Friday, March 13, 2009

ರಾಮ್ ಗುಹಾಗೆ ಪದ್ಮಭೂಷಣ

ಬರಹಗಾರ ರಾಮಚಂದ್ರ ಗುಹಾಗೆ ಪದ್ಮಭೂಷಣ ಪ್ರಶಸ್ತಿಯನ್ನು ಇಂದು ಘೋಷಿಸಲಾಗಿದೆ. ಪದ್ಮ ಅವಾರ್ಡುಗಳ ಪಟ್ಟಿ ಸಾಮಾನ್ಯವಾಗಿ ನೂರಕ್ಕೂ ಹೆಚ್ಚಿನ ಸಂಖ್ಯೆಯದ್ದಾಗಿರುತ್ತದಾದ್ದರಿಂದ ಪತ್ರಿಕೆಗಳು ವಿಭೂಷಣ/ಭೂಷಣ ಪ್ರಸಸ್ತಿಗಳ ಪಟ್ಟಿಯನ್ನು ಕೊಟ್ಟು, ಪದ್ಮಶ್ರೀ ಪ್ರಸಸ್ತಿಗಳನ್ನು ಪಡೆದವರ ಪ್ರಮಖರ ಹೆಸರನ್ನು ಮಾತ್ರ ಹಾಕಿಡುತ್ತವೆ. ಹೀಗಾಗಿ ಗುಜರಾತಿನಲ್ಲಿರುವ ನನ್ನಂತಹವರು ಕರ್ನಾಟಕದ ಮತ್ತೂರು ಕೃಷ್ಣಮೂರ್ತಿಯವರಿಗೆ ಪ್ರಶಸ್ತಿ ಬಂದಿದೆಯೆನ್ನುವುದನ್ನು ತಿಳಿಯಲು ಅಂತರ್ಜಾಲಕ್ಕೆ ಹೋಗಿ ಸರಕಾರದ ಪಟ್ಟಿಯನ್ನು ಪರಿಶೀಲಿಸಬೇಕಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ಇಂತಿಥಹ ಸೇವೆ, ಇಂತಿಥಹ ರಾಜ್ಯಕ್ಕೆ ಸೇರಿದವರಿಗೆ ಕೊಡುತ್ತಾರೆನ್ನುವುದು ಪಟ್ಟಿಯನ್ನು ನೋಡಿದಾಗ ವೇದ್ಯವಾಗುತ್ತದೆ. ಉದಾಹರಣೆಗೆ ಈ ಬಾರಿಯ ಪದ್ಮ ಪ್ರಶಸ್ತಿ ಪಡೆದಿರುವ ಮ್ಯಾನೇಜ್‌ಮೆಂಟ್ ಚಿಂತಕ ಸಿ.ಕೆ.ಪ್ರಹ್ಲಾದ್‌ಅವರ ಹೆಸರಿನ ಮುಂದೆ ಸೇವೆ: ವಿದ್ಯಾರಂಗವೆಂದೂ ರಾಜ್ಯ: "ಎನ್.ಆರ್.ಐ/ಪಿ.ಐ.ಓ" ಎಂದೂ ಬರೆಯಲಾಗಿದೆ. ರಾಮ್ ಗುಹಾರ ಹೆಸರಿನ ಮುಂದೆ ಸಾಹಿತ್ಯ ಎಂದು ಬರೆಯಲಾಗಿದೆ. ಚರಿತ್ರೆಗಾಗಿ ಇತರರಿಗೆ ಪ್ರಶಸ್ತಿ ಬಂದಿದ್ದರೂ ಚರಿತ್ರಕಾರ ರಾಮ್‌ಗೆ ಸಾಹಿತ್ಯಕ್ಕೆ ಬಂದಿದೆ. ಇದರಿಂದ ದುಃಖವೇನೂ ಇಲ್ಲ, ಬಹುಶಃ ಅವರ ಒಟ್ಟಾರೆ ಬರವಣಿಗೆಯ ಸೃಜನಶೀಲತೆಯನ್ನು ನೋಡಿ ಅವರಿಗೆ "ಸಾಹಿತ್ಯ"ದ ಪದ್ಮಭೂಷಣ ಕೊಟ್ಟಿರಬಹುದು.

ನಮ್ಮ ನಡುವೆಯಿರುವ ಅದ್ಭುತ ಚಿಂತಕರಲ್ಲಿ ರಾಮ್ ಗುಹಾ ಒಬ್ಬರು. ಅವರು ಮೊದಲಿಗೆ ಓದಿದ್ದು ಅರ್ಥಶಾಸ್ತ್ರ [ಜೊತೆಗೆ ಕ್ರಿಕೆಟ್ ಕೂಡಾ ಆಡಿದರು] ಆದರೆ ಅವರೇ ಹೇಳುವಂತೆ ಅವರೊಬ್ಬ "ವಿಫಲ ಅರ್ಥಶಾಸ್ತ್ರಜ್ಞ" [ಮತ್ತು ವಿಫಲ ಕ್ರಿಕೆಟಿಗ] ಅಲ್ಲಿಂದ ಮುಂದಕ್ಕೆ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು - ಕಲಕತ್ತಾದ ಐಐಎಂನಲ್ಲಿ ಡಾಕ್ಟರೇಟ್ ಪಡೆದರು. ಒಂದು ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಭಾರತದ ಪರಿಸರದ ಸಾಮಾಜಿಕ-ಚರಿತ್ರಿಕ ಮೂಲಸೆಲೆಗಳನ್ನು ಗ್ರಹಿಸುವ ಮಹಾಪ್ರಬಂಧ ಬರೆದರು. ಆ ಸಮಯದಲ್ಲಿ ಅವರು ಬಹಳವಾಗಿ ಸಮೀಪದಿಂದ ನೋಡಿದ ಗೌರವದಿಂದ ಬರೆದ ’ಚಿಪ್ಕೋ ಚಳವಳಿ’ಯ ಸುಂದರಲಾಲ್ ಬಹುಗುಣಾರಿಗೂ ಈ ದಿನವೇ ಪದ್ಮವಿಭೂಷನ ಘೋಷಣೆಯಾಗಿರುವುದು ರಾಮ್‍ಗೆ ಅತ್ಯಂತ ಖುಷಿಯನ್ನೂ ನೀಡಿರಬಹುದು. ಪರಿಸರವಾದಿ, ಕ್ರಿಕೆಟ್ ಬರಹಗಾರ, ಚರಿತ್ರಕಾರ - ಹೀಗಲ್ಲಾ ಹಣೆಪಟ್ಟಿಯನ್ನು ಪಡೆದಿರುವ ರಾಮ್ ಚರಿತ್ರೆಯನ್ನು ಶಾಸ್ತ್ರೊಕ್ತವಾಗಿ ಓದಿದವರೇ ಅಲ್ಲ. ಬಹುಶಃ ಇದೇ ಕಾರಣದಿಂದ ಅವರಿಗಿರುವ ಅನೇಕ ಪಟ್ಟಿಗಳಿಗೆ ’ಸಾಹಿತ್ಯ’ದ ಮತ್ತೊಂದು ಪಟ್ಟಿಯನ್ನೂ ಸೇರಿಸಬೇಕೆಂದು ಸರಕಾರ ನಿರ್ಧರಿಸಿರಬಹುದು.

ರಾಮ್ ಗುಹಾರಿಗೆ ಪದ್ಮಭೂಷಣ ಬಂದದ್ದಕ್ಕೆ ನಾವು ಖುಷಿಪಡಬೇಕೇ? ಇನ್ನೂ ಅನೇಕರಿಗೆ ಬಂದಿರುವಾಗ ರಾಮ್ ಪ್ರತ್ಯೇಕತೆ ಏನು ಎನ್ನುವುದು ಸಹಜವಾದ ಪ್ರಶ್ನೆಯೇ. ಗುಹಾ ಎನ್ನುವ ಹೆಸರನ್ನು ಹೊತ್ತ ರಾಮ್ ಬಂಗಾಳದವರಲ್ಲ. ಅವರು ಹೇಳುವಂತೆ, "ಮೂಲತಃ ನಾವು ತಮಿಳು ಮಾತನಾಡುವವರು. ಇಲ್ಲೇ ಬೆಳೆದಿದ್ದರೆ ನನ್ನ ಹೆಸರು ಜಿ.ರಾಮಚಂದ್ರ ಆಗುತ್ತಿತು. ಆದರೆ ಉತ್ತರ ಭಾರತದಲ್ಲಿ ಬೆಳೆದದ್ದರಿಂದ ಜಿ ಅಂತ್ಯಕ್ಕೆ ಬಂದದ್ದಲ್ಲದೇ ವಿಸ್ತಾರವೂಗೊಂಡಿತು". ಹೀಗಾಗಿ ಪ್ರಶಸ್ತಿಯ ಯಾದಿಯಲ್ಲಿ ರಾಮ್ ಹೆಸರಿನ ಬದಿಯಲ್ಲಿ ರಾಜ್ಯದ ಹೆಸರು "ಕರ್ನಾಟಕ" ಎಂದು ಕಾಣಿಸಿದಾಗ ಭಾಷಾಪ್ರೇಮಿಗಳು ಖುಷಿಪಡುವರೇ? ಅಥವಾ ಇದನ್ನೂ ಭಾಷಾವಿವಾದವನ್ನಾಗಿ ಮಾಡಬಹುದೇ? ಎನ್ನುವ ಪ್ರಶ್ನೆ ಕ್ಷಣದ ಮಟ್ಟಿಗೆ ನನ್ನನ್ನು ಕಾಡಿತು. ನನಗೆ ತಿಳಿದ ಮಟ್ಟಿಗೆ ರಾಮ್ ಕನ್ನಡ ಮಾತನಾಡುವುದಿಲ್ಲ. ಕನ್ನಡ ಕಲಿಯುವ ಪ್ರಯತ್ನವನ್ನು ಅವರು ಮಾಡಿದಂತೆಯೂ ಇಲ್ಲ. ಆದರೆ ರಾಮ್ ಅವರನ್ನು ಗೌರವ ಕನ್ನಡಿಗನಾಗಿಸಲು ನನಗೆ ಯಾವ ಅಭ್ಯಂತರವೂ ಇಲ್ಲ. ಬೆಂಗಳೂರಿನಲ್ಲಿರುತ್ತಲೇ ಚರಿತ್ರೆಯಬಗ್ಗೆ, ಕ್ರಿಕೆಟ್ಟಿನ ಬಗ್ಗೆ ಮಾತನಾಡುತ್ತಲೇ ರಾಮ್ ಕರ್ನಾಟಕದವರಾಗಲು ಹಲವಾರು ಕಾರಣಗಳಿವೆ.

ಅವರ ಪುಸ್ತಕ "ಸ್ಟೇಟ್ಸ್ ಆಫ್ ಇಂಡಿಯನ್ ಕ್ರಿಕೆಟ್" ಪುಸ್ತಕದಲ್ಲಿ ಅವರು ಮೈಸೂರು ರಾಜ್ಯದ/ಕರ್ನಾಟಕದ ರಣಜಿ ಟೀಮಿನ ಬಗೆಗಿನ ಅಧ್ಯಾಯದಲ್ಲಿ ಹೀಗೆ ಬರೆಯುತ್ತಾರೆ: "೧೯೬೬ರಲ್ಲಿ ಎಂಟುವರ್ಷದ ಬಾಲಕನಾಗಿದ್ದ ನಾನು ಅತ್ಯಂತ ಬುದ್ಧಿವಂತಿಕೆಯ ನಿರ್ಧಾರವನ್ನು ಮಾಡಿದೆ......ಆಗ ನಾನು ರಣಜಿ ಪಂದ್ಯಗಳಲ್ಲಿ ಯಾವ ರಾಜ್ಯವನ್ನು ಬೆಂಬಲಿಸಬೇಕು ಅನ್ನುವ ಪ್ರಶ್ನೆ ನನ್ನ ಮುಂದಿತ್ತು. ಈ ಬಗೆಗಿನ ನಿರ್ಧಾರ ಜೀವನಾದ್ಯಂತ ನನ್ನ ಜೊತೆಗೇ ಇರುತ್ತಿತ್ತಾದ್ದರಿಂದ ಇದನ್ನು ಜಾಗರೂಕವಾಗಿ ಮಾಡಬೇಕಿತ್ತು. ನಿಜಕ್ಕೂ ನನಗಿದ್ದದ್ದು ಮೂರು ಆಯ್ಕೆಗಳು: ನಾನು ಬೆಳೆದ ರಾಜ್ಯವಾದ ಉತ್ತರಪ್ರದೇಶ, ನನ್ನ ಹಿರಿಯರು ಬಂದಿದ್ದ ತಮಿಳುನಾಡು, ಹಾಗೂ ನನ್ನ ಅಜ್ಜ-ಅಜ್ಜಿ ಈಚೆಗೆ ಬಂದು ವಸತಿ ಹೂಡಿದ್ದ ಕರ್ನಾಟಕ [ಆಗ ಮೈಸೂರು]. ನನ್ನ ಅಂತಿಮ ನಿರ್ಧಾರ ಕರ್ನಾಟಕವಾಗಿತ್ತು..... "

ಹೀಗೆ ಕರ್ನಾಟಕವನ್ನು ಕ್ರಿಕೆಟ್ಟಿನ ಕಾರಣಕ್ಕೆ ತಬ್ಬಿದ ರಾಮ್ ಎಂದೂ ಹೊರಗಿನವರಂತೆ ಪ್ರವರ್ತಿಸಿಲ್ಲ. ಕನ್ನಡ ಮಾತಾಡದ ಅಪ್ಪಟ ಕನ್ನಡಿಗರಾಗಲು ಅವರು ಅರ್ಹರು! ದೆಹಲಿಯಲ್ಲಿದ್ದ ಕೆಲಸದಲ್ಲಿದ್ದ ರಾಮ್ ಒಂದು ದಿನ ಮರಳಿ ಮಣ್ಣಿಗೆ ಎಂದು ಬೆಂಗಳೂರಿಗೆ ಬರಬೇಕೆಂದು ನಿರ್ಧರಿಸಿ ಬಂದೇಬಿಟ್ಟರು. ರಾಮ್ ಜೊತೆ ಮಾತಾಡುತ್ತಾ ನಾನು ಅವರನ್ನು ಹಿಂದೆ "ಬರೇ ಲೇಖನದಿಂದಲೇ ಬರುವ ಸಂಪಾದನೆಯಿಂದ ಜೀವನ ನಡೆಸುವ ಗಟ್ಟಿ ನಿರ್ಧಾರವನ್ನು ನೀವು ಧೈರ್ಯವಾಗಿ ಕೈಗೊಂಡದ್ದು ಗಮ್ಮತ್ತಿನದ್ದಾಗಿದೆ. ಇದು ಸುಲಭವಾದ ನಿರ್ಧಾರವಾಗಿರಲಾರದು" ಎಂದು ಕೇಳಿದ್ದೆ. ಅದಕ್ಕೆ ರಾಮ್ ಕೊಟ್ಟ ಉತ್ತರ ನನಗೆ ಆಶ್ಚರ್ಯ ಉಂಟುಮಾಡಿದರೂ ಅವರು ಅದನ್ನು ಬಹಳ ಸಹಜವಾಗಿ ಹೇಳಿದ್ದರು. "ನಿಜಕ್ಕೂ ಬೆಂಗಳೂರಿಗೆ ಬರಬೇಕು ಅನ್ನುವುದನ್ನು ನಾನು ನಿರ್ಧರಿಸಿಬಿಟ್ಟಿದ್ದೆ. ಕೆಲಸ ಸಿಕ್ಕರೆ ಒಳ್ಳೆಯದು, ಇಲ್ಲದಿದ್ದರೆ ಏನಾದರೂ ಹುಡುಕಿಕೊಳ್ಳಬಹುದು ಅನ್ನುವುದು ನನ್ನ ಭಾವನೆಯಾಗಿತ್ತು. ಇಲ್ಲಿನ ಸೆಲೆಕ್ಟ್ ಬುಕ್ ಷಾಪ್, ಪ್ರೀಮಿಯರ್‌ನಂತಹ ಪುಸ್ತಕದಂಗಡಿಗಳು ನನ್ನಂಥವನಿಗೆ ಮುಖ್ಯ. ಹೀಗಾಗಿ ಇಲ್ಲಿಗೆ ಬರುವುದೆಂದು ನಾನು ಮನಸ್ಸಿನಲ್ಲಿ ನಿರ್ಧರಿಸಿಬಿಟ್ಟಿದ್ದೆ.  ನನ್ನ ಹೆಂಡತಿಯೂ ಬೆಂಗಳೂರಿನವಳಾದ್ದರಿಂದ ಈ ನಿರ್ಧಾರ ನನಗೆ ಸುಲಭದ್ದಾಗಿತ್ತು. 

ಸೆಲೆಕ್ಟ್ ಮತ್ತು ಪ್ರೀಮಿಯರ್ ಬಗ್ಗೆ [ಚರ್ಚ್ ಸ್ಟ್ರೀಟಿನಲ್ಲಿರುವ ಬ್ಲಾಸಮ್ಸ್ ಬಗ್ಗೆ ಈಗೀಗ] ರಾಮ್ ಮಾತನಾಡುವುದಲ್ಲದೇ ಇಲ್ಲಿಗೆ ಅವರು ವಾಪಸ್ಸಾಗಲು ಈ ಪುಸ್ತಕದಂಗಡಿಗಳು ಕಾರಣ ಎಂದು ಹಲವು ಕಡೆ ಬರೆದೂ ಇದ್ದಾರೆ. ಹೀಗಾಗಿ ಬೆಂಗಳೂರಿನ ಸೆಳೆತ ಬರೇ ಪಬ್ಬಿನದೇ ಆಗಬೇಕಿಲ್ಲ ಎಂದು ರಾಮ್ ನಿರೂಪಿಸುತ್ತಾರೆ [ರಾಮ್ ಧೂಮಪಾನ ಮದ್ಯಪಾನ ಮಾಡುವುದಿಲ್ಲ]

ಪದ್ಮ ಪ್ರಶಸ್ತಿಯನ್ನು ಪಡೆದಿರುವ ರಾಮ್ ಈ ಪ್ರಶಸ್ತಿಗಳ ಉತ್ತುಂಗವಾದ ಭಾರತ ರತ್ನ ಪ್ರಶಸ್ತಿಯಬಗ್ಗೆ ಹಲವು ಬಾರಿ ಬರೆದಿದ್ದಾರೆ. ಎಂ.ಎಸ್. ಸುಬ್ಬುಲಕ್ಷ್ಮಿಗೆ ೧೯೯೮ರಲ್ಲಿ ಭಾರತ ರತ್ನ ಬಂದಾಗ "Redeeming the Bharat Ratna" ಎನ್ನುವ ಲೇಖನವನ್ನು ಬರೆದಿದ್ದರು. ಹೇಗೆ ಭಾರತ ರತ್ನ ತನ್ನ ಗೌರವವನ್ನು ಕಳೆದುಕೊಳ್ಳುತ್ತಿದೆ ಹಾಗೂ ಅದು ಗೌರವದ ಸಂಕೇತವಾಗಿ ಉಳಿಯಬೇಕಾದರೆ ಹೇಗೆ ಕೆಲವು ಪ್ರತಿಭಾನ್ವಿತರಿಗೆ ಅದನ್ನು ದಯಪಾಲಿಸಿ ಅದರ ಗೌರವವನ್ನು ಕಾಪಾಡಿಕೊಳ್ಳಬೇಕು ಎಂದು ೧೯೯೬ರಲ್ಲಿ ಇಂಡಿಯಾ ಟುಡೆಯ ಒಂದು ಪ್ರಬಂಧದಲ್ಲಿ ರಾಮ್ ಬರೆದಿದ್ದರು. ಆಗ ಅವರು ಸೂಚಿಸಿದ್ದದ್ದು ಎಂ.ಎಸ್. ಸುಬ್ಬುಲಕ್ಷ್ನೀ ಮತ್ತು ಲತಾ ಮಂಗೇಶ್ಕರ್ ಅವರ ಹೆಸರುಗಳು. ಆ ನಂತರ ಅವರು ಈ ವಿಷಯದ ಬಗ್ಗೆ ಬರೆಯುತ್ತಾ ತಮ್ಮ ಯಾದಿಗೆ ರವಿಶಂಕರ್ [ಸಿತಾರ್, ಶ್ರೀ ಶ್ರೀ ಅಲ್ಲ!] ಬಿಸ್ಮಿಲ್ಲಾ ಖಾನ್, ಅಬ್ದುಲ್ ಕಲಾಂ, ಅಮಾರ್ತ್ಯ ಸೇನ್ ಮತ್ತು ಶಿವರಾಮ ಕಾರಂತರ ಹೆಸರನ್ನು ಸೇರಿಸಿದ್ದರು. ಮತ್ತೊಂದು ಕಡೆ ಅವರು ಬಾಬಾ ಆಮ್ಟೆಯ ಹೆಸರನ್ನೂ ಸೂಚಿಸಿದ್ದರು. ಗಮ್ಮತ್ತಿನ ವಿಷಯವೆಂದರೆ ರಾಮ್ ಮಾತನ್ನೇ ಕೇಳುತ್ತಿದೆಯೇನೋ ಅನ್ನುವಂತೆ ಸರಕಾರ ಅವರು ಸೊಚಿಸಿದ ಎಲ್ಲರಿಗೂ [ಕಾರಂತ ಮತ್ತು ಬಾಬಾರನ್ನು ಹೊರತುಪಡಿಸಿ] ಭಾರತರತ್ನ ವಿವಿಧ ವರ್ಷಗಳಲ್ಲಿ ಘೋಷಿಸಿದೆ. ಹೀಗೆ ಭಾರತ ರತ್ನದ ಗೌರವವನ್ನು ಮರಳಿ ದಕ್ಕಿಸಲು ಬರೆದ ರಾಮ್‌ಗೆ ಅದೇ ಸರಣಿಯ ಭೂಷಣ ಬಂದಿರುವುದು ಒಳ್ಳೆಯದೇ ಹಾಗೂ ಆ ಪ್ರಶಸ್ತಿಯ ಗೌರವವನ್ನು ಉಳಿಸುವ ನಿಟ್ಟಿನದ್ದಾಗಿದೆ. 

ರಾಮ್ ಕನ್ನಡ ಕಲಿಯದೆಯೇ ಎಷ್ಟು ಚೆನ್ನಾಗಿ ಕನ್ನಡಿಗರ ಲೋಕದಲ್ಲಿ ಸೇರಿದ್ದಾರೆ ಅನ್ನುವುದು ನಮಗೆ ಖುಷಿಯ ವಿಷಯವಾಗಬೇಕು. ಅವರನ್ನು ಲಂಕೇಶ್ ಪತ್ರಿಕೆಯ ಕಛೇರಿಯಲ್ಲಿ ಲಂಕೇಶ್/ಆಶೀಶ್ ನಂದಿಯ ಜೊತೆ ಸಂವಾದ ನಡೆಸುವುದನ್ನು ಕಂಡಿದ್ದೆ. ಬೆಂಗಳೂರಿನ ವಿಷಯದಲ್ಲಿ ರಾಮ್ ಯಾವಾಗಲೂ ತಮ್ಮ ಧ್ವನಿಯನ್ನು ಕೇಳುವಂತೆ ಮಾಡುತ್ತಾರೆ. ಅಲ್ಲದೇ ಕನ್ನಡಿಗರ ಬಗ್ಗೆ ಆತ್ಮೀಯವಾಗಿ ಬರೆಯುತ್ತಾರೆ. ಅವರು ಎಷ್ಟೋ ಬಾರಿ ನನ್ನ ಬಳಿ ಶಿವರಾಮ ಕಾರಂತರ ಜೀವನ ಚರಿತ್ರೆಯನ್ನು ಉತ್ತಮವಾಗಿ ಯಾರಾದರೂ ಇಂಗ್ಲೀಷಿನಲ್ಲಿ ಬರೆದು ಪ್ರಕಟಿಸಬೇಕೆಂದು ಹೇಳಿರುವುದುಂಟು. ಅವರೇ ಸ್ವತಃ ಕಾರಂತರ ಬಗ್ಗೆ ಹಲವು ಕಡೆ ಬರೆದಿದ್ದಾರೆ. ಜೊತೆಗೆ ಡಿ.ಆರ್. ನಾಗರಾಜ್ ಬಗ್ಗೆ ಬರೆದಿರುವ "Rooted Cosmopolitan" ಅನ್ನುವ ಆತ್ಮೀಯ ಲೇಖನವೂ ಇದೆ. ಬಹುಶಃ ಕಾರಂತರಿಗೆ ಭಾರತ ರತ್ನ ಬರಬೇಕು ಎಂದು ಯಾವೊಬ್ಬ ಕನ್ನಡಿಗನೂ ಜೋರಾಗಿ ಕೇಳಿಲ್ಲವೇನೋ. ಆದರೆ ಗುಹಾ ಈ ಮಾತನ್ನು ಒಮ್ಮೆಯಲ್ಲದೇ ಹಲವು ಬಾರಿ ಹೇಳಿದ್ದಾರೆ. 

ಒಬ್ಬ ಪೂರ್ಣಾವಧಿ ಲೇಖಕನ ಜೀವನ ಹೇಗಿರಬಹುದು? ಈ ನಿರ್ಣಯವನ್ನು ರಾಮ್ ಅಂಥಹ ಮಧ್ಯಮವರ್ಗದ ವ್ಯಕ್ತಿ ಹೇಗೆ ಕೈಗೊಳ್ಳಬಹುದು ಅನ್ನುವುದರ ಬಗ್ಗೆ ನನಗೆ ತಿಳಿಯುವ ಆಸಕ್ತಿಯಿದ್ದದ್ದರಿಂದ ಈ ಬಗ್ಗೆ ಅವರನ್ನು ಹಿಂದೆ ನಾನು ಪ್ರಶ್ನಿಸಿದ್ದೆ. "ಇಲ್ಲಿಗೆ ಬಂದ ನಂತರ ಅನೇಕ ಕಡೆ ಕೆಲಸಕ್ಕೆ ಪ್ರಯತ್ನಿಸಿದ್ದೆ. ನನಗೆ ಸ್ವಲ್ಪ ನನ್ನದೇ ಸಮಯವೂ ಬೇಕಿತ್ತಾದ್ದರಿಂದ ಯೂನಿವರ್ಸಿಟಿ, ಐಐಎಸ್ಸಿ, ಐ-ಸೆಕ್ ಯಾವುದೇ ಸಂಸ್ಥೆಯಲ್ಲಿನ ನಿಯಮಗಳು ನನಗೆ ಹೊಂದಲಿಲ್ಲ.. ಹಾಗೇ ಸಮಯ ಕಳೆಯುತ್ತಾ, ಕೆಲಸವಿಲ್ಲದೆಯೂ ಬದುಕಬಹುದು ಅನ್ನುವುದು ನನಗೆ ಮನವರಿಕೆಯಾಯಿತು. ಮೊದಲಿಗೆ ಕೆಲವು ವಿದೇಶೀ ಯೂನಿವರ್ಸಿಟಿಗಳಲ್ಲಿ ಆಗಾಗ ಹೋಗಿ ಪಾಠಮಾಡುತ್ತಿದ್ದೆ. ಈಗ ಅದೂ ಕಡಿಮೆ ಮಾಡಿ ಹೆಚ್ಚು ಬರವಣಿಗೆಯನ್ನೇ ಮಾಡುತ್ತಿದ್ದೇನೆ" ಅಂದರು. ಹೀಗೆ ಕಾದಂಬರಿ ಬರೆಯದೇ, ಚರಿತ್ರೆಯಂತಹ ’ಒಣ’ ವಿಷಯವನ್ನಾಧಾರ ಮಾಡಿಕೊಂಡೇ ಆತ ಜೀವನವನ್ನು ಚನ್ನಾಗಿ ಮುಂದುವರೆಸುತ್ತಿರುವುದು ಅವರ ಬರವಣಿಗೆಯ ಅದ್ಭುತ ಶಕ್ತಿಯ ಕುರುಹಾಗಿದೆ. 

ಈಚೆಗೆ ಸಿಕ್ಕಾಗ ಕ್ರಿಕೆಟ್ ಬಗೆಗಿನ ಲೇಖನಗಳು ಈ ಮಧ್ಯೆ ಕಾಣುತ್ತಿಲ್ಲ ಎಂದು ನಾನು ಎತ್ತಿದ ತಕರಾರಿಗೆ "ಟೆಂಡೂಲ್ಕರ್ ರಿಟೈರಾಗುವುದಕ್ಕೆ ಮೊದಲು ನಾನು ಕ್ರಿಕೆಟ್ಟಿನ ಬಗ್ಗೆ ಬರೆಯುವುದನ್ನ ನಿಲ್ಲಿಸಬೇಕೆಂದು ನಿರ್ಧರಿಸಿದ್ದೆ, ಅದೂ ಆಯಿತು, ಅದರ ಬರವಣಿಗೆಯಲ್ಲಿ ಬರುತ್ತಿದ್ದ ಖುಷಿ ನನಗೆ ಈಗೀಗ ದಕ್ಕುತ್ತಿಲ್ಲ" ಎಂದು ರಾಮ್ ಹೇಳಿದರು.

ಕೆ.ವಿ.ಸುಬ್ಬಣ್ಣ, ಅಕ್ಷರ, ಡಿ.ಆರ್, ಲಂಕೇಶ್, ಅನಂತಮೂರ್ತಿ, ವಿವೇಕ, ಹೀಗೆ ಹಲವು ಬರಹಗಾರರೊಡನೆ ಸಂಪರ್ಕವಿರುವ, ಕನ್ನಡಿಗರ ತುಡಿತದ ಬಗ್ಗೆ ಅರಿವಿರುವ ಅಪರೂಪದ ಬೆಂಗಳೂರಿಗ ರಾಮ್. ಅವರ ರಚಿಸಿರುವ ಪುಸ್ತಕಗಳ ಯಾದಿ ಸಣ್ಣದೇನೂ ಅಲ್ಲ. ಕ್ರಿಕೆಟ್ಟಿನ ಬಗ್ಗೆ ಮೂರೂ ಮತ್ತೊಂದು ಪುಸ್ತಕ, ವೆರಿಯರ್ ಎಲ್ವಿನ್ ಬಗ್ಗೆ ಬರೆದ ಅದ್ಭುತ ಜೀವನಚರಿತ್ರೆ, ಭಾರತೀಯ ಇತಿಹಾಸದ ಬಗ್ಗೆ, ಹಾಗೂ ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಅವರ ರಚನೆಗಳನ್ನು ಕಾಣಬಹುದು. ಎಲ್ಲಕ್ಕಿಂತ ಮಿಗಿಲಾಗಿ ಅವರು ಬೇರೆಯವರ ಬಗ್ಗೆ ಬರೆದಿರುವ ಆತ್ಮೀಯ ಪ್ರಬಂಧಗಳು. ಎಲ್ಲವೂ ಸರಳ ಆಕರ್ಷಕ ಭಾಷೆಯಲ್ಲಿ, ಸಣ್ಣಪುಟ್ಟ ವಿವರಗಳೊಂದಿಗೆ ಆತ್ಮೀಯವಾಗಿ ಬರೆಯುತ್ತಾರೆ. ಡಿ.ಆರ್, ಸಿ.ಎಸ್.ವೆಂಕಟಾಚಾರ್, ಬೆಂಗಳೂರಿಗ ಪಿ.ಕೆ ಶ್ರೀನಿವಾಸನ್, ಬೆಂಗಳೂರಿನ ವಾದ್ಯಾರ್ - ಟಿ.ಜಿ.ವಿ, ಶಿವರಾಮ ಕಾರಂತ - ಹೀಗೆ ಅವರ ಲೇಖನಿಯ ಪ್ರೀತಿಗೆ ಪಾತ್ರರಾದವರು ಅನೇಕ. ಕಡೆಗೂ ಅವರು ಬೇಸರದಿಂದ "ದಕ್ಷಿಣ ಏಷಿಯಾದ ಜನ ಜೀವನಚರಿತ್ರೆಗಳನ್ನು ಯಾಕೆ ಬರೆಯುವುದಿಲ್ಲ, ಮತ್ತು ಯಾಕೆ ಬರೆಯಬೇಕು" ಅನ್ನುವ  ಲೇಖನವನ್ನು ಬರಿದಿದ್ದಾರೆ. 

ರಾಮ್ ಪರಿಸರದ ಬಗ್ಗೆ ಬರೆಯುವ ವ್ಯಕ್ತಿಯಾಗಿ ಹಿಂದೊಮ್ಮೆ ಅರುಂಧತಿ ರಾಯ್ ಬಗ್ಗೆ ಕೆಂಡ ಕಾರುತ್ತಾ ಒಂದು ಲೇಖನವನ್ನು ಬರೆದಿದ್ದರು. ಚಿಪ್ಕೋ ಆಂದೋಲನದಬಗ್ಗೆ ಮಹಾಪ್ರಬಂಧ ಬರೆದ ರಾಮ್ ಹೀಗೆ ಕೆಂಡಕಾರುವುದು ಎಲ್ಲರಿಗೂ ಆಶ್ಚರ್ಯವುಂಟುಮಾಡಿತ್ತು. ಹಾಗೆಯೇ ಚಾರಿತ್ರಿಕ ಕಾದಂಬರಿಗಳನ್ನು ಬರೆಯುವ ವಿಲಿಯಂ ಡಾಲ್ರಿಂಪಲ್‍ಗೆ ಕೂಡಾ ರಾಮ್ ಕಂಡರೆ ಅಷ್ಟಕ್ಕಷ್ಟೇ. ರಾಮ್ ಅವರುಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ ಅರುಂಧತಿಯ ಬಗ್ಗೆ ಅವರು ಅನಿತಾ ನಾಯರ್ ಜೊತೆ ಮಾತನಾಡುತ್ತಾ ಹೇಳುತ್ತಾರೆ: "ಆಕೆಯ ಬಗ್ಗೆ ನನ್ನ ವಿರೋಧ ಮೂರು ನೆಲೆಗಳಲ್ಲಿತ್ತು - ಆಕೆಯ ವೃತ್ತಾಕಾರದ/ಸುತ್ತಿಗೆಯಿಂದ ಬಡೆಯುವಂತಹ ಶೈಲಿ ನನಗೆ ಇಷ್ಟವಾಗಲಿಲ್ಲ, ಬದಲಿಗೆ ಅತಿಯಲ್ಲದ ಭಾಷ್ಯವಲ್ಲದ ವ್ಯಂಗ್ಯದ ಶೈಲಿ ನನಗೆ ಇಷ್ಟವಾಗುತ್ತದೆ. ಎರಡು - ಆಕೆ ಎಲ್ಲವನ್ನೂ ಸರಳೀಕರಿಸಿ ಸರಿ-ತಪ್ಪುಗಳ ನಡುವೆ ಇರುಕಿಸುವುದು ನನಗೆ ಹಿಡಿಸಲಿಲ್ಲ - ನಾವು ಚರ್ಚಿಸಬೇಕಿದ್ದ ವಿಷಯದ ಮಜಲುಗಳನ್ನು ಆಕೆ ಸರಳೀಕರಿಸಿಬಿಟ್ಟಿದ್ದಳು. ಮೂರು ಚರಿತ್ರೆಯನ್ನು ಓದಿದವನಾಗಿ, ಶಿವರಾಮ ಕಾರಂತ, ಮಹಾಶ್ವೇತಾದೇವಿ, ವೆರಿಯರ್ ಎಲ್ವಿನ್ ರಂತಹ ಜನರ ಕೆಲಸವನ್ನು ನೋಡಿದ್ದ ನನಗೆ ಈಕೆಯ ಅತೀ ಸರಳೀಕೃತ ಸಿದ್ಧಾಂತ ನನಗೆ ಒಪ್ಪಲು ಕಷ್ಟದ್ದಾಗಿತ್ತು". ಒಂದು ರೀತಿಯಲ್ಲಿ ರಾಮ್ ಸಾಹಿತ್ಯದ ಮೂಲಸೆಲೆಯಾದ ಸೃಜನಶೀಲತೆ, ವ್ಯಂಗ್ಯ, ಹಾಗೂ ಚರ್ಚೆಗೆ ಆಹ್ವಾನಿಸುವ, ವಿಮರ್ಶಕರಿಗೆ ಗ್ರಾಸ ಒದಗಿಸುವ ರೀತಿಯಲ್ಲಿ ಬರವಣಿಗೆ ಇರಬೇಕು ಎಂದು ನಂಬುವವರು. ಹೀಗಾಗಿಯೇ ಅವರ ಚರಿತ್ರೆಯ ಪುಸ್ತಕವೂ ಕಾದಂಬರಿಯ ಶೈಲಿಯಲ್ಲಿ ಓದಿಸಿಕೊಳ್ಳುತ್ತಲೇ ವಿಚಾರಗಳ ಅನೇಕ ಮಜಲುಗಳನ್ನು ತೆರೆದಿಡುತ್ತಲೇ ಹೋಗುತ್ತದೆ.

ಒಮ್ಮೆ ನಾನು ರಾಮ್‍ ಅವರನ್ನು ಕೇಳಿದ್ದೆ "ಇಂಥ ಅದ್ಭುತ ಭಾಷೆಯಿರುವ ನೀವು ಫಿಕ್ಶನ್ [ಕಥೆ ಕಾದಂಬರಿ] ಯಾಕೆ ಬರೆದಿಲ್ಲ?" ರಾಮ್ ನಕ್ಕು, ಅದು ನನಗೆ ಹೇಳಿ ಮಾಡಿಸಿದ್ದಲ್ಲ ಎಂದಷ್ಟೇ ಹೇಳಿದ್ದರು. ಅವರ ಬರವಣಿಗೆಯಿಂದ ಗಾಂಭೀರ್ಯ ತುಂಬಿದ ಪಂಡಿತರಂತೆ ರಾಮ್ ಕಂಡರೂ, ಅವರೊಂದಿಗೆ ಮಾತುಕತೆ ಬಹಳವೇ ಸರಳ. ಜೊತೆಗೆ ಅವರು ನೀವು ಹೇಳಿದ್ದನ್ನು ಕುತೂಹಲದಿಂದ ಕೇಳುವ [ಬಹುಶಃ ಅವರ ಬರವಣಿಗೆಗಾಗಿ ಸಣ್ಣ ಪುಟ್ಟ ವಿವರಗಳನ್ನು ಸಂಗ್ರಹಿಸುವ] ಪುಟ್ಟ ಬಾಲಕನಂತೆ ಕಾಣುತ್ತಾರೆ. ಯಾರೊಂದಿಗೂ ಆತ ಸಹಜ ಸಂಭಾಷಣೆಯನ್ನು ಕೈಗೊಳ್ಳಬಲ್ಲರು. 

ಹೀಗಿರುವ, ಬೆಂಗಳೂರಿಗೆ ಬಂದಾಗಲೆಲ್ಲಾ ಸಿಗುವ, ಒಂದು ಹರಟೆಗೆ ಸದಾ ಸಿದ್ಧರಿರುವ ಗೆಳೆಯ ರಾಮ್‌ಗೆ ಪದ್ಮಭೂಷಣ ದೊರೆತಿರುವುದು ನನಗೆ ಅತ್ಯಂತ ಖುಷಿಯ ವಿಷಯ. ಈ ಬೆಳಿಗ್ಗೆ ಅವರಿಗೆ ಫೋನ್ ಮಾಡಿದಾಗ ಅಭಿನಂದನೆಯ ನಂತರದ ಮಾತುಕತೆ ಎಂದಿನಂತೆಯೇ ಇತ್ತು.. ಈ ಬಾರಿ ಬೆಂಗಳೂರಿಗೆ ಬಂದಾಗ ಅವರ ಪ್ರಿಯವಾದ ಕೋಶೀಶ್ ಹೊಟೇಲಿನಲ್ಲಿ ಒಂದು ಚಹಾ, ಪ್ರೀಮಿಯರ್/ಸೆಲೆಕ್ಟ್ ಬುಕ್ ಷಾಪಿನಲ್ಲಿ ಒಂದು ಸುತ್ತು. ಹಾಗೂ ವಿಚಾರವಿನಿಮಯ. ವ್ಯತ್ಯಾಸವೆಂದರೆ ಬ್ರಂಟನ್ ರಸ್ತೆಯ ಅವರ ಮನೆಯ ಮೂಲೆಯೊಂದರಲ್ಲಿ ಪದ್ಮಭೂಷಣ ಪ್ರಶಸ್ತಿ ತೂಗುಬಿದ್ದಿರಬಹುದು. ಅಷ್ಟೇ.




Tuesday, March 10, 2009

ನಮ್ಮ ನಡುವೆಯೇ ಇರುವ ಸೀಮಂತಿನಿ ನಿರಂಜನ

ಮೇ ೨೭ ರಾತ್ರೆ ಹನ್ನೊಂದಕ್ಕೆ ಸೀಮಂತಿನಿ ನಿರಂಜನ ತೀರಿಕೊಂಡರೆಂಬ ಸುದ್ದಿ ಎಸ್.ಎಮ್.ಎಸ್ ಮೂಲಕ ಬಂತು. ಮುಂಜಾನೆ ದಸ್ತಕಾರ್ ಆಂಧ್ರಾದಿಂದ ಫೋನು. ಈ ಸುದ್ದಿಯು ದುಃಖ ಒಂದು ವಿಚಿತ್ರರೀತಿಯದ್ದು. ಎರಡು ವರುಷಗಳ ಕೆಳಗೆ ನನಗೆ ಸೀಮಂತಿನಿ ಒಂದು ಹೆಸರು ಮಾತ್ರ. ಅನುಪಮಾ-ನಿರಂಜನರ ಮಗಳೆಂದೂ, ನಿರಂಜನರ ಸಮಗ್ರ ಕೃತಿಗಳನ್ನು ಐಬಿ‌ಎಚ್‍ನವರು ತರುತ್ತಿದ್ದಾಗ ಅವರ ಕೃತಿಗಳ ಹಕ್ಕುಗಳು ಆಕೆಯ ಬಳಿಯಿದೆ ಎಂದೂ ನಾನು ಕಂಡಿದ್ದೆ. ಆಕೆ ಸಮಾಜಶಾಸ್ತ್ರದಲ್ಲಿ ಉನ್ನತ ಪದವಿ ಪಡೆದಿದ್ದರರು. ಇ.ಪಿ.ಡಬ್ಲುವಿನಲ್ಲಿ ಯಾವಾಗಲಾದರೂ ಬರೆಯುತ್ತಿದ್ದ ಆಕೆಯ ಉತ್ತಮ ಲೇಖನಗಳನ್ನು ನಾನು ನೋಡಿದ್ದೆ. ಆಕೆಯ ಸಹೋದರಿ ತೇಜಸ್ವಿನಿಯ ಜೊತೆಗೂಡಿ "ಸ್ತ್ರೀವಾದಿ ಸಹಿತ್ಯ ವಿಮರ್ಶೆ" ಅನ್ನುವ ಪುಸ್ತಕವನ್ನೂ ಆಕೆ ಸಂಪಾದಿಸಿದ್ದರು. ಎಂದಿನಂತೆ ಅದನ್ನು ರಾಜು ಮೇಷ್ಟರು ಪ್ರಕಟಿಸಿದ್ದರು.

ಸೀಮಂತಿನಿಯ ಪರಿಚಯ ಆದದ್ದು ಆಕೆಯದೇ ಒಂದು ಪತ್ರದಿಂದ. ಹೈದರಾಬಾದಿನಲ್ಲಿ ಆಕೆ ಕೆಲಸ ಮಾಡುತ್ತಿದ್ದ ದಸ್ತಕಾರ್ ಆಂಧ್ರಾದ ಒಂದು ಸೆಮಿನಾರಿಗೆ ನನ್ನನ್ನು ಆಹ್ವಾನಿಸಿದ್ದರು. ಸಹಕಾರಿಕ್ಷೇತ್ರದಲ್ಲಿಯ ನನ್ನ ಕೆಲ ಲೇಖನಗಳನ್ನು ಆಕೆ ನೋಡಿದ್ದರಂತೆ. ಭೇಟಿಯಾದಾಗ ಕನ್ನಡದಲ್ಲಿ
 ಕಥೆ ಬರೆಯುವ ಶ್ರೀರಾಮ್ ನೀವೇನಾ ಅಂತ ಕೇಳಿದ್ದರು. ಹೀಗೆ ಕನ್ನಡದವರೇ ಆದ, ಸಾಹಿತ್ಯದ ಕೊಂಡಿಗಳಿದ್ದ ನಾವುಗಳು ಬೇರೆಯದೇ ನಮ್ಮ ನಮ್ಮ ವೃತ್ತಿಯ ಸಂದರ್ಭದಲ್ಲಿ ಭೇಟಿಯಾಗಿದ್ದೆವು.

