆದುರಿಗೆ ಮಾತಾಡಿದ್ದು ನನಗೆ ನೆನಪಿಲ್ಲ. ಆದರೆ ಅವರು ಪ್ರೋತ್ಸಾಹಿಸುವ ರೀತಿಯೇ ಭಿನ್ನವಾಗಿರುತ್ತಿತ್ತು. ಆಗ್ಡೆನ್ ನ್ಯಾಶ್ ಬಗ್ಗೆ ಲೇಖನ ಬರೆದಾಗ ನಾನೂ ಕೆಲವು ನಾನ್‍ಸೆನ್ಸ್ ಪದ್ಯಗಳನ್ನು ಬರೆದೆ, ಒಂದಿಷ್ಟು ನ್ಯಾಶ್‍ನ ಅನುವಾದವಾಗಿದ್ದರೆ, ಮತ್ತಷ್ಟು ನನ್ನದೇ ಸ್ವಂತ ಪ್ರಯತ್ನಗಳು. ವೈ‌ಎನ್ಕೆ ಮತ್ತೆ ಅದನ್ನು ಕನ್ನಡಪ್ರಭದಲ್ಲಿ ಪ್ರಕಟಿಸಿದರು. ಪ್ರಕಟಿಸುತ್ತೇನೆ ಅನ್ನುವ ಒಂದು ಮಾತೂ ಇಲ್ಲ, ಪ್ರಕಟಣೆಗೊಂಡಾಗ ಪತ್ರಿಕೆಯ ಒಂದು ಪ್ರತಿಯೂ ಇಲ್ಲ. ಆದರೆ ಪ್ರಕಟಣೆಗೊಂಡ ರೀತಿಯಲ್ಲಿ, ಅದಕ್ಕೆ ನೀಡಿದ ಜಾಗದಲ್ಲಿ, ಅದಕ್ಕೆ ಕೊಟ್ಟ ಇಲ್ಲಸ್ಟ್ರೇಶನ್‌ನಲ್ಲಿ ಅದರೆ ಪ್ರಾಮುಖ್ಯತೆ ನಮಗೆ ತಿಳಿದು ಬಿಡುತ್ತಿತ್ತು. ಅದೇ ಪೈ‌ಎನ್ಕೆ ಫೀಡ್‌ಬ್ಯಾಕ್. ಜೊತೆಗೆ ತಮ್ಮ ತೀರ್ಥರೂಪ ಕವಿತಾ ಸಂಗ್ರಹ ಪ್ರಕಟವಾದಾಗ ನಡೆದ ಕವಿ ಸಮ್ಮೇಳನಕ್ಕೆ ಆಹ್ವಾನ. ಬಹುಶಃ ನಾನು ವೇದಿಕೆಯ ಮೇಲೆ ಕವಿತೆಯನ್ನು ಓದಿರುವುದು ಅದೊಂದೇ ಬಾರಿ ಅನ್ನಿಸುತ್ತದೆ. ರಾಜು ಮಾತಿಲ್ಲದೇ ಕುಣಿದಾಡದೇ ಪ್ರೋತ್ಸಾಹಿಸುತ್ತಿದ್ದರು. ವೈ‌ಎನ್ಕೆ ಕೂಡಾ - ಮಾತಾಡಿದರೂ ಮಿಕ್ಕೆಲ್ಲ ವಿಷಯಗಳ ಬಗ್ಗೆ ಹರಟೆ, ಒಂದಷ್ಟು ಜನರನ್ನು ತಮ್ಮದೇ ರೀತಿಯಲ್ಲಿ ಗೇಲಿ ಮಾಡುವುದು. ಆದರೆ ಎದುರಿಗಿದ್ದವರಿಗೆ ಡೈರೆಕ್ಟಾಗಿ ಯಾವ ಫೀಡ್‍ಬ್ಯಾಕೂ ಇಲ್ಲ. 

