ಗುಜರಾತಿನಲ್ಲಿ ಜೀವನದ ಅರ್ಧಭಾಗದಷ್ಟು ಕಳೆದಿರುವ ನನ್ನಂಥವರು ಆ ರಾಜ್ಯದಲ್ಲೇ ಇದ್ದು, ಜನ ಮತ್ತು ದೇಶಕ್ಕಾಗಿ ಅಪ್ರತಿಮ ಕೆಲಸ ಮಾಡುತ್ತಿರುವ ತುಂಬಾ ಭಿನ್ನವಾಗಿರುವ ಇಬ್ಬರನ್ನು ಬೆರಗಿನಿಂದ, ಗೌರವದಿಂದ ಕಾಣದೇ, ಅವರಿಂದಪ್ರಭಾವಿತರಾಗದೇ ಇರುವುದು ಕಷ್ಟದ ಮಾತು. ಹಾಲು ಉತ್ಪಾದಕರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದ ಕುರಿಯನ್ ಬಗ್ಗೆ ನಾನು ಈಗಾಗಲೇ ಬರೆದಿದ್ದೇನೆ. ಕುರಿಯನ್ ಅವರ ಕೆಲಸ ಹೆಚ್ಚಿನಂಶ ಗ್ರಾಮ್ಯ ಪ್ರದೇಶಕ್ಕೆ ಸೀಮಿತವಾಗಿತ್ತು. ಪರಿಚಯದವರಿಂದ ಇಳಾಬೇನ್ ಎಂದು ಪ್ರೀತಿಯಿಂದ ಕರೆಸಿಕೊಳ್ಳಲ್ಪಡುವ ಇಳಾ ಭಟ್ ಕುರಿಯನ್‌ಗಿಂತ ತುಂಬಾ ಭಿನ್ನವಾಗಿದ್ದಾರೆ. ಆಕೆ ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ. ಕಾಣಿಸಿಕೊಂಡರೂ ಧ್ವನಿಯೇರಿಸಿ ಮಾತನಾಡುವುದಿಲ್ಲ. ಮೇಜು ಗುದ್ದಿ ಕೂಗಾಡುವುದಿಲ್ಲ. ಹಾಗೆ ನೋಡಿದರೆ ಆಕೆ ಒಂದು ಸೊಳ್ಳೆಗೂ ಹಾನಿಯುಂಟುಮಾಡಬಹುದು ಅನ್ನಿಸುವುದಿಲ್ಲ. ಆಕೆಯ ಆಕಾರ ಗಾಂಧೀಜಿಯಂತೆ ಪುಟ್ಟದು, ಮಾತು ಮೃದು. ಆದರೆ ಆಕೆ ಕೈಗೊಂಡ ಯಾವುದೇ ಕೆಲಸವನ್ನು ಹಿಡಿದು ಹೊರಟಾಗ ಆ ಕೆಲಸಕ್ಕೆ ಆಕೆ ಹಾಕಿ ಹಿಡಿವ ಪಟ್ಟು ಗಟ್ಟಿಯಾದದ್ದು, ಉಕ್ಕಿನಂಥದ್ದು. ಜೀವಮಾನವಿಡೀ ಗುಜರಾತಿನ ಬಡ ಹೆಣ್ಣುಮಕ್ಕಳ ಸಮುದಾಯದ ಪರವಾಗಿ ಎಡಬಿಡದೇ ಕೆಲಸಮಾಡಿದ್ದಾರೆ. ಈಚೆಗೆ ಆಕ್ಸಫರ್ಡ್ ಯೂನಿವರ್ಸಿಟಿ ಪ್ರೆಸ್ ಅವರು ಆಕೆಯ ಕಾರ್ಯಜೀವನದ ಬಗೆಗೆನ ಪುಸ್ತಕ "We are Poor, But so Many" [ನಾವು ಬಡವರು, ಆದರೆ ಎಷ್ಟೊಂದು ಜನ" ಅನ್ನುವ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಕುರಿಯನ್ ಅವರ "I Too Had a Dream" [ನನಗೂ ಒಂದು ಕನಸಿತ್ತು] ಪುಸ್ತಕದಂತೆ ಇದೂ ಹೆಚ್ಚಾಗಿ ಇಳಾ ಅವರ ಖಾಸಗೀ ಜೀವನಕ್ಕಿಂತ ಹೆಚ್ಚಾಗಿ ಆಕೆಯ ವೃತ್ತಿ ಜೀವನದ ಬಗ್ಗೆಯೇ ಹೆಚ್ಚಿನ ಮಾಹಿತಿ ನೀಡುತ್ತದೆ. ಇಳಾ ಕೆಲ ಸ್ತ್ರೀವಾದಿ, ಪರಿಸರವಾದಿಗಳಂತೆ ಕೂಗಾಡುವ ಧರಣಿಕೂಡುವ "ಸಾಮಾಜಿಕ ಕಾರ್ಯಕರ್ತೆ"ಯ ಜಾಯಮಾನದವರಲ್ಲ. ಅವರು ಮಾತಿಲ್ಲದೇ ಸಾಧಿಸಿದ್ದೇ ಹೆಚ್ಚು. ಕುರಿಯನ್‌ಗೂ ಇಳಾಗೂ ಇರುವ ವ್ಯತ್ಯಾಸ ಅವರ ಕೆಲಸದ ಶೈಲಿ, ವ್ಯಕ್ತಿತ್ವದಲ್ಲಿ ಮಾತ್ರ ಇದ್ದದ್ದಲ್ಲ. ಅದು ಅವರು ಜನರನ್ನು ನೋಡುವ, ಜನರೊಂದಿಗೆ ಕೆಲಸಮಾಡುವ ರೀತಿಗೂ ವ್ಯಾಪಿಸಿದೆ. ಕುರಿಯನ್ ಅಧ್ಯಕ್ಷರಾಗಿದ್ದ ಸಂಸ್ಥೆಯಲ್ಲಿ ನಾನು ಅನೇಕ ವರ್ಷ ಕೆಲಸ ಮಾಡಿದ್ದರೂ, ಆತ ಕರೆದ ಮೀಟಿಂಗುಗಳಲ್ಲಿ ಅನೇಕ ಬಾರಿ ಭಾಗವಹಿಸಿದ್ದರೂ ಆತ ನನನ್ನು ಗುರುತಿಸಲಾರರು. ಆದರೆ ಇಳಾ ಹಾಗಲ್ಲ. ಯಾವಾಗಲೂ ಎಲ್ಲಿದ್ದರೂ ತಮ್ಮ ಪರಿಚಯದವರನ್ನರಸಿ ಹೋಗಿ ಒಳ್ಳೆಯ ಮಾತುಗಳನ್ನು ಆಕೆ ಆಡುತ್ತಾರೆ. ಎಷ್ಟರ ಮಟ್ಟಿಗೆಂದರೆ - ಅವರ ಪುಸ್ತಕದ ಮೇಲೆ ಹಸ್ತಾಕ್ಷರವನ್ನು ಕೋರಿದಾಗ ಆಕೆ ಬರೆದದ್ದು ಈ ಮಾತುಗಳು: "ಪ್ರಿಯ ಶ್ರೀರಾಮ್, ನಿಮ್ಮ ಮುಂದವರೆದ ಮಾರ್ಗದಶನಕ್ಕೆ, ವಿಶ್ವಾಸ, ಪ್ರೀತಿಯೊಂದಿಗೆ.." ಆದರೆ ಕುರಿಯನ್ ಕಡೆಯಿಂದ ನನ್ನಲ್ಲಿರುವ ಹಸ್ತಾಕ್ಷರದ ಕಾಗದವೆಂದರೆ ಯಾವುದೋ ಒಂದು ಸೆಮಿನಾರಿಗೆ ನನ್ನನ್ನು ಆಹ್ವಾನಿಸಿದ ಪತ್ರವಷ್ಟೇ. ಅದನ್ನೂ ನಾನು ಜಾಗರೂಕವಾಗಿ ಇರಿಸಿಕೊಂಡಿದ್ದೇನೆ.
ಇಳಾಬೇನ್ ತಮ್ಮ ವೃತ್ತಿಯನ್ನು ಯುವ ವಕೀಲರಾಗಿ ಪ್ರಾರಂಭಿಸಿದರು. ಟೆಕ್ಸ್ಟೈಲ್ ಲೇಬರ್ ಅಸೋಸಿಯೇಷನ್ ಅನ್ನುವ ವಸ್ತ್ರಕಾರ್ಮಿಕರ ಸಂಘದಲ್ಲಿ ಮೊದಲ ಕೆಲಸ. ಆಕೆಗೆ ಆಗಿನಿಂದಲೂ ಮಾರ್ಗದರ್ಶನ ಮತ್ತು ಸಹಕಾರ ನೀಡಿದ್ದು ಆಕೆಯ ಪತಿ ರಮೇಶ್ ಭಟ್. ರಮೇಶ್ ವೃತ್ತಿಯಿಂದ ಮೇಷ್ಟರು. ಆತ ಆಕೆಗೆ ಸಹಚರ, ಗೆಳೆಯ, ಮಾರ್ಗದರ್ಶಿ ಮತ್ತು ಶಕ್ತಿಯ ಸೆಲೆ. ಆಕೆ ಪುಸ್ತಕವನ್ನ ಸಹಜವಾಗಿಯೇ ರಮೇಶ್ ನೆನಪಿಗೆ ಅರ್ಪಿಸಿದ್ದಾರೆ. ಆಕೆ ಕೆಲಸ ಪ್ರಾರಂಭಿಸಿದಾಗ ಆಕೆಗಿದ್ದ ಅನುಮಾನಗಳೂ ಭಯ ಎಲ್ಲವನ್ನೂ ಆಕೆಯ ಬರವಣಿಗೆಯಲ್ಲಿ ಇಳಾ ಗ್ರಹಿಸಲು ಪ್ರಯತ್ನಿಸಿದ್ದಾರೆ. "ಲೇಬರ್ ಕೋರ್ಟಿನಲ್ಲಿನ ಮೊದಲ ದಿನಗಳು ಆತಂಕದ್ದಾಗಿತ್ತು. ನನ್ನ ಎತ್ತರ, ಧರಿಸಿದ ಬಟ್ಟೆಯಬಗ್ಗೆ ಯಾರಾದರೂ ಏನಾದರೂ ಅಂದರೆ ನನಗೆ ಬೇಸರವಾಗುತ್ತಿತ್ತು. ಮಾತು ಹೊರಡದೇ ತಡವರಿಸುತ್ತಿದ್ದೆ. ಕೋರ್ಟಿನಲ್ಲಿ ಹೆಂಗಸರು ಎಂದೂ ಕಂಡುಬರುತ್ತಿರಲಿಲ್ಲ." ಹೀಗೆಲ್ಲಾ ಆಕೆ ಮೊದಲಿಗೆ ಬರೆದರೂ, ನಂತರದ ಬದುಕಿನಲ್ಲಿ ಅನೇಕ ಜಾಗಗಳಲ್ಲಿ ಒಂಟಿಯಾಗಿ ವೇದಿಕೆಯ ಮೇಲೆ ನಿಂತು ಮಾತನಾಡಿದ್ದಾರೆ. ಮಹಿಳೆಯರ, ಕಾರ್ಮಿಕರ ಹಕ್ಕುಗಳ ಹೋರಾಟವನ್ನು ಲಕ್ಷಾಂತರ ಮಹಿಳೆಯರ ಬೆಂಬಲದ ಆಧಾರದ ಮೇಲೆ ಕೈಗೊಂಡಿದ್ದಾರೆ. ಆಕೆಯದು ಸರಳವಾದ ಹೋರಾಟವೇನೂ ಆಗಿರಲಿಲ್ಲ.
ಅನೇಕ ಗಂಡಸರ ನಡುವೆ ಒಬ್ಬೊಂಟಿ ಹೆಣ್ಣಾಗಿ ನಿಂತು ಕೆಲಸ ಮಾಡುವುದು ಎಷ್ಟು ಕಷ್ಟ ಎಂದು ಇಳಾ ಹೇಳುವಾಗ ಅದರ ಅರ್ಥ ಗಂಡಸಾದ ನನಗೆ ಚೆನ್ನಾಗಿ ಆಗುತ್ತದೆಂದೇ ಹೇಳಬೇಕು. ಆದರೆ ನನಗೆ ಈ ರೀತಿಯ ಅನುಭವವಾದದ್ದೇ ಭಿನ್ನವಾದ ಒಂದು ಪರಿಸ್ಥಿತಿಯಲ್ಲಿ. ಕಿರುಸಾಲದ ಬಗೆಗಿನ ನನ್ನ ಪುಸ್ತಕ ಬರವಣಿಗೆಯ ಕಾಲದಲ್ಲಿ ಇಳಾ ಅಧ್ಯಕ್ಷರಾಗಿದ್ದ ಮಹಿಳಾ ಸೇವಾ ಬ್ಯಾಂಕಿಗೆ ನಾನು ಅನೇಕ ಬಾರಿ ಭೇಟಿ ನೀಡಿದ್ದೆ. ಅಂಥ ಒಂದು ಭೇಟಿಯ ಪ್ರಸಂಗದಲ್ಲಿ ನಾನು ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಜಯಶ್ರೀ ವ್ಯಾಸ್‍ಗೆ ಬ್ಯಾಂಕಿನ ಮಾಹಿತಿಯನ್ನು ಆಂತರಿಕವಾಗಿ ಹಂಚಿಕೊಳ್ಳುವ ಅವಶ್ಯಕತೆ ಮತ್ತು ಅದರಿಂದ ಆಗುವ ಉಪಯೋಗದ ಬಗ್ಗೆ ಒಂದು ಪುಟ್ಟ ಭಾಷಣವನ್ನು ನನ್ನ ಮೇಷ್ಟರ ಶೈಲಿಯಲ್ಲಿ ನೀಡಿದ್ದೆ ಅನ್ನಿಸುತ್ತದೆ. ಅದನ್ನು ಕೇಳಿದ ಜಯಶ್ರೀ ನೀವು ಈ ವಿಷಯದಬಗ್ಗೆ ನಮ್ಮ ಸ್ಟಾಫನ್ನು ಯಾಕೆ ಸಂಬೋಧಿಸಬಾರದು ಎಂದು ಕೇಳಿದರು. ಮೇಷ್ಟರಿಗೆ ಕ್ಲಾಸು ತೆಗೆದುಕೊಳ್ಳುವ ಅವಕಾಶ ಸಿಕ್ಕರೆ ಬೇಡವೆನ್ನುವುದು ಹೇಗೆ? ಬ್ಯಾಂಕಿನ ಬೋರ್ಡ್ ರೂಮಿನಲ್ಲಿ ಅವರ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಲು ಸಂತೋಷದಿಂದಲೇ ಒಪ್ಪಿದೆ. ಅಷ್ಟೇನೂ ಸರಳವಲ್ಲದ ಮ್ಯಾನೇಜ್‍ಮೆಂಟಿನ ಒಂದು ವಿಷಯವನ್ನು ಅವರಿಗೆ ನಾನು ಅರ್ಥವಾಗುವ ಹಾಗೆ ವಿವರಿಸಬೇಕಿತ್ತು. ಆ ಕೋಣೆಗೆ ಹೋಗಿ ನೋಡಿದಾಗ ನನಗೆ ಆಘಾತ ಕಾದಿತ್ತು. ಬೋರ್ಡ್ ರೂಮೆಂದರೆ ಸುತ್ತಲೆಲ್ಲ ಗಾದಿ ಹಾಕಿ ನೆಲದ ಮೇಲೆ ಕೂರುವ ಅವಕಾಶ ಮಾಡಿದ್ದ ದೊಡ್ಡ ಹಾಲು. ಅಲ್ಲಿ ನಾನು ಮಾತ್ರ ನಿಲ್ಲಬೇಕಿತ್ತು. ಕೂತ ಅಷ್ಟೂ ಜನ ಮಹಿಳೆಯರು! ಸುತ್ತ ಮುತ್ತ ನೋಡುತ್ತೇನೆ - ಒಂದು ಗಂಡು ನರಪಿಳ್ಳೆಯೂ ಇಲ್ಲ. [ಸೇವಾ ಬ್ಯಾಂಕಿನಲ್ಲಿ ಇಬ್ಬರೇ ಗಂಡು ಉದ್ಯೋಗಿಗಳು.. ಲಾಲ್‍ಜಿಭಾಯಿ ಜೀಪ್ ಚಲಾಯಿಸುವ ಡ್ರೈವರ್ ಮತ್ತು ಮೆನನ್‍ಭಾಯಿ, ಜಯಶ್ರೀಯ ಕಾರ್ಯದರ್ಶಿ] ಮೇಲಾಗಿ ಅವರಿಗೆ ಈ ಮಾಹಿತಿಯನ್ನು ನಾನು ಸಾಧ್ಯವಾದರೆ ಗುಜರಾತಿಯಲ್ಲಿ, ಇಲ್ಲವಾದರ ಕನಿಷ್ಟ ಹಿಂದಿಯಲ್ಲಿ ನೀಡಬೇಕಿತ್ತು! ಆಗಲೇ ಹೊರಬಂದು ನಾನು ಜಯಶ್ರೀಗೆ ಹೇಳಿದ್ದೆ.. "ಬರೇ ಗಂಡಸರೇ ಇರುವ ಕೋಣೆಯಲ್ಲಿ ಅಕ್ಷರ ತಿಳಿಯದ ಬಡ ಹೆಂಗಸರ ಮನಸ್ಥಿತಿ ಹೇಗಿರುತ್ತದೆ ಅನ್ನುವುದು ನನಗೆ ಪೂರ್ಣವಾಗಿ ಅರ್ಥವಾಗಿದೆ" ಎಂದು. ಅಂದಿನ ಕ್ಲಾಸು ತೋಪಾಗಿ ಹೋಯಿತೆನ್ನುವುದರಲ್ಲಿ ಅನುಮಾನವೇ ಇಲ್ಲ. [ಈ ರೀತಿ ನಾನು ಪಾಠಮಾಡುವಾಗ ಬೆಚ್ಚಿ ಸನ್ನಿಹಿಡಿದಂತೆ ಆದದ್ದು ಮತ್ತೊಂದು ಸಂದರ್ಭದಲ್ಲಿ ಮಾತ್ರ: ಹೆಚ್ಚಾಗಿ ಹೆಂಗಸರೇ ಇದ್ದ ಸಿ.ಬಿ.ಎಸ್.ಸಿ ಶಾಲೆಗಳ ಪ್ರಿನ್ಸಿಪಾಲರಿಗಾಗಿ ನಾವು ತಯಾರಿಸಿದ್ದ ಒಂದು ತರಬೇತಿ ಕಾರ್ಯಕ್ರಮದಲ್ಲಿ. ಎಷ್ಟೋ ದಿಗ್ಗಜ ಪಾಲಕರನ್ನು ತಮ್ಮ ಕೋಣೆಯಾಚೆ ಕಾಯಿಸಿ ಅಡ್ಮಿಶನ್‌ಗೆ ಚಳ್ಳೇಹಣ್ಣು ತಿನ್ನಿಸುವ, ಅದ್ಭುತ ವಾಚಾಳಿತನವಿರುವ, ಅನುಭವೀ ಗುಂಪಿಗೆ ನಾನು ಪಾಠ ಮಾಡಿದ್ದೆ. ಕ್ಲಾಸಾದ ನಂತರ ನನ್ನ ಪಾಠದ ಬಗ್ಗೆ ಅಲ್ಲದೇ ನಾನು ನಿಂತ ರೀತಿ, ಭಾಷೆ ಉಪಯೋಗಿಸಿದ ರೀತಿ, ಉದಾಹರಣೆಗಳನ್ನು ಕೊಟ್ಟರೀತಿ, ಬೋರ್ಡಿನ ಮೇಲೆ ಚಾಕ್ ಚಲಾಯಿಸಿದ ರೀತಿ, ಎಲ್ಲದರ ಬಗೆಗೂ ನನಗೆ ಉಪದೇಶ ನೀಡಿ, ನಾನು ಪಾಠವನ್ನೇ ಮಾಡಿಲ್ಲವೇನೋ ಅನ್ನುವ ಭಾವನೆ ಬರುವಂತೆ ಅವರುಗಳು ಮಾಡಿಬಿಟ್ಟಿದ್ದರು!! ಆದರೆ ಆ ಸಂದರ್ಭವೇ ಬೇರೆ, ಬಿಡಿ.]
ಇಳಾರ ಕೆಲಸದ ಮಹತ್ವವನ್ನು ಅರಿಯಲು ಸೇವಾ ಗುಂಪಿನ ಸಂಸ್ಥೆಗಳು ಯಾವ ಸಂದರ್ಭ-ಪರಿಸರದಲ್ಲಿ ಬೆಳೆದವು ಅನ್ನುವುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಉದಾಹರಣೆಗೆ ಇಳಾ ತಮ್ಮ ಪುಸ್ತಕದಲ್ಲಿ ಇದನ್ನು ವಿವರಿಸುತ್ತಾರೆ "... ನಾವು ನಮ್ಮ ಸ್ವ-ಉದ್ಯೋಗಿ ಕಾರ್ಮಿಕರ ಸಂಘಗಳನ್ನು ನೋಂದಾಯಿಸುವುದು ಕಷ್ಟದ ಮಾತಾಗಿತ್ತು. ರಸ್ತೆಯಲ್ಲಿರುವ ಚಿಂದಿ-ಬಾಟಲಿ-ಪ್ಲಾಸ್ಟಿಕ್ ವಸ್ತುಗಳನ್ನು ಹೆಕ್ಕುವ Ragpickersಗಾಗಿ ಸಹಕಾರ ಸಂಘ ನೋಂದಾಯಿಸಲು ಹೋದಾಗ, ಅದು ಏನೂ "ತಯಾರಿಸು"ವುದಿಲ್ಲವಾದ್ದರಿಂದ, ಸಂಘವನ್ನು ನೋಂದಾಯಿಸುವುದು ಕಷ್ಟವಾಯಿತು. ಹಾಗೆಯೇ ಸೂಲಗಿತ್ತಿಯರ ಸಹಕಾರ ಸಂಘದ ವಿಷಯದಲ್ಲೂ ಕಷ್ಟ ಉಂಟಾಯಿತು. ಮಕ್ಕಳನ್ನು ಪ್ರಸವಿಸುವ ಕೆಲಸ ಹೇಗೆ ಆರ್ಥಿಕ ಚಟುವಟಿಕೆಯ ಕೆಳಗೆ ಬರುತ್ತದೆ ಅನ್ನುವ ಪ್ರಶ್ನೆಯನ್ನು ಎತ್ತಲಾಯಿತು. ವಿಡಿಯೋ ಚಿತ್ರಿಸುವ ಹೆಣ್ಣುಮಕ್ಕಳ ಸಹಕಾರ ಸಂಘವನ್ನು ಏರ್ಪಾಟು ಮಾಡಲು ಹೋದಾಗ ಅದರ ಸದಸ್ಯರಾದ ಕ್ಯಾಮರಾ ತಜ್ಞೆಯರಿಗೆ, ಧ್ವನಿಗ್ರಹಣ ತಜ್ಞೆಯರಿಗೆ, ನಿರ್ಮಾಪಕರಿಗೆ, ನಿರ್ದೇಶಕರಿಗೆ ಅಕ್ಷರಜ್ಞಾನ ಇಲ್ಲವೆಂಬ ಕಾರಣಕ್ಕೆ ನೋಂದಣಿಯನ್ನು ನಿರಾಕರಿಸಿದರು [ಪು ೧೭]." ಇಳಾರ ಶಕ್ತಿ ಇಂಥ ವಿಭಿನ್ನ ಕಾಯಕದಲ್ಲಿ ತೊಡಗಿರುವ ಮಹಿಳೆಯರನ್ನು ಒಂದೇ ವೇದಿಕೆಯ ಮೇಲೆ ತರುವುದರಲ್ಲಿದೆ. ಅವರ ಹಕ್ಕುಗಳಿಗಾಗಿ ಹೋರಾಟ ಮಾಡುವುದು, ಅವರಿಗೆ ಒಂದು ಸ್ವಸ್ವರೂಪವನ್ನು ಕೊಡುವುದು, ಎಲ್ಲರಿಗೂ ಬೇಕಾದ ಸೇವೆಗಳನ್ನೊದಗಿಸುವುದು ಮತ್ತು ಸಂಸ್ಥೆಯ ಹೆಸರಿಗೆ ತಕ್ಕಂತೆ ಸೇವಾ ಕಾರ್ಯ ಮಾಡುವುದು ಹಾಗೂ ಈ ಎಲ್ಲದರಲ್ಲೂ ಸಾಫಲ್ಯಪಡೆಯುವುದರಲ್ಲಿದೆ. ಸ್ವ-ಉದ್ಯೋಗಿಗಳ ಕಾರ್ಮಿಕ ಸಂಘ ಅನ್ನುವುದು ಒಂದು ವಿರೋಧಾಭಾಸವೇ ಸರಿ. ಆದರೂ ಹೀಗೆ ಹಂಚಿಹೋಗಿರುವ ಸ್ವ-ಉದ್ಯೋಗಿಗಳನ್ನು ಒಂದೆಡೆ ಕೂಟ ಮಾಡುವುದರಲ್ಲಿ ಸಾಫಲ್ಯತೆ ಪಡೆದದ್ದರಿಂದಲೇ ಇಳಾ ತಮ್ಮ ವಾರಗೆಯವರಿಗಿಂತ ಭಿನ್ನವಾಗಿ [ಕುಳ್ಳಗಿದ್ದರೂ] ಎತ್ತರವಾಗಿ ನಿಲ್ಲುವಂತಾಗಿದೆ.
ಇಳಾ ಅವರಿಗೆ ಅನೇಕ ಪ್ರಶಸ್ತಿಗಳು ಬಂದಿವೆ. ಸಮೂಹ ಸೇವೆಗಾಗಿ ರಾಮನ್ ಮ್ಯಾಗಸಸೇ ಪ್ರಶಸ್ತಿ, ಪದ್ಮಶ್ರೀ- ಪದ್ಮಭೂಷಣ, ರಾಜ್ಯ ಸಭೆಯ ಸದಸ್ಯತ್ವ, ಯೋಜನಾ ಆಯೋಗದ ಸದಸ್ಯತ್ವ, ಹಾರ್ವರ್ಡ್ ಮತ್ತು ಯೇಲ್ ಸಂಸ್ಥೆಗಳಿಂದ ಗೌರವ ಡಾಕ್ಟರೇಟ್, ಮತ್ತು ಆಶ್ಚರ್ಯವೆಂಬಂತೆ ಇಕನಾಮಿಕ್ ಟೈಂಸ್ ಮತ್ತು ಬಿಜಿನೆಸ್ ಸ್ಟಾಂಡರ್ಡ್ ಪತ್ರಿಗೆಗಳಿಂದ ಬರುವು "ಅತ್ಯುತ್ತಮ ಮಹಿಳಾ ಉದ್ಯಮಿ" ಪ್ರಶಸ್ತಿಯೂ ಆಕೆಗೆ ದಕ್ಕಿದೆ. [ಅತ್ಯುತ್ತಮ ಉದ್ಯಮಪತಿ ಅನ್ನುವ ಪ್ರಯೋಗಕ್ಕೆ ಸ್ತ್ರೀಲಿಂಗ ಉದ್ಯಮಪತ್ನಿ ಆಗುವುದಂತೂ ಸಾಧ್ಯವಿಲ್ಲವಲ್ಲ!!]. ಈ ರೀತಿಯ ಪ್ರಶಸ್ತಿಗಳು ಬಂದಾಗ ಇಳಾ ಎಂದೂ ಒಬ್ಬರೇ ಹೋಗಿ ಅದನ್ನು ಸ್ವೀಕರಿಸಿದವರಲ್ಲ. ಯಾವಾಗಲೂ ತಮ್ಮ ಸಂಸ್ಥೆಯ ಸದಸ್ಯರಾದ ಒಂದಿಬ್ಬರಾದರೂ ಮಹಿಳೆಯರನ್ನು ಆಕೆ ಯಾವಾಗಲೂ ಜೊತೆಗೆ ಕರೆದೊಯ್ಯುತ್ತಾರೆ. "ಸೇವಾ" ಸಂಸ್ಥೆಗಳು ಈ ಅಲಿಖಿತ ನಿಯಮವನ್ನು ಯಾವಾಗಲೂ ಪಾಲಿಸುತ್ತವೆ. ಹಳ್ಳಿಯ ಅಥವಾ ನಗರದ ಬಡ ಹೆಂಗಸರನ್ನು ಪಂಚತಾರಾ ಹೋಟೇಲುಗಳಲ್ಲಿ ನಡೆವ ಈ ಸಮಾರಂಭಗಳಿಗೆ ಕರೆದೊಯ್ಯುವುದು ಸೇವಾದ ಸಂಸ್ಥೆಯ ಒಂದು ಹೆಗ್ಗಳಿಗೆಯಾಗಿದೆ. ಅಷ್ಟೇ ಅಲ್ಲ, ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯವರು ರೂಪಿಸಿ, ಬಾನಸ್‌ಕಾಂಠಾದ ಕೆಲ ಮಹಿಳೆಯರು ಕಸೂತಿಮಾಡಿ ಹೊಲೆದ ಬಟ್ಟೆಗಳ ಬಿಡುಗಡೆ ಸಮಾರಂಭವೊಂದರಲ್ಲಿ ಹೆಸರಾಂತ ಮಾಡೆಲ್‌ಗಳ ಜೊತೆಜೊತೆಗೇ ಈ ಬಡನಾರಿಯರೂ ರ್‍ಯಾಂಪ್ ಮೇಲೆ ನಡೆದಾಡಿದ್ದೂ ಉಂಟು. ಇದಕ್ಕಿಂತ ಉತ್ತಮ ರೀತಿಯಲ್ಲಿ ತಮ್ಮ ವಸ್ತುಗಳನ್ನು ಮಾರಾಟಮಾಡುವ ವಿಧಾನವಿದೆಯೇ?
ಬಾನಸ್‌ಕಾಂಠಾ, ಕಛ್ ಪ್ರಾಂತದ ಕಸೂತಿ ಕೆಲೆಯಿಂದ ಕೂಡಿದ ಮಹಿಳೆಯರಿಂದ ತಯಾರಿಸಲ್ಪಟ್ಟ ವಸ್ತ್ರಗಳನ್ನು ಮಾರಾಟಮಾಡುವುದಕ್ಕೆ ಸ್ಥಾಪಿತವಾದ ಸೇವಾ ಟ್ರೇಡ್ ಫೆಸಿಲಿಟೇಷನ್ ಸೆಂಟರ್ ಅನ್ನುವ ಸಂಸ್ಥೆಯ ನಿರ್ವಹಣಾ ಮಂಡಲಿಯಲ್ಲಿ ಇರುವವರು ಯಾರು? - ಸೇವಾ ಉದ್ಯೋಗ ಮಂಡಲಿಯಿಂದ ಒಂದಿಬ್ಬರು, ಒಬ್ಬ ಪ್ರೊಫೆಸರ್, ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನಿರಕ್ಷರಿಗಳಾದ ಕಸೂತಿ ಕಲಾವಿದರಿಬ್ಬರು. ಅವರಿಗೆ ಎಜೆಂಡಾದ ಕಾಗದ ಓದಲು ಬರುವುದಿಲ್ಲವಾದರೂ, ಯಾರಾದರೂ ಅವಾಕ್ಕಾಗುವಂತಹ ಪ್ರಶ್ನೆಗಳನ್ನು ಕೇಳಬಲ್ಲರು. ಅವರನ್ನು ನಿರ್ವಹಣಾ ಮಂಡಲಿಯಲ್ಲಿ ಕೂಡಿಸುವುದರ ಹಿಂದಿನ ಉದ್ದೇಶವೇನಿರಬಹುದು? ಆ ಮಹಿಳೆಯರಿಗೆ ಹೊರಗಿನ ಪ್ರಪಂಚ ಅರ್ಥವಾಗಿ ಅವರ ಆಂತರಿಕ ಶಕ್ತಿ ಬೆಳೆಯಲೆಂದೇ ಹಾಗೆ ಮಾಡಿರಬಹುದೋ? ಅಥವಾ ಅಲ್ಲಿರುವ ನಾಗರೀಕ ಪ್ರೊಫೆಸರು ಮತ್ತು ಇತರ ಜನರಿಗೆ ತಾವು ಯಾರ ಜೊತೆ/ಯಾರಿಗಾಗಿ ಕೆಲಸ ಮಾಡುತ್ತಿದ್ದೇವೆ ಅನ್ನುವ ಅರಿವಿರಲಿ ಎಂದೋ? ನನಗೆ ಇದರೆ ಉದ್ದೇಶ ಏನಿರಬಹುದೆಂದು ತಿಳಿದಿಲ್ಲವಾದರೂ, ಈ ಎರಡೂ ಉದ್ದೇಶಗಳನ್ನು ಈ ಪ್ರಕ್ರಿಯೆ ಸಾಧಿಸುತ್ತದೇನೋ.