ನಂತರ ದಸ್ತಕಾರ್ ಸಂಸ್ಥೆಗೆ ನಾನು ಅನೇಕ ಬಾರಿ ಭೇಟಿನೀಡಿದೆ. ಮೊದಲಬಾರಿಗೆ ಅಲ್ಲಿಗೆ ಕರೆಸಿಕೊಂಡಾಗ ಹೈದರಾಬಾದಿನಲ್ಲಿ ಯಾವ ಹೊಟೇಲಿನಲ್ಲೂ ರೂಮಿಲ್ಲ. ಮನೆಗೇ ಬನ್ನಿ ಅಂದಿದ್ದರು. ಸಂಜೆ ಊಟ ಮಾಡಿ ಆಕೆಯ ಗಂಡ ಶಶೀಜ್ ಹೆಗಡೆಯ ಜೊತೆ ಸುಮಾರಷ್ಟು ಕಾಲ ಹರಟೆ ಕೊಚ್ಚಿದ್ದು ನೆನಪಿದೆ. ಸೀಮಂತಿನಿಗೆ ಕ್ಯಾನ್ಸರ್ ಇತ್ತೆಂದು ನನಗೆ ಬಹಳ ಕಾಲ ಗೊತ್ತೇ ಇರಲಿಲ್ಲ. ಒಮ್ಮೆ ನನ್ನನ್ನು ಹೋಟೇಲಿನ ಬಳಿ ಬಿಡುತ್ತಾ ಪಕ್ಕದಲ್ಲಿದ್ದ ಯಶೋಧಾ ಆಸ್ಪತ್ರೆಯನ್ನು ತೋರಿಸಿ "ಇಲ್ಲೇ ನನ್ನ ಟ್ರೀಟ್‍ಮೆಂಟ್ ಆಗಿತ್ತು" ಅಂದಿದ್ದರು. ಆ ನಂತರ ಇತರರನ್ನು ಕೇಳಿದಾಗ ನನಗೆ ತಿಳಿದದ್ದು ಆಕೆಗೆ ಕ್ಯಾನ್ಸರ್ ಇತ್ತಲ್ಲದೇ ಒಂದು ಬಾರಿ ಟ್ರೀಟ್‍ಮೆಂಟಾಗಿ, ಎರಡನೆಯ ಬಾರಿ ರಿಲ್ಯಾಪ್ಸ್ ಆಗಿತ್ತು ಎನ್ನುವುದು.

ಗುಂಗುರು ಕೂದಲಿನ ಸೀಮಂತಿನಿ ಎಂದೂ ಬೇಸರದಿಂದ ಇದ್ದದ್ದು ನಾನು ಕಂಡಿಲ್ಲ. ಆಗಾಗ ಫೋನ್ ಮಾಡಿ "ಹೇಗಿದ್ದೀರಿ?" ಎಂದು ಕೇಳಿದರೆ "ನೋವು, ಆದರೂ ಕೆಲಸಕ್ಕೆ ಹೋಗಿ ಬರುತ್ತಿದ್ದೀನಿ.. ಪರವಾಗಿಲ್ಲ.." ಎಂದೇ ಹೇಳುತ್ತಿದ್ದರು. ಹೊಸ ಓದಿನ ಬಗ್ಗೆ ಯಾವಾಗಲೂ ಆಸಕ್ತರಾಗಿರುತ್ತಿದ್ದರು. ರಾಣಿ ಶಿವಶಂಕರ ಶರ್ಮಾರ "ದ ಲಾಸ್ಟ್ ಬ್ರಾಹ್ಮಿನ್" ಓದಲು ನನಗೆ ಆಕೆಯೇ ಸಲಹೆ ನೀಡಿದ್ದರು. ದೇಶಕಾಲದ ಬಗ್ಗೆ ಮಾತನಾಡಿದಾಗ ಅದಕ್ಕೆ ಚಂದಾ ಕಟ್ಟಲು ಆಸಕ್ತಿ ತೋರಿ ಪತ್ರಿಕೆಯನ್ನು ತರಿಸಿಕೊಂಡಿದ್ದರು. ಒಂದು ರೀತಿಯಲ್ಲಿ ಆರಕ್ಕೇಳದೇ ಮೂರಕ್ಕಿಳಿಯದೇ ಮೌನವಾಗಿ ಇದ್ದುಬಿಡುತ್ತಿದ್ದರು. ದಸ್ತಕಾರ್‍ ಸಂಸ್ಥೆಯ ಆಫೀಸಿನಲ್ಲಿ ನೆಲದ ಮೇಲೆ ನ್ಯೂಸ್ ಪೇಪರ್ ಹಾಸಿ ಅವರುಗಳೆಲ್ಲಾ ತಂದ ಡಬ್ಬಿಯಿಂದ ಊಟ ಹಂಚಿ ಸಹನಾಭುನಕ್ತು ಮಾಡುತ್ತಿದ್ದದ್ದು ಮರೆಯಲಾಗದ ಮಾತು.

ಇಂದು ಆಕೆ ಇಲ್ಲವೆಂದರೆ ಯಾಕೋ ಹೈದರಾಬಾದಿನ ಒಂದು ಭಾಗ ಇಲ್ಲವಾದಂತಿದೆ. ಸೀಮಂತಿನಿ ಹೆಚ್ಚು ಬರೆಯಲಿಲ್ಲ. ಆದರೆ ಅರ್ಥಪೂರ್ಣವಾದದ್ದನ್ನು ಬರೆದಿದ್ದರು. ಎಂದೂ ನಗುನಗುತ್ತಿದ್ದ ಆಕೆ ನೋವಿನ ನಡುವೆಯೇ ಇಲ್ಲವಾದರು. ನನಗಿಂತ ಕಿರಿಯರಾದ ಆಕೆ ಪುಟ್ಟ ಇಳಾಳನ್ನೂ, ಯೂನಿವರ್ಸಿಟಿಯ ಮೇಷ್ಟರು ಶಶೀಜರನ್ನು ಬಿಟ್ಟು ಹೋಗಿದ್ದಾರೆ. ಆದರೆ ಆಕೆ ನಮ್ಮ ನಡುವೆ ಇದ್ದಾರೆ ಅಂತಲೇ ನನಗನ್ನಿಸುತ್ತದೆ. ಹೆಚ್ಚು ಮಾತಾಡದೇ, ಧ್ವನಿಯೇರಿಸದೇ ಇಲ್ಲೇ ಎಲ್ಲೋ ಅಡಗಿದ್ದಾರೆ... ನೋವಿನಿಂದ ಮುಕ್ತರಾಗಿದ್ದಾರೆ...

Labels: 

Monday, March 9, 2009

ಇಳಾಬೇನ್ ಮತ್ತು ಸೇವಾ: ಒಂದು ಖಾಸಗೀ ಪ್ರಬಂಧ

ಗುಜರಾತಿನಲ್ಲಿ ಜೀವನದ ಅರ್ಧಭಾಗದಷ್ಟು ಕಳೆದಿರುವ ನನ್ನಂಥವರು ಆ ರಾಜ್ಯದಲ್ಲೇ ಇದ್ದು, ಜನ ಮತ್ತು ದೇಶಕ್ಕಾಗಿ ಅಪ್ರತಿಮ ಕೆಲಸ ಮಾಡುತ್ತಿರುವ ತುಂಬಾ ಭಿನ್ನವಾಗಿರುವ ಇಬ್ಬರನ್ನು ಬೆರಗಿನಿಂದ, ಗೌರವದಿಂದ ಕಾಣದೇ, ಅವರಿಂದಪ್ರಭಾವಿತರಾಗದೇ ಇರುವುದು ಕಷ್ಟದ ಮಾತು. ಹಾಲು ಉತ್ಪಾದಕರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದ ಕುರಿಯನ್ ಬಗ್ಗೆ ನಾನು ಈಗಾಗಲೇ ಬರೆದಿದ್ದೇನೆ. ಕುರಿಯನ್ ಅವರ ಕೆಲಸ ಹೆಚ್ಚಿನಂಶ ಗ್ರಾಮ್ಯ ಪ್ರದೇಶಕ್ಕೆ ಸೀಮಿತವಾಗಿತ್ತು. ಪರಿಚಯದವರಿಂದ ಇಳಾಬೇನ್ ಎಂದು ಪ್ರೀತಿಯಿಂದ ಕರೆಸಿಕೊಳ್ಳಲ್ಪಡುವ ಇಳಾ ಭಟ್ ಕುರಿಯನ್‌ಗಿಂತ ತುಂಬಾ ಭಿನ್ನವಾಗಿದ್ದಾರೆ. ಆಕೆ ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ. ಕಾಣಿಸಿಕೊಂಡರೂ ಧ್ವನಿಯೇರಿಸಿ ಮಾತನಾಡುವುದಿಲ್ಲ. ಮೇಜು ಗುದ್ದಿ ಕೂಗಾಡುವುದಿಲ್ಲ. ಹಾಗೆ ನೋಡಿದರೆ ಆಕೆ ಒಂದು ಸೊಳ್ಳೆಗೂ ಹಾನಿಯುಂಟುಮಾಡಬಹುದು ಅನ್ನಿಸುವುದಿಲ್ಲ. ಆಕೆಯ ಆಕಾರ ಗಾಂಧೀಜಿಯಂತೆ ಪುಟ್ಟದು, ಮಾತು ಮೃದು. ಆದರೆ ಆಕೆ ಕೈಗೊಂಡ ಯಾವುದೇ ಕೆಲಸವನ್ನು ಹಿಡಿದು ಹೊರಟಾಗ ಆ ಕೆಲಸಕ್ಕೆ ಆಕೆ ಹಾಕಿ ಹಿಡಿವ ಪಟ್ಟು ಗಟ್ಟಿಯಾದದ್ದು, ಉಕ್ಕಿನಂಥದ್ದು. ಜೀವಮಾನವಿಡೀ ಗುಜರಾತಿನ ಬಡ ಹೆಣ್ಣುಮಕ್ಕಳ ಸಮುದಾಯದ ಪರವಾಗಿ ಎಡಬಿಡದೇ ಕೆಲಸಮಾಡಿದ್ದಾರೆ. ಈಚೆಗೆ ಆಕ್ಸ‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಅವರು ಆಕೆಯ ಕಾರ್ಯಜೀವನದ ಬಗೆಗೆನ ಪುಸ್ತಕ "We are Poor, But so Many" [ನಾವು ಬಡವರು, ಆದರೆ ಎಷ್ಟೊಂದು ಜನ" ಅನ್ನುವ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಕುರಿಯನ್ ಅವರ "I Too Had a Dream" [ನನಗೂ ಒಂದು ಕನಸಿತ್ತು] ಪುಸ್ತಕದಂತೆ ಇದೂ ಹೆಚ್ಚಾಗಿ ಇಳಾ ಅವರ ಖಾಸಗೀ ಜೀವನಕ್ಕಿಂತ ಹೆಚ್ಚಾಗಿ ಆಕೆಯ ವೃತ್ತಿ ಜೀವನದ ಬಗ್ಗೆಯೇ ಹೆಚ್ಚಿನ ಮಾಹಿತಿ ನೀಡುತ್ತದೆ. ಇಳಾ ಕೆಲ ಸ್ತ್ರೀವಾದಿ, ಪರಿಸರವಾದಿಗಳಂತೆ ಕೂಗಾಡುವ ಧರಣಿಕೂಡುವ "ಸಾಮಾಜಿಕ ಕಾರ್ಯಕರ್ತೆ"ಯ ಜಾಯಮಾನದವರಲ್ಲ. ಅವರು ಮಾತಿಲ್ಲದೇ ಸಾಧಿಸಿದ್ದೇ ಹೆಚ್ಚು. ಕುರಿಯನ್‌ಗೂ ಇಳಾಗೂ ಇರುವ ವ್ಯತ್ಯಾಸ ಅವರ ಕೆಲಸದ ಶೈಲಿ, ವ್ಯಕ್ತಿತ್ವದಲ್ಲಿ ಮಾತ್ರ ಇದ್ದದ್ದಲ್ಲ. ಅದು ಅವರು ಜನರನ್ನು ನೋಡುವ, ಜನರೊಂದಿಗೆ ಕೆಲಸಮಾಡುವ ರೀತಿಗೂ ವ್ಯಾಪಿಸಿದೆ. ಕುರಿಯನ್ ಅಧ್ಯಕ್ಷರಾಗಿದ್ದ ಸಂಸ್ಥೆಯಲ್ಲಿ ನಾನು ಅನೇಕ ವರ್ಷ ಕೆಲಸ ಮಾಡಿದ್ದರೂ, ಆತ ಕರೆದ ಮೀಟಿಂಗುಗಳಲ್ಲಿ ಅನೇಕ ಬಾರಿ ಭಾಗವಹಿಸಿದ್ದರೂ ಆತ ನನನ್ನು ಗುರುತಿಸಲಾರರು. ಆದರೆ ಇಳಾ ಹಾಗಲ್ಲ. ಯಾವಾಗಲೂ ಎಲ್ಲಿದ್ದರೂ ತಮ್ಮ ಪರಿಚಯದವರನ್ನರಸಿ ಹೋಗಿ ಒಳ್ಳೆಯ ಮಾತುಗಳನ್ನು ಆಕೆ ಆಡುತ್ತಾರೆ. ಎಷ್ಟರ ಮಟ್ಟಿಗೆಂದರೆ - ಅವರ ಪುಸ್ತಕದ ಮೇಲೆ ಹಸ್ತಾಕ್ಷರವನ್ನು ಕೋರಿದಾಗ ಆಕೆ ಬರೆದದ್ದು ಈ ಮಾತುಗಳು: "ಪ್ರಿಯ ಶ್ರೀರಾಮ್, ನಿಮ್ಮ ಮುಂದವರೆದ ಮಾರ್ಗದಶನಕ್ಕೆ, ವಿಶ್ವಾಸ, ಪ್ರೀತಿಯೊಂದಿಗೆ.." ಆದರೆ ಕುರಿಯನ್ ಕಡೆಯಿಂದ ನನ್ನಲ್ಲಿರುವ ಹಸ್ತಾಕ್ಷರದ ಕಾಗದವೆಂದರೆ ಯಾವುದೋ ಒಂದು ಸೆಮಿನಾರಿಗೆ ನನ್ನನ್ನು ಆಹ್ವಾನಿಸಿದ ಪತ್ರವಷ್ಟೇ. ಅದನ್ನೂ ನಾನು ಜಾಗರೂಕವಾಗಿ ಇರಿಸಿಕೊಂಡಿದ್ದೇನೆ.

ಇಳಾಬೇನ್ ತಮ್ಮ ವೃತ್ತಿಯನ್ನು ಯುವ ವಕೀಲರಾಗಿ ಪ್ರಾರಂಭಿಸಿದರು. ಟೆಕ್ಸ್ಟೈಲ್ ಲೇಬರ್ ಅಸೋಸಿಯೇಷನ್ ಅನ್ನುವ ವಸ್ತ್ರಕಾರ್ಮಿಕರ ಸಂಘದಲ್ಲಿ ಮೊದಲ ಕೆಲಸ. ಆಕೆಗೆ ಆಗಿನಿಂದಲೂ ಮಾರ್ಗದರ್ಶನ ಮತ್ತು ಸಹಕಾರ ನೀಡಿದ್ದು ಆಕೆಯ ಪತಿ ರಮೇಶ್ ಭಟ್. ರಮೇಶ್ ವೃತ್ತಿಯಿಂದ ಮೇಷ್ಟರು. ಆತ ಆಕೆಗೆ ಸಹಚರ, ಗೆಳೆಯ, ಮಾರ್ಗದರ್ಶಿ ಮತ್ತು ಶಕ್ತಿಯ ಸೆಲೆ. ಆಕೆ ಪುಸ್ತಕವನ್ನ ಸಹಜವಾಗಿಯೇ ರಮೇಶ್ ನೆನಪಿಗೆ ಅರ್ಪಿಸಿದ್ದಾರೆ. ಆಕೆ ಕೆಲಸ ಪ್ರಾರಂಭಿಸಿದಾಗ ಆಕೆಗಿದ್ದ ಅನುಮಾನಗಳೂ ಭಯ ಎಲ್ಲವನ್ನೂ ಆಕೆಯ ಬರವಣಿಗೆಯಲ್ಲಿ ಇಳಾ ಗ್ರಹಿಸಲು ಪ್ರಯತ್ನಿಸಿದ್ದಾರೆ. 
"ಲೇಬರ್ ಕೋರ್ಟಿನಲ್ಲಿನ ಮೊದಲ ದಿನಗಳು ಆತಂಕದ್ದಾಗಿತ್ತು. ನನ್ನ ಎತ್ತರ, ಧರಿಸಿದ ಬಟ್ಟೆಯಬಗ್ಗೆ ಯಾರಾದರೂ ಏನಾದರೂ ಅಂದರೆ ನನಗೆ ಬೇಸರವಾಗುತ್ತಿತ್ತು. ಮಾತು ಹೊರಡದೇ ತಡವರಿಸುತ್ತಿದ್ದೆ. ಕೋರ್ಟಿನಲ್ಲಿ ಹೆಂಗಸರು ಎಂದೂ ಕಂಡುಬರುತ್ತಿರಲಿಲ್ಲ." ಹೀಗೆಲ್ಲಾ ಆಕೆ ಮೊದಲಿಗೆ ಬರೆದರೂ, ನಂತರದ ಬದುಕಿನಲ್ಲಿ ಅನೇಕ ಜಾಗಗಳಲ್ಲಿ ಒಂಟಿಯಾಗಿ ವೇದಿಕೆಯ ಮೇಲೆ ನಿಂತು ಮಾತನಾಡಿದ್ದಾರೆ. ಮಹಿಳೆಯರ, ಕಾರ್ಮಿಕರ ಹಕ್ಕುಗಳ ಹೋರಾಟವನ್ನು ಲಕ್ಷಾಂತರ ಮಹಿಳೆಯರ ಬೆಂಬಲದ ಆಧಾರದ ಮೇಲೆ ಕೈಗೊಂಡಿದ್ದಾರೆ. ಆಕೆಯದು ಸರಳವಾದ ಹೋರಾಟವೇನೂ ಆಗಿರಲಿಲ್ಲ.

ಅನೇಕ ಗಂಡಸರ ನಡುವೆ ಒಬ್ಬೊಂಟಿ ಹೆಣ್ಣಾಗಿ ನಿಂತು ಕೆಲಸ ಮಾಡುವುದು ಎಷ್ಟು ಕಷ್ಟ ಎಂದು ಇಳಾ ಹೇಳುವಾಗ ಅದರ ಅರ್ಥ ಗಂಡಸಾದ ನನಗೆ ಚೆನ್ನಾಗಿ ಆಗುತ್ತದೆಂದೇ ಹೇಳಬೇಕು. ಆದರೆ ನನಗೆ ಈ ರೀತಿಯ ಅನುಭವವಾದದ್ದೇ ಭಿನ್ನವಾದ ಒಂದು ಪರಿಸ್ಥಿತಿಯಲ್ಲಿ. ಕಿರುಸಾಲದ ಬಗೆಗಿನ ನನ್ನ ಪುಸ್ತಕ ಬರವಣಿಗೆಯ ಕಾಲದಲ್ಲಿ ಇಳಾ ಅಧ್ಯಕ್ಷರಾಗಿದ್ದ ಮಹಿಳಾ ಸೇವಾ ಬ್ಯಾಂಕಿಗೆ ನಾನು ಅನೇಕ ಬಾರಿ ಭೇಟಿ ನೀಡಿದ್ದೆ. ಅಂಥ ಒಂದು ಭೇಟಿಯ ಪ್ರಸಂಗದಲ್ಲಿ ನಾನು ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಜಯಶ್ರೀ ವ್ಯಾಸ್‍ಗೆ ಬ್ಯಾಂಕಿನ ಮಾಹಿತಿಯನ್ನು ಆಂತರಿಕವಾಗಿ ಹಂಚಿಕೊಳ್ಳುವ ಅವಶ್ಯಕತೆ ಮತ್ತು ಅದರಿಂದ ಆಗುವ ಉಪಯೋಗದ ಬಗ್ಗೆ ಒಂದು ಪುಟ್ಟ ಭಾಷಣವನ್ನು ನನ್ನ ಮೇಷ್ಟರ ಶೈಲಿಯಲ್ಲಿ ನೀಡಿದ್ದೆ ಅನ್ನಿಸುತ್ತದೆ. ಅದನ್ನು ಕೇಳಿದ ಜಯಶ್ರೀ ನೀವು ಈ ವಿಷಯದಬಗ್ಗೆ ನಮ್ಮ ಸ್ಟಾಫನ್ನು ಯಾಕೆ ಸಂಬೋಧಿಸಬಾರದು ಎಂದು ಕೇಳಿದರು. ಮೇಷ್ಟರಿಗೆ ಕ್ಲಾಸು ತೆಗೆದುಕೊಳ್ಳುವ ಅವಕಾಶ ಸಿಕ್ಕರೆ ಬೇಡವೆನ್ನುವುದು ಹೇಗೆ? ಬ್ಯಾಂಕಿನ ಬೋರ್ಡ್ ರೂಮಿನಲ್ಲಿ ಅವರ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಲು ಸಂತೋಷದಿಂದಲೇ ಒಪ್ಪಿದೆ. 
ಅಷ್ಟೇನೂ ಸರಳವಲ್ಲದ ಮ್ಯಾನೇಜ್‍ಮೆಂಟಿನ ಒಂದು ವಿಷಯವನ್ನು ಅವರಿಗೆ ನಾನು ಅರ್ಥವಾಗುವ ಹಾಗೆ ವಿವರಿಸಬೇಕಿತ್ತು. ಆ ಕೋಣೆಗೆ ಹೋಗಿ ನೋಡಿದಾಗ ನನಗೆ ಆಘಾತ ಕಾದಿತ್ತು. ಬೋರ್ಡ್ ರೂಮೆಂದರೆ ಸುತ್ತಲೆಲ್ಲ ಗಾದಿ ಹಾಕಿ ನೆಲದ ಮೇಲೆ ಕೂರುವ ಅವಕಾಶ ಮಾಡಿದ್ದ ದೊಡ್ಡ ಹಾಲು. ಅಲ್ಲಿ ನಾನು ಮಾತ್ರ ನಿಲ್ಲಬೇಕಿತ್ತು. ಕೂತ ಅಷ್ಟೂ ಜನ ಮಹಿಳೆಯರು! ಸುತ್ತ ಮುತ್ತ ನೋಡುತ್ತೇನೆ - ಒಂದು ಗಂಡು ನರಪಿಳ್ಳೆಯೂ ಇಲ್ಲ. [ಸೇವಾ ಬ್ಯಾಂಕಿನಲ್ಲಿ ಇಬ್ಬರೇ ಗಂಡು ಉದ್ಯೋಗಿಗಳು.. ಲಾಲ್‍ಜಿಭಾಯಿ ಜೀಪ್ ಚಲಾಯಿಸುವ ಡ್ರೈವರ್ ಮತ್ತು ಮೆನನ್‍ಭಾಯಿ, ಜಯಶ್ರೀಯ ಕಾರ್ಯದರ್ಶಿ] ಮೇಲಾಗಿ ಅವರಿಗೆ ಈ ಮಾಹಿತಿಯನ್ನು ನಾನು ಸಾಧ್ಯವಾದರೆ ಗುಜರಾತಿಯಲ್ಲಿ, ಇಲ್ಲವಾದರ ಕನಿಷ್ಟ ಹಿಂದಿಯಲ್ಲಿ ನೀಡಬೇಕಿತ್ತು! ಆಗಲೇ ಹೊರಬಂದು ನಾನು ಜಯಶ್ರೀಗೆ ಹೇಳಿದ್ದೆ.. "ಬರೇ ಗಂಡಸರೇ ಇರುವ ಕೋಣೆಯಲ್ಲಿ ಅಕ್ಷರ ತಿಳಿಯದ ಬಡ ಹೆಂಗಸರ ಮನಸ್ಥಿತಿ ಹೇಗಿರುತ್ತದೆ ಅನ್ನುವುದು ನನಗೆ ಪೂರ್ಣವಾಗಿ ಅರ್ಥವಾಗಿದೆ" ಎಂದು. ಅಂದಿನ ಕ್ಲಾಸು ತೋಪಾಗಿ ಹೋಯಿತೆನ್ನುವುದರಲ್ಲಿ ಅನುಮಾನವೇ ಇಲ್ಲ. [ಈ ರೀತಿ ನಾನು ಪಾಠಮಾಡುವಾಗ ಬೆಚ್ಚಿ ಸನ್ನಿಹಿಡಿದಂತೆ ಆದದ್ದು ಮತ್ತೊಂದು ಸಂದರ್ಭದಲ್ಲಿ ಮಾತ್ರ: ಹೆಚ್ಚಾಗಿ ಹೆಂಗಸರೇ ಇದ್ದ ಸಿ.ಬಿ.ಎಸ್.ಸಿ ಶಾಲೆಗಳ ಪ್ರಿನ್ಸಿಪಾಲರಿಗಾಗಿ ನಾವು ತಯಾರಿಸಿದ್ದ ಒಂದು ತರಬೇತಿ ಕಾರ್ಯಕ್ರಮದಲ್ಲಿ. ಎಷ್ಟೋ ದಿಗ್ಗಜ ಪಾಲಕರನ್ನು ತಮ್ಮ ಕೋಣೆಯಾಚೆ ಕಾಯಿಸಿ ಅಡ್ಮಿಶನ್‌ಗೆ ಚಳ್ಳೇಹಣ್ಣು ತಿನ್ನಿಸುವ, ಅದ್ಭುತ ವಾಚಾಳಿತನವಿರುವ, ಅನುಭವೀ ಗುಂಪಿಗೆ ನಾನು ಪಾಠ ಮಾಡಿದ್ದೆ. ಕ್ಲಾಸಾದ ನಂತರ ನನ್ನ ಪಾಠದ ಬಗ್ಗೆ ಅಲ್ಲದೇ ನಾನು ನಿಂತ ರೀತಿ, ಭಾಷೆ ಉಪಯೋಗಿಸಿದ ರೀತಿ, ಉದಾಹರಣೆಗಳನ್ನು ಕೊಟ್ಟರೀತಿ, ಬೋರ್ಡಿನ ಮೇಲೆ ಚಾಕ್ ಚಲಾಯಿಸಿದ ರೀತಿ, ಎಲ್ಲದರ ಬಗೆಗೂ ನನಗೆ ಉಪದೇಶ ನೀಡಿ, ನಾನು ಪಾಠವನ್ನೇ ಮಾಡಿಲ್ಲವೇನೋ ಅನ್ನುವ ಭಾವನೆ ಬರುವಂತೆ ಅವರುಗಳು ಮಾಡಿಬಿಟ್ಟಿದ್ದರು!! ಆದರೆ ಆ ಸಂದರ್ಭವೇ ಬೇರೆ, ಬಿಡಿ.]

ಇಳಾರ ಕೆಲಸದ ಮಹತ್ವವನ್ನು ಅರಿಯಲು ಸೇವಾ ಗುಂಪಿನ ಸಂಸ್ಥೆಗಳು ಯಾವ ಸಂದರ್ಭ-ಪರಿಸರದಲ್ಲಿ ಬೆಳೆದವು ಅನ್ನುವುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಉದಾಹರಣೆಗೆ ಇಳಾ ತಮ್ಮ ಪುಸ್ತಕದಲ್ಲಿ ಇದನ್ನು ವಿವರಿಸುತ್ತಾರೆ "... ನಾವು ನಮ್ಮ ಸ್ವ-ಉದ್ಯೋಗಿ ಕಾರ್ಮಿಕರ ಸಂಘಗಳನ್ನು ನೋಂದಾಯಿಸುವುದು ಕಷ್ಟದ ಮಾತಾಗಿತ್ತು. ರಸ್ತೆಯಲ್ಲಿರುವ ಚಿಂದಿ-ಬಾಟಲಿ-ಪ್ಲಾಸ್ಟಿಕ್ ವಸ್ತುಗಳನ್ನು ಹೆಕ್ಕುವ Ragpickersಗಾಗಿ ಸಹಕಾರ ಸಂಘ ನೋಂದಾಯಿಸಲು ಹೋದಾಗ, ಅದು ಏನೂ "ತಯಾರಿಸು"ವುದಿಲ್ಲವಾದ್ದರಿಂದ, ಸಂಘವನ್ನು ನೋಂದಾಯಿಸುವುದು ಕಷ್ಟವಾಯಿತು. ಹಾಗೆಯೇ ಸೂಲಗಿತ್ತಿಯರ ಸಹಕಾರ ಸಂಘದ ವಿಷಯದಲ್ಲೂ ಕಷ್ಟ ಉಂಟಾಯಿತು. ಮಕ್ಕಳನ್ನು ಪ್ರಸವಿಸುವ ಕೆಲಸ ಹೇಗೆ ಆರ್ಥಿಕ ಚಟುವಟಿಕೆಯ ಕೆಳಗೆ ಬರುತ್ತದೆ ಅನ್ನುವ ಪ್ರಶ್ನೆಯನ್ನು ಎತ್ತಲಾಯಿತು. ವಿಡಿಯೋ ಚಿತ್ರಿಸುವ ಹೆಣ್ಣುಮಕ್ಕಳ ಸಹಕಾರ ಸಂಘವನ್ನು ಏರ್ಪಾಟು ಮಾಡಲು ಹೋದಾಗ ಅದರ ಸದಸ್ಯರಾದ ಕ್ಯಾಮರಾ ತಜ್ಞೆಯರಿಗೆ, ಧ್ವನಿಗ್ರಹಣ ತಜ್ಞೆಯರಿಗೆ, ನಿರ್ಮಾಪಕರಿಗೆ, ನಿರ್ದೇಶಕರಿಗೆ ಅಕ್ಷರಜ್ಞಾನ ಇಲ್ಲವೆಂಬ ಕಾರಣಕ್ಕೆ ನೋಂದಣಿಯನ್ನು ನಿರಾಕರಿಸಿದರು [ಪು ೧೭]." ಇಳಾರ ಶಕ್ತಿ ಇಂಥ ವಿಭಿನ್ನ ಕಾಯಕದಲ್ಲಿ ತೊಡಗಿರುವ ಮಹಿಳೆಯರನ್ನು ಒಂದೇ ವೇದಿಕೆಯ ಮೇಲೆ ತರುವುದರಲ್ಲಿದೆ. ಅವರ ಹಕ್ಕುಗಳಿಗಾಗಿ ಹೋರಾಟ ಮಾಡುವುದು, ಅವರಿಗೆ ಒಂದು ಸ್ವಸ್ವರೂಪವನ್ನು ಕೊಡುವುದು, ಎಲ್ಲರಿಗೂ ಬೇಕಾದ ಸೇವೆಗಳನ್ನೊದಗಿಸುವುದು ಮತ್ತು ಸಂಸ್ಥೆಯ ಹೆಸರಿಗೆ ತಕ್ಕಂತೆ ಸೇವಾ ಕಾರ್ಯ ಮಾಡುವುದು ಹಾಗೂ ಈ ಎಲ್ಲದರಲ್ಲೂ ಸಾಫಲ್ಯಪಡೆಯುವುದರಲ್ಲಿದೆ. ಸ್ವ-ಉದ್ಯೋಗಿಗಳ ಕಾರ್ಮಿಕ ಸಂಘ ಅನ್ನುವುದು ಒಂದು ವಿರೋಧಾಭಾಸವೇ ಸರಿ. ಆದರೂ ಹೀಗೆ ಹಂಚಿಹೋಗಿರುವ ಸ್ವ-ಉದ್ಯೋಗಿಗಳನ್ನು ಒಂದೆಡೆ ಕೂಟ ಮಾಡುವುದರಲ್ಲಿ ಸಾಫಲ್ಯತೆ ಪಡೆದದ್ದರಿಂದಲೇ ಇಳಾ ತಮ್ಮ ವಾರಗೆಯವರಿಗಿಂತ ಭಿನ್ನವಾಗಿ [ಕುಳ್ಳಗಿದ್ದರೂ] ಎತ್ತರವಾಗಿ ನಿಲ್ಲುವಂತಾಗಿದೆ.

ಇಳಾ ಅವರಿಗೆ ಅನೇಕ ಪ್ರಶಸ್ತಿಗಳು ಬಂದಿವೆ. ಸಮೂಹ ಸೇವೆಗಾಗಿ ರಾಮನ್ ಮ್ಯಾಗಸಸೇ ಪ್ರಶಸ್ತಿ, ಪದ್ಮಶ್ರೀ- ಪದ್ಮಭೂಷಣ, ರಾಜ್ಯ ಸಭೆಯ ಸದಸ್ಯತ್ವ, ಯೋಜನಾ ಆಯೋಗದ ಸದಸ್ಯತ್ವ, ಹಾರ್ವರ್ಡ್ ಮತ್ತು ಯೇಲ್ ಸಂಸ್ಥೆಗಳಿಂದ ಗೌರವ ಡಾಕ್ಟರೇಟ್, ಮತ್ತು ಆಶ್ಚರ್ಯವೆಂಬಂತೆ ಇಕನಾಮಿಕ್ ಟೈಂಸ್ ಮತ್ತು ಬಿಜಿನೆಸ್ ಸ್ಟಾಂಡರ್ಡ್ ಪತ್ರಿಗೆಗಳಿಂದ ಬರುವು "ಅತ್ಯುತ್ತಮ ಮಹಿಳಾ ಉದ್ಯಮಿ" ಪ್ರಶಸ್ತಿಯೂ ಆಕೆಗೆ ದಕ್ಕಿದೆ. [ಅತ್ಯುತ್ತಮ ಉದ್ಯಮಪತಿ ಅನ್ನುವ ಪ್ರಯೋಗಕ್ಕೆ ಸ್ತ್ರೀಲಿಂಗ ಉದ್ಯಮಪತ್ನಿ ಆಗುವುದಂತೂ ಸಾಧ್ಯವಿಲ್ಲವಲ್ಲ!!]. ಈ ರೀತಿಯ ಪ್ರಶಸ್ತಿಗಳು ಬಂದಾಗ ಇಳಾ ಎಂದೂ ಒಬ್ಬರೇ ಹೋಗಿ ಅದನ್ನು ಸ್ವೀಕರಿಸಿದವರಲ್ಲ. ಯಾವಾಗಲೂ ತಮ್ಮ ಸಂಸ್ಥೆಯ ಸದಸ್ಯರಾದ ಒಂದಿಬ್ಬರಾದರೂ ಮಹಿಳೆಯರನ್ನು ಆಕೆ ಯಾವಾಗಲೂ ಜೊತೆಗೆ ಕರೆದೊಯ್ಯುತ್ತಾರೆ. "ಸೇವಾ" ಸಂಸ್ಥೆಗಳು ಈ ಅಲಿಖಿತ ನಿಯಮವನ್ನು ಯಾವಾಗಲೂ ಪಾಲಿಸುತ್ತವೆ. ಹಳ್ಳಿಯ ಅಥವಾ ನಗರದ ಬಡ ಹೆಂಗಸರನ್ನು ಪಂಚತಾರಾ ಹೋಟೇಲುಗಳಲ್ಲಿ ನಡೆವ ಈ ಸಮಾರಂಭಗಳಿಗೆ ಕರೆದೊಯ್ಯುವುದು ಸೇವಾದ ಸಂಸ್ಥೆಯ ಒಂದು ಹೆಗ್ಗಳಿಗೆಯಾಗಿದೆ. ಅಷ್ಟೇ ಅಲ್ಲ, ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯವರು ರೂಪಿಸಿ, ಬಾನಸ್‌ಕಾಂಠಾದ ಕೆಲ ಮಹಿಳೆಯರು ಕಸೂತಿಮಾಡಿ ಹೊಲೆದ ಬಟ್ಟೆಗಳ ಬಿಡುಗಡೆ ಸಮಾರಂಭವೊಂದರಲ್ಲಿ ಹೆಸರಾಂತ ಮಾಡೆಲ್‌ಗಳ ಜೊತೆಜೊತೆಗೇ ಈ ಬಡನಾರಿಯರೂ ರ್‍ಯಾಂಪ್ ಮೇಲೆ ನಡೆದಾಡಿದ್ದೂ ಉಂಟು. ಇದಕ್ಕಿಂತ ಉತ್ತಮ ರೀತಿಯಲ್ಲಿ ತಮ್ಮ ವಸ್ತುಗಳನ್ನು ಮಾರಾಟಮಾಡುವ ವಿಧಾನವಿದೆಯೇ?



ಬಾನಸ್‌ಕಾಂಠಾ, ಕಛ್ ಪ್ರಾಂತದ ಕಸೂತಿ ಕೆಲೆಯಿಂದ ಕೂಡಿದ ಮಹಿಳೆಯರಿಂದ ತಯಾರಿಸಲ್ಪಟ್ಟ ವಸ್ತ್ರಗಳನ್ನು ಮಾರಾಟಮಾಡುವುದಕ್ಕೆ ಸ್ಥಾಪಿತವಾದ ಸೇವಾ ಟ್ರೇಡ್ ಫೆಸಿಲಿಟೇಷನ್ ಸೆಂಟರ್ ಅನ್ನುವ ಸಂಸ್ಥೆಯ ನಿರ್ವಹಣಾ ಮಂಡಲಿಯಲ್ಲಿ ಇರುವವರು ಯಾರು? - ಸೇವಾ ಉದ್ಯೋಗ ಮಂಡಲಿಯಿಂದ ಒಂದಿಬ್ಬರು, ಒಬ್ಬ ಪ್ರೊಫೆಸರ್, ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನಿರಕ್ಷರಿಗಳಾದ ಕಸೂತಿ ಕಲಾವಿದರಿಬ್ಬರು. ಅವರಿಗೆ ಎಜೆಂಡಾದ ಕಾಗದ ಓದಲು ಬರುವುದಿಲ್ಲವಾದರೂ, ಯಾರಾದರೂ ಅವಾಕ್ಕಾಗುವಂತಹ ಪ್ರಶ್ನೆಗಳನ್ನು ಕೇಳಬಲ್ಲರು. ಅವರನ್ನು ನಿರ್ವಹಣಾ ಮಂಡಲಿಯಲ್ಲಿ ಕೂಡಿಸುವುದರ ಹಿಂದಿನ ಉದ್ದೇಶವೇನಿರಬಹುದು? ಆ ಮಹಿಳೆಯರಿಗೆ ಹೊರಗಿನ ಪ್ರಪಂಚ ಅರ್ಥವಾಗಿ ಅವರ ಆಂತರಿಕ ಶಕ್ತಿ ಬೆಳೆಯಲೆಂದೇ ಹಾಗೆ ಮಾಡಿರಬಹುದೋ? ಅಥವಾ ಅಲ್ಲಿರುವ ನಾಗರೀಕ ಪ್ರೊಫೆಸರು ಮತ್ತು ಇತರ ಜನರಿಗೆ ತಾವು ಯಾರ ಜೊತೆ/ಯಾರಿಗಾಗಿ ಕೆಲಸ ಮಾಡುತ್ತಿದ್ದೇವೆ ಅನ್ನುವ ಅರಿವಿರಲಿ ಎಂದೋ? ನನಗೆ ಇದರೆ ಉದ್ದೇಶ ಏನಿರಬಹುದೆಂದು ತಿಳಿದಿಲ್ಲವಾದರೂ, ಈ ಎರಡೂ ಉದ್ದೇಶಗಳನ್ನು ಈ ಪ್ರಕ್ರಿಯೆ ಸಾಧಿಸುತ್ತದೇನೋ.


ಈ ರೀತಿಯ ಮಾನಸಿಕ ಕಟ್ಟುಪಾಡುಗಳಿಂದ ಬಿಡುಗಡೆ ಒದಗಿಸುವಲ್ಲಿ ಸೇವಾ ಪರಿವಾರದ ಮಹತ್ವ ಇದೆ. ಇಲ್ಲಿಗೂ-ಅಲ್ಲಿಗೂ, ನಮಗೂ-ನಿಮಗೂ, ನಗರಕ್ಕೂ-ಹಳ್ಳಿಗೂ, ಬಡವರಿಗೂ-ಬಲ್ಲಿದರಿಗೂ, ನಿರಕ್ಷರಿಗಳಿಗೂ-ವಿದ್ಯಾವಂತರಿಗೂ, ಬುದ್ಧಿವಂತರಿಗೂ-ಓದುಕಲಿತವರಿಗೂ ನಡುವೆ ಯಾವುದೇ ಅಡಚಣೆಯಿಲ್ಲದ ಸೇತುವೆಗಳನ್ನು ಕಟ್ಟಿ ಅಂತರವೇ ಇಲ್ಲದಂತೆ ಮಾಡುವುದರಲ್ಲಿಯೇ ಅವರ ಕೆಲಸದ ಮಹತ್ವವಿದೆ. ಈ ರೀತಿಯಾಂದತಹ ಸೀಮೋಲ್ಲಂಘನದ ಕೆಲಸವನ್ನು ನಾನು ನೋಡಿರುವುದು ಕೇವಲ ಮತ್ತೊಂದು ಜಾಗದಲ್ಲಿ ಮಾತ್ರ. ಐ.ಎ.ಎಸ್ ಅಧಿಕಾರಿ ವಿಜಯಕುಮಾರ್ ಅವರ ನೇತೃತ್ವದಲ್ಲಿ ಆಂಧ್ರಪ್ರದೇಶ ಸರಕಾರ ನಡೆಸುವ ವೆಲುಗು [ಬೆಳಕು] ಕಾರ್ಯಕ್ರಮದಲ್ಲಿ ನನಗಿದು ಕಂಡುಬಂದಿತ್ತು. ಪ್ರತಿ ಹಳ್ಳಿಯಲ್ಲೂ ವೆಲುಗುವಿನ ಸ್ವ-ಸಹಾಯ ಗುಂಪುಗಳಿಗೆ ಭೇಟಿ ನೀಡಿದಾಗ ಅಲ್ಲಿನ ಮಹಿಳೆಯರು ನಿಮ್ಮನ್ನು ಸ್ವಾಗತಿಸುವುದು ಕೈ ಕುಲುಕುವುದರ ಮೂಲಕ. ಕೈಕುಲುಕುವುದು ಕೇವಲ ಸಾಂಕೇತಿಕವಾಗಿರಬಹುದು, ಆದರೂ ಒಮ್ಮೆ ಕೈಕುಲುಕುವುದರಿಂದ ಅಸ್ಪೃಶ್ಯತೆಯನ್ನು ದೂರಮಾಡಿದ ಹಾಗಾಯಿತು. ಅಲ್ಲದೇ ಇಬ್ಬರ ಕೈಕುಲುಕುವಿಕೆಯಿಂದ ಗಂಡಸಿಗೂ-ಹೆಂಗಸಿಗೂ, ನಗರಕ್ಕೂ-ಹಳ್ಳಿಗೂ ಇರುವ ಈ ಅಂತರಕ್ಕೆ ಸೇತುವೆ ನಿರ್ಮಿಸಿದಂತಾಯಿತು. ಇದು ಸಮಾಜ ಪರಿವರ್ತನೆಯತ್ತ ನಮ್ಮನ್ನು ಒಯ್ಯುವುದಿಲ್ಲವೇ? ಬ್ರಾಹ್ಮಣನೊಬ್ಬ ತಡವಾಗಿ ಬಂದದ್ದರಿಂದ ಹರಿಜನ ವ್ಯಕ್ತಿಯ ಹಿಂದೆ ಸಾಲಿನಲ್ಲಿ ನಿಂತು ಹಾಲು ಸರಬರಾಜು ಮಾಡುವುದು ಜಾತಿಪದ್ಧತಿಯ ಕಪಾಳಕ್ಕೆ ಕೊಟ್ಟ ಏಟೆಂದು ಕುರಿಯನ್ ಒಮ್ಮೆ ಹೇಳಿದ್ದರು. ಇದು, ಮತ್ತು ಇಳಾರಂಥವರು ಮಾಡಿರುವ ಕೆಲವು ಸಾಂಕೇತಿಕ ಚರ್ಯೆಗಳು ಕುರಿಯನ್‍ ಹೇಳಿದ್ದಕ್ಕಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗುತ್ತವೆ. ಇಳಾಗಿಂತ ಭಿನ್ನರಾಗಿರುವ ಕುರಿಯನ್ ತಮ್ಮ ಸಹಚರರು, ಅನುಯಾಯಿಗಳ ದೇಣಿಗೆ ಮತ್ತು ಪಾತ್ರವನ್ನು ಎಂದಿಗೂ ಬಹಿರಂಗವಾಗಿ ಸ್ಮರಿಸಿದ್ದನ್ನು ನಾನು ಕಂಡಿಲ್ಲ. [ಇದರಿಂದಾಗಿ ಆ ಸಾಧನೆಯಲ್ಲಿ ಕುರಿಯನ್ ಪಾತ್ರವನ್ನು ನಾನು ಕುಬ್ಜವಾಗಿ ಕಾಣುತ್ತಿರುವೆನೆಂದು ಅಪಾರ್ಥ ಮಾಡಿಕೊಳ್ಳಬಾರದು. ಇಳಾ ಮತ್ತು ಕುರಿಯನ್‌ರ ಶೈಲಿಯಲ್ಲಿನ ವ್ಯತ್ಯಾಸವನ್ನು ತೋರಲು ಮಾತ್ರ ಈ ಮಾತನ್ನು ಆಡುತ್ತಿದ್ದೇನೆ.]