ಪ್ರತಿಭೆಯ ಶೋಧನೆಗೆ ಸಾಹಿತ್ಯ ಪ್ರಕಟ ಮಾಡುವುದಕ್ಕೆ ರಾಜು ಎಲ್ಲಿಗಾದರೂ ಹೋಗುತ್ತಿದ್ದರು, ಕಾವ್ಯ ಸ್ಪರ್ಧೆ, ಪ್ರಬಂಧ ಸ್ಪರ್ದೆ, ಪ್ರತಿ ವರ್ಷ ಬೇಂದ್ರೆ ನಮನ, ಹೀಗೆ ದೊಡ್ಡ ಸಾಹಿತಿಗಳ ಮನೆಯಿಂದ ಹಿಡಿದು, ಎಲ್ಲೊ ಪುಟ್ಟ ನಗರದ ಪುಟ್ಟ ಕಾಲೇಜಿನ ಕನ್ನಡ ವಿದ್ಯಾರ್ಥಿಗಳನ್ನು ಅರಸಿ ಅವರು 
ಹೋಗುತ್ತಿದ್ದರು. ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದವರ ಬರಹಗಳನ್ನು ಎಲ್ಲಿಂದಲೋ ಹಣ ಕೂಡಿಹಾಕಿ [ಬಹುಶಃ ಕೆಲವೊಮ್ಮೆ ತಮ್ಮದೇ ಜೇಬಿನಿಂದ] ತುಂಬಿ ಪುಟ್ಟ ಹೊತ್ತಿಗೆಗಳನ್ನು ಪ್ರಕಟಿಸಿ ಬರಹಗಾರರಿಗೆ ಖುಶಿಯನ್ನು ನೀಡುತ್ತಿದ್ದರು. ಕನ್ನಡದ ಗಂಧಗಾಳಿ ಎಲ್ಲಾದರೂ ಕಾಣಿಸಬಹುದೇ ಅನ್ನಿಸುವಂತಹ ಕ್ರೈಸ್ಟ್ ಕಾಲೇಜಿನಲ್ಲಿ ಕೂತು, ಕನ್ನಡದ ಕೆಲಸವನ್ನು ಮಾಡಿದ್ದಲ್ಲದೇ ಕಾಲೇಜಿಗೂ ಕೀರ್ತಿಯನ್ನು ತಂದರು. ಇದೇ ಪದ್ಧತಿಯನ್ನು ಸಂತ ಜೊಸೆಫ್ ಕಾಲೇಜಿನಲ್ಲಿ ಎಚ್.ಎಸ್.ವಿ ಪ್ರಯತ್ನ ಮಾಡಿದರಾದರೂ, ಅವರದೇ ಕೃತಿ ಪ್ರಕಾಶನದಲ್ಲೂ ಪುಸ್ತಕಗಳನ್ನು ತರುತ್ತಿದ್ದುದರಿಂದ, ಜೊತೆಗೆ ಅವರೇ ತುಂಬಾ ಒಳ್ಳೆಯ ಲೇಖಕರಾಗಿ ತಮ್ಮ ಬರಹಕ್ಕೇ ಹೆಚ್ಚು ಕಾಲವನ್ನು ಮೀಸಲಾಗಿಡುತ್ತಿದ್ದುದರಿಂದ ಆ ಪ್ರಯತ್ನ ಹೆಚ್ಚು ಸಫಲವಾಗಲಿಲ್ಲ. ಹಾಗೆಯೇ ನಾಗತಿಹಳ್ಳಿ ಚಂದ್ರು ತಾನು ಕೆಲಸ ಮಾಡುತ್ತಿದ್ದ ಬಿ.ಇ.ಎಸ್ ಸಂಸ್ಠೆಯಲ್ಲೂ ಇಂಥದೊಂದು ಪ್ರಯತ್ನವನ್ನು ಮಾಡಿದ್ದ. ಪಾಲ್ ಸುದರ್ಶನ್‍ನ ಸುಣ್ಣ ಹಚ್ಚಿದ ಸಮಾಧಿಗಳು ಅನ್ನುವ ಪುಸ್ತಕವನ್ನು ಆ ಸಂಸ್ಥೆ ಪ್ರಕಟಮಾಡಿತ್ತು. ಆದರೆ ನಾಗತಿಹಳ್ಳಿ ಚಂದ್ರುವಿಗೂ ಅವನದೇ ಆದ "ಅಭಿವ್ಯಕ್ತಿ" ಸಂಸ್ಥೆಯಿತ್ತು. ಆ ಸಂಸ್ಥೆಗೆ ಅವನು ಹೆಚ್ಚಿನ ಸಮಯವನ್ನು ಕೊಟ್ಟ, ಜೊತೆಗೆ ಸಿನೆಮಾದ ಕಡೆ ವಾಲಿದ್ದರಿಂದ ಅವನು ಕಾಲೇಜಿನ ಕೆಲಸವನ್ನೂ ಬಿಟ್ಟುಬಿಟ್ಟ. ರಾಜು ತಾವು ಮಾಡಿದ ಕೆಲಸವನ್ನು ಕಾಲೇಜು ಮುಂದುವರೆಸುತ್ತದೆ ಅನ್ನುವ ಬಯಕೆಯನ್ನು ಹೊತ್ತಿದ್ದರೆನ್ನಿಸುತ್ತದೆ, ಆದರೆ ಅದೇ ತೀವ್ರತೆಯಿಂದ ಕನ್ನಡ ಸಂಘದ ಕೆಲಸಗಳು ರಾಜು ನಿವೃತ್ತರಾದ ನಂತರ ನಡೆಯಲಿಲ್ಲ. ಬದಲಿಗೆ ರಾಜುವಿನ ಪುಸ್ತಕ ಪ್ರಕಟಣೆಯ ಪ್ರೀತಿಯನ್ನು ಮುಂದುವರೆಸಿದವರಲ್ಲಿ ಸಂಚಯದ ಡಿ.ವಿ.ಪ್ರಹ್ಲಾದ್, ಛಂದ ಪ್ರಕಾಶನದ ವಸುಧೇಂದ್ರ, ಮತ್ತು ಅಭಿನವದ ನ.ರವಿಕುಮಾರ ಪ್ರಮುಖರು. ಎಲ್ಲರೂ ರಾಜುವಿನಂತೆಯೇ ಮಿತಭಾಷಿಗಳು. ಸಾಧಾರಣವಾಗಿ ವೇದಿಕೆಯಿಂದ ದೂರ ಉಳಿಯುವವರು, ಮತ್ತು ಅನೇಕ ವರ್ಷಗಳಿಂದ ತಮ್ಮ ಕೆಲಸವನ್ನು ಮಾಡಿ ಎತ್ತರಕ್ಕೆ ನಿಂತಿರುವವರು. ಹೀಗಾಗಿ ರಾಜರತ್ನಂ ಅವರಿಂದ ಪಡೆದ ಬಳುವಳಿ ಎಂದು ಹೇಳಲಾದ ಈ ಪುಸ್ತಕ ಪ್ರಕಾಶನ ಮತ್ತು ಕನ್ನಡ ಸಾಹಿತ್ಯ ಸೇವೆಯನ್ನು ಈ ಯುವ ಗೆಳೆಯರಿಗೆ ಬಳುವಳಿಯಾಗಿ ನೀಡಿ ರಾಜು ಅಸುನೀಗಿದ್ದಾರೆ. 

ವೈ‌ಎನ್‍ಕೆ ತಮಗಿದ್ದ ವಿಸ್ತಾರ - ಕಲೆ, ಸಿನೇಮಾ, ನಾಟಕ, ಎಲ್ಲವನ್ನೂ ನವುರಾದ ಹಾಸ್ಯ ಲೇಪಿಸಿ ಸಮ್ಮೆದುರಿಗೆ "ಈ ರೀತಿಯಾದ ವಿಶ್ವ ಸಾಹಿತ್ಯವಿದೆ, ಓದಿದ್ದೀಯೋ, ಈ ಮಟ್ಟಕ್ಕೆ ಬರೆಯಲು ಸಾಧ್ಯವೋ?" ಅನ್ನುವ ಪ್ರಶ್ನೆಗಳನ್ನು ಕೇಳದೆಯೇ ನಮ್ಮೆದುರಿಗಿಡುತ್ತಿದ್ದರು. ಜೊತೆಗೆ ವೈ‌ಎನ್‍ಕೆ ಮನಸ್ಸಿನಲ್ಲಿ ಸದಾ ಹೊಸ ಯೋಜನೆಗಳು, ಪುಸ್ತಕದ ಐಡಿಯಾಗಳು. ಅವರ ಯಾವುದೇ ಪುಸ್ತಕ ತೆಗೆದರೆ ಅದರಲ್ಲಿ ಮುಂದೆ ಬರಲಿರುವ ಪುಸ್ತಕಗಳ ಯಾದಿ ಇರುತ್ತಿತ್ತು [ಒಂದು ಪುಸ್ತಕದ ಹೆಸರೇ ಬರಲಿದೆ, ಬರಲಿದೆ - ಬರಲು ಅಂದರೆ ಪೊರಕೆ ಅನ್ನುವ ಅರ್ಥವನ್ನು ಅವರು ಪನ್ ಪಾಡಿರುವುದನ್ನು ಅದರ ಮುಖಪುಟದಲ್ಲಿ ಕಾಣಬಹುದು]. ಹಾಗೆ ನೋಡಿದರೆ ವೈ‌ಎನ್ಕೆಗೆ ತಾಳ್ಮೆ ಕಡಿಮೆ. ಹೀಗಾಗಿ ಅವರು ಹೆಚ್ಚು ಸಮಯ ಕಳೆಯುತ್ತಿದ್ದದ್ದು ಸ್ವಲ್ಪಮಟ್ಟಿಗೆ ನುರಿತ ಲೇಖಕರೊಂದಿಗೆ - ವಿವೇಕ, ಜಯಂತ - ಇವರಲ್ಲದೇ ಅವರ ರಾಧಿಕಾ ವೃಂದದ ಗ್ಯಾಂಗಿನೊಂದಿಗೆ. ಅವರ ಇಷ್ಟಾಯಿಷ್ಟಗಳು ತುಂಬಾ ಸ್ಪಷ್ಟವಾಗಿರುತ್ತಿದ್ದುವು. ಅದನ್ನು ಯಾವ ಮುಲಾಜೂ ಇಲ್ಲದೇ ಹೇಳಿಯೂ ಬಿಡುತ್ತಿದ್ದರು. ಲಂಕೇಶ್ ಪತ್ರಿಕೆಯಲ್ಲಿ ಲೇಖಕರ ಸಂದರ್ಶನಗಳನ್ನು ಪ್ರಕಟಮಾಡಲು ಪ್ರಾರಂಭಿಸಿದಾಗ ಒಮ್ಮೆ ಲಂಕೇಶ್ ನನ್ನನ್ನು "ನಿಮಗೆ ವೈ‌ಎನ್ಕೆ ಜೊತೆ ಒಳ್ಳೇ ಒಡನಾಟವಿದೆಯಂತೆ, ಅವರ ಸಂದರ್ಶನ ಮಾಡಿಕೊಡಿ" ಎಂದು ಕೇಳಿದ್ದರು. ಲಂಕೇಶ್‌ಗೂ ವೈ‌ಎನ್ಕೆಗೂ ಅಷ್ಟಕ್ಕಷ್ಟೇ ಎನ್ನುವುದು ನಮಗೆಲ್ಲ ತಿಳಿದ ಮಾತೇ. ಅಡಿಗರ ಅಭಿಮಾನಿಗಳಾಗಿ ಕಡೆಯವರೆಗೂ ಮುಂದುವರೆದ ಅನೇಕರಿಗೆ ಲಂಕೇಶ್ ಬಗ್ಗೆ ಒಂದು ಅಸಮಾಧಾನ ಇದ್ದೇ ಇತ್ತು ಅನ್ನಿಸುತ್ತದೆ. "ಒಂದು ತಲೆಮಾರಿನ ಕಣ್ಣು ತೆರೆಸಿದ ಕವಿ" ಎನ್ನುವ ಅಂಕಿತದೊಂದಿಗೆ ತಮ್ಮ ಪುಸ್ತಕವನ್ನು ಅಡಿಗರಿಗೆ ಅರ್ಪಿಸಿದ್ದ ಲಂಕೇಶ್ ಅದನ್ನು "ಒಂದೇ ತಲೆಮಾರಿನ, ಕೇವಲ ಬ್ರಾಹ್ಮಣರ" ಕಣ್ಣು ತೆರೆಸಿದ
 ಕವಿ ಅಂತ ತಿದ್ದಿದಂತಹ ನಿಲುವು ತೆಗೆದುಕೊಂಡದ್ದು ಅನೇಕರಿಗೆ ಅಸಮಾಧಾನ ಮಾಡಿತ್ತು. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ನಾಡಿಗ, ಎಚ್.ಎಸ್.ವಿ, ವೈ‌ಎನ್ಕೆ, ಹೀಗೆ ಅನೇಕರು ಲಂಕೇಶರಿಂದ ದೂರವಿರುತಿದ್ದರು. ಬಹುಶಃ ಅಡಿಗರನ್ನೂ ಲಂಕೇಶರನ್ನೂ ಸಮಾನಾಂತರವಾಗಿ ಭೇಟಿಯಾಗುತ್ತಿದ್ದ ಇಬ್ಬರ ಜೊತೆಗೂ ಒಡನಾಡುತ್ತಿದ್ದವರಲ್ಲಿ ರಾಮಚಂದ್ರ ಶರ್ಮ ಮತ್ತು ಲಕ್ಷ್ಮಣರಾವ್ ಇಬ್ಬರೇ ನೆನಪಿಗೆ ಬರುತ್ತಾರೆ. ಹೀಗಾಗಿ ವೈ‌ಎನ್ಕೆ ಸಂದರ್ಶನದ ಬಯಕೆಯನ್ನು ಲಂಕೇಶ್ ನನ್ನ ಮುಂದಿಟ್ಟಿದ್ದು ನನಗೇ ಆಶ್ಚರ್ಯವನ್ನುಂಟು ಮಾಡಿತ್ತು. ವೈ‌ಎನ್ಕೆಯವರನ್ನು ನಾನು ಈ ವಿಷಯವಾಗಿ ಸಂಪರ್ಕಿಸಿದೆ. ಅವರು "ಅವನ ಪತ್ರಿಕೆಗೆ ನಾನು ಸಂದರ್ಶನ ಕೊಡೋದಿಲ್ಲ. ಕುದುರೆ ರೇಸಿನಲ್ಲಿ ಹಣ ಕಳೆದುಕೊಂಡ ಕಾರಣಕ್ಕೇ ಹಯವದನ ಇಷ್ಟವಾಗಲಿಲ್ಲ ಅನ್ನುವವನಿಗೆ ನಾನೇನು ಸಂದರ್ಶನ ಕೊಡೋದು?" ಅಂತ ಹೇಳಿ ಆ ಸಂಭಾಷಣೆಯನ್ನು ತಮ್ಮದೇ ಶೈಲಿಯಲ್ಲಿ ತುಂಡರಿಸಿದ್ದರು! 