ಈ ರೀತಿಯ ಮಾನಸಿಕ ಕಟ್ಟುಪಾಡುಗಳಿಂದ ಬಿಡುಗಡೆ ಒದಗಿಸುವಲ್ಲಿ ಸೇವಾ ಪರಿವಾರದ ಮಹತ್ವ ಇದೆ. ಇಲ್ಲಿಗೂ-ಅಲ್ಲಿಗೂ, ನಮಗೂ-ನಿಮಗೂ, ನಗರಕ್ಕೂ-ಹಳ್ಳಿಗೂ, ಬಡವರಿಗೂ-ಬಲ್ಲಿದರಿಗೂ, ನಿರಕ್ಷರಿಗಳಿಗೂ-ವಿದ್ಯಾವಂತರಿಗೂ, ಬುದ್ಧಿವಂತರಿಗೂ-ಓದುಕಲಿತವರಿಗೂ ನಡುವೆ ಯಾವುದೇ ಅಡಚಣೆಯಿಲ್ಲದ ಸೇತುವೆಗಳನ್ನು ಕಟ್ಟಿ ಅಂತರವೇ ಇಲ್ಲದಂತೆ ಮಾಡುವುದರಲ್ಲಿಯೇ ಅವರ ಕೆಲಸದ ಮಹತ್ವವಿದೆ. ಈ ರೀತಿಯಾಂದತಹ ಸೀಮೋಲ್ಲಂಘನದ ಕೆಲಸವನ್ನು ನಾನು ನೋಡಿರುವುದು ಕೇವಲ ಮತ್ತೊಂದು ಜಾಗದಲ್ಲಿ ಮಾತ್ರ. ಐ.ಎ.ಎಸ್ ಅಧಿಕಾರಿ ವಿಜಯಕುಮಾರ್ ಅವರ ನೇತೃತ್ವದಲ್ಲಿ ಆಂಧ್ರಪ್ರದೇಶ ಸರಕಾರ ನಡೆಸುವ ವೆಲುಗು [ಬೆಳಕು] ಕಾರ್ಯಕ್ರಮದಲ್ಲಿ ನನಗಿದು ಕಂಡುಬಂದಿತ್ತು. ಪ್ರತಿ ಹಳ್ಳಿಯಲ್ಲೂ ವೆಲುಗುವಿನ ಸ್ವ-ಸಹಾಯ ಗುಂಪುಗಳಿಗೆ ಭೇಟಿ ನೀಡಿದಾಗ ಅಲ್ಲಿನ ಮಹಿಳೆಯರು ನಿಮ್ಮನ್ನು ಸ್ವಾಗತಿಸುವುದು ಕೈ ಕುಲುಕುವುದರ ಮೂಲಕ. ಕೈಕುಲುಕುವುದು ಕೇವಲ ಸಾಂಕೇತಿಕವಾಗಿರಬಹುದು, ಆದರೂ ಒಮ್ಮೆ ಕೈಕುಲುಕುವುದರಿಂದ ಅಸ್ಪೃಶ್ಯತೆಯನ್ನು ದೂರಮಾಡಿದ ಹಾಗಾಯಿತು. ಅಲ್ಲದೇ ಇಬ್ಬರ ಕೈಕುಲುಕುವಿಕೆಯಿಂದ ಗಂಡಸಿಗೂ-ಹೆಂಗಸಿಗೂ, ನಗರಕ್ಕೂ-ಹಳ್ಳಿಗೂ ಇರುವ ಈ ಅಂತರಕ್ಕೆ ಸೇತುವೆ ನಿರ್ಮಿಸಿದಂತಾಯಿತು. ಇದು ಸಮಾಜ ಪರಿವರ್ತನೆಯತ್ತ ನಮ್ಮನ್ನು ಒಯ್ಯುವುದಿಲ್ಲವೇ? ಬ್ರಾಹ್ಮಣನೊಬ್ಬ ತಡವಾಗಿ ಬಂದದ್ದರಿಂದ ಹರಿಜನ ವ್ಯಕ್ತಿಯ ಹಿಂದೆ ಸಾಲಿನಲ್ಲಿ ನಿಂತು ಹಾಲು ಸರಬರಾಜು ಮಾಡುವುದು ಜಾತಿಪದ್ಧತಿಯ ಕಪಾಳಕ್ಕೆ ಕೊಟ್ಟ ಏಟೆಂದು ಕುರಿಯನ್ ಒಮ್ಮೆ ಹೇಳಿದ್ದರು. ಇದು, ಮತ್ತು ಇಳಾರಂಥವರು ಮಾಡಿರುವ ಕೆಲವು ಸಾಂಕೇತಿಕ ಚರ್ಯೆಗಳು ಕುರಿಯನ್ ಹೇಳಿದ್ದಕ್ಕಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗುತ್ತವೆ. ಇಳಾಗಿಂತ ಭಿನ್ನರಾಗಿರುವ ಕುರಿಯನ್ ತಮ್ಮ ಸಹಚರರು, ಅನುಯಾಯಿಗಳ ದೇಣಿಗೆ ಮತ್ತು ಪಾತ್ರವನ್ನು ಎಂದಿಗೂ ಬಹಿರಂಗವಾಗಿ ಸ್ಮರಿಸಿದ್ದನ್ನು ನಾನು ಕಂಡಿಲ್ಲ. [ಇದರಿಂದಾಗಿ ಆ ಸಾಧನೆಯಲ್ಲಿ ಕುರಿಯನ್ ಪಾತ್ರವನ್ನು ನಾನು ಕುಬ್ಜವಾಗಿ ಕಾಣುತ್ತಿರುವೆನೆಂದು ಅಪಾರ್ಥ ಮಾಡಿಕೊಳ್ಳಬಾರದು. ಇಳಾ ಮತ್ತು ಕುರಿಯನ್‌ರ ಶೈಲಿಯಲ್ಲಿನ ವ್ಯತ್ಯಾಸವನ್ನು ತೋರಲು ಮಾತ್ರ ಈ ಮಾತನ್ನು ಆಡುತ್ತಿದ್ದೇನೆ.]
"ಸೇವಾ"ದ ಕಾರ್ಯಾಲಯಗಳು ಇಳಾರಂತೆಯೇ ಸರಳವಾಗಿ, ನಿರಾಡಂಬರವಾಗಿ ಇವೆ. ಇಳಾ ಕೂಡಾ ತಮ್ಮ ಖಾದಿಸೀರೆ ಮತ್ತು ಅಹಮದಾಬಾದಿನಲ್ಲಿ ಓಡಾಡಲು ಇರಿಸಿಕೊಂಡಿದ್ದ ತಮ್ಮ ಸಂಸ್ಥೆಯ ಖಾಸಗೀ ಆಟೋರಿಕ್ಷಾದಸರಳತೆಯ ಮೂಲಕವೇ ಗುರುತಿಸಲ್ಪಡುತ್ತಾರೆ. ಕಾರಲ್ಲದೇ ಖಾಸಗೀ ಆಟೋದಲ್ಲಿ ಓಡಾಡುವುದು ಕೇವಲ ಸಾಂಕೇತಿಕವೋ ಅಥವಾ ಇಳಾ ಇರುವುದೇ ಹಾಗೆಯೋ ನನಗೆ ತಿಳಿಯದು. ಯಾಕೆಂದರೆ ಎಂದೂ ಆಕೆ ಸರಳ ಜೀವನದ ಬಗ್ಗೆ ಮಾತಾಡಿದ್ದನ್ನು ಅಥವಾ ಅದನ್ನೇ ಒಂದು ಗುಣವೆಂದು ಸಾರಿದ್ದನ್ನು ನಾನು ಕಂಡಿಲ್ಲ. ಬಹುಶಃ ಗಾಂಧೀವಾದದಲ್ಲಿ ಬೆಳೆದ ಇಳಾ ಗಾಂಧೀಜಿಯಂತೆ ನನ್ನ ಜೀವನವೇ ನನ್ನ ಸಂದೇಶ ಎಂದು ನಂಬಿದವರೇನೋ. ಇಳಾ ಅವರು ಆಟೋದಲ್ಲಿ ಓಡಾಡುತ್ತಿರುವಂತೆಯೇ ಆಕೆಯ ಸಂಸ್ಥೆಯ ಅನೇಕ ಉದ್ಯೋಗಿಗಳು ಜೀಪುಗಳಲ್ಲಿ ಸಂಚರಿಸುವುದನ್ನೂ ನಾನು ಕಂಡಿದ್ದೇನೆ. ಆದರೆ ಮಿರಾಯ್, ಜಯಶ್ರೀ, ಅಥವಾ ರೀಮಾ ಊರಿಂದ ಆಚೆಗೆ ಹೋಗುವ ದೊಡ್ಡ ಪ್ರಯಾಣಗಳಿದ್ದವರಾದ್ದರಿಂದ ಜೀಪುಗಳಲ್ಲಿ ಓಡಾಡುತ್ತಿದ್ದಿರಲಿಕ್ಕೂ ಸಾಕು. ಭಾರತದ ಅತ್ಯುನ್ನತ ಮ್ಯಾನೇಜ್‌ಮೆಂಟ್ ಸಂಸ್ಥೆ ಐಐಎಂನ ನಿರ್ವಹಣಾ ಮಂಡಲಿಯ ಸಭೆಗೆ ಎ.ಸಿ. ಸೆಡಾನ್ ಕಾರುಗಳ ನಡುವೆ ಇಳಾರ ಬೂದು ಬಣ್ಣದ ಆಟೋ ಬಂದು ನಿಲ್ಲುವುದು ಎಲ್ಲಕ್ಕಿಂತ ಗಮ್ಮತ್ತಿನ ವಿಚಾರವಾಗಿತ್ತು! ಧ್ವನಿ ಎತ್ತರಿಸದಿದ್ದರೂ, ಐಐಎಂಗಿರಬೇಕಾದ ಸಾಮಾಜಿಕ ಜವಾಬ್ದಾರಿಯ ಬಗ್ಗೆ ದೃಢವಾದ ಮಾತುಗಳನ್ನು ಆಕೆ ಸಭೆಯಲ್ಲಿ ಆಡಿರಬಹುದು. ಐಐಎಂ ಸ್ಥಾಪನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದ ವಿಕ್ರಂ ಸಾರಾಭಾಯಿ ಮತ್ತು ಮೊದಲ ನಿರ್ದೇಶಕರಾದ ರವಿ ಮಥ್ಥಾಯ್ ಅವರ ಆಶಯದಂತೆ ಐಐಎಂ , ಕೇವಲ ಒಂದು ಬಿಜಿನೆಸ್ ಸ್ಕೂಲ್ ಆಗದೇ [ಸಮಾಜ ಸೇವೆ, ಸರಕಾರಿ ಹೀಗೆ] ಎಲ್ಲ ಸಂಸ್ಥೆಗಳಿಗೂ ನಿರ್ವಹಣಾ ವಿಧಾನಗಳನ್ನು ಕೊಡುವ ಭಿನ್ನ ಸಂಸ್ಥೆಯಾಗಿ ಬೆಳೆಯಬೇಕೆಂದು ಆಶಿಸಿದ್ದರು. ದಿನದಿನಕ್ಕೆ ವಾಣಿಜ್ಯದ ಲೆಕ್ಕಾಚಾರಕ್ಕೆ ಬಲಿಯಾಗುತ್ತಿರುವ ಇಂಥ ಸಂಸ್ಥೆಯಲ್ಲಿ ಇಳಾ ಅವರು ಈ ಆಶಯವನ್ನು ನೆನಪುಮಾಡುವ ಆತ್ಮಪ್ರಜ್ಞೆಯ ಕೆಲಸ ಮಾಡುತ್ತಿದ್ದಾರೆನ್ನಬಹುದು. ಕುರಿಯನ್ ಕೂಡಾ ಐಐಎಂನ ನಿರ್ವಹಣಾ ಮಂಡಲಿಯಲ್ಲಿದ್ದರು. ತಮಗಿಷ್ಟವಾದ ಗ್ರಾಮೀಣ ಕ್ಷೇತ್ರದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಕೆಲಸ ಮಾಡುತ್ತಿಲ್ಲ, ಅತ್ತ ತಿರುಗಿಯೂ ನೋಡುತ್ತಿಲ್ಲವೆಂದಾಗ ಆತ ಸಿಡಿದು ತಮ್ಮ ನೇತೃತ್ವದಲ್ಲಿಯೇ ಗ್ರಾಮೀಣ ನಿರ್ವಹಣೆಗೇ ಮೀಸಲಾದ ಇರ್ಮಾವನ್ನು ಸ್ಥಾಪಿಸಿಬಿಟ್ಟರು. ಸಹಕಾರ ಕ್ಷೇತ್ರದ ಅಘೋಷಿತ ಬಯಕೆಗಳಿಗೆ ಅವರು ಈ ರೀತಿಯಾಗಿ ಪ್ರತಿಸ್ಪಂದಿಸುತ್ತಿದ್ದರೇನೋ. ಆದರೆ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿರುವ ಇಳಾ ಹೀಗೆ ಕುರಿಯನ್ ರೀತಿಯಲ್ಲಿ ಒಂದು ಕ್ರಮವನ್ನು ಕೈಗೊಳ್ಳಬಹುದೆಂದು ಊಹಿಸುವುದೂ ಕಷ್ಟ. ಆಕೆಗೆ ಇಂಥ ವಿಚಾರ ಹೊಳೆದರೂ, ಅದನ್ನು ತಮ್ಮ ಸಹಚರರಿಗೆ ಹೇಳಿ, ಅವರ ಪ್ರತಿಕ್ರಿಯೆ ಕಂಡು ಸಮುದಾಯಕ್ಕೆ ಇದು ಬೇಕು ಅನ್ನಿಸಿದ ನಂತರವೇ, ಇದಕ್ಕೆ ತಮ್ಮ ಸಂಪನ್ಮೂಲಗಳನ್ನು ಸಮುದಾಯದವರು ಧಾರೆಯೆರೆಯಲು ತಯಾರಿದ್ದಾರೆ ಎಂದು ಮನವರಿಕೆಯಾದ ಮೇಲೇ ಇಳಾ ಇಂಥಹ ಒಂದು ಹೆಜ್ಜೆಯನ್ನು ಇಡುತ್ತಿದ್ದರು. ಹಾಗೆ ನೋಡಿದರೆ ಬಡವ ಬಲ್ಲಿದರ ನಡುವಣ ಇರುವ ಅಂತರವನ್ನು ಕಡಿಮೆ ಮಾಡಲು ಇಬ್ಬರ ಶೈಲಿಗಳೂ ಬೇಕು ಅನ್ನಿಸುತ್ತದೆ.
ಸೇವಾ ಕಾರ್ಯಾಲಯಗಳು ನಿರಾಡಂಬರವಾಗಿರುವಂತೆಯೇ ಸೇವಾದ ಕಾರ್ಯಕರ್ತರೂ ಸಹ ಸಮುದಾಯದಿಂದ ಆಯ್ದ ನಿರಾಡಂಬರ ಹೆಣ್ಣುಮಕ್ಕಳು. ಸಂವಹನ ಯಾವಾಗಲೂ ಗುಜರಾತಿಯಲ್ಲಿ. ಟ್ರೇಡ್ ಫೆಸಿಲಿಟೇಷನ್ ಸೆಂಟರ್‌ನಲ್ಲಿ ಒಮ್ಮೆ ಹೊಸದಾಗಿ ನಿಯಾಮಕಗೊಂಡಿದ್ದ ನಗರ ಪ್ರಾಂತದಲ್ಲಿ ವಿದ್ಯಾಭ್ಯಾಸ ಮಾಡಿದ್ದ ಮಾರ್ಕೆಟಿಂಗ್ ಪ್ರವೀಣೆಯೊಬ್ಬಳು ಬರಲಿರುವ ವರ್ಷದಲ್ಲಿ ಮಾಲನ್ನು ಮಾರಾಟಮಾಡಲು ಅಳವಡಿಸಬೇಕಾದ ತಂತ್ರಗಳ ಬಗ್ಗೆ ನಿರ್ವಹಣಾ ಮಂಡಲಿಗೆ ದೊಡ್ಡ ಪ್ರೆಸೆಂಟೇಶನ್ ಮಾಡುತ್ತಿದ್ದಳು. ಆಕೆ ಗುಜರಾತಿಯಲ್ಲಿ ಮಾತಾಡಿದರೆ ನಿರ್ವಹಣಾ ಮಂಡಲಿಯಲ್ಲಿರುವ ಬಾನಸ್‍ಕಾಂಠಾದ ಪೂರಿಬೇನ್ ಆಹಿರ್ ಮತ್ತು ಕಛ್‍ನ ಮಹತಾಬ್‍ಬೇನ್ ಇಬ್ಬರಿಗೂ ಅರ್ಥವಾಗುತ್ತದೆ, ಹಾಗೂ ಅವರಿಗೆ ಅರ್ಥವಾಗುವುದು ಅವಶ್ಯಕ ಅನ್ನುವ ಮಾತನ್ನು ಅಧ್ಯಕ್ಷೆ ರೀಮಾ ಹೇಳಿದರು. ಪಾಪ ಆ ಪ್ರವೀಣೆ ತನಗೆ ಗುಜರಾತಿ ಬರುವುದಿಲ್ಲವೆಂದೂ, ಹಿಂದಿಯೂ ಅಷ್ಟಕ್ಕಷ್ಟೇ ಎಂದೂ ಹೇಳಿದಳು. ರೀಮಾ ಆಕೆಯನ್ನು ನೋಡಿ ಮುಂದಿನ ಬಾರಿ ಗುಜರಾತಿಯಲ್ಲೇ ಮಾತನಾಡು, ಈ ಬಾರಿ ನಾನು ಭಾಷಾಂತರಿಸುತ್ತೇನೆ ಅಂದರಾದರೂ ಆ ಮಾತು ಆ ಪ್ರವೀಣೆಗೆ ಮಾತ್ರ ಸೀಮಿತಗೊಂಡಿತ್ತೋ ಅಥವಾ ಅಲ್ಲಿದ್ದ ಪ್ರೊಫೆಸರೂ ಸೇರಿದಂತೆ ಇತರರಿಗೂ ವರ್ತಿಸುತ್ತಿತ್ತೋ ತಿಳಿಯದು. ಆದರೆ ಯಾರೇ ಗುಜರಾತಿಯಲ್ಲದೇ ಬೇರೆ ಭಾಷೆಯಲ್ಲಿ ಮಾತನಾಡಿದರೆ ರೀಮಾ ಅದಕ್ಕೆ ತಕ್ಷಣದ ತರ್ಜುಮೆಯನ್ನು ಒದಗಿಸುತ್ತಾರೆ. ಇದು ಇಳಾರಿಂದ ಬಳುವಳಿಯಾಗಿಬಂದಿರುವ ಸಂಸ್ಕೃತಿ. ಸಭೆಯಲ್ಲಿರುವ ಪ್ರತಿ ವ್ಯಕ್ತಿಗೂ ಪ್ರಾಮುಖ್ಯತೆ ಇದೆ. ತೆಗೆದುಕೊಂಡ ಪ್ರತಿ ನಿರ್ಣಯವೂ ಸಮುದಾಯವನ್ನೊಳಗೊಂಡೇ ತೆಗೆದುಕೊಳ್ಳಬೇಕು. ಅವರ ಜೀವನದಬಗ್ಗೆ ನಾವೇನು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದೇವೆ ಅನ್ನುವ ಕನಿಷ್ಠ ವಿವರವೂ ಅವರುಗಳಿಗೆ ನೀಡದಿದ್ದರೆ ಹೇಗೆ?
ಸೇವಾ ಕೇವಲ ಮಹಿಳಾ ಸಂಸ್ಥೆಯಾಗಿ ಉಳಿದದ್ದು ಹೇಗೆ? ಎಂದೂ ನಾವು ಇಳಾರನ್ನು ಸ್ತ್ರೀವಿಮೋಚನೆ, ಮಹಿಳಾ ಹಕ್ಕುಗಳನ್ನು ಚರ್ಚಿಸುವ ವೇದಿಕೆಯಲ್ಲಿ ಕಂಡೇ ಇಲ್ಲವಲ್ಲ? ಇಳಾರನ್ನು ಕೇಳಿದರೆ, ಮೊದಲ ಆದ್ಯತೆ ಬಡವರಿಗಾಗಿ ಕೆಲಸ ಮಾಡುವುದು. ಅದರಲ್ಲಿ ಹೆಂಗಸರ ಜೊತೆ ಕೆಲಸ ಮಾಡುವುದು ಅನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಾರೆ. "ಮೊದಲಿಗೆ ಗಂಡಸರೂ ನಮ್ಮ ಸಂಸ್ಥೆಯನ್ನು ಸೇರಬಹುದು ಅಂತ ನನಗನ್ನಿಸಿತ್ತು. ಎಷ್ಟಾದರೂ ನಾವು ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಸಂಸ್ಥೆಯಷ್ಟೆ. ಅವರು ಬರುವುದರಿಂದ ನಮ್ಮ ಶಕ್ತಿ ಹೆಚ್ಚಾಗುತ್ತದೆಂದು ನಾನು ನಂಬಿದ್ದೆ. ಆದರೆ ನಮ್ಮ ಜೊತೆಗಿದ್ದ ಸಮುದಾಯದ ಮಹಿಳೆಯರು ಬೇಡವೆಂದರು. ಗಂಡಸರಿದ್ದರೆ ತಮಗೆ ಮನ ಬಿಚ್ಚಿ ಮಾತನಾಡುವುದಕ್ಕೆ ಆಗುವುದಿಲ್ಲ, ಅವರುಗಳು ಇಲ್ಲೂ ದರ್ಬಾರು ಮಾಡುತ್ತಾರೆ, ಅದರಿಂದ ಪರಿಸ್ಥಿತಿಯಲ್ಲಿ ಉದ್ವಿಗ್ನತೆ ಉಂಟಾಗುತ್ತದೆ ಅನ್ನುವುದು ಅವರ ಅಭಿಪ್ರಾಯವಾಗಿತ್ತು." ಹೀಗೆ ಸಮುದಾಯದ ಜೊತೆ ಚರ್ಚಿಸುತ್ತಲೇ ಸಂಸ್ಥೆಗಳನ್ನು ಕಟ್ಟಿದ್ದರಿಂದ ಎಲ್ಲಕ್ಕಿಂತ ಸಶಕ್ತವಾದ ಮಹಿಳಾ ಕಾರ್ಮಿಕರ ಸಂಘವನ್ನು ಕಟ್ಟುವುದು ಆಕೆಗೆ ಸಾಧ್ಯವಾಯಿತು.