"ಸೇವಾ"ದ ಕಾರ್ಯಾಲಯಗಳು ಇಳಾರಂತೆಯೇ ಸರಳವಾಗಿ, ನಿರಾಡಂಬರವಾಗಿ ಇವೆ. ಇಳಾ ಕೂಡಾ ತಮ್ಮ ಖಾದಿಸೀರೆ ಮತ್ತು ಅಹಮದಾಬಾದಿನಲ್ಲಿ ಓಡಾಡಲು ಇರಿಸಿಕೊಂಡಿದ್ದ ತಮ್ಮ ಸಂಸ್ಥೆಯ ಖಾಸಗೀ ಆಟೋರಿಕ್ಷಾದ
ಸರಳತೆಯ ಮೂಲಕವೇ ಗುರುತಿಸಲ್ಪಡುತ್ತಾರೆ. ಕಾರಲ್ಲದೇ ಖಾಸಗೀ ಆಟೋದಲ್ಲಿ ಓಡಾಡುವುದು ಕೇವಲ ಸಾಂಕೇತಿಕವೋ ಅಥವಾ ಇಳಾ ಇರುವುದೇ ಹಾಗೆಯೋ ನನಗೆ ತಿಳಿಯದು. ಯಾಕೆಂದರೆ ಎಂದೂ ಆಕೆ ಸರಳ ಜೀವನದ ಬಗ್ಗೆ ಮಾತಾಡಿದ್ದನ್ನು ಅಥವಾ ಅದನ್ನೇ ಒಂದು ಗುಣವೆಂದು ಸಾರಿದ್ದನ್ನು ನಾನು ಕಂಡಿಲ್ಲ. ಬಹುಶಃ ಗಾಂಧೀವಾದದಲ್ಲಿ ಬೆಳೆದ ಇಳಾ ಗಾಂಧೀಜಿಯಂತೆ ನನ್ನ ಜೀವನವೇ ನನ್ನ ಸಂದೇಶ ಎಂದು ನಂಬಿದವರೇನೋ. ಇಳಾ ಅವರು ಆಟೋದಲ್ಲಿ ಓಡಾಡುತ್ತಿರುವಂತೆಯೇ ಆಕೆಯ ಸಂಸ್ಥೆಯ ಅನೇಕ ಉದ್ಯೋಗಿಗಳು ಜೀಪುಗಳಲ್ಲಿ ಸಂಚರಿಸುವುದನ್ನೂ ನಾನು ಕಂಡಿದ್ದೇನೆ. ಆದರೆ ಮಿರಾಯ್, ಜಯಶ್ರೀ, ಅಥವಾ ರೀಮಾ ಊರಿಂದ ಆಚೆಗೆ ಹೋಗುವ ದೊಡ್ಡ ಪ್ರಯಾಣಗಳಿದ್ದವರಾದ್ದರಿಂದ ಜೀಪುಗಳಲ್ಲಿ ಓಡಾಡುತ್ತಿದ್ದಿರಲಿಕ್ಕೂ ಸಾಕು. ಭಾರತದ ಅತ್ಯುನ್ನತ ಮ್ಯಾನೇಜ್‌ಮೆಂಟ್ ಸಂಸ್ಥೆ ಐಐಎಂನ ನಿರ್ವಹಣಾ ಮಂಡಲಿಯ ಸಭೆಗೆ ಎ.ಸಿ. ಸೆಡಾನ್ ಕಾರುಗಳ ನಡುವೆ ಇಳಾರ ಬೂದು ಬಣ್ಣದ ಆಟೋ ಬಂದು ನಿಲ್ಲುವುದು ಎಲ್ಲಕ್ಕಿಂತ ಗಮ್ಮತ್ತಿನ ವಿಚಾರವಾಗಿತ್ತು! ಧ್ವನಿ ಎತ್ತರಿಸದಿದ್ದರೂ, ಐಐಎಂಗಿರಬೇಕಾದ ಸಾಮಾಜಿಕ ಜವಾಬ್ದಾರಿಯ ಬಗ್ಗೆ ದೃಢವಾದ ಮಾತುಗಳನ್ನು ಆಕೆ ಸಭೆಯಲ್ಲಿ ಆಡಿರಬಹುದು. ಐಐಎಂ ಸ್ಥಾಪನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದ ವಿಕ್ರಂ ಸಾರಾಭಾಯಿ ಮತ್ತು ಮೊದಲ ನಿರ್ದೇಶಕರಾದ ರವಿ ಮಥ್ಥಾಯ್ ಅವರ ಆಶಯದಂತೆ ಐಐಎಂ , ಕೇವಲ ಒಂದು ಬಿಜಿನೆಸ್ ಸ್ಕೂಲ್ ಆಗದೇ [ಸಮಾಜ ಸೇವೆ, ಸರಕಾರಿ ಹೀಗೆ] ಎಲ್ಲ ಸಂಸ್ಥೆಗಳಿಗೂ ನಿರ್ವಹಣಾ ವಿಧಾನಗಳನ್ನು ಕೊಡುವ ಭಿನ್ನ ಸಂಸ್ಥೆಯಾಗಿ ಬೆಳೆಯಬೇಕೆಂದು ಆಶಿಸಿದ್ದರು. ದಿನದಿನಕ್ಕೆ ವಾಣಿಜ್ಯದ ಲೆಕ್ಕಾಚಾರಕ್ಕೆ ಬಲಿಯಾಗುತ್ತಿರುವ ಇಂಥ ಸಂಸ್ಥೆಯಲ್ಲಿ ಇಳಾ ಅವರು ಈ ಆಶಯವನ್ನು ನೆನಪುಮಾಡುವ ಆತ್ಮಪ್ರಜ್ಞೆಯ ಕೆಲಸ ಮಾಡುತ್ತಿದ್ದಾರೆನ್ನಬಹುದು. ಕುರಿಯನ್ ಕೂಡಾ ಐಐಎಂನ ನಿರ್ವಹಣಾ ಮಂಡಲಿಯಲ್ಲಿದ್ದರು. ತಮಗಿಷ್ಟವಾದ ಗ್ರಾಮೀಣ ಕ್ಷೇತ್ರದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಕೆಲಸ ಮಾಡುತ್ತಿಲ್ಲ, ಅತ್ತ ತಿರುಗಿಯೂ ನೋಡುತ್ತಿಲ್ಲವೆಂದಾಗ ಆತ ಸಿಡಿದು ತಮ್ಮ ನೇತೃತ್ವದಲ್ಲಿಯೇ ಗ್ರಾಮೀಣ ನಿರ್ವಹಣೆಗೇ ಮೀಸಲಾದ ಇರ್ಮಾವನ್ನು ಸ್ಥಾಪಿಸಿಬಿಟ್ಟರು. ಸಹಕಾರ ಕ್ಷೇತ್ರದ ಅಘೋಷಿತ ಬಯಕೆಗಳಿಗೆ ಅವರು ಈ ರೀತಿಯಾಗಿ ಪ್ರತಿಸ್ಪಂದಿಸುತ್ತಿದ್ದರೇನೋ. ಆದರೆ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿರುವ ಇಳಾ ಹೀಗೆ ಕುರಿಯನ್ ರೀತಿಯಲ್ಲಿ ಒಂದು ಕ್ರಮವನ್ನು ಕೈಗೊಳ್ಳಬಹುದೆಂದು ಊಹಿಸುವುದೂ ಕಷ್ಟ. ಆಕೆಗೆ ಇಂಥ ವಿಚಾರ ಹೊಳೆದರೂ, ಅದನ್ನು ತಮ್ಮ ಸಹಚರರಿಗೆ ಹೇಳಿ, ಅವರ ಪ್ರತಿಕ್ರಿಯೆ ಕಂಡು ಸಮುದಾಯಕ್ಕೆ ಇದು ಬೇಕು ಅನ್ನಿಸಿದ ನಂತರವೇ, ಇದಕ್ಕೆ ತಮ್ಮ ಸಂಪನ್ಮೂಲಗಳನ್ನು ಸಮುದಾಯದವರು ಧಾರೆಯೆರೆಯಲು ತಯಾರಿದ್ದಾರೆ ಎಂದು ಮನವರಿಕೆಯಾದ ಮೇಲೇ ಇಳಾ ಇಂಥಹ ಒಂದು ಹೆಜ್ಜೆಯನ್ನು ಇಡುತ್ತಿದ್ದರು. ಹಾಗೆ ನೋಡಿದರೆ ಬಡವ ಬಲ್ಲಿದರ ನಡುವಣ ಇರುವ ಅಂತರವನ್ನು ಕಡಿಮೆ ಮಾಡಲು ಇಬ್ಬರ ಶೈಲಿಗಳೂ ಬೇಕು ಅನ್ನಿಸುತ್ತದೆ. 

ಸೇವಾ ಕಾರ್ಯಾಲಯಗಳು ನಿರಾಡಂಬರವಾಗಿರುವಂತೆಯೇ ಸೇವಾದ ಕಾರ್ಯಕರ್ತರೂ ಸಹ ಸಮುದಾಯದಿಂದ ಆಯ್ದ ನಿರಾಡಂಬರ ಹೆಣ್ಣುಮಕ್ಕಳು. ಸಂವಹನ ಯಾವಾಗಲೂ ಗುಜರಾತಿಯಲ್ಲಿ. ಟ್ರೇಡ್ ಫೆಸಿಲಿಟೇಷನ್ ಸೆಂಟರ್‌ನಲ್ಲಿ ಒಮ್ಮೆ ಹೊಸದಾಗಿ ನಿಯಾಮಕಗೊಂಡಿದ್ದ ನಗರ ಪ್ರಾಂತದಲ್ಲಿ ವಿದ್ಯಾಭ್ಯಾಸ ಮಾಡಿದ್ದ ಮಾರ್ಕೆಟಿಂಗ್ ಪ್ರವೀಣೆಯೊಬ್ಬಳು ಬರಲಿರುವ ವರ್ಷದಲ್ಲಿ ಮಾಲನ್ನು ಮಾರಾಟಮಾಡಲು ಅಳವಡಿಸಬೇಕಾದ ತಂತ್ರಗಳ ಬಗ್ಗೆ ನಿರ್ವಹಣಾ ಮಂಡಲಿಗೆ ದೊಡ್ಡ ಪ್ರೆಸೆಂಟೇಶನ್ ಮಾಡುತ್ತಿದ್ದಳು. ಆಕೆ ಗುಜರಾತಿಯಲ್ಲಿ ಮಾತಾಡಿದರೆ ನಿರ್ವಹಣಾ ಮಂಡಲಿಯಲ್ಲಿರುವ ಬಾನಸ್‍ಕಾಂಠಾದ ಪೂರಿಬೇನ್ ಆಹಿರ್ ಮತ್ತು ಕಛ್‍ನ ಮಹತಾಬ್‍ಬೇನ್ ಇಬ್ಬರಿಗೂ ಅರ್ಥವಾಗುತ್ತದೆ, ಹಾಗೂ ಅವರಿಗೆ ಅರ್ಥವಾಗುವುದು ಅವಶ್ಯಕ ಅನ್ನುವ ಮಾತನ್ನು ಅಧ್ಯಕ್ಷೆ ರೀಮಾ ಹೇಳಿದರು. ಪಾಪ ಆ ಪ್ರವೀಣೆ ತನಗೆ ಗುಜರಾತಿ ಬರುವುದಿಲ್ಲವೆಂದೂ, ಹಿಂದಿಯೂ ಅಷ್ಟಕ್ಕಷ್ಟೇ ಎಂದೂ ಹೇಳಿದಳು. ರೀಮಾ ಆಕೆಯನ್ನು ನೋಡಿ ಮುಂದಿನ ಬಾರಿ ಗುಜರಾತಿಯಲ್ಲೇ ಮಾತನಾಡು, ಈ ಬಾರಿ ನಾನು ಭಾಷಾಂತರಿಸುತ್ತೇನೆ ಅಂದರಾದರೂ ಆ ಮಾತು ಆ ಪ್ರವೀಣೆಗೆ ಮಾತ್ರ ಸೀಮಿತಗೊಂಡಿತ್ತೋ ಅಥವಾ ಅಲ್ಲಿದ್ದ ಪ್ರೊಫೆಸರೂ ಸೇರಿದಂತೆ ಇತರರಿಗೂ ವರ್ತಿಸುತ್ತಿತ್ತೋ ತಿಳಿಯದು. ಆದರೆ ಯಾರೇ ಗುಜರಾತಿಯಲ್ಲದೇ ಬೇರೆ ಭಾಷೆಯಲ್ಲಿ ಮಾತನಾಡಿದರೆ ರೀಮಾ ಅದಕ್ಕೆ ತಕ್ಷಣದ ತರ್ಜುಮೆಯನ್ನು ಒದಗಿಸುತ್ತಾರೆ. ಇದು ಇಳಾರಿಂದ ಬಳುವಳಿಯಾಗಿಬಂದಿರುವ ಸಂಸ್ಕೃತಿ. ಸಭೆಯಲ್ಲಿರುವ ಪ್ರತಿ ವ್ಯಕ್ತಿಗೂ ಪ್ರಾಮುಖ್ಯತೆ ಇದೆ. ತೆಗೆದುಕೊಂಡ ಪ್ರತಿ ನಿರ್ಣಯವೂ ಸಮುದಾಯವನ್ನೊಳಗೊಂಡೇ ತೆಗೆದುಕೊಳ್ಳಬೇಕು. ಅವರ ಜೀವನದಬಗ್ಗೆ ನಾವೇನು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದೇವೆ ಅನ್ನುವ ಕನಿಷ್ಠ ವಿವರವೂ ಅವರುಗಳಿಗೆ ನೀಡದಿದ್ದರೆ ಹೇಗೆ? 

ಸೇವಾ ಕೇವಲ ಮಹಿಳಾ ಸಂಸ್ಥೆಯಾಗಿ ಉಳಿದದ್ದು ಹೇಗೆ? ಎಂದೂ ನಾವು ಇಳಾರನ್ನು ಸ್ತ್ರೀವಿಮೋಚನೆ, ಮಹಿಳಾ ಹಕ್ಕುಗಳನ್ನು ಚರ್ಚಿಸುವ ವೇದಿಕೆಯಲ್ಲಿ ಕಂಡೇ ಇಲ್ಲವಲ್ಲ? ಇಳಾರನ್ನು ಕೇಳಿದರೆ, ಮೊದಲ ಆದ್ಯತೆ ಬಡವರಿಗಾಗಿ ಕೆಲಸ ಮಾಡುವುದು. ಅದರಲ್ಲಿ ಹೆಂಗಸರ ಜೊತೆ ಕೆಲಸ ಮಾಡುವುದು ಅನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಾರೆ. "ಮೊದಲಿಗೆ ಗಂಡಸರೂ ನಮ್ಮ ಸಂಸ್ಥೆಯನ್ನು ಸೇರಬಹುದು ಅಂತ ನನಗನ್ನಿಸಿತ್ತು. ಎಷ್ಟಾದರೂ ನಾವು ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಸಂಸ್ಥೆಯಷ್ಟೆ. ಅವರು ಬರುವುದರಿಂದ ನಮ್ಮ ಶಕ್ತಿ ಹೆಚ್ಚಾಗುತ್ತದೆಂದು ನಾನು ನಂಬಿದ್ದೆ. ಆದರೆ ನಮ್ಮ ಜೊತೆಗಿದ್ದ ಸಮುದಾಯದ ಮಹಿಳೆಯರು ಬೇಡವೆಂದರು. ಗಂಡಸರಿದ್ದರೆ ತಮಗೆ ಮನ ಬಿಚ್ಚಿ ಮಾತನಾಡುವುದಕ್ಕೆ ಆಗುವುದಿಲ್ಲ, ಅವರುಗಳು ಇಲ್ಲೂ ದರ್ಬಾರು ಮಾಡುತ್ತಾರೆ, ಅದರಿಂದ ಪರಿಸ್ಥಿತಿಯಲ್ಲಿ ಉದ್ವಿಗ್ನತೆ ಉಂಟಾಗುತ್ತದೆ ಅನ್ನುವುದು ಅವರ ಅಭಿಪ್ರಾಯವಾಗಿತ್ತು." ಹೀಗೆ ಸಮುದಾಯದ ಜೊತೆ ಚರ್ಚಿಸುತ್ತಲೇ ಸಂಸ್ಥೆಗಳನ್ನು ಕಟ್ಟಿದ್ದರಿಂದ ಎಲ್ಲಕ್ಕಿಂತ ಸಶಕ್ತವಾದ ಮಹಿಳಾ ಕಾರ್ಮಿಕರ ಸಂಘವನ್ನು ಕಟ್ಟುವುದು ಆಕೆಗೆ ಸಾಧ್ಯವಾಯಿತು.

ಕುರಿಯನ್ ಕಟ್ಟಿದ ಸಂಸ್ಥೆಗಳಿಗಿರುವ ಭವ್ಯ ಕಟ್ಟಡಗಳು ಸೇವಾ ಸಂಸ್ಥೆಗಳಿಗೆ ಇಲ್ಲ. ಸೇವಾದ ಕಾರ್ಯಾಲಯಗಳೆಲ್ಲ ನೆರೆಮನೆಯ ಆಫೀಸಿನಂತೆ, ಬಡವರು ಯಾವ ಭಯವೂ ಇಲ್ಲದೇ ಒಳಬರಮಾಡಿಕೊಳ್ಳುವಂತಿವೆ. ಕುರಿಯನ್ ಸ್ಥಾಪಿಸಿದ ಗ್ರಾಮೀಣ ನಿರ್ವಹಣಾ ಸಂಸ್ಥೆ ಇರ್ಮಾದ ೬೦ ಎಕರೆಯ, ಪ್ರತಿ ವಿದ್ಯಾರ್ಥಿಗೂ ಒಂದು ಭಿನ್ನ ಕೋಣೆಯ ಹಾಸ್ಟೆಲ್ ಇದ್ದ ಭವ್ಯ ಕ್ಯಾಂಪಸ್ಸನ್ನು ನೋಡಿ ಇದು ಗ್ರಾಮೀಣ ನಿರ್ವಹಣೆಗಾಗಿ ಸ್ಥಾಪಿಸಿದ ಸಂಸ್ಥೆಯೇ ಎಂದು ಕೇಳಿದ ಪ್ರಶ್ನೆಗೆ ಕುರಿಯನ್ "ಮಹಾರಾಜರನ್ನು ಹಂದಿಗಳ ಕೊಟ್ಟಿಗೆಯಲ್ಲಿ ಬೆಳೆಸುವುದಿಲ್ಲ. ಇಲ್ಲಿನ ವಿದ್ಯಾರ್ಥಿಗಳಾದ ನೀವು ನನ್ನ ಮಟ್ಟಿಗೆ ರಾಜಕುಮಾರರು" ಎಂದು ಹೇಳಿ ಬಡತನದ ಬಗ್ಗೆ ಕೆಲಸಮಾಡಲಿರುವ ಯುವಕರ ಶ್ರೀಮಂತಿಕೆಯ ಆ ದ್ವೀಪವನ್ನು ಸಮರ್ಥಿಸಿಕೊಂಡಿದ್ದರು. ಅದೇ ಸೇವಾ ತನ್ನ ಬ್ಯಾಂಕಿಗಾಗಿ ಅಹಮದಾಬಾದಿನ ಎಲ್ಲಿಸ್‍ಬ್ರಿಜ್‌ನ ಮೇಲಿದ್ದ ದೊಡ್ಡ ಕಟ್ಟಡವಾದ ಸಾಕಾರ್‌ನಲ್ಲಿ ಆಫೀಸು ಕೊಂಡಾಗ ಅದರ ಬದಿಯಲ್ಲಿದ್ದದ್ದು ವಿದೇಶೀ ಮೂಲದ ಬ್ಯಾಂಕ್ ನ್ಯಾಷನಲ್ ದ ಪ್ಯಾರಿಬಾ ಮತ್ತು ಶ್ರೀಮಂತ ಗಿರಾಕಿಗಳ ಕೊಟಾಕ್ ಮಹೀಂದ್ರಾ ಬ್ಯಾಂಕ್. ಆ ಭವ್ಯ ಕಟ್ಟಡದಲ್ಲಿ ಆಫೀಸು ಕೊಂಡದ್ದರ ಫಲವೇನು? ಸಾಕಾರ್ ಕಟ್ಟಡದಲ್ಲಿದ್ದ ದೊಡ್ಡ ಉದ್ಯಮಗಳು ಸೇವಾ ಬ್ಯಾಂಕಿಗೆ ಬರುವ ಕೊಳಕು ಮತ್ತು ಗಲಾಟೆಯ ಹೆಂಗಸರ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಬೇಕೆಂದು ಕೋರಿದರಂತೆ. ಆದರೆ ಆ ಕಟ್ಟಡದಲ್ಲಿಯೇ ಆಫೀಸು ಕೊಂಡಿದ್ದ ಮಹಿಳಾ ಸೇವಾ ಬ್ಯಾಂಕಿಗೆ ಮುಖ್ಯ ದ್ವಾರವನ್ನು ಮುಚ್ಚಿ ಬದಿಯ ಬಾಗಿಲಿನಿಂದ ತಮ್ಮ ಸದಸ್ಯೆಯರನ್ನು ಸ್ವಾಗತಿಸುವಲ್ಲಿ ಯಾವುದೇ ತೊಂದರೆಯಿರಲಿಲ್ಲ. ಹೀಗೆ ಅತ್ಯಂತ ಶ್ರೀಮಂತ ಕಟ್ಟಡದಲ್ಲಿದ್ದೂ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳದೇ ಮುಂದುವರೆಯುವುದು ಅವರಿಗೆ ಸಾಧ್ಯವಾಯಿತು. ಹೀಗೆ ಮಾಡುವುದರಿಂದ ಶ್ರೀಮಂತರ ಬೇಡಿಕೆಯನ್ನು ಪೂರೈಸಿ ಅವರು ಸೋಲೊಪ್ಪಿದರು ಅನ್ನುವುದು ಒಂದು ದೃಕ್ಪಥವಾದರೆ, ತಮ್ಮದೇ ಸದಸ್ಯರಿಗೆ ಸರಳವಾಗಿ, ಯಾವ ಹಂಗೂ ಇಲ್ಲದೇ ಓಡಾಡಲು ಅನುವು ಮಾಡಿಕೊಟ್ಟರು ಎನ್ನುವ ದೃಷ್ಟಿಕೋನವನ್ನು ಸೇವಾದ ಭಗಿನಿಯರು ಕೊಟ್ಟಾರು. ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ, ಎಲ್ಲವನ್ನೂ ಬಿಟ್ಟುಕೊಡುವುದರಿಂದ! [ತಿರುಮಲೇಶ್]

ಸೇವಾ ಸಂಸ್ಥೆಯಲ್ಲಿ ಸರ್ವಮತಗಳಿಗೂ ಸಲ್ಲುವಂತಹ ಪ್ರಾರ್ಥನೆಯಿಂದ ಪ್ರತಿದಿನದ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಬ್ಯಾಂಕಿನ ಪ್ರಾಂಗಣದಲ್ಲಿ ಮಹಿಳೆಯರು ಕೂಗಾಡುತ್ತಾರೆ, ಅಲ್ಲಿಯೇ ತಾವು ಊರು/ಕೇರಿಯಿಂದ ತಂದಿರಬಹುದಾದ ವಸ್ತುಗಳನ್ನು ಮಾರಾಟಮಾಡುತ್ತಾರೆ, ಒಬ್ಬರೊಂದಿಗೆ ಇನ್ನೊಬ್ಬರು ಬೆರೆಯುತ್ತಾರೆ, ಹಣದ ವ್ಯವಹಾರ ನಡೆಸಿದ ನಂತರವೂ ಉಭಯಕುಶಲೋಪರಿ ಮುಂದುವರೆಯುತ್ತದೆ. ಅವರು ಬ್ಯಾಂಕಿಗೆ ಬಂದಿದ್ದಾರಾದರೂ ವರ್ತಿಸುವುದು ತಮ್ಮ ಮನೆಯಲ್ಲಿ, ತರಕಾರಿಯಂಗಡಿಯಲ್ಲಿ, ಬಟ್ಟೆ ಹೊಲಿಯುವ ಸಂದರ್ಭದಲ್ಲಿ, ಅಥವಾ ಚಿಂದಿ ಹೆಕ್ಕುವ ಸಮಯದಲ್ಲಿದ್ದಂತೆಯೇ - ಅಷ್ಟೇ ಸಹಜವಾಗಿ. ಹೀಗಾಗಿ ಇಲ್ಲಿ ಕೆಲಸ ಮಾಡಬೇಕಾದವರೂ ಈ ವಿಷಯವನ್ನು ಅರ್ಥಮಾಡಿಕೊಳ್ಳಬಲ್ಲ ಸಮುದಾಯದ ಮಹಿಳೆಯರೇ ಆಗಬೇಕು ಅನ್ನುವುದು ಸಹಜ. ಸಮುದಾಯ ಕೊಡಬಲ್ಲಷ್ಟೇ ಸಂಬಳವನ್ನೂ ಅವರು ಸ್ವೀಕರಿಸಲು ತಯಾರಿರಬೇಕು.

ಬಹಳ ಕಾಲದವರೆಗೆ ಸೇವಾ ಸಂಸ್ಥೆಗಳಲ್ಲಿ ವೃತ್ತಿಪರರಿಗೆ [ಅಂದರೆ ನಮಗೆ ಅರ್ಥವಾಗುವಂಥಹ ಎಂ.ಬಿ.ಎ, ವಕೀಲರು, ಮತ್ತಿತರ ಟೈ-ಸೂಟು-ಬೂಟು ಧರಿಸುವಂಥ ಜನ] ನೌಕರಿಯನ್ನು ಕೊಡುತ್ತಿರಲಿಲ್ಲ. ಹೀಗಾಗಿ ಪವರ್ ಪಾಯಿಂಟ್‌ನಲ್ಲಿ ಪ್ರೆಸೆಂಟೇಶನ್ ಮಾಡುವ ಜನಾಂಗದವರು ಅಲ್ಲಿ ಇರಲಿಲ್ಲ. ಯಾರಾದರೂ ಕೆಲಸಕ್ಕೆ ಸೇರಿದರೆ ಜೀವನ ಪರ್ಯಂತ ಅಲ್ಲೇ ಕೆಲಸ ಮಾಡುವುದು ಸಹಜವೇ ಆಗಿತ್ತು. ಸೇವಾ ಸಂಸ್ಥೆಗಳನ್ನು ಈಗ ನಡೆಸುತ್ತಿರುವ ಮುಖ್ಯಸ್ಥರೆಲ್ಲರೂ ಇಳಾರ ಜೊತೆಗೆ ಅನೇಕ ವರ್ಷಗಳಿಂದ ಕೆಲಸ ಮಾಡಿದವರು. ಐ.ಎ.ಎಸ್ ನೌಕರಿಯನ್ನು ಬಿಟ್ಟು ಬಂದ ರೀಮಾ, ಸೇವಾಭಾರತ್ ಮುಖ್ಯಸ್ಥೆಯಾಗಿರುವ, ತಾನು ಹುಟ್ಟಿದ ಮನೆತನದಿಂದಾಗಿಯೇ ಯಾವುದೇ ಕೆಲಸವನ್ನು ಆಯ್ದುಕೊಳ್ಳುವ ಸಾಧ್ಯತೆಯಿದ್ದೂ ಸೇವಾಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟ ರೆನಾನ ಝಾಬ್‍ವಾಲಾ, ಬಿಲ್ ಕ್ಲಿಂಟನ್ ಜೊತೆ ಊಟ ಮಾಡುವುದು ಎಷ್ಟು ಸಹಜವೋ ಅಷ್ಟೇ ಸಹಜವಾಗಿ ಬಡ ಹೆಣ್ಣುಮಕ್ಕಳ ಆರೋಗ್ಯದ ವಿಚಾರದ ಬಗ್ಗೆ ದೂರದ ಹಳ್ಳಿಗಳಲ್ಲಿ ದಿನಗಳನ್ನು ಕಳೆಯಬಲ್ಲ ಮಿರಾಯ್, ಚಾರ್ಟರ್ಡ್ ಎಕೌಂಟೆಂಟಿನ ಕೆಲಸವನ್ನು ಬಿಟ್ಟು ಬಡವರ ಬ್ಯಾಂಕಿನ ನೌಕರಿಹಿಡಿದ ಜಯಶ್ರೀ, ದಕ್ಷಿಣಭಾರತದಿಂದ ಬಂದು ಇಲ್ಲೇ ಉಳಿದು, ಒಂದಾನೊಂದು ರೆವ್ಯೂ ಮೀಟಿಂಗಿಗೆ ಕರೆತಂದಿದ್ದ ಬೀದಿ ಮಕ್ಕಳಿಗೆ ಹೈದರಾಬಾದಿನ ಪಂಚತಾರಾ ಗ್ರೀನ್‍ಪಾರ್ಕ್ ಹೋಟೇಲಿನಲ್ಲಿ ಊಟಹಾಕಿಸಿ ಖುಷಿ ಪಡುವ ವಿಜಯಲಕ್ಷ್ಮೀ, ಬೀಡಿ ಸುತ್ತುವ ಕೆಲಸದಿಂದ ಬಡ್ತಿ ಪಡೆಯುತ್ತಾ ಸೇವಾದ ಪ್ರಧಾನ ಕಾರ್ಯದರ್ಶಿಯ ಮಟ್ಟಕ್ಕೆ ಬೆಳೆದು ವಿಶ್ವದಾದ್ಯಂತ ಇಂಗ್ಲೀಷಿನಲ್ಲಿ ಭಾಷಣ ಗುದ್ದುವ ಜ್ಯೋತಿ.. ಹೀಗೆ ಈ ಯಾದಿ ಮುಂದುವರೆಯುತ್ತಲೇ ಇರುತ್ತದೆ.

ಕುರಿಯನ್ ಹುಟ್ಟುಹಾಕಿದ್ದ ಸಂಸ್ಥೆಗಳ ಮುಂದಿನ ಮುಖ್ಯಸ್ಥರೆಂದು ತಾವಾಗೇ ನಿಯಮಿಸಿದ್ದ ಅಮೃತಾ ಪಟೇಲ್ ಜೊತೆ ಯುದ್ಧಘೋಷಿಸಿ ಚಕಮಕಿ ನಡೆಸುತ್ತಿದ್ದ ಸಮಯದಲ್ಲೇ ಇಳಾ ತಾವು ಹುಟ್ಟುಹಾಕಿದ್ದ ಸಂಸ್ಥೆಗಳ ಸೂತ್ರವನ್ನು 
ಬಿಟ್ಟುಕೊಟ್ಟು ಹಿನ್ನೆಲೆಗೆ ಸರಿದುಬಿಟ್ಟರು ಎನ್ನುವುದನ್ನು ಬಹಳ ಜನ ಗಮನಿಸಲೇ ಇಲ್ಲ. ಸೇವಾದಲ್ಲಿ ಮುಂದಿನ ತಲೆಮಾರಿನ ನಾಯಕರು ಯಾರು ಅನ್ನುವುದರ ಬಗ್ಗೆ ತಕರಾರೇ ಇರಲಿಲ್ಲ. ಇಳಾ ಯಾವಾಗ ಹಿಂದೆ ಸರಿದರು, ಹೊಸ ತಲೆಮಾರಿನವರು ಯಾವಾಗ ಮುಂದೆ ಬಂದರು ಎನ್ನುವುದು ಯಾರೂ ಗಮನಿಸದಷ್ಟು ಸರಳವಾಗಿ ನಡೆದುಹೋಯಿತು. ಸೇವಾ ಪರಿವಾರವನ್ನು ಇಂದು ನೋಡಿದರೆ, ಅಲ್ಲಿ ದಿನನಿತ್ಯದ ಕಾರ್ಯಕ್ರಮದಲ್ಲಿ ಇಳಾ ಇಲ್ಲ, ಆದರೆ ಅವಶ್ಯಕತೆಯಿದ್ದರೆ ಆಕೆ ಇದ್ದಾರೆ. ಯಾರಿಗಾದರೂ ಮಾರ್ಗದರ್ಶನ ಬೇಕಿದ್ದರೆ ನೀಡಲು ತಯಾರಾಗಿ, ಯಾರಾದರೂ ತಮ್ಮ ಗೋಳನ್ನು ತೋಡಿಕೊಳ್ಳಬೇಕೆಂದರೆ ಕೇಳಲು ಸಿದ್ಧವಾಗಿ ಬೇಕಾದಾಗ ಸಿಗುವ ತಾಯಿಯಾಗಿದ್ದಾರೆ. ಆಕೆಯ ಮುಂದಿನ ತಲೆಮಾರು ಸೂತ್ರಗಳನ್ನು ಕೈಗೆತ್ತಿಕೊಂಡರೀತಿ, ಅದನ್ನು ಆಕೆ ಕಾರ್ಯಗತಗೊಳಿಸಿದ ರೀತಿ ಯಾವುದೇ ವೃತ್ತಿಪರ ಸರ್ಟಿಫಿಕೇಟು ಪಡೆದ ಜನರಿಗಿಂತ ಭಿನ್ನವಾಗಿಯೂ ಉತ್ತಮವಾಗಿಯೂ ಇದೆ. ಹೀಗಾಗಿಯೇ ಸೇವಾಗೆ "ವೃತ್ತಿಪರ"ರ ಬಗ್ಗೆ ತುಸು ಮುಜುಗರವಿದ್ದರೆ ಅದು ಅವರ ಕೆಲಸವನ್ನು ಯಾವರೀತಿಯಲ್ಲೂ ಬಾಧಿಸಿಲ್ಲವೇನೋ.

ಇಳಾ ಅವರನ್ನೊಳಗೊಂಡು ಯಾವ ದೊಡ್ಡ ವಿವಾದಾಸ್ಪದ ಘಟನೆಯೂ ನಡೆದಿಲ್ಲ. ಹಾಗೆಂದು ಸರಕಾರದ ಜೊತೆ ಆಕೆಯ ಸಂಬಂಧಗಳು ಯಾವಾಗಲೂ ಸ್ನೇಹಪರವಾಗಿತ್ತು ಎಂದು ಹೇಳಲೂ ಬರುವುದಿಲ್ಲ. ಗುಜರಾತಿನ ಭೂಕಂಪದ ನಂತರ ಕೈ ಹಿಡಿದ ಜೀವಿಕಾ ಕಾರ್ಯಕ್ರಮವನ್ನು ಸರಕಾರದ ಜೊತೆಗಿದ್ದ ಭಿನ್ನತೆಯಿಂದಾಗಿ ಮುಚ್ಚಿ ಬೇರೆಯೇ ಏರ್ಪಾಟು ಮಾಡಬೇಕಾಯಿತು. ಅದಕ್ಕೆ ಸೇವಾ ಒದಗಿಸಿದ ಕಾರಣವೆಂದರೆ ತಾವು ತಮ್ಮ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಸಮುದಾಯದೊಂದಿಗೆ ಕೆಲಸಮಾಡುತ್ತಿರುವುದರಿಂದ ಇಲ್ಲಿನ ಸರಕಾರದ ಕೆಂಗಣ್ಣು ತಮ್ಮ ಮೇಲೆ ಬಿದ್ದಿದೆ ಅನ್ನುವುದು. ಆದರೆ ಸರಕಾರದ ದೃಷ್ಟಿ ಈ ವಿಷಯದಲ್ಲಿ ಭಿನ್ನವಾಗಿದೆ. ಹಾಗೆಯೇ ೧೯೮೧ರ ಆರಕ್ಷಣೆಯ ವಿರುದ್ಧದ ಹಿಂಸಾಚಾರ ನಡೆದಾಗಲೂ ಸೇವಾದ ನಿಲುವನ್ನು ಕೆಲವರು ಪ್ರಶ್ನಿಸಿದ್ದರು. "ಕೋಮುಸೌಹಾರ್ದತೆ ಕಾರ್ಮಿಕ ಸಂಘದ ವಿಷಯ, ಸ್ತ್ರೀವಾದದ ವಿಷಯ, ಮೇಲಾಗಿ ನಮ್ಮ ಅಸ್ತಿತ್ವಕ್ಕೆ ಮೂಲಭೂತವಾದ ವಿಷಯ [ಪು ೧೫]" ಎಂದು ಇಳಾ ಬರೆಯುತ್ತಾರೆ. ಆಗೆ ಆಕೆ ತೆಗೆದುಕೊಂಡ ನಿಲುವಿನಿಂದಾಗಿ ವಸ್ತ್ರಕಾರ್ಮಿಕರ ಸಂಘದಿಂದ ಹೊರಬೀಳಬೇಕಾಯಿತು. ಹೀಗಾಗಿ ಅವರುಗಳು ತಮ್ಮದೇ ದಾರಿಯನ್ನೂ ಗಮ್ಯವನ್ನೂ ಕಂಡುಕೊಳ್ಳುವುದು ಅನಿವಾರ್ಯವಾಯಿತು. ಆಗ ಇದನ್ನು ಒಂದು ಕಷ್ಟದ ಪರಿಸ್ಥಿತಿ ಅನ್ನುವುದಕ್ಕಿಂತ ಒಂದು ಸದವಕಾಶದಂತೆ ನೋಡಲು ಹೇಳಿದವರು ಇಳಾರ ಸಹಚರ, ಗೆಳೆಯ, ಪತಿ ರಮೇಶ್. "ನಾವು ವಸ್ತ್ರಕಾರ್ಮಿಕ ಸಂಘದಿಂದ ಹೊರಬಿದ್ದಾಗ ನಮ್ಮ ಬಳಿಯಿದ್ದ ಶಕ್ತಿಯೆಂದರೆ ೪೯೦೦ ಸದಸ್ಯೆಯರು, ಒಂದು ಪುಟ್ಟ ಸಹಕಾರಿ ಬ್ಯಾಂಕ್, ಆಫೀಸು ಕಟ್ಟಡ, ಒಂದು ಗ್ರಾಮೀಣ ಕೇಂದ್ರ, ಕೆಲ ಬೆರಳಚ್ಚು ಯಂತ್ರಗಳು. ಆದರೆ ನಮ್ಮ ಬಳಿ ಅದಕ್ಕಿಂತ ಮುಖ್ಯವಾಗಿ ಜನಸಂಘಟನೆಯ ಹತ್ತು ವರ್ಷಕಾಲದ ಅನುಭವವೂ ಇತ್ತು" [ಪುಟ ೧೫-೧೬]

ಸೇವಾ ಸಂಸ್ಥೆಗಳ ಬೆಳವಣಿಗೆ ಸಮುದಾಯದ ಅವಶ್ಯಕತೆಗೆ ಪ್ರತಿಸ್ಪಂದಿಸುತ್ತಲೇ ಉಂಟಾಗಿದೆ. ಇಂದು ಕಿರುಸಾಲದ ಜಗತ್ತಿನಲ್ಲಿ ಸೇವಾ ಬ್ಯಾಂಕ್ ಮುಂಚೂಣಿಯಲ್ಲಿರುವ, ಮೂಲ ಪ್ರವರ್ತಕ ಸಂಸ್ಥೆಗಳಲ್ಲಿ ಒಂದು ಎಂದು ಗುರುತಿಸಲ್ಪಡುತ್ತದೆ. ಆದರೆ ನಾವು ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಮೈಕ್ರೊಫೈನಾನ್ಸ್ ಅಥವಾ ಕಿರುಸಾಲ ಎಂಬ ಪದವನ್ನು ಯೋಚಿಸುವ ಮೊದಲೇ ಸೇವಾ ಸಮುದಾಯದವರು ಅದನ್ನು ಕಾರ್ಯಗತಗೊಳಿಸಿಬಿಟ್ಟಿದರು. ಗ್ರಾಮೀಣ್ ಬ್ಯಾಂಕಿನ ಯೂನಸ್ ಜೋರ್ಬಾಗೆ ಹೋಗುವ ಮೂರುವರ್ಷ ಮುನ್ನವೇ ಸೇವಾ ಬ್ಯಾಂಕಿನ ಸ್ಥಾಪನೆಯಾಗಿತ್ತು. ಅದು ಆದ ರೀತಿಯ ಬಗೆಗೂ ಇಳಾ ಬರೆಯುತ್ತಾರೆ: "ಡಿಸೆಂಬರ್ ೧೯೭೩ರಲ್ಲಿ ನಾರಾಣ್‌ಘಾಟ್‌ನಲ್ಲಿ ಸೇವಾ ಸದಸ್ಯರ ಸಭೆ ನಡೆಯುತ್ತಿದ್ದಾಗ ಪೂರಿಬಜಾರ್‌ನಲ್ಲಿ ಬಟ್ಟೆವ್ಯಾಪಾರ ಮಾಡುತ್ತಿದ್ದ ಚಂದಾಬೇನ್ ನನ್ನನ್ನ ಈ ಮಾತು ಕೇಳಿದ್ದಳು ’ಬೇನ್, ನಾವು ನಮ್ಮದೇ ಬ್ಯಾಂಕನ್ನು ಯಾಕೆ ಸ್ಥಾಪಿಸಬಾರದು?’ ’ನಮ್ಮ ಬಳಿ ಅಷ್ಟು ದುಡ್ಡಿಲ್ಲ’ ನಾನು ಶಾಂತವಾಗಿ ಉತ್ತರಿಸಿದ್ದೆ ’ಬ್ಯಾಂಕ್ ಸ್ಥಾಪಿಸಲು ಬಹಳ ಹಣ ಬಂಡವಾಳವಾಗಿ ಬೇಕು!’ ’ನಾವು ಬಡವರಿರಬಹುದು, ಆದರೆ ಎಷ್ಟೊಂದು ಜನ’ ಚಂದಾಬೇನ್ ಉತ್ತರಿಸಿದಳು.." ಹೀಗೆ ಸೇವಾ ಬ್ಯಾಂಕ್ ಸ್ಥಾಪನೆಯಾಯಿತು. ಕುರಿಯನ್ ಹಾಲುಉತ್ಪಾದಕರ ಬಗ್ಗೆ ಸಿನೇಮಾ ಮಾಡಲು ಶ್ಯಾಂ ಬೆನೆಗಲ್ ಅವರನ್ನು ಕೇಳಿದಾಗಲೂ ಆದದ್ದು ಇದೇ -- ೫೦೦,೦೦೦ ಹಾಲು ಉತ್ಪಾದಕರು ತಲಾ ಎರಡೆರಡು ರೂಪಾಯಿಯ ದೇಣಿಗೆ ಕೊಟ್ಟು ಒಂದು ಅದ್ಭುತ ಸಿನೇಮಾವನ್ನೇ ಮಾಡಿಬಿಟ್ಟರು!!