ರಾಜುವಿಗೂ ಕಲೆ, ನಾಟಕಗಳಲ್ಲಿ ತೀವ್ರ ಆಸಕ್ತಿಯಿತ್ತು. ಅವರು ಪುಸ್ತಕ ಪ್ರಕಾಶನವನ್ನು ಕೈಗೊಂಡದ್ದಲ್ಲದೇ ಎರಡು ಸಂಸ್ಥೆಗಳಿಗೆ ತಮ್ಮ ಸಮಯವನ್ನು ಧಾರೆ ಎರೆದು ಉದ್ಧಾರ ಮಾಡಲು ಪ್ರಯತ್ನಿಸಿದ್ದರು. ಆದರೆ ರಾಜು ಎಂದೂ ತಮ್ಮ ಯೋಜನೆಗಳನ್ನು ಬಹಿರಂಗವಾಗಿ ಹೇಳಿದವರಲ್ಲ. ಹಾಗೆ ನೋಡಿದರೆ ರಾಜು ಕ್ಲಾಸಿನಲ್ಲಿ ಹೇಗೆ ಪಾಠ ಮಾಡುತ್ತಿದ್ದರೋ ತಿಳಿಯದು. ಆ ಬಗ್ಗೆ ಅವರ ಶಿಷ್ಯವೃಂದ ಹೇಳಬೇಕು.. ಎಚ್.ಎಸ್.ಆರ್ ಬರೆದ ಬಂಗಾಲದ ಪ್ರವಾಸ ಕಥನ "ಜನ ಗಣ ಮನ" ಪಠ್ಯಪುಸ್ತಕವಾದಾಗ ರಾಜು ಅದನ್ನು ತಮ್ಮ ಕಾಲೇಜಿನಲ್ಲಿ ಕಲಿಸಬೇಕಾದ ಪರಿಸ್ಥಿತಿ ಬಂದಿತ್ತೆಂದು ಕೇಳಿದ್ದೇನೆ. ಆ ಪುಸ್ತಕದಲ್ಲಿ ಯಾವುದೋ ಸಮಾರಂಭದಲ್ಲಿ ರಾಜು ನಿದ್ದೆ ಹೋದ ಒಂದು ಸನ್ನಿವೇಶ ಬರುತ್ತದೆ.. ಅದನ್ನು ರಾಜು ಕ್ಲಾಸಿನಲ್ಲಿ ಹೇಗೆ ನಿಭಾಯಿಸಿದ್ದಿರಬಹುದು ಅನ್ನುವ ಕುತೂಹಲ ನನಗಿದೆ. ಎಂದೂ ವಿಚಲಿತರಾಗದಂತೆ ಇರುತ್ತಿದ್ದ ರಾಜು ನೊಂದದ್ದನ್ನು ನಾನು ಒಮ್ಮೆ ಮಾತ್ರ ನೋಡಿದ್ದೆ - ಬೆಂಗಳೂರಿನ ಹಡ್ಸನ್ ಸರ್ಕಲ್ ಕೆಡವಿದಾಗ ರಾಜು ನೊಂದಿದ್ದರು.. "ಈ ಬಗ್ಗೆ ಒಂದು ಕಥೆ ಬರೀತೀನಿ, ಕೆಡಿಸಿದರು ಅಂತ ಹೆಸರಿಡುತ್ತೀನಿ" ಅಂದಿದ್ದರು. ಆದರೆ ಅವರು ಬಹುಶಃ ಆ ಕಥೆ ಬರೆಯಲು ಸಮಯವೇ ಸಿಗಲಿಲ್ಲ ಅನ್ನಿಸುತ್ತದೆ. 