ಕುರಿಯನ್ ಕಟ್ಟಿದ ಸಂಸ್ಥೆಗಳಿಗಿರುವ ಭವ್ಯ ಕಟ್ಟಡಗಳು ಸೇವಾ ಸಂಸ್ಥೆಗಳಿಗೆ ಇಲ್ಲ. ಸೇವಾದ ಕಾರ್ಯಾಲಯಗಳೆಲ್ಲ ನೆರೆಮನೆಯ ಆಫೀಸಿನಂತೆ, ಬಡವರು ಯಾವ ಭಯವೂ ಇಲ್ಲದೇ ಒಳಬರಮಾಡಿಕೊಳ್ಳುವಂತಿವೆ. ಕುರಿಯನ್ ಸ್ಥಾಪಿಸಿದ ಗ್ರಾಮೀಣ ನಿರ್ವಹಣಾ ಸಂಸ್ಥೆ ಇರ್ಮಾದ ೬೦ ಎಕರೆಯ, ಪ್ರತಿ ವಿದ್ಯಾರ್ಥಿಗೂ ಒಂದು ಭಿನ್ನ ಕೋಣೆಯ ಹಾಸ್ಟೆಲ್ ಇದ್ದ ಭವ್ಯ ಕ್ಯಾಂಪಸ್ಸನ್ನು ನೋಡಿ ಇದು ಗ್ರಾಮೀಣ ನಿರ್ವಹಣೆಗಾಗಿ ಸ್ಥಾಪಿಸಿದ ಸಂಸ್ಥೆಯೇ ಎಂದು ಕೇಳಿದ ಪ್ರಶ್ನೆಗೆ ಕುರಿಯನ್ "ಮಹಾರಾಜರನ್ನು ಹಂದಿಗಳ ಕೊಟ್ಟಿಗೆಯಲ್ಲಿ ಬೆಳೆಸುವುದಿಲ್ಲ. ಇಲ್ಲಿನ ವಿದ್ಯಾರ್ಥಿಗಳಾದ ನೀವು ನನ್ನ ಮಟ್ಟಿಗೆ ರಾಜಕುಮಾರರು" ಎಂದು ಹೇಳಿ ಬಡತನದ ಬಗ್ಗೆ ಕೆಲಸಮಾಡಲಿರುವ ಯುವಕರ ಶ್ರೀಮಂತಿಕೆಯ ಆ ದ್ವೀಪವನ್ನು ಸಮರ್ಥಿಸಿಕೊಂಡಿದ್ದರು. ಅದೇ ಸೇವಾ ತನ್ನ ಬ್ಯಾಂಕಿಗಾಗಿ ಅಹಮದಾಬಾದಿನ ಎಲ್ಲಿಸ್‍ಬ್ರಿಜ್‌ನ ಮೇಲಿದ್ದ ದೊಡ್ಡ ಕಟ್ಟಡವಾದ ಸಾಕಾರ್‌ನಲ್ಲಿ ಆಫೀಸು ಕೊಂಡಾಗ ಅದರ ಬದಿಯಲ್ಲಿದ್ದದ್ದು ವಿದೇಶೀ ಮೂಲದ ಬ್ಯಾಂಕ್ ನ್ಯಾಷನಲ್ ದ ಪ್ಯಾರಿಬಾ ಮತ್ತು ಶ್ರೀಮಂತ ಗಿರಾಕಿಗಳ ಕೊಟಾಕ್ ಮಹೀಂದ್ರಾ ಬ್ಯಾಂಕ್. ಆ ಭವ್ಯ ಕಟ್ಟಡದಲ್ಲಿ ಆಫೀಸು ಕೊಂಡದ್ದರ ಫಲವೇನು? ಸಾಕಾರ್ ಕಟ್ಟಡದಲ್ಲಿದ್ದ ದೊಡ್ಡ ಉದ್ಯಮಗಳು ಸೇವಾ ಬ್ಯಾಂಕಿಗೆ ಬರುವ ಕೊಳಕು ಮತ್ತು ಗಲಾಟೆಯ ಹೆಂಗಸರ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಬೇಕೆಂದು ಕೋರಿದರಂತೆ. ಆದರೆ ಆ ಕಟ್ಟಡದಲ್ಲಿಯೇ ಆಫೀಸು ಕೊಂಡಿದ್ದ ಮಹಿಳಾ ಸೇವಾ ಬ್ಯಾಂಕಿಗೆ ಮುಖ್ಯ ದ್ವಾರವನ್ನು ಮುಚ್ಚಿ ಬದಿಯ ಬಾಗಿಲಿನಿಂದ ತಮ್ಮ ಸದಸ್ಯೆಯರನ್ನು ಸ್ವಾಗತಿಸುವಲ್ಲಿ ಯಾವುದೇ ತೊಂದರೆಯಿರಲಿಲ್ಲ. ಹೀಗೆ ಅತ್ಯಂತ ಶ್ರೀಮಂತ ಕಟ್ಟಡದಲ್ಲಿದ್ದೂ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳದೇ ಮುಂದುವರೆಯುವುದು ಅವರಿಗೆ ಸಾಧ್ಯವಾಯಿತು. ಹೀಗೆ ಮಾಡುವುದರಿಂದ ಶ್ರೀಮಂತರ ಬೇಡಿಕೆಯನ್ನು ಪೂರೈಸಿ ಅವರು ಸೋಲೊಪ್ಪಿದರು ಅನ್ನುವುದು ಒಂದು ದೃಕ್ಪಥವಾದರೆ, ತಮ್ಮದೇ ಸದಸ್ಯರಿಗೆ ಸರಳವಾಗಿ, ಯಾವ ಹಂಗೂ ಇಲ್ಲದೇ ಓಡಾಡಲು ಅನುವು ಮಾಡಿಕೊಟ್ಟರು ಎನ್ನುವ ದೃಷ್ಟಿಕೋನವನ್ನು ಸೇವಾದ ಭಗಿನಿಯರು ಕೊಟ್ಟಾರು. ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ, ಎಲ್ಲವನ್ನೂ ಬಿಟ್ಟುಕೊಡುವುದರಿಂದ! [ತಿರುಮಲೇಶ್]
ಸೇವಾ ಸಂಸ್ಥೆಯಲ್ಲಿ ಸರ್ವಮತಗಳಿಗೂ ಸಲ್ಲುವಂತಹ ಪ್ರಾರ್ಥನೆಯಿಂದ ಪ್ರತಿದಿನದ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಬ್ಯಾಂಕಿನ ಪ್ರಾಂಗಣದಲ್ಲಿ ಮಹಿಳೆಯರು ಕೂಗಾಡುತ್ತಾರೆ, ಅಲ್ಲಿಯೇ ತಾವು ಊರು/ಕೇರಿಯಿಂದ ತಂದಿರಬಹುದಾದ ವಸ್ತುಗಳನ್ನು ಮಾರಾಟಮಾಡುತ್ತಾರೆ, ಒಬ್ಬರೊಂದಿಗೆ ಇನ್ನೊಬ್ಬರು ಬೆರೆಯುತ್ತಾರೆ, ಹಣದ ವ್ಯವಹಾರ ನಡೆಸಿದ ನಂತರವೂ ಉಭಯಕುಶಲೋಪರಿ ಮುಂದುವರೆಯುತ್ತದೆ. ಅವರು ಬ್ಯಾಂಕಿಗೆ ಬಂದಿದ್ದಾರಾದರೂ ವರ್ತಿಸುವುದು ತಮ್ಮ ಮನೆಯಲ್ಲಿ, ತರಕಾರಿಯಂಗಡಿಯಲ್ಲಿ, ಬಟ್ಟೆ ಹೊಲಿಯುವ ಸಂದರ್ಭದಲ್ಲಿ, ಅಥವಾ ಚಿಂದಿ ಹೆಕ್ಕುವ ಸಮಯದಲ್ಲಿದ್ದಂತೆಯೇ - ಅಷ್ಟೇ ಸಹಜವಾಗಿ. ಹೀಗಾಗಿ ಇಲ್ಲಿ ಕೆಲಸ ಮಾಡಬೇಕಾದವರೂ ಈ ವಿಷಯವನ್ನು ಅರ್ಥಮಾಡಿಕೊಳ್ಳಬಲ್ಲ ಸಮುದಾಯದ ಮಹಿಳೆಯರೇ ಆಗಬೇಕು ಅನ್ನುವುದು ಸಹಜ. ಸಮುದಾಯ ಕೊಡಬಲ್ಲಷ್ಟೇ ಸಂಬಳವನ್ನೂ ಅವರು ಸ್ವೀಕರಿಸಲು ತಯಾರಿರಬೇಕು.
ಬಹಳ ಕಾಲದವರೆಗೆ ಸೇವಾ ಸಂಸ್ಥೆಗಳಲ್ಲಿ ವೃತ್ತಿಪರರಿಗೆ [ಅಂದರೆ ನಮಗೆ ಅರ್ಥವಾಗುವಂಥಹ ಎಂ.ಬಿ.ಎ, ವಕೀಲರು, ಮತ್ತಿತರ ಟೈ-ಸೂಟು-ಬೂಟು ಧರಿಸುವಂಥ ಜನ] ನೌಕರಿಯನ್ನು ಕೊಡುತ್ತಿರಲಿಲ್ಲ. ಹೀಗಾಗಿ ಪವರ್ ಪಾಯಿಂಟ್‌ನಲ್ಲಿ ಪ್ರೆಸೆಂಟೇಶನ್ ಮಾಡುವ ಜನಾಂಗದವರು ಅಲ್ಲಿ ಇರಲಿಲ್ಲ. ಯಾರಾದರೂ ಕೆಲಸಕ್ಕೆ ಸೇರಿದರೆ ಜೀವನ ಪರ್ಯಂತ ಅಲ್ಲೇ ಕೆಲಸ ಮಾಡುವುದು ಸಹಜವೇ ಆಗಿತ್ತು. ಸೇವಾ ಸಂಸ್ಥೆಗಳನ್ನು ಈಗ ನಡೆಸುತ್ತಿರುವ ಮುಖ್ಯಸ್ಥರೆಲ್ಲರೂ ಇಳಾರ ಜೊತೆಗೆ ಅನೇಕ ವರ್ಷಗಳಿಂದ ಕೆಲಸ ಮಾಡಿದವರು. ಐ.ಎ.ಎಸ್ ನೌಕರಿಯನ್ನು ಬಿಟ್ಟು ಬಂದ ರೀಮಾ, ಸೇವಾಭಾರತ್ ಮುಖ್ಯಸ್ಥೆಯಾಗಿರುವ, ತಾನು ಹುಟ್ಟಿದ ಮನೆತನದಿಂದಾಗಿಯೇ ಯಾವುದೇ ಕೆಲಸವನ್ನು ಆಯ್ದುಕೊಳ್ಳುವ ಸಾಧ್ಯತೆಯಿದ್ದೂ ಸೇವಾಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟ ರೆನಾನ ಝಾಬ್‍ವಾಲಾ, ಬಿಲ್ ಕ್ಲಿಂಟನ್ ಜೊತೆ ಊಟ ಮಾಡುವುದು ಎಷ್ಟು ಸಹಜವೋ ಅಷ್ಟೇ ಸಹಜವಾಗಿ ಬಡ ಹೆಣ್ಣುಮಕ್ಕಳ ಆರೋಗ್ಯದ ವಿಚಾರದ ಬಗ್ಗೆ ದೂರದ ಹಳ್ಳಿಗಳಲ್ಲಿ ದಿನಗಳನ್ನು ಕಳೆಯಬಲ್ಲ ಮಿರಾಯ್, ಚಾರ್ಟರ್ಡ್ ಎಕೌಂಟೆಂಟಿನ ಕೆಲಸವನ್ನು ಬಿಟ್ಟು ಬಡವರ ಬ್ಯಾಂಕಿನ ನೌಕರಿಹಿಡಿದ ಜಯಶ್ರೀ, ದಕ್ಷಿಣಭಾರತದಿಂದ ಬಂದು ಇಲ್ಲೇ ಉಳಿದು, ಒಂದಾನೊಂದು ರೆವ್ಯೂ ಮೀಟಿಂಗಿಗೆ ಕರೆತಂದಿದ್ದ ಬೀದಿ ಮಕ್ಕಳಿಗೆ ಹೈದರಾಬಾದಿನ ಪಂಚತಾರಾ ಗ್ರೀನ್‍ಪಾರ್ಕ್ ಹೋಟೇಲಿನಲ್ಲಿ ಊಟಹಾಕಿಸಿ ಖುಷಿ ಪಡುವ ವಿಜಯಲಕ್ಷ್ಮೀ, ಬೀಡಿ ಸುತ್ತುವ ಕೆಲಸದಿಂದ ಬಡ್ತಿ ಪಡೆಯುತ್ತಾ ಸೇವಾದ ಪ್ರಧಾನ ಕಾರ್ಯದರ್ಶಿಯ ಮಟ್ಟಕ್ಕೆ ಬೆಳೆದು ವಿಶ್ವದಾದ್ಯಂತ ಇಂಗ್ಲೀಷಿನಲ್ಲಿ ಭಾಷಣ ಗುದ್ದುವ ಜ್ಯೋತಿ.. ಹೀಗೆ ಈ ಯಾದಿ ಮುಂದುವರೆಯುತ್ತಲೇ ಇರುತ್ತದೆ.
ಕುರಿಯನ್ ಹುಟ್ಟುಹಾಕಿದ್ದ ಸಂಸ್ಥೆಗಳ ಮುಂದಿನ ಮುಖ್ಯಸ್ಥರೆಂದು ತಾವಾಗೇ ನಿಯಮಿಸಿದ್ದ ಅಮೃತಾ ಪಟೇಲ್ ಜೊತೆ ಯುದ್ಧಘೋಷಿಸಿ ಚಕಮಕಿ ನಡೆಸುತ್ತಿದ್ದ ಸಮಯದಲ್ಲೇ ಇಳಾ ತಾವು ಹುಟ್ಟುಹಾಕಿದ್ದ ಸಂಸ್ಥೆಗಳ ಸೂತ್ರವನ್ನು ಬಿಟ್ಟುಕೊಟ್ಟು ಹಿನ್ನೆಲೆಗೆ ಸರಿದುಬಿಟ್ಟರು ಎನ್ನುವುದನ್ನು ಬಹಳ ಜನ ಗಮನಿಸಲೇ ಇಲ್ಲ. ಸೇವಾದಲ್ಲಿ ಮುಂದಿನ ತಲೆಮಾರಿನ ನಾಯಕರು ಯಾರು ಅನ್ನುವುದರ ಬಗ್ಗೆ ತಕರಾರೇ ಇರಲಿಲ್ಲ. ಇಳಾ ಯಾವಾಗ ಹಿಂದೆ ಸರಿದರು, ಹೊಸ ತಲೆಮಾರಿನವರು ಯಾವಾಗ ಮುಂದೆ ಬಂದರು ಎನ್ನುವುದು ಯಾರೂ ಗಮನಿಸದಷ್ಟು ಸರಳವಾಗಿ ನಡೆದುಹೋಯಿತು. ಸೇವಾ ಪರಿವಾರವನ್ನು ಇಂದು ನೋಡಿದರೆ, ಅಲ್ಲಿ ದಿನನಿತ್ಯದ ಕಾರ್ಯಕ್ರಮದಲ್ಲಿ ಇಳಾ ಇಲ್ಲ, ಆದರೆ ಅವಶ್ಯಕತೆಯಿದ್ದರೆ ಆಕೆ ಇದ್ದಾರೆ. ಯಾರಿಗಾದರೂ ಮಾರ್ಗದರ್ಶನ ಬೇಕಿದ್ದರೆ ನೀಡಲು ತಯಾರಾಗಿ, ಯಾರಾದರೂ ತಮ್ಮ ಗೋಳನ್ನು ತೋಡಿಕೊಳ್ಳಬೇಕೆಂದರೆ ಕೇಳಲು ಸಿದ್ಧವಾಗಿ ಬೇಕಾದಾಗ ಸಿಗುವ ತಾಯಿಯಾಗಿದ್ದಾರೆ. ಆಕೆಯ ಮುಂದಿನ ತಲೆಮಾರು ಸೂತ್ರಗಳನ್ನು ಕೈಗೆತ್ತಿಕೊಂಡರೀತಿ, ಅದನ್ನು ಆಕೆ ಕಾರ್ಯಗತಗೊಳಿಸಿದ ರೀತಿ ಯಾವುದೇ ವೃತ್ತಿಪರ ಸರ್ಟಿಫಿಕೇಟು ಪಡೆದ ಜನರಿಗಿಂತ ಭಿನ್ನವಾಗಿಯೂ ಉತ್ತಮವಾಗಿಯೂ ಇದೆ. ಹೀಗಾಗಿಯೇ ಸೇವಾಗೆ "ವೃತ್ತಿಪರ"ರ ಬಗ್ಗೆ ತುಸು ಮುಜುಗರವಿದ್ದರೆ ಅದು ಅವರ ಕೆಲಸವನ್ನು ಯಾವರೀತಿಯಲ್ಲೂ ಬಾಧಿಸಿಲ್ಲವೇನೋ.
ಇಳಾ ಅವರನ್ನೊಳಗೊಂಡು ಯಾವ ದೊಡ್ಡ ವಿವಾದಾಸ್ಪದ ಘಟನೆಯೂ ನಡೆದಿಲ್ಲ. ಹಾಗೆಂದು ಸರಕಾರದ ಜೊತೆ ಆಕೆಯ ಸಂಬಂಧಗಳು ಯಾವಾಗಲೂ ಸ್ನೇಹಪರವಾಗಿತ್ತು ಎಂದು ಹೇಳಲೂ ಬರುವುದಿಲ್ಲ. ಗುಜರಾತಿನ ಭೂಕಂಪದ ನಂತರ ಕೈ ಹಿಡಿದ ಜೀವಿಕಾ ಕಾರ್ಯಕ್ರಮವನ್ನು ಸರಕಾರದ ಜೊತೆಗಿದ್ದ ಭಿನ್ನತೆಯಿಂದಾಗಿ ಮುಚ್ಚಿ ಬೇರೆಯೇ ಏರ್ಪಾಟು ಮಾಡಬೇಕಾಯಿತು. ಅದಕ್ಕೆ ಸೇವಾ ಒದಗಿಸಿದ ಕಾರಣವೆಂದರೆ ತಾವು ತಮ್ಮ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಸಮುದಾಯದೊಂದಿಗೆ ಕೆಲಸಮಾಡುತ್ತಿರುವುದರಿಂದ ಇಲ್ಲಿನ ಸರಕಾರದ ಕೆಂಗಣ್ಣು ತಮ್ಮ ಮೇಲೆ ಬಿದ್ದಿದೆ ಅನ್ನುವುದು. ಆದರೆ ಸರಕಾರದ ದೃಷ್ಟಿ ಈ ವಿಷಯದಲ್ಲಿ ಭಿನ್ನವಾಗಿದೆ. ಹಾಗೆಯೇ ೧೯೮೧ರ ಆರಕ್ಷಣೆಯ ವಿರುದ್ಧದ ಹಿಂಸಾಚಾರ ನಡೆದಾಗಲೂ ಸೇವಾದ ನಿಲುವನ್ನು ಕೆಲವರು ಪ್ರಶ್ನಿಸಿದ್ದರು. "ಕೋಮುಸೌಹಾರ್ದತೆ ಕಾರ್ಮಿಕ ಸಂಘದ ವಿಷಯ, ಸ್ತ್ರೀವಾದದ ವಿಷಯ, ಮೇಲಾಗಿ ನಮ್ಮ ಅಸ್ತಿತ್ವಕ್ಕೆ ಮೂಲಭೂತವಾದ ವಿಷಯ [ಪು ೧೫]" ಎಂದು ಇಳಾ ಬರೆಯುತ್ತಾರೆ. ಆಗೆ ಆಕೆ ತೆಗೆದುಕೊಂಡ ನಿಲುವಿನಿಂದಾಗಿ ವಸ್ತ್ರಕಾರ್ಮಿಕರ ಸಂಘದಿಂದ ಹೊರಬೀಳಬೇಕಾಯಿತು. ಹೀಗಾಗಿ ಅವರುಗಳು ತಮ್ಮದೇ ದಾರಿಯನ್ನೂ ಗಮ್ಯವನ್ನೂ ಕಂಡುಕೊಳ್ಳುವುದು ಅನಿವಾರ್ಯವಾಯಿತು. ಆಗ ಇದನ್ನು ಒಂದು ಕಷ್ಟದ ಪರಿಸ್ಥಿತಿ ಅನ್ನುವುದಕ್ಕಿಂತ ಒಂದು ಸದವಕಾಶದಂತೆ ನೋಡಲು ಹೇಳಿದವರು ಇಳಾರ ಸಹಚರ, ಗೆಳೆಯ, ಪತಿ ರಮೇಶ್. "ನಾವು ವಸ್ತ್ರಕಾರ್ಮಿಕ ಸಂಘದಿಂದ ಹೊರಬಿದ್ದಾಗ ನಮ್ಮ ಬಳಿಯಿದ್ದ ಶಕ್ತಿಯೆಂದರೆ ೪೯೦೦ ಸದಸ್ಯೆಯರು, ಒಂದು ಪುಟ್ಟ ಸಹಕಾರಿ ಬ್ಯಾಂಕ್, ಆಫೀಸು ಕಟ್ಟಡ, ಒಂದು ಗ್ರಾಮೀಣ ಕೇಂದ್ರ, ಕೆಲ ಬೆರಳಚ್ಚು ಯಂತ್ರಗಳು. ಆದರೆ ನಮ್ಮ ಬಳಿ ಅದಕ್ಕಿಂತ ಮುಖ್ಯವಾಗಿ ಜನಸಂಘಟನೆಯ ಹತ್ತು ವರ್ಷಕಾಲದ ಅನುಭವವೂ ಇತ್ತು" [ಪುಟ ೧೫-೧೬]
ಸೇವಾ ಸಂಸ್ಥೆಗಳ ಬೆಳವಣಿಗೆ ಸಮುದಾಯದ ಅವಶ್ಯಕತೆಗೆ ಪ್ರತಿಸ್ಪಂದಿಸುತ್ತಲೇ ಉಂಟಾಗಿದೆ. ಇಂದು ಕಿರುಸಾಲದ ಜಗತ್ತಿನಲ್ಲಿ ಸೇವಾ ಬ್ಯಾಂಕ್ ಮುಂಚೂಣಿಯಲ್ಲಿರುವ, ಮೂಲ ಪ್ರವರ್ತಕ ಸಂಸ್ಥೆಗಳಲ್ಲಿ ಒಂದು ಎಂದು ಗುರುತಿಸಲ್ಪಡುತ್ತದೆ. ಆದರೆ ನಾವು ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಮೈಕ್ರೊಫೈನಾನ್ಸ್ ಅಥವಾ ಕಿರುಸಾಲ ಎಂಬ ಪದವನ್ನು ಯೋಚಿಸುವ ಮೊದಲೇ ಸೇವಾ ಸಮುದಾಯದವರು ಅದನ್ನು ಕಾರ್ಯಗತಗೊಳಿಸಿಬಿಟ್ಟಿದರು. ಗ್ರಾಮೀಣ್ ಬ್ಯಾಂಕಿನ ಯೂನಸ್ ಜೋರ್ಬಾಗೆ ಹೋಗುವ ಮೂರುವರ್ಷ ಮುನ್ನವೇ ಸೇವಾ ಬ್ಯಾಂಕಿನ ಸ್ಥಾಪನೆಯಾಗಿತ್ತು. ಅದು ಆದ ರೀತಿಯ ಬಗೆಗೂ ಇಳಾ ಬರೆಯುತ್ತಾರೆ: "ಡಿಸೆಂಬರ್ ೧೯೭೩ರಲ್ಲಿ ನಾರಾಣ್‌ಘಾಟ್‌ನಲ್ಲಿ ಸೇವಾ ಸದಸ್ಯರ ಸಭೆ ನಡೆಯುತ್ತಿದ್ದಾಗ ಪೂರಿಬಜಾರ್‌ನಲ್ಲಿ ಬಟ್ಟೆವ್ಯಾಪಾರ ಮಾಡುತ್ತಿದ್ದ ಚಂದಾಬೇನ್ ನನ್ನನ್ನ ಈ ಮಾತು ಕೇಳಿದ್ದಳು ’ಬೇನ್, ನಾವು ನಮ್ಮದೇ ಬ್ಯಾಂಕನ್ನು ಯಾಕೆ ಸ್ಥಾಪಿಸಬಾರದು?’ ’ನಮ್ಮ ಬಳಿ ಅಷ್ಟು ದುಡ್ಡಿಲ್ಲ’ ನಾನು ಶಾಂತವಾಗಿ ಉತ್ತರಿಸಿದ್ದೆ ’ಬ್ಯಾಂಕ್ ಸ್ಥಾಪಿಸಲು ಬಹಳ ಹಣ ಬಂಡವಾಳವಾಗಿ ಬೇಕು!’ ’ನಾವು ಬಡವರಿರಬಹುದು, ಆದರೆ ಎಷ್ಟೊಂದು ಜನ’ ಚಂದಾಬೇನ್ ಉತ್ತರಿಸಿದಳು.." ಹೀಗೆ ಸೇವಾ ಬ್ಯಾಂಕ್ ಸ್ಥಾಪನೆಯಾಯಿತು. ಕುರಿಯನ್ ಹಾಲುಉತ್ಪಾದಕರ ಬಗ್ಗೆ ಸಿನೇಮಾ ಮಾಡಲು ಶ್ಯಾಂ ಬೆನೆಗಲ್ ಅವರನ್ನು ಕೇಳಿದಾಗಲೂ ಆದದ್ದು ಇದೇ -- ೫೦೦,೦೦೦ ಹಾಲು ಉತ್ಪಾದಕರು ತಲಾ ಎರಡೆರಡು ರೂಪಾಯಿಯ ದೇಣಿಗೆ ಕೊಟ್ಟು ಒಂದು ಅದ್ಭುತ ಸಿನೇಮಾವನ್ನೇ ಮಾಡಿಬಿಟ್ಟರು!!
ಇಳಾರನ್ನು ಭೇಟಿಯಾಗುವುದರಲ್ಲಿ ನನಗೆ ಯಾವತ್ತೂ ತೊಂದರೆಯಾಗಿಲ್ಲ. ಆಕೆಯ ಕಾರ್ಯದರ್ಶಿ ಯಾರೆಂದು ನನಗೆ ತಿಳಿಯದು. ಯಾವಾಗ ಆಕೆಯನ್ನು ಭೇಟಿಯಾಗಬಯಸಿದರೂ ಫೊನ್ ಮಾಡಿದರೆ ಅವರೇ ಸಿಗುತ್ತಾರೆ. ಸಮಯವಿದ್ದರೆ ಹೆಚ್ಚು ಯೋಚಿಸದೆಯೇ ಒಪ್ಪುತ್ತಾರೆ. ಒಮ್ಮೆ ನಮ್ಮ ವಿದ್ಯಾರ್ಥಿಗಳೊಂದಿಗೆ ಒಂದು ಚರ್ಚೆ ಮತ್ತು ತದನಂತರದ ಊಟಕ್ಕಾಗಿ ಆಕೆಯನ್ನು ನಾನು ಆಹ್ವಾನಿಸಿದ್ದೆ. ಚರ್ಚೆ ನಡೆಸುತ್ತಿದ್ದಾಗ ನಮ್ಮ ವಿದ್ಯಾರ್ಥಿಯೊಬ್ಬ ಇಲ್ಲಿಗೆ ಸಹಜವಾದ ಒಂದು ಪ್ರಶ್ನೆಯನ್ನು ಕೇಳಿದ: "ನೀವು ನಿಮ್ಮ ಜೀವನದಲ್ಲಿ ಇಟ್ಟುಕೊಂಡ ಗುರಿ/ಉದ್ದೇಶಗಳೇನು, ಅವು ಎಷ್ಟರ ಮಟ್ಟಿಗೆ ಸಫಲವಾಗಿವೆ, ನಿಮ್ಮ ವೈಫಲ್ಯಗಳೇನು?" ಇಳಾ ಆತನತ್ತ ತಿರುಗಿನೋಡಿ ಹೇಳಿದರು "ನಾನು ಯಾವ ಗುರಿಯನ್ನೂ ಇಟ್ಟುಕೊಂಡಿಲ್ಲ. ಹೀಗಾಗಿ ಗುರಿಯ ವಿರುದ್ಧ ಸಾಧನೆಯ ಟಿಕ್ ಹಾಕುವ ಪ್ರಮೇಯ ಬಂದಿಲ್ಲ. ನಾನು ಆಗಬೇಕಾದ ಕೆಲಸವನ್ನು ನೋಡುವ ಪರಿ ಅದಲ್ಲ. ಎಲ್ಲವೂ ಒಂದು ಪ್ರಕ್ರಿಯೆಯಾಗಿ ನೋಡಿದಾಗ ಗುರಿ ಮತ್ತು ಸಾಧನೆ ಅರ್ಥಹೀನವಾಗಿ ಕಾಣಿಸುತ್ತದೆ. ಜೀವಿಸುವ ಪ್ರಕ್ರಿಯೆಯಲ್ಲಿ ಎಷ್ಟೋ ಆಸಕ್ತಿಯ ಕೆಲಸಗಳು ಹುಟ್ಟುತ್ತವೆ - ಅವುಗಳನ್ನು ಮಾಡುತ್ತಾ ಹೋದರೆ ನಮಗೆ ಹತಾಶೆಯ ಭಾವನೆಯಾಗಲೀ ಸಾಧನೆಯ ಹಮ್ಮಾಗಲೀ ಇರುವುದಿಲ್ಲ. ಜಗತ್ತಿನಲ್ಲಿ ಜೀವಿಸುವುದನ್ನು ಕಡಿಮೆ ದುಸ್ತರ ಮಾಡುವುದಷ್ಟೇ ನಮ್ಮೆಲ್ಲರ ಕೆಲಸ." ಅಂದರು. ಇಳಾ, ಅನೇಕ ಬಾರಿ ತಮ್ಮ ಮನೆಗೆ ಊಟಕ್ಕೆ ಬಾರೆಂದು ನನ್ನನ್ನು ಕರೆದಿದ್ದಾರೆ. ಆದರೆ ಅಲ್ಲಿಗೆ ಹೋಗಿ ಅವರ ಮನೆಯಲ್ಲಿ ಊಟಮಾಡುವ ಧೈರ್ಯ ನನಗಿನ್ನೂ ಬಂದಿಲ್ಲ. ಎಲ್ಲರಿಗೂ ಕಾಣದ, ಪಿಸುಗುಟ್ಟುವ ಮೆಲುದನಿಯ ಇಳಾರನ್ನು ಕಂಡಿದ್ದೇನೆ, ಅವರ ಮಾತುಗಳನ್ನು ಕೇಳಿದ್ದೇನೆ. ಆಕೆಯ ಪರಿಚಯದ ಗೌರವ ನನಗೆ ಪ್ರಾಪ್ತವಾಗಿದೆ. ಅದೇ ಸಾಕು.

No comments:
Post a Comment