ಇಳಾರನ್ನು ಭೇಟಿಯಾಗುವುದರಲ್ಲಿ ನನಗೆ ಯಾವತ್ತೂ ತೊಂದರೆಯಾಗಿಲ್ಲ. ಆಕೆಯ ಕಾರ್ಯದರ್ಶಿ ಯಾರೆಂದು
 ನನಗೆ ತಿಳಿಯದು. ಯಾವಾಗ ಆಕೆಯನ್ನು ಭೇಟಿಯಾಗಬಯಸಿದರೂ ಫೊನ್ ಮಾಡಿದರೆ ಅವರೇ ಸಿಗುತ್ತಾರೆ. ಸಮಯವಿದ್ದರೆ ಹೆಚ್ಚು ಯೋಚಿಸದೆಯೇ ಒಪ್ಪುತ್ತಾರೆ. ಒಮ್ಮೆ ನಮ್ಮ ವಿದ್ಯಾರ್ಥಿಗಳೊಂದಿಗೆ ಒಂದು ಚರ್ಚೆ ಮತ್ತು ತದನಂತರದ ಊಟಕ್ಕಾಗಿ ಆಕೆಯನ್ನು ನಾನು ಆಹ್ವಾನಿಸಿದ್ದೆ. ಚರ್ಚೆ ನಡೆಸುತ್ತಿದ್ದಾಗ ನಮ್ಮ ವಿದ್ಯಾರ್ಥಿಯೊಬ್ಬ ಇಲ್ಲಿಗೆ ಸಹಜವಾದ ಒಂದು ಪ್ರಶ್ನೆಯನ್ನು ಕೇಳಿದ: "ನೀವು ನಿಮ್ಮ ಜೀವನದಲ್ಲಿ ಇಟ್ಟುಕೊಂಡ ಗುರಿ/ಉದ್ದೇಶಗಳೇನು, ಅವು ಎಷ್ಟರ ಮಟ್ಟಿಗೆ ಸಫಲವಾಗಿವೆ, ನಿಮ್ಮ ವೈಫಲ್ಯಗಳೇನು?" ಇಳಾ ಆತನತ್ತ ತಿರುಗಿನೋಡಿ ಹೇಳಿದರು "ನಾನು ಯಾವ ಗುರಿಯನ್ನೂ ಇಟ್ಟುಕೊಂಡಿಲ್ಲ. ಹೀಗಾಗಿ ಗುರಿಯ ವಿರುದ್ಧ ಸಾಧನೆಯ ಟಿಕ್ ಹಾಕುವ ಪ್ರಮೇಯ ಬಂದಿಲ್ಲ. ನಾನು ಆಗಬೇಕಾದ ಕೆಲಸವನ್ನು ನೋಡುವ ಪರಿ ಅದಲ್ಲ. ಎಲ್ಲವೂ ಒಂದು ಪ್ರಕ್ರಿಯೆಯಾಗಿ ನೋಡಿದಾಗ ಗುರಿ ಮತ್ತು ಸಾಧನೆ ಅರ್ಥಹೀನವಾಗಿ ಕಾಣಿಸುತ್ತದೆ. ಜೀವಿಸುವ ಪ್ರಕ್ರಿಯೆಯಲ್ಲಿ ಎಷ್ಟೋ ಆಸಕ್ತಿಯ ಕೆಲಸಗಳು ಹುಟ್ಟುತ್ತವೆ - ಅವುಗಳನ್ನು ಮಾಡುತ್ತಾ ಹೋದರೆ ನಮಗೆ ಹತಾಶೆಯ ಭಾವನೆಯಾಗಲೀ ಸಾಧನೆಯ ಹಮ್ಮಾಗಲೀ ಇರುವುದಿಲ್ಲ. ಜಗತ್ತಿನಲ್ಲಿ ಜೀವಿಸುವುದನ್ನು ಕಡಿಮೆ ದುಸ್ತರ ಮಾಡುವುದಷ್ಟೇ ನಮ್ಮೆಲ್ಲರ ಕೆಲಸ." ಅಂದರು. ಇಳಾ, ಅನೇಕ ಬಾರಿ ತಮ್ಮ ಮನೆಗೆ ಊಟಕ್ಕೆ ಬಾರೆಂದು ನನ್ನನ್ನು ಕರೆದಿದ್ದಾರೆ. ಆದರೆ ಅಲ್ಲಿಗೆ ಹೋಗಿ ಅವರ ಮನೆಯಲ್ಲಿ ಊಟಮಾಡುವ ಧೈರ್ಯ ನನಗಿನ್ನೂ ಬಂದಿಲ್ಲ. ಎಲ್ಲರಿಗೂ ಕಾಣದ, ಪಿಸುಗುಟ್ಟುವ ಮೆಲುದನಿಯ ಇಳಾರನ್ನು ಕಂಡಿದ್ದೇನೆ, ಅವರ ಮಾತುಗಳನ್ನು ಕೇಳಿದ್ದೇನೆ. ಆಕೆಯ ಪರಿಚಯದ ಗೌರವ ನನಗೆ ಪ್ರಾಪ್ತವಾಗಿದೆ. ಅದೇ ಸಾಕು.

Labels: 

ವೈನ್‍ಕೆ-ರಾಜುಮೇಷ್ಟ್ರು: ತಲೆಮಾರುಗಳಿಗಿಬ್ಬರು

ಇಬ್ಬರು ಭಿನ್ನ ವ್ಯಕ್ತಿಗಳನ್ನು ಒಂದೇ ಲೇಖನದಡಿ ಯಾಕೆ ತರುತ್ತಿರುವೆ ಅನ್ನುವುದು ನನಗೇ ತಿಳಿಯುತ್ತಿಲ್ಲ. ವೈ‌ಎನ್‍ಕೆ ತೀರಿಕೊಂಡರು ಅನ್ನುವ ಸುದ್ದಿ ಬಂದ ದಿನ ಮನಕ್ಕೆ ಆದಷ್ಟೇ ನೋವು ರಾಜು ತೀರಿಕೊಂಡ ದಿನವೂ ಆಯಿತು. ಏನೂ ಮಾತಾಡಲು ತೋಚಲಿಲ್ಲ, ಇದ್ದಕ್ಕಿದ್ದಂತೆ ಮಾಯವಾದ ಈ ಇಬ್ಬರೂ ನನ್ನ ವಾರಗೆಯವರು, ತಕ್ಷಣದ ಹಿರಿಯರು, ಅವರಿಗಿಂತ ಹಿರಿಯರು ನನಗಿಂತ ಕಿರಿಯರು, ಅವರಿಗಿಂತ ಕಿರಿಯರು.. ಹೀಗೆ ವಯಸ್ಸಿನ ಭೇದವಿಲ್ಲದೇ ಎಷ್ಟೋ ಜನರನ್ನು ಪ್ರೋತ್ಸಾಹಿಸಿ, ಅವರ ಬರಹಗಳನ್ನು ಪ್ರಕಟಿಸಿ, ಕನ್ನಡವನ್ನು ಶ್ರೀಮಂತಗೊಳಿಸಿದವರು. ಇಬ್ಬರೂ ಹೇಳದೇ ಕೇಳದೇ ಇದ್ದಕ್ಕಿದ್ದಂತೆ ಮಾಯವಾಗಿಬಿಟ್ಟರು. 

ವೈ‌ಎನ್‍ಕೆ ತಮ್ಮ ಮಾತನಾಡುವ ಶೈಲಿಯಲ್ಲಿ, ಖಂಡತುಂಡವಾಗಿ, ಮುಲಾಜಿಲ್ಲದೇ ಮಾತಾದ ತಕ್ಷಣ ಯಾವುದೇ ಬೈಬೈ ಮಾತುಗಳಿಲ್ಲದೆಯೇ ಟೆಲಿಫೋನನ್ನು ಕುಕ್ಕಿದಂತೆ ಪ್ಲೇನಿನಲ್ಲಿ ಪ್ರಾಣ ಬಿಟ್ಟರು. ವಿದೇಶಕ್ಕೆ ಹೋಗುವ ಮುನ್ನ ಹೈದರಾಬಾದಿಗೆ ಬಂದಿದ್ದಾಗ ನನ್ನನ್ನೂ ಜಯಂತನನ್ನೂ ಕಂಡು ವೈಸ್‌ರಾಯ್ ಹೋಟೇಲಿನಲ್ಲಿ ಮಧ್ಯಾಹ್ನದ ಬಿಯರು ಹೀರುತ್ತಾ ಕೂತಿದ್ದ ವೈ‌ಎನ್‍ಕೆ, ತಾವು ಯೂರೋಪಿನ ಪ್ರಯಾಣ ಮಾಡುವುದಾಗಿ ನಮಗೆ ಹೇಳಿದ್ದರು. ಆಗ ಅವರ ಮಾತಿನ ಮೊನಚು ತುಸುವೇ ಕಡಿಮೆಯಾಗಿದೆಯೋ ಏನೋ ಅನ್ನುವ ನನ್ನ ಅನುಮಾನವನ್ನು ನಾನು ಜಯಂತನೊಂದಿಗೆ ಹಂಚಿಕೊಂಡಿದ್ದೆ. ಕ್ರಿಕೆಟ್ ದಿಗ್ಗಜರು ಒಳ್ಳೆಯ ಫಾರ್ಮಿನಲ್ಲಿರುವಾಗಲೇ ರಿಟೈರಾಗಬೇಕು ಅನ್ನುವ ಮಾತನ್ನು ವೈ‌ಎನ್‍ಕೆ ತಮ್ಮ ಜೀವನಕ್ಕೇ ಅನ್ವಯಿಸಿಕೊಂಡಿದ್ದರು ಅನ್ನುಸುತ್ತದೆ. ಅವರ ಮೊನಚುತನದ ಬಗ್ಗೆ ನಮ್ಮಿಬ್ಬರಲ್ಲಿ ತುಸು ಅನುಮಾನ ಹುಟ್ಟಿಸಿದ್ದೇ ವೈ‌ಎನ್‍ಕೆ ನಮಗೆ ಬೈ ಬೈ ಹೇಳಿಬಿಟ್ಟರು. 

ಮಾತಿನ ವಿಷಯದಲ್ಲಿ ರಾಜು ವೈ‌ಎನ್‍ಕೆಗಿಂತ ತುಂಬಾ ಭಿನ್ನ. ಅವರ ಧ್ವನಿ ಹೇಗಿರುತ್ತದೆಂದು ನನಗೆ ನೆನಪೇ ಆಗುತ್ತಿಲ್ಲ. ಮಾತಿಗಿಂತ ಕೃತಿ ದೊಡ್ಡದು ಅನ್ನುವ ಜಾಯಮಾನದವರು ಅವರು. 
ಬಹುಶಃ ಮಾತಾಡುವ ಜವಾಬ್ದಾರಿಯನ್ನು ಅವರು ಎಚ್.ಎಸ್.ಆರ್.ಗೆ ಬಿಟ್ಟುಕೊಟ್ಟಿದ್ದರೋ, ಈ ರೀತಿಯಾದಂಹ ಒಪ್ಪಂದ ಅವರಿಬ್ಬರ ನಡುವೆ ಇತ್ತೋ ಅನ್ನುವ ಅನುಮಾನ ನನಗಿದೆ. ಜಗತ್ತಿನ ಜೊತೆ ಮೌನವಾಗಿರುತ್ತಿದ್ದ ರಾಜು, ಬರಹ ಮತ್ತು ಮಾತುಕತೆಯ ಕೊಂಡಿಯ ಮೂಲಕ ಜಗತ್ತಿಗೆ ಪ್ರಕಟವಾಗುತ್ತಿದ್ದ ಎಚ್.ಎಸ್.ಆರ್ ನಡುವೆ ಇದ್ದ ಸ್ನೇಹ ಅಪರೂಪದ್ದು, ವರ್ಣಿಸಲು ಸಾಧ್ಯವಾಗದ್ದು. ಹಾಗೆ ನೋಡಿದರೆ ಪುಟ್ಟ ಸಂಸಾರದಂತಿರುವ ಕನ್ನಡ ಸಾಹಿತ್ಯ ಲೋಕದಲ್ಲಿ ಲೇಖಕರು ತಮ್ಮ ಗೆಳೆಯರ ಬಗ್ಗೆ ಬರೆಯುವುದು ಅಪರೂಪದ ಮಾತೇನೂ ಅಲ್ಲ. ಎಚ್.ಎಸ್.ವಿ- ನರಹಳ್ಳಿ, ಲಕ್ಷ್ಮಣರಾವ್-ಎ಼ಚ್.ಎ಼ಸ್.ವಿ, ಡುಂಡಿರಾಜ-ಲಕ್ಷ್ಮಣರಾವ್, ವಿವೇಕ-ಜಯಂತ, ವೈ‌ಎನ್‍ಕೆ-ಗಿರೀಶ್ ಕಾರ್ನಾಡ್, ಹೀಗೆ ಸಾಹಿತ್ಯಸ್ನೇಹಿಗಳು ಒಬ್ಬರ ಬಗ್ಗೆ ಒಬ್ಬರು ಮೆಚ್ಚುಗೆಯಿಂದ, ಬೆರಗಿನಿಂದ, ಅಸಮಾಧಾನದಿಂದ ಬರೆವ ವಾಡಿಕೆ ಇದ್ದೇ ಇದೆ. ಆದರೆ ರಾಜು ಕೆಲಸದ ಬಗ್ಗೆ ರಾಘು ಅಥವಾ ರಾಘು ಬಗ್ಗೆ ರಾಜು ಬರೆದದ್ದನ್ನು ನಾನು ಕಂಡಿಲ್ಲ. ರಾಜು ಎಷ್ಟರ ಮಟ್ಟಿಗಿನ ಮೂಕ ಕಾರ್ಯಕರ್ತರೆಂದರೆ, ಅವರ ಕೃತಿಗಳ ಯಾದಿಯಲ್ಲಿ ಮೊದಲಿಗೆ ಬರುವುದು "ಮೂರು ಮೂಕ ನಾಟಕಗಳು" ಅನ್ನುವ ಪುಸ್ತಕ. ಹೀಗೆ ಮಾತಾಡದೆಯೇ ಸಾಹಿತ್ಯಸೇವೆಯಲ್ಲಿ ನಿರತರಾಗಿದ್ದಾಗಲೇ ಥಟ್ಟೆಂದು ಇಲ್ಲವಾದವರು ರಾಜು. "ನೆಲದಿಂದ ಧಗೆ, ಚಿಮನಿಯಿಂದ ಹೊಗೆ, ಎದ್ದು ಹೋಗುವ ಹಾಗೆ" ಎಂದು ತಿರುಮಲೇಶ ಬರೆದಂತೆ, ಇಲ್ಲಿದ್ದವರು ಇಲ್ಲವಾದರು.

ಒಂಟಿ ಜೀವಿಯಾದ ವೈ‌ಎನ್‍ಕೆಯವರ ವೇಗಕ್ಕೆ ತಕ್ಕಂತೆ ಅವರೊಡನೆ ಹೆಜ್ಜೆ ಹಾಕುವುದು ಸುಲಭದ ಮಾತೇನೂ ಆಗಿರಲಿಲ್ಲ. ಆ ವೇಗ ನಡೆ-ನುಡಿ ಎರಡರಲ್ಲೂ ಇತ್ತು. [ನಿಜಕ್ಕೂ walk the talk, ಅಥವಾ jog the talk ಅಂದರೆ ಇದೇ ಏನೋ]. ಗುಂಡಿನ ಬಗ್ಗೆ ಅವಿರತ ಮಾತನಾಡಿದರೂ, ಪುಂಖಾನುಪುಂಖವಾಗಿ ಬರೆದರೂ ವೈ‌ಎನ್‍ಕೆ ಯಾವತ್ತೂ ಟೈಟಾದದ್ದನ್ನು ನಾನು ನೋಡಿಯೇ ಇಲ್ಲ. ಒಂದು ಅಥವಾ ಎರಡನೆಯ ಪೆಗ್ಗಿಗೇ ಸಾಕೆಂದು - ಸಾಧ್ಯವಾದರೆ ಗಾಲ್ಪ್ ಕ್ಲಬ್ಬಿನಿಂದ ಗವಿಪುರಂನ ರಾಧಿಕಾಗೆ ಸರಳವಾಗಿ ನಡೆದುಬಿಡುತ್ತಿದ್ದ ವೈ‌ಎನ್‍ಕೆ ಎಂದೂ ಟೈಟಾಗದೇ ಫಿಟ್ಟಾಗಿ ಇದ್ದ ವ್ಯಕ್ತಿ. ಹೀಗಾಗಿ ಅವರ ಮಾತು ಬರಹ ಎಂದೂ ತನ್ನ ಮೊನಚನ್ನು ಕಳೆದುಕೊಳ್ಳಲೇ ಇಲ್ಲ. ಅನೇಕಬಾರಿ ನನಗೆ ವೈ‌ಎನ್‍ಕೆ ನೆನಪಿನ ಜೊತೆ ಖುಶ್ವಂತ್ ಸಿಂಗ್ ಸಹ ನೆನಪಾಗುತ್ತಾರೆ. ಬಹುಶಃ ಅವರು ಬರೆಯುತ್ತಿದ್ದ ಶೈಲಿ [ವಿಥ್ ಮಾಲಿಸ್ ಮತ್ತು ವಂಡರ್ ಎರಡೂ ಫಾರ್ಮಾಟಿನಲ್ಲಿ ಹೋಲಿತ್ತಿದ್ದವೇ?], ಕಡೆಗೆ ಅಂಟಿಸುತ್ತಿದ್ದ ಜೋಕಿನ ಸಿಡಿ, ಅವರಿಬ್ಬರಿಗೂ ಇದ್ದ ಆಸಕ್ತಿಯ ವೈವಿಧ್ಯತೆ, ಮತ್ತು ಗುಂಡಿನ ಪ್ರೀತಿಯೇ ಅದಕ್ಕೆ ಕಾರಣವಿರಬಹುದು. ಖುಷ್ವಂತ್‍ಗೆ ಇಲ್ಲದ ಒಂದು ಅದ್ಭುತ ಮೊನಚು ವೈ‌ಎನ್‍ಕೆ ಗೆ ಇತ್ತು. ಪದಗಳೊಂದಿಗೆ ಅವರು ಮಾಡುತ್ತಿದ್ದ ಮೋಡಿ ಪನ್-ಭಕ್ತನಾದ ನನ್ನನ್ನು ವಿಸ್ಮಯಗೊಳಿಸಿಬಿಟ್ಟಿತ್ತು. "ಸುಮ್ಮನೆ ಇರಾಣ್ ಅಂದರೆ ಇರಾಕ್ ಬಿಡಾಕಿಲ್ಲ" ಅನ್ನುವ ಮಾತನ್ನು ಕೊಲ್ಲಿಯುದ್ಧದ ಸಮಯದಲ್ಲಿ ಡುಂಡಿರಾಜನೂ ಹೇಳಿರಲಿಕ್ಕೆ ಸಾಧ್ಯವಿದ್ದಿಲ್ಲ. ಒಮ್ಮೆ ಹೈದರಾಬಾದಿನ ಗೆಳೆಯ ಎಚ್.ಕೆ.ಅನಂತರಾವ್ [ಅಥವಾ ಅಂತ ಅನಂತರಾವ್] ವೈನ್‍ಕೆಯನ್ನು ನೋಡಬೇಕೆಂದು ಬಯಸಿದರು. ಇಬ್ಬರೂ ಕನ್ನಡಪ್ರಭದ ಕಾರ್ಯಾಲಯಕ್ಕೆ ಹೋದೆವು. ವೈ‌ಎನ್‍ಕೆಯ ಮಾತಿನ ವೇಗಕ್ಕೆ ಸರಿಯಾಗಿ ಎಡಬಿಡದೆ ಮಾತನಾಡಿದ ಎಚ್.ಕೆ.ಯನ್ನು ನೋಡಿ ಸುಸ್ತಾದ ವೈ‌ಎನ್‍ಕೆ ಹೇಳಿದ್ದು: "ಎಚ್.ಕೆ. ಅನಂತರಾವ್, ಎಚ್ಕೆ ಮಾತಾಡಬೇಡಿ!!" ಒಂಟಿಜೀವಿ ವೈ‌ಎನ್‍ಕೆ ಹೆಚ್ಚಾಗಿ ಸೊಷಿಯಲೈಸ್ ಮಾಡುತ್ತಿದ್ದದ್ದು ಮನೆಯಾಚೆ - ಹೊಟೇಲು ಕ್ಲಬ್ಬುಗಳಲ್ಲಿ. ಅವರನ್ನು ಯಾರದೇ ಮನೆಯಲ್ಲಿ ನೋಡಿದ್ದು ಬಹಳ ವಿರಳವಾಗಿ. 

ರಾಜು ತಮ್ಮ ಎಲ್ಲ ಆಸಕ್ತಿಗಳಿಗೂ ಒಂದು ರೀತಿಯಿಂದ ಸಂಸಾರವನ್ನು ಒಳಪಡಿಸಿದವರು. ಅವರು ತರುತ್ತಿದ್ದ ಪತ್ರಿಕೆಯನ್ನು ಅಂಚೆ ವೆಚ್ಚ ಕಡಿಮೆ ಮಾಡಲು ಅವರ ಹೆಂಡತಿ ಸರಸ್ವತಿ ಮೈಸೂರಿಗೆ ಹೋಗುವಾಗ ಕೈಗೆ ಕೊಟ್ಟು ಊರಲ್ಲಿ ಹಂಚಲು ಹೇಳುತ್ತಿದ್ದರು ಎಂದು ಆಕೆ ಹೇಳಿದ್ದರು. ನನಗೇ ನೆನಪಿರುವಂತೆ ರಾಜು ಮನೆಯಲ್ಲಿ [ಬಹುಶಃ ಮೊದಲ ಬಾರಿಗೆ] ಬಣ್ಣದ ಟೀವಿ ಕೊಂಡಾಗ, ಅದನ್ನು ಸ್ವಿಚಾನ್ ಮಾಡಲು ಅವರು ಯಶವಂತ ಚಿತ್ತಾಲರನ್ನು ಮನೆಗೆ ಕರೆದಿದ್ದರು. ಆಗಷ್ಟೇ ಪುರುಷೋತ್ತಮದ ಹಸ್ತಪ್ರತಿಯನ್ನು ಮುಂಬಯಿಯಿಂದ ಬೆಂಗಳೂರಿಗೆ, ಆಯ್ದ ಮಿತ್ರರಿಗೆ ತೋರಿಸಲೆಂದು ತಂದಿದ್ದ ಚಿತ್ತಾಲರನ್ನು ಮನೆಗೆ ಕರೆದು ಔತಣ ಹಾಕಿಸಿ, ಅವರ ಕೈಯಲ್ಲೇ ಟೀವಿಯ ಉದ್ಘಾಟನೆಯನ್ನು ಮಾಡಿಸಿದ್ದರು. ಈ ಎಲ್ಲದರಲ್ಲೂ ಸರಸ್ವತಿ, ಸುಗತ ಮತ್ತು ಋತರು ಭಾಗವಹಿಸುವುದು ಕಡ್ಡಾಯವಾಗಿತ್ತೇನೋ. ಒಂದು ರೀತಿಯಲ್ಲಿ ತಮ್ಮ ಜೀವನದ ತೀವ್ರತೆ ಮತ್ತು ಪ್ಯಾಷನ್ ಅನ್ನು ಅವರು ಮನೆಯವರೊಂದಿಗೆ ಹಂಚಿಕೊಳ್ಳುತ್ತಿದ್ದ ರೀತಿ ಇದಾಗಿದ್ದಿರಬಹುದು. ಅವರ ಮನೆಯಲ್ಲಿ ಸಾಹಿತ್ಯಾಸಕ್ತರಿಗಿದ್ದ ಮಾನ್ಯತೆ ಕೇವಲ ಚಿತ್ತಾಲರಂಥಹ ಹಿರಿಯ ಲೇಖಕರಿಗಲ್ಲದೇ, ಕನ್ನಡದ ಬಗ್ಗೆ ಕಾಳಜಿಯಿದ್ದ ತಮ್ಮ ವಿದ್ಯಾರ್ಥಿಗಳ ಕಡೆಗೂ ಇರುತ್ತಿತ್ತು ಎಂದು ಕೇಳಿದ್ದೇನೆ. ತಮ್ಮ ವಿದ್ಯಾರ್ಥಿಗಳನ್ನು ಪ್ರತಿವರ್ಷ ಔತಣಕ್ಕೆ ಕರೆಯುವುದು ರಾಜು ವಾಡಿಕೆಯಾಗಿತ್ತು. ವಿಲ್ಸನ್ ಗಾರ್ಡನ್‍ನಲ್ಲಿ
 ಅವರು ಮನೆ ಮಾಡಿದ್ದಾಗ ನಾನು ಅನೇಕ ಬಾರಿ ಅವರ ಮನೆಗೆ ಹೋದ ನೆನಪಿದೆ. ಐ‌ಐ‌ಎಂನಲ್ಲಿ ಓದುತ್ತಿದ್ದ ನನಗೆ ಡೈರಿ ಸರ್ಕಲ್ಲಿನ ಮೂಲಕ ಹೋದರೆ ದಾರಿಯಲ್ಲಿ ರಾಜು ಮನೆ, ಜೆಪಿ ನಗರದ ಮೂಲಕ ಹೋದರೆ ರಾಘು ಮನೆ ಇದ್ದದ್ದರಿಂದ ಇಬ್ಬರೂ ಪೂರ್ವಯೋಜಿತವಲ್ಲದೆಯೇ ನಿಕಟ ಸ್ನೇಹಿತರಾಗಿಬಿಟ್ಟರು. ಸಾಹಿತ್ಯಪ್ರೇಮಿ ರಾಜು ಸಾಹಿತಿಗಳನ್ನು ಭೇಟಿಯಾಗಲು, ಪುಸ್ತಕ ಮಾರಲು, ಪುಸ್ತಕ ಬರೆಸಲು ಎಲ್ಲಿಗಾದರೂ ಹೋಗುತ್ತಿದ್ದರು. ಹಾಗೆ ನೋಡಿದರೆ ನನ್ನ ಮೊದಲ ಪುಸ್ತಕ ಮಾಯಾದರ್ಪಣ ಪ್ರಕಟಣೆಯಲ್ಲಿದ್ದಾಗ ನನಗಿಂತ ಹೆಚ್ಚು ಸಂಭ್ರಮದಿಂದ ಓಡಾಡಿದವರು ರಾಜು. ಅದರ ಕವಚಕ್ಕೆ ಕೊಟ್ಟಿದ್ದ ಆರ್ಟ್‍ವರ್ಕ್‍ಗೆ ಯೆಲ್ಲೋ ಆಕರ್ ಬಣ್ಣದ ಕವಚವನ್ನು ಬಳಸಬೇಕೆಂದು ಕಲಾವಿದ ಸನತ್ ಅಪ್ಪಣೆ ಕೊಡಿಸಿದ್ದ. ಆ ಬಣ್ಣವನ್ನು ಹುಡುಕಿತೆಗೆಯಲು ರಾಜು ಮಗ ಸುಗತನ ಜೊತೆ ಚಿಕ್ಕಪೇಟೆಯ ಅನೇಕ ಅಂಗಡಿಗಳನ್ನು ಹತ್ತಿ ಇಳಿದಿದ್ದರು ಎಂದು ಮೊನ್ನೆಯಷ್ಟೇ ಸುಗತ ಹೇಳಿದ್ದ. ಬಹುಶಃ ಆ ಬಣ್ಣದ ಕವಚ ಸಿಗದಿದ್ದರೆ ನಾನು ಆ ಬಗ್ಗೆ ಹೆಚ್ಚು ಯೋಚಿಸುತ್ತಿರಲಿಲ್ಲವೇನೋ ಆದರೆ ರಾಜುವಿಗೆ ಸರಿಯಾದ ಬಣ್ಣದ ಕಾಗದ ಹುಡುಕುವುದೂ ಮುಖ್ಯವಾಗಿತ್ತು. ಪುಸ್ತಕಗಳಿಗಾಗಿಯೇ ಜೀವನವನ್ನು ಮುಡಿಪಾಗಿಟ್ಟಿದ್ದ ರಾಜುವಿಗೆ ವಸುಧೈವ ಕುಟುಂಬಕಂ.

ವೈ‌ಎನ್‍ಕೆ ಮಾತಿಲ್ಲದೇ ಜನರನ್ನು ಪ್ರೋತ್ಸಾಹಿಸುತ್ತಿದ್ದರು. ಅವರ ಪ್ರೋತ್ಸಾಹದ ರೀತಿಯೇ ಬೇರೆಯದ್ದು. ವೈ‌ಎನ್‍ಕೆ ಕನ್ನಡಪ್ರಭದಲ್ಲಿ ಸಂಪಾದಕರಾಗಿದ್ದಾಗ ವಾರಕ್ಕೊಂದು ದಿನ [ಬಹುಶಃ ಪ್ರತಿ ಮಂಗಳವಾರ] ಪತ್ರಿಕೆಯ ಆಪ್-ಎಡ್ ಕಾಲಂ ಸಾಹಿತ್ಯಕ್ಕಾಗೇ ಮೀಸಲಾಗಿಟ್ಟಿರುತ್ತಿದ್ದರು. ಪುಸ್ತಕಗಳನ್ನು ಓದುತ್ತಿದ್ದ ನನಗೆ ಈ ಕಾಲಂಗೆ ನಾನೂ ಬರೆಯಬಹುದೆನ್ನಿಸಿದಾಗ ಆಗ್ಡೆನ್ ನ್ಯಾಶ್ ಬಗ್ಗೆ ಒಂದು ಬರಹವನ್ನು ಬರೆದು ಕಳಿಸಿದೆ. ವೈ‌ಎನ್‍ಕೆ ಏನೂ ಹೇಳಲಿಲ್ಲ. ಅದನ್ನು ನೋಡಿದರು. ಆಗ್ಡೆನ್ ನ್ಯಾಶ್‍ನ ಪುಸ್ತಕದ ಪ್ರತಿ ಇದ್ದರೆ ಬೇಕೆಂದರು. ಮುಂದಿನ ವಾರ ಆ ಲೇಖನ ಭಾನುವಾರದ ಸಾಪ್ತಾಹಿಕದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿತು. ಈ ಬಗ್ಗೆ ಯಾವ ಮಾತೂ ಇಲ್ಲ. ಕೇಳಿದ್ದು ಆಪ್‍ಎಡ್ ಪುಟ-ದಕ್ಕಿದ್ದು ಪುರವಣಿ!! ಹಾಗೆಯೇ ಅವರು ಯಾವುದೇ ಒಂದು ಕಥೆಯನ್ನು ಅಥವಾ ಕವಿತೆಯನ್ನು ಮೆಚ್ಚಿ ಲೇಖಕರೆದುರಿಗೆ ಮಾತಾಡಿದ್ದು ನನಗೆ ನೆನಪಿಲ್ಲ. ಆದರೆ ಅವರು ಪ್ರೋತ್ಸಾಹಿಸುವ ರೀತಿಯೇ ಭಿನ್ನವಾಗಿರುತ್ತಿತ್ತು. ಆಗ್ಡೆನ್ ನ್ಯಾಶ್ ಬಗ್ಗೆ ಲೇಖನ ಬರೆದಾಗ ನಾನೂ ಕೆಲವು ನಾನ್‍ಸೆನ್ಸ್ ಪದ್ಯಗಳನ್ನು ಬರೆದೆ, ಒಂದಿಷ್ಟು ನ್ಯಾಶ್‍ನ ಅನುವಾದವಾಗಿದ್ದರೆ, ಮತ್ತಷ್ಟು ನನ್ನದೇ ಸ್ವಂತ ಪ್ರಯತ್ನಗಳು. ವೈ‌ಎನ್ಕೆ ಮತ್ತೆ ಅದನ್ನು ಕನ್ನಡಪ್ರಭದಲ್ಲಿ ಪ್ರಕಟಿಸಿದರು. ಪ್ರಕಟಿಸುತ್ತೇನೆ ಅನ್ನುವ ಒಂದು ಮಾತೂ ಇಲ್ಲ, ಪ್ರಕಟಣೆಗೊಂಡಾಗ ಪತ್ರಿಕೆಯ ಒಂದು ಪ್ರತಿಯೂ ಇಲ್ಲ. ಆದರೆ ಪ್ರಕಟಣೆಗೊಂಡ ರೀತಿಯಲ್ಲಿ, ಅದಕ್ಕೆ ನೀಡಿದ ಜಾಗದಲ್ಲಿ, ಅದಕ್ಕೆ ಕೊಟ್ಟ ಇಲ್ಲಸ್ಟ್ರೇಶನ್‌ನಲ್ಲಿ ಅದರೆ ಪ್ರಾಮುಖ್ಯತೆ ನಮಗೆ ತಿಳಿದು ಬಿಡುತ್ತಿತ್ತು. ಅದೇ ಪೈ‌ಎನ್ಕೆ ಫೀಡ್‌ಬ್ಯಾಕ್. ಜೊತೆಗೆ ತಮ್ಮ ತೀರ್ಥರೂಪ ಕವಿತಾ ಸಂಗ್ರಹ ಪ್ರಕಟವಾದಾಗ ನಡೆದ ಕವಿ ಸಮ್ಮೇಳನಕ್ಕೆ ಆಹ್ವಾನ. ಬಹುಶಃ ನಾನು ವೇದಿಕೆಯ ಮೇಲೆ ಕವಿತೆಯನ್ನು ಓದಿರುವುದು ಅದೊಂದೇ ಬಾರಿ ಅನ್ನಿಸುತ್ತದೆ. ರಾಜು ಮಾತಿಲ್ಲದೇ ಕುಣಿದಾಡದೇ ಪ್ರೋತ್ಸಾಹಿಸುತ್ತಿದ್ದರು. ವೈ‌ಎನ್ಕೆ ಕೂಡಾ - ಮಾತಾಡಿದರೂ ಮಿಕ್ಕೆಲ್ಲ ವಿಷಯಗಳ ಬಗ್ಗೆ ಹರಟೆ, ಒಂದಷ್ಟು ಜನರನ್ನು ತಮ್ಮದೇ ರೀತಿಯಲ್ಲಿ ಗೇಲಿ ಮಾಡುವುದು. ಆದರೆ ಎದುರಿಗಿದ್ದವರಿಗೆ ಡೈರೆಕ್ಟಾಗಿ ಯಾವ ಫೀಡ್‍ಬ್ಯಾಕೂ ಇಲ್ಲ. 

ಪ್ರತಿಭೆಯ ಶೋಧನೆಗೆ ಸಾಹಿತ್ಯ ಪ್ರಕಟ ಮಾಡುವುದಕ್ಕೆ ರಾಜು ಎಲ್ಲಿಗಾದರೂ ಹೋಗುತ್ತಿದ್ದರು, ಕಾವ್ಯ ಸ್ಪರ್ಧೆ, ಪ್ರಬಂಧ ಸ್ಪರ್ದೆ, ಪ್ರತಿ ವರ್ಷ ಬೇಂದ್ರೆ ನಮನ, ಹೀಗೆ ದೊಡ್ಡ ಸಾಹಿತಿಗಳ ಮನೆಯಿಂದ ಹಿಡಿದು, ಎಲ್ಲೊ ಪುಟ್ಟ ನಗರದ ಪುಟ್ಟ ಕಾಲೇಜಿನ ಕನ್ನಡ ವಿದ್ಯಾರ್ಥಿಗಳನ್ನು ಅರಸಿ ಅವರು 
ಹೋಗುತ್ತಿದ್ದರು. ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದವರ ಬರಹಗಳನ್ನು ಎಲ್ಲಿಂದಲೋ ಹಣ ಕೂಡಿಹಾಕಿ [ಬಹುಶಃ ಕೆಲವೊಮ್ಮೆ ತಮ್ಮದೇ ಜೇಬಿನಿಂದ] ತುಂಬಿ ಪುಟ್ಟ ಹೊತ್ತಿಗೆಗಳನ್ನು ಪ್ರಕಟಿಸಿ ಬರಹಗಾರರಿಗೆ ಖುಶಿಯನ್ನು ನೀಡುತ್ತಿದ್ದರು. ಕನ್ನಡದ ಗಂಧಗಾಳಿ ಎಲ್ಲಾದರೂ ಕಾಣಿಸಬಹುದೇ ಅನ್ನಿಸುವಂತಹ ಕ್ರೈಸ್ಟ್ ಕಾಲೇಜಿನಲ್ಲಿ ಕೂತು, ಕನ್ನಡದ ಕೆಲಸವನ್ನು ಮಾಡಿದ್ದಲ್ಲದೇ ಕಾಲೇಜಿಗೂ ಕೀರ್ತಿಯನ್ನು ತಂದರು. ಇದೇ ಪದ್ಧತಿಯನ್ನು ಸಂತ ಜೊಸೆಫ್ ಕಾಲೇಜಿನಲ್ಲಿ ಎಚ್.ಎಸ್.ವಿ ಪ್ರಯತ್ನ ಮಾಡಿದರಾದರೂ, ಅವರದೇ ಕೃತಿ ಪ್ರಕಾಶನದಲ್ಲೂ ಪುಸ್ತಕಗಳನ್ನು ತರುತ್ತಿದ್ದುದರಿಂದ, ಜೊತೆಗೆ ಅವರೇ ತುಂಬಾ ಒಳ್ಳೆಯ ಲೇಖಕರಾಗಿ ತಮ್ಮ ಬರಹಕ್ಕೇ ಹೆಚ್ಚು ಕಾಲವನ್ನು ಮೀಸಲಾಗಿಡುತ್ತಿದ್ದುದರಿಂದ ಆ ಪ್ರಯತ್ನ ಹೆಚ್ಚು ಸಫಲವಾಗಲಿಲ್ಲ. ಹಾಗೆಯೇ ನಾಗತಿಹಳ್ಳಿ ಚಂದ್ರು ತಾನು ಕೆಲಸ ಮಾಡುತ್ತಿದ್ದ ಬಿ.ಇ.ಎಸ್ ಸಂಸ್ಠೆಯಲ್ಲೂ ಇಂಥದೊಂದು ಪ್ರಯತ್ನವನ್ನು ಮಾಡಿದ್ದ. ಪಾಲ್ ಸುದರ್ಶನ್‍ನ ಸುಣ್ಣ ಹಚ್ಚಿದ ಸಮಾಧಿಗಳು ಅನ್ನುವ ಪುಸ್ತಕವನ್ನು ಆ ಸಂಸ್ಥೆ ಪ್ರಕಟಮಾಡಿತ್ತು. ಆದರೆ ನಾಗತಿಹಳ್ಳಿ ಚಂದ್ರುವಿಗೂ ಅವನದೇ ಆದ "ಅಭಿವ್ಯಕ್ತಿ" ಸಂಸ್ಥೆಯಿತ್ತು. ಆ ಸಂಸ್ಥೆಗೆ ಅವನು ಹೆಚ್ಚಿನ ಸಮಯವನ್ನು ಕೊಟ್ಟ, ಜೊತೆಗೆ ಸಿನೆಮಾದ ಕಡೆ ವಾಲಿದ್ದರಿಂದ ಅವನು ಕಾಲೇಜಿನ ಕೆಲಸವನ್ನೂ ಬಿಟ್ಟುಬಿಟ್ಟ. ರಾಜು ತಾವು ಮಾಡಿದ ಕೆಲಸವನ್ನು ಕಾಲೇಜು ಮುಂದುವರೆಸುತ್ತದೆ ಅನ್ನುವ ಬಯಕೆಯನ್ನು ಹೊತ್ತಿದ್ದರೆನ್ನಿಸುತ್ತದೆ, ಆದರೆ ಅದೇ ತೀವ್ರತೆಯಿಂದ ಕನ್ನಡ ಸಂಘದ ಕೆಲಸಗಳು ರಾಜು ನಿವೃತ್ತರಾದ ನಂತರ ನಡೆಯಲಿಲ್ಲ. ಬದಲಿಗೆ ರಾಜುವಿನ ಪುಸ್ತಕ ಪ್ರಕಟಣೆಯ ಪ್ರೀತಿಯನ್ನು ಮುಂದುವರೆಸಿದವರಲ್ಲಿ ಸಂಚಯದ ಡಿ.ವಿ.ಪ್ರಹ್ಲಾದ್, ಛಂದ ಪ್ರಕಾಶನದ ವಸುಧೇಂದ್ರ, ಮತ್ತು ಅಭಿನವದ ನ.ರವಿಕುಮಾರ ಪ್ರಮುಖರು. ಎಲ್ಲರೂ ರಾಜುವಿನಂತೆಯೇ ಮಿತಭಾಷಿಗಳು. ಸಾಧಾರಣವಾಗಿ ವೇದಿಕೆಯಿಂದ ದೂರ ಉಳಿಯುವವರು, ಮತ್ತು ಅನೇಕ ವರ್ಷಗಳಿಂದ ತಮ್ಮ ಕೆಲಸವನ್ನು ಮಾಡಿ ಎತ್ತರಕ್ಕೆ ನಿಂತಿರುವವರು. ಹೀಗಾಗಿ ರಾಜರತ್ನಂ ಅವರಿಂದ ಪಡೆದ ಬಳುವಳಿ ಎಂದು ಹೇಳಲಾದ ಈ ಪುಸ್ತಕ ಪ್ರಕಾಶನ ಮತ್ತು ಕನ್ನಡ ಸಾಹಿತ್ಯ ಸೇವೆಯನ್ನು ಈ ಯುವ ಗೆಳೆಯರಿಗೆ ಬಳುವಳಿಯಾಗಿ ನೀಡಿ ರಾಜು ಅಸುನೀಗಿದ್ದಾರೆ. 

ವೈ‌ಎನ್‍ಕೆ ತಮಗಿದ್ದ ವಿಸ್ತಾರ - ಕಲೆ, ಸಿನೇಮಾ, ನಾಟಕ, ಎಲ್ಲವನ್ನೂ ನವುರಾದ ಹಾಸ್ಯ ಲೇಪಿಸಿ ಸಮ್ಮೆದುರಿಗೆ "ಈ ರೀತಿಯಾದ ವಿಶ್ವ ಸಾಹಿತ್ಯವಿದೆ, ಓದಿದ್ದೀಯೋ, ಈ ಮಟ್ಟಕ್ಕೆ ಬರೆಯಲು ಸಾಧ್ಯವೋ?" ಅನ್ನುವ ಪ್ರಶ್ನೆಗಳನ್ನು ಕೇಳದೆಯೇ ನಮ್ಮೆದುರಿಗಿಡುತ್ತಿದ್ದರು. ಜೊತೆಗೆ ವೈ‌ಎನ್‍ಕೆ ಮನಸ್ಸಿನಲ್ಲಿ ಸದಾ ಹೊಸ ಯೋಜನೆಗಳು, ಪುಸ್ತಕದ ಐಡಿಯಾಗಳು. ಅವರ ಯಾವುದೇ ಪುಸ್ತಕ ತೆಗೆದರೆ ಅದರಲ್ಲಿ ಮುಂದೆ ಬರಲಿರುವ ಪುಸ್ತಕಗಳ ಯಾದಿ ಇರುತ್ತಿತ್ತು [ಒಂದು ಪುಸ್ತಕದ ಹೆಸರೇ ಬರಲಿದೆ, ಬರಲಿದೆ - ಬರಲು ಅಂದರೆ ಪೊರಕೆ ಅನ್ನುವ ಅರ್ಥವನ್ನು ಅವರು ಪನ್ ಪಾಡಿರುವುದನ್ನು ಅದರ ಮುಖಪುಟದಲ್ಲಿ ಕಾಣಬಹುದು]. ಹಾಗೆ ನೋಡಿದರೆ ವೈ‌ಎನ್ಕೆಗೆ ತಾಳ್ಮೆ ಕಡಿಮೆ. ಹೀಗಾಗಿ ಅವರು ಹೆಚ್ಚು ಸಮಯ ಕಳೆಯುತ್ತಿದ್ದದ್ದು ಸ್ವಲ್ಪಮಟ್ಟಿಗೆ ನುರಿತ ಲೇಖಕರೊಂದಿಗೆ - ವಿವೇಕ, ಜಯಂತ - ಇವರಲ್ಲದೇ ಅವರ ರಾಧಿಕಾ ವೃಂದದ ಗ್ಯಾಂಗಿನೊಂದಿಗೆ. ಅವರ ಇಷ್ಟಾಯಿಷ್ಟಗಳು ತುಂಬಾ ಸ್ಪಷ್ಟವಾಗಿರುತ್ತಿದ್ದುವು. ಅದನ್ನು ಯಾವ ಮುಲಾಜೂ ಇಲ್ಲದೇ ಹೇಳಿಯೂ ಬಿಡುತ್ತಿದ್ದರು. ಲಂಕೇಶ್ ಪತ್ರಿಕೆಯಲ್ಲಿ ಲೇಖಕರ ಸಂದರ್ಶನಗಳನ್ನು ಪ್ರಕಟಮಾಡಲು ಪ್ರಾರಂಭಿಸಿದಾಗ ಒಮ್ಮೆ ಲಂಕೇಶ್ ನನ್ನನ್ನು "ನಿಮಗೆ ವೈ‌ಎನ್ಕೆ ಜೊತೆ ಒಳ್ಳೇ ಒಡನಾಟವಿದೆಯಂತೆ, ಅವರ ಸಂದರ್ಶನ ಮಾಡಿಕೊಡಿ" ಎಂದು ಕೇಳಿದ್ದರು. ಲಂಕೇಶ್‌ಗೂ ವೈ‌ಎನ್ಕೆಗೂ ಅಷ್ಟಕ್ಕಷ್ಟೇ ಎನ್ನುವುದು ನಮಗೆಲ್ಲ ತಿಳಿದ ಮಾತೇ. ಅಡಿಗರ ಅಭಿಮಾನಿಗಳಾಗಿ ಕಡೆಯವರೆಗೂ ಮುಂದುವರೆದ ಅನೇಕರಿಗೆ ಲಂಕೇಶ್ ಬಗ್ಗೆ ಒಂದು ಅಸಮಾಧಾನ ಇದ್ದೇ ಇತ್ತು ಅನ್ನಿಸುತ್ತದೆ. "ಒಂದು ತಲೆಮಾರಿನ ಕಣ್ಣು ತೆರೆಸಿದ ಕವಿ" ಎನ್ನುವ ಅಂಕಿತದೊಂದಿಗೆ ತಮ್ಮ ಪುಸ್ತಕವನ್ನು ಅಡಿಗರಿಗೆ ಅರ್ಪಿಸಿದ್ದ ಲಂಕೇಶ್ ಅದನ್ನು "ಒಂದೇ ತಲೆಮಾರಿನ, ಕೇವಲ ಬ್ರಾಹ್ಮಣರ" ಕಣ್ಣು ತೆರೆಸಿದ
 ಕವಿ ಅಂತ ತಿದ್ದಿದಂತಹ ನಿಲುವು ತೆಗೆದುಕೊಂಡದ್ದು ಅನೇಕರಿಗೆ ಅಸಮಾಧಾನ ಮಾಡಿತ್ತು. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ನಾಡಿಗ, ಎಚ್.ಎಸ್.ವಿ, ವೈ‌ಎನ್ಕೆ, ಹೀಗೆ ಅನೇಕರು ಲಂಕೇಶರಿಂದ ದೂರವಿರುತಿದ್ದರು. ಬಹುಶಃ ಅಡಿಗರನ್ನೂ ಲಂಕೇಶರನ್ನೂ ಸಮಾನಾಂತರವಾಗಿ ಭೇಟಿಯಾಗುತ್ತಿದ್ದ ಇಬ್ಬರ ಜೊತೆಗೂ ಒಡನಾಡುತ್ತಿದ್ದವರಲ್ಲಿ ರಾಮಚಂದ್ರ ಶರ್ಮ ಮತ್ತು ಲಕ್ಷ್ಮಣರಾವ್ ಇಬ್ಬರೇ ನೆನಪಿಗೆ ಬರುತ್ತಾರೆ. ಹೀಗಾಗಿ ವೈ‌ಎನ್ಕೆ ಸಂದರ್ಶನದ ಬಯಕೆಯನ್ನು ಲಂಕೇಶ್ ನನ್ನ ಮುಂದಿಟ್ಟಿದ್ದು ನನಗೇ ಆಶ್ಚರ್ಯವನ್ನುಂಟು ಮಾಡಿತ್ತು. ವೈ‌ಎನ್ಕೆಯವರನ್ನು ನಾನು ಈ ವಿಷಯವಾಗಿ ಸಂಪರ್ಕಿಸಿದೆ. ಅವರು "ಅವನ ಪತ್ರಿಕೆಗೆ ನಾನು ಸಂದರ್ಶನ ಕೊಡೋದಿಲ್ಲ. ಕುದುರೆ ರೇಸಿನಲ್ಲಿ ಹಣ ಕಳೆದುಕೊಂಡ ಕಾರಣಕ್ಕೇ ಹಯವದನ ಇಷ್ಟವಾಗಲಿಲ್ಲ ಅನ್ನುವವನಿಗೆ ನಾನೇನು ಸಂದರ್ಶನ ಕೊಡೋದು?" ಅಂತ ಹೇಳಿ ಆ ಸಂಭಾಷಣೆಯನ್ನು ತಮ್ಮದೇ ಶೈಲಿಯಲ್ಲಿ ತುಂಡರಿಸಿದ್ದರು! 

ರಾಜುವಿಗೂ ಕಲೆ, ನಾಟಕಗಳಲ್ಲಿ ತೀವ್ರ ಆಸಕ್ತಿಯಿತ್ತು. ಅವರು ಪುಸ್ತಕ ಪ್ರಕಾಶನವನ್ನು ಕೈಗೊಂಡದ್ದಲ್ಲದೇ ಎರಡು ಸಂಸ್ಥೆಗಳಿಗೆ ತಮ್ಮ ಸಮಯವನ್ನು ಧಾರೆ ಎರೆದು ಉದ್ಧಾರ ಮಾಡಲು ಪ್ರಯತ್ನಿಸಿದ್ದರು. ಆದರೆ ರಾಜು ಎಂದೂ ತಮ್ಮ ಯೋಜನೆಗಳನ್ನು ಬಹಿರಂಗವಾಗಿ ಹೇಳಿದವರಲ್ಲ. ಹಾಗೆ ನೋಡಿದರೆ ರಾಜು ಕ್ಲಾಸಿನಲ್ಲಿ ಹೇಗೆ ಪಾಠ ಮಾಡುತ್ತಿದ್ದರೋ ತಿಳಿಯದು. ಆ ಬಗ್ಗೆ ಅವರ ಶಿಷ್ಯವೃಂದ ಹೇಳಬೇಕು.. ಎಚ್.ಎಸ್.ಆರ್ ಬರೆದ ಬಂಗಾಲದ ಪ್ರವಾಸ ಕಥನ "ಜನ ಗಣ ಮನ" ಪಠ್ಯಪುಸ್ತಕವಾದಾಗ ರಾಜು ಅದನ್ನು ತಮ್ಮ ಕಾಲೇಜಿನಲ್ಲಿ ಕಲಿಸಬೇಕಾದ ಪರಿಸ್ಥಿತಿ ಬಂದಿತ್ತೆಂದು ಕೇಳಿದ್ದೇನೆ. ಆ ಪುಸ್ತಕದಲ್ಲಿ ಯಾವುದೋ ಸಮಾರಂಭದಲ್ಲಿ ರಾಜು ನಿದ್ದೆ ಹೋದ ಒಂದು ಸನ್ನಿವೇಶ ಬರುತ್ತದೆ.. ಅದನ್ನು ರಾಜು ಕ್ಲಾಸಿನಲ್ಲಿ ಹೇಗೆ ನಿಭಾಯಿಸಿದ್ದಿರಬಹುದು ಅನ್ನುವ ಕುತೂಹಲ ನನಗಿದೆ. ಎಂದೂ ವಿಚಲಿತರಾಗದಂತೆ ಇರುತ್ತಿದ್ದ ರಾಜು ನೊಂದದ್ದನ್ನು ನಾನು ಒಮ್ಮೆ ಮಾತ್ರ ನೋಡಿದ್ದೆ - ಬೆಂಗಳೂರಿನ ಹಡ್ಸನ್ ಸರ್ಕಲ್ ಕೆಡವಿದಾಗ ರಾಜು ನೊಂದಿದ್ದರು.. "ಈ ಬಗ್ಗೆ ಒಂದು ಕಥೆ ಬರೀತೀನಿ, ಕೆಡಿಸಿದರು ಅಂತ ಹೆಸರಿಡುತ್ತೀನಿ" ಅಂದಿದ್ದರು. ಆದರೆ ಅವರು ಬಹುಶಃ ಆ ಕಥೆ ಬರೆಯಲು ಸಮಯವೇ ಸಿಗಲಿಲ್ಲ ಅನ್ನಿಸುತ್ತದೆ. 
ಇತರರು ಬರೆಯುತ್ತಿದ್ದುದನ್ನು ಬೆಳಕು ಕಾಣಿಸುವ ಸಂಭ್ರಮದಲ್ಲಿ ರಾಜು ತಮ್ಮನ್ನೇ ಮರೆತುಬಿಟ್ಟಿದ್ದರು. ಈಗಿನ ಕೆಂಪೇಗೌಡನ ಗೋಪುರದ ಹಡ್ಸನ್ ಸರ್ಕಲ್ ಬಗ್ಗೆ ರಾಜು ಏನು ಅಂದುಕೊಂಡಿದ್ದರೋ ನನಗೆ ತಿಳಿಯದು. 


ರಾಜುವಿಗೆ ನನಗೆ ತಿಳಿದಂತೆ ಎರಡು ಪ್ಯಾಷನ್‌ಗಳಿದ್ದವು. ಒಂದು: ಚಿತ್ರಕಲಾ ಪರಿಷತ್ತು. ಅಲ್ಲಿ ರಾಜು ಕ್ಲಾಸುಗಳನ್ನು ತೆಗೆದುಕೊಳ್ಳುತ್ತಿದ್ದರು ಅನ್ನುವುದು ಗೊತ್ತು. ಆದರೆ ರಾಜು ಅವರ ಮಾತಿನಲ್ಲಿ ಚಿತ್ರಕಲಾ ಪರಿಷತ್ತಿನ ಮಾತು ಎಷ್ಟು ಸತತವಾಗಿ ಬರುತ್ತಿತ್ತೆಂದರೆ ಆ ಸಂಸ್ಠೆಯಬಗ್ಗೆ ಅವರಿಗಿದ್ದ ಪ್ರೀತಿ ಸಹಜವಾಗಿ ನಮಗೆ ಕಾಣುತ್ತಿತ್ತು. ಕನ್ನಡ ಸಾಹಿತ್ಯ ಪರಿಷತ್ತು ಅವರ ಸಮಯ ಪಡೆದ ಮತ್ತೊಂದು ಸಂಸ್ಥೆಯಾಗಿತ್ತು [ಸಿದ್ಧಲಿಂಗಯ್ಯನವರು ಅಧ್ಯಕ್ಷರಾಗಿದ್ದು, ರಾಜು ಕಾರ್ಯದರ್ಶಿಯಾಗಿದ್ದ ದಿನಗಳಲ್ಲಿ] ಅವರು ಸಾಹಿತ್ಯ ಪರಿಷತ್ತನ್ನು ಉದ್ಧಾರ ಮಾಡಲು - ಅದರ ಸದಸ್ಯತ್ವವನ್ನು ಸಾಹಿತ್ಯಪ್ರಿಯರಿಂದ ತುಂಬಿಸಬೇಕು ಅನ್ನುವ ಛಲವನ್ನು ಹೂತ್ತು ಎಷ್ಟೋ ಸಾಹಿತಿಗಳನ್ನು ಅದಕ್ಕೆ ಸದಸ್ಯರನ್ನಾಗಿ ಸೇರಿಸಿದರು. ಮನೆಯ ಪಕ್ಕದಲ್ಲೇ ಇದ್ದರೂ ಎಂದೂ ಪರಿಷತ್ತಿನ ಕಾರ್ಯಕ್ರಮಗಳಿಗೆ ಹೋಗುವ ಕಾರಣವೇ ಸಿಗದಿದ್ದ ನಾನು ಅವರಿದ್ದ ಕಾಲದಲ್ಲಿ ಪರಿಷತ್ತಿನಲ್ಲಿ ಎಷ್ಟೊಂದು ಸಣ್ಣ ಪುಟ್ಟ ಆದರೆ ಅರ್ಥಪೂರ್ಣ ಕೆಲಸಗಳನ್ನು ಮಾಡಬಹುದೆಂದು ರಾಜು ನಿರೂಪಿಸಿ ತೋರಿಸಿದ್ದರು. ಅಜಾತ ಶತ್ರು ರಾಜು ಸಾಹಿತ್ಯ ಪರಿಷತ್ತಿನಲ್ಲಿನ ತಮ್ಮ ಇಡೀ ಸಮಯವನ್ನು ಮುಗಿಸದೇ ರಾಜೀನಾಮೆ ಕೊಟ್ಟು ಕೈ ಎತ್ತಿದರು. ಆದರೆ ಸುದ್ದಿ ಮಾಡಬಹುದಾಗಿದ್ದ ಆ ರಾಜೀನಾಮೆಯನ್ನೂ ಅವರು ತಮ್ಮದೇ ಸೈಲೆಂಟ್ ರೀತಿಯಲ್ಲಿ ನೀಡಿ ಪರಿಷತ್ತಿನಿಂದ ಅಂತರ್ಧಾನರಾದರು. ಕನ್ನಡದ ಜಂಗಮರಾದ ರಾಜು ಅಸುನೀಗಿದ್ದೂ ಕನ್ನಡದ ಕೆಲಸ ಮಾಡುತ್ತಲೇ, ಜಂಗಮರಾಗಿ ಸುತ್ತಾಡುತ್ತಿದ್ದಾಗಲೇ.

ಹಾಗೆ ನೋಡಿದರೆ ವೈ‌ಎನ್ಕೆ ಸಂಸ್ಥೆಗಳನ್ನು ಕಟ್ಟಲು ಪ್ರಯತ್ನಿಸಿದವರಲ್ಲ. ಅವರೇ ಒಂದು ಸಂಸ್ಥೆಯಾಗಿದ್ದರು. ಆದರೆ ವೈ‌ಎನ್ಕೆ ಗರಡಿಯಲ್ಲಿ ಪಳಗಿದ ಇಂದಿನ ಪತ್ರಕರ್ತರಲ್ಲಿ ವಿಜಯ ಕರ್ನಾಟಕದ ವಿಶ್ವೇಶ್ವರ ಭಟ್ಟರು, ಮತ್ತು ಕನ್ನಡಪ್ರಭದ ಜೋಗಿ ಪ್ರಮುಖರು. ಅದರಲ್ಲೂ ಜೋಗಿ ವೈ‌ಎನ್ಕೆಯವರ ಪನ್ ಮತ್ತು ಹಾಸ್ಯ ಮೈಗೂಡಿಸಿಕೊಳ್ಳದಿದ್ದರೂ ಅವರ ಓದಿನ, ಆಸಕ್ತಿಯ ವಿಸ್ತಾರಗಳನ್ನು ಅದ್ಭುತವಾಗಿ ಮೈಗೂಡಿಸಿಕೊಂಡಿದ್ದಾರೆ. ವೈ‌ಎನ್ಕೆಯವರ ಜಂಗಮತ್ವ ಅವರು ಸಂಪಾದಕರಾಗಿ ಅಲ್ಲಿ ಇಲ್ಲಿ ಹೋಗಿ ಬಂದದ್ದನ್ನು ಬಿಟ್ಟರೆ ಬೆಂಗಳೂರಿಗೆ ಸೀಮಿತವಾಗಿತ್ತು. ಅಥವಾ ಬೆಂಗಳೂರಿನ ಉದ್ದಗಲಕ್ಕೂ ವಿಸ್ತಾರಗೊಂಡಿತ್ತು ಅನ್ನಬಹುದು. ವೈ‌ಎನ್ಕೆಗೆ ಊರಿನ ಉದ್ದಗಲಕ್ಕೂ ಇದ್ದ ಎಲ್ಲ ಹೊಟೇಲುಗಳೂ, ಯಾವ ಹೊಟೇಲಿನಲ್ಲಿ ಏನು ಛಂದ, ಅದರ ಮಾಲೀಕರು ಯಾರು ಅನ್ನುವುದರಿಂದ ಹಿಡಿದು ಆಯಾ ಹೋಟೇಲಿನ ಮಾಣಿಗಳ ಹೆಸರಿನವರೆಗೆ ಎಲ್ಲವೂ ತಿಳಿದಿರುತ್ತಿತ್ತು. ಅವರು ಮೊದಲಿಗೆ "ತೀರ್ಥರೂಪ" ಅನ್ನುವ ಟೈಟಲ್‌ಅನ್ನು ಬೆಂಗಳೂರುನ ಬಾರು ಪಬ್ಬುಗಳ ಬಗ್ಗೆ ಬರೆಯಬೇಕೆಂದಿದ್ದ ಪುಸ್ತಕಕ್ಕಾಗಿ ಕಾಯ್ದಿಟ್ಟಿದ್ದರು. ಆದರೆ ಅದನ್ನು ಮದ್ಯದ ಬಗೆಗಿನ ಪದ್ಯದ ಪುಸ್ತಕಕ್ಕೆ ದಾನ ಮಾಡಿಬಿಟ್ಟರು. ಬಹುಶಃ ಮೊದಲ ಕವಿತಾ ಸಂಗ್ರಹವಾದ "ಪದ್ಯ ಇಷ್ಟು ಲೈಟ್ ಆದರೆ ಹೇಗೆ ಸ್ವಾಮಿ?" ಬಂದನಂತರದ "ತೀರ್ಥರೂಪ"ಕ್ಕೆ ಇಟ್ಟಿದ್ದ ಅಡ್ಡಹೆಸರು "ಮದ್ಯ ಇಷ್ಟು ಟೈಟ್ ಆದರೆ ಹೇಗೆ ಸ್ವಾಮಿ"ಯೇ ಸರಿಯಿರುತ್ತಿತ್ತೇನೋ. ವೈ‌ಎನ್ಕೆ ತಮ್ಮ ಮೂಲ ಕನಸಾದ "ಬೆಂಗಳೂರಿನ ಗುಂಡು ಗೈಡ್ - ತೀರ್ಥರೂಪ" ದ ತೀರ್ಥಯಾತ್ರೆ ನಮಗೆಲ್ಲಾ ಮಾಡಿಸಿದ್ದರೆ ನಾವೂ ಟೈಟಾಗಿ ಕೂತಿರಬಹುದಿತ್ತು. "ಗುಂಡು ಹಾಕುವುದಕ್ಕೆ ಮುನ್ನ - ನಾವು ಜಂಗಮ, ರೂಮು ಸ್ಥಾವರ, ಗುಂಡು ಹಾಕಿದ ಮೇಲೆ ನಾವು ಸ್ಥಾವರ ರೂಮು ಜಂಗಮ" ಅಂತ ವೈ‌ಎನ್ಕೆ ಬರೆದಿದ್ದರು. ಗುಂಡೇ ಹಾಕದ ರಾಜು ಯಾವಾಗಲೂ ಜಂಗಮರಾಗಿರುತ್ತಿದ್ದುದರಲ್ಲಿ ಆಶ್ಚರ್ಯವೇನೂ ಇಲ್ಲ. 

ಮುಗಿಸುವ ಮುನ್ನ ಒಂದು ಕಡೆಯ ಮಾತು. ವೈ‌ಎನ್‍ಕೆ ತಮ್ಮ ಗೆಳೆಯರ ಬಳಗವನ್ನು ಕರೆದದ್ದು ರಾಧಿಕಾ ವೃಂದ ಎಂದು - ತಮ್ಮ ಮನೆ ರಾಧಿಕಾಕ್ಕೆ ಆಹ್ವಾನವಿದ್ದ ಕೆಲವರದೇ ಹೆಸರಿನ ಯಾದಿ ಅದು. ರಾಜು, ಮತ್ತವರ ನಿಕಟವರ್ತಿಗಳು ಇಟ್ಟುಕೊಂಡ ಹೆಸರು "ಪಿಪಿ ಗೆಳೆಯರ ಬಳಗ". ಮೊದಲಿಗೆ ಹತ್ತಾರು ಮಂದಿ ಈ ಬಳಗದಲ್ಲಿ ಇದ್ದರಂತೆ, ಆದರೆ ಕಡೆಗೆ ಸ್ಥಾಯಿಯಾಗಿ ನಿಂತವರು ರಾಜು, ಎಸ್.ಎಸ್.ಆರ್ ಮತ್ತು ಕೆವಿ ನಾರಾಯಣ. ಪಿಪಿ ಅನ್ನುವ ಹೆಸರಿನ ಅರ್ಥ ಏನಿರಬಹುದು ಎನ್ನುವುದಕ್ಕೆ ಅನೇಕ ಉಪಕಥೆಗಳು ಚಾಲ್ತಿಯಲ್ಲಿವೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಚಾಲ್ತಿಯಲ್ಲಿರುವ ಕಥೆ ಪೋಲೀ ಪಟಾಲಂ ಗೆಳೆಯರ ಬಳಗ..... ರಾಜು, ಎಚ್.ಎಸ್.ಆರ್. ಕೆವಿ‌ಎನ್... ಪೋಲೀ ಪಟಾಲಂ!! ಇದಕ್ಕಿಂತ ದೊಡ್ಡ ಜೊಕ್ ಫಾಲ್ಸ್ ಮತ್ತೊಂದಿಲ್ಲ. ಹಾಗಾಗಿಯೇ ಇದನ್ನು "joke false" ಎಂದು ವೈ‌ಎನ್‍ಕೆ ಶೈಲಿಯಲ್ಲಿ ಪನ್ ಮಾಡಬೇಕಾಗಿದೆ. 

ಅಹಮದಾಬಾದು ೦೨ ಮಾರ್ಚ್ ೨೦೦೮

Labels: 

ಶಿಸ್ತಿನ ಚಿತ್ತಾಲರಿಗೆ ಪಂಪ...


ಯಶವಂತ ಚಿತ್ತಾಲರಿಗೆ ಪಂಪ ಪ್ರಶಸ್ತಿ ಬಂದಿದೆ ಅನ್ನುವುದು ಖುಶಿಯ ವಿಷಯ. ದೂರದೂರಿನಲ್ಲಿ ಕೂತು ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತಿರುವ ಚಿತ್ತಾಲರು ಯಾವ ಪ್ರಶಸ್ತಿಯನ್ನೂ ಅಟ್ಟಿಸಿಕೊಂಡು ಹೋದವರಲ್ಲ. ಅಥವಾ ಅಲ್ಲಿ ಇಲ್ಲಿ ಸೆಮಿನಾರುಗಳಲ್ಲಿ ಕಾಣಿಸಿಕೊಂಡವರಲ್ಲ. ತಮ್ಮಷ್ಟಕ್ಕೆ ತಾವು ಬ್ಯಾಂಡ್‍ಸ್ಟಾಂಡಿನಲ್ಲಿ ಕೂತು ಸಾಹಿತ್ಯದ ಬಗ್ಗೆ ಸದಾ ಚಿಂತಿಸುತ್ತ, ಹೊಸ ಸಾಹಿತ್ಯವನ್ನು ಬೆರಗಿನಿಂದ ನೋಡುತ್ತಾ, ಕ್ರಿಕೆಟ್ ಮ್ಯಾಚುಗಳನ್ನು ಚಾಚೂ ಬಿಡದೇ ನೋಡುತ್ತಾ ಶಿಸ್ತಿನ ಜೀವನವನ್ನು ಜೀವಿಸುತ್ತಿರುವವರು. ಕಣ್ಣಿಗೆ ಬೀಳದಿರುವ ವ್ಯಕ್ತಿಗಳನ್ನು ನಾವು ಬಹುತೇಕ ಮರೆತುಬಿಡುತ್ತೇವೆ. ಹಾಗೆ ಮರೆಯದಿರುವಂತೆ ಸದಾ ನೆನಪಿನಲ್ಲಿ ಉಳಿಯಬೇಕಾದರೆ ಎರಡು ಮಾರ್ಗಗಳು ಮಾತ್ರ ಇವೆ. ಒಂದು: ಚಿತ್ತಾಲ, ರಾಘವೇಂದ್ರ ಖಾಸನೀಸ, ದೇವನೂರ ಮಹಾದೇವ -- ಇಂಥವರ ಥರ ಅದ್ಭುತ ಪ್ರತಿಭೆ ಇರಬೇಕು, ಇಲ್ಲವೇ ಆಗಾಗ ಏನಾದರೊಂದು ಬರೆದು ಜನರ ಗಮನವನ್ನು ಸೆಳೆಯುತ್ತಿರಬೇಕು. ಚಿತ್ತಾಲರಿಗೆ ಅದ್ಭುತ ಪ್ರತಿಭೆಯೂ ಇದೆ, ಜೊತೆಗೆ ನಿರಂತರ ಒಳ್ಳೆಯ ಕೃತಿಗಳನ್ನು ಸಾಹಿತ್ಯಕ್ಕರ್ಪಿಸುವ ಶಿಸ್ತೂ ಇದೆ. ಹೀಗಾಗಿಯೇ ಅವರು ಒಂದಕ್ಕಿಂದ ಒಂದು ಉತ್ತಮ ಕೃತಿಗಳನ್ನು ನಮಗೆ ನೀಡುತ್ತಾ, ನಮ್ಮನ್ನೆಲ್ಲ ಪ್ರೋತ್ಸಾಹಿಸುತ್ತಾ, ಹುರುದುಂಬಿಸುತ್ತಾ ಬೆಳೆದು ನಿಂತಿದ್ದಾರೆ.

ಚಿತ್ತಾಲರು ಬಹಳ ಶಿಸ್ತಿನ ವ್ಯಕ್ತಿ. ಅವರ ನಡೆಯಲ್ಲೂ ನುಡಿಯಲ್ಲೂ ಬರವಣಿಗಯಲ್ಲೂ ಈ ಶಿಸ್ತು ಕಾಣಿಸುತ್ತದೆ, ಎಲ್ಲವೂ ನಿಯೋಜಿತವಾಗಿ ನಡೆಯಬೇಕು. ಎಲ್ಲಕ್ಕೂ ಒಂದು ಪದ್ಧತಿಯಿರಬೇಕು, ಒಂದು ಕ್ರಮವಿರಬೇಕು. ಇಲ್ಲವಾದಲ್ಲಿ ಚಿತ್ತಾಲರು ಅಸಹನೆಗೊಳ್ಳುತ್ತಾರೆ. ಅವರು ಬರೆಯುವ ಕಥೆಯ ಹಸ್ತಪ್ರತಿಯೂ ಅಷ್ಟೇ - ಅದನ್ನೇ ತೆಗೆದು ಮುದ್ರಿಸಬಹುದು - ಅಷ್ಟು ಸ್ಫುಟವಾಗಿರುತ್ತದೆ. ಅನೇಕ ವರ್ಷಗಳಿಂದಲೂ ಗಮನಿಸುತ್ತ ಬಂದಿದ್ದೇನೆ - ಅವರ ಕೈ ಬರಹ ಒಂದಿಷ್ಟೂ ಬದಲಾಗಿಲ್ಲ. ಅವರ ಹಸ್ತಪ್ರತಿಯನ್ನು, ಅಥವಾ ಅವರು ಬರೆದ ಕಥೆಯನ್ನು ಮುದ್ರಣಕ್ಕೆ ಮುನ್ನ ನೋಡುವ ಸವಲತ್ತನ್ನು ಅವರು ಕೆಲವೇ ಗೆಳೆಯರಿಗೆ ನೀಡಿದ್ದಾರೆ. ಆ ಸವಲತ್ತು ಸುಲಭವಾಗಿ ದಕ್ಕುವ ಸವಲತ್ತಲ್ಲ. ಅದನ್ನು ಗೆಳೆತನ ನಿಭಾಯಿಸಿ ಪಡೆಯಬೇಕು. ಚಿತ್ತಾಲರ ಗೆಳೆತನ ನಿಭಾಯಿಸುವುದು ಸರಳವಾದ ಮಾತೇನೂ ಅಲ್ಲ. ಅವರು ಗೆಳೆತನಕ್ಕೆ ಎಷ್ಟು ಆದ್ಯತೆ ನೀಡುತ್ತಾರೋ ಅಷ್ಟೇ ನಿಮ್ಮಿಂದ ಬಯಸುತ್ತಾರೆ ಸಹ. ಹೀಗಾಗಿ ನೀವು ಮುಂಬಯಿಗೆ ಹೋಗಿ ಬರೇ ಪೋನ್ ಮಾಡಿ ಅದರ ಮೂಲಕ ನಿಮ್ಮ ಸ್ನೇಹವನ್ನು ನಿಭಾಯಿಸುವ ಹುನ್ನಾರ ಹಾಕಿದ್ದರೆ ಮರೆತುಬಿಡಿ. ಅವರು ಪ್ರೀತಿಯ ನಿಷ್ಟೂರದಿಂದಲೇ ನಿಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಯಾವುದೇ ವಿಚಾರವನ್ನಾಗಲೀ ಅವರು ಎಷ್ಟು ಕ್ರಮಬದ್ಧವಾಗಿ ನೋಡುತ್ತಾರೆಂದರೆ, ಎಲ್ಲಕ್ಕೂ ಒಂದು ಫೈಲು ಮತ್ತು ಅದಕ್ಕೆ ಒಂದು ಕ್ರಮಸಂಖ್ಯೆ ಬಹುಶಃ ಅವರು ಹಾಕಿಟ್ಟುಬಿಟ್ಟಿರುತ್ತಾರೆ.

"ಬಿಯರು ಕುಡಿಯಲು ತಕ್ಕ ಸಮಯ ಸಂಜೆ ಏಳು" ಅನ್ನುವ ಅವರ ಮಾತನ್ನು ಜಯಂತ ತನ್ನ ಬರವಣಿಗೆಯಲ್ಲಿ ಬರೆದಿದ್ದಾನೆ. ಆದರೆ ಅದು ಬಿಯರು ಕುಡಿಯುವ ಸಮಯಕ್ಕೆ ಮಾತ್ರ ಸೀಮಿತವಾದದ್ದಲ್ಲ. ಬಿಯರಿನ ಬಾಟಲಿ ಹಿಡಿಯುವ ರೀತಿ, ಅದರ ಮುಚ್ಚಳವನ್ನು ತೆಗೆಯುವ ರೀತಿ ಅದನ್ನು ಗ್ಲಾಸಿಗೆ ನೊರೆಬರದಂತೆ ಹಾಕುವ ರೀತಿಯೂ ಅವರಿಗೆ ಮುಖ್ಯವಾಗುತ್ತದೆ. ಲಾವಾಸ್ ಎಂಬ ಗಾಂಧಿಬಜಾರಿನ ಬಾರಿನಲ್ಲಿ ಕೂತು ಜೋರಿನ ಚರ್ಚೆ ಮಾಡುತ್ತಿದ್ದ ಡಿ.ಆರ್. ಶೂದ್ರ, ಕೀ.ರಂ. ತಿರುಮಲೇಶರ ನಡುವೆ ಚಿತ್ತಾಲರನ್ನು ಊಹಿಸಲೂ ಸಾಧ್ಯವಿಲ್ಲ. ಅವರಿಗೆ ಎಲ್ಲವೂ ಥಾಟಾಗಿ ನೀಟಾಗಿ ಇರಬೇಕು. ಬಿಯರಿನ ಸಮಯ ಏಳು, ಅದರ ಜೊತೆಗೆ ತೆಗೆದುಕೊಳ್ಳಬೇಕಾದ ತಿಂಡಿ ಏನು, ಬಿಯರು ಕುಡಿದ ಎಷ್ಟು ಹೊತ್ತಿನ ನಂತರ ಊಟ ಮಾಡಬೇಕು.. ಎಲ್ಲವೂ ನಿಯೋಜಿತವಾಗಿರಬೇಕು.

ಚಿತ್ತಾಲರಿಗೆ ಮಧುಮೇಹವಿದೆ. ಇಷ್ಟು ಶಿಸ್ತನ್ನು ಪಾಲಿಸುವ, ಈಗಲೂ ದಿನಾ ವಾಕಿಂಗ್ ಹೋಗುವ ಅವರಿಗೆ ಯಾವ ರೋಗವೂ ಬರಲಿಕ್ಕೆ ಸಾಧ್ಯವಿಲ್ಲ. ಆದರೆ ಅವರಿಗೆ ಮಧುಮೇಹ ಎನ್ನುವುದು ತಿಳಿದಾಗ ಒಂದು ಗಮ್ಮತ್ತಿನ ವಿಚಾರ ಆಯಿತೆಂದು ಕೇಳಿದ್ದೇನೆ. ಮಧುಮೇಹದಿಂದಾಗಿ ದಿನವೂ ಊಟಕ್ಕೆ ಮೊದಲು ಅವರು ಇನ್ಸುಲಿನ್ ಇಂಜೆಕ್ಷಣ್ ತೆಗೆದುಕೊಳ್ಳಬೇಕು. ಅದನ್ನು ದಿನವೂ ತೆಗೆದುಕೊಳ್ಳಬೇಕಾದ್ದರಿಂದ ತಮಗೆ ತಾವೇ ಚುಚ್ಚಿಕೊಳ್ಳುವ ಅಭ್ಯಾಸ ನಡೆಸಬೇಕಿತ್ತು. ಶಿಸ್ತಿನ ಚಿತ್ತಾಲರು ಅಭ್ಯಾಸ ಮಾಡುವುದು ಹೇಗೆ? ಒಂದು ಸೌತೇಕಾಯನ್ನು ಹಿಡಿದು ಅದಕ್ಕೆ ಸೂಜಿ ಚುಚ್ಚಿ ಅಭ್ಯಾಸ ಮಾಡಿ ಕೈಯನ್ನು ಪಳಗಿಸುವ ಪ್ರಯತ್ನ ಮಾಡಿದ್ದರೆಂದು ಪ್ರತೀತಿ. ಅದನ್ನು ನೋಡಿ ಡಾಕ್ಟರನಾದ ಅವರ ಮಗ ರವಿ ಹೇಳಿದ್ದನಂತೆ: "ಸೌತೇಕಾಯಿಗೆ ಚುಚ್ಚಿ ಪ್ರಯೋಜನವಿಲ್ಲ. ದಿನವೂ ಕೈಗೇ ಚುಚ್ಚಿಕೊಂಡು ಅಭ್ಯಾಸ ಮಾಡಿಕೊಳ್ಳಿ" ಎಂದು. ಊಟದ ವಿಚಾರದಲ್ಲೂ ಈ ಶಿಸ್ತನ್ನು ಅವರು ತೋರಿಸುತ್ತಾರೆ. ಅವರ ತಟ್ಟೆಯಲ್ಲಿ ಅನೇಕ ಕಟೋರಿಗಳು. ಎಲ್ಲವೂ ಕಟೋರಿಯನುಸಾರವಾಗಿ, ಒಂದು ವಾಟಿಕೆ ಅನ್ನ ತುಸುವಷ್ಟೇ ತರಕಾರಿ, ಲೆಕ್ಕ ಹಾಕಿದಂತೆ ರೊಟ್ಟಿ ಎಲ್ಲವೂ ಇಂತಿಷ್ಟು... ಹೆಚ್ಚೂ ಇಲ್ಲ ಕಡಿಮೆಯೂ ಇಲ್ಲ. ಹೀಗಾಗಿಯೇ ಅವರು ಜಾಗೃತ ಸಾಹಿತ್ಯ ಸಮ್ಮೇಳನಕ್ಕೆ ಬಂದಾಗ ಅವರು ಕೋರಿದ್ದ ಆಂಧ್ರಾ ಊಟಕ್ಕೆ ಕರೆದೊಯ್ಯಲು ನಾವುಗಳು ತಯಾರಿದ್ದೆವು. ಎಂದಿನಂತೆ ಶಿಸ್ತೇ ಇಲ್ಲದ ಜಯಂತ ಮಾಯವಾಗಿದ್ದ. ಚಿತ್ತಾಲರು ಸಿಟ್ಟಾಗಿ ತುಸುವೇ ಏರಿದ ದನಿಯಲ್ಲಿ ಹೇಳಿದ್ದರು - "ನಾನು ಡಯಾಬಿಟಿಕ್.. ತುಸುವೇ ಸಮಯದಲ್ಲಿ ಊಟ ಸಿಗದಿದ್ದರೆ ನನ್ನ ಜ್ಞಾನ ತಪ್ಪಬಹುದು." ಹೆದರಿದ ನಾವೆಲ್ಲ ತಕ್ಷಣ ಚಿತ್ತಾಲರನ್ನು ಆಟೋದಲ್ಲಿ ಏರಿಸಿ ತಕ್ಷಣವೇ ಕಲಾಕ್ಷೇತ್ರದಿಂದ ನಾಗಾರ್ಜುನಾಕ್ಕೆ ಕರೆದೊಯ್ದೆವು. ಅಲ್ಲಿಗೆ ಸೇರಿದ ನಂತರ ಚಿತ್ತಾಲರು ತುಂಟತನದಿಂದ ಹೇಳುತ್ತಾರೆ "ನನ್ನ ಬಳಿ ಚಾಕೊಲೇಟ್ ಇತ್ತು, ಅಂಥಾ ಕಷ್ಟದ ಪರಿಸ್ಥಿತಿಯೇನೂ ಅಲ್ಲ.. ಈಗ ನಾನು ಇನ್ಸುಲಿನ್ ತೆಗೆದುಕೊಳ್ಳುತ್ತೇನೆ!!"

ನಾಗಾರ್ಜುನಾ ಅಂದಾಗ ನನಗೆ ಮತ್ತೊಂದು ವಿಚಾರವೂ ನೆನಪಾಗುತ್ತದೆ. ರೆಸಿಡೆಂಸಿ ರಸ್ತೆಯಲ್ಲಿ ದಿವಾಕರ್ ಜೊತೆ ನಾನು ನಡೆಯುತ್ತಿದ್ದೆ. ನಾಗಾರ್ಜುನಾದ ಬಳಿ ಬರುವ ವೇಳೆಗೆ ನಾಗಾರ್ಜುನಾದಿಂದ, ಕೆಳಗಿದ್ದ ಚೈನೀಸ್ ರೆಸ್ಟುರಾದಿಂದ ಆಹಾರದ ವಾಸನೆ ಬರುತ್ತಿತ್ತು. ಆಂಧ್ರಮಸಾಲೆಗೆ ಘಮ್ಮೆಂದು ಫ್ರೈಡ್ ರೈಸಿನ ಆಸ್ವಾದವನ್ನು ಬೆರೆಸಿ - ತುಸುವೇ ಈರುಳ್ಳಿಯನ್ನು ವಗ್ಗರಣೆ ಹಾಕಿದಾಗ ಬರುವ ಸಮ್ಮಿಶ್ರ ಪರಿಮಳವದು. "ಈ ವಾಸನೆ ಹೇಗಿದೆ?" ದಿವಾಕರ್ ಕೇಳಿದರು. "ಯಾಕೆ?, ಹಸಿವಾಗಿರುವುದರಿಂದ ಅದ್ಭುತ ಅಂತಲೇ ಅನ್ನಿಸುತ್ತಿದೆ. ಆದರೆ ಸಸ್ಯಾಹಾರಿಯಾದ ನನಗೆ ಇದು ಉಪಯೋಗದ್ದಲ್ಲ" ಎಂದೆ. ಅದಕ್ಕೆ ದಿವಾಕರ್ ಹೇಳಿದ ಮಾತು ಕೇಳಿ ನಾನು ಅವಾಕ್ಕಾದೆ "ಊಟ ಮಾಡುವುದಕ್ಕಲ್ಲ ಕೇಳಿದ್ದು. ಈ ವಾಸನೆಯನ್ನು ನೀವು ಬರಹದಲ್ಲಿ ಗ್ರಹಿಸಲು ಸಾಧ್ಯವೇ?".. ನನ್ನ ಕನ್ನಡ ಎಷ್ಟಾದರೂ ಅಷ್ಟಕ್ಕಷ್ಟೇ. "ಇಲ್ಲ, ಅದು ನನ್ನ ಕೈಲಾಗುವ ಕೆಲಸವಲ್ಲ" ಅಂದೆ. ಈ ವಾಸನೆಯನ್ನು, ಇಲ್ಲಿನ ಈಗಿನ ಭಾವನೆಯನ್ನು ಅದ್ಭುತವಾಗೆ ಬರವಣಿಗೆಯಲ್ಲಿ ಸೆರೆಹಿಡಿಯಬಲ್ಲವರು ಚಿತ್ತಾಲರು ಮಾತ್ರ ಅಂತ ದಿವಾಕರ್ ಹೇಳಿದರು. ಚಿತ್ತಾಲರ ಬರವಣಿಗೆಯನ್ನು ಕಂಡಾಗ ದಿವಾಕರ್ ಹೇಳಿದ್ದು ಸರಿ ಅನ್ನಿಸುತ್ತದೆ. ಇಂತಹ ಸೂಕ್ಷ್ಮಗಳನ್ನು ಸೆರೆಹಿಡಿಯಬಲವರು ಚಿತ್ತಾಲರು ಮಾತ್ರ!

ಶಿಕಾರಿ ಬರೆಯುವಾಗ ಅವರು ತಮ್ಮ ವೃತ್ತಿಯ ಉತ್ತುಂಗದಲ್ಲಿದ್ದರು. ಅಂದರೆ ಆಗ ಅವರು ಬೇಕ್‌ಲೈಟ್ ಹೈಲಾಮ್‌ನ ಕೆಲಸ ಮಾಡುತ್ತಲೇ ಮುಂಬಯಿ, ಹೈದರಬಾದು ಮತ್ತು ಇತರ ಜಾಗಗಳಿಗೆ ಪ್ರಯಾಣಿಸುತ್ತಲೇ ಏರ್‌ಪೋರ್ಟ್ ಲೌಂಜುಗಳಲ್ಲಿ ಕಾದಂಬರಿಯನ್ನು ಬರೆಯುತ್ತಿದ್ದರಂತೆ. ಪುರುಷೋತ್ತಮ ಬರೆಯುವಾಗ ಅವರು ಪ್ರತಿದಿನ ಮುಂಜಾನೆ ಐದು ಘಂಟೆಗೇ ಎದ್ದು ಇಂತಿಷ್ಟು ಪುಟಗಳು ಅಂತ ಬರೆಯುತ್ತಿದ್ದರಂತೆ. ಪುರುಷೋತ್ತಮ ಬರೆದು ಮುಗಿಸಿದ ಕೆಲ ದಿನಗಳಲ್ಲಿ ಅವರ ಮನೆಗೆ ಹೋಗಿದ್ದಾಗ ಸೋಫಾದ ಒಂದು ಭಾಗ ಮಾತ್ರ ಜೀರ್ಣವಾಗಿತ್ತು. ನಾನು ಉಡಾಫೆಯಿಂದ "ಅದು ಪುರುಷೋತ್ತಮ ಸೃಷ್ಟಿಯಾದ ಜಾಗವೇ?" ಅಂತ ಕೇಳಿದೆ. ನಿಜಕ್ಕೂ ಅದು ಅವರು ಕೂತು ಕಾದಂಬರಿಯನ್ನು ಬರೆಯುತ್ತಿದ್ದ ಜಾಗವೇ ಆಗಿತ್ತು! ಅಲ್ಲಿಂದ ಮುಂಜಾನೆಯ ಸಮುದ್ರದ ದೃಶ್ಯ ಕಿಟಕಿ ತೆರೆದು ಕತ್ತಲ ಸಮುದ್ರವನ್ನು ನೋಡುತ್ತಾ ಕಾದಂಬರಿಯ ರಚನೆ ಮಾಡುತ್ತಿದ್ದರು! ಪುರುಷೋತ್ತಮದ ಹಸ್ತಪ್ರತಿಯ ತಯಾರಾದಾಗಲೇ ನನಗೆ ಚಿತ್ತಾಲರ ಪರಿಚಯವಾದದ್ದು. ಅವರು ಅದನ್ನು ಮುಗಿಸಿ ತುಂಬಾ ಹುರುಪಿನಿಂದ ಅದನ್ನು ಆಯ್ದ ಗೆಳೆಯರಿಗೆ ತೋರಿಸಲು ಅದೇ ಕೆಲಸವಾಗೆ ಬೆಂಗಳೂರಿಗೆ ಬಂದಿದ್ದರು. ವಿವೇಕನ ಜೊತೆ ಅಬ್ಬೇಪಾರಿಯಾಗಿ ಓಡಾಡುತ್ತಿದ್ದ ನನಗೂ ಆ ಹಸ್ತಪ್ರತಿ ಓದುವ ಭಾಗ್ಯ ಒದಗಿತು. ಆದರೆ ನನ್ನ ಕೈಗೆ ಹಸ್ತಪ್ರತಿ ಕೊಡುವ ಮುನ್ನ ನಾನು ಆ ಸವಲತ್ತಿಗೆ ಪಾತ್ರ ಅನ್ನುವುದನ್ನು ಚಿತ್ತಾಲರಿಗೆ ನಿರೊಪಿಸಿದ ನಂತರವೇ ನನಗೆ ಅದರ ಮೇಲೆ ಕೈಯಿಡಲು ಪರವಾನಗಿ ಸಿಕಿದ್ದು. ಅದರ ಅಂತ್ಯದ ಬಗ್ಗೆ ನಾನು ಏನೋ ಟಿಪ್ಪಣಿ ಮಾಡಿದ್ದೆ. ಮೊದಲಿಗೆ ಚಿತ್ತಾಲರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಅನ್ನಿಸುತ್ತದೆ. ಆದರೆ ಮುಂಬಯಿಗೆ ಹೋದ ನಂತರ ಸ್ವಲ್ಪ ಬದಲಾವಣೆಗಳನ್ನು ಮಾಡಿ ಆ ಬಗ್ಗೆ ನನಗೆ ಹೇಳಿದರು ಸಹ!

ಪುರುಷೋತ್ತಮದ ನಂತರ ಬರೆದ ಕೇಂದ್ರ ವೃತ್ತಾಂತದ ರೂಪರೇಶೆಗಳನ್ನು ಅವರು ವಿವರಿಸಿದ ರೀತಿಯೇ ಗಮ್ಮತ್ತಿನದು. ಒಂದು ಕಾಗದ ತೆಗೆದುಕೊಂಡು ಅದರಲ್ಲಿ ಒಂದು ಚುಕ್ಕೆ ಇಟ್ಟು - "ಇದು ಕೇಂದ್ರ" ಎಂದರು. ನಂತರ ಅದರ ಸುತ್ತಲೂ ಒಂದು ವೃತ್ತಾಕಾರವನ್ನು ಮಾಡಿದರು. ವೃತ್ತದ ಮೇಲೆ ಮತ್ತೊಂದು ಚುಕ್ಕೆಯನ್ನು ಇಟ್ಟರು. ಈ ವ್ಯಕ್ತಿ ವೃತ್ತದ ಮೇಲಿದ್ದಾನೆ, ದೂರದಿಂದ ಕಥೆಯ ಆಗುಹೋಗನ್ನು ನೋಡುತ್ತಿದ್ದೇನೆ ಅನ್ನುವ ಭ್ರಮೆಯಲ್ಲಿದ್ದಾನೆ. ಆದರೆ ಅವನು ನಿಂತಿರುವ ಪೆರಿಫರಿ ಮತ್ತೊಂದು ವೃತ್ತದ ಬಿಂದು ಅನ್ನುವುದೂ, ಅವನು ಇನ್ನೂಂದು ಕಥೆಯ ಕೇಂದ್ರ ಅನ್ನುವುದೂ ಅವನಿಗೆ ತಿಳಿದಿಲ್ಲ, ನನ್ನ ಕಾದಂಬರಿಯ ಪರಿಕಲ್ಪನೆ ಇದು" ಎಂದರು. ಕಥೆಯಲ್ಲಿ ಬಂದಾತ ಮನೆಗೂ ಬಂದು ಕದ ತಟ್ಟುವುದು ಅಂದರೆ ಇದೇಯೇ!

ಒಮ್ಮೆ ನಾನು ಮುಂಬಯಿಗೆ ಬರುತ್ತಿರುವುದಾಗ ಅಹಮದಾಬಾದಿನಿಂದ ಫೋನ್ ಮಾಡಿದೆ. ಯಾವುದೋ ಕಾರಣಕ್ಕಾಗಿ ತಾರೀಖುಗಳ ಬಗ್ಗೆ ಸ್ವಲ್ಪ ಗೊಂದಲವಾಗಿತ್ತೆನ್ನಿಸುತ್ತದೆ. ಅವರು ನಿರೀಕ್ಷಿಸಿದ್ದು ನಾನು ಭಾನುವಾರ ಮುಂಬಯಿಗೆ ಬರುತ್ತೇನೆ ಎಂದು. ಆದರೆ ನಾನು ಹೋದದ್ದು ಸೋಮವಾರದಂದು. ಏರ್‌ಪೋರ್ಟಿನಿಂದ ಫೋನ್ ಮಾಡಿದಾಗ ಅವರು "ನಿನ್ನೆಯೆಲ್ಲಾ ನಿರೀಕ್ಷೆ ಮಾಡಿದೆ, ಫೋನೂ ಎತ್ತಲಿಲ್ಲ" ಎಂದು ಹೇಳಿದರು. "ಈಗ ಬರಬಹುದೇ?" ಎಂದು ಕೇಳಿದೆ.. "ಬನ್ನಿ, ಬನ್ನಿ" ಅಂದರು. ಮನೆಗೆ ಹೋದಾಗ ಚಿತ್ತಾಲರಿಗಿದ್ದ ಚಿಂತೆ ಏನು ಗೊತ್ತೇ? "ನಿನ್ನೆ ಬರುತ್ತೀರೆಂದು ಎಣಿಸಿ ಗಡ್ಡ ಮಾಡಿಕೊಂಡಿದ್ದೆ. ಈಗ ದಿಢೀರೆಂದು ಬಂದಿದ್ದೀರ. ಗಡ್ಡ ಮಾಡಿಕೊಳ್ಳಲೂ ಸಮಯವಾಗಿಲ್ಲ" ಎನ್ನುವುದೇ ಅವರ ಗೊಂದಲವಾಗಿತ್ತು.

ಚಿತ್ತಾಲರ eye for detail ಈ ಎಲ್ಲ ವೃತ್ತಾಂತಗಳಲ್ಲಿ ಕಾಣಿಸುತ್ತದೆ. ಮತ್ತೆರಡು ಗಮ್ಮತ್ತಿನ ವಿಷಯಗಳನ್ನು ಹೇಳಿ ನನ್ನ ಈ ಚಿತ್ರಣವನ್ನು ನಿಲ್ಲಿಸುತ್ತೇನೆ. ಜಾಗೃತ ಸಾಹಿತ್ಯ ಸಮ್ಮೇಳನದ ಸಮಯಕ್ಕಿ ದೂರದರ್ಶನದವರು ಚಿತ್ತಾಲರು ಒಂದು ಪುಟ್ಟ ಸಂದರ್ಶನವನ್ನು ಕಲಾಕ್ಷೇತ್ರದ ಪ್ರಾಂಗಣದಲ್ಲಿ ಮಾಡಿದರು. ಚಿತ್ತಾಲರು ಹಾಗೆ ತಮ್ಮನ್ನು ಯಾರಾದರೂ ಕ್ಯಾಮರಾದ ಮುಂದೆ ನಿಲ್ಲಿಸಬಹುದೆಂದು ಊಹಿಸಿರಲಿಲ್ಲ ಅನ್ನಿಸುತ್ತದೆ. ತಕ್ಷಣಕ್ಕೆ ತಾವು ಹೇಳಬೇಕಾದ್ದು ಹೇಳಿಬಂದರಾದರೂ, ರಾತ್ರೆ ಊಟದ ಸಮಯದಿಂದಲೇ ತಮ್ಮ ಅಸಹನೆಯನ್ನು ವ್ಯಕ್ತ ಪಡಿಸಿದರು. ನೋಡಿ ಆ ಸಂದರ್ಶನದಲ್ಲಿ ನಾನು ಟೀಶರ್ಟ್ ಹಾಕಿದ್ದೇನೆ. ಇದು ಸೀರಿಯಸ್ಸಾದ ವಿಷಯ. ಟಿಷರ್ಟ್ ಸರಿಹೋಗುವುದಿಲ್ಲ" ಹೀಗೆ ತಮ್ಮ ಅಭ್ಯಂತರವನ್ನು ವ್ಯಕ್ತ ಪಡಿಸಿ, ಕಡೆಗೆ ದೂರದರ್ಶನದವರು ಬುಷ್ ಷರ್ಟಿನಲ್ಲಿ ಮತ್ತೊಂದು ಸಂದರ್ಶನವನ್ನು ನೀಡಿದರು. ತಮ್ಮ ಮಾತಿಗಾಗಿ ಅಲ್ಲದೇ ಪೋಷಾಕಿಗಾಗಿ ತಮ್ಮ ಸಂದರ್ಶನವನ್ನು ವಾಪಸ್ಸು ಪಡೆದ ಏಕೈಕ ಲೇಖಕರು ಚಿತ್ತಲರಾಗಿರಬಹುದು.

ಉತ್ತಮ ಕೃತಿಗಳನ್ನು ಬರೆಯಲು ಇರಬೇಕಾದ ಒಳನೋಟ, ಮತ್ತು ಅದನ್ನು ಹೊರತರಲು ಇರಬೇಕಾದ ಸಹಜ ಶಿಸ್ತು ಇರುವ ಮತ್ತೊಬ್ಬ ಪ್ರತಿಭಾವಂತ ಲೇಖಕರನ್ನು ನಾನು ಈ ವರೆಗೂ ಕಂಡಿಲ್ಲ. ಯಾರಾದರೂ ಕನ್ನಡ ಸಾಹಿತ್ಯದ ಯಾವುದಾದರೂ ಲೇಖಕರ ಬಗ್ಗೆ ಸಂಶೂಧನಾತ್ಮಕ ಪ್ರಬಂಧ ಬರೆಯಬೇಕಾದರೆ ಸುಲಭವಾಗೆ ಮಾಹಿತಿ ಸಿಗುವುದು ಚಿತ್ತಾಲರ ಕಡತಗಳಲ್ಲೇ. ಅವರ ಯಾವ ಪುಸ್ತಕಗಳು ಯಾರಿಗೆ ಕಳಿಸಿದ್ದಾರೆ, ಅದನ್ನು ಓದಿ ಯಾರು ಏನು ಪ್ರತಿಕ್ರಿಯೆ ನೀಡಿದ್ದಾರೆ [ಲಿಖಿತವೋ, ಮೌಖಿಕವೋ, ಫೊನಿನ ಮೂಲಕವೋ ಅಥವಾ ಮೌನವೋ] ಅನ್ನುವ ವಿವರವೂ ನಿಮಗೆ ಸಿಕ್ಕಿದರೆ ಅವಾಕ್ಕಗಬೇಡಿ. ಹಾಗೆಯೇ ಯಾವ ರೀತಿಯ ಪೆನ್ನು ಹಿಡಿದರೆ ಸರಳವಾಗಿ ಐದು ಪುಟಗಳನ್ನು ಬರೆಯುಬಹುದು ಅನ್ನುವ ಬಗ್ಗೆಯೂ ನಿಮಗೆ ತಿಳಿದೀತು. ಒಂದಷ್ತು ದಿನ ಚಿತ್ತಾಲರು ಒಂದು ಮಾದರಿಯ ಪೆನ್ಸಿಲ್ಲಿನಲ್ಲಿ ಮಾತ್ರೆ ತಮ್ಮ ಕರಡು ಪ್ರತಿಯನ್ನು ತಯಾರಿಸುತ್ತಿದ್ದರು. ಕರಡಿನಲ್ಲಿ ಒಂದು ತಪ್ಪಾದರೂ ಅದಕ್ಕೆ ಬಿಳಿಯ ಬಣ್ಣದ ಕರೆಕ್ಷನ್ ಫ್ಲೊಯಿಡ್ ಹಾಕಿ ತಿದ್ದುವ ಏಕಮೇವ ಲೇಖಕರು ಚಿತ್ತಾಲರು! ಹಿಂದೆ ನಾನು ಬೇನ್ಯಾದ ಬಗ್ಗೆ ಬರೆದ ಲೇಖನದಲ್ಲಿ ಈ ಕೆಳಗಿನ ಸಾಲುಗಳನ್ನು ಬರೆದಿದ್ದೆ:

"ನನ್ನ ನಿಲ್ದಾಣ ಅನ್ನುವ ಕಥೆಯನ್ನು ಓದಿ ಚಿತ್ತಾಲರು "ಈ ಕಥೆಯೇಕೋ ಇದ್ದಕ್ಕಿದ್ದಂತೆ ನಿಂತು ಹೋಯಿತು" ಅಂತ ಎದುರಿಗಿದ್ದ ಜಯಂತ ಕಾಯ್ಕಿಣಿಗೆ ಹೇಳಿದರಂತೆ. ಅದಕ್ಕೆ ಜವಾಬಾಗಿ ಜಯಂತ "ಇಲ್ಲ ಶ್ರೀರಾಮ ಇನ್ನೂ ಬರೆದಿದ್ದ, ಆದರೆ ಅದರ ಉತ್ತಮ ಪ್ರತಿ ನಡೆಸುತ್ತಿದ್ದಾಗ ಲೈಟ್ ಹೋಗಿಬಿಟ್ಟಿತಂತೆ, ಪತ್ರಿಕೆಗೆ ಕಳಿಸುವ ತುರ್ತು ಇದ್ದದ್ದರಿಂದ ಹಾಗೇ ಕಳಿಸಿಬಿಟ್ಟ" ಅಂತ ಹೇಳಿದನಂತೆ. [ಬಹುಶಃ ಜಯಂತನ ಇಂಥ ಮಾತುಗಳನ್ನು ಗಂಭೀರವಾಗಿ ಸ್ವೀಕರಿಸುವ ಕೆಲವೇ ಜನರಲ್ಲಿ ಬರಹದ ಕಲೆಯನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುವ ಚಿತ್ತಾಲರು ಒಬ್ಬರೇನೋ]. ಈ ಫಲವಾಗಿ ನಾನು ಅವರನ್ನು ಒಮ್ಮೆ ಮುಂಬಯಿಯಲ್ಲಿ ಭೇಟಿಯಾದಾಗ ಕಥೆಗಳನ್ನು ಹೀಗೂ ನಿಲ್ಲಿಸುವುದುಂಟಾ ಅಂತ ನನ್ನನ್ನು ಕೇಳಿದ್ದರು."

ಹೀಗೆ ಎಲ್ಲವನ್ನೂ ಒಪ್ಪವಾಗಿ ಓರಣವಾಗಿ ಶಿಸ್ತಿನಿಂದ ಮಾಡುವ ಚಿತ್ತಾಲರಿಗೆ ಪಂಪ ಪ್ರಷಸ್ತಿ ಬಂದಿದೆ. ಅವರ ಶಿಸ್ತಿನನುಸಾರ ಅವರು ಯಾವ ವಶೀಲಿಯನ್ನೂ ಮಾಡಿರುವುದಿಲ್ಲ. ಒಂಟಿಯಾಗಿ ಸಮುದ್ರವನ್ನು ನೋಡುತ್ತಾ, ಮನೆಯಲ್ಲಿ ಬೇರೆ ಯಾರೂ ಓದದ ಕನ್ನಡದಲ್ಲಿ ಮಹತ್ತರ ಕೃತಿಗಳನ್ನು ರಚಿಸಿ ನಮ್ಮನ್ನೆಲ್ಲ ಶ್ರೀಮಂತರಾಗಿರುವ ಚಿತ್ತಾಲರು ಬರೆಯುತ್ತಲೇ ಇರಲಿ. ಕಥಾಖಜನೆಯನ್ನು ತುಂಬುತ್ತಲೇ ಇರಲಿ ಎಂದು ಹಾರೈಸುತ್ತೇನೆ. ರಶೀದ ಹೇಳಿದಂತೆ ಚಿತ್ತಾಲರಿಗೆ ಜಯವಾಗಲಿ..

ಚಿತ್ತಾಲರ ಬಗ್ಗೆ ಇನ್ನಷ್ಟು:
ಚಿತ್ತಾಲರೊಂದಿಗೆ ಮಾತುಕತೆ

ಚಿತ್ತಾಲರ ಬೇನ್ಯಾ: ಕೆಲವು ಟಿಪ್ಪಣಿಗಳು
ಬ್ಯಾಂಡ್‌ಸ್ಟ್ಯಾಂಡಿನ ಬಂಡೆಗಳು

ಎಂ.ಎಸ್. ಶ್ರೀರಾಮ್

Labels: 

ತೇಜಸ್ವಿ ಇದ್ದಾರೆ



ಮೊನ್ನೆ ಮೊನ್ನೆಯಷ್ಟೇ ಜಯಂತನ ಶಬ್ದತೀರ ಬಿಡುಗಡೆಯ ದಿನ ಮೊದಲ ಬಾರಿಗೆ ತೇಜಸ್ವಿಯವರನ್ನು ಭೇಟಿ ಮಾಡಿದ್ದೆ. ಅವರು ಬರುತ್ತಾರೆಂಬ ನಿರೀಕ್ಷೆ ಅಂದು ಯಾರಿಗೂ ಇರಲಿಲ್ಲ. ಬಹುಶಃ ಇಂಥ ಸಮಾರಂಭಗಳಿಗೆ ಅವರು ಬರುವುದಿಲ್ಲವೆಂದೇ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಬಹುದಾದ ಸಾಧ್ಯತೆಯ ಬಗ್ಗೆ ಯಾರೂ ಯೋಚಿಸಿರಲಿಕ್ಕಿಲ್ಲ. ನಿಜಕ್ಕೂ ನಾನು ತೇಜಸ್ವಿಯವರನ್ನು ಹೊರಗೆ, ಸೆಮಿನಾರುಗಳಲ್ಲಿ, ವೇದಿಕೆಯ ಮೇಲೆ ನೋಡಿದ ನೆನಪೇ ಇಲ್ಲ. ಆದರೆ ಅವರು ಸರ್ವಾಂತರ್ಯಾಮಿ. ಅವರ ಪುಸ್ತಕಗಳು ಅವರಿಗಿಂತ ಹೆಚ್ಚಿನ ಮಾತುಗಳನ್ನಾಡಿದುವು, ಅವರಿಗಿಂತ ಹೆಚ್ಚು ಕಂಡವು. ಅದಕ್ಕೇ ಏನೋ ಆದಿನ ಅವರು ಅನಿರೀಕ್ಷಿತವಾಗಿ ಅಲ್ಲಿಗೆ ಬಂದಾಗ ಜಯಂತ "ದೇವರು ಪ್ರತ್ಯಕ್ಷವಾಗುವುದನ್ನು ನಾವು ಕಥೆಗಳಲ್ಲಿ ಓದಿದ್ದೇವೆ, ಸಿನೇಮಾದಲ್ಲಿ ನೋಡಿದ್ದೇವೆ.. ಆದರೆ ಅದು ಏನೆನ್ನುವುದು ಈ ದಿನ ನಮಗೆ ಅರ್ಥವಾಯಿತು" ಅಂದ. ಅನಿರೀಕ್ಷಿತವಾಗಿ ಬಂದದ್ದಲ್ಲದೇ ಜಯಂತನ ಬಗ್ಗೆ ಪ್ರಾಮಾಣಿಕವಾದ ಮಾತುಗಳನ್ನು ತೇಜಸ್ವಿ ಆಡಿದರು. ತನ್ನ ಕಥನ ಸಂಭ್ರಮದಲೋಲುಪತೆಯಲ್ಲೇ ಮುಳುಗಿದರೆ ಉಂಟಾಗಬಹುದಾದ ಏಕತಾನತೆಯ ಬಗ್ಗೆ ಎಚ್ಚರ ನೀಡಿದರು. ಆನಂತರ ಅಲ್ಲಿದ್ದ ಅನೇಕರೊಡನೆ ಮಾತಾಡಿ, ಕೇಳಿದವರಿಗೆಲ್ಲಾ ಹಸ್ತಾಕ್ಷರ ನೀಡಿ ಅಂತರ್ಧಾನರಾದರು. 

ತೇಜಸ್ವಿ ತಮ್ಮ ಸಮಯದ ಲೇಖಕರಿಗಿಂತ ಭಿನ್ನವಾಗಿ ಬರೆದರು ಅನ್ನುವುದು ಎಲ್ಲ ಬರಹಗಾರರ ಬಗ್ಗೆಯೂ ಕೇಳಿಬರುವ ಮಾತು. ತೇಜಸ್ವಿ ತಮ್ಮ ಸಮಯದ ಬರಹಗಾರರಿಗಿಂತ ಭಿನ್ನವಾಗಿ ಜೀವಿಸಿದರು ಅನ್ನುವುದು ಸರಿಯಾದ ಮತೇನೋ. ಮೂಡಿಗೆರೆಯಲ್ಲಿ ಇದ್ದು ಪರಿಸರದೊಂದಿಗೆ ಒಂದಾಗಿ ಸಾಹಿತ್ಯವನ್ನಲ್ಲದೇ ಅನೇಕ ಆಸಕ್ತಿಗಳನ್ನು ಬೆಳೆಸಿಕೊಂಡಿದ್ದ ಅವರು ಯಾವ ಗುಂಪಿಗೂ ಸೇರಲಿಲ್ಲ. ಒಂದಿಷ್ಟು ಕಾಲ ಲಂಕೇಶ್ ಜೊತೆ ಇದ್ದಂತೆ ಕಂಡರೂ ಇರಲಿಲ್ಲ. ಅವರ ಕಥಾಸಾಹಿತ್ಯ ಕಾದಂಬರಿಗಳು ಎಷ್ಟು ಕನ್ನಡಕ್ಕೆ ಮುಖ್ಯವೋ, ಪರಿಸರದ ಬಗೆಗಿನ ಅವರ ಲೇಖನಗಳು, ಅವರ ಪ್ರಕಾಶನ ಕಾರ್ಯ, ಅವರ ಫೊಟೊಗ್ರಫಿ ಕೂಡಾ ಅಷ್ಟೇ ಮುಖ್ಯ..


ಅವರ ಸಾಹಿತ್ಯವನ್ನು ಅದ್ಭುತವಾಗಿ ದೃಶ್ಯಮಾಧ್ಯಮಕ್ಕೆ ಇಳಿಸಲು ಸಾಧ್ಯವಾಗುತ್ತಿದ್ದದ್ದು ಬಹುಶಃ ಕಾಸರವಳ್ಳಿಗೆ ಮಾತ್ರ. ತಬರನಕಥೆಯನ್ನು ನಾವು ಓದಿದರೆ ದೃಶ್ಯ ಮಾಧ್ಯಮದ ನಿಟ್ಟಿನಿಂದ ಅದು ನಿಜಕ್ಕೂ ಒಂದು ಸಾಧಾರಣ ಕಥೆ. ಆದರೆ ಕಾಸರವಳ್ಳಿ ಕೈಯಲ್ಲಿ ಅದು ಒಂದು ಅದ್ಭುತ ಚಿತ್ರವಾಗಿ ಮಾರ್ಪಾಡಾಗಿದ್ದಕ್ಕೆ ಕಾಸರವಳ್ಳಿಯ ಸೃಜನಶೀಲತೆ ಎಷ್ಟು ಕಾರಣವೋ, ಅಷ್ಟೇ ತೇಜಸ್ವಿಯವರ ಇತರ ಕಥೆಗಳು ಅನ್ನಬೇಕು. ಹಾಗೆ ನೋಡಿದರೆ ತಬರನ ಕಥೆಯಲ್ಲಿ ತುಕ್ಕೋಜಿ ಕಥೆಯ ಎಷ್ಟೊಂದು ಅಂಶಗಳಿವೆ! 

ಮೊದಮೊದಲ ಕಥೆಗಳಲ್ಲಿ ತೇಜಸ್ವಿ ನವ್ಯ ರಂತೆ ಕಂಡರೂ ಆ ನಂತರದ ಕಥೆಗಳು ಯಾವ ಪಂಥಕ್ಕೂ ಸೇರಿಲ್ಲವೆಂಬಂತೆ ತಮ್ಮ ದಾರಿಯನ್ನೇ ಪಡೆದವು. ಬಹುಶಃ ಕನ್ನಡದಲ್ಲಿ ಪರಿಸರದ ಬಗ್ಗೆ ಪ್ರಜ್ಞೆಯನ್ನು ಮೊದಲಬಾರಿಗೆ ತಂದವರೇ ತೇಜಸ್ವಿ ಅಂತ ನನಗನ್ನಿಸುತ್ತದೆ. ಕರ್ವಾಲೋ ಕನ್ನಡದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದು ಅಂತ ಅನೇಕ ವಿಮರ್ಶಕರು ಗುರುತಿಸಿದ್ದಾರೆ. ಆದರೆ ಕರ್ವಾಲೋವನ್ನು ಇಂಗ್ಲೀಷ್‌ನಲ್ಲಿ ಓದಿದಾಗ ನನಗ ಸಾಕಷ್ಟು ನಿರಾಸೆಯಾಯಿತು. ಅವರ ಚಿದಂಬರ ರಹಸ್ಯ ಕಾದಂಬರಿಗೆ ಸಿಗಬೇಕಾಗಿದ್ದ ಮಾನ್ಯತೆಯೆಲ್ಲಾ ಕರ್ವಾಲೋಗೆ ಸಿಕ್ಕಿಬಿಟ್ಟಿತೇನೋ.
 

ತೇಜಸ್ವಿ ತಮ್ಮ ಅದ್ಭುತ ಸಾಹಿತ್ಯದಿಂದಾಗಿ ನಮ್ಮ ನಡುವೆ ಇದ್ದಾರೆ. ಅವರು ಕುವೆಂಪು ಮತ್ತು ಕಾರಂತರನ್ನು ಒಳಗೊಂಡ ಲೇಖಕರು ಅಂತ ಅನಂತಮೂರ್ತಿ ಹೇಳಿದರಂತೆ. ನನಗೇನೋ ಅವರಲ್ಲಿ ಕುವೆಂಪುಗಿಂತ ಕಾರಂತರೆ.. ಅದರಲ್ಲೂ ವಿಕಸಿತ
ಕಾರಂತರೇ ಕಾಣುತ್ತಾರೆ. ವಿಕಸಿತ ಕಾರಂತರು ಅನ್ನುವುದಕ್ಕೆ ಒಂದೇ ಕಾರಣ.. ತೇಜಸ್ವಿಯವರ ಭಾಷೆ ಮತ್ತು ಕಥನಕಲೆ ಹೆಚ್ಚು ಎಂಗೇಜಿಂಗ್ ಆಗಿ ಇರುತ್ತಿತ್ತು. 

ಕುವೆಂಪು ಅವರಿಗೆ ಪುಟ್ಟಪ್ಪ ಅನ್ನುವ ಪುಟ್ಟ ಹೆಸರಿದ್ದರೂ ಅವರು ಅದನ್ನು ದೊಡ್ಡಹೆಸರನ್ನಾಗಿ ಮಾಡಿಕೊಂಡರು. ಆದರೆ ತಮ್ಮ ಮಕ್ಕಳಿಗೆ ಪುಟ್ಟ ಹೆಸರಿನ ರಿಸ್ಕ್ ಬೇಡವೆಂದೋ ಏನೋ ಇಬ್ಬರಿಗೂ ದೊಡ್ಡಹೆಸರುಗಳನ್ನೇ ಇಟ್ಟರು.. ಕೋಕಿಲೋದಯಚೈತ್ರ ಮತ್ತು ಪೂರ್ಣಚಂದ್ರತೇಜಸ್ವಿ. [he has not named them, he has sentenced them... for life ಅಂತ ವೈಎನ್‌ಕೆ ಹೇಳಿದ್ದು ಇಲ್ಲಿ ನೆನಪಾಗುತ್ತಿದೆ]. ಆದರೆ ಪೂರ್ಣಚಂದ್ರತೇಜಸ್ವಿ ತಮ್ಮ ತಂದೆ ಕೊಟ್ಟ ದೊಡ್ಡ ಹೆಸರನ್ನು ಉಳಿಸಿಕೊಂಡರು, ಬೆಳೆಸಿಕೊಂಡರು. ಗಿಡಮರಗಳ ಮರೆಯಲ್ಲಿ.. ಇಷ್ಟು ದಿನವೂ ಕಾಣದೇ ನಮ್ಮನ್ನೆಲ್ಲಾ ಹುರಿದುಂಬಿಸುತ್ತಾ, ಪ್ರೇರೇಪಿಸುತ್ತಾ, ಸ್ಫೂರ್ತಿ ನೀಡುತ್ತಾ ಇದ್ದ ತೇಜಸ್ವಿ ಆ ಕೆಲಸವನ್ನು ಮುಂದುವರೆಸುತ್ತಿದ್ದಾರೆ. ತೇಜಸ್ವಿ ಇದ್ದಾರೆ.

ತೇಜಸ್ವಿಯವರು ಒಂದು ಹಳೆಯ ಕವಿತೆ ಇಲ್ಲಿದೆ. ಕೃಪೆ: ಲಂಕೇಶ್ ಸಂಪಾದಿಸಿದ ಅಕ್ಷರ ಹೊಸ ಕಾವ್ಯ

Sunday, March 8, 2009

ಚಿಕ್ಕಸಾಲಿಗ - ಮಹಮ್ಮದ್ ಯೂನಸ್



[ವಿಜಯ ಕರ್ನಾಟಕದ ಕೋರಿಕೆಯ ಮೇರೆಗೆ ನಾನು ಇದನ್ನ ಬರೆದೆ. ಹಿಂದಿನ ಬಾರಿ ಕುರಿಯನ್ ಬಗ್ಗೆ ಬರೆಯುವಾಗ ಆದ ಕಷ್ಟವೇ ಈ ಬಾರಿಯೂ ನನಗಾಯಿತು. ಈ ಲೇಖನವನ್ನ ನಾನು ಇಂಗ್ಲೀಷಿನಲ್ಲಿ ಬರೆದು ಕನ್ನಡೀಕರಿಸಬೇಕಾಯಿತು. ನನ್ನ ಹೆಚ್ಚಿನಂಶ ಕೆಲಸ ಈ ಕ್ಷೇತ್ರದಲ್ಲಾದ್ದರಿಂದ ಈ ಬಗ್ಗೆ ನನ್ನ ಆಲೋಚನಾಲಹರಿಯೇ ಇಂಗ್ಲೀಷಿನಲ್ಲಿದೆ ಅನ್ನಿಸುತ್ತೆ. ಮತ್ತೊಂದು ಗಮ್ಮತ್ತಿನ ವಿಷಯವೆಂದರೆ ಹಲವು ತಾಂತ್ರಿಕ ಪದಗಳಿಗೆ ನಾನು ಕನ್ನಡದಲ್ಲಿ ಸಮಾನಾಂತರ ಪದಗಳನ್ನು ಹುಡುಕಲು ತಡಕಾಡಬೇಕಾಯಿತು. ಆದರೆ ಈ ಪದಗಳಿಗೆ ತೆಲುಗಿನ ಸಮಾನಾಂತರ ಪದಗಳು ಮಾತ್ರ ನನಗೆ ಸರಳವಾಗಿ ಹೊಳೆದುವು. ಇದಕ್ಕೆ ಕಾರಣ - ಈ ಕ್ಷೇತ್ರದಲ್ಲಿ ನಾನು ಫೀಲ್ಡಿನಲ್ಲಿ ಕೆಲಸ ಮಾಡಿದ್ದು ಆಂಧ್ರಪ್ರದೇಶದಲ್ಲಿ ಮಾತ್ರ. ಹಾಗೆ ನೋಡಿದರೆ ನಾನು ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವುದು [ಅದೂ ಹಂಗಾಮಿಯಾಗಿ] ಇದೇ ಮೊದಲು!! ಈ ಲೇಖನದ "ಸಂಪಾದಿತ" ಆವೃತ್ತಿ ೫ ನವಂಬರ್ ೨೦೦೬ರ ವಿಜಯ ಕರ್ನಾಟಕದ ಭಾನುವಾರದ ಸಂಚಿಕೆಯಲ್ಲಿ ಬಂದಿದೆ]

ನಾನು ನೋಡುತ್ತಿದ್ದಂತೆ ಕೆಲ ಪುರಾತನ ನಿಯಮಗಳು ಛಿದ್ರವಾದವು. ಹಳೆಯ ಶಾಸ್ತ್ರಗಳೆಲ್ಲ ಮಣ್ಣುಮುಕ್ಕಿದವು. ಇದ್ದ ಸ್ಥಿತಿಗೆ ಪ್ರತಿರೋಧವನ್ನು ಒಳಗಿನಿಂದಲೇ ಅದು ಕುಸಿಯುವುದನ್ನು ನಾನು ಕಂಡೆ. ಕುಸಿದು ಬಿದ್ದ ವಿಚಾರಗಳು ಇಂತಿದ್ದವು:
  • ಬಡವರು ಬಡಪಾಯಿಗಳು ಅಸಹಾಯಕರೆಂಬ ನಂಬುಗೆ;
  • ಅದರಲ್ಲೊ ಹೆಂಗಸರು ಪಾಪದವರೆಂಬ ನಂಬುಗೆ;
  • ಭೂಹೀನರು, ಬಡವರು ಸಾಲಕ್ಕೆ ಅರ್ಹರಲ್ಲ, ಅವರಿಂದ ಹಣ ವಾಪಸ್ಸಗುವುದಿಲ್ಲ ಅನ್ನುವ ನಂಬುಗೆ
  • ಬಡವರಿಗೆ ಸಹಕರಿಸಲು ಗೊತ್ತಿಲ್ಲ, ಭವಿಷ್ಯದ ಬಗ್ಗೆ ಯೋಚಿಸಬೇಕೆಂದು ತೋಚುವುದಿಲ್ಲ, ತಮ್ಮ ಒಳಿತಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಅವರಿಗಿಲ್ಲ, ಸಾಲ ಪಡೆದು ಅದನ್ನು ಮರುಪಾವತಿಸುವ ಶಿಸ್ತು ಅವರಲ್ಲಿಲ್ಲ ಅನ್ನುವ ನಂಬುಗೆ
  • ಆರ್ಥಿಕ ವಿಕಾಸವಾಗುವುದು ದೊಡ್ಡ ಮೊತ್ತದ ಸರಕಾರಿ ವಲಯದಿಂದ ಬರುವ ಕೇಂದ್ರೀಕೃತ ಯೋಜನೆಗಳಿಂದ ಮಾತ್ರ ಅನ್ನುವ ನಂಬುಗೆ
ಎಲ್ಲ ನಂಬುಗೆಗಳೂ ಮಣ್ಣಿನ ಮಡಿಕೆಯಿಂದ ಮಾಡಿದ್ದರೆ ಗ್ರಾಮೀಣ್ ಬ್ಯಾಂಕಿನ ನೆಲ ಈ ಛಿದ್ರ ಚೂರುಗಳಿಂದ ತುಂಬಿರುತ್ತಿತ್ತು.
ಪೀಟರ್ ಗೋಲ್ಡ್‌ಮಾರ್ಕ್
ಅಧ್ಯಕ್ಷ ರಾಕೆಫೆಲ್ಲರ್ ಫೌಂಡೇಷನ್
ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಬ್ಯಾಂಕಿಂಗ್ ನಿಯಮಗಳನ್ನು ಕೆಲದಶಕಗಳಿಂದ ಛಿದ್ರಗೊಳಿಸುವುದರಲ್ಲಿ ನಿರತರಾಗಿದ್ದ ಮಹಮ್ಮದ್ ಯೂನಸ್‌ಗೆ ಸಂದಿದೆ. ಬಡವರಿಗೆ ಕಿರುಸಾಲಗಳನ್ನು ಕೊಡುವುದು, ಅದಕ್ಕಿಂತ ಮುಖ್ಯವಾಗಿ ಅದನ್ನು ವಾಪಸ್ಸು ಪಡೆಯುವುದು ಹೇಗೆಂದು ಜಗತ್ತಿಗೆ ತೋರಿಸಿಕೊಟ್ಟ ಯೂನಸ್ ಎಲ್ಲರಂತಲ್ಲ. ಬ್ಯಾಂಕಿಂಗ್‌ನ ಮೂಲಭೂತ ನಿಯಮಗಳನ್ನು ಛಿದ್ರಗೊಳಿಸುತ್ತಲೇ ಆತ ತಮ್ಮದೇ ಹೊಸ ನಿಯಮಗಳನ್ನು ಸ್ಥಾಪಿಸಿಬಿಟ್ಟರು. ಈ ಸಾಧನೆಯ ದಾರಿ ವಿಮರ್ಶಾತೀತವೂ ಗ್ರಾಮೀಣ್ ಪದ್ಧತಿಗಳು ವಿವಾದಗಳಿಗೆ ಹೊರತಾಗಿ ಏನೂ ಇರಲಿಲ್ಲ. ಆತ ಮಾಡಿದ ಕೆಲಸ ಇಂಥದೊಂದು ದೊಡ್ಡ ಬಹುಮಾನಕ್ಕೆ ಪಾತ್ರವಾಗುವಂಥಹ ಮೂಲಭೂತ ಬದಲಾವಣೆಯನ್ನು ತಂದ ಸಾಧನೆಯೇ ಅಂತ ಹುಬ್ಬೇರಿಸಿದವರೂ ಸಾಕಷ್ಟು ಜನರಿದ್ದಾರೆ. ಇದೂ ಅಲ್ಲದಂತೆ ಈ ಬಾರಿಯ ಸಾಹಿತ್ಯ ಪುರಸ್ಕಾರ ಪಡೆದುಕೊಂಡ ಪಾಮುಕ್ ಮತ್ತು ಯೂನಸ್‌ಗೆ ಬಹುಮಾನಗಳನ್ನು ಕೊಡುವುದರ ಮೂಲಕ ಇಸ್ಲಾಮೀ ಮೂಲಭೂತವಾದಿಗಳಿಗೆ ಒಂದು ಸೂಕ್ಷ್ಮ ಸಂದೇಶವನ್ನು ನೊಬೆಲ್ ಸಮಿತಿ ಕಳಿಸಿದೆ ಅನ್ನುವ ರಾಜಕೀಯ ವಿಶ್ಲೇಷಕರ ಮಾತೂ ಕಂಡುಬಂದಿದೆ. ಮೂಲಭೂತವಾದಿಗಳಿಗೆ ಸೂಕ್ಷ್ಮ ಸಂದೇಶದ ಸೂಕ್ಷ್ಮತೆಗಳು ಅರ್ಥವಾಗುವುದಿಲ್ಲ ಅನ್ನುವುದು ನಮಗೆ ಮನವರಿಕೆಯಾಗಬೇಕು. ಅದೂ ಅಲ್ಲದೇ ಈ ಕಾರಣಕ್ಕಾಗಿ ಈ ಇಬ್ಬರಿಗೂ ಬಹುಮಾನ ಬಂತು ಅನ್ನುವುದು ಇಬ್ಬರ ಜೀವನಕಾಲದ ಕೆಲಸಕ್ಕೆ ಅವಮಾನ ಮಾಡಿದ ಹಾಗಾಗುತ್ತದೆ. ಏಕೆಂದರೆ, ಈ ಇಬ್ಬರು ಗಣ್ಯರ ಕೆಲಸಕ್ಕೆ ಅವರ ಸಂದರ್ಭ, ಹಿನ್ನೆಲೆಯನ್ನು, ಅವರ ಜಾತಿ ಪಂಥವನ್ನು ತೆಗೆದು ನೋಡಿದರೂ ಇಂಥದೊಂದು ಪುರಸ್ಕಾರ ಪಡೆಯುವ ಯೋಗ್ಯತೆಯಿದೆ. 

ಯೂನಸ್‌ಗೆ ಪುರಸ್ಕಾರ ಬಂದ ಬಗ್ಗೆ ನನಗೆ ಖಾಸಗಿಯಾಗಿಯೂ ಖುಶಿಯಾಗಲು ಮತ್ತೊಂದು ಕಾರಣವಿದೆ. ನಾನು ಈ ಮೇಲ್ ಮೂಲಕ ಪತ್ರವ್ಯವಹಾರ ನಡೆಸಿದ, ಮೊದಲ ಮತ್ತು ಏಕಮೇವ ನೊಬೆಲ್ ಪುರಸ್ಕೃತರು ಯೂನಸ್!! ಒಬ್ಬ ಅಧ್ಯಾಪಕನಾಗಿ, ಸಂಶೋಧಕನಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡುವ ನಾನು ಗ್ರಾಮೀಣ್ ಬಗ್ಗೆ ಅನೇಕ ಪ್ರಶ್ನೆಗಳನ್ನು ನನ್ನ ತರಗತಿಯಲ್ಲೂ, ಬರವಣಿಗೆಯಲ್ಲೂ ಎತ್ತಿದ್ದೇನೆ. ಆದರೆ ಯೂನಸ್‌ರ ಒಟ್ಟಾರೆ ಕೆಲಸವನ್ನು ನೋಡಿದಾಗ ನಾನು ಕೇಳುವುದು ಒಂದೇ ಪ್ರಶ್ನೆ: ಅವರ ಕೆಲಸದಿಂದಾಗಿ, ಗ್ರಾಮೀಣ್‌ನಿಂದಾಗಿ ಇಂದು ಒಟ್ಟಾರೆ ಪ್ರಪಂಚ ತುಸುವಾದರೂ ಉತ್ತಮವಾಗಿದೆಯೇ? 
ಅದಕ್ಕೆ ನಿರ್ವಿವಾದವಾಗಿ ಹೌದೆಂಬ ಉತ್ತರ ಬರುತ್ತದೆ. ಇದೊಂದೇ ಕಾರಣ ನಾವು ಈ ಸುದ್ದಿಯನ್ನು ಸ್ವಾಗತಿಸಲು, ಸುದ್ದಿಯ ಬಗ್ಗೆ ಸಂಭ್ರಮ ಪಡಲು ಸಾಕು. 

ಯೂನಸ್‌ಬಗ್ಗೆ ಈಗಾಗಲೇ ಸಾಕಷ್ಟು ಬರವಣಿಗೆ ಬಂದಿದೆ. ೨೭ ಡಾಲರುಗಳ ಮೊತ್ತದ ಮೊದಲ ಸಾಲವನ್ನು ಜೋಬ್ರಾ ಎಂಬ ಹಳ್ಳಿಯಲ್ಲಿ ಹಂಚಿದಾಗಿನಿಂದ ಹಿಡಿದು ಇಂದಿನವರೆಗೆ ಅದು ಬಡವರ ಜೀವನದ ಮೇಲೆ ಉಂಟುಮಾಡಿರುವ ಪ್ರಭಾವವನ್ನು ಅವರ ಜೀವನ ಸ್ಥರಕ್ಕಾಗಿರುವ ಬದಲಾವಣೆಗಳನ್ನು ದಾಖಲಿಸಿ ಹಲವು ಬರಹಗಳು ಬಂದುಬಿಟ್ಟಿವೆ. ಬ್ಯಾಂಕಿಂಗ್ ಪದ್ಧತಿಯ ಪರಯಾಗಳಾಗಿದ್ದ ಬಡವರನ್ನು ವಿಶಿಷ್ಟ ಗ್ರಾಹಕರೆಂದು ಗ್ರಹಿಸಿದ ಮೊದಲಿಗರು ಯೂನಸ್. ಇದಕ್ಕೆ ಅವರಿಗೆ ಬಡವರ ಮೂಲಭೂತ ಒಳ್ಳೆಯತನ, ಮತ್ತು ಅವರಿಗೆ ಅವಕಾಶಗಳನ್ನು ಉತ್ಪನ್ನಮಾಡಿದಾಗ ಅದನ್ನು ಸ್ವೀಕರಿಸಿ ಜೀವಿಸುವ ದಕ್ಷತೆ ಎರಡರ ಬಗ್ಗೆಯೂ ಇದ್ದ ಅಪರಿಮಿತ ನಂಬಿಕೆಯೇ ಕಾರಣವಾಗಿತ್ತು. ಆದರೆ ಇಂದು ಸರಳವಾಗಿ ಕಾಣುವ ಗ್ರಾಮೀಣ್ ಕಿರುಸಾಲದ ಪದ್ಧತಿಯನ್ನು ಹಸನುಗೊಳಿಸಲು ಅನೇಕ ವರ್ಷಗಳೇ ಹಿಡಿದವು ಎನ್ನುವುದನ್ನು ನಾವು ಮರೆಯಬಾರದು. 

ಬಿಳಿಕ್ರಾಂತಿಯ ಚಕ್ರವರ್ತಿ ಕುರಿಯನ್‌ಗೂ ಯೂನಸ್‌ಗೂ ಕೆಲವು ವಿಶಿಷ್ಟ ಅನ್ನುವಂತಹ ಸಮಾನತೆಗಳಿವೆ. ಕುರಿಯನ್‌ರನ್ನ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಆಣಂದ್ ಮಾದರಿಯನ್ನ ದೇಶಾದ್ಯಂತ ಹಬ್ಬುವ ಕಾರ್ಯಕ್ರಮ ಹಮ್ಮಿಕೊಳ್ಳಲು ಕೇಳಿಕೊಂಡಾಗ ಆತ ಹಾಕಿದ್ದ ಒಂದು ಮಹತ್ವದ ಷರತ್ತೆಂದರೆ ರಾಷ್ಟ್ರೀಯ ಹೈನುಗಾರಿಗೆ ಅಭಿವೃದ್ಧಿ ನಿಗಮದ ಮುಖ್ಯಕಾರ್ಯಾಲಯ ದೆಹಲಿಗೆ ಬದಲಾಗಿ ಆಣಂದ್‌ನಲ್ಲಿ ಇರಬೇಕು ಅನ್ನುವುದು. ಒಂದು ಥರದಲ್ಲಿ ಇದು ದೆಹಲಿಯ ರಾಜಕೀಯದಿಂದ ಹೈನುಗಾರಿಕೆಯನ್ನು ದೂರವಿಡುವ ಪಿತೂರಿಯಾಗಿತ್ತು. ಅಮೆರಿಕನ್ ಪತ್ರಕರ್ತನೊಬ್ಬ ಯೂನಸ್‌ರನ್ನು "ನೀವು ವಿಶ್ವ ಬ್ಯಾಂಕಿನ ಅಧ್ಯಕ್ಷರಾದರೆ ಏನು ಮಾಡುತ್ತೀರಿ?" ಅನ್ನುವ ಪ್ರಶ್ನೆಗೆ ಕುರಿಯನ್‌ ಥರದ್ದೇ ಉತ್ತರವನ್ನು ನೀಡಿದ್ದರು. "ನಾನು ಮೊದಲಿಗೆ ವಿಶ್ವಬ್ಯಾಂಕಿನ ಮುಖ್ಯ ಕಾರ್ಯಾಲಯವನ್ನು ಡಾಕಾಗೆ ವರ್ಗಾಯಿಸುತ್ತೇನೆ". ಅದಕ್ಕೆ ಅವರು ಕೊಟ್ಟ ಕಾರಣಗಳು ಇಂತಿವೆ:

  • ವಿಶ್ವಬ್ಯಾಂಕಿಗೆ ಬಡತನ ನಿರ್ಮೂಲನದ ಬಗ್ಗೆ ಆಸಕ್ತಿಯಿದ್ದಲ್ಲಿ ಅದು ಬಡತನ ಇರುವಜಾಗಕ್ಕೆ ತನ್ನ ಕಾರ್ಯಾಲಯವನ್ನು ಸ್ಥಳಾಂತರಿಸಬೇಕು - ಅದಕ್ಕೆ ಸರಿಯಾದ ಜಾಗವೆಂದರೆ ಡಾಕಾ.
  • ಡಾಕಾಕ್ಕೆ ಅದು ಸ್ಥಳಾಂತರಗೊಂಡರೆ ಬ್ಯಾಂಕಿನ ೫,೦೦೦ ಉದ್ಯೋಗಿಗಳಲ್ಲಿ ಬಹಳಷ್ಟು ಜನ ಇಲ್ಲಿಗೆ ಬರುವುದಿಲ್ಲ. ಹೀಗೆ ನಾವು ಬಡತನ ನಿರ್ಮೂಲನದ ಆಸಕ್ತಿಯಿದ್ದವರನ್ನು ಮಾತ್ರ ಇಲ್ಲಿಗೆ ಕರೆಸಿದಂತಾಗುತ್ತದೆ. ಜೊತೆಗೆ ಬ್ಯಾಂಕಿನ ಖರ್ಚೂ ಕಮ್ಮಿಯಾಗುತ್ತದೆ - ಎಷ್ಟಾದರೂ ಡಾಕಾ ವಾಶಿಂಗ್‌ಟನ್‌ಗಿಂತ ಅಗ್ಗದ ನಗರ..."

ಹಣ ಕೊಡುವ ದೊಡ್ಡ ಫೌಂಡೇಷನ್‌ಗಳ ಜೊತೆಗಿನ ಯೂನಸ್ ವರ್ತವೆ ಕುರಿಯನ್ ರೀತಿಯದ್ದೇ ಆಗಿತ್ತು. ಇಬ್ಬರೂ ಇಂಥ ಮೂಲಗಳಿಂದ ಬರುವ ಹಣ ಸ್ವೀಕರಿಸುವವರಿಗೆ ಎಷ್ಟು ಉಪಯೋಗವಾಗುತ್ತದೆಂದು ನೋಡುತ್ತಿದ್ದರೇ ಹೊರತು ಇನ್ಯಾವುದನ್ನೂ ಪರಿಗಣಿಸುತ್ತಿರಲಿಲ್ಲ. ಹಣ ಸ್ವೀಕರಿಸಲು ಷರತ್ತುಗಳನ್ನು ತಾವೇ ನಿರ್ಣಯಿಸಿ ದಾನಿಗಳಿಗೆ ಹೇಳುತ್ತಿದ್ದರು. ಇಬ್ಬರೂ ಈ ರೀತಿಯಾಗಿ ಕೊಡುವವರಿಗೇ ಷರತ್ತುಗಳ ತಿರುಮಂತ್ರ ಹಾಕುವ ಕಲೆಯನ್ನು ಅದ್ಭುತವಾಗಿ ಕರಗತ ಮಾಡಿಕೊಂಡಿದ್ದರು. ಹೀಗೆ ಅವರು ಮಾಡುಲು ಸಧ್ಯವಾಗಲು ಕಾರಣವಿಷ್ಟೇ.. ಇಬ್ಬರಿಗೂ ತಮ್ಮ ಕೆಲಸದ ದಿಕ್ಕಿನ ಹಾಗೂ ಅದಕ್ಕೆ ಬೇಕಾದ ಪರಿಕರಗಳ ಬಗ್ಗೆ ಅಪಾರ ಸ್ಪಷ್ಟತೆಯಿತ್ತು. ತಮ್ಮ ಕೆಲಸದ ಬಗ್ಗೆ ಅಪಾರ ಹೆಮ್ಮೆಯೂ ನಂಬಿಕೆಯೂ ಪ್ರಾಮಾಣಿಕತೆಯೂ ಇತ್ತು, ಹೀಗಾಗಿ ಬಂದ ಸವಲತ್ತುಗಳನ್ನು ಸಮರ್ಪಕವಾಗಿ ಉಪಯೋಗಿಸುವ ಯೋಜನೆ ಅವರಲ್ಲಿತ್ತು. ಯೂನಸ್ ಇನ್ನೂ ಒಂದು ಹೆಜ್ಜೆ ಮುಂದೆ ಹೋದರು: ಆತ ತಯಾರಿಸಿದ ಗ್ರಾಮೀಣ್ ಬ್ಯಾಂಕಿನ ನಿಯಮಾವಳಿಯನ್ನು ಯಾವ ಮೂರ್ಖನೂ ಅಳವಡಿಸಿ ಅಂಥದೊಂದು ಯೋಜನೆಯನ್ನು ನಡೆಸುವಷ್ಟು ತಮ್ಮ ಲಾವಾದೇವಿಗಳನ್ನು ಸರಳ ಮಾಡಿಬಿಟ್ಟರು.


ಆದರೆ ಈ ಸರಳವಾದ ನಿಯಮಾವಳಿ ಕೈಗೂಡುವುದರ ರಸ್ತೆಯೇನೂ ಸರಳವಾಗಿರಲಿಲ್ಲ ಎನ್ನುವುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಯೂನಸ್‌ಗೆ ಬಡವರ ಬದುಕಿನಲ್ಲಿ ಏನಾದರೊಂದು ಉತ್ತಮ ಬದಲಾವಣಿಯನ್ನು ತರಬೇಕೆಂಬ ತುಡಿತ ಮುಂಚಿನಿಂದಲೂ ಇತ್ತು. ವಿದ್ಯಾರ್ಥಿದಿನಗಳಿಂದಲೂ ಯೂನಸ್ ಜನ ಮತ್ತು ದೇಶದ ಬಗ್ಗೆ ಆಲೋಚಿಸುತ್ತಲೇ ಬಂದವರು. ಅಮೆರಿಕದಲ್ಲಿ ವಿದ್ಯಾರ್ಥಿಯಾಗಿದ್ದಾಗ ಆತ ಬಾಂಗ್ಲಾದೇಶ ಮುಕ್ತಿಯ ಪರವಾಗಿ ಮೊರ್ಚಾಗಳನ್ನು ತೆಗೆದು ಆ ಬಗ್ಗೆ ಅನೇಕರಿಗೆ ಅರಿವುಂಟುಮಾಡುವ ಕೆಲಸವನ್ನು ಮಾಡಿದರು. ಓದು ಮುಗಿಸಿ ಬಾಂಗ್ಲಾದೇಶಕ್ಕೆ ಹಿಂದಿರುಗಿದಾಗ ಆತ ತನ್ನ ಕೆಲಸವನ್ನು ಪ್ರಾರಂಭಿಸಿದ್ದು ಕಿರುಸಾಲಗಳನ್ನು ಕೊಡುವುದರ ಮೂಲಕ ಅಲ್ಲವೇ ಅಲ್ಲ. ಆ ಬಗ್ಗೆ ಆತ ಯೋಚಿಸಿಯೂ ಇರಲಿಲ್ಲ. ಎಲ್ಲ ಬಿಸಿರಕ್ತದ ಯುವಕರಂತೆ ಬಡತನಕ್ಕೆ ಅಜ್ಞಾನವೇ ಕಾರಣವೆಂದು ನಂಬಿ ಅದರ ನಿರ್ಮೂಲನಕ್ಕೆ ದೇಶದ ಬಡರೈತರನ್ನು ಜ್ಞಾನಿಗಳನ್ನಾಗಿ ಮಾಡುವ ಪ್ರಯತ್ನ ಮೊದಲಿಗೆ ಮಾಡಿದರು. 

ಬಡವರ ಸಮಸ್ಯೆಗಳನ್ನು ಪರಿಹರಿಸುವತ್ತ ಯೂನಸ್‌ರ ಮೊದಲ ಪ್ರಯೋಗ ಅವರೇ ನಾಮಕರಣ ಮಾಡಿದ
 "three share farm" [ಮೂರ್ಭಾಗ ವ್ಯವಸಾಯ]. ಈ ಯೋಜನೆಯಡಿ ಭೂಮಾಲೀಕರು ತಮ್ಮ ಬೀಳುಬಿದ್ದ ಜಮೀನನ್ನು ಬಿಟ್ಟುಕೊಡಬೇಕು. ಅಲ್ಲಿ ಯೂನಸ್ ತಮ್ಮ ಮೂಲಧನವನ್ನು ಹೂಡಿ, ವ್ಯವಸಾಯದ ಉತ್ತಮ ಜ್ಞಾನವನ್ನು ಉಪಯೋಗಿಸಿ ಯಾವುದಾದರೂ ಬೆಳೆ ಬೆಳೆಯುವುದು; ಒಕ್ಕಲಿನವರು ತಮ್ಮ ಶ್ರಮವನ್ನು ಹೂಡುವುದು; ಕಡೆಯಲ್ಲಿ ಬಂದ ಇಳುವರಿಯನ್ನು ಮೂರೂ ಜನ ಸಮಪಾಲಾಗಿ ಹಂಚಿಕೊಳ್ಳುವುದು ಅವರ ಯೋಜನೆಯಾಗಿತ್ತು. ಈ ಪ್ರಯೋಗ ಸಫಲವಾದರೂ, ಅದಕ್ಕೆ ರಾಷ್ಟ್ರಪತಿಯವರ ಪದಕ ದೊರೆತರೂ ಯೂನಸ್‌ಗೆ ಇದು ಸಾಕಷ್ಟು ಸಮಾಧಾನ ಕೊಡಲಿಲ್ಲ. ಇದಕ್ಕೆ ಕಾರಣ ಈ ಪ್ರಯೋಗದಲ್ಲಿ ಭೂಮಾಲೀಕನಿಗೆ ವಿನಾಕಾರಣ ಲಾಭ ಬಂದರೂ ಕಡುಬಡವರಿಗೆ ಇದರಿಂದೇನೂ ಉಪಯೋಗವಾಗಲಿಲ್ಲ. ಕಡುಬಡವರು ಒಕ್ಕಲಿನವರಾಗುವುದೂ ಅಸಾಧ್ಯವಾಗಿತ್ತು. ಚಿಟ್ಟಗಾಂಗ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಬೋಧಿಸುತ್ತಿದ್ದ ಯೂನಸ್‌ಗೆ ಅರ್ಥಶಾಸ್ತ್ರದಲ್ಲಿ ಅರ್ಥ ಕಾಣಲಿಲ್ಲ. ಅಲ್ಲಿರುವ ಸಿದ್ಧಾಂತಗಳು ನೆಲದ ಮೇಲೆ ಕೆಲಸ ಮಾಡುತ್ತಿಲ್ಲ್ಲ ಅನ್ನುವ ಭಾವನೆ ಅವರಿಗಿತ್ತು. ಅರ್ಥಶಾಸ್ತ್ರದಲ್ಲಿ ಯಾವುದೇ ಸಿದ್ಧಾಂತವನ್ನು ಮಂಡಿಸುವ ಮುನ್ನ cetrius paribus [ಮಿಕ್ಕೆಲ್ಲವೂ ಸಮಾನಾವಾಗಿ ಬದಲಾಗದೇ ಇದೆ] ಅನ್ನುವ ವಿಚಾರವನ್ನು ಸತ್ಯವೆಂದು ಮೊದಲಿಗೆ ಭಾವಿಸಬೇಕು. ಬಹುಶಃ ಮಿಕ್ಕೆಲ್ಲವೂ ಸಮಾನ ಅನ್ನುವುದರ ಬಗ್ಗೆ ಯೂನಸ್‌ಗೆ ಅಸಮಾಧಾನವಿತ್ತು ಅನ್ನಿಸುತ್ತದೆ. ಏಕೆಂದರೆ ನಿಜಜೀವನದಲ್ಲಿ ಮಿಕ್ಕೆಲ್ಲವೂ ಸಮಾನವಾಗಿರುವುದಿಲ್ಲ. ಜೀವನದಲ್ಲಿ ತರಗತಿಯ ಅರ್ಥಶಾಸ್ತ್ರವನ್ನು ದಾಟಿ ಅರ್ಥವನ್ನು ಯೂನಸ್ ಕಂಡುಕೊಳ್ಳಬೇಕಿತ್ತು. ಹೀಗಾಗಿ ಮೂರ್ಭಾಗ ವ್ಯವಸಾಯವನ್ನು ಆತ ದಾಟಿ ಮತ್ತೇನಾದರೂ ಮಾಡಬೇಕಿತ್ತು. 

ಈನಡುವೆ ಯೂನಸ್ ಕೆಲ ಮಹಿಳೆಯರಿಗೆ ಪುಟ್ಟ ಸಾಲಗಳನ್ನು ಕೊಟ್ಟು ಅದರಿಂದಾಗುತ್ತಿದ್ದ ಬದಲಾವಣೆಗಳನ್ನು ಗಮನಿಸುತ್ತಿದ್ದರು. ತುಸುವೇ ಮೂಲಧನದ ಇಂಧನವನ್ನು ಒದಗಿಸಿದಾಗ ಬಡವರಲ್ಲಿ ಅಡಕವಾಗಿರುವ ವ್ಯವಹಾರ ಕಲೆ ಮತ್ತು ಕೈಗೆ ಬಂದ ಅವಕಾಶಗಳನ್ನು ಉಪಯೋಗಿಸಿಕೊಳ್ಳುವ ಜಾಣ್ಮೆ ಎರಡೂ ಅರಳಿ ವಿಕಸಿತಗೊಳ್ಳುವುದನ್ನು ಯೂನಸ್ ಕಂಡಿದ್ದರು. ಆದರೆ ಯೂನಸ್ ಹೀಗೆ ತಮ್ಮ ವಿಶ್ವವಿದ್ಯಾನಿಲಯದ ಕೆಲಸವನ್ನು ಮಾಡುತ್ತಲೇ ತಮ್ಮ ವೈಯಕ್ತಿಕ ನೆಲೆಯಲ್ಲಿ ಈ ಕೆಲಸವನ್ನು ಮಾಡುವ ಮಿತಿಗಳನ್ನೂ ಕಂಡುಕೊಂಡಿದ್ದರು. ಇದು ದೊಡ್ಡದಾಗಿ ಬೆಳೆಯಬೇಕಿದ್ದರೆ ಇದಕ್ಕೆ ಒಂದು ಸಂಸ್ಥಾಗತ ಚೌಕಟ್ಟನ್ನು ಒದಗಿಸಬೇಕಿತ್ತು. ಈ ಆಲೋಚನೆ ಅವರನ್ನು ಬ್ಯಾಂಕುಗಳತ್ತ ಮತ್ತು ಬ್ಯಾಂಕಿಂಗ್ ಪದ್ಧತಿಗಳತ್ತ ದೃಷ್ಟಿ ಹಾಯಿಸುವಂತೆ ಮಾಡಿತು. ಒಮ್ಮೊಮ್ಮೆ ಬ್ಯಾಂಕುಗಳ ಜೊತೆ ಸೇರಿ ಒಳಗಿನಿಂದ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತಾ, ಒಮ್ಮೊಮ್ಮೆ ಬ್ಯಾಂಕುಗಳ ಜೊತೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ ಅವರುಗಳ ಜೊತೆ ಹೋರಾಡುತ್ತಾ, ಇದ್ದ ಸಂಸ್ಥಾಗತ ಚೌಕಟ್ಟಿನ ಒಳಗೂ-ಹೊರಗೂ ತಮ್ಮ ಉತ್ತರವನ್ನ ಹುಡುಕುತ್ತಾ ಅವರು ಬ್ಯಾಂಕಿಂಗ್ ಸಂಸ್ಥೆಗಳ ಜೊತೆಗಿನ ಸುದೀರ್ಘಯಾನವನ್ನು ಪ್ರಾರಂಭ ಮಾಡಿದರು. ಬ್ಯಾಂಕುಗಳ ಜೊತೆ ಮಾತುಕತೆ ನಡೆಸಿದಾಗ ಯೂನಸ್‌ಗೆ ಮೊದಲು ಎದುರಾದ ಅಡ್ಡಗೋಡೆ ಎಂದರೆ ಸಾಲ ಪಡೆಯಲು ಬ್ಯಾಂಕುಗಳು ಕೇಳುತ್ತಿದ್ದ "ಅಡಕ್ಕೆ‌ಆಸ್ತಿ". ಆಸ್ತಿಯೇ ಇಲ್ಲದ ಬಡವರು ಅಡವಾಗಿ ಇಡಲು ತರುವುದಾದರೂ ಏನನ್ನು? ಈ ಸಮಸ್ಯೆಯನ್ನು ಪರಿಹರಿಸಲು ಬ್ಯಾಂಕುಗಳು ಆ ಬಡವರ ಪರವಾಗಿ ಯೂನಸ್‌ರನ್ನು ಹಾಮಿದಾರರಾಗಿ ನಿಲ್ಲಲು ಕೇಳಿಕೊಂಡರಂತೆ. ಬಡವರ ಒಳ್ಳೆಯತನದ ಬಗ್ಗೆ ಅಪರಿಮಿತ ನಂಬುಗೆಯಿದ್ದ ಯೂನಸ್‌ಗೆ ಈ ಷರತ್ತನ್ನು ಒಪ್ಪಲು ತೊಂದರೆಯೇನೂ ಆಗಲಿಲ್ಲ. ಒಳ್ಳೆಯತನವಲ್ಲದೇ ವ್ಯವಹಾರಕಲೆಯೂ ಅವರುಗಳಲ್ಲಿತ್ತು. ತಮ್ಮ ವ್ಯವಹಾರವನ್ನು ಮುಂದುವರೆಸಲು ಬೇಕಾದಲ್ಲಿ ಮತ್ತೂ ಹೆಚ್ಚು ಬಂಡವಾಳ ಸಿಗುವುದಾದರೆ, ಈ ಸಂಬಂಧ ನಿರಂತರವಾಗಿ ಮುಂದೆಸಾಗುವುದೆಂಬ ಖಾತರಿಯಿದ್ದರೆ ಖಂಡಿತ ಸಾಲವನ್ನು ಮರುಪಾವತಿಸುವುದರಲ್ಲಿ ಅನುಮಾನವಿರಲಿಲ್ಲ, ಹಾಗೂ ಯೂನಸ್ ಈ ವಿಷಯವನ್ನು ಆಗಲೇ ಸಿದ್ಧಪಡಿಸಿಬಿಟ್ಟಿದ್ದರು. ಯೂನಸ್‌ ದೃಷ್ಟಿಯಲ್ಲಿ ಹಣದ ಲಾವಾದೇವಿ ಪನ್‌ಸಾರಿ ಅಂಗಡಿಯಂತೆ ತಕ್ಷಣ ಮುಗಿಯುವುದಾಗಿರಲಿಲ್ಲ, ಬದಲಿಗೆ ಸಂಬಂಧಗಳನ್ನು ಬೆಳೆಸುವ ಮಾಧ್ಯಮ ಅಂತ ಅವರು ಗುರುತಿಸಿದ್ದರು. ಹೀಗಾಗಿ ಯೂನಸ್ ಮಾಡಹೊರಟಿದ್ದು ಇಷ್ಟೇ: ತಾವು ತಮ್ಮ ಖ್ಯಾತಿಯ ಆಧಾರವಾಗಿ ಕೊಡುತ್ತಿದ್ದ ಹಾಮಿಯನ್ನು ಪಕ್ಕದಲ್ಲೇ ಇದ್ದ ನಂಬುಗಸ್ತರಾದ ಮತ್ತೊಬ್ಬ ಬಡವನಿ/ಳಿಗೆ ವರ್ಗಾಯಿಸವ ಮಾರ್ಗವನ್ನು ಕಂಡುಕೊಳ್ಳಬೇಕಿತ್ತು. ಬಡವರಿಗೆ ಖ್ಯಾತಿಗಿಂತ ತಮ್ಮ ಆತ್ಮಗೌರವ ಇನ್ನೂ ಮುಖ್ಯ ಹಾಗೂ ಸಾಲ ಮರುಪಾವತಿಸಲು ಅದೇ ಅತ್ಯಂತ ಸಶಕ್ತ ಅಸ್ತ್ರ ಅನ್ನುವುದನ್ನು ಯೂನಸ್ ಮನಗಂಡರು. ಸಾಮಾಜಿಕ ಅಡ [social collateral] ಅನ್ನುವ ಮಾತನ್ನು ಬ್ಯಾಂಕಿಂಗ್ ಕ್ಷೇತ್ರಕ್ಕೆ ತಂದ ಗೌರವ ಯೂನಸ್‌ಗೇ ಸಲ್ಲುತ್ತದೆ.
 

ಯೂನಸ್‌ ಪ್ರಕಾರ ಈ ಥರದ ಸಾಮಾಜಿಕ ಬಂಧನದ ಪ್ರತೀಕವಾಗಿದ್ದದ್ದು ಎರಡು ವಿಚಾರಗಳು:
  • ಒಂಟಿಯಾಗಿದ್ದಾಗ ಯಾರಿಗಾದರೂ ಎಲ್ಲ ಥರದ ಅಪಾಯಗಳಿಗೆ ಒಡ್ಡಿಕೊಂಡಂತೆ ಭಾಸವಾಗುತ್ತದೆ.ಒಂದು ಗುಂಪಿನಲ್ಲಿದ್ದಾಗ ರಕ್ಷಣೆಯ ಭಾವನೆ ಉಂಟಾಗುವುದು ಸಹಜ.
  • ಸೂಕ್ಷ್ಮವಾದ ಹಾಗೂ ಒಮ್ಮೊಮ್ಮೆ ಸೂಕ್ಷ್ಮವಲ್ಲದ ಸಾಮಾಜಿಕ ಒತ್ತಡಗಳು ಸಾಲದ ಕಾರ್ಯಕ್ರಮದ ಶಿಸ್ತಿನ ಪರಿಮಿತಿಯಲ್ಲಿ ಉಳಿಯಲು ಜನರನ್ನು ಬಂಧಿಸುತ್ತದೆ.
ಬಹುಮಟ್ಟಿಗೆ, ಈ ಎರಡೂ ವಿಚಾರಗಳು ಗ್ರಾಮೀಣ್‌ನ ಪದ್ಧತಿಗಳನ್ನು ರೂಪಿಸಿವೆ. 

ಗ್ರಾಮೀಣ್ ಪದ್ಧತಿಯನ್ನು ಈಗ ಎಷ್ಟರ ಮಟ್ಟಿಗೆ ಸರಳೀಕರಣಗೊಂಡು ನಿಯಮಬದ್ಧವಾಗಿದೆ ಎಂದರೆ, ಅದನ್ನು ಯಾವುದೇ ನಾಡಿನಲ್ಲಿ ಸುಲಭವಾಗಿ ಪ್ರತಿಷ್ಠಾಪಿಸಬಹುದಾಗಿದೆ. ಇದಕ್ಕೆ ಬೇಕಾದ ಮೂಲಭೂತ ಅಗತ್ಯಗಳೆಂದರೆ - ನಿಯಮಿತವಾಗಿ [ವಾರಕ್ಕೊಮ್ಮೆಯಾದರೂ] ದುಡ್ಡು ಹರಿದಾಡಬೇಕು, ಮತ್ತು ಒಂದು ಸಮೂಹವಾಗಿ ಜನಸಂದಣಿ ಸಿಗುವಂತಿರಬೇಕು. ಹಾಗಾದರೆ ಇದು ಇಷ್ಟು ಸರಳವೇ? ಇಲ್ಲಿ ಸಾಲವನ್ನ ತಿರುಗಿ ಕಟ್ಟದಿರುವವರು ಇಲ್ಲವೇ ಇಲ್ಲವೇ? ಕಟ್ಟದವರಿಗೆ ತೊಂದರೆ ಕೊಟ್ಟ ಹಗರಣಗಳೇ ಇಲ್ಲವೇ? ಗ್ರಾಮೀಣ್ ಪದ್ಧತಿಯಲ್ಲಿ ಸಮಸ್ಯೆಗಳೇ ಇಲ್ಲವೇ? ಇದ್ದಾವೆ. ಆ ಬಗ್ಗೆ ನಾನು ನಂತರ ಚರ್ಚಿಸುತ್ತೇನೆ.


ಅದಕ್ಕೂ ಮುನ್ನ ಗ್ರಾಮೀಣ್ ಮತ್ತು ಕಿರುಸಾಲಗಳು ಬಡವರ ಜೀವನದಲ್ಲಿ ಏನಾದರೂ ಮೂಲಭೂತ ಬದಲಾವಣೆಗಳನ್ನು ಉಂಟುಮಾಡಿದೆಯೇ ಅನ್ನುವುದನ್ನು ನಾವು ಪರೀಕ್ಷಿಸಬೇಕಾಗಿದೆ. ಗ್ರಾಮೀಣ್‌ನಂತಹ ಬಹುಚರ್ಚಿತ ಕಾರ್ಯಕ್ರಮಗಳ ಮಾತಿಗೆ ಬಂದರೆ ಜನರ ಅಪೇಕ್ಷೆಗಳೂ ಅಷ್ಟೇ ಹಿರಿದಾಗಿ ಬೆಳೆದು ಬಿಡುತ್ತವೆ. ಹೀಗಾಗಿ ಕಿರುಸಾಲದ ಈ ಯೋಜನೆಯನ್ನು ಬಡತನ ನಿರ್ಮೂಲನದ ಮಂತ್ರ ಅಂತ ಭಾವಿಸುವ ಅಪಾಯವಿದೆ. ಅಷ್ಟೇ ಅಲ್ಲ, ಅದರ ಜೊತೆಗೆ ಜನರನ್ನು ವಿದ್ಯಾವಂತರನ್ನಾಗಿ ಮಾಡಿ, ಮಹಿಳಾ ಶಕ್ತಿಗೆ ಕುಮ್ಮಕ್ಕು ಕೊಟ್ಟು, ಶೋಷಣೆಯನ್ನು ನಿರ್ಮೂಲನ ಮಾಡಿಬಿಡಬೇಕು ಅಂತೆಲ್ಲಾ ಜನ ಅಪೇಕ್ಷಿಸಿಬಿಡುತ್ತಾರೆ. ಈ ಅಭಿಪ್ರಾಯ ಬರುವಂತೆ ಆ ವಿಚಾರಗಳನ್ನು ಪೋಷಿಸಿದ ಆರೋಪವನ್ನು ನಾವು ಯೂನಸ್‌ಮೇಲೂ ಹೇರಬಹುದು. ಆತ ತಮ್ಮ ಬರವಣಿಗೆ ಮತ್ತು ಭಾಷಣದಲ್ಲಿ ಕಿರುಸಾಲಗಳು ಬಡತನ ನಿರ್ಮೂಲನಕ್ಕೆ ಉಪಯೋಗಿಸಬಹುದಾದ ಏಕಮೇವ ಸಶಕ್ತ ಅಸ್ತ್ರ ಅನ್ನುವ ಅಭಿಪ್ರಾಯ ನೀಡಿದ್ದಾರೆ. ಸಾಲದ್ದಕ್ಕೆ ಈ ಮೂಲಕ ಮುಂದಿನ ಶತಮಾನದಲ್ಲಿ "ಬಡತನ" ಅನ್ನುವುದನ್ನು ಪ್ರಾಚ್ಯ ಸಂಗ್ರಹಾಲಯಗಳಲ್ಲಿ ಮಾತ್ರ ನಾವು ಕಾಣಬೇಕು ಅದಕ್ಕೆ ಕಿರುಸಾಲದ ಮಾರ್ಗವೇ ಸಮರ್ಪಕ ಅಂತ ಅನೇಕ ಬಾರಿ ಹೇಳಿದ್ದಾರೆ. ಆದು ಯೂನಸ್‌ ತಮ್ಮ ಅನುಕೂಲಕ್ಕಾಗಿ, ಅವರ ಕೆಲಸವನ್ನು ಸಮರ್ಥಿಸುಕೊಳ್ಳಲು ಆಡಬೇಕಾದ ಮಾತು. ನಾವು ಕಿರುಸಾಲದ ಕಾರ್ಯಕ್ರಮದಲ್ಲಿ ಇರುವ ಮಿತಿಗಳನ್ನು ಗ್ರಹಿಸಬೇಕಾಗಿದೆ.

ಕಿರುಸಾಲದ ಕಾರ್ಯಕ್ರಮ ಮಹಿಳಾಕೇಂದ್ರಿತವಾಗಿದೆಯೆನ್ನುವುದಕ್ಕೆ ಕಾರಣವಿಲ್ಲದಿಲ್ಲ. ಕಿರುಸಾಲ, ಸಣ್ಣಮೊತ್ತಗಳಲ್ಲಿ ಕೊಡಲ್ಪಡುತ್ತದೆ. ಸಣ್ಣಮೊತ್ತಗಳು ಪುಟ್ಟವ್ಯಾಪಾರಕ್ಕೆ ಮಾತ್ರ ಮೂಲಧನವಾಗಬಲ್ಲದು. ಹೀಗೆ ಉಂಟಾದ ಪುಟ್ಟವ್ಯಾಪಾರದಿಂದ ಬರುವ ಮೊತ್ತ ಮನೆಯ ಆದಾಯಕ್ಕೆ ಪೂರಕವಾಗಿ ನಿಲ್ಲುತ್ತದೆಯೇ ಹೊರತು, ಅದೇ ಮುಖ್ಯವಾಹಿನಿಯಾಗುವುದು ಅಸಾಧ್ಯವಲ್ಲದಿದ್ದರೂ, ಸಮಯ ಮತ್ತು ಶ್ರಮದ ಮಾತು. ಗ್ರಾಮೀಣ್ ಪದ್ಧತಿಯನ್ನು ಗಮನಿಸಿದರೆ ಸಾಲಪಡೆದವರು ಪಡೆದ ಒಂದು ವಾರದ ನಂತರ ಪ್ರತಿವಾರವೂ ತಪ್ಪದೇ ಕಂತುಗಳನ್ನು ಕಟ್ಟಬೇಕು. ಹೀಗೆ ಸಾಲ ತೆಗೆದುಕೊಂಡ ಕೂಡಲೇ ಕಂತು ಕಟ್ಟುವ ಪರಿಸ್ಥಿತಿಯನ್ನು ಸಂಭಾಳಿಸಬೇಕಾದರೆ, ಇನ್ಯಾವುದಾದರೂ ಮೂಲದಿಂದ ತುಸು ಆದಾಯ ಬರುತ್ತಿದ್ದಿರಬೇಕು - ಅಥವಾ ಮೂಲಧನ ಹೂಡಿದ ದಿನದಿಂದಲೇ ಹಣವೂ ವಾಪಸ್ಸು ಬರುವಂತಹ ವ್ಯಾಪಾರದಲ್ಲಿ ಹಣವನ್ನು ಹೂಡಬೇಕು. ಏನೇ ಆದರೂ [ಕೊಟ್ಟಾಂವ ಕೋಡಂಗಿಯಾಗದಿದ್ದರೂ] ಇಸಗೊಂಡವ ಮಾತ್ರ ಈರಭದ್ರನಾಗುತ್ತನೆ[ಳೆ]. ಹೇಗೇ ಆದರೂ ಅವರುಗಳ ಕೈಯಲ್ಲಿ ಪ್ರತಿನಿತ್ಯ ಸ್ವಲ್ಪ ಹಣ ಓಡಾಡುತ್ತದೆ. ಹೀಗೆ ದಿನವೂ ಹಣವೆಣಿಸಲು ಸಾಧ್ಯ್ವವಾದರೆ, ಆಂತರಿಕ ಭಯಭೀತಿಗಳು ಕಡಿಮೆಯಾಗುತ್ತವೆ. ಕಷ್ಟದ ಪರಿಸ್ಥಿತಿಯಲ್ಲಿ ಸಂಪತ್ತಿಗಿಂತ ಹಣ ಮುಖ್ಯವಾಗುತ್ತದೆ. ಆಟೋರಿಕ್ಷಾದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುವಾಗ ಬೇಕಾದ್ದು ಮೀಟರಿಗಾಗುವಷ್ಟು ಹಣ. ಬದಲಿಗೆ ಸಾವಿರಾರು ರೂಪಾಯಿ ಡ್ರಾ ಮಾಡಬಲ್ಲ ಕ್ರೆಡಿಟ್ ಕಾರ್ಡಿನಿಂದ ಆಕ್ಷಣಕ್ಕೆ ಏನು ಪ್ರಯೋಜನ? [ಕಾರ್ಡಿನಲ್ಲಿ ಆಟೋ ಬಾಡಿಗೆ ಕಟ್ಟಲು ಎಂದಾದರೂ ಪ್ರಯತ್ನಿಸಿದ್ದೀರಾ?] ಹೀಗಾಗಿ ಕಿರುಸಾಲದಿಂದ ಮನೆಯಂಗಳದಲ್ಲೇ ನಡೆಸಬಹುದಾದ, ಖಾಲೀಸಮಯದಲ್ಲಿ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾದ ಕೆಲಸವನ್ನು ಹೆಚ್ಚಾಗಿ ಮಾಡಲು ಸಾಧ್ಯ. ನಮ್ಮ ತಾಯಂದಿರು ತರಕಾರಿ ಸಗಟಿನಲ್ಲಿ ಕೊಳ್ಳುವ, ಮನೆಯಲ್ಲೇ ಬಟ್ಟೆ ಹೊಲೆದುಕೊಳ್ಳುವ, ಕಸೂತಿ ಕಲಿವ, ಸೋಪು ತಯಾರಿಸುವ ಎಷ್ಟೊಂದು ಕೆಲಸಗಳನ್ನು ಮಾಡಿ ಹಣ ಉಳಿಸುತ್ತಿದ್ದರೆನ್ನುವುದನ್ನು ನಾವುಗಳು ಗಮನಿಸಿಯೇ ಇರುವುದಿಲ್ಲ. ಹೀಗೆ ಖಾಲೀ ಸಮಯವನ್ನು ಉಪಯೋಗಿಸುವುದರಲ್ಲಿ ಹೆಂಗಸರಿಗಿರುವಷ್ಟು ಕಲೆ ಗಂಡಸರಿಗಿಲ್ಲವೇನೋ. 

ಇದೂ ಸಾಲದೆಂಬಂತೆ ಗಂಡಸರಿಗೆ ಪುಟ್ಟ ಕೆಲಸ ಮಾಡಲು ಅವರ ಅಹಂ ಅಡ್ಡಬಂದು ಬಿಡುತ್ತದೆ. ಅವರಿಗೆ ಒಂದು ದೊಡ್ಡ ವ್ಯಾಪಾರವನ್ನು ಮಾಡಿ ತಮ್ಮ ಉತ್ತಮಿಕೆಯನ್ನು ನಿರೂಪಿಸುವ ತುಡಿತವಿರುತ್ತದೆ. ನಾವು ಭಾರತದ ಉದಾಹರಣೆಯನ್ನೇ ಹಿಡಿದು ಹೋಗುವುದಾದರೆ,ರೈತರ ವ್ಯವಸಾಯಕ್ಕೆ ಕಿರುಸಾಲಗಳು ಹೊಂದುವುದೇ ಇಲ್ಲ. ವ್ಯವಸಾಯದ ಖರ್ಚಿಗೆ ಹಲವು ಬಾರಿ ದೊಡ್ಡ ಮೊತ್ತದ ಧನದ ಅವಶ್ಯಕತೆಯಿರುತ್ತದೆ. ಆ ಮೊತ್ತವನ್ನು ವಾರಕ್ಕೊಮ್ಮೆ ಕಂತಿನ ಮೂಲಕ ಕಟ್ಟುವುದು ಕಷ್ಟ. ಕಾರಣ ವ್ಯವಸಾಯದ ಆದಾಯ ವಾರಕ್ಕೊಮ್ಮೆ ಬರುವುದಿಲ್ಲ. ಕುಯಿಲಿನ ನಂತರ ಒಟ್ಟಿಗೇ ಬರುವ ಹಣದ ತೊಪ್ಪೆಗೆ ಕಿರುಸಾಲದ ನಿಯಮ ಹೊಂದುವುದೇ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಕೃಷಿಯಿಂದ ಬರುವುದರಿಂದ ಹಾಗೂ ಈ ಕಾಯಕದಲ್ಲಿ ಗಂಡಸರೇ ಹೆಚ್ಚಿನಂಶ ತೊಡಗಿಸಿಕೊಂಡಿರುವುದರಿಂದ ಕಿರುಸಾಲಗಳು ಗಂಡಸರ ಜೀವನಶೈಲಿಗೆ ಹೊಂದಾಣಿಕೆಗೊಂಡೇ ಇಲ್ಲ. ಗ್ರಾಮೀಣ್ ಪದ್ಧತಿಯಲ್ಲಿ ಗುಂಪುಗಳಿಗೆ ಮತ್ತು ಪ್ರತಿವಾರ ಸೇರುವ ಮೀಟಿಂಗಿಗೆ ಪ್ರಮುಖ ಸ್ಥಾನ ಕೊಡಲಾಗುತ್ತದೆ. ಹೆಣ್ಣುಮಕ್ಕಳು ಈ ಗುಂಪುಗಳಬಗ್ಗೆ ಉತ್ಸಾಹದಿಂದಿರುತ್ತಾರೆ. ಗುಂಪಿನ ಮೀಟಿಂಗಿಗೆ ಹೋಗುವುದೇ ಒಂದು ರೀತಿಯ ವಿಮೋಚನೆ. ಮನೆಯ ಕಾರಾಗೃಹದಿಂದ ಹೊರಹೋಗುವುದು ಅವರನ್ನು ಒಂದುರೀತಿಯಿಂದ ಬಂಧಮುಕ್ತವಾಗಿಸುತ್ತದೆ. ಜೊತೆಗೆ ಇತರೆ ಹೆಣ್ಣುಮಕ್ಕಳ ಜೊತೆ ಕೂತು ಮಾತಾಡಲು ಒಂದ ಒಳ್ಳೆಯ ಸರ್ವಸಮ್ಮತವಾದ ಕಾರಣವನ್ನೂ ಕೊಡುತ್ತದೆ. ಗಂಡಸರಿಗೆ ಇಂಥ ಮೀಟಿಂಗುಗಳಿಗೆ ಹಾಜರಿ ಹಾಕುವುದರಿಂದ ಹೆಚ್ಚಿನ ಪ್ರಯೋಜನವೇನೂ ತೋರುವುದಿಲ್ಲ. ಸಾಲದ್ದಕ್ಕೆ ತಮ್ಮ ಮಾತನ್ನು ತೋಡಿಕೊಳ್ಳಲು ಸಂಜೆಯವೇಳೆ ಗಂಡಸರು ಇನ್ನೆಲ್ಲೋ [ಹೆಂಗಸರು ಹೆಚ್ಚಾಗಿ ಬರದ ಜಾಗದಲ್ಲಿ] ಸೇರಿ ಹಣ ಮತ್ತು ಸಮಯವನ್ನು ವ್ಯಯ ಮಾಡುವುದನ್ನ ನಾವೆಲ್ಲ ಕಂಡಿದ್ದೇವೆ. ಕಿರುಸಾಲದ ಕಾರ್ಯಕ್ರಮಗಳು ಕೆಳಸ್ಥರದಲ್ಲಿ ಕೊಡುವ ಅವಕಾಶ ಈ ಸೀಮಿತ ಬಂಧಮುಕ್ತತೆ ಮತ್ತು ಕೈಯಲ್ಲಿಷ್ಟು ಕಾಸು ಅಷ್ಟೇ. ಈ ಎರಡನ್ನೂ ಬ್ಯಾಂಕುಗಳಾಗಲೀ, ಹಳ್ಳಿಯ ಬಡ್ಡಿವ್ಯಾಪಾರಿಗಳಾಗಲೀ ಒದಗಿಸಿಕೊಟ್ಟಿಲ್ಲ. ಸೀಮಿತ ಮಟ್ಟದ ಬಂಧಮುಕ್ತತೆಯ, ಆಂತರಿಕ ಭಯಭೀತಿಯ ನಾಶದ ದೇಣಿಗೆ ಸಮಾಜಕ್ಕೆ ಯೂನಸ್‌ರ ಅತ್ಯಂತ ಮಹತ್ವದ ಕೊಡುಗೆ ಅನ್ನಿಸುತ್ತದೆ. 

ಇದಲ್ಲದೇ ಸಾಲದ ಕಾರ್ಯಕ್ರಾಮದಲ್ಲಿ ಯೂನಸ್‌ರ ಮಹತ್ವದ ಕೊಡುಗೆ ಮರುಪಾವತಿಗೆ ಸಂಬಂಧಿಸಿದ್ದು. ಪ್ರತಿವಾರವೂ ಕಂತು ಕಟ್ಟುವುದರಬಗ್ಗೆ ಯಾವ ಒಪ್ಪಂದವನ್ನೂ ಗ್ರಾಮೀಣ್ ಪದ್ಧತಿ ಮಾಡಿಕೊಳ್ಳುವುದಿಲ್ಲವಾದ್ದರಿಂದ ಆ ಶಿಸ್ತು ಜನರನ್ನ ವಾರವಾರ ಆದಾಯ ಬರುವ ಕಾಯಕಗಳತ್ತ ತಳ್ಳಿತು. ವರ್ಷವಿಡೀ ಆದಾಯ ತರುವ ಕಾಯಕಗಳತ್ತ ತಳ್ಳಿತು. ಇದರಿಂದಾಗಿ ಜನರ ಕಾಯಕಗಳಲ್ಲಿ ಭಿನ್ನತೆ ಬಂದು ದಿನನಿತ್ಯ ಆದಾಯ ಬರಬಹುದೋ ಇಲ್ಲವೋ ಅನ್ನುವ ಅನುಮಾನವನ್ನು ತೆಗೆದುಹಾಕಿತು. ಪ್ರತಿವಾರ ಕಾಸು ಕಾಣುವುದನ್ನು ಅದನ್ನು ಎಣಿಸುವುದನ್ನು ಅದರಿಂದ ಉಂಟಾಗಬಹುದಾದ ಮನೋಸ್ಥೈರ್ಯವನ್ನು ಗ್ರಾಮೀಣ್‌ ಹೆಣ್ಣುಮಕ್ಕಳಿಗೆ ಕೊಟ್ಟುಬಿಟ್ಟಿತು. ಇದಕ್ಕಿಂತ ಹೆಚ್ಚಿನ ಪರಿಣಾಮ ಕಿರುಸಾಲಗಳಿಂದ ಉಂಟಾಗಿರಬಹುದಾದರೂ, ಅದು ಆಯಾ ದೇಶಕ್ಕೆ, ಕಾಲಕ್ಕೆ, ಪರಿಸ್ಥಿತಿಗೆ ಸಂಬಂಧಿಸಿದ್ದು ವಿಶ್ವವ್ಯಾಪಿ ಎಂದು ಹೇಳುವಂತಹ ಪರಿಣಾಮಗಳಲ್ಲವೇನೋ. ಕೆಲವು ಜಾಗಗಳಲ್ಲಿ ಆ ಪರಿಣಾಮಗಳು ಬರೆದವರ ಮನದಲ್ಲಿ ಮಾತ್ರ ಉಂಟಾಗಿರಲೂಬಹುದು!


ಆದರೆ ಯೂನಸ್‌ರ ಕೆಲಸ ವಿಮರ್ಶಾತೀತವಾಗಿತ್ತೇ? ಇದರಲ್ಲಿ ಚೆನ್ನಿರದ ಅಂಶಗಳೇ ಇರಲಿಲ್ಲವೇ? ಕಿರುಸಾಲದ ಅಪಾಯಗಳೇನು? ಈ ಪ್ರಶ್ನೆಗಳನ್ನು ನಾವು ಕೇಳಿದಾಗ ಕಿರುಸಾಲದ ಕ್ಷೇತ್ರಕ್ಕೂ ಸಾಕಷ್ಟು ಟೀಕೆ ಬಂದಿದೆ ಅನ್ನುವುದನ್ನ ನಾವು ಗಮನಿಸಬೇಕಾಗುತ್ತದೆ. ಗ್ರಾಮೀಣ್‌ ಪದ್ಧತಿಯನ್ನ ವಿಕಾಸವಾದಿಗಳು [ಝೋಲಾವಾಲಾಗಳೆಂದು ಇವರನ್ನು ಕರೆಯುವುದು ಸಾಮಾನ್ಯ] ಜೋರಾಗಿ ಟೀಕಿಸಿದ್ದಾರೆ. ಇದು ಸಾಲದ್ದಕ್ಕೆ ವಾಲ್ ಸ್ಟ್ರೀಟ್ ಜರ್ನಲ್‌ನ ಡೇನಿಯಲ್ ಪರ್ಲ್ ಗ್ರಾಮೀಣ್‌ ಪದ್ಧತಿಯನ್ನ [ಅವರು ತಮ್ಮ ಸಾಲಮರುಪಾವತಿಯಲ್ಲಿರುವ ತೊಂದರೆಗಳನ್ನು ಅಡಗಿಸಿಟ್ಟಿದ್ದಾರೆಂದು] ಕಟುವಾಗಿ ಟೀಕಿಸಿ ಮುಖಪುಟದಲ್ಲಿ ಒಂದು ದೊಡ್ಡ ಲೇಖನ [ನವಂಬರ್ ೨೭, ೨೦೦೧] 
ಬರೆದು ಒಂದು ವಿವಾದವನ್ನೇ ಸೃಷ್ಟಿಮಾಡಿದರು. ಇದಕ್ಕೆ ಗ್ರಾಮೀಣ್ ಪ್ರತಿಕ್ರಿಯಿಸಿತು. ಅವರ ವಾದವೆಂದರೆ - ಬಾಂಗ್ಲಾದೇಶದಲ್ಲಿ ನೆರೆಯ ಪರಿಸ್ಥಿತಿಯಿಂದಾಗೆ ಎಲ್ಲರಿಗೂ ನಷ್ಟವಾಗಿದ್ದು ಗ್ರಾಮೀಣ್‌ನ ಮರುಪಾವತಿಗೆ ಏಟುಬಿದ್ದಿದ್ದದ್ದು ನಿಜವಾದರೂ ಆತನ ಮಾಹಿತಿ ತುಸು ಹಳೆಯದ್ದೆಂದೂ, ಆ ಸಮಸ್ಯೆಗಳು ಈಗಿಲ್ಲವೆಂದೂ ಯೂನಸ್ ಹೇಳಿದ್ದರು. ಡೇನಿಯಲ್ ಪರ್ಲ್‌ಗೂ [ಈ ಹೆಸರು ನಿಮ್ಮ ಮನಸ್ಸಿಗೆ ಎಲ್ಲೋ ಕೇಳಿದಂತಿದೆ ಅನ್ನಿಸಿದರೆ ಆಶ್ಚರ್ಯ ಪಡಬೇಡಿ, ಆಫ್‌ಘಾನಿಸ್ತಾನದಲ್ಲಿ ತಾಲಿಬಾನ್ ಮೂಲಕ ದಾರುಣವಾಗಿ ಹತ್ಯೆಗೊಳಗಾದ ಪಾಪದ ವ್ಯಕ್ತಿ ಡೇನಿಯಲ್] ಯೂನಸ್‌ಗೂ [ಇಸ್ಲಾಮೀ ಮತಾಂಧರು ಇಷ್ಟಪಡುವುದಿಲ್ಲ ಅನ್ನುವ ಪ್ರತೀತಿಯಿರುವ ವ್ಯಕ್ತಿ ಯೂನಸ್] ನಡುವೆ ಯಾವ ವಾಗ್ವಾದ ನಡೆಯಿತೆನ್ನುವುದು ಮುಖ್ಯವಲ್ಲ. ಅದರಿಂದಾಗಿ ಗ್ರಾಮೀಣ್‌ಗೆ ಏನಾಯಿತು ಅನ್ನುವುದು ಮುಖ್ಯ.

ಇದಾಗುವವರೆಗೂ ಗ್ರಾಮೀಣ್ ಒಂದು ಥರದ ಸಾಲದ ಫ್ಯಾಕ್ಟರಿಯಾಗಿತ್ತು. ಸಣ್ಣವ್ಯವಹಾರದ ಸಾಲ ಮಾತ್ರ ಕೊಡುವ ಏಕಸಾಲ ಬ್ಯಾಂಕಾಗಿತ್ತು. ಮನೆ ಕಟ್ಟಲು ಗ್ರಾಮೀಣ್ ಸಾಲ ಕೊಡುತ್ತಿತ್ತಾದರೂ ಅದರ ಮರುಪಾವತಿಯೂ ವಾರದ ಕಂತಿನಲ್ಲೇ ಬರಬೇಕಾಗಿದ್ದರಿಂದ ಉತ್ಪಾದನಾ ಸಾಲಕ್ಕೂ ಅದಕ್ಕೂ ಹೆಚ್ಚಿನ ವ್ಯತ್ಯಾಸವಿರಲಿಲ್ಲ. ಗ್ರಾಮೀಣ್ ಯಾವುದೇ ಪರಿಸ್ಥಿತಿಯಲ್ಲಿ ಮರುಪಾವತಿಯ ಬಗ್ಗೆ ಸಮಜಾಯಿಷಿ ಮಾಡಿಕೊಂಡದ್ದಿಲ್ಲ. ಬಡತನ ನಿರ್ಮೂಲನಕ್ಕಿಂತ ಮುಖ್ಯ ಉದ್ದೇಶ ಶಿಸ್ತು ಅನ್ನುವಂತೆ ಗ್ರಾಮೀಣ್ ವರ್ತಿಸುತ್ತಿತ್ತು [ಈಗಲೂ ಶಿಸ್ತನ್ನು ಅವರು ಕೈಬಿಟ್ಟಿಲ್ಲ]. ಈ ಶಿಸ್ತು ಬರೇ ಮರುಪಾವತಿಗೆ ಸೀಮಿತವಾಗಿರಲಿಲ್ಲ. ಬದಲಿಗೆ ಅವರ ಎಲ್ಲ ಕಾರ್ಯಶೈಲಿಯಲ್ಲೂ ಶಿಸ್ತು ಕಾಣಸಿಗುತ್ತದೆ. ಸಮಯಕ್ಕೆ ಮೀಟಿಂಗ್ ಪ್ರಾರಂಭ ಮಾಡುವುದಾಗಲೀ, ಕುಳಿತುಕೊಳ್ಳಬೇಕಾದ ಕ್ರಮದಲ್ಲಾಗಲೀ, ಗ್ರಾಮೀಣ್‌ನ ೧೬ ತೀರ್ಮಾನಗಳನ್ನು ಬಾಯಿಪಾಠ ಮಾಡಿ ಒಪ್ಪಿಸುವ ಕ್ರಮದಲ್ಲಾಗಲೀ ಯಾವ ರೀತಿಯ ಢೀಲೂ ಇರಲಿಲ್ಲ. ಗ್ರಾಮೀಣ್ ಬಗ್ಗೆ ಇರುವ ಒಂದು ಮಹತ್ವದ ಟೀಕೆ ಅಂದರೆ, ವ್ಯಾಪಾರ ಕೈಗೂಡದೇ ಸಾಲ ಮರುಪಾವತಿಸುವ ಪರಿಸ್ಥಿತಿಯಲ್ಲಿಲ್ಲದಿದ್ದರೂ ಈ ಬಗ್ಗೆ ಗ್ರಾಮೀಣ್ ಪದ್ಧತಿಯಲ್ಲಿ ಯಾವುದೇ ರೀತಿಯ ಮಾಫ್ ಮನ್ನಾ ಅಥವಾ ನಿಧಾನ ಗತಿಗೆ ಆಸ್ಪದವಿರಲಿಲ್ಲವಾದ್ದರಿಂದ ಗ್ರಾಮೀಣ್ ಸಾಲ ಪಡೆದು ನಿಜವಾದ ಕಾರಣಗಳಿಗಾಗಿ ಮರುಪಾವತಿಸಲಾಗದಿರುವವರು ಮೊದಲಿಗಿಂತ ಹೀನ ಸ್ಥಿತಿಗೆ ಜಾರಿಬಿಡುತ್ತಾರೆ ಅನ್ನುವುದು. ರಾಷ್ಟ್ರವ್ಯಾಪೀ ನೆರೆ ಬಂದದ್ದರಿಂದ ಅನೇಕ ಸಾಲಗಾರರು ಮರುಪಾವತಿ ಮಾಡಲಾರದ ಸ್ಥಿತಿ ಉಂಟಾಗಿಬಿಟ್ಟಿತ್ತು. ಡೇನಿಯಲ್ ಪರ್ಲ್ ಲೇಖನದ ಬಗ್ಗೆ ಪ್ರತಿಕ್ರಿಯಿಸುತ್ತ ಯೂನಸ್ ಈ ಮಾತುಗಳನ್ನು ಹೇಳಿದ್ದರು:

"ಇಂಥದೊಂದು ಪರಿಸ್ಥಿತಿಯಲ್ಲಿ ಗ್ರಾಮೀಣ್ ಕಾಯಿದೆಗಳು ಕೆಲಸ ಮಾಡುವುದಿಲ್ಲ ಅನ್ನುವುದು ನಮ್ಮ ಗಮನಕ್ಕೆ ಕ್ರಮಕ್ರಮೇಣ ಬರತೊಡಗಿತು. ಇದರಿಂದ ಮುಕ್ತಿಯ ಮಾರ್ಗವನ್ನು ನಾನು ಶಿಸ್ತಿನ ಮೂಲಭೂತ ನಿಯಮದ ಜೊತೆ ಕಾಂಪ್ರಮೈಸ್ ಮಾಡಿಕೊಳ್ಳದೇ ಕಂಡುಕೊಳ್ಳಬೇಕಾಗಿತ್ತು. ಆರುತಿಂಗಳ ಯತ್ನದ ನಂತರ, ಇಂಥ ಪರಿಸ್ಥಿತಿಯಿಂದ ಹೊರಬರುವ ಮತ್ತೊಂದು ಮಾರ್ಗವನ್ನು ನಾವು ಕಂಡುಕೊಂಡೆವು. ಇದನ್ನ ಸೆಪ್ಟಂಬರ್ ೨೦೦೦ ದಲ್ಲಿ ನಾವು ನಮ್ಮ ಕಾರ್ಯದಲ್ಲಿ ಅಳವಡಿಸಿದೆವು.."
ಯೂನಸ್ ಪ್ರಕಾರ, ಈ ರೀತಿಯ ಮಹತ್ವದ ಬದಲಾವಣೆಯನ್ನು ಅವರು ತಮ್ಮ ಸಂಸ್ಥೆಯ ನಿಯಮಾವಳಿಯಲ್ಲಿ ಮಾಡಿದ್ದರು. ಆದರೆ ದುರಾದೃಷ್ಟವಶಾತ್ ಈ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರಲಿಲ್ಲ.
 ಗ್ರಾಮೀಣ್ ಬ್ಯಾಂಕನ್ನ ನಿರ್ಮಿಸುವುದು ಸರಳವಾದ ಕೆಲಸವಾಗಿರಲಿಲ್ಲ ಅನ್ನುವುದನ್ನು ಯೂನಸ್‌ ಅನೇಕ ಬಾರಿ ಹೇಳಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಕಡುಬಡವರ ಜೀವನದಲ್ಲಿ ಬದಲಾವಣೆ ತರುವುದು ಸುಲಭದ ಮಾತಲ್ಲ. ಅವರನ್ನು ತಲುಪಲೇ ಹಲವು ವರ್ಷಗಳು ಹಿಡಿಯುತ್ತದೆ. ಗ್ರಾಮೀಣ್ ತನ್ನ ಚರಿತ್ರೆಯಲ್ಲಿ ಅನೇಕ ರೀತಿಯ ಸಾಲ ಕೊಡುವ ಮರುಪಾವತಿ ಸ್ವೀಕರಿಸುವ ಪದ್ಧತಿಗಳನ್ನು ಪ್ರಯೋಗ ಮಾಡಿ ಕೈಸುಟ್ಟುಕೊಂಡ ನಂತರವೇ ಈಗಿನ ತಮ್ಮ ಪದ್ಧತಿಯನ್ನು ಅವರು ಕಂಡುಕೊಂಡದ್ದು. ಅತಿ ಶೀಘ್ರ ಬೆಳವಣಿಗೆ ಒಳ್ಳೆಯದಲ್ಲ ಅಂತ ಯೂನಸ್‌ ಹಲವು ಬಾರಿ ಹೇಳಿದ್ದಾರೆ. ಬಹುಶಃ ಇಂದಿಗೂ ಗ್ರಾಮೀಣ್‌ ಹೊಸ ಹೊಸ ಕಲಿಕೆಗಳನ್ನು ಅಂತರ್ಗತ ಮಾಡಿಕೊಳ್ಳುತ್ತಲೇ ಮುಂದುವರೆದಿದೆಯೇನೋ. ಆದರೆ ಗ್ರಾಮೀಣ್ ತನ್ನ ವ್ಯಾಪಾರ ವೈಖರಿಯಲ್ಲಿ ಸಾಧಿಸಿದ್ದು ಇಷ್ಟು: ಕಿರುಸಾಲಕೊಡುವುದರಲ್ಲಿ ಯಾವ ಅಪಾಯವೂ ಇಲ್ಲ, ಮತ್ತು ಶಿಸ್ತು ಎಲ್ಲಕ್ಕಿಂತ ಮಿಗಿಲಾದದ್ದು ಅನ್ನುವ ಎರಡು ಅಂಶಗಳನ್ನು ಗ್ರಾಮೀಣ್ ನಿರೂಪಿಸಿಬಿಟ್ಟಿತು. ಗ್ರಾಮೀಣ್‌ನ ಸಾಧನೆಯ ಕತೆ ಕೇಳಿ ಅನೇಕ ಜನ ಅದೇ ರೀತಿಯ ಪ್ರಯೋಗಗಳನ್ನು ತಮ್ಮದೇ ಕ್ಷೇತ್ರದಲ್ಲಿ ಮಾಡುತ್ತಿರುವುದನ್ನು ನಾವು ಇಂದು ಕಾಣಬಹುದಾಗಿದೆ. 

ಗ್ರಾಮೀಣ್ ಬಗ್ಗೆ ಬಂದ ಇತರ ಟೀಕೆಯಲ್ಲಿ ಬಹುಮುಖ್ಯವಾದದ್ದು ಅವರು ವ್ಯವಹಾರಕ್ಕೇ ಸಾಲ ಕೊಡುವ ದೃಷ್ಟಿಕೋನ ಹೊಂದಿರುವುದರಿಂದ - ವ್ಯವಹಾರ/ವ್ಯಾಪಾರ ಮಾಡಲು ತಯಾರಿಲ್ಲದ ಬಡವರು ಇದರಿಂದ ಹೊರಗುಳಿಯುತ್ತಾರೆ ಅನ್ನುವುದು. ಇದಲ್ಲದೇ ಅಲ್ಲಿಂದ ಸಾಲ ಪಡೆದು, ವ್ಯವಹಾರ/ವ್ಯಾಪಾರ ಕೈಗೂಡದೇ ಈ ಸಾಲವನ್ನು ಮರುಪಾವತಿಸಲು [ಇಲ್ಲಿನ ಶಿಸ್ತಿನ ಸಲುವಾಗಿ] ಇನ್ನೆಲ್ಲಿಂದಲೋ ಸಾಲ ಪಡೆದು ನಾಶವಾಗಿಹೋದವರ ಕತೆಗಳನ್ನು ಹಲವರು ಬರೆದಿದ್ದಾರೆ. ಹೀಗಾಗಿ ಕೆಲವರು ಕೇವಲ ಭಯದ ಕಾರಣದಿಂದಲೇ ತಮ್ಮನ್ನು ತಾವೇ ಹೊರತುಪಡಿಸಿಕೊಂದ ಪ್ರಸ್ತಾಪವನ್ನೂ ಹಲವು ಸಂಶೋಧಕರು ಮಾಡಿದ್ದಾರೆ. ಈ ಬಗ್ಗೆ ಕೆಲ ಸುಳಿವುಗಳು ಯೂನಸ್ ಸಂಪಾದಿಸಿದ ಜೊರಿಮೋನ್ ಅಂಡ್ ಅದರ್ಸ್ ಅನ್ನುವ ಪುಸ್ತಕದಲ್ಲಿ ನಮಗೆ ದೊರೆಯುತ್ತದೆ. ಇದರಲ್ಲಿ ಗ್ರಾಮೀಣ್‌ನಿಂದ ಸಾಲಪಡೆದವರ ಜೀವನಾಗಾಥೆಗಳಿವೆ. ಈ ಗಾಥೆಗಳಲ್ಲಿ ಅವರ ಸಾಧನೆಗಳ ಬಗ್ಗೆ ಬರೆದಿದ್ದಾರಾದರೂ, ಆ ಸಾಧನೆಯ ಮೊದಲಿನ ಹೋರಾಟವನ್ನು ನಾವು ಗಮನಿಸಿ ಆ ಕಥೆಗಳನ್ನು ಸೂಕ್ಷ್ಮವಾಗಿ ಓದಿದಾಗ ಗ್ರಾಮೀಣ್‌ನ ಬಗೆಗಿನ ಟೀಕೆ ಹುರುಳಿಲ್ಲದ್ದಲ್ಲ ಅನ್ನಿಸುತ್ತದೆ. ಪುಸ್ತಕದಿಂದ ಎರಡು ಭಾಗಗಳನ್ನು ಇಲ್ಲಿ ಕೊಟ್ಟಿದ್ದೇನೆ:
 

ಸಾಕೀನಾಳ ಹೊಸ ವ್ಯಕ್ತಿತ್ವ ಅನ್ನುವ ಭಾಗದಿಂದ:
.. ಬೇರೆಲ್ಲರಿಂದಲೂ ನನಗೆ ಪ್ರೋತ್ಸಾಹ ಬಂದರೂ ಆಕೆಗೆ ಧೈರ್ಯ ಉಂಟಾಗಲಿಲ್ಲ. ಶಿಂಗೂರಿಯಾಗೆ ಹೋಗಿ ತನ್ನ ಬಂಧುಗಳ ಅಭಿಪ್ರಾಯವನ್ನು ಕೇಳಿದಳು. ಅವಳ ತಾಯಿ ಮತ್ತು ತಂಗಿ [ಗ್ರಾಮೀಣ್‌ನಿಂದ ಸಾಲ ಪಡೆಯುವ] ಈ ಸುದ್ದಿಯನ್ನು ಕೇಳಿದಾಗ ಅದನ್ನು ತೀವ್ರವಾಗಿ ವಿರೋಧಿಸಿದರು. ಅವರು ಹೇಳಿದ್ದು ಹೀಗೆ: "ನೀನು ಆ ಸಾಲ ಪಡೆದರೆ ವಾಪಸ್ಸು ಮಾಡುವುದಕ್ಕೆ ನಿನಗೆ ಸಾಧ್ಯವಾಗುವುದಿಲ್ಲ....

... ಆಕೆ ಸಾಲ ತೆಗೆದುಕೊಂಡರೂ ಹೇಗೆ ವಾಪಸ್ಸು ಮಾಡುವುದೆ ಅನ್ನುವುದರೆ ಬಗ್ಗೆ ಅವಳಿಗೆ ಅನುಮಾನಗಳಿದ್ದವು...

ಗುಂಪಿಗೆ ಸೇರುವ ಮುನ್ನ ಸಾಕೀನಾಗೆ ಎಷ್ಟು ಚಿಂತೆಯಾಗಿತ್ತೆಂದರೆ, ಎರಡು ಮೂರು ದಿನ ಅವಳಿಗೆ ರಾತ್ರೆ ನಿದ್ದೆಯೇ ಬರಲಿಲ್ಲ. ಸಾಲದ ಗುಂಪಿಗೆ ಸೇರುವ ನಿರ್ಧಾರ ಅವಳ ಸಮಸ್ಯೆಗಳನ್ನು ಪರಿಹರಿಸಲಿಲ್ಲ. ಆಕೆಯನ್ನು ಗುಂಪಿನಲ್ಲಿ ಸ್ವೀಕರಿಸುವ ಮುನ್ನ ಮಿಕ್ಕವರ ಮನದಲ್ಲಿ ಅನೇಕ ಪ್ರಶ್ನೆಗಳು ಉದ್ಭವವಾಗಿದ್ದವು...

... ಸಾಲದ ಹಣ ಸಿಕ್ಕ ದಿನ ಅವಳಿಗೆ ಅತ್ಯಂತ ಸಂತೋಷವಾಯಿತು... ಆದರೆ ಅದೇ ಸಮಯಕ್ಕೆ ತನ್ನ ಮನದಲ್ಲಿ ಭೀತಿಯೂ ಇತ್ತು. ಹೃದಯ ಬಡಿದುಕೊಳ್ಳುತ್ತಿತ್ತು, ಗಂಟಲು ಒಣಗಿತು.. ತನ್ನ ಕೈಯಲ್ಲಿದ್ದ ಹಣವನ್ನು ಅವಳು ರಹೀಮಾಗೆ ನೀಡಿ ಕೆಲಕ್ಷಣಗಳ ನಂತರ "ನನಗೆ ಭಯ ಆಗ್ತಾ ಇದೆ" ಅಂದಳು. ಸಾಲ ತೆಗೆದುಕೊಂಡದ್ದರ ಬಗ್ಗೆ ಅವಳಿಗೆ ಎಷ್ಟುಭಯವಾಗಿತ್ತೆಂದರೆ ಕೆಲಕಾಲ ಆ ಮಾತನ್ನು ಅವಳು ಗುಟ್ಟಾಗಿಯೇ ಇಟ್ಟಿದ್ದಳು.

ಫೂಲ್‌ಜಾನ್ ಜೀವನದಿಂದ:
ಫೂಲ್‌ಜಾನ್ ಆ ಗ್ರಾಮದವಳಾಗಿರಲಿಲ್ಲ. ಸಾಲದ್ದಕ್ಕೆ ಅವಳ ಬಂಧುಗಳೆಲ್ಲಾ ಅವಳಿಗೆ ಸಾಲಕೊಡಬಾರದೆಂದು ಹೇಳಿದರು. ಈ ಎಲ್ಲವೂ ಅವಳು ಸಾಲ ತೆಗೆದುಕೊಳ್ಳುವುದಕ್ಕೆ ಅಡ್ಡಗಾಲುಗಳಾದುವು. 

ಅದೇ ಸಮಯಕ್ಕೆ ಫೂಲ್‌ಜಾನ್‌ಗೆ ತುಂಬಾ ಭಯವೂ ಇತ್ತು. "ಅಕಸ್ಮಾತ್ ನನಗೆ ವಾರದ ಕಂತು ಕಟ್ಟಲು ಸಾಧ್ಯವಾಗದಿದ್ದರೆ? ಅಥವಾ ಸಾಲದ ಹಣ ಬೇರೆಲ್ಲಾದರೂ ಖರ್ಚಾದರೆ?"

ಗ್ರಾಮೀಣ್ ಈ ಎಲ್ಲ ಟೀಕೆಯನ್ನೂ ಕಾಲಾಂತರದಲ್ಲಿ ಸ್ವೀಕರಿಸುತ್ತಾ ಬಂದಿದೆ.

ಇದರಲ್ಲಿ ಹುರುಳಿಲ್ಲದಿಲ್ಲ. ಆದರೆ, ಸಾವಿರ ಸಾಲಗಾರರಲ್ಲಿ ಎಷ್ಟು ಜನರಿಗೆ ಇಂಥ ಅನುಭವವಾಗಿದೆ ಎನ್ನುವ ಅಂಕಿ ಅಂಶ ಮುಖ್ಯವಾಗುತ್ತದೆ.
 ಗ್ರಾಮೀಣ್ ಪದ್ಧತಿಯ ಇನ್ನೊಂದು ಟೀಕಾಸ್ಪದ ವಾದ ಅದು ಹುಟ್ಟುಹಾಕಿರುವ ಗ್ರಾಮೀಣ್ ರೆಪ್ಲಿಕೇಟರ್ಸ್ [ನಕಲು ಸಂತಾನ]ದ್ದು. ಈ ನಕಲು ಸಂತಾನ ಬಾಂಗ್ಲಾದೇಶದಲ್ಲಲ್ಲದೇ [ಭಾರತವನ್ನೊಳಗೊಂಡು] ಪ್ರಪಂಚದ ಅನೇಕ ಭಾಗಗಳಲ್ಲಿ ಹಬ್ಬಿದೆ. ಈ ನಕಲು ಸಂತಾನದವರು [ನಕಲು ಮಾಡುವ ಎಲ್ಲರಂತೆ] ಗ್ರಾಮೀಣ್‌ನ ಆತ್ಮವನ್ನು ತಮ್ಮದಾಗಿಸಿಕೊಳ್ಳದೇ ಹೊರ ವೈಖರಿಯನ್ನು ಅಂತರ್ಗತ ಮಾಡಿಕೊಂಡುಬಿಟ್ಟಿದ್ದಾರೆ! ಹೀಗಾಗಿ ನಮಗೆ ಬಂಗ್ಲಾದೇಶದ ಆಶಾ [ASA] ಅತ್ಯಂತ ಶಿಸ್ತಿನಿಂದ ಕೋಳಿ ಫಾರಂ ನಡೆಸುವಂತೆ ಒಂದು ಯೋಜನೆಯನ್ವಯ ಸಾಲದ ಕಾರ್ಯಕ್ರಮವನ್ನು ನಡೆಸುವುದನ್ನ ನಾವು ಕಂಡಿದ್ದೇವೆ. ಗ್ರಾಮೀಣ್‌ನ ಮಾಲೀಕತ್ವದ ೯೬% ಬಡವರ ಕೈಯಲ್ಲಿದೆ. ಮಿಕ್ಕ ೪% ಬಾಂಗ್ಲಾದೇಶ ಸರಕಾರದ ಕೈಯಲ್ಲಿದೆ. ಆದರೆ ಮಿಕ್ಕ ನಕಲು ಸಂತಾನದವರು ಬಡವರಿಗೆ ಪಾಲು ಕೊಡುವ ಈ ರೀತಿಯ ಮಾಲೀಕತ್ವದ ಲಕ್ಷಣಗಳನ್ನು ತಮ್ಮದಾಗಿಸಿಕೊಂಡಿಲ್ಲ. ಗ್ರಾಮೀಣ್ ಬ್ಯಾಂಕ್ ತನ್ನ ಮಾಲೀಕರಿಗೆ ಲಾಭಾಂಶ ಕೊಡುವ ಪರಿಪಾಠವನ್ನು ಇಟ್ಟುಕೊಂಡಿಲ್ಲವಾದರೂ [ಬದಲಿಗೆ ಆ ಹಣವನ್ನು ತಮ್ಮ ಕಾರ್ಯಕ್ರಮ ಹಬ್ಬಲು ಉಪಯೋಗಿಸುತ್ತಾರಾದರೂ] ಮೂಲತಃ ಆ ಹಣ ಅವರಿಗೆ ಸಂದದ್ದು ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ನಕಲು ಸಂತಾನದವರ ಕಥೆ ಹಾಗಿಲ್ಲ. ಅವರೂ ತಮ್ಮ ಲಾಭಗಳನ್ನು ಕಾರ್ಯಕ್ರಮ ಹಬ್ಬಲು ಉಪಯೋಗಿಸುತ್ತಿದ್ದೇವೆ ಅನ್ನುತ್ತಾರಾದರೂ, ಆ ಹಣವನ್ನು, ಆ ಲಾಭಾಂಶವನ್ನು ಅವರು ಯಾವುದೇ ದಿನ ತಮ್ಮ ಜೇಬಿನಕಡೆಗೆ ಹಾಯಿಸಬಹುದಾದ ಸಾಧ್ಯತೆಯಿದೆ. ಇಂಥಹ ಸಂಸ್ಥೆಗಳಿಂದಾಗಿ ಮೂಲ ಗ್ರಾಮೀಣ್‌ನ ಇಮೇಜಿಗೆ ಉಪಯೋಗಕ್ಕಿಂತ ಹೆಚ್ಚು ಧಕ್ಕೆಯಾಗಿದೆ.

ಯಾಕೆಂದರೆ ಎಲ್ಲರೂ ಹೇಳಿಕೊಳ್ಳುವುದು ತಾವು ಗ್ರಾಮೀಣ್ ಪದ್ಧತಿಯನ್ನು ಪಾಲಿಸುತ್ತೇವೆ ಅನ್ನುವ ಮಾತನ್ನೇ.
 ಕಿರುಸಾಲದಿಂದ ಅತೀ ಗ್ರಾಹಕತೆ ಬೆಳೆದಿದೆ ಅದರಿಂದ ಬಡವರಿಗೆ ಧಕ್ಕೆ ಉಂಟಾಗುತ್ತಿದೆ ಅನ್ನುವ ಟೀಕೆಯನ್ನೂ ನಾವು ಹಲವೆಡೆ ನೋಡಿದ್ದೇವೆ. ಬೊಲೀವಿಯಾದಲ್ಲಿ ಹೀಗಾಗಿದ್ದು ನಿಜ. ಸ್ವಲ್ಪ ಮಟ್ಟಿಗೆ ಭಾರತದಲ್ಲಿಯೂ - ಮುಖ್ಯತಃ ಗುಂಟೂರು ಪ್ರದೇಶದಲ್ಲಿ - ಹೀಗೆ ಆಗಿದ್ದಿರಬಹುದು. ಆದರೆ ಮೂಲ ಗ್ರಾಮೀಣ್ ಬ್ಯಾಂಕ್ ಒಂದು ಸಾಲದ ಯಂತ್ರವಾದರೂ, ಅವರು ಕೊಡುವ ಸಾಲ ಕೇವಲ ವ್ಯಾಪಾರ ವಹಿವಾಟಿಗೆ ಮೂಲಧನವಾಗಿ ಉಪಯೋಗಿಸಲು ಮಾತ್ರ ಸೀಮಿತವಾಗಿದೆ. ಹಾಗೂ ಆ ಹಣದ ಉಪಯೋಗವನ್ನು ಹತ್ತಿರದಿಂದ ಗಮನಿಸಲಾಗುತ್ತದೆ. ಆ ಬಗ್ಗೆ ಗ್ರಾಮೀಣ್ ದಾಖಲೆಗಳನ್ನೂ ತಯಾರು ಮಾಡಿದ್ದಾರೆ. ಯೂನಸ್ ಸಂಪಾದಿಸಿದ ಜೊರಿಮೋನ್ ಅಂಡ್ ಅದರ್ಸ್ ಅನ್ನುವ ಪುಸ್ತಕದಲ್ಲಿ ಮೂಲಧನ ಒದಗಿಸಿ ವ್ಯವಹಾರ ನಡೆಸಿ ಬಡತನದ ವಿರುದ್ಧ ಜಯಗಳಿಸಿದ ಅನೇಕ ಹೆಣ್ಣುಮಕ್ಕಳ ಕಥೆಗಳು ದಾಖಲಾಗಿವೆ. ಅವರ ಆತ್ಮ ಚರಿತ್ರೆಯ ಅಂತ್ಯದಲ್ಲೂ ಗ್ರಾಮೀಣ್‌ ಕಿರುಸಾಲ ಕೊಟ್ಟ ವ್ಯಾಪಾರಗಳ ದೊಡ್ಡ ಪಟ್ಟಿಯನ್ನೇ ಕೊಡಲಾಗಿದೆ. ಹೀಗಾಗಿ ಅತೀಗ್ರಾಹಕತೆಯ ಟೀಕೆ ಗ್ರಾಮೀಣ್‌ಗಿಂತ ಹೆಚ್ಚಾಗಿ ಅವರ ನಕಲು ಸಂತಾನಕ್ಕೆ ಸಲ್ಲಬೇಕಾಗಿದೆ. 

ಕಿರುಸಾಲಕ್ಕೂ ಬಡ್ಡಿವ್ಯಾಪಾರಕ್ಕೂ ಏನು ವ್ಯತ್ಯಾಸ ಅಂತ ಹಲವರು ಹಲವು ಬಾರಿ ಪ್ರಶ್ನೆ ಕೇಳಿದ್ದಿದೆ. ಇಲ್ಲಿ ಈ ಎರಡೂ ಪದ್ಧತಿಗಳಿಗೂ ಆಶಯದ ಮೂಲಭೂತ ವ್ಯತ್ಯಾಸವಿದೆಯಾದರೂ ಅದನ್ನೆಲ್ಲ ಬಿಟ್ಟು ಕಿರುಸಾಲದ ಸಂಸ್ಥೆಗಳಿಂದಾಗುವ ಒಂದೇ ಮೂಲಭೂತ ವ್ಯತ್ಯಾಸವನ್ನ ನೋಡೋಣ: ಕಿರುಸಾಲದ ಸಂಸ್ಥೆಗಳಿಗೆ ಒಂದು ಗ್ರಹೀತವಾದ ಅಸ್ತಿತ್ವವಿದೆ. ಅವುಗಳು ಕಾಯಿದೆಯ ವ್ಯಾಪ್ತಿಯೊಳಕ್ಕೆ ಬರುತ್ತವೆ. ಹಾಗೂ ನಡಾವಳಿಯಬಗ್ಗೆ ಅನುಮಾನಗಳು ಬಂದಲ್ಲಿ ಅವುಗಳನ್ನು ಕರೆದು ಚರ್ಚಿಸುವ ಅವಕಾಶವಿರುತ್ತದೆ. ಬಡ್ಡಿವ್ಯಾಪಾರದಲ್ಲಿ ನಿರತವಾಗಿರುವವರನ್ನ ಗುರುತಿಸುವುದೇ ಅಸಾಧ್ಯದ ಮಾತಾದ್ದರಿಂದ ಬಡವರ ದೃಷ್ಟಿಯಿಂದ ಅವರಿಗೆ ತುಟ್ಟಿಯಾದರೂ ಸಂಸ್ಥಾಗತ ಮೂಲದಿಂದ ಸಾಲದ ಏರ್ಪಾಟಾಗುವುದೇ ಉತ್ತಮ.
 

ಗ್ರಾಮೀಣ್ ಬಗ್ಗೆ ಇಷ್ಟಲ್ಲ ಅಧ್ಯಯನ ಮಾಡಿದ್ದರೂ ನನಗೆ ಖುದ್ದು ಅವರ ಕೆಲಸ ನೋಡವ, ಬಾಂಗ್ಲಾದೇಶಕ್ಕೆ ಹೋಗುವ ಅವಕಾಶವೇ ಆಗಿಲ್ಲ. ಆದರೆ ಅವರ ಸಿದ್ಧಾಂತದ ಬಗ್ಗೆ ಸಾಕಷ್ಟು ಓದಿದ್ದೇನೆ, ಅನೇಕ ಅನುಮಾನಗಳನ್ನು ಯೂನಸ್‌ರಿಗೇ ಬರೆದು ಅವರಿಂದ ಉತ್ತರ ಪಡೆದಿರುವ ಭಾಗ್ಯ ನನ್ನದಾಗಿದೆ. ಡೇನಿಯಲ್ ಪರ್ಲ್‌ನ ಲೇಖನ ಬಂದಕೂಡಲೇ ಅನೇಕ ಪ್ರಶ್ನೆಗಳನ್ನು ಕೇಳುತ್ತಾ ನಾನು ಪ್ರೊಫೆಸರ್ ಯೂನಸ್‌ಗೆ ಒಂದು ಈ-ಮೇಲ್ ಕಳಿಸಿದ್ದೆ, ಒಂದೆರಡುದಿನದಲ್ಲಿ ತಮ್ಮ ಕಾರ್ಯಾಲಯದಿಂದ ಯಾರಾದರೂ ನನ್ನ ಪ್ರಶ್ನೆಗಳಿಗೆ ವಿವರವಾದ ಉತ್ತರ ಕಳಿಸುತ್ತಾರೆ ಎಂದು ಯೂನಸ್ ಮೇಲ್ ಕಳಿಸಿದರೂ, ಮಾರನೆಯ ದಿನವೇ ಅವರು ನನ್ನ ಎಲ್ಲ ಪ್ರಶ್ನೆಗಳಿಗೂ ಖುದ್ದು ಉತ್ತರ ನೀಡಿದ್ದರು.
 ಮತ್ತೊಮ್ಮೆ ಅವರು ಕಾಮನ್‌ವೆಲ್ತ್‌ ಭಾಷಣ ನೀಡಿದ್ದಾಗ ಹಲವು ವಿಚಾರಗಳ ಬಗ್ಗೆ ನಮ್ಮಲ್ಲಿ ಮೇಲ್ ಮುಖಾಂತರ ಚರ್ಚೆಯಾಗಿತ್ತು. ನಿರಂತರ ಕೆಲಸದಲ್ಲಿ ತೊಡಗಿಕೊಂಡಿರುವ ವಿಶ್ವ ಸುತ್ತುವ ವ್ಯಕ್ತಿ ಹೀಗೆ ನನ್ನ ಪ್ರಶ್ನೆಗಳಿಗೆ ಖುದ್ದು ಉತ್ತರ ನೀಡಿದ್ದಲ್ಲದೆ ಹದಿನೈದು ವರ್ಷಗಳ ಹಿಂದೆ ಯಾರೂ ಗ್ರಾಮೀಣ್ ಬಗ್ಗೆ ಹೆಚ್ಚು ಕೇಳಿರದಿದ್ದಾಗ ಐ‌ಐ‌ಎಂನಿಂದ ಅವರ ಸಂಸ್ಥೆಗೆ ಭೇಟಿ ನೀಡಿದ ನನ್ನ ಸಹೋದ್ಯೋಗಿಗಳನ್ನೂ ನೆನಪು ಮಾಡಿಕೊಂಡದ್ದು ನನಗೆ ಆಶ್ಚರ್ಯ ತಂದಿತ್ತು. ಈ ಅದ್ಭುತ ನೆನಪಿನ ಶಕ್ತಿಯನ್ನು ಮೆಚ್ಚದಿರಲು ಸಾಧ್ಯವೇ?

ಗ್ರಾಮೀಣ್‌ನ ನಕಲು ಸಂತಾನದ ಧಂಧೆಯನ್ನು ನೋಡಿ ಗ್ರಾಮೀಣ್‌ಬಗ್ಗೆಯೇ ಕೆಲವು ಅನುಮಾನಗಳನ್ನು ಬೆಳೆಸಿಕೊಳ್ಳುತ್ತಿದ್ದ ನನಗೆ ಈ ಸುದ್ದಿ ಖುಶಿಯನ್ನೇ ಕೊಟ್ಟಿದೆ. ಇದರಿಂದಾಗಿ ನಾನು ಮತ್ತೆ ಗ್ರಾಮೀಣ್ ಬಗ್ಗೆ ಯೂನಸ್ ಅವರ ಮತ್ತು ಇತರರ ಬರವಣಿಯನ್ನು ಓದುವ ಅವಕಾಶ ಸಿಕ್ಕಿತು. ಯೂನಸ್‌ರ ಆತ್ಮಕಥೆಯನ್ನೂ ಓದಿದೆ. ಬಹುಶಃ ಕಾರಣವಿಲ್ಲದೇ ಗ್ರಾಮೀಣ್ ಬಗ್ಗೆ ಅನುಮಾನ ಪಡುತ್ತಿದ್ದ ನನಗೆ ನೊಬೆಲ್ ಪುನರ್ ನಂಬಿಕೆಯನ್ನು ತಂದು ಕೊಟ್ಟಿತು. ಕಿರುಸಾಲದ ಸರದಾರನಿಗೆ ನೊಬೆಲ್ ಬಂದದ್ದು ಸಂಭ್ರಮ ಪಡುವ ವಿಚಾರವಲ್ಲದೇ ಇನ್ನೇನು? 

ಎಂ.ಎಸ್.ಶ್ರೀರಾಮ್.