ಇತರರು ಬರೆಯುತ್ತಿದ್ದುದನ್ನು ಬೆಳಕು ಕಾಣಿಸುವ ಸಂಭ್ರಮದಲ್ಲಿ ರಾಜು ತಮ್ಮನ್ನೇ ಮರೆತುಬಿಟ್ಟಿದ್ದರು. ಈಗಿನ ಕೆಂಪೇಗೌಡನ ಗೋಪುರದ ಹಡ್ಸನ್ ಸರ್ಕಲ್ ಬಗ್ಗೆ ರಾಜು ಏನು ಅಂದುಕೊಂಡಿದ್ದರೋ ನನಗೆ ತಿಳಿಯದು. 


ರಾಜುವಿಗೆ ನನಗೆ ತಿಳಿದಂತೆ ಎರಡು ಪ್ಯಾಷನ್‌ಗಳಿದ್ದವು. ಒಂದು: ಚಿತ್ರಕಲಾ ಪರಿಷತ್ತು. ಅಲ್ಲಿ ರಾಜು ಕ್ಲಾಸುಗಳನ್ನು ತೆಗೆದುಕೊಳ್ಳುತ್ತಿದ್ದರು ಅನ್ನುವುದು ಗೊತ್ತು. ಆದರೆ ರಾಜು ಅವರ ಮಾತಿನಲ್ಲಿ ಚಿತ್ರಕಲಾ ಪರಿಷತ್ತಿನ ಮಾತು ಎಷ್ಟು ಸತತವಾಗಿ ಬರುತ್ತಿತ್ತೆಂದರೆ ಆ ಸಂಸ್ಠೆಯಬಗ್ಗೆ ಅವರಿಗಿದ್ದ ಪ್ರೀತಿ ಸಹಜವಾಗಿ ನಮಗೆ ಕಾಣುತ್ತಿತ್ತು. ಕನ್ನಡ ಸಾಹಿತ್ಯ ಪರಿಷತ್ತು ಅವರ ಸಮಯ ಪಡೆದ ಮತ್ತೊಂದು ಸಂಸ್ಥೆಯಾಗಿತ್ತು [ಸಿದ್ಧಲಿಂಗಯ್ಯನವರು ಅಧ್ಯಕ್ಷರಾಗಿದ್ದು, ರಾಜು ಕಾರ್ಯದರ್ಶಿಯಾಗಿದ್ದ ದಿನಗಳಲ್ಲಿ] ಅವರು ಸಾಹಿತ್ಯ ಪರಿಷತ್ತನ್ನು ಉದ್ಧಾರ ಮಾಡಲು - ಅದರ ಸದಸ್ಯತ್ವವನ್ನು ಸಾಹಿತ್ಯಪ್ರಿಯರಿಂದ ತುಂಬಿಸಬೇಕು ಅನ್ನುವ ಛಲವನ್ನು ಹೂತ್ತು ಎಷ್ಟೋ ಸಾಹಿತಿಗಳನ್ನು ಅದಕ್ಕೆ ಸದಸ್ಯರನ್ನಾಗಿ ಸೇರಿಸಿದರು. ಮನೆಯ ಪಕ್ಕದಲ್ಲೇ ಇದ್ದರೂ ಎಂದೂ ಪರಿಷತ್ತಿನ ಕಾರ್ಯಕ್ರಮಗಳಿಗೆ ಹೋಗುವ ಕಾರಣವೇ ಸಿಗದಿದ್ದ ನಾನು ಅವರಿದ್ದ ಕಾಲದಲ್ಲಿ ಪರಿಷತ್ತಿನಲ್ಲಿ ಎಷ್ಟೊಂದು ಸಣ್ಣ ಪುಟ್ಟ ಆದರೆ ಅರ್ಥಪೂರ್ಣ ಕೆಲಸಗಳನ್ನು ಮಾಡಬಹುದೆಂದು ರಾಜು ನಿರೂಪಿಸಿ ತೋರಿಸಿದ್ದರು. ಅಜಾತ ಶತ್ರು ರಾಜು ಸಾಹಿತ್ಯ ಪರಿಷತ್ತಿನಲ್ಲಿನ ತಮ್ಮ ಇಡೀ ಸಮಯವನ್ನು ಮುಗಿಸದೇ ರಾಜೀನಾಮೆ ಕೊಟ್ಟು ಕೈ ಎತ್ತಿದರು. ಆದರೆ ಸುದ್ದಿ ಮಾಡಬಹುದಾಗಿದ್ದ ಆ ರಾಜೀನಾಮೆಯನ್ನೂ ಅವರು ತಮ್ಮದೇ ಸೈಲೆಂಟ್ ರೀತಿಯಲ್ಲಿ ನೀಡಿ ಪರಿಷತ್ತಿನಿಂದ ಅಂತರ್ಧಾನರಾದರು. ಕನ್ನಡದ ಜಂಗಮರಾದ ರಾಜು ಅಸುನೀಗಿದ್ದೂ ಕನ್ನಡದ ಕೆಲಸ ಮಾಡುತ್ತಲೇ, ಜಂಗಮರಾಗಿ ಸುತ್ತಾಡುತ್ತಿದ್ದಾಗಲೇ.

ಹಾಗೆ ನೋಡಿದರೆ ವೈ‌ಎನ್ಕೆ ಸಂಸ್ಥೆಗಳನ್ನು ಕಟ್ಟಲು ಪ್ರಯತ್ನಿಸಿದವರಲ್ಲ. ಅವರೇ ಒಂದು ಸಂಸ್ಥೆಯಾಗಿದ್ದರು. ಆದರೆ ವೈ‌ಎನ್ಕೆ ಗರಡಿಯಲ್ಲಿ ಪಳಗಿದ ಇಂದಿನ ಪತ್ರಕರ್ತರಲ್ಲಿ ವಿಜಯ ಕರ್ನಾಟಕದ ವಿಶ್ವೇಶ್ವರ ಭಟ್ಟರು, ಮತ್ತು ಕನ್ನಡಪ್ರಭದ ಜೋಗಿ ಪ್ರಮುಖರು. ಅದರಲ್ಲೂ ಜೋಗಿ ವೈ‌ಎನ್ಕೆಯವರ ಪನ್ ಮತ್ತು ಹಾಸ್ಯ ಮೈಗೂಡಿಸಿಕೊಳ್ಳದಿದ್ದರೂ ಅವರ ಓದಿನ, ಆಸಕ್ತಿಯ ವಿಸ್ತಾರಗಳನ್ನು ಅದ್ಭುತವಾಗಿ ಮೈಗೂಡಿಸಿಕೊಂಡಿದ್ದಾರೆ. ವೈ‌ಎನ್ಕೆಯವರ ಜಂಗಮತ್ವ ಅವರು ಸಂಪಾದಕರಾಗಿ ಅಲ್ಲಿ ಇಲ್ಲಿ ಹೋಗಿ ಬಂದದ್ದನ್ನು ಬಿಟ್ಟರೆ ಬೆಂಗಳೂರಿಗೆ ಸೀಮಿತವಾಗಿತ್ತು. ಅಥವಾ ಬೆಂಗಳೂರಿನ ಉದ್ದಗಲಕ್ಕೂ ವಿಸ್ತಾರಗೊಂಡಿತ್ತು ಅನ್ನಬಹುದು. ವೈ‌ಎನ್ಕೆಗೆ ಊರಿನ ಉದ್ದಗಲಕ್ಕೂ ಇದ್ದ ಎಲ್ಲ ಹೊಟೇಲುಗಳೂ, ಯಾವ ಹೊಟೇಲಿನಲ್ಲಿ ಏನು ಛಂದ, ಅದರ ಮಾಲೀಕರು ಯಾರು ಅನ್ನುವುದರಿಂದ ಹಿಡಿದು ಆಯಾ ಹೋಟೇಲಿನ ಮಾಣಿಗಳ ಹೆಸರಿನವರೆಗೆ ಎಲ್ಲವೂ ತಿಳಿದಿರುತ್ತಿತ್ತು. ಅವರು ಮೊದಲಿಗೆ "ತೀರ್ಥರೂಪ" ಅನ್ನುವ ಟೈಟಲ್‌ಅನ್ನು ಬೆಂಗಳೂರುನ ಬಾರು ಪಬ್ಬುಗಳ ಬಗ್ಗೆ ಬರೆಯಬೇಕೆಂದಿದ್ದ ಪುಸ್ತಕಕ್ಕಾಗಿ ಕಾಯ್ದಿಟ್ಟಿದ್ದರು. ಆದರೆ ಅದನ್ನು ಮದ್ಯದ ಬಗೆಗಿನ ಪದ್ಯದ ಪುಸ್ತಕಕ್ಕೆ ದಾನ ಮಾಡಿಬಿಟ್ಟರು. ಬಹುಶಃ ಮೊದಲ ಕವಿತಾ ಸಂಗ್ರಹವಾದ "ಪದ್ಯ ಇಷ್ಟು ಲೈಟ್ ಆದರೆ ಹೇಗೆ ಸ್ವಾಮಿ?" ಬಂದನಂತರದ "ತೀರ್ಥರೂಪ"ಕ್ಕೆ ಇಟ್ಟಿದ್ದ ಅಡ್ಡಹೆಸರು "ಮದ್ಯ ಇಷ್ಟು ಟೈಟ್ ಆದರೆ ಹೇಗೆ ಸ್ವಾಮಿ"ಯೇ ಸರಿಯಿರುತ್ತಿತ್ತೇನೋ. ವೈ‌ಎನ್ಕೆ ತಮ್ಮ ಮೂಲ ಕನಸಾದ "ಬೆಂಗಳೂರಿನ ಗುಂಡು ಗೈಡ್ - ತೀರ್ಥರೂಪ" ದ ತೀರ್ಥಯಾತ್ರೆ ನಮಗೆಲ್ಲಾ ಮಾಡಿಸಿದ್ದರೆ ನಾವೂ ಟೈಟಾಗಿ ಕೂತಿರಬಹುದಿತ್ತು. "ಗುಂಡು ಹಾಕುವುದಕ್ಕೆ ಮುನ್ನ - ನಾವು ಜಂಗಮ, ರೂಮು ಸ್ಥಾವರ, ಗುಂಡು ಹಾಕಿದ ಮೇಲೆ ನಾವು ಸ್ಥಾವರ ರೂಮು ಜಂಗಮ" ಅಂತ ವೈ‌ಎನ್ಕೆ ಬರೆದಿದ್ದರು. ಗುಂಡೇ ಹಾಕದ ರಾಜು ಯಾವಾಗಲೂ ಜಂಗಮರಾಗಿರುತ್ತಿದ್ದುದರಲ್ಲಿ ಆಶ್ಚರ್ಯವೇನೂ ಇಲ್ಲ. 

ಮುಗಿಸುವ ಮುನ್ನ ಒಂದು ಕಡೆಯ ಮಾತು. ವೈ‌ಎನ್‍ಕೆ ತಮ್ಮ ಗೆಳೆಯರ ಬಳಗವನ್ನು ಕರೆದದ್ದು ರಾಧಿಕಾ ವೃಂದ ಎಂದು - ತಮ್ಮ ಮನೆ ರಾಧಿಕಾಕ್ಕೆ ಆಹ್ವಾನವಿದ್ದ ಕೆಲವರದೇ ಹೆಸರಿನ ಯಾದಿ ಅದು. ರಾಜು, ಮತ್ತವರ ನಿಕಟವರ್ತಿಗಳು ಇಟ್ಟುಕೊಂಡ ಹೆಸರು "ಪಿಪಿ ಗೆಳೆಯರ ಬಳಗ". ಮೊದಲಿಗೆ ಹತ್ತಾರು ಮಂದಿ ಈ ಬಳಗದಲ್ಲಿ ಇದ್ದರಂತೆ, ಆದರೆ ಕಡೆಗೆ ಸ್ಥಾಯಿಯಾಗಿ ನಿಂತವರು ರಾಜು, ಎಸ್.ಎಸ್.ಆರ್ ಮತ್ತು ಕೆವಿ ನಾರಾಯಣ. ಪಿಪಿ ಅನ್ನುವ ಹೆಸರಿನ ಅರ್ಥ ಏನಿರಬಹುದು ಎನ್ನುವುದಕ್ಕೆ ಅನೇಕ ಉಪಕಥೆಗಳು ಚಾಲ್ತಿಯಲ್ಲಿವೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಚಾಲ್ತಿಯಲ್ಲಿರುವ ಕಥೆ ಪೋಲೀ ಪಟಾಲಂ ಗೆಳೆಯರ ಬಳಗ..... ರಾಜು, ಎಚ್.ಎಸ್.ಆರ್. ಕೆವಿ‌ಎನ್... ಪೋಲೀ ಪಟಾಲಂ!! ಇದಕ್ಕಿಂತ ದೊಡ್ಡ ಜೊಕ್ ಫಾಲ್ಸ್ ಮತ್ತೊಂದಿಲ್ಲ. ಹಾಗಾಗಿಯೇ ಇದನ್ನು "joke false" ಎಂದು ವೈ‌ಎನ್‍ಕೆ ಶೈಲಿಯಲ್ಲಿ ಪನ್ ಮಾಡಬೇಕಾಗಿದೆ. 

ಅಹಮದಾಬಾದು ೦೨ ಮಾರ್ಚ್ ೨೦೦೮

Labels: 

No comments: